ಶನಿವಾರ, ಮೇ 30, 2009

ಎಲ್ಲೆಂದು ಹುಡುಕಬಲ್ಲಿರಾ??

ಮಿಡಿನಾಗರ: ನಾನಿಲ್ಲಿರುವೆ! ಎಲ್ಲೆಂದು ಹುಡುಕಬಲ್ಲಿರಾ??
**********
ಇಂದು ಮಧ್ಯಾಹ್ನ ಊಟ ಮುಗಿಸಿ ಮನೆಯಿಂದ ಕಚೇರಿಗೆ ಹೋಗುತ್ತಿದ್ದೆ. ಅಲ್ಲೊಂದು ಕಚೇರಿ ಸಹೋದ್ಯೋಗಿಗಲ ಗುಂಪುಗೂಡಿದ್ದರು. ಅವರ ಗುಂಪನ್ನು ನೋಡಿದ ಕೂಡಲೇ ಅದು ಇರುವ ಅರಿವಾಯಿತು. ಕಚೇರಿಯಿಂದ ಮನೆಗೆ ಹೋಗುವಾಗ ಕ್ಯಾಮೆರಾ ಜೊತೆಯಲ್ಲಿಯೇ ಇಂದು ತೆಗೆದುಕೊಂಡು ಹೋಗಿದ್ದೆ. ಸರಿ ಗುಂಪಿನೆಡೆಗೆ ಸಾಗಿದೆ. ಇನ್ನೊಂದಿಬ್ಬರು ಮೊಬೈಲ್ನಲ್ಲಿ, ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದರು.

ಅದೊಂದು ವಿದ್ಯುತ್‌ ಜಂಕ್ಷನ್‌ ಡಬ್ಬ. ಅದರೊಳಗೆ ತನ್ನ ಪುಟಾಣಿ ಹೆಡೆಯನ್ನೆತ್ತಿ ಆಡುತ್ತಿತ್ತು ಮರಿ ನಾಗರ. ನಾನೂ ಸಹ ಒಂದು ಫೋಟೋ ತೆಗೆದೆ. ಹೆಡೆಯೆತ್ತಿದ್ದರಿಂದ ಅದರ ತಲೆಯ ಭಾಗದಲ್ಲಿನ ನಾಮದ ಗುರುತು ಕಾಣಿಸುತ್ತಿರಲಿಲ್ಲ. ಕತ್ತಿನ ಭಾಗವು ರಬ್ಬರ ಸ್ಪ್ರಿಂಗಿನಂತೆ ಕಾಣುತ್ತಿದೆ. ಹೇಗಿದೆ? ನೀವೇ ನೋಡಿ ಆನಂದಿಸಿ. **********

©Photo by Chandrashekara B.H., 30 May 2009

ಮೇ ೩೧, ವಿಶ್ವ ಧೂಮಪಾನ ನಿಷೇಧ ದಿನ.

ಮೇ ೩೧, ವಿಶ್ವ ಧೂಮಪಾನ ನಿಷೇಧ ದಿನ.

ತಂಬಾಕು, ತಂಬಾಕಿನ ಉತ್ಪನ್ನಗಳನ್ನು ಸೇವಿಸಬೇಡಿ ಎಂಬ ಬಗೆಗಿನ ಜಾಹಿರಾತು ಟಿವಿ, ರೇಡಿಯೋಗಳಲ್ಲಿ ಈಗಾಗಲೇ ಬಿತ್ತರಗೊಳ್ಳುತ್ತಿರುತ್ತವೆ.

ಆದರೆ,...
ಎಂದಿನಂತೆ ಈ ದಿನವೂ ಧೂಮಪಾನದ ಸಮಾರಾಧನೆ ಜಾಗೃತಿಯಿಲ್ಲದಂತೆ ಎಲ್ಲೆಡೆ ಸಾಗುತ್ತಿರುತ್ತದೆ. ತಂಬಾಕಿನ ಘಾಟಿನ ಹೊಗೆಯಲ್ಲದೆ, ಇತರೆ ವಾಹನಗಳ ಧೂಮವನ್ನು ಪ್ರತಿದಿನವೂ ಪ್ರತಿಯೊಬ್ಬರೂ ಎಗ್ಗಿಲ್ಲದಂತೆ ಪಾನಿಸುತ್ತಿದ್ದಾರೆಂದರೆ ತಪ್ಪಾಗದು.

ಶಾಸನ ವಿಧಿಸಿದ ಎಚ್ಚರಿಕೆ: ಧೂಮಪಾನ ಆರೋಗ್ಯಕ್ಕೆ ಅಪಾಯಕರ. ಹೌದು, ಇದರ ಸೇವನೆಯಿಂದ ಸರ್ಕಾರಕ್ಕೆ `ಕರ'ವಂತೂ ಬಂದೇ ಬರುತ್ತದೆ. ಒಂದು ಸಿಗರೇಟಿನ ಬೆಲೆ ಅಬ್ಬಬ್ಬಾ... ಆದರೆ, ಅದರಿಂದ ಆಗುವ ಹಾನಿ ಅಬ್ಬಬ್ಬಬ್ಬಾ......

ಯೋಚಿಸಿ ನೋಡಿ.

ಗುರುವಾರ, ಮೇ 28, 2009

ಪ್ರತಿಯೊಬ್ಬನೂ ಚಾಲಕ!!

ಪ್ರತಿಯೊಬ್ಬನೂ ಚಾಲಕ. ಬದುಕಿನ ಬಂಡಿಯ ಚಾಲಕ. ಆ ಬದುಕಿನ ಬಂಡಿಯು ಚಾಲಕನ ನಿಯಂತ್ರಣದಲ್ಲಿಯೇ ಇರಬೇಕು. ಇದ್ದರೆ ಒಳ್ಳೆಯದು ಮತ್ತು ಸುಗಮವಾಗಿ ತನ್ನ ಗುರಿಯೆಡೆಗೆ ಸಂಚರಿಸುವಲ್ಲಿ ಹಿತಕಾರಿ.

ಆದರೆ, ಇಂದಿನ ಜೀವನ ಶೈಲಿ ಹೇಗೆ ಸಾಗುತ್ತಿದೆ? ಒಬ್ಬಬ್ಬೊರ ಬದುಕಿನ ಬಂಡಿಯೂ ಹರದಾರಿ ಹಿಡಿದು ಸಾಗುತ್ತಿದೆ. ಒಂದೊಂದೂ ಒಂದೊಂದು ದಿಕ್ಕಿಗೆ. ಆದರೆ ಅದನ್ನು ನಿಯಂತ್ರಿಸುವ ಚಾಲಕರು ನೀವೇ ಆಗಿದ್ದೀರಿ.
ಬೇಸರವಾದರೆ ಬೇಗನೇ ಬದುಕಿನ ಬಂಡಿಯ ಹಳ್ಳಕ್ಕೆ ಬೀಳಿಸಬೇಕೆ?

