ಗುರುವಾರ, ಜುಲೈ 30, 2009

ನಿಸರ್ಗ ಕ್ಯಾಲುಕ್ಯಲೇಟರನ್ನು ದ್ವೇಷಿಸುತ್ತದೆ

ಓ ದೇವರೇ,.. ಮಳೆ ಬರುತ್ತಿಲ್ಲ. ಬರಗಾಲ ಬಡಿದಂತಾಗುತ್ತಿದೆ.

ಮಳೆ ಬಂದು ಸುಮಾರು ದಿನಗಳಾಯಿತು. ಬಯಲುಸೀಮೆಗೆ ಮಳೆಯ ಹನಿಗಳೂ ಬೀಳುತ್ತಿಲ್ಲ. ಮಲೆನಾಡಿನ ಕಾಡುಗಳು ಕಡಿಮೆಯಾಗಿ ಮಳೆರಾಯನ ಬರುವಿಕೆ ಇಲ್ಲವಾಗುತ್ತಿದೆ. ಈ ಬಾರಿ ಮುಂಗಾರು ಕ್ಷೀಣವಾಗಿದೆ. ಕೆಲವೆಡೆ ಮಳೆ ಅಂದ್ರೆ ಮಳೆ ಅಂತೆ... ಹೀಗೆಲ್ಲ ನಾಡಿನಲ್ಲಿನ ಜನರ ಮಾತುಕತೆ ಸಾಗುತ್ತಿರುತ್ತದೆ.

ವೈಜ್ಞಾನಿಕವಾಗಿ ಹಾಗೂ ಸ್ಥಳೀಯವಾಗಿ ಜನರಲ್ಲಿ ಮಳೆಯ ಬಗ್ಗೆ ತಮ್ಮದೇ ಆದ ಅನುಭವ, ಅನುಭಾವಗಳು ಬೇರೂರಿರುತ್ತವೆ. ಇಲ್ಲೊಬ್ಬರು ಪ್ರಕೃತಿ ಮಾತೆಯನ್ನು ಹೀಗೆ ಹೊಗಳುತ್ತಾರೆ.

Nature is man's teacher. She unfolds her treasures to his search, unseals his eye, illumes his mind, and purifies his heart; an influence breathes from all the sights and sounds of her existence. ~Alfred Billings Street

ಆದರೆ, ಮನುಷ್ಯನ ಲೆಕ್ಕಾಚಾರದಂತೆ ಪ್ರಕೃತಿಯಲ್ಲಿ ಎಲ್ಲವೂ ನಡೆಯುವುದಿಲ್ಲ. ಪ್ರಕೃತಿಗೆ ತನ್ನದೇ ಪರಿಸರದ ಅನೇಕ ಕಾರಣಗಳಿರುತ್ತವೆ. ಬೇಸಗೆಯಲ್ಲಿಯೇ ಧೋ ಎಂದು ಮಳೆ ಸುರಿಯಬಹುದು, ಚಳಿಗಾಲದಲ್ಲಿ ಬೇಸಗೆಯ ಅನುಭವವೂ ಆಗಬಹುದು, ಮಳೆಗಾಲದಲ್ಲಿ ಮಳೆಯೇ ಇಲ್ಲವಾಗಬಹುದು. ಮಾನವನ ಲೆಕ್ಕಣಿಕೆಯಂತೆ ವರ್ಷದಲ್ಲಿ ಇಷ್ಟಿಷ್ಟು ತಿಂಗಳು ಬೇಸಗೆ, ಮಳೆ, ಚಳಿ, ಇತ್ಯಾದಿ ಇರಬಹುದು. ಆದರೆ ಪ್ರಕೃತಿಯಲ್ಲಿನ ಲೆಕ್ಕಾಚಾರವೇ ಬೇರೆ. ನಾವಿಲ್ಲಿ ಗುಣಿಸಿದರೆ ಅದು ಭಾಗಿಸಿ, ಕಳೆದು ಎಲ್ಲ ಲೆಕ್ಕ ಹಾಕಬಹುದು.
ಇದರೊಂದಿಗೆ ಮನುಷ್ಯನೇನು ಸಾಮಾನ್ಯನೇ? ಮಳೆ ಬಿತ್ತನೆ ಎಂಬ ಯೋಚನೆಯೊಂದಿಗೆ ಗ್ಲೋಬಲ್‌ ವಾರ್ಮಿಂಗ್ ಇವೆಲ್ಲದರ ಬಗ್ಗೆ ತಲೆಕೆಡಸಿಕೊಂಡರೂ ಪ್ರಕೃತಿಯು ತನ್ನದೇ ಆದ ಅಳತೆಗೋಲಿನಿಂದ ಈ ಭೂಗೋಳದಲ್ಲಿ ಬುಡುಬುಡಿಕೆಯಾಡುತ್ತದೆ.

`ಪ್ರಕೃತಿಯು ಮಾನವನ ಆಸೆಗಳನ್ನು ಪೂರೈಸಬಹುದು. ಆದರೆ ದುರಾಸೆಗಳನ್ನಲ್ಲ', ಎಂದು ಮಹಾತ್ಮಾ ಗಾಂಧಿಯವರ ಮಾತೊಂದಿದೆ. ಈ ಮಾತನ್ನು ಸರಿಯಾಗಿ ಅರ್ಥಮಾಡಿಕೊಂಡವರಿಗಿಂತ ಪ್ರಕೃತಿಯಿಂದಲೇ `ಅರ್ಥ' (ಹಣ) ಮಾಡಿಕೊಳ್ಳಲು ಹವಣಿಸುವವರೇ ಅಧಿಕ. ಅದರಿಂದಾಗಿಯೇ ಎಂತೆಂತಹ ಮಳೆಕಾಡುಗಳೂ ನಾಶವಾಗಿ ಹೋಗಿವೆ/ಹೋಗುತ್ತಿವೆ. ಹರಿಯುತ್ತಿದ್ದ ತೊರೆಗಳೆಲ್ಲ ತೆರೆಯಮರೆಗೆ ಸರಿದಿವೆ. ಕೆಲವು ಮೋರಿಗಳಾಗಿ ಢಾಳಾಗಿ ನಾರುತ್ತಿವೆ. ಇಲ್ಲೆಲ್ಲ ಮಾನವನ ದುರಾಸೆಯ ದೃಷ್ಟಿಯೇ ಕಾಣುತ್ತದೆ.

ಬೆಟ್ಟಗುಡ್ಡಗಳು, ಹೆಮ್ಮರಗಳು ಇವೆಲ್ಲ ನಾಶವಾಗುತ್ತಾ ಹೋದಾಗ ಮಳೆ ಮೋಡಗಳನ್ನು ತಡೆದು ಮಳೆಸುರಿಸುವ ಪ್ರಕೃತಿಯ `ಲೆಕ್ಕ' ತಪ್ಪಾಗಿ ಹೋಗುತ್ತಿದೆ. ಬಿಸಿಲಬೇಗೆ, ಚಳಿಗಾಲ ಇವೆಲ್ಲ ಏರುಪೇರಾಗಿ ಕೆಲವೆಡೆ ಪ್ರವಾಹಗಳೇರ್ಪಟ್ಟರೆ, ಹಲವೆಡೆ ವಾತಾವರಣದಲ್ಲಿನ ತಾಪಮಾನ ಮಾನವನ ಲೆಕ್ಕಾಚಾರಕ್ಕಿಂತಲೂ ಏರುಪೇರಾಗುತ್ತಿವೆ. ಇಂತಹ ಮಾನವನ ದುರಾಸೆಯ ಕಾರಣದಿಂದಲೇ ರಾಲ್ಫ್‌ ವಾಲ್ಡೋ ಎಮರ್ಸ್‌ನ್‌ ಅವರು ಹೀಗೆ ಹೇಳಿರಬೇಕು?! Nature hates Calculators ಎಂದು.

ಈ ಭೂಮಂಡಲದಲ್ಲಿ ಇವನ್ನೆಲ್ಲ ಸರಿದೂಗಿಸಲು ಮತ್ತೊಂದು ಪ್ರಕೃತಿಯ ನಕಲು ಭೂಮಿಯು ನಮಗಿಲ್ಲ. ಅಂದರೆ, ವಿನ್ಸ್‌ಟನ್‌ ಚರ್ಚಿಲ್‌ ರವರು ಹೇಳಿರುವಂತೆ `Nature will not be admired by proxy'.


++++++++++++++++++++++++
ನಾಳೆ ಶ್ರೀ ವರಮಹಾಲಕ್ಷ್ಮೀ ಹಬ್ಬ. ಎಲ್ಲರಿಗೂ ಆ ದೇವಿಯು ಶಾಂತಿ, ಸೌಭಾಗ್ಯಗಳನ್ನು ಅನುಗ್ರಹಿಸಲಿ. ಎಲ್ಲರಿಗೂ ಹಬ್ಬದ ಶುಭಾಶಯಗಳು.
++++++++++++++++++++++++
ಲೇಖನ: ಚಂದ್ರಶೇಖರ ಬಿ.ಎಚ್.
೩೦೦೭೨೦೦೯

ಮಂಗಳವಾರ, ಜುಲೈ 28, 2009

ಸಮಯವೆಲ್ಲಿ? ನಮಗೆ...

©Chandrashekara BH, Sep2008
ಸಮಯವೆಲ್ಲಿ? ನಮಗೆ...
ಏನಿದೇನಿದು ಜೀವನ! ಎಷ್ಟು ಜಾಗೃತವೋ?
ಸಮಯವಿಲ್ಲ ನಮಗೆ, ನಿಂತು ಅವಲೋಕಿಸಲು
ಆಡು-ಆಕಳಿನಂತೆ ತಂಪೆಳಲಿ ನಿಂತು
ನೆನಪುಗಳ ಮೆಲುಕಲೂ ಇಲ್ಲ, ಇಲ್ಲ ಸಮಯ
ಇಲ್ಲವಲ್ಲ, ತಾಯಿ ನಿಸರ್ಗದೇವಿಯನು ಕಾಣಲು,
ಅವಳ ಮುಗುಳು ನಗೆಯ ಸಿರಿ ಸವಿಯಲು
ಅವಳ ಹೆಜ್ಜೆ-ಗೆಜ್ಜೆ ಧ್ವನಿಯ ಆಲಿಸಲೂ
ಇಲ್ಲವಲ್ಲಾ, ನಮಗೆ ಸಮಯ, ನಿಂತು ಆನಂದಿಸಲು

ಕಳೆದು ಹೋಗುವುದಲ್ಲಾ ಈ ಸಮಯ ನಿರಂತರ,
ಬರಿಯ ಬಡತನದ ಜೀವನ, ತಾ ಬಿಂದುವಾಗಿ
ಜಗವ ಸುತ್ತಿಸುಳಿದು ಈ ಸಮಯ, ಆಯಿತಲ್ಲಾ -
ಇದೆಂಥಾ ಜೀವನಾ? ಎಷ್ಟು ಜಾಗೃತವೋ ?
ಅಂತೂ ಸಮಯವಿಲ್ಲ ನಮಗೆ, ನಿಂತು ಅವಲೋಕಿಸಲು,
ಅಣಕಿಸಲು, ಬರಿಯ ಬಡತನದ - ಬಡತನದ ಜೀವನ
[W.H. Davis ಅವರ What is this life...ಕವನದ ಅನುವಾದ]
- ಚಂದ್ರಶೇಖರ ಬಿ.ಎಚ್.೩೧೦೫೨೦೦೧

ಶನಿವಾರ, ಜುಲೈ 25, 2009

ಉನ್ನತಿ ಸಾಧಿಸೆ, ಮಿತ್ರರ್‌ ...

