ಮಂಗಳವಾರ, ಸೆಪ್ಟೆಂಬರ್ 29, 2009

ದಸರಾ ಗೊಂಬೆಗಳು ಇಲ್ಲಿವೆ


ದಸರಾ ಗೊಂಬೆಗಳು ಇಲ್ಲಿವೆ


ಶಾಲಾದಿನಗಳಲ್ಲಿ ಗಣೇಶ ಹಬ್ಬದ ದಿನದಂದು ಚಂದ್ರಶೇಕರ ಚಂದ್ರಶೇಕರ ಚಂದ್ರಶೇಕರ ಬಿ ಗಣೇಶನ ದರ್ಶನ ಮಾಡುವ ಎಂದಾದರೂ ಮನೆ ಮನೆಗಳಿಗೆ ಗಣೇಶ ಕೂರ್‍ಸಿದ್ದೀರಾ? ಎಂದು ಪ್ರಶ್ನಿಸುತ್ತಾ, ಆ ಮನೆಗಳಲ್ಲಿ ಗಣೇಶನಿಗೆ ಮಂತ್ರಾಕ್ಷತೆ ದೂರದಿಂದಲೇ ಅರ್ಪಿಸಿ, ಕೈಮುಗಿದು ಬರುವಾಗ ಕಡಲೆಹಿಟ್ಟು, ಬಾಳೆಹಣ್ಣು ಇತ್ಯಾದಿ ಎಲ್ಲ ಪ್ರಸಾದವಾಗಿ ಸ್ವೀಕರಿಸಿ ಮನೆಗೆ ಬರುತ್ತಿದ್ದ ನೆನಪು.

ಅದರಂತೆಯೇ, ನವರಾತ್ರಿಯಲ್ಲಿ ಗೊಂಬೆ ಬಾಗಿನವಾಗಿ ಮಕ್ಕಳಿಗೆಲ್ಲಾ ಪೆಪ್ಪರಮೆಂಟು, ಕಡಲೆ ಉಸಲಿ, ಮೊಸಂಬಿ, ಇತ್ಯಾದಿ ಪಡೆದದ್ದು ಮರೆಯದ ನೆನಪಾಗಿವೆ. ಮತ್ತೊಮ್ಮೆ ಆ ಅವಕಾಶ ಹೀಗೆ ದೊರಕಿತು.



ನಮ್ಮ ಮನೆಯ ಹತ್ತಿರದವರೊಬ್ಬರ ಮನೆಯಲ್ಲಿ ನವರಾತ್ರಿ ಹಬ್ಬದ ಆರಂಭದಿಂದ `ದಸರಾ' ಗೊಂಬೆಗಳನ್ನು ಇಟ್ಟಿದ್ದರು. ವಿಜಯದಶಮಿಯ ದಿನದಂದು ಸುಮಾರು ಜನರು ಬಂದು ನೋಡಿ ಹೋಗುತ್ತಿದ್ದರು. ನಾನೂ ಮನೆಯಲ್ಲಿ ನನ್ನ ತಂಗಿ ಮಕ್ಕಳನ್ನು ಕರೆದುಕೊಂಡು ಹೋಗಿ ನೋಡಲು ೨-೩ ದಿನದ ಹಿಂದೆಯೇ ತಿಳಿಸಿದ್ದೆನಾದರೂ ಹೋಗಿರಲಿಲ್ಲ. ನಿನ್ನೆ ದಿನ ಹೋಗಿದ್ದರು. ಎಂದಿನಂತೆ ನಾನು ವಾಕಿಂಗ್ ಹೋಗಿದ್ದವನು ಮನೆಗೆ ಬಂದೊಡನೆಯೇ `ನೀನೂ, ಹೋಗು, ಜನ ಎಲ್ಲ ಬಂದು ಫೋಟೋ ತೊಗೊತಿದ್ದಾರೆ. ಈ ಟೀವಿ ಯವರು ಬಂದಿದ್ರು', ಎಂದು ಹೇಳಿದರು. ಸರಿ, ನಾನೂ ಹೊರಟೆ. ಕ್ಯಾಮೆರಾ ಇತ್ತು. ಸೆಲ್‌ ಇರಲಿಲ್ಲ. ಸುಮಾರು ೯.೦೦ ಘಂಟೆಯ ವೇಳೆಗೆ ಅಂಗಡಿಗೆ ಹೋಗಿ ಸೆಲ್‌ ತಂದು ಗೊಂಬೆಗಳನ್ನು ನೋಡಲು ಹೊರಟೆ. ಒಂದು ಸುತ್ತು ಗೊಂಬೆಗಳನ್ನೆಲ್ಲ ನೋಡಿದ ಮೇಲೆ `ಫೋಟೋ" ತೆಗೆದುಕೊಳ್ಳಲು ಅನುಮತಿ ಕೋರಿದೆ. `ಧಾರಾಳವಾಗಿ' ಎಂಬ ಉತ್ತರ ಬಂದಿತು. ಆ ಖುಷಿಯಲ್ಲಿ ಒಂದಷ್ಟು ಫೋಟೋಗಳನ್ನು ತೆಗೆದುಕೊಂಡೆ. ಇನ್ನೂ ಸ್ವಲ್ಪ ವಿವರವಾಗಿ ತೆಗೆದುಕೊಳ್ಳುವ ಇರಾದೆಯಿತ್ತು. ಆದರೆ, ಅದಾಗಲೇ ೧೦.೦೦ ರ ಸಮಯವಾಗುತ್ತಿರುವುದನ್ನು ಗಮನಿಸಿ, ಮನೆಯೊಡೆಯ ಶ್ರೀ ಶಂಕರ್‍ ಮತ್ತು ಅವರ ಕುಟುಂಬದವರ ಅನುಮತಿಯನ್ನು ಪಡೆದು ಅವರದೊಂದು ಭಾವಚಿತ್ರ ತೆಗೆದುಕೊಂಡೆ (ಈ ಪ್ರದರ್ಶನವು ಅಕ್ಟೋಬರ್‌ ೩ ರ ವರೆವಿಗೂ ಇರುತ್ತದೆಂದು ತಿಳಿಸಿದರು). ಬಂಧು-ಮಿತ್ರರು, ಮಕ್ಕಳು, ಸ್ನೇಹಿತರು ಹೀಗೆ ಎಲ್ಲರೂ ಬಂದು ನೋಡಲಿ, ಅದೇ ನಮಗೆ ಸಂತೋಷ ಎಂದು ತಿಳಿಸಿದರು.

ಅಲ್ಲಿ ಮೊದಲಿಗೆ ಹಳ್ಳಿಯ ಚಿತ್ರಣ, ಹೊಲಗದ್ದೆಗಳಲ್ಲಿ ದುಡಿಯುತ್ತಿರವವರು. ಗಣೇಶನ ಮೂರ್ತಿಗಳು, ರಾಮ ಪಟ್ಟಾಭಿಷೇಕ, ಕೃಷ್ಣ ಜನನ, ಆಫ್ರಿಕಾ, ಮೈಸೂರು ಅರಮನೆ ಮತ್ತು ಮಹಾರಾಜರು, ಕೃಷ್ಣನ ಲೀಲೆಗಳು, ಮಿನಿ ಜಂಬೂ ಸವಾರಿ, ಚಪ್ಪಾಳೆ ಹಾಕಿದರೆ ಕರಾಟೆಯಾಡುವವು, ಹಾಡುವ ಮಂಗ, ಇವುಗಳಲ್ಲದೆ, ಶಾಲೆಯಲ್ಲಿ ರಾಷ್ಟ್ರಧ್ವಜಾರೋಹಣ, ಬುದ್ಧನ ನಿರ್ವಾಣ, ರಾಮಾಯಣದ ಚಿತ್ರಗಳು, ಸಾಧು-ಸಂತರು, ಗಾರುಡಿ ಗೊಂಬೆಗಳು, ದಶಾವತಾರ, ಅಷ್ಟಲಕ್ಷ್ಮಿಯರು, ದುರ್ಗಾದೇವಿ, ಮಾರುತಿ, ಶ್ರೀನಿವಾಸ ಕಲ್ಯಾಣ, ಗಿರಿಜಾ ಕಲ್ಯಾಣ, ಗರುಡೋತ್ಸವ, ಸ್ವಾಮಿ ವಿವೇಕಾನಂದ, ಥೈಲ್ಯಾಂಡ್, ಜಪಾನೀ, ಇತ್ಯಾದೀ ಗೊಂಬೆಗಳು, ಪರಿಸರ ರಕ್ಷಿಸಿ, ಕಾಡು ಪ್ರಾಣಿಗಳು, ಹರಿಣಗಳು, ಸೈನಿಕರು, ಕಾಡಿನ ಚಿತ್ರಣ, ನರ್ತಕಿಯರು, ಸಂಗೀತಗಾರರು.., ಹೀಗೆ ಇನ್ನೂ ಅನೇಕವನ್ನು ಪ್ರದರ್ಶಿಸಿದ್ದಾರೆ.

ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕೆನಿಸುತ್ತದೆ.
ChandrashekaraBH

ಶನಿವಾರ, ಸೆಪ್ಟೆಂಬರ್ 26, 2009

ತಾಯಿ ಶಾರದೆಗೆ ನಮನ



ಎಲ್ಲರಿಗೂ ನವರಾತ್ರಿ ಹಬ್ಬದ ಶುಭಾಶಯಗಳು.

ಆ ಶಾರದೆಯ ಕೃಪೆಯಿಂದ ಬಹಳ ವರ್ಷಗಳ ಹಿಂದೆ ಬರೆದಿದ್ದ ಈ ಕವಿತೆಯನ್ನು, ನವರಾತ್ರಿ ಹಬ್ಬದ ಶುಭದಿನದಲ್ಲಿ - ಸರಸ್ವತಿ ಮತ್ತು ದುರ್ಗಾ ಪೂಜೆಯ ದಿನವಾದ ಇಂದು ಅರ್ಪಿಸುವ ಮನಸ್ಸಾಗಿದೆ.

ಶಾರದೆ, ನೀ ದಾರಿ ತೋರಮ್ಮ...
ಅಮ್ಮಾ ಶಾರದೆ, ನೀ ದಾರಿ ತೋರದೆ,
ನಾ ಹೇಗೆ ನಡೆಯಲಮ್ಮ
ನಿನ್ನ ದಯೆಯು ಇರದೆ
ನಾ ಹೇಗೆ ಬಾಳಲಮ್ಮ?
ದಾರಿಕಾಣದೆ ಕತ್ತಲಲಿ ಬಳಲುತಿರುವ
ನಿನ್ನ ಕಂದನಿಗೆ ಬೆಳಕನು ನೀಡಮ್ಮ
ಕತ್ತಲೆಯ ತೆರೆಯ ಸರಿಸಮ್ಮ
ಬೆಳಕಿನ ಕಾಂತಿ ಹರಿಸಮ್ಮ
ನಿನ್ನ ಕಂದನ ಮೊರೆಯ ಕೇಳಮ್ಮ
ದಯಮಾಡಮ್ಮ, ಕೃಪೆದೋರಮ್ಮ
ಜ್ಞಾನಮಾರ್ಗಕೆ ದಾರಿ ತೋರು ಬಾರಮ್ಮ
ಹೇ ಭಾರತಿಯೇ, ಶಾರದಾ ಮಾತೆಯೆ

ಚಂದ್ರಶೇಖರ ಬಿ. ಎಚ್. ೨೩೬೯೧

ಗುರುವಾರ, ಸೆಪ್ಟೆಂಬರ್ 24, 2009

ಮಳೆ ಬರುತ್ತಿದೆಯೇ, ಓ ಪುಟ್ಟ ಕುಸುಮವೇ? ಅದಕ್ಕಾಗಿ ಖುಷಿಪಡು!

ಮಳೆ ಬರುತ್ತಿದೆಯೇ, ಓ ಪುಟ್ಟ ಕುಸುಮವೇ? ಅದಕ್ಕಾಗಿ ಖುಷಿಪಡು!
ಬೆಳಗಿನಿಂದಲೇ ಮೋಡ ಕವಿದ ವಾತಾವರಣ. ಕೆಲವು ವಾರಗಳಿಂದ ಮಳೆರಾಯನ ಆಗಮನ. ಅದೂ ರಾತ್ರಿಯಿಂದ ಬೆಳಗಿನವರೆಗೆ ಬಿಟ್ಟೂ ಬಿಡದೆ ಬರುತಿದೆ. ಮೊನ್ನೆಯಂತೂ ಹಗಲಿನಲ್ಲಿಯೇ ಸುರಿದ ಮಳೆ. ಜೊತೆಗೆ ಭಾರೀ ಸಿಡಿಲಿನ ಆರ್ಭಟ.

ಯಾಕಾದ್ರೂ ಮಳೆ ಬರುತ್ತಿದೆಯೋ ಇಲ್ಲಿ? ಮಳೆಕಾಣದ ಬಯಲು ಸೀಮೆ, ಬರಪ್ರದೇಶ ಇಲ್ಲೆಲ್ಲ ಬಂದರೆ ರೈತರಿಗೆ ಅನುಕೂಲವಲ್ಲವೇ? ಎಂದು ಹಲವರಿಗನಿಸಿಂದತೆಯೇ ನನಗೂ ಅನಿಸಿದ್ದಿದೆ. ಕಾರಣಗಳು ಹಲವಾರು. ಹಾಗೆಂದು ಪ್ರಕೃತಿಗೆ ನಾವು ಹೇಳಿದಂತೆ ಅದು ಕೇಳುವುದೇ ಅಥವಾ ನಮಗೆ ತೋಚಿದಂತೆಲ್ಲಾ ಹೇಳುತ್ತಾ ಇದ್ದರೆ ಇವೆಲ್ಲ ನಡೆಯುವುದೇ? ಒಂದು ವೇಳೆ ಹೀಗೇ ಆಗಬೇಕೆಂದು ಪ್ರಕೃತಿಯಲ್ಲಿಯೇ ಲೆಕ್ಕಾಚಾರವಿರುವಾಗ, ನಾವೇನು ಮಾಡಲು ಸಾಧ್ಯ? ತಾನೊಂದು ಬಗೆದರೆ ಮಾನವಾ... ಬೇರೊಂದು ಬಗೆವುದು ದೈವ ಎಂದು ಒಂದು ಚಲನಚಿತ್ರಗೀತೆಯ ನೆನಪಾದರೆ... ನೋ ಕಾಮೆಂಟ್ಸ್‌....
ಈವತ್ತು ಬೆಳಗ್ಗೆ ಕಚೇರಿಗೆ ಬರುವಾಗ ನನಗೆ ಆಗಿದ್ದೂ ಇದೇನೆ. ಇದೇನು ಮಳೆ? ರಾತ್ರಿಯೆಲ್ಲಾ ಸುರಿದಿದೆ. ಮತ್ತೆ ಮೋಡ ಮುಸುಕಿದೆ! ಬಿಸಿಲು ಕಾಣದೆ..!!?? ಎಂದೆಲ್ಲಾ ಅನಿಸಿತು.