ಉದಾಹರಣೆಗೆ: ಬದುಕಿನಲ್ಲಿ ಜಿಗುಪ್ಸೆಯಾಯಿತೆಂದರೆ ತನ್ನಾತ್ಮಹತ್ಯೆಯ ಮಾಡಿಕೊಳ್ಳಬೇಕೆ? ಅಥವಾ ರೋಗರುಜಿನದಿಂದ ನರಳುತ್ತಿದ್ದರೆ, ಸಾಲಬಾಧೆಯಿಂದ ತೆವಳುತ್ತಿದ್ದರೆ, ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಬರಲಿಲ್ಲವೆಂದ ಮಾತ್ರಕ್ಕೆ, ಪ್ರೇಮ-ಪ್ರೀತಿ ಭಗ್ನವಾಗಿದ್ದಕ್ಕೆ, ಮಿತ್ರದ್ರೋಹವಾಯಿತೆಂದರೆ ಅಥವಾ ಸಣ್ಣ, ಕ್ಷುಲ್ಲಕ ಕಾರಣಗಳಿಗೆಲ್ಲ ಬದುಕನ್ನೇ ಬಲಿಯಾಗಿಸಿದರೆ ಏನು ಚೆನ್ನ? ಅದರಿಂದ ಆಗುವ ಪರಿಣಾಮವೇನಾದರೂ ಉತ್ತಮವಾಗಿರುತ್ತದೆಯೆ? ಏಕೆಂದರೆ, ಆತ್ಮಹತ್ಯೆಯನ್ನು ಮಾಡಿಕೊಂಡು ತನ್ನ ಜೀವವನ್ನು ತೆಗೆದುಕೊಂಡ ಮಾತ್ರಕ್ಕೆ ಎಲ್ಲ ಪರಿಹಾರವಾಯಿತೆಂದು ತಿಳಿದುಕೊಳ್ಳುವುದು ಶುದ್ಧ ಸುಳ್ಳು. ಇಂತಹ ಕೆಲಸ ಮಾಡಿಕೊಂಡವರ ಪೋಷಕರು, ಒಡಹುಟ್ಟಿದವರು, ಆಪ್ತರು, ಮಿತ್ರರು ಇವರಿಗೆಲ್ಲ ಇದರಿಂದ ಸಂತಸವಾಗುತ್ತದೆಯೆ? (ಕೆಲವರಿಗೆ ಆಗಬಹುದು, ಅದು ಬೇರೆ ವಿಚಾರ). ಇಂತಹ ಕೃತ್ಯಗಳನ್ನು ನಿಯಂತ್ರಿಸಿಕೊಳ್ಳುವುದು ಚಾಲಕನ (ವ್ಯಕ್ತಿಯ) ಕೈಯಲ್ಲಿಯೇ ಇದೆ. ಇದನ್ನೇ... DRIVE - It is a solo performance that only you can control. ಎಂದು ಹೇಳಬಹುದು.

ಜೀವನದಲ್ಲಿ ಉನ್ನತ ಮಟ್ಟಕ್ಕೆ ಏರಬೇಕಾದವರೂ ನೀವೆ. ಬದುಕನ್ನು ಮುನ್ನಡೆಸುವ, ಉತ್ತಮ ಬದುಕಿನ ದಾರಿಯಲ್ಲಿ ಸಾಗುವ ಚಾಲಕನೂ ನೀವೆ. ಹೀಗಿರಬೇಕಾದರೆ, ಬದುಕಿನ ಬಂಡಿಯು ಅತಿ ವೇಗವಾಗಿ, ಅತಿ ನಿಧಾನವಾಗಿ ಅಥವಾ ಅಡ್ಡಾದಿಡ್ಡಿಯಾಗಿ ಚಲಿಸದಂತೆ ನೋಡಿಕೊಳ್ಳುತ್ತಾ ನಿಯಂತ್ರಣದ ಲಗಾಮು ಹಿಡಿವವರೂ, ಲಗಾಮನ್ನು ಲಂಗಿಲ್ಲದೇ ಬಿಡುವವರೂ ನೀವೇ ಆಗಿದ್ದೀರಿ.

ಅದಕ್ಕೆಂದೇ ನಾವು ನೀವೆಲ್ಲ Live each day like it is your last-make the most out of every moment ನೆನಪಿನಲ್ಲಿಡಬೇಕು. ನೀವೇನಂತೀರಿ??

ಸೋಮವಾರ, ಮೇ 25, 2009

ನಿಮ್ಮ ನಂಬರ್‌ ಏನು?

