ಗುರುವಾರ, ಡಿಸೆಂಬರ್ 9, 2010
ಬಂಟಿ,.. ಬಂಟಿ,... ಬಂಟಿಂಗ್ಸ್.... ಬೇಕೆ?
ಇಲ್ಲೊಬ್ಬ ಹುಡುಗನ ಭಾವಚಿತ್ರದ ಫ್ಲೆಕ್ಸ್ಗಳನ್ನು ದೀಪದ ಕಂಬಗಳಿಗೆ, ರಸ್ತೆಯ ಮಧ್ಯೆಯಲ್ಲಿರುವ ವೃತ್ತದಲ್ಲಿ ಕಟ್ಟಲಾಗಿದೆ. ಏನೆಂದು ಓದಿದರೆ, ಆತನ ಹೆಸರು, ಜನ್ಮ ದಿನಾಂಕ, ಮರಣ ದಿನಾಂಕ ಎಲ್ಲ ನಮೂದಿಸಿದ್ದಾರೆ.
ಮತ್ತೊಂದು ಭಾವಚಿತ್ರ ಕಾಣಿಸಿತು. ಅದರಲ್ಲಿ ಒಬ್ಬ ಯುವಕ. ಹಸನ್ಮುಖಿಯ ಚಿತ್ರ. ಆದರೆ, ಅದರಲ್ಲಿಯೂ ಹೆಸರು, ದಿನಾಂಕ ಇತ್ಯಾದಿ.
ಇನ್ನೊಂದರಲ್ಲಿ ಒಬ್ಬ ಅಜ್ಜನದು, ಮತ್ತೊಂದರಲ್ಲಿ ಅಜ್ಜಿಯದು, ಹೀಗೆ ಅಲ್ಲಲ್ಲಿ ಮಡಿದವರ ಭಾವಚಿತ್ರಗಳನ್ನು ದೊಡ್ಡದಾಗಿ ಬ್ಯಾನರ್ ಅಥವಾ ಮುದ್ರಿಸಿ ನೇತು ಹಾಕಿರುತ್ತಾರೆ. ಇದರಿಂದ ಮಡಿದವರ ಆತ್ಮಕ್ಕೆ ಶಾಂತಿ ಸಿಗಲೆಂದೋ ಅಥವಾ ಅವರೆಲ್ಲ ಏನಾದರೂ ಸಾಧನೆ ಮಾಡಿದ್ದರೆಂದೋ, ಸಾಧನೆ ಮಾಡುವ ಯಾದಿಯಲ್ಲಿದ್ದರೆಂದೋ ಒಂದೂ ತಿಳಿಯದು.
ಹೀಗೆ ನಿನ್ನೆ ದಿನ ನೋಡಿದೆ ಟಿ. ಆರ್ ಮಿಲ್ಲಿನ ಬಸ್ ನಿಲ್ದಾಣದ ಬಳಿಯಲ್ಲಿ ಒಬ್ಬ ಅಜ್ಜಿಯದು. ತರಕಾರಿ ಮಾರುವ ಒಬ್ಬ ಅಜ್ಜಿಯದು. ಅದರಲ್ಲಿಯೂ ಸತ್ತವರ ಚಿತ್ರಗಳನ್ನು ತಮ್ಮ ಮನೆ ಬೀದಿಗೆ ಹಾಕಿಕೊಳ್ಳಲಿ ತಪ್ಪೇನಿಲ್ಲ. ಅದನ್ನೆಲ್ಲ ಇಡೀ ಒಂದು ಏರಿಯಾ ವ್ಯಾಪ್ತಿಗೇ ಹಾಕುವ ಪರಿಪಾಠವೂ ಇದೆಯಲ್ಲ, ಅದಂತೂ ಮತ್ತೂ ಬೇಸರ/ವಾಕರಿಕೆ ತರಿಸುತ್ತದೆ.
ಇತ್ತೀಚೆಗಂತೂ ಇಂತಹ ಸಂಸ್ಕೃತಿ ನಗರ, ಪಟ್ಟಣಗಳೆನ್ನದೆ ಸಣ್ಣ ಸಣ್ಣ ಹಳ್ಳಿಗಳಲ್ಲೂ ವ್ಯಾಪಿಸುತ್ತಿದೆ. ಅವರವರಿಗೆ ಅವರವರ ವ್ಯಕ್ತಿ, ವಸ್ತುಗಳು ಮುಖ್ಯವಿರುತ್ತದೆ. ಒಪ್ಪಿಕೊಳ್ಳೋಣ. ಅದನ್ನೇ ಒಂದು ವಿಧದ ಸಾಮೂಹಿಕ ಕಲ್ಪನೆಯಲ್ಲಿ ಬೀದಿ ಬೀದಿಗೆ ಹೀಗೆ ನೇತು ಹಾಕುತ್ತಾ ಹೋದರೆ ಹೇಗೆ?
ಮೊದಲೇ ಹಬ್ಬಗಳಿಗೆಂದೋ, ಹೊಸ ಪಕ್ಷದ ಅಭ್ಯರ್ಥಿಗೆಂದೋ, ಶಾಸಕರ, ಸಚಿವರ ಹೀಗೆ ರಾಜಕಾರಣಿಗಳ ಹುಟ್ಟುಹಬ್ಬ, ಯಾವುದೋ ಯೋಜನೆಯ ಉದ್ಘಾಟನಾ ಸಮಾರಂಭ ಇತ್ಯಾದಿಗೆಳೆಂದು ಅದರಲ್ಲಿಯೂ ನಾಡ ಅಥವಾ ರಾಷ್ಟ್ರೀಯ ಹಬ್ಬಗಳಿಗೆ ಮುನ್ನಾ ದಿನ ಅಥವಾ ತಿಂಗಳ ಮುಂಚೆಯೇ ಈ ಫ್ಲೆಕ್ಸ್ ಬಂಟಿಂಗ್ಸ್, ಬ್ಯಾನರ್ಸ್ ರಸ್ತೆಯಲ್ಲಿನ ಪ್ರತಿಯೊಂದು ಕಂಬಗಳ ಮೇಲೆಯೋ, ರಸ್ತೆ ವಿಭಜಕಗಳ ನಡುವಿರುವ ಸ್ಥಳದಲ್ಲಿಯೋ, ರಸ್ತೆ ತಿರುವಿನಲ್ಲಿಯೋ ಹೀಗೆ ಜಾಗ ಕಂಡಲೆಲ್ಲ ರಾರಾಜಿಸುತ್ತಿರುತ್ತವೆ. ಇವೆಲ್ಲ ಇರಲಿ. ಅದರೊಡನೆ ಅ ಏರಿಯಾದ, ಸಂಘದ, ವರಿಷ್ಠ(?) ರ ಚಿತ್ರಗಳನ್ನೆಲ್ಲಾ ತುಂಬಿರುತ್ತಾರೆ. ಇದು ಯಾವ ಕರ್ಮ? ಯಾರಿಗೆ ಯಾರೋ ಶುಭಾಶಯ ಕೋರಲು ಹೀಗೆಲ್ಲ ವಿಪರೀತ ದೃಶ್ಯ ಮಾಲಿನ್ಯ ಮಾಡಬೇಕೆ?
ಮೊನ್ನೆ ಬಸ್ಸಿನಲ್ಲಿ ಬರುವಾಗ ಇದ್ದ ಒಂದು ಸ್ಟಿಕರಿನಲ್ಲಿ ಕನ್ನಡ ನಾಡಿನ ಜ್ಞಾನಪೀಠ ವಿಜೇತರ (ಇವು ಚಿಕ್ಕದಾಗಿವೆ) ಆ ಚಿತ್ರದೊಂದಿಗೆ ಕನ್ನಡ, ಹೆಮ್ಮೆ ಇತ್ಯಾದಿ ಬರಹದೊಂದಿಗೆ ಮಂತ್ರಿಮಹೋದಯರ ದೊಡ್ಡ ಚಿತ್ರವಿದೆ. ಇಲ್ಲಿ ಇವರು ಯಾರನ್ನು, ಯಾವುದನ್ನು ಬಿಂಬಿಸಲು ಹೀಗೆ ಮಾಡಿದ್ದಾರೆ ಅರ್ಥಮಾಡಿಕೊಳ್ಳಬೇಕು. ಕನ್ನಡ ನಾಡನ್ನೋ, ಜ್ಞಾನಪೀಠಿಗಳನ್ನೋ ಅಥವಾ ತಮ್ಮನ್ನೋ????
ಇವೆಲ್ಲ ಒಂದು ವಿಧದ ಜಾಹಿರಾತು ಪ್ರಕ್ರಿಯೆಗಳಾದರೆ, ಮತ್ತೊಂದು ಸಿನಿಮಾ ಪೋಸ್ಟರ್ಗಳು. ಬಿಸಿಲೆ ಚಿತ್ರದ ಪೋಸ್ಟರ ನೋಡಿದರೆ ಸಾಕು ನಮ್ಮ ಕಲಾವಿದರು (??) ಯಾವ ಮಟ್ಟ ತಲುಪಿದ್ದಾರೆ ಎನಿಸುತ್ತದೆ.
ಬ್ಯಾನರ್ ಸಂಸ್ಕೃತಿಯು ಇರಲಿ ಬೇಡವೆನ್ನುವುದಿಲ್ಲ. ಆದರೆ, ಅದು ಅತಿಯಾಗಿ ನಗರ, ಪಟ್ಟಣ, ಹಳ್ಳಿ, ಕುಗ್ರಾಮವೆನ್ನದೇ ಬೃಹದಾಕಾರವಾಗಿ ಬೆಳೆಯುತ್ತಿದೆ. ಇದರಿಂದ ದೃಶ್ಯಮಾಲಿನ್ಯವಲ್ಲದೇ ಅಪಾಯಗಳೂ ಇವೆ. ಹೇಗೆಂದರೆ, ದೊಡ್ಡ ದೊಡ್ಡ ಬ್ಯಾನರಗಳನ್ನು ರಸ್ತೆಯ ಬದಿಯಲ್ಲಿ ಕಟ್ಟುವಾಗ ಬೊಂಬಿನ ಸಹಾಯದಿಂದ ಕಟೌಟಿನಂತೆ ಕಟ್ಟಿರುತ್ತಾರೆ. ಅದೂ ೩-೪ ಆಳೆತ್ತರದವುಗಳು. ಮಳೆಯೋ, ಗಾಳಿಯೋ ಬೀಸಿ ಜನರು / ವಾಹನಗಳ ಮೇಲೆ ಬೀಳಬಹುದು. ಇಲ್ಲವೇ, ರಸ್ತೆಯಬದಿಯಲ್ಲಿನ ತಿರುವುಗಳಲ್ಲಿ ವಾಹನಗಳ ಅಪಘಾತವಾಗಬಹುದು. ಕೆಲವರಿಗೆ ಅದೇ ಪ್ರತಿಷ್ಠೆಯ ವಿಷಯವಾಗಿ ಇನ್ನೂ ದೊಡ್ಡದಾಗಿ ಪ್ರಿಂಟಿಸಿ ಕಟ್ಟಿಸಬಹುದು ಅಥವಾ ಕೆಲವೊಮ್ಮೆ ಹೊಡೆದಾಟಗಳೂ ಆಗಬಹುದು. ಇಂತಹವುಗಳನ್ನು ಕೆಲವೊಮ್ಮೆ ವಿದ್ಯುತ್ಕಂಬಗಳಿಗೆ ತಾಗುವಂತೆ ಕಟ್ಟಿರುತ್ತಾರೆ. ಬಸ್ ನಿಲ್ದಾಣಗಳಲ್ಲಿ ಕಟ್ಟಿರುತ್ತಾರೆ. ಆಗೆಲ್ಲ ಅಪಾಯ ಕಟ್ಟಿಟ್ಟ ಬುತ್ತಿ. ಕೆಲವೊಮ್ಮೆ ಕಟ್ಟುವಾಗಲೇ ಅಪಘಾತ ಸಂಭವಿಸಬಹುದು.
ಇಂತಹ ವಿಪರೀತ ಸಂಸ್ಕೃತಿ ಬೇಕೆ? ಸಾಮಾಜಿಕ ಜವಾಬ್ದಾರಿಯುಳ್ಳ ಅಂಗ ಸಂಸ್ಥೆಗಳು ಇಂತಹವುಗಳನ್ನು ತೆರವುಗೊಳಿಸಲಿ ಅಥವಾ ಅದಕ್ಕೆ ಶುಲ್ಕ/ದಂಡ ವಿಧಿಸಿ ಇಂತಹ ಪರಿಪಾಟವನ್ನು ಹದ್ದುಬಸ್ತಿಗೆ ತಂದರೆ, ಆಗ ನಗರದ ಅಂದ (ಇದು ನಿಮ್ಮ ನಗರ, ಶುಚಿಯಾಗಿಡಿ - ಘೋಷಣೆ) ಸಾರ್ಥಕವೆನಿಸುತ್ತದೆ.
ಲೇಖನ: ಚಂದ್ರಶೇಖರ ಬಿ.ಎಚ್.
ಗುರುವಾರ, ಸೆಪ್ಟೆಂಬರ್ 16, 2010
ಮೊನ್ನೆ ದಿನ ಏನಾಯ್ತೂಂದ್ರೇ....
ಮೊನ್ನೆ ಭಾನುವಾರ ಗಣೇಶನ ಹಬ್ಬದ ಮಾರನೇ ದಿನ ನನಗೆ ಸ್ವಲ್ಪ ಸಿಟಿಯಲ್ಲಿ ಕೆಲಸವಿತ್ತು. ಹಾಗೆಯೇ ಕೆಲವು ಮಿತ್ರರನ್ನು ಭೇಟಿ ಮಾಡಲು ಹೋಗಿದ್ದೆ. ನಾನು ನನ್ನ ಸ್ನೇಹಿತ ಇಬ್ಬರೂ ಹಾಗೇ ದಾರಿಯಲ್ಲಿ (ಸೀತಾ ಸರ್ಕಲ್ ಹತ್ತಿರ)ನ ಒಂದು ಉಪಹಾರ ಮಂದಿರಕ್ಕೆ ಹೋದೆವು. ಕುಳಿತುಕೊಳ್ಳುವ ಜಾಗಕ್ಕೆ ಹೋದೆವು. ಏಕೆಂದರೆ, ಕನಿಷ್ಠ ಒಂದು ಹತ್ತು ನಿಮಿಷವಾದರೂ ಕುಳಿತು ಮಾತನಾಡುತ್ತಾ ತಿಂಡಿ ತಿನ್ನಬಹುದೆಂಬ ಆಸೆ. .. ತಿಂಡಿ ಕಾಫಿಗೆ ಆರ್ಡರ್ ಮಾಡಿ ಮಾತನಾಡುತ್ತಾ ಕುಳಿತೆವು... ಸರಿ ತಿಂಡಿಯೂ ಬಂದಿತು. ತಿಂಡಿ ಸೇವಿಸುತ್ತಾ ನಮ್ಮ ಮಾತು ಮುಂದುವರೆದಿತ್ತು...
ಹೀಗಿರುವಾಗ...
ಎಲ್ಲಿಂದಲೋ ಒಂದು ನೊಣ ಕಾಫಿ ಕಪ್ಪಿಗೆ ಬಿದ್ದಿತ್ತು. ಅವನು ಕಾಫಿ ತಂದಿಟ್ಟಾಗ ಬಿದ್ದಿರಲಿಲ್ಲ. ನಮ್ಮ ಗಮನಕ್ಕೂ ಬಂದಿರಲಿಲ್ಲ.
ಆಗ ನನಗೆ ನೆನಪಾಗಿದ್ದು ಮೇಯರ್ ಮುತ್ತಣ್ಣ ಚಲನಚಿತ್ರದಲ್ಲಿನ ಒಂದು ಪಾತ್ರ... ದ್ವಾರಕೀಶ್ ಹೋಟೆಲಿನಲ್ಲಿ ನಡೆಸುವ ಕರಾಮತ್ತು. ನಂತರ ಮುತ್ತಣ್ಣನ ಭೇಟಿ... ಇತ್ಯಾದಿ. ಇತ್ಯಾದಿ...
ಆದರೆ, ಇಲ್ಲಿ ಆಗಿದ್ದು ಬೇರೆಯೇ ಕರಾಮತ್ತು!!! ಇನ್ನೇನು ಕಾಫಿ ಕಪ್ಪಿಗೆ ಕೈ ಹಾಕಬೇಕು.....
ನೋಡಿ ನೊಣ ಬಿದ್ದಿದೆ. ಬೇರೆ ಬೇರೊಂದು ಕಪ್ ಕಾಫಿ ಕೊಡಿ ಎಂದಾಗ...
ಆತನ ವಿಚಾರಣೆ ಶುರುವಾಗಬೇಕೆ?
ನೊಣ ಈಗ ಬಿತ್ತಾ?? ಮೊದಲೇ ಬಿದ್ದಿತ್ತಾ??? ಹೀಗೆ....
ನನ್ನ ಸ್ನೇಹಿತ ತಕ್ಷಣಕ್ಕೆ `ನಮಗೇನು ಕನಸು ಬಿದ್ದಿತ್ತೇ? ನೊಣ ಯಾವಾಗ ಬಿತ್ತು? ಹ್ಯಾಗೆ ಬಿತ್ತು? ಅನ್ನೋ ವಿಚಾರಣೆ ಬೇಕಾ? ಎನಕ್ಟಯರಿ ಮಾಡಕ್ಕಾ??? ಎಂಥ ಜನ ಮಾರಾಯ್ರೆ... ಎಂದು ಹಿರಿಯ ಕೆಲಸಗಾರನಿಗೆ ಕೇಳಿದರು.
ಅದೇ ವ್ಯಕ್ತಿ ನಿಧಾನವಾಗಿ ಅಥವಾ ಬೇರೆ ಕೊಡುತ್ತೇನೆ ಎಂದು ಹೇಳಿದ್ದರೆ ಸಾಕಿತ್ತು... ಆತನ ಪ್ರಶ್ನೆ `ನಾವೇ ಕಾಫಿ ಕಪ್ಪಿಗೆ ನೊಣ ಹಾಕಿದ್ದೇವೆ' ಎಂಬ ಧಾಟಿಯಲ್ಲಿತ್ತು...
ಹೊಸ ಕಪ್ಪಿನಲ್ಲಿ ಬಿಸಿಬಿಸಿ ಕಾಫಿ ತಂದಿಟ್ಟು ಆತ ಹೊರಟು ಹೋದ....
ಇಷ್ಟೆಲ್ಲಾ ಏಕೆ ಹೇಳಬೇಕಾಯಿತೆಂದರೆ...