ಯಾರಿಗೆ ತಾನೆ ಮಹತ್ವಾಕಾಂಕ್ಷೆಯಿರುವುದಿಲ್ಲ? ಆಕಾಂಕ್ಷೆಗಳು ಒಬ್ಬರ ಲಕ್ಷ್ಯದಿಂದ ಮತ್ತೊಬ್ಬರ ಲಕ್ಷ್ಯದಿಂದ ಎಂದಿಗೂ ಬೇರೆಯಾಗಿಯೇ ಇರುತ್ತದೆ. ನೋಡುವ ನೋಟಗಳು ಬೇರೆಯವೇ ಆಗಿರುತ್ತವೆ. ಉದ್ಯೋಗ ಒಂದೇ ಹೆಸರಿನಲ್ಲಿದ್ದರೂ ಆತ ಅಥವಾ ಆಕೆಯ ಕೆಲಸ ಮಾಡುವ ರೀತಿ ವಿಭಿನ್ನವಾಗಿರುತ್ತದೆ. ಹೀಗೆಯೇ ಸಣ್ಣಪುಟ್ಟ ಆಶಾಗೋಪುರಗಳೂ ಒಂದೊಂದೂ ಎತ್ತರಗಾತ್ರಗಳಲ್ಲಿ ವಿಭಿನ್ನವಾಗಿರುತ್ತವೆ.

ಆಕಾಂಕ್ಷೆಗಳು ಮನಸ್ಸಿನಲ್ಲಿದ್ದ ಮಾತ್ರಕ್ಕೆ ನಾವು ಗುರಿಯನ್ನು ಮುಟ್ಟುವುದಿಲ್ಲ. ಅದಕ್ಕಾಗಿ ತವಕಿಸಬೇಕು, ಹಪಹಪಿಸಬೇಕು. ಆ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಒಂದೊಂದೇ ಹೆಜ್ಜೆಯಿಡುತ್ತಾ ಸಾಗಿದರೆ ಅನತಿದೂರದಲ್ಲಿಯೇ ಗುರಿಯ ಗಮ್ಯಸ್ಥಾನ ತಲುಪುತ್ತೇವೆ.

ಆದರೆ ಇಂದಿನ ಜನರಲ್ಲಿ ಇವೆಲ್ಲ ಬೇಡವಾಗಿದೆ. ತಕ್ಷಣಕ್ಕೆ ಸಿರಿವಂತರಾಗಬೇಕು, ಹೆಸರು ಗಳಿಸಬೇಕು, ರಾಜಕೀಯ ನಾಯಕನಾಗಬೇಕು, ಸಿನಿಮಾ ಹೀರೋ ಆಗಬೇಕು, ಹಣ ಝಣಝಣ ಎಂದು ಸದಾ ಕಿಸೆಯಲ್ಲಿರಬೇಕು, ಇಂತಹ ಬೇಕುಗಳ ಮಹಾಪೂರವೇ ಇರುತ್ತದೆ. ಆದರೆ ಅದಕ್ಕೆ ಬೇಕಾಗುವ ಪರಿಕರಗಳು, ಸಲಕರಣೆಗಳು - ಆಸಕ್ತಿ, ಮನೋಧೈರ್ಯ, ಮಾನಸಿಕ ಸಿದ್ಧತೆ ಇವೆಲ್ಲ ಖಾಲಿ ಖಾಲಿ.

ಇವೆಲ್ಲ ಆಗದಿದ್ದರೆ ಬೇಡ. ಇಂದಿಗೆ ಮಿತ್ರರಾಗಿರುತ್ತಾರೆ, ಇನ್ನೊಂದು ಕ್ಷಣಕ್ಕೆ ಶತ್ರುಗಳಾಗಿ ಬಡಿದಾಡುತ್ತಾರೆ. ಅಥವಾ ಇಬ್ಬರು ಸ್ನೇಹಿತರಲ್ಲಿ ಒಬ್ಬ ಉನ್ನತಿ ಸಾಧಿಸಲು ಮಿತ್ರನನ್ನು ಅವಲಂಬಿಸಿದರೆ, ಮತ್ತೊಬ್ಬ ಅವನನ್ನೇ ಅಲುಗಿಸಲು ಸಿದ್ಧನಾಗಿರುತ್ತಾನೆ. ಅದಕ್ಕೇ ಹೀಗೊಂದು ಮಾತು: `To be successful have a Friend. To be very successful keep an Enemy'.

ಈ ಮಾತನ್ನು ಇಂದು ಅಕ್ಷರಶ: ಅನುಕರಿಸುವಲ್ಲಿ ಜನರು ಮುಂದಾಗಿದ್ದಾರೆ. ಬಹುಶ:, ಅದಕ್ಕೆ ಇರಬಹುದು ಬಹುತೇಕ ಕ್ರಿಮಿನಲ್‌ ಪ್ರಕರಣಗಳು ಪ್ರತಿದಿನ ಕಾಣುತ್ತಿರುವುದು. `ಉನ್ನತಿ , ಸಾಧಿಸೆ ಮಿತ್ರರ್‌ ಶತ್ರುಗಳಾಗಿ ಮಾರ್ಪಡುತಿಹರ್‌', ಎಂದು ಅನಿಸುತ್ತದೆ!! ಇಂದಿನ ದಿನಗಳಲ್ಲಿ ತಾಯಿ, ತಂದೆ, ಮಕ್ಕಳು ಸಹೋದರರ ನಡುವೆಯೇ ಆಸ್ತಿಪಾಸ್ತಿಗಾಗಿ ಕೊಲೆ ದರೋಡೆಗಳು ನಡೆಯುತ್ತಿವೆ. ಅಲ್ಲಿರಬೇಕಾಗಿದ್ದ ಪ್ರೀತಿ, ಪ್ರೇಮ, ಸಹನೆ ಇವೆಲ್ಲ ಮಾಯವಾಗಿದೆ. ಸಹೋದರರು ಅಕ್ಷರಶ: ದಾಯಾದಿಗಳಾಗಿ ಕಲಹಗಳಲ್ಲಿ ತೊಡಗಿರುವುದನ್ನು ದಿನದಿನವೂ ಕಾಣುತ್ತಿದ್ದೇವೆ. ಇಂತಹ ಕೃತ್ರಿಮತನವನ್ನು ಬಿಟ್ಟು, ನಮ್ಮ ಬದುಕನ್ನು ಒಳ್ಳೆಯ ರೀತಿಯಲ್ಲಿ ಅಂದರೆ ಸಮಾಜಕ್ಕೆ ಹೊರೆಯಾಗದಂತೆ, ತೊಂದರೆಯಾಗದಂತೆ, ಬಂಧು-ಮಿತ್ರರೊಳಗೊಂದಾಗಿ ಬದುಕನ್ನು ಹಾಗೂ ಬದುಕಿನ ಉನ್ನತ ಗುರಿಯನ್ನು ತಲುಪಲು ಬೇಕಾದುದನ್ನು ಮಾಡೋಣ.

ಈ ಲೇಖನ ಬರೆಯಲು ಎಂದೋ ಓದಿದ್ದ ಈ ಮೇಲಿನ ವಾಕ್ಯವೇ ಕಾರಣ. ಇದರ ಜೊತೆಗೆ ಜಪಾನೀ ಗಾದೆಯೊಂದು: `ಬದುಕು ಒಂದು ತಲೆಮಾರಿಗೆ. ಆದರೆ ಒಳ್ಳೆಯ ಹೆಸರು ಎಂದೆಂದಿಗೂ', ಎಂದು ಹೇಳುತ್ತದೆ. ಈ ಮಾತನ್ನು ಎಂದೆಂದಿಗೂ ನೆನಪಿನಲ್ಲಿಟ್ಟುಕೊಂಡರೆ... ,,, ನಮಗೇ ಒಳಿತಲ್ಲವೇ?

ಬುಧವಾರ, ಜುಲೈ 22, 2009

ತಿರುಗುಬಾಣ

ಇವೆರಡು ಆಂಗ್ಲ ವಾಕ್ಯಗಳನ್ನು ಓದಿದಾಗ, ನನಗೆ ಅನಿಸಿದ ಒಂದೆರಡು ಯೋಚನೆಗಳನ್ನು ಸಂಯೋಜಿಸಿ ಈ ಪುಟ್ಟ ಪ್ಯಾರಾವನ್ನು ಬರೆಯಲು ಪ್ರೇರಣೆಯಾಯಿತು. ಅದರ ರೂಪವೇ ಈ ಕೆಳಗಿನ ಬರಹ.
++++++++++++++++
ಇದು ನನಗೆ ಮೊದಲೇ ಯೋಚನೆ ಬಂದಿತ್ತು. ಈ ಕೆಲಸವನ್ನು ಹೀಗೆಯೇ ಮಾಡಬೇಕು ಅಂತ ಅನಿಸಿತ್ತು. ಆದರೆ... ಸುಮ್ಮನಾದೆ.