ನೆಂಟರು, ಸ್ನೇಹಿತರು ಯಾರೇ ಭೇಟಿಯಾದರೂ ಹಲವಾರು ಪ್ರಶ್ನೆಗಳು ಇದ್ದೇ ಇರುತ್ತವೆ. ಅವು ಯಾವುದು? ಅವುಗಳನ್ನು ಹೀಗೆ ಹೆಸರಿಸಬಹುದು!
ಏನ್ಸಮಾಚಾರ?
ಹೇಗಿದ್ದೀರಿ?
ಎಷ್ಟೊಂದು ದಿವ್ಸ ಆಯ್ತು?!
ಮನೆ ಕಡೆ ಎಲ್ಲ ಹೇಗೆ? ಎಲ್ಲ ಚೆನ್ನಾಗಿದ್ದಾರಾ?
ಇವೆಲ್ಲ ಸಾಮಾನ್ಯ ಪ್ರಶ್ನೆಗಳಾದರೂ ಅದರಲ್ಲಿ ಆತ್ಮೀಯತೆ ಎದ್ದು ಕಾಣುತ್ತಿರುತ್ತದೆ. ಕೆಲವೊಮ್ಮೆ ಅದು ತೋರಿಕೆಯ ಪ್ರಶ್ನೆಯೂ ಆಗಿರಬಹುದು.
*********
ಸರಿ. ಭೇಟಿ, ಮಾತು-ಕತೆ, ಸಂಸಾರ ತಾಪತ್ರಯ ಎಲ್ಲ ಹರಟಿದ, ನೆನಪಿಸಿಕೊಂಡ, ಇವೆಲ್ಲ ಮುಗಿದ ನಂತರ ನಿನ್ನ ನಂಬರು ಕೊಡಿ, ಕೊಡ್ತೀಯಾ/ರಾ? ಇದು ಕಾಮನ್‌ ಪ್ರಶ್ನೆಯಲ್ಲೊಂದು ಪ್ರಶ್ನೆ!
ಓಕೆ. ಇದು ನನ್ನ ನಂಬರು.
ನಿನ್ನ ನಂಬರು? ಮಿಸ್ ಕಾಲ್‌ ಕೊಡು. ಸೇವ್‌ ಮಾಡ್ಕೋತೀನಿ.
ರಿಂಗ್ ಮಾಡು, ಕಟ್ ಮಾಡು, ಓಕೆ? ಹೀಗೆ ಸಾಗುತ್ತಿರುತ್ತದೆ ಸಂಭಾಷಣೆ. ಇವೆಲ್ಲಾ ಈ ಫೋನ್‌ ನಂಬರಿನ ಸಂಭಾಷಣೆಗಳು.
ಇದರಲ್ಲಿ ನಿನ್ ನಂಬರ್‍ ಏನು? ಎಂಬ ಪ್ರಶ್ನೆ ಬಂದಾಗ... ೯೪೪೮೩.... ಎಂದೋ, ೯೮೪೫೬... ಎಂದೋ ಹೇಳುತ್ತಾ ಇರುವುದನ್ನು, ನಾವೇ ಹಾಗೆಲ್ಲ ಹೇಳುತ್ತಿರುತ್ತೇವೆ.
***********
ಮೊನ್ನೆ ಹೀಗೇ ಆಯಿತು. ಬಸ್ಸಿನಲ್ಲಿ ಯಾರೋ ಯಾರಿಗೋ ಫೋನ್‌ ಮಾಡಿದ್ದಾರೆ. ಈ ಕಡೆಯಿಂದ ಇದು ನಿನ್ ನಂಬರ್‌ ಅಲ್ವಾ?
ನಿನ್ ನಂಬರ್‍ ಏನು?
ಆ ಕಡೆಯವ ಕೀಟಲೇ ಸ್ವಭಾವದವನಾಗಿದ್ದರೆ? ಹೀಗಿರಬಹುದಿತ್ತೇ ಸಂಭಾಷಣೆ!
ಇದು ನನ್ನ ಮೊಬೈಲು ನಂಬರು ಅಥವಾ ನನಗೆ ನಂಬರ್‌ ಇಲ್ಲ.
ಅಥವಾ
ಈ ಲೋಕದಲ್ಲಿ ನನ್ನ ನಂಬರ್‍ ಏನೋ ಯಾರಿಗ್ಗೊತ್ತು. ಇಲ್ಲಿ ನಾನು ಎಷ್ಟನೆಯವನೋ? ಕೋಟಿಕೋಟಿ ಜೀವಿಗಳಲ್ಲಿ ನನ್ನದೆಷ್ಟು ಕೋಟಿ ಸಂಖ್ಯೆಯೋ? (ನಶ್ವರ ಜಗತ್ತು ಎಂದುಕೊಳ್ಳುತ್ತಾ)
ಅಥವಾ
ಟೆಲಿಫೋನ್‌ ಡೈರೆಕ್ಟರಿಯಲ್ಲಿ ಇದು ನನ್ನ ನಂಬರು. ನನ್ನ ಹೆಸರಿನ ಮುಂದಿರುವ ನಂಬರು.
ಇನ್ನೂ ಹೀಗೆಯೇ ಯೋಚಿಸುತ್ತಾ ಹೋದರೆ... ರೆ.. ರೆ...
*************
ಹೀಗೆಲ್ಲಾ ನನಗೆ ಯೋಚನೆ ಬಂದಿತ್ತು.
ಇವೆಲ್ಲಾ ಸರಿ. ಇದೀಗ ನಿಮ್ಮ ನಂಬರ್‌ ಏನು?

ಶನಿವಾರ, ಮೇ 23, 2009

ನೀ ಏನೇ ಮಾಡು ಹೆದರುವೆನೇನು?

Photo by Chandrashekara B.H. ಇದು ಯಾವ ಕೀಟ ಎಂದು ನನಗೆ ತಿಳಿಯದು. ಸುಂದರವಾದ ಕೀಟ. ಆದರೆ, ಇದು ಮಧ್ಯಾಹ್ನ ಕಚೇರಿ ಆವರಣದಲ್ಲಿದ್ದ ಟ್ಯೂಬ್‌ಲೈಟ್ ಬೆಳಕಿಗೆ ಹಾರುತ್ತಲೇ ಇತ್ತು.

ಕಾಫಿ ಮುಗಿಸಿ ಬಂದಾಗ ನೆಲದ ಮೇಲೆ ಬಿದ್ದು ಅತ್ತಿತ್ತ ಹೊರಳಾಡುತ್ತಿತ್ತು. ಅದನ್ನು ಒಂದು ಕಾಗದದ ಮೇಲೆ ಹಿಡಿದು ಟೇಬಲ್ಲಿನ ಮೇಲೆ ಇಟ್ಟೆ. ಆದರೆ, ಅದರ ಒಂದೆರಡು ಕಾಲುಗಳು ಸ್ವಾಧೀನ ತಪ್ಪಿ ಪದೇ ಪದೇ ಉಲ್ಟಾ ಬೀಳುತ್ತಿತ್ತು. ಹಾರಲು ಆಗುತ್ತಿಲ್ಲ. ಬಳಿಯಲ್ಲಿಯೇ ಇದ್ದ ಕ್ಯಾಮೆರಾದಿಂದ ಒಂದಷ್ಟು ಚಿತ್ರ ಕ್ಲಿಕ್ಕಿಸಿದೆ. ಅದು ಅತ್ತಿತ್ತ ಸ್ವಲ್ಪ ಹೊತ್ತು ಸರಿದಾಡುತ್ತಿತ್ತು. ಸಂಜೆಯವರೆಗೂ ಅದುಹಾಗೇ ಇತ್ತು. ಕಚೇರಿ ಸಮಯ ಮುಗಿಯಿತು. ಮನೆಗೆ ಹೊರಟೆ.

ಮಾರನೇ ದಿನ ಬಂದು ನೋಡಿದರೆ ಅದು ಇಹಲೋಕ ತ್ಯಜಿಸಿತ್ತು.