ಪ್ರಕೃತಿಯಲ್ಲಿ ಇವೆಲ್ಲ ಸಹಜ ಮತ್ತು ಅದಕ್ಕೆ ತನ್ನದೇ ಆದ ಸಕಾರಣವೂ ಇರುತ್ತದೆ ಎಂಬ ಆಲೋಚನೆ ನನಗೆ ಯಾಕೆ ಬರಲಿಲ್ಲ? ಹೀಗೆಯೇ ಜನರ ಜೀವನದಲ್ಲಿ ಸುಖ-ದು:ಖ ಇವುಗಳ ಸರಪಳಿಯ ಕೊಂಡಿ ಒಂದನೊಂದು ಹಿಡಿದಿರುತ್ತವೆ ಎಂದೂ ಅನಿಸಿತು. ಉದಾ: ಇನ್ನೇನು ಮಗನ ವಿದ್ಯಾಭ್ಯಾಸ ಮುಗಿಯಿತು, ನಾಲ್ಕು ಕಾಸು ಸಂಪಾದಿಸುತ್ತಾನೆ ಎನ್ನುವಾಗ ಅವನಿಗೆ ಕೆಲಸವೇ ಸಿಗದೇ ಇರಬಹುದು ಅಥವಾ ಆತನಿಗೆ ಕೆಲಸದ ಆಸೆಯೇ ಇಲ್ಲದಿರಬಹುದು ಅಥವಾ ಈ ಎಲ್ಲ ಆಲೋಚನೆಗಳಿಗಿಂತ ವಿರುದ್ಧವಾಗಿರಬಹುದು! ಕೇವಲ ಸುಖವೇ ಇದ್ದರೆ ದು:ಖದ ಮುಖ ಕಾಣುವುದಾದರೂ ಹೇಗೆ? ಅಥವಾ ದು:ಖವೇ ಇದ್ದರೆ ಸುಖದ, ಸಂತಸದ ಜೀವನ ಹೇಗೆ? ಹೀಗೆಲ್ಲಾ ಯೋಚಿಸುತ್ತಿರುವಾಗ `ಒಬ್ಬ ಅನಾಮಿಕ' ನ ಆಂಗ್ಲ ಕವಿತೆಯು ಕಣ್ಣಿಗೆ ಬಿದ್ದಿತು, ಮನಸಿಗೆ ಹಿಡಿಸಿತು.

Is it raining, little flower?
Be glad of rain.
Too much sun would wither thee,
'Twill shine again.
The sky is very black, 'tis true,
But just behind it shines
The blue.

Art thou weary, tender heart?
Be glad of pain;
In sorrow the sweetest things will grow
As flowers in the rain.
God watches and thou wilt have sun
When clouds their perfect work
Have done.
Anonymous.
ಇಷ್ಟೆಲ್ಲಾ ಬರೆಯುವ ಕ್ಷಣಗಳಲ್ಲಿ, ನಮ್ಮ ಕಚೇರಿಯ ಹತ್ತಿರ ಮಳೆ ಹನಿ ಶುರುವಾಗಿದೆ. ಜೊತೆಗೆ ಬಿಸಿಲೂ ಕಾಣುತ್ತಿದೆ. ಮುಂದೆ ಬಿಸಿಲು-ಮಳೆಯೊಂದಿಗೆ ಮಳೆಬಿಲ್ಲೂ ಕಾಣುವುದು ಸಹಜ. ಆ ನಂತರ ಹಕ್ಕಿಗಳ ಚಿಲಿಪಿಲಿಯೂ ಕಂಡುಬರುತ್ತದೆ. ಇವೆಲ್ಲಾ ನೋಡಿದ್ದರೂ ಮತ್ತೆ ಮತ್ತೆ ಮನಸಿಗೆ ಮುದ ನೀಡುವ ಚಿತ್ರಣಗಳನ್ನು ಮರೆಯಲು ಸಾಧ್ಯವೇ?

ಹೀಗಿರುವಾಗ, "Showers alternate with sunshine, sorrows with pleasure, pain and weariness with comfort and rest; but accept the one as necessary to the other, and you will enjoy both" ಎಂದು ಅದೇ ಅನಾಮಿಕ ಕವಿಯ ಮಾತುಗಳು ನೆನಪಾದವು.
ಇದನ್ನೂ ಓದಿ/ನೋಡಿ: ಮಳೆ ನಿಂತು ಹೋದಮೇಲೆ ನಮ್ಮ ರಸ್ತೆಗಳಲ್ಲಿ ಇವೆಲ್ಲ ಕಂಡು ಬಂದಿವೆ. ಬ್ರಹ್ಮಕಮಲ, ಶಂಖದಹುಳು, ಬಸವನಹುಳು, ಮಿಡತೆ, ಕಪ್ಪೆಗಳು, ಇತ್ಯಾದಿ... (ಕೆಲವೊಂದು ಫೋಟೋಗಳನ್ನು ಇಲ್ಲಿ ಹಾಕಿದ್ದೇನೆ).

ಲೇಖನ: ಚಂದ್ರಶೇಖರ ಬಿ.ಎಚ್.
೨೪.೦೯.೨೦೦೯

ಶನಿವಾರ, ಸೆಪ್ಟೆಂಬರ್ 19, 2009

ದಾರಿ ಕಾಣದಾಗಿದೆ...

ಮೊನ್ನೆ ದಿನ ನಮ್ಮ ಸಂಸ್ಥೆಯ ಲೈಬ್ರರಿಯಿಂದ ನನಗೊಂದು ಫೋನ್‌ ಕಾಲ್‌.

ಆ ಕಡೆಯಿಂದ: ಚಂದ್ರು, ಇಲ್‌ ಬನ್ರೀ... ಕ್ಯಾಮೆರಾ ತನ್ರೀ...
ಈ ಕಡೆಯಿಂದ: ಯಾಕೆ? (ನನ್ನ ಪ್ರಶ್ನೆ)
ಆ ಕಡೆಯಿಂದ: ಒಂಥರಾ ಪಕ್ಷಿ ಬಂದಿದೆ... ಕಿಟಕಿ ಒಳ್ಗೆ ಐತೆ, ಈ ಕಡೆ ಗ್ಲಾಸ್‌ ತೆಗೆದರೆ ಆಫೀಸ್‌ ಒಳ್ಗೆ ಬರುತ್ತೆ, ಫೋಟೋ ಹಿಡಕ ಬನ್ರೀ,
ಈ ಕಡೆಯಿಂದ: ಸರಿ, ಬರ್‍ತೀನಿ...
©Photo: Chandrashekara B.H., Sep2009
ಅಲ್ಲಿಗೆ ಹೋದರೆ, ಆ ಹಕ್ಕಿಯ ಪರದಾಟ ಹೀಗಿತ್ತು. ಕಿಟಕಿಗೆ ಹಾಕಿದ್ದ ತಂತಿ ಜಾಲರಿಯಿಂದ ಒಳಗೆ ಹೇಗೋ ನುಸುಳಿಬಿಟ್ಟಿದೆ. ಆದರೆ, ಹೊರಹೋಗಲು ಆಗುತ್ತಿಲ್ಲ. ಅಲ್ಲಿಯೇ ಪರಪರ ಪರದಾಡುತ್ತಿದೆ. ಒಂದೆರಡು ನಿಮಿಷ ಕೂರುತ್ತೆ, ಮತ್ತೆ ತಂತಿಜಾಲರಿಯಲ್ಲಿ ತನ್ನ ಕೊಕ್ಕನ್ನು ತೂರಿಸಿ ಹೊರಹೋಗಲು ಪ್ರಯತ್ನಸುತ್ತೆ, ಸೋಲುತ್ತೆ..
ನನಗೋ ಅಷ್ಟು ಹತ್ತಿರದಿಂದ ಆ ಹಕ್ಕಿ ಫೋಟೋ ತೆಗೆಯಲು ಆಗುತ್ತಿಲ್ಲ. ಕಾರಣ ಒಂದೆಡೆ ಅದು ನಿಲ್ಲುತ್ತಿಲ್ಲ. ಎರಡನೇದು, ಕಿಟಕಿಯ ಗಾಜು ಮಸುಕಾಗಿದೆ. ಕೊನೆಗೂ ಹೇಗೋ ಕ್ಯಾಮೆರಾದಲ್ಲಿ ಸೆರೆ ಹಿಡಿದೆ. ಆಗ ಆ ಹಕ್ಕಿಯೂ ಹೀಗೆ ಬೇಡಿಕೊಳ್ಳುತ್ತಿರಬಹುದೆ? ಎನಿಸಿತು.

ದಾರಿ ಕಾಣದಾಗಿದೆ ರಾಘವೇಂದ್ರನೆ,
ದಯವ ತೋರಿ ನಡೆಸು ಬಾ (ಹೊರಕ್ಕೆ ಕರೆದುಕೋ)ಯೋಗಿವರ್ಯನೇ....