ಬಹುಶ: ಹೀಗೊಂದು ವಾಕ್ಯ ಸಾಮಾನ್ಯವಾಗಿ ಒಬ್ಬರಲ್ಲಾ ಒಬ್ಬರು ಆಡುತ್ತಲೇ ಇರುತ್ತಾರೆ.
ನಮಗೆ ನಾವೇ ಕೆಲವು ಬಾರಿ ಯೋಚನೆಗಳೊಂದಿಗೆ ಯೋಜನೆಗಳನ್ನೂ ಹಾಕಿಕೊಳ್ಳತ್ತೇವೆ. ಆದರೆ, ಮುಂದುವರೆಯುವುದು ಅಥವಾ ಮುಂದುವರೆಸುವಲ್ಲಿ ನಿರ್ಲಕ್ಷ್ಯ ತೋರಿರುತ್ತೇವೆ. ಇವೆಲ್ಲವೂ ನಮ್ಮ ಗಮನಕ್ಕೆ ಬಂದಿದ್ದರೂ ಕೆಲವೊಮ್ಮೆ ಹೆಚ್ಚು ಗಮನಿಸಿರುವುದಿಲ್ಲ. ಇಂತಹ ವಿಚಾರಗಳನ್ನೇ ಕೆಲವರು ಸೀರಿಯಸ್ಸಾಗಿ ಅಥವಾ ಸೀರೀಸ್‌ ಆಗಿ ತೆಗೆದುಕೊಂಡು `ನಮಗರಿವಿಲ್ಲದಂತೆಯೇ' ನಾವಂದು ಯೋಚಿಸಿದ್ದ/ಯೋಜಿಸಿದ್ದ ವಿಚಾರಗಳಲ್ಲಿ ಯಶಸ್ಸನ್ನು ಪಡೆಯುತ್ತ ಮುಂದೆ ಸಾಗಿರುತ್ತಾರೆ. ಇವುಗಳೂ ಸಹ ಗಮನಕ್ಕೆ ಬರುವುದು ಅಪರೂಪವಾಗಿರುತ್ತದೆ. ಆಗ ನಮಗನ್ನಿಸುವುದು `ನಾನಂದುಕೊಂಡಿದ್ದನ್ನು ನನಗೇ ಗೊತ್ತಿಲ್ಲದಂತೆ ಬೇರೆಯವರು ಉಪಯೋಗಕ್ಕೆ ಪಡಕೊಂಡರು' ಎಂದು.

ಇಂತಹ ವಿಚಾರ/ಯೋಚನೆಗಳನ್ನು ಸೂಕ್ಷ್ಮವಾಗಿ ಪ್ರಸಿದ್ಧರು ಹೀಗೆ ಹೇಳಿದ್ದಾರೆ. "In every work of genius we recognize our own rejected thoughts; they come back to us with a certain alienated majesty". Ralph Waldo Emerson

ಇಂತಹ ಸಂದರ್ಭಗಳಲ್ಲಿ ಕೇವಲ ಯೋಚನೆ/ಯೋಜನೆಗಳಿದ್ದರೆ ಸಾಲದು. ಅಂತಹ ಯೋಜನೆ/ಯೋಚನೆಗಳು ನಿಜವಾಗಲೂ ಕಾರ್ಯಗತವಾಗದ ಹೊರತು ಯಾವುದೇ ಕೆಲಸವೂ ಸಹ ಆಗುವುದಿಲ್ಲ. ಕೇವಲ ಕಲ್ಪನೆಗಳಲ್ಲಿಯೋ, ಕನಸಿನಲ್ಲಿಯೋ ಕಾರ್ಯಗತವಾದಂತೆ ಭಾಸವಾಗುವುದು. ಅದಕ್ಕೆ ಹೀಗೊಬ್ಬರ ಕಿವಿಮಾತು: Nothing is really work unless you would rather be doing something else. - James M. Barrie.
+++++++++++++++
ಚಂದ್ರಶೇಖರ ಬಿ.ಎಚ್.೨೨ ಜುಲೈ ೨೦೦೯
Do not look back upon what has been done. Go ahead! -Swamy ವಿವೇಕಾನಂದ
LEARN, MASTER AND ACHIEVE!!!-Bruce Lee

ಶುಕ್ರವಾರ, ಜುಲೈ 17, 2009

ನಗು ನಗುತಾ ನಲೀ ನಲೀ ಏನೇ ಆಗಲಿ...

ನಗಬೇಕು, ನಗಿಸಬೇಕು,
ಅದೇ ನನ್ನ ಧರ್ಮ
ನಗಲಾರೆ ಅಳುವೆ ಎಂದರೆ
ಅದು ನಿಮ್ಮ ಕರ್ಮ

`ನಕ್ಕರೆ ಅದೇ ಸ್ವರ್ಗ' ಚಲನಚಿತ್ರದ ಈ ಹಾಡನ್ನು ಆಲಿಸಿದರೇ ಸಾಕು, ಹಾಸ್ಯ ಚಕ್ರವರರ್ತಿ ದಿ ನರಸಿಂಹರಾಜು ಅವರ ನಟನೆ ಕಣ್ಮುಂದೆ ನಿಲ್ಲುತ್ತದೆ, ಅಲ್ಲವೇ?

ಹೌದು. ಜೀವನವೆಂಬುದು ಜಂಜಾಟದ ಮಾಲೆಯೆಂದರೆ ತಪ್ಪೇನಿಲ್ಲ. ಹಾಗೆಂದ ಮಾತ್ರಕ್ಕೆ ಆಕಾಶವೇ ತಲೆಯ ಮೇಲೆ ಕಳಚಿ ಬಿದ್ದಂತೆ ಇರಬೇಕೆ? ಇನಿತಾದರೂ ನಗಬಾರದೆ?

ಮೊನ್ನೆ ಒಂದು ವಿದ್ಯುನ್ಮಾನ ಪುಸ್ತಕವನ್ನು ಓದುತ್ತಿದ್ದೆ. ಅದರ ಹೆಸರು Cheerfulness As a Life Power ಎಂದು. ಅದರಲ್ಲಿ ಬರುವ ಒಂದೆರಡು ವಿಚಾರಗಳನ್ನು ನನಗೆ ತಿಳಿದಂತೆ ಭಾವಿಸಿ ಇಲ್ಲಿ ನಿಮ್ಮೊಡನೆ ಹಂಚಿಕೊಂಡಿದ್ದೇನೆ. ಇಷ್ಟವಾದರೆ ನಕ್ಕುಬಿಡಿ, ಇಲ್ಲವಾದರೂ ಸರಿಯೇ ನಕ್ಕು-ಬಿಡಿ, ನಿಮಗೆ ಸೇರಿದ್ದು.

ಅದರಲ್ಲಿ ಮೊದಲ ಪಠ್ಯದಲ್ಲಿಯೇ ಹಾಸ್ಯಕ್ಕೆ ಇರುವ ಮೌಲ್ಯವೇನೆಂದು ತಿಳಿಸುತ್ತಾರೆ, ಲೇಖಕರು.
ವಿಲ್ಲಿಯಂ ಕೆ. ವಾಂಡರ್‍ಬೇಟ್‌ (William K. Vanderbilt) ಒಬ್ಬ ಆಗರ್ಭ ಶ್ರೀಮಂತ. ಆತನು ಒಮ್ಮೆ (Coquelin the elder) ಇವರನ್ನು ಭೇಟಿ ಮಾಡುತ್ತಾರೆ. ಮಾತುಕತೆ ಸಾಗುತ್ತದೆ.
ಒಂದೆರಡು ದಿನಗಳಲ್ಲಿ (Coquelin the elder) ಇವರಿಗೆ ಒಂದು ಪತ್ರ ಕೈಸೇರುತ್ತದೆ. ಅದರಲ್ಲಿ...
"You have brought tears to our eyes and laughter to our hearts. Since all philosophers are agreed that laughing is preferable to weeping, your account with me stands thus:--
"For tears, six times . . . $600 "For laughter, twelve times . . 2,400 ------ $3,000
"Kindly acknowledge receipt of enclosed check."


ಈಗ ಹೇಳಿ, "ಆಕಾಶವೇ ಬೀಳಲಿ ಮೇಲೆ ನಾನೆಂದು ನಗುವೆನು, ನಗಿಸುವೆನು"... ಎಂದು.

ನಾವು ಕೇವಲ ಚಿತ್ರಗೀತೆಗಳಲ್ಲಿ, ಸಿನೆಮಾ, ದೂರದರ್ಶನ ಧಾರಾವಾಹಿಗಳಲ್ಲಿ ಮಾತ್ರ ಹಾಸ್ಯದ ತುಣುಕುಗಳನ್ನು ನೋಡಿ, ಕೇಳಿ ನಗಬೇಕಿಲ್ಲ.

ದಿನನಿತ್ಯದ ಬದುಕಿನಲ್ಲಿ, ಮಾತಿನಲ್ಲಿ, ಒಬ್ಬರೊಂದಿಗೆ ಸಂಭಾಷಿಸುವಾಗಲೂ ಸಹ ಹಾಸ್ಯ-ನಗು ಇವೆಲ್ಲ ಸಾಧ್ಯ. ಹೃದಯಕ್ಕೆ ಹಾಸ್ಯಬೇಕು. ಆಗ ಹಾರ್ಟ್‌ಫೇಲ್‌/ಅಟ್ಯಾಕ್‌ ಆಗುವುದಿಲ್ಲ.

ಮರ್ಥ್ ಇಸ್ ಗಾಡ್ಸ್ ಮೆಡಿಸಿನ್‌ - ಹೌದು ಉಲ್ಲಾಸವೇ ಒಂದು ದೇವಕೊಟ್ಟ ದಿವ್ಯೌಷಧ ಎಂದರೆ ತಪ್ಪಾಗಲಾರದು.