`ನೀ ಏನೇ ಮಾಡು ಹೆದರುವೆನೇನು? ಹ.ಹಾ.. ಬಾಳುವೆನು ನೋಡು'

ಎಂದು ಅಣಕಿಸುತ್ತಾ ಮತ್ತೆ ಮತ್ತೆ ಟ್ಯೂಬ್‌ಲೈಟ್‌ ಬೆಳಕಿನತ್ತ ಹಾರುತ್ತಲೇ ಇದ್ದದ್ದು ಬೆಳಕಿನಡಿಯಲ್ಲಿಯೇ ಜೀವ ಕಳೆದುಕೊಂಡಿತ್ತು.

ಪತಂಗ, ಕೀಟ ಪ್ರಪಂಚದವೆಲ್ಲ ಹೀಗೆಯೇ ಬೆಳಕಿನೆಡೆಗೆ ಸಾಗಿ, ದಾರಿ ತಪ್ಪಿ ಪ್ರಾಣ ಬಿಡುತ್ತಲೇPhoto by Chandrashekara B.H. ಇರುತ್ತವೆ. ಇವುಗಳ ಕಥೆ ಹೀಗಾದರೆ, ಮಾನವನು ಬೆಳಕಿನಿಂದ ಕತ್ತಲಿನೆಡೆಗೆ ಸಾಗಿ ತನ್ನ ಅಧೋಗತಿಯನ್ನು ತಂದು ಕೊಳ್ಳುವುದೂ ಉಂಟಲ್ಲವೇ?

ಓದುಗರಲ್ಲಿ ಈ ಕೀಟದ ಗುರುತು ಮತ್ತು ಅದರ ಬಗೆಗಿನ ಮಾಹಿತಿಯಿದ್ದರೆ ತಿಳಿಸಿ.

ಮಂಗಳವಾರ, ಮೇ 19, 2009

ಇದು ಅರವತ್ತನೇ ಪೋಸ್ಟು.

ಇದು ನನ್ನ ಅರವತ್ತನೇ ಪೋಸ್ಟು. ಅರವತ್ತಕ್ಕೆ ಅರಳುಮರುಳು ಎಂಬ ಗಾದೆ ಮಾತಿದೆ. ಅದಕ್ಕೂ ಇದಕ್ಕೂ ಸಂಬಂಧವಿಲ್ಲ ಎಂದು ಸಂಬೋಧಿಸುತ್ತಾ... ಈ ಪುಟ್ಟ ಪದಗಳಾಟವನ್ನು ಬರೆದಿದ್ದೇನೆ.
*********
ತನಗೆ ಬೇಕಾದ ಸಂಗತಿಗಳನ್ನು ಕೇಳಿ ಪಡೆಯುವ, ತನ್ನಗನ್ನಿಸಿದ ಯೋಚನೆ/ಯೋಜನೆಗಳ ವಿವರಿಸುವ, ತನ್ನ ತಪ್ಪನ್ನು ಮುಚ್ಚಿಟ್ಟುಕೊಳ್ಳುವ, ಹೊಗಳುವ, ತೆಗಳುವ, ಸುಳ್ಳಿನ ಮಾಲೆ ಹೆಣೆಯುವ, ತನ್ನಲಗಿನ ಹರಿತದಿಂದ ಮನೆ-ಮನ ಮುರಿಯುವ, ಕೂಡಿಸುವ, ಕಳೆಯುವ, ಭಾಗಿಸುವ, ನಗಿಸುವ, ಕಿರುಚುವ, ಅರಚುವ, ಹಾಡಿ ಆನಂದಿಸುವ, ಅತ್ತು ರೋದಿಸುವ, ಅವಾಚ್ಯವನಾಡಿಸುವ, ಹಿತನುಡಿಗಳನಾಡಿಸುವ ಗುಣವೇ ಇದಕ್ಕಿರುವುದಲ್ಲದೇ, ಅನೇಕ ರುಚಿಕರ/ವರ್ಜ್ಯ ಪದಾರ್ಥಗಳ ಸ್ವಾದಿಸುವ ಗುಣವನ್ನೂ ಇದು ಹೊಂದಿರುವಾಗ, ಕೇವಲ ಈ ಮಾತನ್ನು ಹೇಳುವುದು ತರವೇ?
"The same tongue which screams also laughs.'"-Master Po
ಅದಕ್ಕೇ ಅಲ್ಲವೇ ಶ್ರೀಪುರಂದರದಾಸರು `ಆಚಾರವಿಲ್ಲದ ನಾಲಗೆ, ನಿನ್ನ ನೀಚ ಬುದ್ಧಿಯ ಬಿಡು, ನಾಲಗೆ...' ಎಂದದ್ದು. ************
ಹೀಗೆಲ್ಲ ನನಗನಿಸಿತು. ನಿಮಗೇನನ್ನಿಸಿತು ಎಂದು `ಬರಹ'ದ ಮೂಲಕ ತಿಳಿಸುವಿರಲ್ಲಾ?

ಶನಿವಾರ, ಮೇ 16, 2009

ಪುಸ್ತಕಗಳನ್ನು ಆರಿಸಿಕೊಳ್ಳುವ ಬಗೆ ಹೇಗೆ?