ಕೆಲವು ವ್ಯಕ್ತಿಗಳಿಗೆ ಜೀನವದ ಬೇಸರವೋ ಅಥವಾ ಸರಿಯಾದ ಕೆಲಸವಿಲ್ಲದೇ (ವಿದ್ಯಾವಂತನಾಗಿದ್ದರೂ) ಯಾರ್ಯಾರಿಗೋ ಕಾಫೀ, ಟೀ, ತಿಂಡಿ ಎಲ್ಲ ಸಪ್ಲೈ ಮಾಡಬೇಕು ಅಂತಲೋ, ಸಂಬಳ ಕಡಿಮೆಯೋ ಇತ್ಯಾದಿಯನ್ನು ಬಂದ ಗ್ರಾಹಕರ ಬಗ್ಗೆ ಈ ರೀತಿ ಕೇಳುವುದು ಸಭ್ಯವಲ್ಲ ಎಂದು ತಿಳಿದಿದ್ದರೂ ಹೀಗೆ ಮಾಡುತ್ತಾರೆ...
ಇದರಿಂದ ಗ್ರಾಹಕನಿಗೆ ತೊಂದರೆಯೇನಾಗದಿದ್ದರೂ... ಕೆಲಸ ಕೊಟ್ಟವನಿಗೆ ತೊಂದರೆ ಆಗುವುದು ಸಹಜ. ಏಕೆಂದರೆ, ಅಲ್ಲಿ ಶುಚಿತ್ವಕ್ಕೆ ಬೆಲೆಯಿಲ್ಲ, ತರಲೆ ಸಪ್ಲೈಯರ್ಗಳು ಹೀಗೆ ಗ್ರಾಹಕರು ತನ್ನಂತಾನೇ ದೂರಾಗುತ್ತಾರೆ... ಎಂಬುದು... ಹಾಗೆಯೇ ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೂ ತೊಂದರೆಯಾಗುವುದಲ್ಲವೇ?
ಬುಧವಾರ, ಜನವರಿ 6, 2010
ಅವರ ಹಣೆ ಬರಹ??!!
ನನಗಾಗಿ ಬಂದ ವ್ಯಥೆಯೋ??
ಈ ಹಾಡಿನ ಸಾಲುಗಳನ್ನು ಕೆಲವೊಮ್ಮೆ ನಮ್ಮಷ್ಟಕ್ಕೆ/ ತಮ್ಮಷ್ಟಕ್ಕೆ/ ನಿಮ್ಮಷ್ಟಕ್ಕೆ ನೀವೇ ಹೇಳಿಕೊಂಡಿರಬಹುದು!?
ಇದೇಕೆ ಹೀಗೆಂದರೆ, ಕಳೆದವಾರ ಮೈಸೂರಿಗೆ ಹೋಗಿದ್ದಾಗ ಆದ ಅನುಭವ ಹಂಚಿಕೊಳ್ಳುವ ಎನಿಸಿತು.
ಚಾಮುಂಡಿ ಬೆಟ್ಟದ ತಪ್ಪಲಿಗೆ ಬರುವ, ನಂಜನಗೂಡಿನ ದಾರಿಯಲ್ಲಿರುವ ಶ್ರೀ ಸಚ್ಚಿದಾನಂದ ಗಣಪತಿ ಆಶ್ರಮಕ್ಕೆ ಹೋಗಿದ್ದೆವು. ವಾಪಸ್ಸು ಬರುವಾಗ ನಗರ ಬಸ್ ನಿಲ್ದಾಣ (ಇಲ್ಲಿ ನಬನಿ ಎಂದೇ ಪರಿಚಿತ) ಬಸ್ಸು ಬಂದಿತು. ಇನ್ನೂ ಹತ್ತುತ್ತಿರುವಾಗಲೇ ಚಾಲಕ ಹೊರಟ. ಕಷ್ಟಪಟ್ಟು ಹತ್ತಿದ್ದಾಯಿತು. ಮಕ್ಕಳೂ ಜೊತೆಯಲ್ಲಿದ್ದರು. ಒಬ್ಬ ವೃದ್ಧರು ತರಕಾರಿ ಚೀಲಗಳ ಸಮೇತ ಮೆಟ್ಟಿಲಲ್ಲಿ ಬೀಳುವಂತಾಗಿ ಜೋತಾಡಿದರು.
ಮುಂದಿನ ನಿಲ್ದಾಣದಲ್ಲಿ, ಕಾಲೇಜು ಹುಡುಗರು, ಹುಡುಗಿಯರು ಬಸ್ಸು ಹತ್ತುವಾಗಲೇ ಬಸ್ಸನ್ನು ಚಲಾಯಿಸಿದ ಚಾಲಕ. ಅದಕ್ಕೆ ಕಂಡಕ್ಟರನೂ ಸಮ್ಮತಿಸಿದ. ಒಂದು ಹುಡುಗ ಮತ್ತು ಹುಡುಗಿ ಪೂರ್ಣವಾಗಿ ಬೀಳುವುದೊಂದು ಬಾಕಿ. ಕೊನೆಗೂ ಬಸ್ಸು ಹತ್ತಿದರು. ನಾನೂ ಸಹ ನನ್ನ ತಂಗಿಯ ಮಗಳನ್ನು ಹತ್ತಿಸುವಾಗ ಹೀಗೇ ಆಗಿತ್ತು. ಕಂಡಕ್ಟ್ರ ಬಂದ. ನಿಲ್ಲಿಸಿ ಎಂದರೂ ರೈಟ್ ಹೇಳೋದ್ಯಾಕೆ? ಬಿದ್ದರೆ ಏನ್ರೀ ಮಾಡೋದು ಎಂದರೆ, ಅವನು ಸಾರಿ ಅಥವಾ ಬೇರೇನಾದರೂ ಹೇಳಬಹುದಿತ್ತು. ಆದರೆ, ಅವ ಅಂದಿದ್ದು ನನ್ನನ್ನಷ್ಟೇ ಅಲ್ಲ ಅಲ್ಲಿದ್ದ ಆ ಮೂರ್ನಾಲ್ಕು ಹುಡುಗ-ಹುಡುಗಿಯರನ್ನೂ ಕೆರಳಿಸಿತು.
ಬಿದ್ರೆ ಅವರ ಹಣೆ ಬರಹ. ನಾನೇನ್ಮಾಡಕ್ಕಾಗಲ್ಲ - ಈ ಮಾತು ಯಾವನಿಗೇ ಆಗಲಿ ಹೇಗಾಗಿರಬೇಡ?
ಆಮೇಲೆ, ಅಲ್ಲಿ ಬಸ್ಸು ನಿಲ್ಲಿಸುವ ಹಾಗಿಲ್ಲ. ಟ್ರಾಫಿಕ್ ಪೊಲೀಸರು ಬಿಡಲ್ಲ, ಎಂದು ಬೇರೇನೋ ಸಬೂಬು ಹೇಳಿದ. ಅಷ್ಟಕ್ಕೂ ಅಲ್ಲೇನೂ ಭಾರೀ ಸಂಚಾರ ದಟ್ಟಣೆಯಿರುವುದಿಲ್ಲ ಮತ್ತು ಜನರ ತಳ್ಳಾಟವೂ ಇರುವುದಿಲ್ಲ. ಅಲ್ಲದೆ ಅಲ್ಲಿ ನಿಲ್ದಾಣವೂ ಸಹ ಇದೆ. ನಾವೂ ಜಗಳ ಮಾಡಿದ್ದು ಆಯಿತು. ಉಪಯೋಗವೇನು? ಎಮ್ಮೆ ಮೇಲೆ ನೀರು ಸುರಿದಂತೆ ಅಷ್ಟೆ.
ಒಂದು ಹುಡುಗಿಯಂತೂ, ನಮ್ಮ ಸೀನಿಯರ್ಸ್ ಇದ್ದಿದ್ರೆ ಈವಯ್ಯನಿಗೆ ಸರಿಯಾಗಿ ಮಾಡ್ತಿದ್ರು, ಎಂದು. ಏಕೆಂದರೆ, ಆ ಹುಡುಗಿಯ ಕೈ ಬಾಗಿಲಿಗೆ ಸಿಕ್ಕು ತರಚಿತ್ತು.
ಆಗನ್ನಿಸಿದ್ದು, ಅವನಿಗೋ, ಅವನ ಆಪ್ತರಿಗೋ ಇದೇ ರೀತಿ ಆದರೆ ಅಥವಾ ಆಗಿದ್ದರೆ ಅವನ ಮನಸ್ಥಿತಿ ಹೇಗಿರುತ್ತೆ? ಒಬ್ಬರಿಗೆ ಕೆಡಕು ಬಯಸಬಾರದು. ಇಂತಹ ಚಾಲಕ/ನಿರ್ವಾಹಕರಿಂದ ಅವರಾಡುವ ಮಾತುಗಳಿಂದ ಜನರು ಮನಸ್ಸಿನಲ್ಲಿಯೇ ಅಥವಾ ಬಾಯಿಬಿಟ್ಟೇ ಹೇಳುವಂತಹ ಪ್ರಸಂಗಗಳಿವು.
ಇದು ಒಂದು ಬಸ್ಸಿನಲ್ಲಿನ ಸಂಚಾರದ ಅನುಭವವಲ್ಲ. ಹಿಂದಿನ ದಿನ ಬೃಂದಾವನಕ್ಕೆ ಹೋದಾಗಲೂ ಸಹ ಇದೇ ರೀತಿಯ ಚಿತ್ರಣಗಳನ್ನು ಕಂಡಿದ್ದೆ.
ಜನರೊಂದಿಗೆ ಪ್ರತಿನಿತ್ಯವೂ ಬೆರೆಯುವ ಇವರಿಗೆ ಸ್ವಲ್ಪವಾದರೂ ಸೌಜನ್ಯ, ಸಭ್ಯತೆ, ಕರುಣೆ ಇವೆಲ್ಲ ಇದ್ದರೆ ಪ್ರಯಾಣಿಕರು ಬಸ್ಸಿನ ಚಕ್ರಕ್ಕೆ ಸಿಲುಕಿ ನರಳುವುದು, ಯಾರದೋ ತಪ್ಪಿಗೆ, ಯಾರದೋ ಆತುರಕ್ಕೆ ಜೀವನ ಪರ್ಯಂತ ಅಂಗಹೀನರೋ, ಆಪ್ತರಿಗೆ ದೂರಾಗುವುದೋ ತಪ್ಪಿಸಬಹುದಲ್ಲವೇ?
***
ಮಂಗಳವಾರ, ಡಿಸೆಂಬರ್ 8, 2009
ತಪ್ಪಿಸಬಹುದೇ?
ಬೆಳಗಾದರೆ ಸಾಕು, ದಿನಪತ್ರಿಕೆಯ ಮೊದಲನೇ ಪುಟದಲ್ಲಿಯೇ ಬಸ್ಸು-ಕಾರು ಡಿಕ್ಕಿ, ಲಾರಿ ಮಗುಚಿ ಮೂರು ಜನರ ಸಾವು. ರೈಲು ಅಪಘಾತ. ಅದರಲ್ಲೂ ಮುಖ್ಯವಾಗಿ ದ್ವಿಚಕ್ರ ವಾಹನ, ಆಟೋರಿಕ್ಷಾ, ಕಾರುಗಳು ಅಪಘಾತಗಳಲ್ಲಿ ನುಜ್ಜುಗುಜ್ಜಾಗಿರುವ ಚಿತ್ರಗಳನ್ನು ಕಾಣುತ್ತೇವೆ. ಹೀಗೇಕೆ ಅಪಘಾತಗಳು ಆಗುತ್ತವೆ? ಇದರಲ್ಲಿ ಯಾರ ತಪ್ಪು ಇದೆ? ಯಾರದು ಇಲ್ಲ? ಇತ್ಯಾದಿ ವಿಚಾರಗಳು ಬರುತ್ತವೆ. ಇವುಗಳ ಬಗ್ಗೆ ನನ್ನ ಮನಸ್ಸಿಗೆ ಒಂದಿಷ್ಟು ಅನಿಸಿಕೆಗಳನ್ನು ಹೀಗೆ ಬರೆದಿರುತ್ತೇನೆ.
ಪ್ರಯಾಣಿಸುವಾಗ ಅಪಘಾತಗಳಾಗುವುದು ಸಹಜ. ಆದರೆ, ಅವುಗಳನ್ನು ತಪ್ಪಿಸಬಹುದೇ? ಎಂಬುದು ಮನಸ್ಸಿಗೆ ಬಾರದಿರದು. ನಮ್ಮ ಬಸ್ಸುಗಳಲ್ಲಿ `ಅಪಘಾತಕ್ಕೆ ಅವಸರವೇ ಕಾರಣ', `ನಿಧಾನವೇ ಪ್ರಧಾನ' ಇತ್ಯಾದಿ ಬರೆದಿರುವುದು ಕೇವಲ ವಾಡಿಕೆಯಂತಾಗಿದೆ. ಏಕೆಂದರೆ ಬಸ್ಸು ಚಾಲನೆ ಮಾಡುವವರೂ ಸಹ `ಆನೆ ಸಾಗಿದ್ದೇ ಹಾದಿ' ಎಂಬಂತೆ ವರ್ತಿಸುವುದೂ ಇದೆ.
ಈಗ ಮುಖ್ಯ ವಿಷಯಕ್ಕೆ ಬರೋಣ. ವಾಹನ ಚಾಲಕರಿಗೆ ಕನಿಷ್ಠ ಸಂಚಾರ ನಿಯಮಗಳು ತಿಳಿದಿರಬೇಕು. ಇಲ್ಲವಾದಲ್ಲಿ ಅಪಘಾತಗಳು ಅಧಿಕವಾಗುತ್ತವೆ. ಅದರಲ್ಲೂ ಯುವಕ-ಯುವತಿಯರಿಗೆ ಕಡ್ಡಾಯವಾಗಿ ತಿಳಿದಿರಬೇಕು. ಆದರೆ, ನಮ್ಮಲ್ಲಿ ಲೈಸೆನ್ಸ್ ಸಿಗುವುದೇ ಅಡ್ಡದಾರಿಯಾಗಿರುವಾಗ ಇನ್ನು ವಾಹನಚಾಲನೆ ಅಡ್ಡಾದಿಡ್ಡಿಯಾಗದೆ ಇರುತ್ತದೆಯೇ? ಇದನ್ನು ನಮ್ಮ ಇಂದಿನ ಯುವಜನಾಂಗಕ್ಕೆ ಯಾವ ರೀತಿ ವಿವರಿಸಬೇಕು ಎಂಬುದೇ ಪ್ರಶ್ನೆಯಾಗುತ್ತಿದೆ. ಏಕೆಂದರೆ, ನಮ್ಮಲ್ಲಿ ಕಟ್ಟುನಿಟ್ಟಾದ ಸಂಚಾರನಿಯಮವು ಇಲ್ಲದಿರುವುದು ಅನಿಸುತ್ತದೆ.
ಮಕ್ಕಳಿರುವಾಗಲೇ ಅವರಲ್ಲಿ ಈ ವಿಚಾರಗಳನ್ನು ತುಂಬಬೇಕು. ಏಕೆಂದರೆ ಚಿಕ್ಕಂದಿನಲ್ಲಿ ಸರಿಯಾಗಿ ಕಲಿತದ್ದು ಕೊನೆತನಕ ಇರುತ್ತದೆ ಅಲ್ಲವೆ? ಇಂದಿನ ಯುವಜನಾಂಗಕ್ಕೆ (ಅದರಲ್ಲೂ ಓದಿದ ಮಂದಿಗೆ) ತಾವು ಮಾಡಿದ್ದೇ ಸರಿ ಎಂಬ ಧೋರಣೆಯೂ ಸಹ ಅಪಘಾತಗಳಿಗೆ ಕಾರಣವಾಗುತ್ತವೆ. ಅಲ್ಲದೆ ಮದ್ಯಪಾನ, ತಂಬಾಕು ಚಟ, ಗುಟ್ಕಾ ಮುಂತಾದವೂ ಸಹ ಪಾಲ್ಗೊಳ್ಳುತ್ತವೆ. ಕೆಲವರು ಈ ವಿಷಯಗಳಲ್ಲಿ ಸರಿಯಾಗಿಯೇ ಇದ್ದರೂ ಸಹ ವಾಹನಚಾಲನೆ ಮಾಡುವಾಗ ಅಪಘಾತಗಳು ಸಂಭವಿಸುತ್ತವೆ. ಹೀಗೇಕೆ?
ಏಕೆಂದರೆ, ಕೆಲವರು ತಾವು ಹೋಗಬೇಕಾದ ಸ್ಥಳವನ್ನು ಮೊದಲೇ ಯೋಚಿಸದೇ ದಾರಿಯ ಮಧ್ಯದಲ್ಲಿ ಅದೂ ದಟ್ಟ ವಾಹನ ಸಂಚಾರಗಳಿರುವೆಡೆ ಬಲಗಡೆಗೆ ಹೋಗಬೇಕಿದ್ದವರು ಎಡಗಡೆ ಸೂಚನಾಫಲಕ (ಲೆಫ಼್ಟ್ ಇಂಡಿಕೇಟರ್) ಉಪಯೋಗಿಸುವುದು, ಅಥವಾ ತಕ್ಷಣ ವಾಹನ ನಿಲ್ಲಿಸುವುದು (ರಸ್ತೆಯ ಮಧ್ಯದಲ್ಲಿಯೇ) ಅಥವಾ ತಿರುವಿನಲ್ಲಿ ಬಂದು ಎಲ್ಲಿ ಹೋಗಬೇಕೆಂದು ಯೋಚಿಸುವುದು ಇತ್ಯಾದಿ. ಇದರಿಂದ ಹಿಂದಿನಿಂದ/ಮುಂದಿನಿಂದ ಬರುತ್ತಿರುವ ವಾಹನಗಳವರಿಗೆ ಗೊಂದಲವುಂಟಾಗಿ ಅಪಘಾತಗಳು ಆಗುತ್ತವೆ. ಒಂದು ಬೈಕಿನಲ್ಲಿ ಮೂವರು, ಸ್ಕೂಟರಿನಲ್ಲಂತೂ ಮನೆಮಂದಿಯೆಲ್ಲ ಕುಳಿತು ಪ್ರಯಾಣಿಸುವುದು ಮತ್ತು ಇವೆಲ್ಲಕ್ಕಿಂತಲೂ ಹೆಚ್ಚಾಗಿ ವೇಗವಾಗಿ ಮುನ್ನುಗ್ಗುವುದು. ಆಟೋ, ಲಾರಿಯವರಿಗಂತೂ ರಸ್ತೆಯೆಲ್ಲ ತಮ್ಮ ರಾಜಬೀದಿಗಳೇ ಎಂಬಂತೆ ವರ್ತಿಸುವುದೂ ಒಂದು ಗಮನಿಸಬೇಕಾದ ಅಂಶ ('ಆಟೋ ರಾಜ, ರಸ್ತೆರಾಜ, ಇತ್ಯಾದಿ ಬರಹಗಳನ್ನು ಆಟೋ/ಲಾರಿಗಳ ಮೇಲೆ ಕಾಣಬಹುದು). ಕೆಲವರಿಗಂತೂ ಏನೋ ಧಾವಂತ. ಇವರುಗಳಿಗೆ ತಾವು ಎಷ್ಟು ಕರ್ತವ್ಯ ನಿರತರು ಎಂಬುದು ಎಲ್ಲರಿಗೂ ತಿಳಿಯಲಿ ಎಂಬಂತೆ ಜೋರಾಗಿ ಹೋಗುವುದು. ಕೊನೆಗೆ ಅಲ್ಲೆಲ್ಲೋ ಮೂಲೆ ಅಂಗಡಿಯಲ್ಲಿ ಪಾನ್ ಮಸಾಲ, ಗುಟ್ಕಾ ಅಥವಾ ಸಿಗರೇಟ್ ಕೊಂಡುಕೊಳ್ಳುವುದು. ಕೆಲವರಿಗೆ ಸಿಗ್ನಲ್ಲುಗಳಲ್ಲಿಯೇ ಸಿಕ್ಕಸಿಕ್ಕ ಸಂದಿಗೊಂದಿಗಳಲ್ಲಿ ನುಗ್ಗುವುದೆಂದರೆ ಬಹಳ ಪ್ರಿಯವೆನಿಸುವಂತಿರುತ್ತಾರೆ. ಅಲ್ಲದೇ ಅನಾವಶ್ಯಕವಾಗಿ ದಾರಿಯಲ್ಲಿ (ವಾಹನ ಸಂಚಾರ ವಿರಳವಾಗಿದ್ದರೂ ಸಹ) ಜನರ ನಡುವೆಯೇ ಜೋರಾಗಿ/ಕರ್ಕಶವಾಗಿ ಹಾರ್ನ್ ಮಾಡುತ್ತಾ ಸಾಗುವುದು. ಇದರಿಂದ ಪಾದಚಾರಿ/ವಾಹನಸಂಚಾರಿ ಗೊಂದಲಕ್ಕೀಡಾಗಿ ಅಪಘಾತಗಳು ಆಗುವುದು ಸಾಮಾನ್ಯವಾಗಿದೆ.
ಇತ್ತೀಚೆಗಂತೂ ಮೊಬೈಲು ಹಾವಳಿಯಿಂದಾಗಿ ವಾಹನ ಚಲಾಯಿಸುತ್ತಾ, ಒಂದು ಕಡೆಯಲ್ಲಿ ಕತ್ತನ್ನು ವಾಲಿಸಿಕೊಂಡು ಮಾತನಾಡುತ್ತಾ ಸಾಗುವುದು. ಇದರಿಂದ ಎದುರು ಅಥವಾ ಪಕ್ಕದಲ್ಲಿ ಬರುವ ಜನರಿಗೋ, ವಾಹನಗಳಿಗೋ ಅಥವಾ ರಸ್ತೆಯಲ್ಲಿರಬಹುದಾದ ಹಳ್ಳಕ್ಕೋ ಬೀಳುವುದು ಸಹಜ. ಹಲವು ಅಪಘಾತಗಳು ಮೊಬೈಲು ಗೀಳಿನಿಂದಾಗಿ (ರೈಲ್ವೆ ಹಳಿದಾಟುವಾಗಲೂ ಮೊಬೈಲು ಗುಂಗಿನಿದಾಗಿ ಅಪಘಾತಗಳಾಗಿವೆಯಂತೆ) ಆಗುವುದು ನಿತ್ಯದ ನೋಟವಾಗಿದೆಯೆಂದ್ರೆ ಅಚ್ಚರಿಯಿಲ್ಲ.
ಹೀಗಾಗಿ, ಜನರೇ ಇವನ್ನೆಲ್ಲ ಅರಿತು ರಸ್ತೆಯ ನಿಯಮಗಳನ್ನು ಕಿಂಚಿತ್ತಾದರೂ ಪಾಲಿಸಿದ್ರೆ ಹಾಗೂ ವಾಹನ ಸವಾರರಿಗೆ ಸ್ವಲ್ಪ ಸಂಯಮವಿದ್ದರೆ ಈಗೀಗ ಆಗುತ್ತಿರುವ ವಾಹನಾಪಘಾತಗಳನ್ನು ಸ್ವಲ್ಪಮಟ್ಟಿಗಾದರೂ ತಪ್ಪಿಸಬಹುದು, ಅಲ್ಲವೆ?
ಯಾಕೆಂದರೆ, Accident first occurs in mind and then on road. ನೆನಪಿರಲಿ.
ಚಂದ್ರಶೇಖರ ಬಿ.ಎಚ್.೦೮.೧೨.೨೦೦೯
ಸೋಮವಾರ, ಅಕ್ಟೋಬರ್ 12, 2009
ದೃಷ್ಟಿಕೋನ
ಕಳೆದ ವಾರದ ಮಳೆಯಿಂದ ಅರ್ಧ ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಇಲ್ಲೆಲ್ಲ ಜನಜೀವನ, ಜಾನುವಾರುಗಳು, ಪ್ರಾಣಿ-ಪಕ್ಷಿ ಸಂಕುಲಗಳು ಅಸ್ತವ್ಯಸ್ತವಾಗಿವೆ. ಅನೇಕ ಜನರು ತಮ್ಮ ಮಕ್ಕಳು, ಕುಟುಂಬ ಸದಸ್ಯರು, ಹಿರಿಯರು, ಕಿರಿಯರು, ಜಾನುವಾರು, ಮನೆ, ಹೊಲ ಎಲ್ಲವನ್ನೂ ಸಿರಿವಂತ, ಬಡವ ಎಂಬುದಿಲ್ಲದೇ ಕಳೆದುಕೊಂಡಿದ್ದಾರೆ. ಇಂತಹ ಸಮಯದಲ್ಲಿ ಅವರುಗಳಿಗೆ ಸ್ವಯಂ ಸೇವಕರು, ಸಂಘಗಳು, ಸರ್ಕಾರ ಇವೆಲ್ಲದರ ವತಿಯಿಂದ ಆಹಾರ, ಧಾನ್ಯ, ಬಟ್ಟೆ, ವಸತಿ ಹೀಗೆ ಪ್ರತಿಯೊಂದೂ ಸಹಾಯ ಮಾಡಲು ಜನರು ಮುಂದಾಗಿದ್ದಾರೆ. ರಸ್ತೆ, ಮನೆಗಳು, ಹೊಲ, ಇವುಗಳನ್ನೆಲ್ಲ ಹೂಳಿನಿಂದ ತೆಗೆದು, ರಸ್ತೆ ನಿರ್ಮಿಸಿ, ಬದುಕು ಕಟ್ಟುವಲ್ಲಿ ನಿರತರಾಗಿದ್ದಾರೆ. ಇವರೆಲ್ಲರ ಆಶಾಭಾವನೆಗಳೇ ಆ ಸಂತ್ರಸ್ತರಿಗೆ ದಾರಿದೀಪವಾಗುತ್ತಿವೆ. ಇಲ್ಲೆಲ್ಲ ಧನಾತ್ಮಕ ಮನೋಭಾವವೇ ಜನರ ಬದುಕನ್ನು ಕಟ್ಟುವಲ್ಲಿ ನಿರತವಾಗಬೇಕಿದೆ. ಮತ್ತೆ ಹೊಸ ಜೀವನ ಸಾಗಿಸುವಲ್ಲಿ ಅವರಿಗೆ ಆತ್ಮವಿಶ್ವಾಸವನ್ನು ಈ ಜಗತ್ತನ್ನು ನಡೆಸುತ್ತಿರುವ ಆ ಧೀಶಕ್ತಿಯು ನೀಡಲಿ.
"Nature, when she adds difficulties, adds brains", says EMERSON.
ಮುಂದಿನವಾರ ದೀಪಾವಳಿಯು ಸನಿಹವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಮಳೆ, ನೆರೆ, ನೆರೆಭೀತಿಯಿಂದ ಸಂತ್ರಸ್ತರಾಗಿರುವ ಜನರ ಬದುಕಿಗೆ ದಿವ್ಯವಾದ ಬೆಳಕು ಲಭಿಸಲಿ ಎಂದು ಆಶಿಸುತ್ತಾ...
"The truest test of civilization is not the census, nor the size of cities, nor the crops; no, but the kind of man the country turns out", says EMERSON.
ಮಂಗಳವಾರ, ಜೂನ್ 9, 2009
ಬದುಕು ವಿಚಿತ್ರ-1
ಅದ್ಯಾವಾಗ ದೂರದ ಶಾಲೆಗೆ, ಉತ್ತಮವಾದ ಶಾಲೆಗೆ ಸೇರಿದನೋ ಅವನಲ್ಲಿದ್ದ ಆ ಸಗುಣಗಳೆಲ್ಲ ಎಲ್ಲಿ ಮಾಯವಾಯಿತೋ? ಏನಾಗಿದೆ ಇವನಿಗೆ?
ಶಾಲೆ ೧೦ನೇ ತರಗತಿ ಮುಗಿಸಿರಬೇಕು! ಕೆಲಸ ನನಗೆ ಒಗ್ಗುವುದಿಲ್ಲ ಎಂದು ಮೊಂಡು ಬಿದ್ದಿದ್ದಾನೆ.
ಯಾವ ಕಷ್ಟಗಳನ್ನೂ ನೀಡದೆ ಇವನನ್ನು ಬೆಳೆಸಿದ್ದಾಳೆ, ಇವನ ಅಮ್ಮ. ತನಗಾಗಿ ಏನೆಲ್ಲ ಮಾಡಿದ್ದಾಳೆ. ಅವಮಾನ, ಅಸಹಾಯಕತೆ ಇವೆಲ್ಲವನ್ನೂ ಮೆಟ್ಟಿ ನಿಂತಿದ್ದಾಳೆ. ಅವನಿಗೆ ಉಸಿರಾಟದ ತೊಂದರೆಯಿದ್ದಾಗ ಔಷಧಿ, ಡಾಕ್ಟ್ರು ಎಂದೆಲ್ಲಾ ಅದೆಷ್ಟು ದುಡಿದ ಹಣವನ್ನೆಲ್ಲಾ ಸುರಿದಿದ್ದಾಳೆ. ಅವನ ಓದಿಗಾಗಿ, ಅವನ ಭವಿಷ್ಯಕ್ಕಾಗಿ ಅದೆಷ್ಟೇ ಕಷ್ಟವಿದ್ದರೂ ಅವನಿಗಾಗಿ ತನ್ನ ಜೀವವನ್ನೇ ತೇಯ್ದಿದ್ದಾಳೆ.
ಅವನ ಪ್ರತಿಯೊಂದು ಹುಟ್ಟುಹಬ್ಬದಂದೂ ಉಡುಗೊರೆ ಕೊಡಿಸಿದ್ದಾಳೆ. ಫೋಟೋ ತೆಗೆಸಿದ್ದಾಳೆ. ನಟನೆ ಕಲಿಯುತ್ತೇನೆಂದಾಗ ತಾನೇ ಮುಂದೆ ನಿಂತು ಅವನಿಗೆ ಫೋಟೋ ಸೆಷನ್ಗಾಗಿ ವಿವಿಧ ಡ್ರೆಸ್ಗಳನ್ನು ಕೊಡಿಸಿದ್ದಾಳೆ. ಆದರೆ ಅವಳು ತನಗೇನೂ ಮಾಡಿಲ್ಲ, ಕೂಡಿಟ್ಟಿಲ್ಲ ಎಂಬ ಹುಂಬತನ ಇವನದ್ದು. ತನಗಾಗಿ ಅವಳು ಏನೇನೂ ಮಾಡಿಲ್ಲ ತನಗೆ ಎಂದೇ ವಾದಿಸುತ್ತಿದ್ದಾನೆ.
ಉತ್ತಮ ಮಕ್ಕಳ ಜೊತೆ ಬೆರೆಯಲಿ ಎಂದು ಅದೆಷ್ಟು ಮನೆಗಳನ್ನು ಬದಲಾಯಿಸಿದಳೋ, ಅದೆಷ್ಟು ಕಷ್ಟಪಟ್ಟಳೋ ಆ ದೇವರೇ ಬಲ್ಲ.
ಇತ್ತೀಚೆಗಂತೂ ಇವನ ಕಾಟ ತಾಳಲಾರದಷ್ಟಾಗಿದೆ. ಕಾರಣ ಹಣ, ಹಣ.
ದುಡಿದಿದ್ದರಲ್ಲಿ ಅರ್ಧಭಾಗ ಇವನ ಖರ್ಚಿಗೆ. ಇನ್ನೊಂದು ವರ್ಷ ಸರಿಯಾಗಿ ಕಂಪ್ಯೂಟರ್ ಟ್ರೈನಿಂಗ್ ಹೋಗಿದ್ದರೆ, ಅವನಿಗೆ ಸಂಪಾದನೆಯೂ ಆಗುತ್ತಿತ್ತು. ಆದರೆ, ಇವನಿಗೆ ಅವೆಲ್ಲ ಬೇಕಿಲ್ಲ. ಹೇಗಿದ್ದರೂ ಅಮ್ಮ ತಂದು ಹಾಕುತ್ತಾಳೆ. ಮೂರು ಮನೆಗೆ ಕೇಳುವಷ್ಟು ಗಲಾಟೆ ಮಾಡಿದರೆ ಸಾಕು ಹಣ ಕೊಡುತ್ತಾಳೆ ಎಂಬ ದು(ದೂ)ರಾಲೋಚನೆಯ ಸುಳಿಯಲ್ಲಿ ಸಿಲುಕಿಸಿ, ಅವಳು ದಿನದಿನವೂ ಕೊರಗುವಂತೆ ಮಾಡಿದ್ದಾನೆ, ಮಾಡುತ್ತಿದ್ದಾನೆ.
ಇವನ ಕಾಟ ತಾಳಲಾರದೆ ಇವಳೇ ಮನೆ ತೊರೆದದ್ದೂ ಆಗಿತ್ತು. ಮತ್ತೆ ಮಮಕಾರದಿಂದ ಮಗನ ಜೊತೆಗೆ ಬಾಳುವ, ಹೊಸ ಬೆಳಕು ಕಾಣುವ ಆಸೆ, ಮಮತೆ ಒಂದಾಗುವಂತೆ ಮಾಡಿತು.
ಆಗೆಲ್ಲ ಅವಳು ಪಟ್ಟ ಕಷ್ಟವೆಷ್ಟು? ತನ್ನ ಮನದ, ಮನೆಯ ನೋವು ಯಾರಿಗೂ ತಿಳಿಯದಿರಲಿ ಎಂದು ತನ್ನ ಪರಿಚಿತರೆಲ್ಲರಿಂದ ದೂರವಿದ್ದದ್ದೂ ಇದೆ. ಆದರೆ ಇವನಿಗೆ ಅವೆಲ್ಲ ಬೇಕಿಲ್ಲ. `ಹಣ' ಒಂದಿದ್ದರೆ ಸಾಕು. ಅದೇನು ಮಾಡುತ್ತಾನೋ ಆ ದುಡ್ಡನ್ನೆಲ್ಲ ತಿಳಿಯದು. ಮಗ ಹಸಿವಿನಿಂದ ಬಳಲಬಾರದು ಎಂದು ಕೊಟ್ಟ ದುಡ್ಡೇ ಇಂದು ಅಮ್ಮನಿಗೆ ಶತ್ರುವಾಗುತ್ತಿದೆಯೇ?
ಮೊನ್ನೆಯಂತೂ ಇದೇ ನೆವದಿಂದ ಮನೆಯಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿ ಮಾಡಿದ್ದ. ಕೆಟ್ಟದಾಗಿ ನಡೆದುಕೊಂಡಿದ್ದ. ಅಕ್ಕಪಕ್ಕದವರೆಲ್ಲರ ಎದುರೇ ಬೈಯತೊಡಗಿದ್ದ. ಅಷ್ಟೇ ಆಗಿದ್ದರೆ... ಆದರೆ ಇಂದು ಆಗಿದ್ದೇ ಬೇರೆ. ಅಮ್ಮನನ್ನೇ ಹೊಡೆಯಲು ಮುಂದಾಗಿದ್ದ.
ಇವನ್ನೆಲ್ಲ ಇನ್ನೆಷ್ಟು ದಿನ ಅಂತ ಸಹಿಸುವುದು?
ಸದ್ಯಕ್ಕೆ ಒಂದು ದಾರಿ ಕಂಡಿದೆ. ಅದನ್ನೇ ಉಪಯೋಗಿಸೋದು ಅಂತ ನಿರ್ಧರಿಸಿದ್ದಾಳೆ.
(ಮುಂದುವರೆಯುವುದು)
ಗುರುವಾರ, ಏಪ್ರಿಲ್ 30, 2009
ಬೆಂಜಮಿನ್ ಫ್ರಾಂಕ್ಲಿನ್ - ನುಡಿಮುತ್ತು
ಚಿಕ್ಕಮಕ್ಕಳು `ಹೊಟ್ಟೆಕಿಚ್ಚು' ಎಂಬ ಪದವನ್ನು ತಮ್ಮ ಸಹಪಾಠಿಗಳೊಡನೆ ಆಟವಾಡುವಾಗ, ಓದುವಾಗ ಅಥವಾ ಯಾವುದೇ ವಿಷಯದಲ್ಲಿಯಾದರೂ ಸಹ ಒಬ್ಬರಿಗೊಬ್ಬರು ಉಪಯೋಗಿಸುತ್ತಿರುವುದನ್ನು ಕೇಳಿರುತ್ತೇವೆ. ಹಾಗೆಯೇ ಚಲನಚಿತ್ರಗಳಲ್ಲಿ, ಟಿವಿ ಧಾರಾವಾಹಿಗಳಲ್ಲಿ, ಈ ಪದದ ಬಳಕೆ ಹೆಚ್ಚು-ಕಡಿಮೆ ಹೆಚ್ಚಾಗಿಯೇ ಉಪಯೋಗಿಸುತ್ತಿರುತ್ತಾರೆ. ಇನ್ನು ರಾಜಕೀಯವಲಯದಲ್ಲಿ ಈ ಪದದ ಬಳಕೆ ವಾಕರಿಕೆ ಬರುವಷ್ಟರಮಟ್ಟಿಗೆ ಪ್ರಚಾರ ಪಡೆದಿದೆ/ಪಡೆಯುತ್ತಿದೆ. 