ಇದೇ ಪುಸ್ತಕದಲ್ಲಿ ಇನ್ನೊಂದು ಘಟನೆಯೂ ಬರುತ್ತದೆ. ಆಕೆ ಎಲ್ಲ ದುಗುಡದುಮ್ಮಾನಗಳಿಂದ ಬಸವಳಿದು ಬೇಸರಗೊಂಡಿರುತ್ತಾಳೆ. ಜೀವನವೇ ಸಾಕೆಂಬ ಜಿಗುಪ್ಸೆ ಕಾಡುತ್ತಿದೆ. ಕಡೆಗೊಂದು ನಿರ್ಧಾರಕ್ಕೆ ಬರುತ್ತಾಳೆ. ದಿನದಲ್ಲಿ ಕನಿಷ್ಠ ಮೂರು ಬಾರಿಯಾದರೂ ನಗಬೇಕು ಎಂದು. ಅದೆಂತಹ ಸನ್ನಿವೇಶವೇ ಇರಲಿ ನಗುತ್ತೇನೆ ಎಂದೂ ನಿರ್ಧರಿಸುತ್ತಾಳೆ. ಇದನ್ನೇ ತನ್ನ ಪತಿ ಮತ್ತು ಮಕ್ಕಳ ಮುಂದೆಯೂ ತಿಳಿಸುತ್ತಾಳೆ. ಅವರಿಗೆ ಇವಳ ಈ ವಿಚಾರವನ್ನು ಗೌರವಿಸಿ ಅವರೂ ಸಹ ಸಹಕರಿಸುತ್ತಾರೆ. ಅವಳು ಹೇಳುತ್ತಾಳೆ. ಈ ವಿಚಾರ ನಿನ್ನೆಯಷ್ಟೇ ನನ್ನ ಮನಸಿಗೆ ಬಂತು ಅದನ್ನು ಗಂಡನಿಗೂ ತಿಳಿಸಿದೆ. ಪ್ರತಿ ಬಾರಿಯೂ ಮಾತಾಡುವಾಗ ನಗುನಗುತ್ತಾ ಮಾತಾಡಬೇಕು ಎಂಬುದಾಗಿ.... ಸಂಜೆ ಗಂಡ ಮನೆಗೆ ಬರುತ್ತಲೇ ಈವತ್ತು ಎಷ್ಟು ಬಾರಿ ನಿತ್ಯದ ನಗೆಯಾಡಿದೆ, ಹೀಗೆ ಪ್ರಶ್ನಿಸುತ್ತಾ ನಗುತ್ತಾನೆ. ಆಕೆ ಉತ್ತರ ಕೊಡುತ್ತಾ ನಗುತ್ತಾಳೆ. ಈ ವಿಚಾರ ಅವಳ ಮಕ್ಕಳಿಂದ ಇತರ ಮಕ್ಕಳಿಗೂ ತಲುಪಿ ಅವರ ತಾಯ್ತಂದೆಗಳಿಗೆ ತಲುಪುತ್ತದೆ. ಈ ವಿಷಯ ಪತಿಯಿಂದ ಅವನ ಮಿತ್ರರಿಗೂ ತಿಳಿಯುತ್ತದೆ. ಈಕೆ ಹೀಗೆ ಹೇಳುತ್ತಾಳೆ: ನಾನು ಅಪರೂಪಕ್ಕೊಮ್ಮೆ ನನ್ನ ಪತಿಯ ಮಿತ್ರರ ಭೇಟಿಯಾದಾಗ ಅವರುಗಳು 'ಈ ದಿನ ಎಷ್ಟು ಬಾರಿ ನಕ್ಕಿರಿ?" ಎಂದು ಪ್ರಶ್ನಿಸುತ್ತಾ ನಗುತ್ತಾರೆ. ಹೀಗೆ ನನ್ನ ನಗುವಿನ ವಿಚಿತ್ರ ಹವ್ಯಾಸದಿಂದ ನನ್ನಲ್ಲಿ ಸುಮಾರು ಆರು ವರ್ಷಗಳಿಂದ ಮನೆಮಾಡಿದ್ದ ದುಗುಡ, ತಲೆನೋವು ಎಲ್ಲವೂ ದೂರಾಗಿ ಇದೀಗ ಮನೆ-ಸಂಸಾರ ಎಲ್ಲವೂ ಆನಂದವಾಗಿದೆ ಎಂದು ತಿಳಿಸುತ್ತಾಳೆ.

ನಮ್ಮ ಹಿರಿಯ ಕವಿಗಳಾದ ಡಾ. ಡಿ.ವಿ.ಜಿ.ಯವರು ಈಕೆಯ ಮಾತುಗಳನ್ನೇ ಅನುಗುಣವಾಗುವಂತೆ ಹೀಗೆ ಹೇಳಿರಬಹುದೇ ಅನಿಸಬಹುದು.

ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ
ನಗುತ ಕೇಳುತ ನಗುವುದತಿಶಯದ ಧರ್ಮ
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ-
ಮಿಗೆ ನೀನು ಬೇಡಿಕೊಳೊ -ಮಂಕುತಿಮ್ಮ

Chavasse ಹೀಗೆ ಹೇಳುತ್ತಾರೆ: ಉಲ್ಲಾಸವೆಂಬುದು ಒಂದು ತತ್ವಸಿದ್ದಾಂತ. ಅದನ್ನು ಯಾರೂ ಸರಿಯಾಗಿ ಅರ್ಥಮಾಡಿಕೊಂಡಿಲ್ಲ. ಇದನ್ನು ನಾವು ಮಕ್ಕಳಿಗೆ ಎಳವಯಸ್ಸಿನಿಂದಲೇ ಅವರಲ್ಲಿ Mirth ಎಂಬುದನ್ನು ಹೀಗೆ ಕಲಿಸಬೇಕು ಎಂದು.

"Encourage your child to be merry and laugh aloud; a good hearty laugh expands the chest and makes the blood bound merrily along. Commend me to a good laugh,--not to a little snickering laugh, but to one that will sound right through the house. It will not only do your child good, but will be a benefit to all who hear, and be an important means of driving the blues away from a dwelling. Merriment is very catching, and spreads in a remarkable manner, few being able to resist its contagion. A hearty laugh is delightful harmony; indeed, it is the best of all music."
Photo & Design by Chandrashekara B.H. July2009
ಇಂದಿನ ಆಧುನಿಕ ಜಗತ್ತಿನಲ್ಲಿ ಹಾಸ್ಯೋತ್ಸವ, ನಗೆ ಜಾಗರಣೆ ಇವೆಲ್ಲವನ್ನೂ ಆಗಾಗ ಹಮ್ಮಿಕೊಳ್ಳುತ್ತಿರುತ್ತಾರೆ. ಜೊತೆಗೆ ಲಾಫಿಂಗ್‌ ಕ್ಲಬ್ಬುಗಳೂ ಸೇರ್ಪಡಯಾಗಿರುತವೆ. ಇಂತಹವುಗಳೆಲ್ಲ ನಗೆಯನ್ನು ಎಲ್ಲರಲೂ ಹಂಚಬೇಕೆಂಬ, ಜನರು ನಗುನಗುತಾ ತಮ್ಮ ನಿತ್ಯ ಜಂಜಾಟದಿಂದ ಹೊರಬರಲೆಂಬ ಆಶಯವಿರುತ್ತದೆ.

ನಗು ನಗುತಾ ನಲೀ ನಲೀ ಏನೇ ಆಗಲಿ... ಈ ಹಾಡನ್ನು ಗುನುಗುನುಗಿಸಿದರೂ ಸಹ ನಮ್ಮ ಜನರಲ್ಲಿ ಆಗಾಗ ಈ ಪ್ರಶ್ನೆಗಳು ಮೂಡಿದರೆ ನಾವೇನು ಮಾಡಲು ಸಾಧ್ಯ?

ನಗುವಿನ ಬಗ್ಗೆ ಒಂದು ಸೀರಿಯಸ್ ಲೇಖನ ಅಂತ ನಿಮಗನ್ನಿಸಿದರೆ/ದ್ದರೆ:

ನಗುವುದೋ ಅಳುವುದೋ ನೀವೇ ಹೇಳಿ
ಇರುವುದೋ ಬಿಡುವುದೋ ಈ ಊರಿನಲಿ...
ಎಂದುಕೊಂಡರಾಯಿತು.

ಶುಕ್ರವಾರ, ಜುಲೈ 10, 2009

ದರ್ಶನಾನುಭವ

ಪಾತಾಳಗಂಗೆ, ನಾಮದ ಚಿಲುಮೆಯ ದರ್ಶನಾನುಭವ (೨೦೦೫ ಡಿಸೆಂಬರ‍್)
೨೦೦೫ರಲ್ಲಿ ಶಿವಗಂಗೆ ಬೆಟ್ಟ, ಗೊರವನಹಳ್ಳಿ, ದೇವರಾಯನದುರ್ಗ ಈ ಸ್ಥಳಗಳಿಗೆ ಸುಮಾರು ಹದಿನೈದು ಜನ ಸಹೋದ್ಯೋಗಿಗಳು ಪ್ರವಾಸ ಹೋಗಿದ್ದೆವು. ಶಿವಗಂಗೆ ಬೆಟ್ಟದಲ್ಲಿರುವ ಪಾತಾಳಗಂಗೆಯನ್ನು ನೋಡಲು ಹೋದಾಗ ನಮಗೆ ಅಚ್ಚರಿ ಜೊತೆಗೆ ಬೇಸರವೂ ಆಯಿತು. ಏಕೆಂದರೆ, ಪಾತಾಳಗಂಗೆಯ ತಾಣದ ಬಾಗಿಲಿನಲ್ಲಿ ತಲಾ ಒಂದು ರೂಪಾಯಿ ಕೊಟ್ಟು, ಪ್ರವೇಶ ಚೀಟಿ ಪಡೆದು ದರ್ಶನ ಮಾಡಬೇಕು. ಅಲ್ಲಿನ ವ್ಯವಸ್ಥೆ ಅಷ್ಟಕ್ಕಷ್ಟೆ. ಏಕೆಂದರೆ, ಬೆಳಕಿನ ಪ್ರಕಾಶವಂತೂ ಬೀಳುವುದಿಲ್ಲ ಮತ್ತು ಆ ಜಾಗದಲ್ಲಿ ಒಂದು ರೀತಿಯ ವಾಸನೆಯು ಹರಡಿತ್ತು. ಇದರಿಂದ ವಾಕರಿಕೆ ಬರುವಂತಹ ಅನುಭವವಾಗುತ್ತಿತ್ತು. ಬಹುಶ: ಬಿಸಿಲಿನ ತಾಪ ಕಡಿಮೆಯಿರುವ ಮತ್ತು ಗುಹೆಯಂತಹ ಜಾಗದಲ್ಲಿ ನೀರು ಇರುವುದರಿಂದ ಅಥವಾ ಪಾಚಿಯು ಬೆಳೆದಿರುವದರಿಂದ ವಾಸನೆ ಇರಬಹುದು. ಆದರೆ, ಶುಲ್ಕ ಕೊಟ್ಟೂ ಸಹ ಇಲ್ಲಿ ಕನಿಷ್ಠ ರೀತಿಯ ಶುಚಿಯೂ ಕಾಣದಿರುವುದು ಸ್ವಲ್ಪ ವಿಪರ್ಯಾಸವಾಗುತ್ತದೆ. ಈ ಪಾತಾಳಗಂಗೆಯ ಸ್ಥಳವು ಕತ್ತಲೆಯಿಂದ ಕೂಡಿರುವುದರಿಂದ ಬೆಳಕಿನ ವ್ಯವಸ್ಥೆ ಮತ್ತು ಅಲ್ಲಿನ ಸ್ವಲ್ಪ ಜಾಗವನ್ನಾದರೂ ಶುದ್ಧಗೊಳಿಸಿದರೆ ಪ್ರವಾಸಿಗಳನ್ನು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಬಹುದಲ್ಲವೇ?
Shivagange Trekking_2005

ನಾಮದಚಿಲುಮೆಯಲ್ಲಿನ ಅನುಭವ ಹೀಗಿದೆ: ದೇವರಾಯನದುರ್ಗದ ಹಾದಿಯಲ್ಲಿ ಸಿಗುವ ನಾಮದಚಿಲುಮೆಯ ದರ್ಶನಕ್ಕೆ ಪ್ರತಿಯೊಬ್ಬರಿಗೂ ಮೂರು ರೂಪಾಯಿ ಶುಲ್ಕ. (ಒಮ್ಮೆ ಶ್ರೀರಾಮನು ಇಲ್ಲಿ ಸಂಚರಿಸುತ್ತಿರುವಾಗ ತನ್ನ ಹಣೆಗೆ ನಾಮ/ತಿಲಕವಿಟ್ಟುಕೊಳ್ಳಲು ನೀರನ್ನು ಹುಡುಕಿದನಂತೆ. ಸುತ್ತಲೆಲ್ಲೂ ನೀರು ಸಿಗದಿರಲು, ಅಲ್ಲಿಯೇ ಇದ್ದ ಬಂಡೆಗಲ್ಲಿನ ಜಾಗದಲ್ಲಿ ಬಾಣವನ್ನು ಬಿಟ್ಟಾಗ ಆ ಜಾಗದಲ್ಲಿ ನೀರಿನ ಚಿಲುಮೆಯುಂಟಾಯಿತು, ಅದರಿಂದ ತಿಲಕವನ್ನು ಇಟ್ಟುಕೊಂಡನು ಎಂಬುದಾಗಿ ಸ್ಥಳಪುರಾಣವಿದೆ). ಕರ್ನಾಟಕ ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿರುವ ಇಲ್ಲಿ ಪ್ರವೇಶಶುಲ್ಕಕ್ಕೆ ರಸೀತಿ ನೀಡುವ ಪದ್ಧತಿಯಿದ್ದಂತೆ ಕಾಣಲಿಲ್ಲ. ಶುಲ್ಕ ಪಡೆದಿದ್ದಕ್ಕೆ ಪ್ರವೇಶ ಚೀಟಿ ಕೇಳಿದರೂ ಖಾಲಿಯಾಗಿದೆ ಅಥವಾ ಪರವಾಗಿಲ್ಲ ಹೋಗಿಬನ್ನಿ ಎಂಬ ಉತ್ತರವೇ ದೊರಕಿತು. ಇದರ ಬಗ್ಗೆ ಹೆಚ್ಚು ಚರ್ಚೆ ಮಾಡಲು ನಮಗೆಲ್ಲ ಸಮಯದ ಅಭಾವವಿದ್ದುದರಿಂದ ನಾಮದ ಚಿಲುಮೆ, ಜಿಂಕೆವನಕ್ಕೆ ಹೋಗಿ ಬಂದಿದ್ದಾಯಿತು. ಇಲ್ಲಿ ಜಿಂಕೆವನವು ಇದೆಯಾದರೂ ಜಿಂಕೆಗಳ ಸಂಖ್ಯೆ ಅತಿ ವಿರಳ ಎನ್ನಿಸಿತು. ನಮಗೆ ಕಾಣಿಸಿದ್ದು ಒಂದೆರಡು ಮಾತ್ರ ಮತ್ತು ಕೋತಿಗಳು ಹೆಚ್ಚಾಗಿ ಕಂಡುಬಂದವು. ಸುಮಾರು ೪೫ ರೂಪಾಯಿಗೆ ಪ್ರವೇಶಶುಲ್ಕದ ಪ್ರವೇಶ ಶುಲ್ಕ ಕೊಟ್ಟೂ ಚೀಟಿಯಿಲ್ಲವೆಂದಾದರೆ, ಇದೇ ರೀತಿಯಲ್ಲಿ ಪ್ರತಿದಿನ ಒಂದೆರಡು ಬಾರಿ ಇದೇ ಉತ್ತರ ಸಿಕ್ಕಿದರೆ (ಉದಾಹರಣೆಗೆ: ಸುಮಾರಾಗಿ ೧೦-೧೫ ಜನ ಪ್ರವಾಸಿಗಳಿದ್ದು ಒಂದೆರಡು ತಂಡಕ್ಕೆ ಈ ರೀತಿ ಅನುಭವವಾದರೆ...), ಅರಣ್ಯ ಇಲಾಖೆಗೆ ಆಗುವ ನಷ್ಟದ ಲೆಕ್ಕ ಸಿಗುವುದೇ? ಹಾಗಾದಲ್ಲಿ, ಕರ್ನಾಟಕ ಪ್ರವಾಸೋದ್ಯಮದ ಅಥವಾ ಅರಣ್ಯ ಇಲಾಖೆಯ ಬಗ್ಗೆ ಜನರ ಮನಸ್ಸಿನಲ್ಲಿ ಎಂತಹ ಭಾವನೆ ಮೂಡಬಹುದು ಎಂದೆಲ್ಲ ವಿಚಾರ ಮಾಡಬೇಕಾಗಿದೆಯಲ್ಲವೆ? (ಇದೇ ಕಾರಣವಾಗಿ ಅದೇ ಹಣಕ್ಕೆ ನಾವೆಲ್ಲ ಕಾಫಿ/ಟೀ ಕುಡಿಯಬಹುದಿತ್ತು ಎಂದು ಕೆಲವರ ಆಶಯವಾಗಿತ್ತು).

ಇವೆಲ್ಲ ಕಳೆದ ವರ್ಷಗಳಲ್ಲಿ ಆದ ಅನುಭವ. ಮತ್ತೆ ಈ ಸ್ಥಳಗಳಿಗೆ ಹೋಗುವ ಅವಕಾಶವಾಗಿಲ್ಲ. ಈಗ ಹೇಗಿದೆಯೋ ತಿಳಿದಿಲ್ಲ. ನಿಮ್ಮಲ್ಲಿ ಯಾರಿಗಾದೂ ಇಂತಹ ವಿಚಾರವಿದ್ದರೆ, ಅನುಭವಕ್ಕೆ ಒದಗಿದ್ದರೆ ತಿಳಿಸಿರಿ.

ಬುಧವಾರ, ಜುಲೈ 8, 2009

ಅದು ಸಿರಿವಂತರ ಮನೆಯದ್ದು...

ಕಳೆದವಾರ ಸಂಜೆ ೫.೩೦ರ ಸುಮಾರಿಗೆ ಸಿಟಿಬಸ್ಸಿನಲ್ಲಿ ಪ್ರಯಾಣ ಮಾಡಬೇಕಾಗಿ ಬಂತು. ಸರಿ, ಬಸ್ಸೂ ಸಹ ನಾನು ನಿಂತಿದ್ದ ನಿಲ್ದಾಣಕ್ಕೆ ಬಂದಿತು. ಇನ್ನೇನು ಬಸ್ಸಿನೊಳಗೆ ಸೇರಬೇಕು, ಆಗ `ಅವರನ್ನು ಇಳಿಸಿಬಿಡಪ್ಪ' ಎಂಬ ಮಾತು ಕಂಡಕ್ಟರಿಂದ ಕೇಳಿಬಂತು. ಒಂದು ಕ್ಷಣ ನನಗೆ ಈ ಬಸ್ಸು ಹೋಗುವುದೋ ಇಲ್ಲವೋ ಎಂಬ ಅನುಮಾನ!! ??

ಆದರೆ. ಅಲ್ಲಿ ನಡೆದದ್ದೇ ಬೇರೆ!

ಕೆಂಗೇರಿ ಕಡೆಯಿಂದ ಬಂದ ಈ ಬಸ್ಸಿನಲ್ಲಿ ಮಲ್ಲತ್ತಹಳ್ಳಿಯ ಬಳಿ ಜನರೊಂದಿಗೆ ದಾರಿಬದಿಯಲ್ಲಿದ್ದ ಒಂದು ನಾಯಿಯೂ ಸಹ ಹತ್ತಿತ್ತು. ಸಾಲದಕ್ಕೆ ಆ ಬಸ್ಸಿನ ಕೊನೆಯ ಸೀಟಿನಲ್ಲಿ ಆರಾಮಾಗಿ ಹತ್ತಿ ಮಲಗಿಯೂ ಬಿಟ್ಟಿತ್ತು. ಅದನ್ನು ಬಸ್ಸಿನಿಂದ ಇಳಿಸುವ ಸಲುವಾಗಿ ಆ ಕಂಡಕ್ಟರ್‍ ಹಾಗೆ ಮಾತಾಡಿದ್ದ. ನಂತರದ ಎರಡೇ ಕ್ಷಣಗಳಲ್ಲಿ ಆ ನಾಯಿಯು ಬಸ್ಸಿನಿಂದ ಇಳಿದಿತ್ತು.
***
ನೆಕ್ಸ್ಟ್,.... ??
???
????
?????
***
ಆ ನಾಯಿ ನಿಮ್ಮಲ್ಲೇ ಯಾರದ್ದೋ ಇರಬಹುದು ಎಂದುಕೊಂಡಿದ್ದೆ ಎಂದು ಪ್ರಯಾಣಿಕರಲ್ಲಿ ಒಬ್ಬರಿಗೊಬ್ಬರು ಪ್ರಶ್ನಾವಳಿ ಸಾಗಿತು. ಆಗ ಮತ್ತೊಬ್ಬ, ಅಲ್ಲಿ "ಯಾರೋ ಯಾರಿಗೋ ಬಸ್ಸು ಬಂತು ಬಾ" ಎಂದ ತಕ್ಷಣ ಈ ನಾಯಿ ಹತ್ತಿತು ಎಂದು ಹೇಳುತ್ತಿದ್ದ. ಅಲ್ಲದೆ ಆ ನಾಯಿಯ ಜೊತೆಯಲ್ಲಿ ಮತ್ತೊಂದು ನಾಯಿಯೂ ಇದ್ದಿತು ಎಂದೂ ಹೇಳುತ್ತಿದ್ದ.

ಸರಿ. ಅದರ ಬುದ್ಧಿಮತ್ತೆಗೆ ಅಲ್ಲಿದ್ದವರೊಬ್ಬರು, ಅಲ್ಲರೀ... ಆ ನಾಯಿ ಶ್ರೀಮಂತರ ಮನೆಯವರದ್ದಿರಬೇಕು ಎಂದ. ಇಲ್ಲ, ಬಿಡಿ ಎಂದು ಮತ್ತೊಬ್ಬ.

ಅದು ಶ್ರೀಮಂತರ ಮನೆಯದ್ದೇ, ಸಾಕಿದ ನಾಯಿಯಂತೆಯೆ ಇತ್ತು. ಜೊತೆಗೆ ಕೊರಳ ಪಟ್ಟಿ ಸಹ ಇತ್ತು ಎಂದ. ಮತ್ತೊಬ್ಬ, ಹೌದು. ಆ ನಾಯಿ ಬಸ್ ಹತ್ತಿದ ತಕ್ಷಣ ಸೀದಾ ಲಾಸ್ಟ್ ಸೀಟಿನಲ್ಲಿ ಆರಾಮಾಗಿ ಮಲಗಿಕೊಂಡಿತು! ಎಂದ.

