ಅದಕ್ಕೆ ತಕ್ಕಂತೆ ಇಲ್ಲಿದೆ ಒಂದು ಮರಕ್ಕೆ ಬರೆದ ನಂಬರು!
ಬೇರೊಂದು, ಕವಲೆರಡು, ಆದರೂ ಬಿಟ್ಟಿಲ್ಲ ಒಬ್ಬರನೊಬ್ಬರು,
ಒಂದೇ ತಾಯಿಬೇರು, ಜೊತೆಯಲ್ಲಿರುವಾಗ ಬಿಡುವುದಾದರೂ ಯಾರು?
ಆದರೆ, ಯಾರು ಬರೆದರೋ ಇದಕ್ಕೆ ನಂಬರು?
ತಿಳಿದೋ, ತಿಳಿಯದೆಯೋ ಎರಡು ಮತ್ತು ಮೂರು?
http://kshanachintane.blogspot.com/2008/11/blog-post.html
ಈ ಬ್ಲಾಗನ್ನು ಶುರುಮಾಡಿದಾಗ ಎಲ್ಲವೂ ಸಿದ್ಧ ಉಡುಪಿನಂತೆಯೇ ಇದ್ದು ಕೇವಲ ಬರಹವನ್ನು ಅಕ್ಷರ ಪೆಟ್ಟಿಗೆಯಲ್ಲಿ ಹಾಕಿದ್ದರೆ ಮುಗಿದಿತ್ತು. ಅದಕ್ಕೆ ಹಾಗೆ ಬರೆದಿದ್ದೆ.
ಇನ್ನು ನನ್ನ ಆಲೋಚನೆಯಿದ್ದದ್ದು ಸುಭಾಷಿತಗಳ ರೀತಿಯಲ್ಲಿ ಪ್ರಸಿದ್ಧ ವ್ಯಕ್ತಿಗಳ ನುಡಿಗಳನ್ನು ಇಲ್ಲಿ ಬರೆಯಬೇಕೆಂದು ಅನಿಸಿತ್ತು. ಹಾಗೆಯೇ ಒಂದೆರಡು ಬ್ಲಾಗಂಚೆ (ಬ್ಲಾಗ್‌ಪೋಸ್ಟುಗಳು) ಅಂಚಿಸಿದ್ದೆ. ದೀಪವೇ ತೋರು ಸಮಯ ಎಂದು ದೀಪದ ಚಿತ್ರ ಹಾಕಿದ್ದೆ. ಆನಂತರ `ಲಹರಿ' http://kshanachintane.blogspot.com/2008/11/blog-post_21.html ಎಂಬ ಶೀರ್ಷಿಕೆಯಡಿ ಈ ಬ್ಲಾಗಿಗೆ ಈ ಹೆಸರು ಏಕೆ? ಎಂದು ಬರೆದಿದ್ದೆ.
ಬಾಪೂಜಿಗೆ ನಮನ - http://kshanachintane.blogspot.com/2008/11/blog-post_21.html ಎಂದು ಬಾಪೂಜಿಯ ನೆನೆಯುವ ದಿನಕ್ಕೆ ಒಂದೆರಡು ಸಾಲು ಬರೆದಿದ್ದೆ. ಅದಕ್ಕೆ ಪ್ರತಿಕ್ರಿಯೆಯಾಗಿ `ಚಿಂತೆ ಇರಬಾರದು. ಸದಾ ಚಿಂತನೆ ಇರಬೇಕು. ಚಿಂತೆ ಸಜೀವವಾಗಿ ನಮ್ಮನ್ನು ಸುಡುವುದು. ಚಿಂತನೆ ಸದ ನಮ್ಮಲ್ಲಿ ಮನೋವಿಕಾಸವನ್ನುಂಟುಮಾಡುವುದು. ಉತ್ತಮ ಚಿಂತನೆ ನಿಮ್ಮಿಂದ ಹರಿದು ಬರಲಿ ಎಂದು `ಮಾನಸಪೂರ್ವಕವಾಗಿ' ತಿಳಿಸಿದ್ದರು.
ಆಗಿನ್ನೂ ಬರಹವನ್ನು ಕೇವಲ ಒಂದೆರಡು ಸಾಲುಗಳಲ್ಲಿಯೇ ಮುಗಿಸುತ್ತಿದ್ದೆ. ಏಕೆಂದರೆ, `ಪುಟನಾಮವೇ' ಕ್ಷಣ ಚಿಂತನೆ ಎಂದಿಟ್ಟಿದ್ದೆನಲ್ಲ.