ಅಲ್ಲಿರುವುದು ದೊಡ್ಡ ಕಿಟಕಿ, ಹಾಗೂ ಹೀಗೂ ಅದು ಅಲ್ಲಿಂದ ಹೊರಹೋಗಲು ಕಾತರಿಸುತ್ತಿತ್ತು. ನಾನು, ಆತನಿಗೆ ಈ ಗಾಜನ್ನು ಸ್ವಲ್ಪವೇ ತೆಗೆದಿರು, ತನಗೆ ತಾನೇ ಅದು ಹೇಗೋ ಒಳಗೆ ಬಂದ ದಾರಿ ಹುಡುಕಿ ಹೊರಹೋಗುತ್ತದೆ, ಎಂದು ತಿಳಿಸಿ ನನ್ನ ರೂಮಿಗೆ ಬಂದೆನು.


ಮಧ್ಯಾಹ್ನದ ವೇಳೆಗೆ ಅದು ಹೇಗೋ ತಂತಿ ಜಾಲರಿಯಲ್ಲಿಯೇ ತಾನು ಸಾಗುವಷ್ಟು ಜಾಗ ಹುಡುಕಿ ಹೊರಹೋಗಿತ್ತು.
---

ಬುಧವಾರ, ಸೆಪ್ಟೆಂಬರ್ 16, 2009

ಜಪಾನೀಯರ ಗೊಂಬೆ ಹಬ್ಬ - ಭಾರತೀಯರ ನವರಾತ್ರಿ

ಜಪಾನೀಯರ ಗೊಂಬೆ ಹಬ್ಬ - ಹಿನಾ ಮತ್ಸೂರಿ

ಜಪಾನೀಯರು `ಹಿನಾ ಮತ್ಸೂರಿ' (Hina Matsuri) ಎಂಬ ಹಬ್ಬವನ್ನು ಆಚರಿಸುತ್ತಾರೆ. ಹಿನಾ ಎಂದರೆ, ಗೊಂಬೆ ಮತ್ತು ಮತ್ಸೂರಿ ಎಂದರೆ, ಹಬ್ಬ ಎಂದು ಜಪಾನೀ ಭಾಷೆಯಲ್ಲಿ ಅರ್ಥವಿದೆ. ಈ ಹಬ್ಬವನ್ನು `ಗೊಂಬೆಗಳ ಹಬ್ಬ' ಅಥವಾ `ಹೆಣ್ಣುಮಕ್ಕಳ ಹಬ್ಬ' ಎಂತಲೂ ಕರೆಯುತ್ತಾರೆ. ಪ್ರತಿ ವರ್ಷದ ಮಾರ್ಚ್‍ ತಿಂಗಳ ಮೂರನೇ ದಿನ, ಈ ಹಬ್ಬವನ್ನು ಜಪಾನ್‍ ದೇಶದ ಎಲ್ಲೆಡೆ ಆಚರಿಸುತ್ತಾರೆ.

ಹಬ್ಬವು ಫೆಬ್ರವರಿ ತಿಂಗಳ ಮಧ್ಯದಿಂದ ಆರಂಭವಾಗಿ, ಮಾರ್ಚ್‍ ಮೂರನೆಯ ದಿನಕ್ಕೆ ಕೊನೆಗೊಳ್ಳುತ್ತದೆ. ಈ ದಿನ ಜಪಾನೀಯರು ತಮ್ಮ ಮನೆಗಳಲ್ಲಿ ಐದು, ಏಳು ಸಾಲಿನಲ್ಲಿ ಮಂಟಪದಲ್ಲಿ/ಮಂಟಪದ ಆಕಾರದಲ್ಲಿ ಮಣೆಗಳನ್ನು ಮೆಟ್ಟಿಲಿನಂತೆ ಇಟ್ಟು, ಅದರ ಮೇಲೆ ಕೆಂಪು ವಸ್ತ್ರವನ್ನು ಹಾಸುತ್ತಾರೆ. ಅದರ ಮೇಲೆ ರಾಜ/ಯುವರಾಜ (ಓದೈರಿ-ಸಮ) ಮತ್ತು ರಾಣಿ/ಯುವರಾಣಿ (ಓಹಿನ-ಸಮ) ಗೊಂಬೆಗಳನ್ನು ಮೊದಲಿನ ಎತ್ತರದ ಸ್ಥಳದಲ್ಲಿ ಇಡುತ್ತಾರೆ. ನಂತರದ ಸ್ಠಾನದಲ್ಲಿ, ದಾಸಿಯರು, ಪರಿಚಾರಕರು ಇತ್ಯಾದಿ ಗೊಂಬೆಗಳು. ಮೂರು ಮತ್ತು ನಾಲ್ಕನೆಯ ಸಾಲಿನಲ್ಲಿ ಕವಿಗಳು, ಮಂತ್ರಿಗಳು ಹೀಗೆ ಅರಮನೆಯಲ್ಲಿನ ಮುತ್ಸದ್ದಿಗಳನ್ನು ಬಿಂಬಿಸುವ ಗೊಂಬೆಗಳು ಇಡಲ್ಪಡುತ್ತವೆ. ಮಧ್ಯೆ, ಮಧ್ಯೆ ಸಿಹಿ ತಿಂಡಿಗಳನ್ನು ಇಡುತ್ತಾರೆ. ಐದನೆಯ ಸಾಲಿನಲ್ಲಿ, ಸೈನಿಕರು, ಪ್ರಜಾ ಸಮೂಹ, ಇವುಗಳನ್ನು ಪ್ರತಿನಿಧಿಸುವಂತಹ ಗೊಂಬೆಗಳನ್ನು ಇಡುತ್ತಾರೆ. ಮಂಟಪದ ಬಲ ಮತ್ತು ಎಡ ಬದಿಯಲ್ಲಿ ಚೆರ್ರಿ, ಕಿತ್ತಳೆ ಮರಗಳನ್ನು ಅಲಂಕರಿಸುತ್ತಾರೆ.

ಈ ಹಬ್ಬದ ದಿನ ಅಕ್ಕಿಯಿಂದ ಮಾಡಿದ ಕೇಕ್‍, ಪೀಚ್ (Peach) ಎಂಬ ಹಣ್ಣಿನ ಹೂಗಳು, ವಿಶೇಷ ಬಣ್ಣಗಳಿಂದ, ವಜ್ರಕೋನಾಕೃತಿಯಲ್ಲಿ ತಯಾರಿಸಿದ ಕೇಕ್‍ಗಳು, ವ್ಹೈಟ್ ಸೇಕ್ (ಹಿತೆ ಶಕೆ) ಎಂಬ ವಿಶಿಷ್ಟ ಪೇಯ ಹಾಗೂ ಅನೇಕ ವಿಧದ ಸಿಹಿ ತಿಂಡಿಗಳನ್ನು ಗೊಂಬೆಗಳಿಗೆ ನಿವೇದಿಸುತ್ತಾರೆ.

ಈ ಹಬ್ಬವು ಜಪಾನಿನಲ್ಲಿ ಯಾವಾಗ, ಹೇಗೆ ಆಚರಣೆಗೆ ಬಂದಿತು ಎಂದು ಅಧಿಕೃತವಾಗಿ ಹೇಳುವುದು ಸ್ವಲ್ಪ ಕಷ್ಟಕರ. ಏಕೆಂದರೆ, ಮೊದಲು ಚೀನೀಯರು ಆಚರಿಸುತ್ತಿದ್ದ ಈ ಹಬ್ಬವು ಇಡೋ ಶಕೆ (Edo Period, 1603-1867) ಯಲ್ಲಿ ಆಚರಣೆಗೆ ಬಂದಿತೆಂದು ತಿಳಿದುಬರುತ್ತದೆ.