ಮೊದಲನೆಯವನು, ಅದಕ್ಕೇ ಹೇಳಿದ್ದು ಅದು ಶ್ರೀಮಂತರ ಮನೆ ನಾಯಿ. ಕಾರಿನಲ್ಲಿಯೇ ಅದು ಓಡಾಡಿರಬೇಕು. ಇಲ್ಲದಿದ್ದರೆ ಆರಾಮಾಗಿ ಸೀಟಿನಲ್ಲಿ ಮಲಗಿಕೊಳ್ಳುತ್ತಿತ್ತೇ? ಎಂದು ಮರುಪ್ರಶ್ನೆ ಹಾಕುತ್ತಿದ್ದ. ಹೀಗೆ ಒಬ್ಬರಿಗೊಬ್ಬರು ಮಾತಾಡುತ್ತಿರುವಾಗ, ನಾ ಇಳಿಯುವ ಬಸ್ ಸ್ಟಾಪು ಬಂದಿತ್ತು.
***

ಸೋಮವಾರ, ಜುಲೈ 6, 2009

ಸೋದರಿ..ಗೆ...

ಸೋದರಿ..ಗೆ...
ನಗುತಿರು, ನಗುತಿರು ನನ್ನ ಸೋದರಿ
ತುಂಬಿರಲಿ ಸಂತಸ ಸದಾ ನಿನ್ನಲಿ
ಇದುವೆ ನನ್ನ ಹಾರೈಕೆ - ಸೋದರಿ
ಕನಸೆನ್ನುವ ಮೊಗ್ಗೆಲ್ಲವೂ ಹೂವಾಗಿ ಅರಳಲಿ
ಸಂತಸ ತುಂಬಿದ ಮನೆ-ಮನ ನಿನ್ನದಾಗಲಿ
ನೋವೆಲ್ಲವೂ ತಿಳಿನೀರ ನದಿಯಾಗಿ ಹರಿದುಹೋಗಲಿ

ಬಾಲರವಿಯ ಕಿರಣಕಾಂತಿ ಕಣ್ಣಿನೊಳು ನೆಲೆಸಲಿ
ಬೀಸಿಬರುವ ತಂಗಾಳಿ ಮಾತಿನೊಳೊಂದಾಗಲಿ
ಚಿಮ್ಮುವಾ ಕಾರಂಜಿಯಂತೆ ಉತ್ಸಾಹ-ಉಲ್ಲಾಸ ಚಿಮ್ಮುತಿರಲಿ

ಇರಲಿ ಎಂದೆಂದೂ ಹೀಗೆ ಪ್ರತಿಕ್ಷಣ, ಪ್ರತಿದಿನ
ಎನುತ ಹಾರೈಸಲಿ ನನ್ನ ಮನ, ಸೋದರಿ
-ಚಂದ್ರಶೇಖರ ಬಿ.ಎಚ್.೨೬೫೯೨

ಶುಕ್ರವಾರ, ಜುಲೈ 3, 2009

ಹುಡುಕಾಟ

ಹುಡುಕಾಟ
ನಿತ್ಯ ನಡೆದಾಟ ಬದುಕಿನಲಿ
ಬರಿಯ ಹುಡುಕಾಟ
ಕಾಣುವುದೆಲ್ಲವೂ ಅಕಟಕಟ
ಬರಿದೇ ಹೊಡೆದಾಟ 1
ಜೀವಿಜೀವಿಗಳ ಒಡನಾತ, ಆಗಿದೆ
ಬರಿಯ ಮೋಜಿನ ಕೂಟ
ಕುಡಿದು ಮತ್ತೇರಿದವರ ಕೂಗಾಟ, ಆದರೂ..
ನಿಲ್ಲದ ನವೀನ ಸುಖದ ಹುಡುಕಾಟ 2

ಭಾವ ಭಾವನೆಗಳ ಪ್ರಭಾವ, ಅಭಾವ
ತುಂಬಿಹುದೆಲ್ಲರ ಹೃದಯವ
ಕಾಣದಾ ಬದುಕಿನ ಸತ್ಯವ, ಮತ್ತೆ
ಹುಡುಕುತಾ ಸಾಗಿದೆ ಜೀವನದಾಟ 3
-ಚಂದ್ರಶೇಖರ ಬಿ.ಎಚ್. ೨೮೬೯೩

ಬುಧವಾರ, ಜುಲೈ 1, 2009

ಸ್ವಾತಂತ್ರ್ಯ ಜನ್ಮ ಸಿದ್ಧ ಹಕ್ಕು - ಆದರೆ... - ಭಾಗ 2

ಸ್ವಾತಂತ್ರ್ಯ ಜನ್ಮ ಸಿದ್ಧ ಹಕ್ಕು - ಆದರೆ... ಈ ರೀತಿಯೆ? - ಭಾಗ 2

ಇದು ಒಂದು ವಿಧದಲ್ಲಿ ರಾಷ್ಟ್ರೀಯ ಹಬ್ಬ ಅಥವಾ ಯಾವುದೇ ಧಾರ್ಮಿಕ ಹಬ್ಬಗಳಲ್ಲಿ ಆಚರಣೆಯಾದರೆ, ಕೆಲವರು ತಮ್ಮ ಸ್ವಾತಂತ್ರ್ಯವನ್ನು ಮತ್ತೊಂದು ರೀತಿಯಲ್ಲಿ ಆಚರಿಸುವವರೂ ಇದ್ದಾರೆ. ರಾಷ್ಟ್ರೀಯ ಅಥವಾ ನಾಡ ಹಬ್ಬಗಳಲ್ಲಿ ಧ್ವಜಾರೋಹಣ ಮಾಡುವಾಗ ಇರುವ ಶ್ರದ್ಧೆ, ಗೌರವ ಧ್ವಜವನ್ನು ಇಳಿಸಬೇಕಾದರೂ ಇರುವುದು ಮುಖ್ಯ. ಇದರ ಬಗ್ಗೆ ತಿಳಿದವರು ಬಹಳ ಕಡಿಮೆ ಜನರಿದ್ದಾರೆಂದರೆ ತಪ್ಪಾಗಲಾರದು. ರಾಷ್ಟ್ರಧ್ವಜವನ್ನು ಎಲ್ಲಿ, ಯಾವ ವೇಳೆ ಮತ್ತು ಯಾವ ಎತ್ತರದಲ್ಲಿ ಹಾರಿಸಬೇಕು ಎಂದೂ ತಿಳಿದಿರಬೇಕು. ಕೆಲವೊಮ್ಮೆ ಧ್ವಜವನ್ನು ವಾಹನಗಳಿಗೆ ಕಟ್ಟಿ ತಮ್ಮ ದೇಶಪ್ರೇಮವನ್ನೇನೋ ತೋರಿಸುತ್ತಾರೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಧ್ವಜವನ್ನು ೨-೩ ದಿನಗಳಾದರೂ, ಬಿಸಿಲಲ್ಲಿ, ಮಳೆ-ಗಾಳಿಯಲ್ಲಿ ಹಾರಾಡಿ ಹರಿಯುವವರೆಗೂ ಗಮನಿಸುವ ವಿಚಾರವೇ ಅನೇಕ ಜನರಲ್ಲಿ ಇಲ್ಲವಾಗಿದೆ. ಇನ್ನು ರಾಷ್ಟ್ರಗೀತೆ, ನಾಡಗೀತೆ ಇವುಗಳಿಗೆ ಗೌರವ ತೋರುವ ವಿಚಾರದಲ್ಲೂ ಅಸಡ್ಡೆ ಕಂಡುಬರುತ್ತಿರುತ್ತದೆ. ಇವೆಲ್ಲ ಸ್ವಾತಂತ್ರ್ಯ ನಂತರದ ಸ್ವತಂತ್ರ ಪ್ರವೃತ್ತಿಯೇ ಆಗಿದೆ ಮತ್ತು ಇಂತಹ ಅನೀತಿಗಳನ್ನು ನಿವಾರಿಸಬೇಕಾಗಿರುತ್ತದೆ.


ಮೇಲಿನ ರೀತಿಗಳಲ್ಲಿ ಇದೊಂದು ಬಗೆಯ ಅಗೌರವ ತೋರುವ ದ್ಯೋತಕವಾದರೆ, ಇನ್ನೊಂದು ಬಗೆಯದು ಒಟ್ಟಿಗೇ ಅನೇಕ ಸಮಾರಂಭಗಳಲ್ಲಿ ಭಾಗವಹಿಸಲು ಸಮ್ಮತಿಸುವುದು. ತಮ್ಮ ಹೆಸರನ್ನು ಆಮಂತ್ರಣ ಪತ್ರಿಕೆಗಳಲ್ಲಿ ಹಾಕದಿದ್ದರೆ ಸಂಘಟಕರನ್ನು ನಿಂದಿಸುವುದು. ಅದಕ್ಕಿಂತಲೂ ಹೆಚ್ಚಾಗಿ ದೇಶದ ಅಭಿವೃದ್ಧಿ ಕುರಿತು ಭಾಷಣ ಮಾಡುವ ಆತುರ ತೋರಿ ಎಲ್ಲೆಡೆಯೂ ಅಚಾತುರ್ಯವಾಗುವಂತಹ ಕೆಲಸ ಮಾಡುವುದು ಆಗಾಗ ಕಂಡು ಬರುವ ವಿಚಾರ. ಹಾಗೆಯೇ ಶಾಲೆ-ಕಾಲೇಜು ಸಮಾರಂಭಗಳಿಗೆ ಸಮಯಕ್ಕೆ ಸರಿಯಾಗಿ ಬರದೇ ಶಾಲಾ ಮಕ್ಕಳನ್ನು ಬಿಸಿಲು, ಮಳೆ, ಚಳಿಯಲ್ಲಿ ಕಾದಿರಿಸಿ ಅವರ ಆಟ-ಪಾಠಗಳ ಸ್ವಾತಂತ್ರ್ಯವನ್ನು ಕಸಿದುಕೊಂಡು ಸಾಧಿಸುವುದಾದರೂ ಏನಿರಬಹುದು? ಶೂನ್ಯವೆನ್ನಬಹುದೇ ಅಥವಾ ಪತ್ರಿಕಾ ಪ್ರಚಾರಕ್ಕೆ ಅವಕಾಶವಾದಿಗಳೆನ್ನಬಹುದೆ?