ಹೀಗಿರುವಾಗ, ಸ್ವಾಮಿ ವಿವೇಕಾನಂದರ ವಾಣಿಯನ್ನು ಹಾಕಿದ್ದೆ. ಅದೇನೆಂದರೆ, Where can we go to find God if we cannot see Him in our own hearts and in every living being.. ಇದಕ್ಕೆ ಪ್ರತಿಕ್ರಿಯೆಯಾಗಿ, ನಿಮ್ಮದೇ ವಾಕ್ಯದಲ್ಲಿ ಸ್ವಲ್ಪ ವಿವರಣೆಯನ್ನೂ ಬರೆದರೆ ಇನ್ನೂ ಚೆನ್ನಾಗಿರುತ್ತದೆ ಹಾಗೂ ಕನ್ನಡದಲ್ಲಿ ಬರೆಯಿರಿ ಎಂದು `ಬೆಳಕು' ಚೆಲ್ಲಿದವರೊಬ್ಬರು.
ಮತ್ತೊಬ್ಬರಿಂದ, ಬರವಣಿಗೆಯ ಜೊತೆಯಲ್ಲಿ ಛಾಯಾಚಿತ್ರಗಳೂ ಚೆನ್ನಾಗಿವೆ, ಹೀಗೆಯೆ ಬರೆಯುತ್ತಿರಿ. ಹೀಗೆಯೇ ಅನೇಕ ಓದುಗರ ಪ್ರೋತ್ಸಾಹದಿಂದಲೇ ಇಲ್ಲಿಯವರೆವಿಗೆ ಬರೆಯಲು ಸಾಧ್ಯವಾಗಿದೆಯೇನೋ ಅನ್ನಿಸುತ್ತಿದೆ. ಇವೆಲ್ಲದರ ಜೊತೆಯಲ್ಲಿ ಕೆಲವು ಆತ್ಮೀಯರ ಲಭ್ಯತೆಯೂ ಆಗಿದೆ.

ಇದೀಗ ಈ ನನ್ನ ಬ್ಲಾಗು ಇಂದಿಗೆ ಒಂದು ವರ್ಷ ಪೂರೈಸಿ ಎರಡನೆಯ (೨ನೇ) ವರ್ಷಕ್ಕೆ ಕಾಲಿಡುತ್ತಿದೆ. ಇದುವರೆವಿಗೆ ಸುಮಾರು ೧೦೦ ಕ್ಕೂ ಮಿಕ್ಕಿ ಬ್ಲಾಗಂಚೆಗಳನ್ನು ಬರೆದಿದ್ದೇನೆ. ನುಡಿಗಟ್ಟುಗಳನ್ನು ಬಳಸಿ ಬರೆದ ಬರಹಗಳೊಂದಿಗೆ, ಸ್ವಾನುಭವ ಅಥವಾ ಯಾವುದೋ ಗಮನಾರ್ಹ ಘಟನೆಯ ಮೆಲಕು, ಒಂದಷ್ಟು ಕವಿತೆಗಳು, ಕೆಲವು ಫೋಟೋ ಹಾಗೂ ಶುಭಾಶಯ ಪತ್ರಗಳೂ ಸೇರಿವೆ.
ಚಿಂತಿಸಲು, ಬರೆಯಲು ಹಾಗೂ ಚಿಂತಿಸಿ ಬರೆಯಲು ನಿಮ್ಮೆಲ್ಲರ ಪ್ರೋತ್ಸಾಹದಿಂದ ಸಾಧ್ಯವಾಗುತ್ತಿದೆ ಎಂದರೆ ತಪ್ಪಾಗದು. ಸಲಹೆ-ಸೂಚನೆ, ಅಭಿಪ್ರಾಯಗಳನ್ನು ತಿಳಿಸುತ್ತಾ ಬರೆಯುವ ಉತ್ಸಾಹ ತುಂಬಿದ ನಿಮ್ಮೆಲ್ಲ ಪ್ರತಿಯೊಬ್ಬರಿಗೂ ಧನ್ಯವಾದಗಳು.
ಸ್ನೇಹದಿಂದ,
ಚಂದ್ರಶೇಖರ ಬಿ.ಎಚ್.
೧೭.೧೧.೨೦೦೯