ಬುಧವಾರ, ಏಪ್ರಿಲ್ 22, 2009

ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು, ನಿನ್ನ ಕೂಡಿ ಆಡಲೆಂದು ಬಂದೆ ನಾನು

ಇಂದು ಅರ್ಥ್ ಡೇ ಅಂತೆ. ಅಂದರೆ ಭೂಮಿ ದಿನ. ಈ ದಿನಾಚರಣೆ ಹೇಗೆ ಆರಂಭವಾಯಿತು?
ಪ್ರತಿ ವರ್ಷದ ಏಪ್ರಿಲ್‌ ೨೨ ರಂದು ಭೂಮಿದಿನವನ್ನು ಆಚರಿಸಲಾಗುತ್ತದೆ. ಭೂಮಿಯ ಮೇಲಿನ ವಾತಾವರಣ, ಪರಿಸರದ ಇತ್ಯಾದಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲು ಗೇಲಾರ್ಡ್ ನೆಲ್ಸನ್‌ (Gaylord Nelson) ಕಾರಣೀಕರ್ತರು. ೧೯೭೦ ರ ಏಪ್ರಿಲ್‌ ೨೨ ರಂದು ಆಚರಿಸಲಾಯಿತು. ಇದನ್ನು ಪ್ರತೀ ವರ್ಷವೂ ಅನೇಕ ದೇಶಗಳಲ್ಲಿ ಆಚರಿಸುತ್ತಾರೆ. ಏಪ್ರಿಲ್‌ ೨೨ರಂದು ಭೂಮಿಯ ಉತ್ತರ ಭಾಗದಲ್ಲಿ ವಸಂತಕಾಲವಿದ್ದರೆ ಮತ್ತು ದಕ್ಷಿಣದಲ್ಲಿ ಶರದೃತುವಿನ ಕಾಲಗಳ ಆರಂಭವಾಗಿರುತ್ತವೆ.
ಆದರೆ ಯೂನೈಟೆಡ್‌ ನೇಷನ್ಸ್ ಈ ದಿನವನ್ನು ಮಾರ್ಚ್ ೨೦ ರಂದು (ಅಂದರೆ ಮಾರ್ಚ್ ಈಕ್ವಿನಾಕ್ಸ್) ಆಚರಣೆಗೆ ಸ್ಥಾನ ಕಲ್ಪಿಸಿದವರು ಶಾಂತಿ ಪ್ರತಿಪಾದಕನೆನೆಸಿದ್ದ ಜಾನ್ ಮೆಕನಾಲ್‌ (JOhn McConnel). ೧೯೬೯ರಲ್ಲಿ ಈ ಆಚರಣೆಗೆ ನಾಂದಿ ಹಾಡಿದರು.
ಹೆಚ್ಚಿನ ವಿವರಗಳಿಗಾಗಿ http://en.wikipedia.org/wiki/Earth_Day ಇಲ್ಲಿ ವೀಕ್ಷಿಸಿ.
ಪ್ರತಿದಿನವೂ ಭೂಮಿದಿನ ಎಂದೂ ಕರೆಯಬಾರದೇಕೆ? ಪ್ರಶ್ನೆ ಹೀಗೆ ಸಾಗುತ್ತದೆ. ವೀಕ್ಷಿಸಿ: If only it were so. Why it may be time to give up the one-day-a-year celebration (http://www.newsweek.com/id/194845)