ಇನ್ನು ಕೆಲವರು ಕೆಲವರ ಏಳಿಗೆಯನ್ನು ಕಂಡರೆ ಅವರನ್ನ ಕಂಡಾಗ, ಅವರ ಬಗ್ಗೆ ಮಾತಾಡಿದಾಗಲೆಲ್ಲ ನನಗೆ ಹೊಟ್ಟೆಯುರಿತ್ತದೆ ಎಂಬುದನ್ನು ಉಪಯೋಗಿಸುತ್ತಿರುತ್ತಾರೆ. ಹಾಗಿದ್ದರೆ ಅವರಿಗೆ ಗ್ಯಾಸ್ಟ್ರಿಕ್ ತೊಂದರೆ ಇರಬಹುದು ಅಥವಾ ಇಲ್ಲದಿರಬಹುದು. ಅಂಥವರಿಗೆ ನಾವೇನ್ ಮಾಡಬಹುದು? ಒಂದೆರಡು ಐಸ್ ಕ್ರೀಂ ಕೊಡಿಸೋದು ಅಷ್ಟೆ.
ಒಬ್ಬರನ್ನು ದ್ವೇಷಿಸುವುದನ್ನು ಹೆಚ್ಚಿಗೆ ಲವಣಾಂಶದಿಂದ ಕೂಡಿದ ನೀರಿಗೆ ಉದಾಹರಿಸುತ್ತಾರೆ. ಹೇಗೆಂದರೆ, ಉಪ್ಪು ನೀರನ್ನು ಕುಡಿದಷ್ಟೂ ದಾಹ ದಣಿಯದು, ಬಾಯಾರಿಕೆ ಆರದು. ಅದಕ್ಕೇ ಅಲ್ಲವೇ ಸಜ್ಜನರ ಸಂಗಡ ಸವಿಜೇನು ಮೆದ್ದಂತೆ ಎಂದಿರುವುದು. ಇನ್ನು ತಾಯಿಗಿಂತ ದೇವರಿಲ್ಲ, ಉಪ್ಪಿಗಿಂತ ರುಚಿಯಿಲ್ಲ ಗಾದೆ ಮಾತು. ಆದರೆ ಈ ದ್ವೇಷ ಎಂಬುದು ಉಪ್ಪಿಗಿಂತ ಹೆಚ್ಚಿನ ರುಚಿಯುಳ್ಳದ್ದಾಗಿ ಹಾಲೂ ಸಹ ಹಾಲಾಹಲವೇ ಆಗುವ ಹಂತಕ್ಕೆ ಮುಟ್ಟಿಸುತ್ತದೆ. ಅದಕ್ಕೇ ಅಲ್ಲವೇ ಇಂದಿನ ದಿನಗಳಲ್ಲಿ ಸಣ್ಣಪುಟ್ಟ ಕಾರಣಗಳಿಗೂ ಬಡಿದಾಟ, ಹೊಡೆದಾಟ, ಕೊಲೆ ಮುಂತಾದವನ್ನು ಪ್ರತಿನಿತ್ಯ ಪತ್ರಿಕೆಗಳಲ್ಲಿ ಪಾತ್ರಪಡೆಯುತ್ತಿರುವುದು.
ಅದಕ್ಕೆ ಕೈನ್/ಕೈನೆ (Caine) ಹೀಗೆ ಹೇಳಿದ್ದು: "To hate is like drinking salt water. The thirst grows worst."-Caine
ಇನ್ನು ನಮ್ಮ ಕುವೆಂಪುರವರ `ಓ ಕರ್ನಾಟಕ ಹೃದಯ ಶಿವ' ಕವನದಲ್ಲಿ ಬರುವ ಸಾಲುಗಳು ಎಂತಹ ಅರ್ಥಬಾಹುಳ್ಯವುಳ್ಳದ್ದು ಎಂಬುದನ್ನು ಓದಿದ ಕೂಡಲೇ ವ್ಯಕ್ತಿಯಲ್ಲಿ ಅಭಿವ್ಯಕ್ತವಾಗುತ್ತದೆ.
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು;
ಒಟ್ಟಿಗೆ ಬಾಳುವ ತೆರದಲಿ ಹರಸು!
ಬೆಂಜಮಿನ್ ಫ್ರಾಂಕ್ಲಿನ್ ಹೇಳುವ ಈ ಮಾತನ್ನು ಅವಲೋಕಿಸಿದರೆ ಅದೆಷ್ಟು ವಿಶಾಲ ಅರ್ಥ ಮತ್ತು ಸತ್ಯ ಅಡಗಿದೆಯಲ್ಲವೇ?
"Be civil to all; sociable to many; familiar with few; friend to one; enemy to none."
ನಾಳೆ ದಿನ ಮೇ ೧. ಎಲ್ಲ ವಿಧದ ಕಾರ್ಮಿಕರಿಗೂ, ಕಚೇರಿವರ್ಗದವರಿಗೂ ಹಾಗೂ ಯಾವುದೇ ಕೆಲಸವನ್ನು ಶ್ರದ್ಧೆಯಿಂದ ಮಾಡುವ ಎಲ್ಲರಿಗೂ ಶುಭಾಶಯಗಳು.
ಮಂಗಳವಾರ, ಏಪ್ರಿಲ್ 21, 2009
ಒಂದು ಮೆಸೇಜ್ ರೆಸೀವ್ಡ್ : ಮೊಬೈಲು ಕಳ್ಳರಿದ್ದಾರೆ, ಎಚ್ಚರಿಕೆ!!
ತಿರುಪತಿಗೆ ಹೋಗಿದ್ದಾಗ ನಡೆದ ಒಂದು ವಾಸ್ತವ ಘಟನೆ. ದೇವರ ದಶ೯ನ ಮುಗಿಸಿಕೊಂಡು ನಮ್ಮ ಲಗೇಜುಗಳನ್ನು ತೆಗೆದುಕೊಳ್ಳುವ ಸಲುವಾಗಿ ಯಾತ್ರಿಕರ ಅನುಕೂಲಕ್ಕಾಗಿ ಕಟ್ಟಿರುವ ಲಾಕರು ಕಾಟೇಜಿಗೆ ಬಂದೆವು. ಸೋದರ ಸಂಬಂಧಿಯೊಬ್ಬನು ತನ್ನ ಮೊಬೈಲು ಚಾಜ್೯ ಮಾಡಲು ಅಲ್ಲಿಯೇ ಇದ್ದ ಪ್ಲಗ್ಗಿಗೆ ಹಾಕಿದ್ದೇನೆಂದು ಎಲ್ಲರಿಗೂ ತಿಳಿಸಿದ್ದನು. ಆದರೆ, ನಮ್ಮೊಡನಿದ್ದ ಮಗುವೊಂದು ಬಾಗಿಲಿನಾಚೆಗೆ ಹೋಯಿತು. ಜೊತೆಗೆ ಮನೆಯವರೆಲ್ಲರೂ ಲಗೇಜುಗಳನ್ನು ಜೋಡಿಸುವಲ್ಲಿ ನಿರತರಾಗಿದ್ದರು. ಮೊಬೈಲು ಕಡೆಗೆ ಒಂದು ಕಣ್ಣು ಇಟ್ಟೇ ಇದ್ದರೂ, ಕೆಲವೇ ನಿಮಿಷಗಳಲ್ಲಿ ಅಲ್ಲಿದ್ದ ಮೊಬೈಲು ಮತ್ತು ಚಾಜ್೯ರು ಕಾಣೆಯಾಗಿತ್ತು. ಅದೇ ಜಾಗದಲ್ಲಿ ಮತ್ತೊಬ್ಬ ವ್ಯಕ್ತಿ ಎರಡು ಮೊಬೈಲು ಹಿಡಿದಿದ್ದನು. ಆತನನ್ನು ಕೇಳಿದ್ದಕ್ಕೆ ಗೊತ್ತಿಲ್ಲ ಎಂದನು ಮತ್ತು ಅಲ್ಲಿಯೇ ಬರುತ್ತಿದ್ದವರೊಬ್ಬರು `ಪೋಲೀಸ್' ತೆಗೆದುಕೊಂಡು ಹೋದರು ಎಂದು ತಿಳಿಸಿದರು. ತಕ್ಷಣವೇ ಬೇರೊಂದು ಮೊಬೈಲಿನಿಂದ ಕರೆ ಮಾಡಿದರೆ ಮಾತಾಡಿ ಫೋನ್ ಆಫ್ ಮಾಡಿದನು. ಪೋಲಿಸನನ್ನು ಕಾಣದೇ ವಿಚಾರಣಾ ಕೊಠಡಿಗೆ ಓಡಿದೆವು. ಮತ್ತೊಮ್ಮೆ ಫೋನ್ ರಿಂಗ್ ಆಗಿದ್ದು ಕೇಳಿಸಿತು ಮತ್ತು ಅಲ್ಲಿಯೇ ಇದ್ದ ಆ ಪೋಲೀಸ್ ಮೊಬೈಲು ಕೊಡುವುದಿಲ್ಲ. ನಮ್ಮ ಆಫೀಸರ್ಗೆ ಹೇಳಿದೀನಿ, ಕೇಸು ಆಗುತ್ತೆ ಎಂದು (ಎಲ್ಲಾ ತೆಲುಗು ಭಾಷೆಯಲ್ಲಿ) ಎಂದು ತಿಳಿಸಿದ ಮತ್ತು ನಾವೆಷ್ಟೇ ಕೇಳಿದರೂ ಮೊಬೈಲು ಯಾರದೋ ಅವರೊಬ್ಬರೇ ಬರಲಿ ಎನ್ನಲು ಶುರುವಿಟ್ಟು ಅಲ್ಲಿಯೇ ಇದ್ದ ಕಛೇರಿ ಕಡೆಗೆ ಹೊರಟ. ನಾವು ಬಿಡದೆ ಹಿಂಬಾಲಿಸಿದೆವು. ಅದೇ ಸಮಯಕ್ಕೆ ಇಬ್ಬರು ಸಬ್ಇನ್ಸ್ಪೆಕ್ಟರುಗಳು ಹೊರಹೋಗುತ್ತಿರುವುದು ಕಂಡು ಅವರಿಗೇ ಕರೆದೆವು. ನಂತರ ಅವರಿಬ್ಬರಿಗೂ ನಡೆದ ವಿಚಾರ ತಿಳಿಸಿದೆವು. ಆ ಪೋಲೀಸು ಇವರು ಇಪ್ಪತ್ತು ಮಂದಿ ಜಗಳಕ್ಕೆ ಬಂದಿದ್ದಾರೆ ಎಂದು ಆಫೀಸರಿಗೆ ತಿಳಿಸಿದ. ಅದಕ್ಕೆ ನಾವು ನಮಗೆ ಕನ್ನಡದಲ್ಲಿ ಮಾತಾಡುತ್ತೇವೆ ಎಂದು, ಬೇರೆ ಏನೇನೋ ಕಾರಣ ಹೇಳಿ ಮೊಬೈಲು ಕೊಡುತ್ತಿಲ್ಲ ಎಂದು ತಿಳಿಸಿದೆವು. ಕಡೆಗೆ ಬೇರಾವುದೇ ತೊಂದರೆಯಿಲ್ಲದಂತೆ ಮರಳಿ ಮೊಬೈಲು ಸಿಕ್ಕಿದ್ದಕ್ಕೆ ಅಲ್ಲಿದ್ದ ಕಸಗುಡಿಸುವವರು ಮತ್ತು ಇತರೆ ಕೆಲಸಗಾರರು ನಿಮ್ಮ ಅದೃಷ್ಟ. ಇಲ್ಲದಿದ್ದರೆ ೫೦೦-೬೦೦ ರೂ. ಕೊಟ್ಟು ಬಿಡಿಸಿಕೊಳ್ಳಬೇಕಿತ್ತು. ಇಲ್ಲವಾದರೆ, `ಅವರೇ' ಸಿಮ್ ತೆಗೆದು ನಿಮ್ಮ ಮೊಬೈಲನ್ನು ನಿಮಗೇ ಮಾರುತ್ತಿದ್ದರು ಎಂದು ತಿಳಿಸಿದರು. ಇನ್ನಿಬ್ಬರು ಯಾತ್ರಿಕರಿಗೂ ಇದೇ ಅನುಭವವಾಗಿ ಕೊನೆಗೆ ತಲಾ ರೂ. ೫೦೦ ಆ ಪೋಲೀಸಿಗೆ ಕೊಟ್ಟು ವಾಪಾಸು ತೆಗೆದುಕೊಂಡೆವೆಂದು ತಿಳಿಸಿದರು. ತಿರುಪತಿಯಲ್ಲಿ ಇದೇ ಒಂದು ದಂಧೆಯಾಗಿರುವಂತೆ ಕಾಟೇಜು ಹಾಲುಗಳಲ್ಲಿ ಕೆಲಸ ಮಾಡುವವರ ಮಾತಿನಲ್ಲಿ ವ್ಯಕ್ತವಾಗಿದ್ದನ್ನು ಕಾಣಬಹುದಾಗಿತ್ತು. ನಿಮ್ಮ ಮೊಬೈಲಿಗೆ ನೀವೆ ಹಣ ಕೊಡುವಂತೆ ಆಗದಿರಲು ಎಚ್ಚರಿಕೆ ವಹಿಸಿ ಎಂಬ ಪಾಠವೂ ಕಲಿತಂತೆ ಆಯಿತು. ತಿರುಪತಿಗೆ ಹೋದರೆ ಮೊಬೈಲು ಒಯ್ಯದಿರಿ ಅಥವಾ ಲಾಕರುಗಳಿಗೆ ಬೀಗ ಹಾಕಿದ್ದರೂ ನಿಮ್ಮ ಮೊಬೈಲು ಚಾಚ್೯ಗೆ ಹಾಕಿದ್ದರೆ ಮೊಬೈಲು ಜೊತೆಯಲ್ಲಿಯೇ ಕುಳಿತಿರಿ. ಇಲ್ಲವಾದರೆ `ತಿರುಪತಿ' ಯಲ್ಲಿ ಮೋಸ ಹೋದೀರಿ!
ಬುಧವಾರ, ಏಪ್ರಿಲ್ 15, 2009
ಬ್ರೂಸ್ ಲೀ ನುಡಿಗಳು
ಮೊನ್ನೆ ದಿನ ನನ್ನ ಕ್ಯಾಮೆರಾಕ್ಕೆ ಸೆಲ್ ಹಾಕಿ ಪರೀಕ್ಷಿಸುವಾಗ ಸುತ್ತ ಕಣ್ಣಾಡಿಸಿದೆ. ಯಾವುದಾದ್ರೂ ಚಿತ್ರ ತೆಗೆಯೋಕೆ. ಯಾವ ಚಿತ್ರ ತೆಗೆಯೋದು? ಕಿಟಕಿಯಿಂದ ಬರೀ ಒಣಹುಲ್ಲುಗಳು ಕಾಣುತ್ತಿವೆ. ಸರಿ, ಕಚೇರಿಯಲ್ಲಿ ಗಣಕಯಂತ್ರ, ಪಂಖಾ ಇತ್ಯಾದಿ ಕಾಣಿಸಿತು. ಇವೆಲ್ಲ ಸರಿಯಲ್ಲ ಅನಿಸಿತು. ಹಾಗೇ ನನ್ನ ಬಲಗಡೆಗೆ ತಿರುಗಿದೆ. ಅದೇ ದಿನವೂ ನೋಡುತ್ತಿದ್ದ ಕೋಟುಗಳು. ಇವು ಅಂತಿಂತಹ ಕೋಟುಗಳಲ್ಲ. ಒಂದು ಕಾಲದಲ್ಲಿ ಜಗತ್ತಿನ ಸಿನೆಮಾ ಪ್ರೇಮಿಗಳಿಗೆ ಅದರಲ್ಲಿಯೂ ಯಾವುದೇ ಹಿರಿ-ಕಿರಿ ಎಂಬ ಭೇದಭಾವವಿಲ್ಲದೆ ರಂಜಿಸಿದ, ಅತಿ ಕಿರಿಯ ವಯಸ್ಸಿನಲ್ಲಿಯೇ ಅಗಲಿದ ಕರಾಟೆ ಕಿಂಗ್ `ಬ್ರೂಸ್ ಲೀ'ಯ ನುಡಿಮುತ್ತುಗಳು. ನನ್ನ ಕಚೇರಿ ಕೊಠಡಿಯಲ್ಲಿ ಬ್ರೂಸ್ ಲೀ ನುಡಿಗಟ್ಟುಗಳನ್ನು ಪ್ರಿಂಟಿಸಿ ಹಾಕಿಕೊಂಡಿದ್ದೆ. ಅದನ್ನೇ ಕ್ಯಾಮೆರಾದಲ್ಲಿ ಸೆರೆಹಿಡಿದೆ.
ಇಂದಿನ ಸ್ಪರ್ಧಾತ್ಮಕ ಜೀವನದಲ್ಲಿ ಮೊದಲಿಗೆ ಅಳವಡಿಸಿಕೊಳ್ಳಬೇಕಾದ ಒಂದಂಶವನ್ನು `ಬ್ರೂಸ್ ಲೀ' ಯ ಈ ನುಡಿಯನ್ನು ಮನನ ಮಾಡಿಕೊಂಡರೆ ಜೀವನ ಸುಖವೆಂಬುದರಲ್ಲಿ ಎರಡು ಮಾತಿಲ್ಲ ಅಲ್ಲವೇ ಎಂದು ಒಂದು ಕ್ಷಣ ಅನಿಸಿತು. ಅದೇನೆಂದರೆ, ಅದೇನೆಂದರೆ, ಕಾಂಪಿಟಿಷನ್: ಇಟ್ ರಿಕ್ವೈರ್ಸ್ ಕಂಟ್ರೋಲ್ಡ್ ಕ್ರುಯೆಲ್ಟಿ. (ಫೋಟೋ: ಚಂದ್ರಶೇಖರ ಬಿ.ಎಚ್. ೨೦೦೯)
ನಿಮಗೇನನ್ನಿಸರಬಹುದು? ಎಂದು ಕ್ಷಣ ಕುತೂಹಲದಿಂದ ಕಾದಿರುವೆ.
ವಿಶ್ವಾಸದೊಂದಿಗೆ,