ಹಬ್ಬದ ವಿಶೇಷತೆಯೆಂದರೆ, ಚೀನೀಯರಲ್ಲಿದ್ದ ನಂಬಿಕೆಯಂತೆ ಇಲ್ಲಿಯೂ ಆಚರಿಸುತ್ತಾರೆ. ಅದೇನೆಂದರೆ, ಕಾಗದದ ಗೊಂಬೆಗಳನ್ನು ಮಾಡಿ ಅವುಗಳನ್ನು ಈ ಮಾರ್ಚ್‍ ಮೂರನೆಯ ದಿನ ನದಿಗಳಿಗೆ ಬಿಡದಿದ್ದರೆ, ತಮ್ಮ ಹೆಣ್ಣು ಮಕ್ಕಳಿಗೆ ಅನಿಷ್ಟ, ಕೆಡಕು, ಕಾಯಿಲೆ ಉಂಟಾಗುತ್ತದೆ ಎಂಬ ನಂಬಿಕೆಯಿದೆ. ನೀರಿಗೆ ಬಿಟ್ಟಾಗ, ಗೊಂಬೆಯ ಮೂಲಕ ಈ ಅನಿಷ್ಟಗಳು, ಕಾಯಿಲೆ ಇತ್ಯಾದಿ ದೂರವಾಗುತ್ತವೆ ಎಂದೂ ತಿಳಿಯುತ್ತಾರೆ. ಅಲ್ಲದೆ, ಈ ಹಬ್ಬದ ಮತ್ತೊಂದು ವಿಶೇಶವೆಂದರೆ, ಹಿರಿಯರು, ತಾಯಿ-ತಂದೆಯರು ತಮ ಹೆಣ್ಣುಮಕ್ಕಳ ಆರೋಗ್ಯ, ಆಯಸ್ಸು, ಇವುಗಳ ವೃದ್ಧಿಗಾಗಿ ಆಸಕ್ತಿಯಿಂದ `ಹಿನಾ ಮತ್ಸೂರಿ' ಹಬ್ಬವನ್ನು ಆಚರಿಸುತ್ತಾರೆ.

`ಹಿನಾ ಮತ್ಸೂರಿ' ಹಬ್ಬವು ಮಾರ್ಚ್‍ ತಿಂಗಳಲ್ಲಿ ಬರುವ ಕಾರಣದಿಂದ, ಈ ಹಬ್ಬವನ್ನು ತೃತೀಯ ತಿಂಗಳ ಹಬ್ಬ ಎಂದೂ ಕರೆಯುತ್ತಾರೆ. ಸಂಖ್ಯಾಶಾಸ್ತ್ರದ ಪ್ರಕಾರ `ಸಂಖ್ಯೆ ಮೂರು' ವಿಶೇಷ ಮಹತ್ವದಿಂದ ಕೂಡಿದೆಯಂತೆ. ಹೀಗಾಗಿ `ಸಂಖ್ಯೆ ಮೂರು' - ಸ್ವರ್ಗ, ಭೂಮಿ ಮತ್ತು ಮಾನವ ಸಂಬಂಧಗಳ ಕಲ್ಪಿಸುತ್ತದೆ ಎಂದು ಹೇಳುತ್ತಾರೆ. ಹೀಗಾಗಿ, ಜಪಾನೀಯರಲ್ಲಿ ಈ ಹಬ್ಬವು ವಿಶೇಷ ಪ್ರಾಮುಖ್ಯತೆಯನ್ನು ಪಡೆದಿದೆ.

ಜಪಾನೀಯರ ಈ ಹಬ್ಬದ ಆಚರಣೆ, ನಂಬಿಕೆ ಇವುಗಳನ್ನು ನೋಡಿದರೆ ನಮ್ಮ ಭಾರತದೇಶದಲ್ಲಿ ಆಚರಿಸುವ ನವರಾತ್ರಿಯ ಹಬ್ಬವನ್ನು ನೆನಪಿಸುತ್ತದೆ. ಹಿಂದೂಗಳ ಕೆಲವು ಸಂಪ್ರದಾಯಗಳಲ್ಲಿರುವಂತೆ, ಜಪಾನೀಯರೂ ಸಹ ತಮ್ಮ ಹೆಣ್ಣು ಮಗಳನ್ನು ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುವಾಗ ಚಂದನದ ಗೊಂಬೆ ದಂಪತಿಗಳನ್ನು ನೀಡಿ ಹರಸುವ ವಾಡಿಕೆಯೂ ಕಂಡುಬರುತ್ತದೆ.

ಎಲ್ಲರಿಗೂ `ನವರಾತ್ರಿ ಹಬ್ಬದ ಶುಭಾಶಯಗಳು', ಮುಂಚಿತವಾಗಿ.

ಲೇಖನ (ಸಂಗ್ರಹ): ಚಂದ್ರಶೇಖರ ಬಿ.ಎಚ್.೧೬.೦೯.೨೦೦೯

ಶುಕ್ರವಾರ, ಸೆಪ್ಟೆಂಬರ್ 11, 2009

ಬದುಕಿಗೆ ಬೇಕಾಗುವ ಒಂದಷ್ಟು ಟಿಪ್ಸ್...

ಬದುಕಿಗೆ ಬೇಕಾಗುವ ಒಂದಷ್ಟು ಒಳ್ಳೆಯ ಆಲೋಚನೆಗಳು.

ಇವುಗಳನ್ನು ಬಾಬ್ ಹ್ಯಾನ್ಸೆನ್‌ ಎಂಬುವವರು ಸಂಗ್ರಹಿಸಿದ್ದಾರೆ. ಈತ ಕೊರಿಯನ್ ವಾರ್‍ ವೆಟೆರನ್ಸ್ ಅಡ್ವೈಸರಿ ಬೋರ್ಡಿನ ಮಾಜಿ ಎಕ್ಸಿಕ್ಯೂಟಿವ್‌ ಡೈರೆಕ್ಟರ್‌ ಮತ್ತು ಈಗಿನ ಯು.ಎಸ್. ಬಟಾನಿಕಲ್ ಗಾರ್ಡನ್‌ ನ್ಯಾಷನಲ್‌ ಫಂಡಿನ ಪ್ರಧಾನ ನಿರ್ದೇಶಕರು. ಏರ್‌ಬಾರ್ನ್ ಕ್ವಾರ್ಟಲ್ಲಿ ಎಂಬುದರಲ್ಲಿ ಇವೆಲ್ಲ ಪ್ರಕಟವಾಗಿದ್ದವಂತೆ. ಆತನ ಸಂಗ್ರಹವಾಕ್ಯಗಳನ್ನು ಕನ್ನಡೀಕರಿಸಿದ್ದೇನೆ (ಭಾವಾರ್ಥ ಎನ್ನಬಹುದು).