ಓದುವಿಕೆ ಎಂದರೆ ಕೇವಲ ಶಾಲಾ-ಕಾಲೇಜು ಪುಸ್ತಕಗಳನ್ನು ಮಾತ್ರವೇ ಓದುವುದು ಎಂದು ತಿಳಿಯುವುದು ಸರಿಯಲ್ಲ. ಏಕೆಂದರೆ, ಓದುವಿಕೆ ಅಥವಾ ಓದು ಎಂಬುದು ಸರ್ವವ್ಯಾಪಿ ಪ್ರಕ್ರಿಯೆ. ಆದರೆ, ಓದುವುದು ಏನನ್ನು ಎಂಬ ಪ್ರಶ್ನೆ ಬಂದಾಗ ಉತ್ತರಿಸಲು ಕಷ್ಟವೆನಿಸುತ್ತದೆ. ಶಾಲಾ-ಕಾಲೇಜು ಇವುಗಳ ಪಾಠಪ್ರವಚನಗಳ ಓದುವಿಕೆಯು ಅದು ಶಿಕ್ಷಣಕ್ರಮಕ್ಕೆ, ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಇರುತ್ತದೆ. ಹಾಗಿದ್ದರೆ ಒಬ್ಬ ಓದುಗನಿಗೆ ಬೇಕಾದ ಓದು ಯಾವುದು ಅಥವಾ ಪುಸ್ತಕಗಳು ಯಾವುವು? ಒಬ್ಬೊಬ್ಬ ಓದುಗನಲ್ಲಿಯೂ ಓದುವಿಕೆಯ ಅಭಿರುಚಿ ಬೇರೆಯಾಗಿರುತ್ತದೆ. ಕೆಲವರಿಗೆ ಕಥೆ, ಕಾದಂಬರಿಗಳಲ್ಲಿ ಆಸಕ್ತಿಯಿದ್ದರೆ ಕೆಲವರಿಗೆ ವಿಜ್ಞಾನದ ಬಗೆಗಿನ ಪುಸ್ತಕಗಳನ್ನು ಓದುವಾಸಕ್ತಿಯಿರುತ್ತದೆ. ಹಾಗೆಂದ ಮಾತ್ರಕ್ಕೆ ಕೇವಲ ಕಥೆ, ಕಾದಂಬರಿ, ವಿಜ್ಞಾನ ವಿಷಯವುಳ್ಳ ಪುಸ್ತಕಗಳನ್ನೇ ಓದಬೇಕೆಂದೇನಿಲ್ಲ. ಒಂದು ಒಳ್ಳೆಯ ಪುಸ್ತಕ ಒಬ್ಬ ಉತ್ತಮ ಮಿತ್ರನಿದ್ದಂತೆ. ಮಿತ್ರರನ್ನು ಆಯ್ಕೆ ಮಾಡುವಾಗ ಇರುವ ನಮ್ಮ ಯೋಚನಾ ಲಹರಿಯಂತೆ, ಪುಸ್ತಕಗಳನ್ನು ಓದಲು ಆರಿಸಿಕೊಳ್ಳುವಲ್ಲಿಯೂ ಸಹ ಒಮ್ಮತವಿರುತ್ತದೆ ಎನ್ನಬಹುದು.


ಹಾಗಾದರೆ, ಪುಸ್ತಕಗಳನ್ನು ಆರಿಸಿಕೊಳ್ಳುವ ಬಗೆ ಹೇಗೆ? ಇದಕ್ಕೂ ಸಹ ಓದುಗನಲ್ಲಿ ಅಂತರ್ಮುಖಿಯಾಗಿ ಕುಳಿತಿರುವ ಮತ್ತೊಬ್ಬ ಓದುಗನಿರುತ್ತಾನೆ. ಅವನ ಅಂತರಂಗಕ್ಕೆ, ಮನೋಧರ್ಮಕ್ಕೆ ಒಗ್ಗುವಂತಹ ಪುಸ್ತಕಗಳನ್ನು ಆರಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾನೆ.


ಯಾರೋ ಹೇಳಿದರೆಂದೋ, ಅಥವಾ ಪುಸ್ತಕದ ಹಿನ್ನುಡಿಯನ್ನು ಓದಿಯೋ, ಜಾಹಿರಾತಿನಲ್ಲಿ ಕಂಡದ್ದೋ, ಬುಕ್ಸ್ಟ್ಯಾಂಡಿನಲ್ಲಿ ನೋಡಿದ್ದೋ, ಬೆಸ್ಟ್ ಸೆಲ್ಲರ್‍ ಎಂಬ ಕಾರಣದಿಂದಲೋ ಪುಸ್ತಕಗಳನ್ನು ಆರಿಸುವುದು ತರವೇ? ಹಾಗಿದ್ದರೆ ಪುಸ್ತಕವನ್ನು ನೀವುಗಳು ಹೇಗೆ ಆಯ್ಕೆ ಮಾಡುತ್ತೀರಿ?


ನನ್ನ ಮನಸಿಗೆ ಹೊಳೆದ ವಿಚಾರವನ್ನು ಇಲ್ಲಿ ಬರೆದಿದ್ದೇನೆ. ನೀವೇನಂತೀರಿ ಈ ವಿಚಾರವಾಗಿ?

ಬುಧವಾರ, ಮೇ 13, 2009

ಎಲ್ಲಿಗೆ ಸಾರ್‌,ಯಾವ್ ಸ್ಟಾಪು? ಟಿಕೆಟೋ, ಪಾಸೋ

ಎಪಿಸೋಡ್ -೧
ಹೆಲ್ಲೋ ಸಾರ್‍,
ಎಲ್ಲಿಗೆ ಸಾರ್‌,ಯಾವ್ ಸ್ಟಾಪು?
ನನಗ್ಗೊತ್ತು ಬಿಡ್ರಿ.
ಸರಿ, ಪಾಸೋ, ಟಿಕೆಟೋ
ಪಾಸು.
ಇದು ಮೊನ್ನೆ ಬಸ್ಸಿನಲ್ಲಿ ನಡೆದ ಚಿಕ್ಕ ಸಂಭಾಷಣೆ.
ಬಸ್ಸು ಸಿಗ್ನಲ್ಲಿನಲ್ಲಿ ಎಡಕ್ಕೆ ತಿರುಗಿತು. ಆಗ ಆ ವ್ಯಕ್ತಿ, ಯಾಕ್ರೀ ಈ ಕಡೆ ಹೋಗ್ತೀರಾ? ರಿಂಗ್ ರೋಡಿನಲ್ಲಿ ಹೋಗ್ರೀ?
ನೀ ಹೋಗಪ್ಪ. ನೀನು ಸರಿದಾರಿಲೇ ಹೋಗ್ತಿದೀಯ. ಮತ್ತು ಅಲ್ಲಿದ್ದ ಬಹುಪಾಲು ಪ್ರಯಾಣಿಕರಿಗೆ ಅದು ಗೊತ್ತಿರುವ ವಿಚಾರವಾಗಿತ್ತು. ಬಸ್ಸು ಸರಿಯಾದ ಮಾರ್ಗದಲ್ಲಿಯೇ ಹೋಗುತ್ತಿದೆ.
ರೀ, ನಿಲ್ಲಿಸ್ರೀ. ಯಾಕ್ರೀ ರೂಟ್‌ ಚೇಂಜ್‌ ಮಾಡ್ತೀರಾ? ಇದು ಆ ವ್ಯಕ್ತಿಯ ಪ್ರಶ್ನೆ. ನಾನು ಡ್ರೈವರ್‌ ಕೇಳಿದ್ದೆ, ಹೋಗುತ್ತೆ ಅಂದಿದ್ರು ಅದಕ್ಕೆ ರಿಂಗ್ ರೋಡು ಎಂದಿದ್ದು, ಆ ವ್ಯಕ್ತಿಯ ಮಾತು.
ಆದರೆ, ನಿರ್ವಾಹಕ ಹೇಳಿದ್ದು. ನಾ ಕೇಳಿದಾಗ ನನಗ್ಗೊತ್ತು, ನಾನೆಲ್ಲಿಗೆ ಹೋಗೋದು ಅಂದೆ. ಇದೀಗ ತರಲೆ ....
ಕೊನೆಗೆ ಸಿಗ್ನಲ್ಲಿನಲ್ಲಿ ಆ ವ್ಯಕ್ತಿ ಇಳಿದು ಹೋದ.
****
ಎಪಿಸೋಡ್ -೨
ಸಾರ್‌, ಟಿಕೆಟೋ, ಪಾಸೋ.
ಆ ಪ್ರಯಾಣಿಕ ಸೀಟುಗಾಗಿ ತಡಕಾಡಿ (ಖಾಲಿ ಇದ್ದ ಬಸ್ಸಿನಲ್ಲಿ) ಕೊನೆಯ ಸೀಟಿಗೆ ಹೋದ.
ರೀ, ಸ್ಟೇಜ್‌ ಇದೆ ಮುಂದೆ, ನಿಮ್ದು ಟಿಕೆಟೋ, ಪಾಸೋ? ಮತ್ತದೇ ಪ್ರಶ್ನೆ.
ಪ್ರಯಾಣಿಕ ಹೇಳಿದ್ದು: ಬೇಕಾದ್ರೆ ತೊಗೊತೀನಿ.
ಅಲ್ರೀ, ಕೇಳಿದ್ದಕ್ಕೆ ಸರಿಯಾಗಿ ಹೇಳ್ರೀ.