ಪರರ ಸ್ವಾತಂತ್ರ್ಯವನ್ನು ಮತ್ತು ಅವರ ಆಸ್ತಿ ಹಕ್ಕುಗಳನ್ನು ತಂತ್ರಗಾರಿಕೆಯಿಂದ ಕಸಿದುಕೊಳ್ಳುವ ಬುದ್ಧಿವಂತರಿಗೇನೂ ಕಡಿಮೆಯಿಲ್ಲ. ಇಂತಹ ಘಟನೆಗಳು ನಿಜಜೀವನ ಹಾಗೂ ಕಥೆ, ಕಾದಂಬರಿ, ಸಿನಿಮಾ-ಧಾರಾವಾಹಿಗಳಲ್ಲಿ ಅನುಭವಕ್ಕೆ ಕಂಡುಬರುತ್ತಲೇ ಇರುತ್ತವೆ. ಯಾರದೋ ಜಮೀನು, ಆಸ್ತಿ-ಮನೆ ಇಂತಹವುಗಳನ್ನು ಸ್ವಂತದ್ದೆಂದು ನಂಬಿಸಿ ಇತರರಿಗೆ ಮಾರಾಟ ಮಾಡುವುದೂ ಒಂದು ವಿಧದ ಸ್ವಾತಂತ್ರ್ಯ ಹರಣವೇ ಹೌದು. ಇಲ್ಲಿಯೂ ಸಹ ಸ್ವಚ್ಛಂದ ವ್ಯವಹಾರವು ಯಾರನ್ನೋ ತಮ್ಮ ಇಚ್ಛಾನುಸಾರ ಸಾರಾಸಗಟಾಗಿ ಕಷ್ಟಕೋಟಲೆಗಳಿಗೆ ತಳ್ಳುವ ಸ್ವಾತಂತ್ರ್ಯತೆಯೇ ಮೆರೆಯುತ್ತಿದೆ.


ಇನ್ನು ಯಾವುದಾದರೂ ಒಬ್ಬ ಪ್ರಸಿದ್ಧ ಸಾಹಿತಿಯ ಕಾದಂಬರಿಯೋ, ಒಂದು ಪುಸ್ತಕವೋ ಬಿಡುಗಡೆಗೆ ಸಿದ್ಧವಾಗಿದೆಯೆಂದು ತಿಳಿದಾಕ್ಷಣವೇ ಮೂಲ ಪ್ರಕಾಶಕರ/ನದ ಪ್ರತಿಗಳು ಬೇರೆಲ್ಲೋ ಸ್ವತಂತ್ರವಾಗಿ ಪ್ರಕಟಿಸುವ ಕೆಲವರ ಸ್ವಾತಂತ್ರ್ಯಯಾಭಿಮಾನವಂತೂ ಅಬ್ಬಬ್ಬಾ ಎನಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಪೋಷಕರು-ಮಕ್ಕಳು ಇವರ ಹಣದಾಸೆಗಿನ ಮನೋಭಾವ ಸ್ವೇಚ್ಛೆಯಾಗಿ ಪರೋಪಕಾರದ ನೆಪದಲ್ಲಿ ವಂಚಿಸುವ ಹಂತ ತಲುಪಿದೆ. ಅಲ್ಲದೆ ಪ್ರತ್ಯಕ್ಷವಾಗಿಯೇ ಪೋಷಕರು ತಮ್ಮ ಮಕ್ಕಳಿಗೆ ಸ್ವಚ್ಛಂದವಾಗಿ ಬದುಕಲು ಹಣಬೇಕು ಎಂಬ ಕಾರಣ (ತಲೆದುಂಬಿಸಿ)ನೀಡಿ ವಂಚನೆ, ಕೊಲೆ ಇತ್ಯಾದಿ ಕುಕೃತ್ಯಗಳಲ್ಲಿ ಪಾಲ್ಗೊಳ್ಳುವಷ್ಟು ಸ್ವಾತಂತ್ರ್ಯವನ್ನು ನೀಡುತ್ತಿರುವುದು ವಿಷಾದನೀಯ. ಇಂತಹ ದೃಶ್ಯಗಳನ್ನು ಚಲನಚಿತ್ರಗಳಲ್ಲಿ ಕಾಣುತ್ತಿದೆವು. ಆದರೆ ಇಂದು ಈ ದೃಶ್ಯಾವಳಿಗಳು ನಮ್ಮ ನಿಮ್ಮ ಅಕ್ಕಪಕ್ಕದಲ್ಲೇ ನಡೆಯುತ್ತಿರುವುದು ನಿಜಕ್ಕೂ ಗಾಬರಿಯುಂಟು ಮಾಡುತ್ತಿವೆ. ಇದೂ ಸಹ ಒಂದು ವಿಧದಲ್ಲಿ ಸ್ವಾತಂತ್ರ್ಯವೇ ಎನ್ನಬಹುದು!!


ಇನ್ನು ಸಿನಿಮಾ ಪೋಸ್ಟರಗಳು, ಅಶ್ಲೀಲ ಚಿತ್ರಗಳು, ಗೋಡೆಬರಹಗಳು ಮುಂತಾದವುಗಳನ್ನು ಇಲ್ಲಿ ಚೀಟಿ ಅಂಟಿಸಬಾರದು ಎಂಬ ಸ್ಥಳಗಳಲ್ಲೇ ಅಂಟಿಸಿ ಪರರ ಮನೆಯ, ಕಛೇರಿಯ ಗೋಡೆಗಳನ್ನು ಅವಲಕ್ಷಣದ ಪಾತ್ರಗಳನ್ನಾಗಿ ಸೃಷ್ಟಿಸುವುದು ಯಾವ ಪರಿಯ ಸ್ವಾತಂತ್ರ್ಯ ಎಂದು ನೀವೇ ಊಹಿಸಿ ನೋಡಿ. ಹಾಗೂ ಶುಭಾಶಯ ಕೋರುವ ನೆಪದಲ್ಲಿ ದೊಡ್ಡ ದೊಡ್ಡ ಬ್ಯಾನರುಗಳು, ಭಿತ್ತಿಪತ್ರಗಳ ಭರಾಟೆಯಂತೂ ಎಲ್ಲೆಲ್ಲೂ ಮುಕ್ತವಾಗಿ ಕಾಣಿಸುವುದು ಅತಿರೇಕವೆನಿಸುತ್ತದೆ. ಜೊತೆಗೆ ರಸ್ತೆಗಳ ಇಕ್ಕೆಲಗಳಲ್ಲಿ, ಗಲ್ಲಿಗಲ್ಲಿಗಳಲ್ಲಿ ಭಿತ್ತಿಪತ್ರಗಳು, ಬ್ಯಾನರ್‌ಗಳು, ಕಟೌಟ್‌ಗಳು ಇವುಗಳು ಪದೇ ಪದೇ ತಲೆ ಎತ್ತಿನಿಲ್ಲುವಷ್ಟು ಸ್ವಾತಂತ್ರ್ಯವು ಹಗಲಿರುಳು ಕಾಣುತ್ತಿರುತ್ತವೆ. ಇದು ಸ್ವಾತಂತ್ರ್ಯ ದ ಪರಾಕಾಷ್ಠೆಯಲ್ಲದೆ ಮತ್ತೇನು?


ಇತ್ತ ಕಡೆ ತ್ಯಾಜ್ಯದ ವಿಲೇವಾರಿಯು ಖಾಲಿ ನಿವೇಶನಗಳಲ್ಲಿ, ಶಾಲಾ-ಕಾಲೇಜುಗಳ ಮೈದಾನಗಳಲ್ಲಿ, ರಸ್ತೆಯಲ್ಲಿ ಹೀಗೆ ಎಲ್ಲೆಂದರಲ್ಲಿ ಕಟ್ಟಡ ನಿರ್ಮಾಣಗಳ ತ್ಯಾಜ್ಯಗಳು, ಮನೆ-ಜಾನುವಾರುಗಳ ಕಸ, ಪ್ಲಾಸ್ಟಿಕ್ ವಸ್ತುಗಳು, ಇತ್ಯಾದಿಗಳನ್ನು ಹಾಕುವುದೂ ಇತ್ತೀಚೆಗೆ ಸ್ವತಂತ್ರ್‍ಯ ಪ್ರಚೋದನೆಯಾಗಿದೆ.


ಸಾಕುಪ್ರಾಣಿಗಳ ಮಲಮೂತ್ರ ವಿಸರ್ಜನೆಯ ಸ್ಥಳಗಳಂತೂ ಸಾರ್ವಜನಿಕ ರಸ್ತೆ ಹಾಗೂ ಪರಿಚಿತರ ಅಥವಾ ಅಪರಿಚಿತರ ಮನೆಗಳ ಮುಂದೆಯೇ ಸ್ವಚ್ಛಂದವಾಗಿ ಮಾಡಿಸುವ ಜನರಿಗೇನೂ ಕಡಿಮೆಯಿಲ್ಲ. ತಾವು, ತಮ್ಮ ಮನೆಯ ಸ್ವಚ್ಛತೆ ಇಂತಹ ಸ್ವಂತ ವಿಚಾರವೇ ಇವರುಗಳಲ್ಲಿ ಹೆಚ್ಚಾಗಿದ್ದು ಬೇರೆಯವರ ಸ್ವಾತಂತ್ರ್‍ಯವನ್ನು ಕಸಕ್ಕಿಂತ ಕಡಿಮೆಯಂತೆ ಕಾಣುವ ಪ್ರವೃತ್ತಿ ಹೆಚ್ಚಾಗುತ್ತಿವೆ. ಜೊತೆಗೆ ಪರದೇಶಗಳಲ್ಲಿ ಸಾಕು ಪ್ರಾಣಿಗಳ ಪೋಷಣೆ, ನಿರ್ವಹಣೆಯ ಬಗ್ಗೆ ಬೇಕಾದಷ್ಟು ಹೆಮ್ಮೆಯಿಂದ ಮಾತನಾಡುವ ಇಂತಹ ಜನರಿಗೆ ತಮ್ಮದೇ ರಸ್ತೆಯ, ಸುತ್ತಮುತ್ತಲಿನ ಪರಿಸರದ ನಿಜ ವಿಚಾರಗಳು ತಿಳಿಯದಿರುವುದು ನಿಜಕ್ಕೂ ವಿಷಾದದ ವಿಚಾರ.