  1. ಅತ್ಯಂತ ತರುವುದು - ಇತರರಿಗೆ ಕೊಡುವುದು (ದಾನ, ಇತ್ಯಾದಿ)- ಅಪಾತ್ರರಿಗೆ ಕೊಡದಂತೆ ಎಚ್ಚರಿಕೆ ವಹಿಸುವುದು ಕ್ಷೇಮ.
  2. ಇಂತಹವರು ಅಪರೂಪವಾಗುತ್ತಿದ್ದಾರೆ - ನಿಸ್ವಾರ್ಥ ನಾಯಕರುಗಳು (ಇವರುಗಳ ಸಂಖ್ಯೆಯನ್ನಾಧರಿಸಿದರೆ ಅಳಿವಿನಂಚಿನಲ್ಲಿರುವವರು ಎನಬಹುದು)
  3. ಸ್ವಾಭಾವಿಕವಾದ ನಿಸರ್ಗದ ಸಂಪತ್ತು - ನಮ್ಮ ಯುವಶಕ್ತಿ ಅಥವಾ ಯೌವನ (ಇಂದು ಇದುವೇ ಮಾರಕವಾಗುತ್ತಿದೆಯೇ? ಅನಿಸಿದ್ದರೆ....)
  4. ಅತಿ ಕಠಿಣ ಸಮಸ್ಯಯಿಂದ ಹೊರಬರಬೇಕೆಂದರೆ - ಭಯ/ಹೆದರಿಕೆಯನ್ನು ತೊರೆಯಬೇಕು (ಆದರೆ, ಇತ್ತೀಚಿನ ದಿನಗಳಲ್ಲಿ ಅದನ್ನು ತೊರೆಯದೇ ಅನೇಕರು ಖಿನ್ನರಾಗಿ ತಮ್ಮನ್ನು ತಾವೇ ಸಾವಿನಂಚಿಗೆ ದೂಡಿಕೊಳ್ಳುತ್ತಿರುವರಲ್ಲಾ ಎಂಬ ವ್ಯಥೆಯಾಗುತ್ತಿದೆ)
  5. ಸರಿಯಾದ ನಿದ್ರಾಗುಳಿಗೆ - ಮನಸ್ಸಿನ ಶಾಂತಿ - (ಡಾಕ್ಟರು ಬರೆದುಕೊಡುವುದನ್ನೇ ಜನ ಅವಲಂಬಿಸುತ್ತಿದ್ದಾರೆ - ಅದಕ್ಕೇ ಮೆಡಿಕಲ್‌ಶಾಪುಗಳ ಮುಂದೆ ಜನಜಂಗುಳಿ ಕಂಡಿರುತ್ತೀರಿ)
  6. ಬದುಕಿನಲ್ಲಿ ಸೆಳೆಯತಕ್ಕಂತಹ ಶಕ್ತಿ - ಪ್ರೀತಿ (ಇದು ಬೇರೆಲ್ಲಿಗೋ ಕೊಂಡುಯುತ್ತಿದೆ ಯುವಜನತೆಯನ್ನು ಅಥವಾ ಅಮಾಯಕರನ್ನು)
  7. ಜೀವನವನ್ನು ವಿಧ್ವಂಸಕಗೊಳಿಸುವಂತಹುದು - ಗಾಳಿಮಾತು - ಗಾಸಿಪ್‌ (ಗಾಳಿಮಾತು ಸಿನೆಮಾ ನೆನಪಾಗಿದ್ದರೆ...???)
  8. ಅಪ್ರತಿಮ ಕಂಪ್ಯೂಟರ್‍ - ಮಾನವನ ಮಿದುಳು (ನಿಜಕ್ಕೂ ಹೌದು, ಇಲ್ಲವಾಗಿದ್ದರೆ ಇಂತಹ ದೂರದರ್ಶಿತ್ವದ ಮಾಯಾಗಣಕಗಳು ಮಾಯೆಯಾಗುತ್ತಿದ್ದವು. ಜಗತ್ತನ್ನೇ ಅಂಗೈಲಿ ಕೂರುವಂತೆ ಮಾಡುತ್ತಿದೆ ಇಂದಿನ ಗಣಕ ತಂತ್ರ, ಮೊಬೈಲು, ಇತ್ಯಾದಿ)
  9. ಅತಿ ಬೆಲೆಬಾಳುವ ಆಸ್ತಿ - ನಂಬಿಕೆ, ನಿಷ್ಠೆ (ಉಳಿಸಿಕೊಳ್ಳುವುದು ಭಾರೀ ಕಷ್ಟವೇ ಹೌದು)
  10. ಸುಂದರವಾದ ಪೋಷಾಕು - ಒಂದು ಮುಗುಳ್ನಗೆ (ಪಟ್ಟಣಿಗರಲ್ಲಿ ಇದು ಸ್ವಲ್ಪ ಕಡಿಮೆಯಾಗೇ ಸಿಗಬಹುದು ಅಥವಾ ಆಷಾಢಭೂತಿತನಕ್ಕೆ ತೋರಿಕೆಯಾಗಿರಬಹುದು)
  11. ತೃಪ್ತಿಯನ್ನೀಡುವ ಕೆಲಸ - ಅಸಹಾಯಕರಿಗೆ ಸಹಾಯಹಸ್ತ ನೀಡುವುದು (ಇಂದಿನ ಪರಿಸ್ಥಿತಿಗಳಲ್ಲಿ ಸ್ವಲ್ಪ ಅಮಾಯಕತೆಯನ್ನು ಸಹಾಯಕವಾಗಿ ಆವಾಹಿಸಿಕೊಳ್ಳುತ್ತದೆ)
  12. ವಿನಾಶಕ್ಕೆ ಕಾರಣವಾಗುವ ಅಭ್ಯಾಸ - ಚಿಂತೆ - (ಚಿಂತ್ಯಾಕ ಮಾಡತಿ ಚಿನ್ಮಯನಿದ್ದಾನೆ ಎಂದು ಚಿಂತೆಯನ್ನು ದೂರಮಾಡಲು ಯತ್ನಿಸೋಣವೇ?)

ಸದ್ಯಕ್ಕೆ ಇಷ್ಟು ಸಾಕೆನಿಸಿತು. ಕಂಸದಲ್ಲಿರುವದರ ಕಡೆಗೆ ಎಚ್ಚರಿಕೆಯ ನೋಟದಿಂದ ನೋಡಿ, ಕನ್ಸದಾಚೆಯಲ್ಲಿರುವ ಒಳ್ಳೆಯ ಆಲೋಚನೆಗಳನ್ನು ತೆಗೆದುಕೊಳ್ಳೋಣ. ಇಷ್ಟವಾಯಿತೆ? ಆಗಿದ್ದರೆ ಒಂದೆರಡು ವಾಕ್ಯಗಳನ್ನು ಕಾಮೆಂಟಿಸಿರಿ.

ಲೇಖನ: ಚಂದ್ರಶೇಖರ ಬಿ.ಎಚ್.

ಮಂಗಳವಾರ, ಸೆಪ್ಟೆಂಬರ್ 8, 2009

ಬೇಸರವೆ?

ಬೇಸರವೆ?

ಏನು?!
ಬೇಜಾರು ಎಂದಿರಾ??
ಹಾಗಿದ್ದರೆ,
ನೋಡಬನ್ನಿ ನಮ್ಮೂರ
ಬಜಾರು.
ಖಾಲಿಯಾದಾವು ಜೋಕೆ
ನಿಮ್ಮ ತುಂಬಿದ ಜೇಬು
ಮೂರು-ನೂರು!
ಆದರೂ, ಪಡಬೇಡಿ
ಬೇಜಾರು ಬಜಾರಿಗೆ ಬಂದು
ಬೇಜಾರಾಯಿತೆಂದು ಇಲ್ಲಿಂದ
ಬೇಗ ಜಾರದಿರಿ.

- ಚಂದ್ರಶೇಖರ ಬಿ.ಎಚ್.

ಶನಿವಾರ, ಸೆಪ್ಟೆಂಬರ್ 5, 2009

ಶಿಕ್ಷಕರ ದಿನಾಚರಣೆ - ಅರ್ಪಣ

ಯಾರು, ಈ ಕಂದ?
ಮುಂಜಾನೆ ಮೈದಾನದಲಿ ಆ ದಿನ
ಆಟದಲಿ ಮುಳುಗಿದ್ದ ಮಗುವಾಗಿದ್ದೆ
ನನ್ನೆಡೆಗೆ ಬಂದವರು ಕೇಳಿದರು,
"ಈ ಕಂದ ಯಾರದೆಂದು"? ಕ್ಷಣದಲ್ಲೇ ಉತ್ತರಿಸೆ
ನನ್ನದೇ, ನಾನಿವನ ತಾಯಿ. ಶುಚಿಗೊಳಿಸಿ ಕೈಬಾಯಿ
ಈತನ ಕಳಿಸುವೆನು ಶಾಲೆಗೆ ಇದೀಗ ಎಂದು

ಮಧ್ಯಾಹ್ನ ಮತ್ತದೇ ಮಗುವ ಕಂಡವರು
ಓದು ಬರಹದಲಿ ಮುಳುಗಿದ್ದ ಮಗುವಾಗಿದ್ದೆ
ನನ್ನೆಡೆಗೆ ಬಂದವರು ಕೇಳಿದರು,
"ಈ ಕಂದ ಯಾರದೆಂದು"? ಕ್ಷಣದಲ್ಲೇ ಧ್ವನಿಯೊಂದು
ನನ್ನದೇ, ನಾನಿವನ ವಿದ್ಯಾದಾತೆ. ಓದು ಬರಹ, ನೀತಿ
ಪಾಠ, ಕಲಿಸುವೆನು ಒಳ್ಳೆಯ ನಡತೆಯ ಎಂದೆಂದೂ

ಸಂಜೆಯಲಿ ಮತ್ತದೇ ಮಗುವ ಕಂಡವರು
ಕೇಳಿದರು, "ಈ ಕಂದ ಯಾರದೆಂದು"? ಕ್ಷಣದಲ್ಲೇ
ಒಟ್ಟಾದ ಧ್ವನಿಯೆರಡು ನುಡಿದವು, ಈ ಕಂದ
ನಮ್ಮದೆಂದು. ನಾನಿವನ ತಾಯಿ, ಇವ ನನ್ನ ಕಣ್ಣು,
ನಾನಿವನ ಗುರುವು, ಇವ ನಮ್ಮ ಮಗುವು ಎಂದು.
ಹರುಷದಲಿ ಹಾರೈಸಿದರು, ನೂರ್ಕಾಲ ಬಾಳು ಎಂದು.

ಸೆಪ್ಟೆಂಬರ ೫, ಭಾರತೀಯರೆಲ್ಲರ ಮನಗೆದ್ದ ಶಿಕ್ಷಕ, ಚಿಂತಕ ಮತ್ತು ರಾಷ್ಟ್ರಪತಿಯಾಗಿದ್ದಂತಹ ಡಾ. ಎಸ್. ರಾಧಾಕೃಷ್ಣನ್‌ರವರ ಜನ್ಮದಿನ. ಈ ದಿನವನ್ನು ಶಿಕ್ಷಕರ ದಿನನವೆಂದು ಆಚರಿಸುತ್ತಾರೆ. ಅದೊಂದು ದಿನ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿದು ಸುಮಾರು ವರ್ಷಗಳ ನಂತರ ನಮ್ಮ ಪ್ರಾಥಮಿಕ ಶಾಲಾ ಶಿಕ್ಷಕಿಯೊಬ್ಬರು ತಮ್ಮ ಮನೆಯ ವಿಳಾಸ ನೀಡಿದ್ದರು. ಒಂದು ದಿನ ಅವರ ಮನೆಗೆ ೩-೪ ಸಹಪಾಠಿ ಮಿತ್ರರು ಹೋಗಿದ್ದೆವು. ಆಗ ನಡೆದ ಒಂದು ಪ್ರಸಂಗವು ಮತ್ತು ಮೊನ್ನೆ ಗೂಗಲ್ಲಿನಲ್ಲಿ ಕವಿತೆಯೊಂದನ್ನು ಹುಡುಕುತ್ತಿದ್ದಾಗ ಕಂಡ ಅನಾಮಿಕ ಕವಿಯ ಆಂಗ್ಲ ಕವಿತೆಯು ಸಾಂದರ್ಭಿಕವಾಗಿ ಹೊಂದುವಂತಿದ್ದವು. ಮತ್ತು ಶಿಕ್ಷಕರ ದಿನಾಚರಣೆಯಯ ಈ ಒಂದು ಸಮಯದಲ್ಲಿ ಮೇಲಿನ ಕವಿತೆಯನ್ನು ಬರೆಯಲು ಪ್ರೇರೇಪಿಸಿತು. ಇದನ್ನು ಶ್ರೀರಾಜರಾಜೇಶ್ವರಿ ವಿದ್ಯಾ ಮಂದಿರ, ಶ್ರೀನಿವಾಸನಗರ, ಬೆಂಗಳೂರು 50 ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕಿ(ಕ)ರಾಗಿದ್ದವರೆಲ್ಲರಿಗೂ ಅರ್ಪಿಸುತ್ತೇನೆ.

ಚಂದ್ರಶೇಖರ ಬಿ.ಎಚ್.
ಐ.ಎಸ್.ಇ.ಸಿ.
ದಿ: ೦೫.೦೯.೨೦೦೯

ಗುರುವಾರ, ಸೆಪ್ಟೆಂಬರ್ 3, 2009

ಹೀಗೆಲ್ಲಾ ನಾವು ಯೋಚಿಸಿದರೆ...???

ಹೀಗೆಲ್ಲಾ ನಾವು ಯೋಚಿಸಿದರೆ...???
  1. ಕೋಪದ ತೀವ್ರತೆಯು ಬುದ್ಧಿಗಿಂತ ನಾಲಗೆಯಲ್ಲಿಯೇ ಬೇಗ ಪ್ರವಹಿಸುವುದು. ಕೋಪದ ಕೈಗೆ ಬುದ್ಧಿಕೊಟ್ಟರೆ ಆಗುವ ಅನಾಹುತಗಳು ಅನೇಕ. ಕೋಪದಲ್ಲಿ ಕೊಯ್ದುಕೊಂಡ ಮೂಗು ಮತ್ತೆ ಬರಲಾರದು.
  2. ಹಳೆಯದನ್ನು ಅಥವಾ ಭೂತಕಾಲದಲ್ಲಿ ನಡೆದವನ್ನು ಬದಲಾಯಿಸಲು ಆಗದು. ಹಾಗೆಯೇ ಈ ವರ್ತಮಾನ ಕಾಲವನ್ನು ಭವಿಷ್ಯತ್ಕಾಲದ ಬಗೆಗೆ ಚಿಂತಿಸುತ್ತಾ/ಹುಡುಕುತ್ತಾ ಹಾಳುಮಾಡಬಾರದು.
  3. ಎಲ್ಲ ಜನರ ನಗುವಿನಲ್ಲಿಯೂ ಒಂದಲ್ಲಾ ಒಂದು ಅರ್ಥವಿರುತ್ತದೆ. ನಗುವಾಗ ಬೇರೊಬ್ಬರನ್ನು ಹಂಗಿಸುವಂತೆ, ಅಣಕಿಸುವಂತೆ ನಗದೇ ಇದ್ದರೆ ಆಯಿತು. ಹಾಗೆಂದು ನಗುವನ್ನೇ ಮರೆತರೆ ನಮ್ಮನ್ನು/ನಿಮ್ಮನ್ನು ನೋಡಿ ಇತರರು ನಕ್ಕಾರು...
  4. ಎಲ್ಲದರಲ್ಲಿಯೂ ಸೌಂದರ್ಯ, ಸೊಗಸು ಇರುತ್ತದೆ. ಆದರೆ ಅವುಗಳನ್ನು ನೋಡುವ ಕಣ್ಣುಗಳು ಕಡಿಮೆಯನ್ನಬಹುದು!
  5. ಸಂತೋಷವನ್ನು ಬೇರೊಬ್ಬರು ಬಾಳಿನಲ್ಲಿ ತರಬಹುದು, ತುಂಬಬಹುದು. ಆ ಸಂತಸದ ಕ್ಷಣಗಳಿಗಾಗಿ ಸದಾ ಅವಲಂಬನೆ ಸಲ್ಲದು. ಏಕೆಂದರೆ, ಬೇರೆಯವರ ಪ್ರಭಾವದಿಂದ ಸಂತಸ ಬರುತ್ತದೆ, ಹೋಗುತ್ತದೆ. ಆದರೆ, ನಮ್ಮಲ್ಲಿಯೇ ಸಂತಸ ಕಾಣುವ ಮನಸ್ಸಿರುವಾಗ ಪರಾಧೀನತೆ ಏಕೆ?
  6. ಮನುಷ್ಯನು ಬಾಹ್ಯಶರೀರ/ಸೌಂದರ್ಯಕ್ಕೆ ಮನಸೋತರೆ, ಪರಮಾತ್ಮ ಅಂತರಂಗ ಸೌಂದರ್ಯಕ್ಕೆ ಮಾರುಹೋಗುವವನು. ಅನೇಕ ಭಕ್ತರ ಚರಿತ್ರೆಗಳಲ್ಲಿ, ಪರಮಾತ್ಮನನ್ನು ಹಾಡಿ-ಹೊಗಳಿದ ಪದಗಳಿಂದ ಇವೆಲ್ಲ ತಿಳಿಯಬಹುದು.
ಚಂದ್ರಶೇಖರ ಬಿ.ಎಚ್.
೦೩.೦೯.೨೦೦೯
--------------------------------------------------------------------------------
ನನ್ನ ಒಂದು ಹಾಸ್ಯ ಲೇಖನ `ನಗೆಮುಗುಳು' ಮಾಸಪತ್ರಿಕೆಯ ಆಗಸ್ಟ್ ೨೦೦೯ರ ಸಂಚಿಕೆಯಲ್ಲಿ ಪ್ರಕಟವಾಗಿದೆ.
--------------------------------------------------------------------------------

ಮಂಗಳವಾರ, ಸೆಪ್ಟೆಂಬರ್ 1, 2009

ಮನಸು ಸಾವಿರ ಕನ್ನಡಿಯ ಮನೆಯಂತೆ...

ಇದೊಂದು ಜಪಾನೀ ಜಾನಪದ ಕಥೆ.

ಬಹಳ ವರ್ಷಗಳ ಹಿಂದೆ ಒಂದು ಸಣ್ಣಹಳ್ಳಿ. ಆ ಹಳ್ಳಿಗೆ ಸ್ವಲ್ಪ ದೂರದಲ್ಲಿ ಹೆಸರಾಂತ ಸಾವಿರಕನ್ನಡಿಯ ಮನೆಯೊಂದಿತ್ತು. ಒಂದು ಪುಟ್ಟ ನಾಯಿಯು ಸದಾ ಸಂತೋಷದಿಂದ ಇರುತ್ತಿತ್ತು. ಅದಕ್ಕೆ ಈ ಮನೆಯ ವಿಚಾರ ತಿಳಿಯಿತು. ಅದನ್ನು ನೋಡಿಬರುವ ಆಸೆಯಿಂದಾಗಿ ಹಳ್ಳಿಗೆ ಹೊರಟಿತು. ಹಳ್ಳಿಯಲ್ಲಿನ ಆ ಮನೆಯ ಬಳಿಗೆ ಬಂದಿತು. ಆ ಮನೆಯನ್ನು ನೋಡಿದ ಕೂಡಲೇ ಕುಣಿದಾಡುತ್ತಾ, ತನ್ನೆರಡು ಪುಟ್ಟ ಕಿವಿಗಳನ್ನು ನೆಟ್ಟಗಿರಿಸುತ್ತಾ, ಬಾಲವನ್ನಾಡಿಸುತಾ ಮೆಟ್ಟಿಲನ್ನು ಹತ್ತಿತು. ಆಗ ಅಲ್ಲಿರುವ ಕನ್ನಡಿಗಳಲ್ಲಿ ತನ್ನಂತೆಯೇ ಇರುವ, ಕಿವಿಗಳನ್ನು ನೆಟ್ಟಗಿರಿಸಿ, ಬಾಲವಾಡಿಸುತ್ತಿರುವ ಸಾವಿರ ಪುಟ್ಟ ನಾಯಿಗಳು ಕಂಡುಬಂದವು. ಇದು ಮತ್ತಷ್ಟು ಸಂತಸದಿಂದ ಕುಣಿದಾಡಿತು. ಕನ್ನಡಿಯಲ್ಲಿನ ನಾಯಿಗಳೂ ಅದಕುತ್ತರ ಕೊಡುವಂತೆ ಕುಣಿದವು. ಈ ನಾಯಿಗೆ ಬಹಳ ಸಂತಸವಾಗಿ, `ಇದು ಅದ್ಭುತವಾದ ಮನೆ. ಮತ್ತೆ ಇಲ್ಲಿಗೆ ಬರುತ್ತೇನೆ', ಎಂದು ಖುಷಿಯಿಂದ ಹೊರಟುಹೋಯಿತು.'

ಅದೇ ಹಳ್ಳಿಯಲ್ಲಿ ಮತ್ತೊಂದು ಪುಟ್ಟ ನಾಯಿಯಿತ್ತು. ಈ ನಾಯಿಯು ಆ ನಾಯಿಯಂತಿರಲಿಲ್ಲ. ಇದು ಸದಾ ದು:ಖದಲ್ಲಿರುವಂತಿತ್ತು. ಇದೂ ಸಹ ಸಾವಿರ ಕನ್ನಡಿಯ ಮನೆಗೆ ಹೊರಟಿತು. ಮೆಟ್ಟಿಲನ್ನು ಹತ್ತುತ್ತಾ ತಲೆಯನ್ನು ತಗ್ಗಿಸಿ, ಕಿವಿಗಳನ್ನು ಕೆಳಗೆ ಜೋತುಬೀಳಿಸುತ್ತಾ, ಬಾಲವನ್ನೂ ಜೋತಾಡಿಸಿಕೊಂಡು ಕನ್ನಡಿಯ ಮನೆಯಲ್ಲಿ ಇಣುಕಿತು. ಅಲ್ಲಿ ಇದರಂತೇ ಇರುವ ಸಾವಿರ ನಾಯಿಗಳು ಕಾಣುತ್ತಿವೆ. ಇದಕ್ಕೆ ಆ ನಾಯಿಗಳಲ್ಲಿ ಅಸೂಯಾಭಾವನೆಯೊಂದು ಇಣುಕಿದಂತೆ ಭಾಸವಾಯಿತು. ಏಕೆಂದರೆ, ಈ ನಾಯಿ ಮೊದಲೇ ಅಸಂತೋಷಿಯಾಗಿತ್ತು. ಕನ್ನಡಿಯಲ್ಲಿ ಕಂಡುಬಂದ ಸಾವಿರ ನಾಯಿಗಳಿಗೆ ಉತ್ತರವಾಗಿ ಇದು ಜೋರಾಗಿ ಬೊಗಳಲಿಕ್ಕೆ ಶುರುಮಾಡಿದಾಗ, ಕನ್ನಡಿಯಲ್ಲಿ ಕಾಣುತ್ತಿರುವ ನಾಯಿಗಳೂ ಇದಕ್ಕೆ ಬೊಗಳಿದಂತಾಯಿತು. ಇದು ತನ್ನದೇ ಪ್ರತಿಬಿಂಬ ಎಂಬ ಅರಿವಿಲ್ಲದೇ, ಈ ನಾಯಿಯು `ಈ ಮನೆಯು ಭಯಂಕರವಾಗಿದೆ, ಚೆನ್ನಾಗಿಲ್ಲ, ಇನ್ನೆಂದೂ ಇಲ್ಲಿಗೆ ಬರುವುದಿಲ್ಲ', ಎಂದು ಬೈದುಕೊಳ್ಳುತ್ತ ಹೊರಟು ಹೋಯಿತು.

`ಮನಸು ಸಾವಿರ ಕನ್ನಡಿಯ ಮನೆಯಂತೆ'. ಹೀಗಿರುವಾಗ ಜಗದಲ್ಲಿನ ಜನರ ಮುಖಗಳೂ ಯಾ ಮನಸೂ ಸಹ ದರ್ಪಣವಿದ್ದಂತೆ. ಅವರವರ ಭಾವಕ್ಕೆ ತಕ್ಕಂತೆ ಜಗದಲ್ಲಿನ ಜನರು ಕಾಣುತ್ತಿರುತ್ತಾರೆ. ಪ್ರತಿಯೊಬ್ಬರೂ ಒಬ್ಬರನ್ನೊಬ್ಬರು ಭೇಟಿಮಾಡಿದಾಗ ನಮ್ಮಲ್ಲಿ ಅಥವಾ ಭೇಟಿಯಾದವರಲ್ಲಿ ಯಾವ ಭಾವನೆಗಳು ಮೂಡಬಹುದು... ನಿಮಗೇನನ್ನಿಸಬಹುದು?

ಲೇಖನ: ಚಂದ್ರಶೇಖರ ಬಿ.ಎಚ್. ೦೧ ಸೆಪ್ಟೆಂಬರ್‍ ೨೦೦೯