ನೀವೇನ್‌ ಕೇಳೋದು? (ಆತನ ಧೋರಣೆ ಹೀಗಿತ್ತು), ನಂತರ `ಪಾಸು' ಎಂದು ಆತ ಹೇಳುವಷ್ಟು ವ್ಯವಧಾನವೇ ಇಲ್ಲದಂತೆ ಹೇಳಿದ.
--------------
ಈ ಎರಡೂ ಘಟನೆಗಳಲ್ಲಿ ಅವಿದ್ಯಾವಂತರಿರಲಿಲ್ಲ. ಆದರೂ ಹೀಗೇಕೆ? ಒಂದು ಚಿಕ್ಕ ಪ್ರಶ್ನೆಗೆ ಇಷ್ಟೊಂದು ಮಾತಿಗೆ ಮಾತು ಬೆಳೆದು, ಇತರ ಪ್ರಯಾಣಿಕರಿಗೂ ಕಿರಿಕಿರಿ, ಕಿರುಚಾಟ, ಕಂಡಕ್ಟರ್‍-ಡ್ರೈವರ್‍ - ಇವರ ತಾಳ್ಮೆಗೆ ಕಡಿವಾಣ ಹಾಕುವಂತೆ ಯಾಕೆ ಹೀಗೆ ವಿದ್ಯಾವಂತ ಜನರೇ ವರ್ತಿಸುತ್ತಾರೆ. ಇಂದಿನ ವೇಗಕ್ಕೆ, ದುಡಿಮೆಗೆ ಹೊಂದಾಣಿಕೆ ಆಗುತ್ತಿಲ್ಲದಿರುವುದರಿಂದಲೇ ಅಥವಾ ಅವನೇನು ಮಹಾ? ಎಂಬ ಧೋರಣೆಯಿಂದಲೇ?

ಅದರಲ್ಲಿಯೂ ಈ ಎರಡೂ ಘಟನೆಗಳು ನಡೆದಿದ್ದು ಪ್ರಯಾಣಿಕರ ಸಂಖ್ಯೆ ಕಡಿಮೆಯಿದ್ದಾಗ ಮತ್ತು ಭಾನುವಾರದಂದು. ರಜಾ ದಿನದಂದೇ ಹೀಗಿದ್ದರೆ, ಇನ್ನು ಪ್ರತಿದಿನ ಪ್ರಯಾಣಿಕರ ಈ ಬೇಜವಾಬ್ದಾರಿ ಉತ್ತರಗಳು ಇನ್ನು ಹೇಗಿರಬಹುದು?
ಇದರಿಂದ ಆಗುವ ತೊಂದರೆಗಳು ಅನೇಕವೆಂದರೆ ಅತಿಶಯವೇನಲ್ಲ. ನೀವೇನಂತೀರಿ?

ಶುಕ್ರವಾರ, ಮೇ 8, 2009

ಬೆಂಕಿಚೆಂಡು

ಅದೊಂದು ಮುಂಜಾನೆಯಲ್ಲಿ ಅರಳಿದ್ದ ಈ ಹೂವಿನ ಛಾಯಾಚಿತ್ರ ತೆಗೆದಿದ್ದೆ. ಬೆಳಕು ಸಾಲದೆ ಈ ಚಿತ್ರ ಮೂಡುತ್ತದೋ ಇಲ್ಲವೋ ಎಂಬ ಆತಂಕವಿತ್ತು. ಅದರೆ, ಈ ಹೂವಿನ ಹೆಸರು ತಿಳಿದಿರಲಿಲ್ಲ. ಸ್ನೇಹಿತರ ಮೂಲಕ ತಿಳಿದದ್ದು "ಡಾ.ರಾಜ್‍ರವರ ಗೀತೆಯ ಬಹದ್ದೂರ್ ಗಂಡು ಚಿತ್ರದ ಈ ಸಾಲಿನಲ್ಲಿ ಬರುವ `ಬೆಂಕಿಚೆಂಡು'. ಹೌದು. ಈ ಹೂವಿನ ಹೆಸರು `ಫೈರ್ಬಾಲ್ ಲಿಲ್ಲಿ' (Fireball Lily) ಎಂದು.

ಈ ಹೂವಿನ ದಳಗಳ ತುದಿಯಲ್ಲಿ ಸಣ್ಣ ಬೆಂಕಿಯ ಕಿಡಿಯಂತೆ ಕಾಣುವುದರಿಂದ ಮತ್ತು ಇಡೀ ಹೂವನ್ನು ನೋಡಿದಾಗ ಚೆಂಡಿನಂತೆ ಕಾಣುವುದರಿಂದ ಈ ಹೆಸರು ಬಂದಿರಬಹುದು. ಇದರ ವೈಜ್ಞಾನಿಕ ಹೆಸರು ಸ್ಕಾಡೋಕ್ಸಸ್ ಮಲ್ಟಿಫ಼್ಲೋರಸ್‍ (Scadoxus multiflorus). ಕಾರ್ಕಳದ ಮಿತ್ರರೊಬ್ಬರು ಇದರ ಹೆಸರನ್ನು (Haemanthus multiflorus) ಎಂದು ತಿಳಿಸಿದರು. ಈ ಹೂವಿನ ಕುಟುಂಬದ ಹೆಸರು ಆಆಈಡಾಏಆಏ.ಇದರ ತವರು Africa. ಅದರೆ ಇವುಗಳನ್ನು ಮನೆಯ ಕೈದೋಟಗಳಲ್ಲಿ ಕಾಣಬಹುದು. ಇದು ಸಣ್ಣಪ್ರಮಾಣದ ವಿಷಕಾರಿ ಸಸ್ಯ. ಇದರ ಹೂವಿನದಳಗಳಲ್ಲಿ ವಿಷವಿರುತ್ತದೆ. ಇದನ್ನು ತಿಂದರೆ ವಾಂತಿ, ತಲೆಸುತ್ತುವಿಕೆ, ಬಾಯಿ ಒಣಗುವಿಕೆ ಇತ್ಯಾದಿ ಪರಿಣಾಮ ಬೀರುತ್ತದೆ. ಈ ಹೂವಿಗೆ ಬ್ಲಡ್‍ ಲಿಲ್ಲಿ, ಫುಟ್ ಬಾಲ್ ಲಿಲ್ಲಿ, ಬ್ಲಡ್‍ ಫ್ಲವರ್, ಕ್ಯಾಥೆರೀನ್‍ ವ್ಹೀಲ್‍, ಪಾಯ್ಸನ್‍ ರೂಟ್, ಬ್ಲಡ್‍ಬ್ಲಮ್‍, ಗಿಫ್ಟ್‍ವೊರ್ಟೆಲ್ ಎಂದೂ ಹೆಸರುಗಳಿವೆ.
ಚಿತ್ರ-ಲೇಖನ: ಚಂದ್ರಶೇಖರ ಬಿ.ಎಚ್.

ಬುಧವಾರ, ಮೇ 6, 2009

ಆನ೦ದ, ಎಲ್ಲಿಹುದು?

ಆನ೦ದ, ಎಲ್ಲಿಹುದು?


ಮು೦ಜಾನೆಯ ರವಿಕಿರಣ ಸ್ಪರ್ಶದಲಿ,
ಎಲೆಗಳ ಮೇಲಿನ ಮುತ್ತಿನ ಮ೦ಜಿನ ಹನಿಯಲಿ,
ಅನ೦ತ ಪ್ರಕೃತಿಯ ಅ೦ತರ೦ಗದಾ ದನಿಯಲಿ,
ತು೦ಬಿಹುದು ಆನ೦ದ, ಹುಡುಕದಾ ಮ೦ದಿಗಿಲ್ಲ ಈ ಚೆ೦ದ

ಅರಳಿರುವ ಹೂಗಳಲಿ, ತು೦ಬಿದಾ ಪರಿಮಳದಲಿ,
ದು೦ಬಿಗಳ ಝೇ೦ಕಾರದಲಿ, ಜೇನ ಸಿಹಿಯಲಿ,
ಧುಮ್ಮಿಕ್ಕುವ ಜಲಧಾರೆಯಲಿ, ಪುಟಿಯುವ ಹನಿಗಳಲಿ,
ತು೦ಬಿಹುದು ಆನ೦ದ, ಹುಡುಕದಾ ಮ೦ದಿಗಿಲ್ಲ ಈ ಚೆ೦ದ

ಕೋಗಿಲೆಯ ಇ೦ಚರದಲಿ, ಎಲೆಗಳ ಸದ್ದಿನಲಿ,
ಚಿಗುರಿನ ಹೊ೦ಬಣ್ಣದಲಿ, ಹಸಿರುಟ್ಟಾ ಮರಗಳಲಿ,
ಜಿಗಿದಾಡುವ ಅಳಿಲು, ಹಾರಾಡುವ ಹಕ್ಕಿಗಳ ಸೊಬಗಿನಲಿ,
ತು೦ಬಿಹುದು ಆನ೦ದ, ಹುಡುಕದಾ ಮ೦ದಿಗಿಲ್ಲ ಈ ಚೆ೦ದ

ಚ೦ದ್ರಶೇಖರ ಬಿ.ಎಚ್.
(೨೮-೦೯-೨೦೦೪ ಬರೆದದ್ದು)

ಶನಿವಾರ, ಮೇ 2, 2009

ದೃಷ್ಟಿ

ನಿನ್ನೆ (೧.೫.೨೦೦೯) ಮಧ್ಯಾಹ್ನ ಸುಮಾರು ೩.೩೦ ರ ವೇಳೆ. ಹಲಸೂರು ರಸ್ತೆಯ ಸಿಗ್ನಲ್‌. ನಾನಿದ್ದ ಬಸ್ಸೂ ಸಹ ಸಿಗ್ನಲ್ಲಿನಲ್ಲಿ ನಿಂತಿತ್ತು. ಸಣ್ಣಗೆ ಮಳೆಹನಿ. ವಿಂಡೋ ಸೀಟಿನಲ್ಲಿ ಕುಳಿತಿದ್ದೆ. ಕಿಟಕಿಯ ಗಾಜನ್ನು ಮುಂದಕ್ಕೆ ಸರಿಸುವ ಎಂದು ತಿರುಗಿದೆ. ಆ ದೃಶ್ಯ ಕಣ್ಣಿಗೆ ಬಿತ್ತು. ಗಾಜನ್ನು ಮರೆತೆ. ಕಿಟಕಿಯಾಚೆ ಇಣುಕಿದೆ.
***
ಆಗಿದ್ದಿಷ್ಟೆ. ಮಾನವೀಯತೆಯ ದೃಶ್ಯ. ಅಲ್ಲೊಬ್ಬ ಅಂಧಬಾಲಕ ರಸ್ತೆ ದಾಟಿಸುವಂತೆ ರಸ್ತೆಯಲ್ಲಿನ ಜನರಲ್ಲಿ ಸಹಾಯಕ್ಕಾಗಿ ಕೇಳುತ್ತಿದ್ದ. ಅದೇ ಸಮಯಕ್ಕೆ ಸ್ಕೂಟಿಯಲ್ಲಿ ಬಂದ ಒಬ್ಬ ಯುವತಿ ಅವನನ್ನು ಕಂಡು ಅವನಿಗೆ ಅಲ್ಲಿಯೇ ಇರಲು ಹೇಳಿ, ಸಿಗ್ನಲ್‌ ದಾಟಿ ತನ್ನ ಸ್ಕೂಟಿಯನ್ನು ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದಳು. ನಂತರ ಆ ಹುಡುಗನ ಬಳಿಗೆ ಬಂದು, ಕೈ ಹಿಡಿದು ನಿಧಾನವಾಗಿ ಅತ್ತಿತ್ತ ಬರುತ್ತಿದ್ದ ವಾಹನಗಳಿಗೆ ಕೈ ತೋರಿಸುತ್ತಾ ರಸ್ತೆ ದಾಟಿಸಿದಳು. ನನಗನ್ನಿಸಿದ್ದು, ಅಷ್ಟೊಂದು ಜನರು ರಸ್ತೆಯಲ್ಲಿ ಓಡಾಡುತ್ತಿದ್ದರೂ ಒಬ್ಬರೂ ಸಹ ಬರಲಿಲ್ಲ. ಅವರುಗಳೂ ಸಹ ಹುಡುಗನ ಕೋರಿಕೆಯನ್ನು ಗಮನಿಸದೇ ಆ ಹುಡುಗನ ಯಾವ ರಸ್ತೆಯ ಆ ಭಾಗಕ್ಕೆ ಹೋಗಬೇಕಿತ್ತೋ ಅತ್ತ ಕಡೆಗೇ ಹೋಗುತ್ತಿದ್ದರು. ಆದರೆ, ಗಾಡಿಯಲ್ಲಿ ಬಂದ ಆ ಯುವತಿ ಆ ಕ್ಷಣದಲ್ಲಿ ಸ್ಪಂದಿಸಿದ್ದು ನಿಜಕ್ಕೂ ಅಚ್ಚರಿಯಾಗಿತ್ತು. ಮಾನವೀಯತೆಯನ್ನು ಬರಿಯ ಮಾತಿನಲ್ಲಿ ಹೇಳದೇ ಕೃತಿಯಲ್ಲಿ ತೋರಿದ್ದಕ್ಕೆ ಆಕೆಗೆ ಹ್ಯಾಟ್ಸ್‌ ಆಫ್.
* * *
ನಾನು ಆಗಿನ್ನೂ ಹೈಸ್ಕೂಲ್‌ ಓದುತ್ತಿದ್ದೆ. ಎನ್.ಆರ್‍.ಕಾಲೋನಿ ರಾಯರಮಠದಲ್ಲಿ ಅಭಿಷೇಕದ ತೀರ್ಥ, ಪ್ರಸಾದ ತೊಗೊಂಡು ಮನೆಗೆ ಸೈಕಲ್ಲಿನಲ್ಲಿ ಹೊರಡುತ್ತಿದ್ದೆ. ಸರ್‌, ನನ್ನನ್ನು ತ್ಯಾಗರಾಜನಗರ ಪೋಸ್ಟ್‌ಆಫೀಸ್‌ ಹತ್ತಿರ ಬಿಡಿ ಎಂದು ಕೇಳಿದ ಆ ವ್ಯಕ್ತಿ. ನಾನೂ ಸಹ ಅದೇ ದಾರಿಯಲ್ಲಿ ಹೋಗಬೇಕಿತ್ತು. ಆದರೆ, ಸೈಕಲ್ ಇದೆ. ಹೇಗೆ? ಯೋಚಿಸಿದೆ. ಬನ್ನಿ ಸರ್‌ ಎಂದು ಅವರಿಗೆ ಹೇಳಿ, ಅವರ ಕೈಲಿದ್ದ ಬುಟ್ಟಿಯನ್ನು ತೊಗೊಂಡೆ. ಸೈಕಲ್ಲಿ ರಾಯರಮಠದ ಹತ್ತಿರವೇ ಬಿಟ್ಟಿದ್ದೆ. ಅವರ ಜೊತೆ ಹೆಜ್ಜೆ ಹಾಕುತ್ತಾ ಸಾಗಿದೆ. ರಸ್ತೆ ದಾಟುವಾಗ ಇಲ್ಲಿ ಬೇಡ, ಮುಂದೆ ಹೋಗೋಣ ಎಂದರು. ನನಗೆ ಅಚ್ಚರಿ. ದಾರಿಯಲ್ಲಿ ಒಂದು ಸೀಮೆಎಣ್ಣೆ ಗಾಡಿ ಇದೆಯಾ? ಕೇಳಿದರು. ಇಲ್ಲ ಎಂದೆ. ಇಲ್ಲಿ ದಿನ ಬೆಳಗ್ಗೆ ನಿಂತಿರುತ್ತೆ ಎಂದರು. ಮುಂದೆ ಸಾಗಿದೆವು. ಒಂದೆರಡು ರಸ್ತೆ ದಾಟುತ್ತಿದ್ದಂತೆಯೇ ಬಲಕ್ಕೆ ತಿರುಗಿದರೆ ಒಂದು ಕಾರು ನಿಂತಿರುತ್ತೆ, ಅದರ ಮುಂದಿನ ಮನೆ ಎಂದು ಹೇಳುತ್ತಾ ನಡೆದರು. ನಾನು ಅವರನ್ನು ಮನೆಯವರೆಗೂ ಬಿಡುವು ಉದ್ದೇಶವಿಲ್ಲದಿದ್ದರೂ ಅದೇನೋ ಅಚ್ಚರಿಯಿಂದ ಜೊತೆಯಲ್ಲಿಯೇ ಮನೆಯವರೆಗೆ ಹೋಗಿ ಬಿಟ್ಟು ವಾಪಸ್ಸು ಬಂದು ಸೈಕಲ್ಲಿನಲ್ಲಿ ಮನೆಗೆ ಹೋಗಿದ್ದು ಈ ಒಂದು ಮೇಲಿನ ಘಟನೆಯಿಂದ ನೆನೆಪಾಯಿತು. ಇನ್ನೊಮ್ಮೆ ಶ್ರೀ ರಾಮಕೃಷ್ಣ ಮಠದ ಹತ್ತಿರವೂ ಇದೇ ರೀತಿಯಲ್ಲಿ ರಸ್ತೆ ದಾಟಿಸಿದ್ದ ನೆನಪೂ ಕಾಡಿತ್ತು.
***
ಇಂತಹ ಅನುಭವಗಳು ಅವಿಸ್ಮರಣೀಯವಾಗಿ ಉಳಿದಿರುತ್ತದೆ ಎಂದು ನನ್ನ ಅನಿಸಿಕೆ. ನಿಮ್ಮ ದೃಷ್ಟಿಯಲ್ಲಿ? ಕ್ಷಣ ಯೋಚಿಸಿ ಅಂಚಿಸಿ.