ಒಟ್ಟಿನಲ್ಲಿ ಸ್ವಾತಂತ್ರ್ಯ ದಿನೋತ್ಸವವನ್ನೇ ಆಗಲಿ ಅಥವಾ ಪರರ ಸ್ವಾತಂತ್ರ್ಯದ ಸಂತಸವನ್ನೇ ಆಗಲಿ ಸರ್ವತಂತ್ರ ಸ್ವತಂತ್ರ ಸ್ಚೇಚ್ಛಾಪ್ರವೃತ್ತಿಯಿಂದ ಆಚರಿಸದೇ ಶ್ರದ್ಧೆ, ಆಸಕ್ತಿ, ದೇಶಕ್ಕೆ ಮತ್ತು ಪ್ರಜೆಗಳಿಗೆ ಗೌರವ ತರುವ ರೀತಿಯಲ್ಲಿ ಆಚರಿಸಬೇಕು. ಅದನ್ನು ಬಿಟ್ಟು ಸ್ವಚ್ಛಂದ ವರ್ತನೆಯಿಂದ, ದ್ವೇಷದಿಂದ ಬಡಿದಾಡುವ, ದೇಶಕ್ಕೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ತರುವಂತೆ ಆಚರಿಸಬಾರದು ಎಂದು ಅರಿವು ಮೂಡಿಸುವುದಾದರೂ ಹೇಗೆ? ಅಥವಾ ಸ್ವಾತಂತ್ರ್ಯ ವೆಂದರೆ ಏನು? ಸ್ವಚ್ಛಂದ ಪ್ರವೃತ್ತಿಯಿಂದ ತಮಗೆ ಇಚ್ಛೆಬಂದಂತೆ ಬದುಕುವುದೇ ಅಥವಾ ತಮ್ಮತನವನ್ನು ಎಲ್ಲೆ ಮೀರಿ ಪ್ರದರ್ಶಿಸುವುದೆ? ಎಂಬುದೇ ಸ್ವತಂತ್ರ ಪ್ರಶ್ನೆಯಾಗಿದೆ!!


ಇಲ್ಲಿಗೆ ಮುಗಿಯುವುದಿಲ್ಲ. ಇದು ಮುಂದುವರೆಯುತ್ತಲೇ ಇರುತ್ತದೆ...

ಸ್ವಾತಂತ್ರ್ಯ ಜನ್ಮ ಸಿದ್ಧ ಹಕ್ಕು - ಆದರೆ...

ಸ್ವಾತಂತ್ರ್ಯ ಜನ್ಮ ಸಿದ್ಧ ಹಕ್ಕು - ಆದರೆ... ಈ ರೀತಿಯೆ?

ಭಾರತ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ, ಅರವತ್ತು ಮತ್ತೊಂದು ವರ್ಷವಾಗುತ್ತಾ ಬಂದಿದೆ..... ಆದರೆ, ಜನರ ಮನಸ್ಸಿನಲ್ಲಿ ಸ್ವಾತಂತ್ರ್ಯವೆಂದರೆ ಏನೆಲ್ಲಾ ಇರಬಹುದು? ಈ ಕುರಿತು ಕೆಲವಾರು ಅನಿಸಿಕೆಗಳು ಮತ್ತು ಗುಣಲಕ್ಷಣಗಳು ಕಂಡುಬಂದಿದ್ದು ಹೀಗೆ.

ಸ್ವಚ್ಛಂದ ನಡವಳಿಕೆಯೇ ಸ್ವಾತಂತ್ರ್ಯವೆಂದು ಇಂದಿನ ಯುವ-ಮತ್ತು ವಿದ್ಯಾವಂತ ಜನರಲ್ಲಿ ಮನೆ ಮಾಡಿಕೊಂಡಿದೆ ಎನಿಸುತ್ತಿದೆ. ಯಾವುದೇ ರಾಷ್ಟ್ರೀಯ ಹಬ್ಬವಾಗಿರಲಿ, ನಾಡಹಬ್ಬವಾಗಿರಲಿ ಆ ದಿನದಂದು ಎಲ್ಲೆಲ್ಲೂ ರಜೆ-ಮಜಾದ ವಾತಾವರಣ ಕಾಣುತ್ತೇವೆ. ಆದರೆ ಈ ನೆಲದ, ದೇಶದ, ಜನಾಂಗದ ಸಂಸ್ಕೃತಿ ಇವೆಲ್ಲ ಈ ಹಬ್ಬಗಳಂದು ಶೂನ್ಯವಾದವೇ ಎನ್ನುವಷ್ಟು ಜನರಲ್ಲಿ ಸ್ವಚ್ಛಂದ ಪ್ರವೃತ್ತಿ ಹರಡುತ್ತಿದೆ. ರಜೆ ಬಂದಿತೆಂದರೆ ಆ ದಿನವನ್ನು ಒಂದು ಒಳ್ಳೆಯ ಕೆಲಸಕ್ಕಾಗಿ ಉಪಯೋಗಿಸುವುದು ಅಪರೂಪವಾಗುತ್ತಿದೆ.

ರಾಷ್ಟ್ರೀಯ, ನಾಡ ಹಬ್ಬಗಳೇ ಇರಲಿ ಅಥವಾ ಧಾರ್ಮಿಕ ಹಬ್ಬಗಳೇ ಇರಲಿ ದಶಕಗಳ ಹಿಂದೆ ಮದ್ಯ ಮತ್ತು ಮಾಂಸದಂಗಡಿಗಳು ಹಬ್ಬಗಳ ಮುನ್ನಾದಿನ ಮುಚ್ಚಿರುತ್ತಿದ್ದವು. ಆದರೆ ಇದೀಗ ಎಲ್ಲೆಲ್ಲೂ ಸ್ವಾತಂತ್ರ್ಯದ ಛಾಯೆ ಆವರಿಸಿ, ಇದೇ ವಿಶೇಷ ದಿನಗಳಂದು ಈ ಅಂಗಡಿಗಳು ದಿನಪೂರ್ತಿ ತೆರೆದೇ ಇರುತ್ತವೆ. ಬೇರೆಲ್ಲ ದಿನಗಳಿಗಿಂತ ಇಂತಹ ರಜಾ ಅಥವಾ ಹಬ್ಬದ ದಿನಗಳಂದೇ ಚುರುಕಿನ, ಬಿರುಸಿನ, ಅಧಿಕ ವ್ಯಾಪಾರ ನಡೆಯುತ್ತದೆ. ಇದು ನಿಜವಾಗಲೂ ಸ್ವಾತಂತ್ರ್‍ಯದ ಹೆಸರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಂಡುಬರುತ್ತಿರುವ ಪ್ರವೃತ್ತಿಯಾಗಿದೆ. ಕೆಲವು ವರ್ಷಗಳ ಹಿಂದೆ ಇಂತಹ ದಿನಗಳ ಮುನ್ನಾದಿನ ಪತ್ರಿಕಾ ಪ್ರಕಟಣೆಯಲ್ಲಿ ಇಂತಹ ದಿನದಂದು ಮದ್ಯ-ಮಾಂಸ ಮಾರಾಟ ನಿಷೇಧ ಎಂದು ಕಂಡು ಬರುತ್ತಿದ್ದವು. ಜೊತೆಗೆ ಅಂಗಡಿಗಳವರೇ ಈ ದಿನಗಳಲ್ಲಿ ವ್ಯವಹಾರ ಬಂದ್ ಮಾಡುತ್ತಿದ್ದರು. ಆದರೆ, ಇಂದಿನ ಜನರಲ್ಲಿ ಕನಿಷ್ಠ ಇಂತಹ ನಡವಳಿಕೆ ಕಂಡುಬರದಿರುವುದು ಆತಂಕದ ವಿಚಾರವೇ ಸರಿ. ಅಲ್ಲದೆ ಸರ್ಕಾರವೂ ಸಹ ಇವುಗಳ ಬಗ್ಗೆ ಅಥವಾ ದೇಶದ ಸಂಸ್ಕೃತಿ, ರೀತಿ ನೀತಿಗಳನ್ನು ಗಾಳಿಗೆ ತೂರಿ ಜನರಲ್ಲಿ ಸ್ವಚ್ಛಂದ ಪ್ರವೃತ್ತಿಗೆ ದಾರಿ ಮಾಡಿಕೊಡುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಕನಿಷ್ಠ ಇಂತಹ ರಾಷ್ಟ್ರೀಯ ಹಬ್ಬ ಅಥವಾ ಧಾರ್ಮಿಕ ದಿನಾಚರಣೆಗಳಂದು ಮದ್ಯ ಮಾಂಸ ಮಾರಾಟ ನಿಷೇಧವನ್ನು ಜಾರಿಗೊಳಿಸಿದರೆ ಕುಡಿತದ ಸ್ವಾತಂತ್ರ್ಯಕ್ಕೆ ಧಕ್ಕೆಯೇನೂ ಬರುವುದಿಲ್ಲ ಅಲ್ಲವೆ? ಅದರಲ್ಲೂ ಇಂದಿನ ಯುವ ಜನಾಂಗವು ಭಾರತೀಯ ಸಂಸ್ಕೃತಿಯಿಂದ ದೂರವಾಗುತ್ತಿರುವುದು ವಿಷಾದನೀಯ. ಇಂದಿನ ಯುವ ಮತ್ತು ವಿದ್ಯಾವಂತ ಜನರಲ್ಲಿ ಆರ್ಥಿಕ ಸ್ವಾತಂತ್ರ್ಯ ಇಂತಹ ಸ್ವಚ್ಛಂದ ನಡವಳಿಕೆಗೆ ಕಾರಣವಾಗಿದೆ. ಒಂದು ದೇಶದ ಘನತೆ, ಸಂಸ್ಕೃತಿಯನ್ನು ಉಳಿಸಿ, ಪೋಷಿಸಿಕೊಂಡು ಹೋಗಬೇಕಾದ ಜನತೆಯು ಸ್ವಾತಂತ್ರ್ಯದಿನದಂದೇ ಕುಡಿತದ ಚಟಗಳನ್ನು ಸ್ವಚ್ಛಂದವಾಗಿ ಆಚರಿಸುವುದರಿಂದ ದೇಶದ ಘನತೆಗೆ, ಅಸ್ತಿತ್ವಕ್ಕೆ ಕುಂದುಂಟಾಗುತ್ತದೆ. ಜೊತೆಗೆ ಜನರಲ್ಲಿ ವಿಶ್ವಾಸ, ಸದ್ಗುಣಗಳಿಗಿಂತ ಆಘಾತಕಾರೀ ಅಂಶಗಳಿಗೆ ಕಾರಣೀಭೂತವಾಗುತ್ತದೆ. ಇದು ಒಂದು ವಿಧದಲ್ಲಿ ದೇಶಕ್ಕೆ ಹಾಗೂ ಜನತೆಗೆ ಅಗೌರವ ತರುವ ವಿಚಾರವೇ ಆಗಿದೆ. ಈ ರೀತಿಯ ವ್ಯವಹಾರಗಳು ದೇಶದ್ರೋಹಕ್ಕೆ ಸಮಾನವೆಂದೇ ತಿಳಿಯಬಹುದು.

(ಮುಂದುವರೆಯುವುದು)
ಚಂದ್ರಶೇಖರ ಬಿ.ಎಚ್.
ಈ ಲೇಖನವನ್ನು ೨೦೦೭ ರಲ್ಲಿಯೇ ಬರೆದಿದ್ದೆ. ಒಂದಿಷ್ಟು ಬದಲಾವಣೆಯೊಂದಿಗೆ ಇಲ್ಲಿ ಬರೆದಿದ್ದೇನೆ.