ಸರಿ. ಇವೆಲ್ಲ ಪಾಶ್ಚಿಮಾತ್ಯರ ದೃಷ್ಟಿಯಲ್ಲಿ ಒಂದು ದಿನ ನಿಗದಿ ಪಡಿಸಿದ್ದರೆ, ಪ್ರತಿದಿನವನ್ನೂ ನಾವು ಭೂದಿನವನ್ನಾಗಿ ಆಚರಿಸುವುದಿಲ್ಲವೆ? ಹೇಗೆಂದರೆ, ಪ್ರತಿ ದಿನದ ಮುಂಜಾನೆ ನಿದ್ದೆಯಿಂದೆದ್ದು ನಡೆವಾಗ ಸಂಸ್ಕೃತದ ಈ ಶ್ಲೋಕವೊಂದನ್ನು ಪಠಿಸುವವರು ಹಲವರು: ಅದು ಹೀಗಿದೆ.
ಸಮುದ್ರವಸನೇ ದೇವೀ ಪರ್ವತಸ್ತನ-ಮಂಡಲೇ
ವಿಷ್ಣುಪತ್ನಿ ನಮಸ್ತುಭ್ಯಂ ಪಾದ ಸ್ಪರ್ಶ ಕ್ಷಮಸ್ವಮೇ
ಅಮ್ಮಾ, ಭೂಮಿ ತಾಯಿ, ಯಾರು ಸಮುದ್ರವನ್ನೇ ವಸನ (ವಸ್ತ್ರ) ವನ್ನಾಗಿ ಮಾಡಿಕೊಂಡಿರುವೆಯೋ, ಪರ್ವತ-ವನಗಳನ್ನು ದೇಹವನ್ನಾಗಿ ಮಾಡಿಕೊಂಡಿರುವರೋ, ವಿಷ್ಣುವಿನ ಪತ್ನಿಯಾಗಿರುವಳೋ ಅವಳಿಗೆ ಶಿರಬಾಗುತ್ತೇನೆ. ನನ್ನ ಪಾದಗಳು ನಿನ್ನನ್ನು ಸ್ಪರ್ಶಿಸುವದರಿಂದ ದಯೆಯಿಂದ ಕ್ಷಮಿಸು.
ಎಂತಹ ಅರ್ಥಗರ್ಭಿತವಾಗಿದೆಯಲ್ಲವೇ.
ಆದರೆ ಇಂದಿನ ದಿನಗಳಲ್ಲಿ ಹಾಗೂ ಅನಾದಿಕಾಲದಿಂದ ಮಾನವನು ತನ್ನ ಆಕಾಂಕ್ಷೆಗಳಿಗಾಗಿ, ದುರಾಸೆಗಳಿಗಾಗಿ ಭೂಮಿಯನ್ನು ನಾನಾ ವಿಧದಲ್ಲಿ ಬಗೆದು, ಹಿಂಸಿಸಿ, ವನಸಂಪತ್ತನ್ನು ಲೂಟಿ ಮಾಡಿ, ವನ್ಯಪ್ರಾಣಿಗಳ ಬೇಟೆಯಾಡಿ, ಈ ಭೂಮಂಡಲದಲ್ಲಿ ನೀರಿನ ಸಮಸ್ಯೆ, ಕಲುಷಿತ ವಾತಾವರಣ, ಅನೇಕ ರೋಗರುಜಿನಗಳಿಗೆ ಕಾರಣನಾಗಿ ವಿಶ್ವದಲ್ಲಿತ ನ್ನ ಇರವನ್ನೇ ನಾಶಮಾಡಿಕೊಳ್ಳುವತ್ತ ಸಾಗುತ್ತಿದ್ದಾನೆ. ಜೊತೆಗೆ ಭೂಮಿಗಾಗಿ ಅನೇಕ ಕದನಗಳೇ ನಡೆದುಹೋಗಿವೆ. ಭೂಮಿ ತಾಯಿ ನೆತ್ತರಬೇಡುತ್ತಾಳೆ ಎಂದೇ ಮಾತು ಆಗಾಗ ಬರುತ್ತಿರುತ್ತದೆ. ಈ ಭೂಮಿಯ ಗುಣವೇ ಹಾಗೆ. ಅಲ್ಲದೆ, ಈ ಭೂಮಿಗಾಗಿ ಬಾಂಬು, ಕೊಲೆ, ಸುಲಿಗೆ ಇತ್ಯಾದಿ ನಡೆದೇ ಇದೆ. ಇವೆಲ್ಲವೂ ಸಹ ಪರಿಸರ ನಾಶಕ್ಕೆ ಕಾರಣ. ಇದೀಗ ಗ್ಲೋಬಲ್‌ ವಾರ್ಮಿಂಗ್‌ ಜಪ ಶುರುವಾಗಿದೆ. ಇವೆಲ್ಲ ಏತಕ್ಕೆ? ಮನುಷ್ಯನ ದುರಾಸೆಯಿಂದ ಹೀಗಾಗುತ್ತಿದೆ. ಪ್ರಕೃತಿ ಮಾನವನ ಆಸೆಯನ್ನು ಪೂರೈಸುತ್ತದೆ, ಆದರೆ ದುರಾಸೆಯನ್ನಲ್ಲ ಎಂದು ಹಿರಿಯರು ಹೇಳಿದ್ದಾರೆ. ಆದರೆ ಇಲ್ಲಿ ಪ್ರತಿದಿನವೂ ನಡೆಯುತ್ತಿರುವುದೇನು?

ಅದೊಂದು ಕಾಲದಲ್ಲಿ:
ಅಮ್ಮ ನಿನ್ನ ತೋಳಿನಲ್ಲಿ ಕಂದ ನಾನು, ನಿನ್ನ ಕೂಡಿ ಆಡಲೆಂದು ಬಂದೆ ನಾನು
ಹೀಗೆ ಹಾಡಿ ಕುಣಿದಾಡುತ್ತಿದ್ದವರು. ನಂತರ `ಯಾರೆ ನೀನು ಸುಂದರ ಚೆಲುವೆ ಒಬ್ಬಳೆ ನಿಂತಿರುವೆ, ಹಸಿರು ಸೀರೆಯುಟ್ಟು ...ಒಬ್ಬಳೆ ನಗುತಿರುವೆ' ಎಂದಿದ್ದೂ ಆಯಿತು.

ಆದರೆ, ಇದೀಗ
`ಈ ಭೂಮಿ ಬಣ್ಣದ ಬುಗುರಿ, ಶಿವನೇ ಚಾಟಿಕಣೋ' ಎಂದು ಛಾಟಿಯನ್ನು ನೆನಪಿಸುತ್ತಾ ಹಾಡಿಕೊಳ್ಳುವತ್ತ ಸ್ಥಿತಿಯನ್ನು ಮಾನವನು ಮಾಡುತ್ತಿದ್ದಾನೆ. ಛಾಟಿಯೇಟು ಬೀಳುವವರೆಗೆ ಬುದ್ಧಿ ಬರುವುದಿಲ್ಲ, ಈಗಲೇ ಜಾಗೃತರಾಗಿ ಎಂದು ಈ ದಿನವನ್ನು ಆಚರಿಸುವುದು ಎಲ್ಲ ದೃಷ್ಟಿಯಿಂದಲೂ ಒಪ್ಪಬೇಕಾದ್ದೇ ಎಂದು ನನ್ನ ಅನಿಸಿಕೆ.
ನೀವೇನಂತೀರಿ?

ಕಾಮೆಂಟ್‌ಗಳಿಲ್ಲ: