ಮೊಮೆಂಟ್ಸ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಮೊಮೆಂಟ್ಸ್ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಫೆಬ್ರವರಿ 28, 2012

ಉದಯರವಿಯ ಮೊದಲ ಕಿರಣ..


Photo: ©Chandrashekara B.H. Feb, 2009

ಉದಯರವಿಯ ಮೊದಲ ಕಿರಣ..

ಚುಂಬಿಸಿದೆ ತರುಲತೆಗಳ ಮೇಲಿನ
ಮಿನುಗುತಿರುವ ಇಬ್ಬನಿಯ ಹನಿಗಳನು |
ಮೆಲ್ಲನೆ ನಾಚುತಿವೆ ಹಿಮದ ಮಣಿಗಳು
ಹೂ ದಳದಲಿ, ರವಿಯ ಕಿರಣದಾ ಸ್ಪರ್ಶಕೆ ||

ದಿನಕರನ ಪ್ರೀತಿಯ ಪ್ರಥಮ ಕಿರಣ
ತಂದಿದೆ, ಇಳೆಯ ಜೀವಿಗಳೀಗೆ ಹೊಸ ಚೇತನ |
ಬಾನಿನಲ್ಲಿ ಹರಡಿರುವ ಮೇಘಗಳ ನಡುವಿನಲ್ಲಿ,
ತಂಗಾಳಿಯ ಸೊಬಗಿನಲ್ಲಿ ಹಕ್ಕಿಗಳ ಪಯಣ ||

ಇದನೆಲ್ಲ ಕಂಡು ಮುದದಿಂದ ಹಾಡುತಿದೆ, ನನ್ನ ಮನ
ಓ ರವಿರಾಜನೆ, ನಿನಗೆ ನಮನ, ನೀನೆ ನಮ್ಮ ಬಾಳಿನ
ದಾರಿಯ ದೀವಿಗೆ, ನೀನಲ್ಲದೆ ನಮಗಿನ್ನಾರು
ತೋರುವರು ದಾರಿಯನು, ಆ ಹಾದಿ ಸೇರಿಸುವ ಗುರಿಯನ್ನು ||

- ಚಂದ್ರಶೇಖರ ಬಿ. ಎಚ್. ೧೪೬೯೧

ಗುರುವಾರ, ಜನವರಿ 12, 2012

ರಾಷ್ಟ್ರೀಯ ಯುವ ದಿನ - ಜನವರಿ ೧೨ - ಸ್ವಾಮಿ ವಿವೇಕಾನಂದರ ಜನ್ಮದಿನ

 ಅಪ್ರತಿಮ ದೇಶಭಕ್ತ, ಸಂನ್ಯಾಸಿ, ವಿರಕ್ತ, ತೇಜೋವಂತ, ಯುವಶಕ್ತಿಯ ಚೇತನ, ಶ್ರೀ ರಾಮಕೃಷ್ಣ ಪರಮಹಂಸರ ಪ್ರಿಯ ಶಿಷ್ಯ, ಪ್ರೀತಿಯ ನರೇನ್, ಶಾರದಾ ಮಾತೆಯ ಪುತ್ರ, ಭಾರತೀಯತೆಯ ಸಂಕೇತ, ಜನ್ಮದಿನ ಇಂದು. ಜಗತ್ತಿಗೆ ಸನಾತನ ಧರ್ಮವನ್ನು ತಿಳಿಹೇಳಿದ, ಭಾರತೀಯತೆಯನ್ನು ಸಾರಿದ, ಶ್ರೀ ಸ್ವಾಮಿ ವಿವೇಕಾನಂದರ  ಅವತಾರವಾಗಿ ೧೪೯ ವರ್ಷವಾಗಿದೆ (ಜನವರಿ ೧೨, ೧೮೬೩).  ಇಂತಹ ಮಹಾನ್‌ ತೇಜಸ್ವಿಯನ್ನು ನೆನೆವ ದಿನ ಹಾಗೂ ಅದಕ್ಕೆಂದೇ ಭಾರತದಲ್ಲಿ 'ರಾಷ್ಟ್ರೀಯ ಯುವ ದಿನವೆಂದು' ಆಚರಿಸಲಾಗುತ್ತಿದೆ.  ಇಂದಿನ ಶಕ್ತಿಯೇ ಯುವಶಕ್ತಿ ಎಂದು ನುಡಿದಿದ್ದ ವಿವೇಕಾನಂದರಿಗೆ ನಮ್ಮ ನಮನಗಳು.

ಅವರ ಕೆಲವು ಧೀರೋದಾತ್ತ ನುಡಿಗಳನ್ನು ಇಲ್ಲಿ ಸ್ಮರಿಸೋಣ. ಒಂದೊಂದೂ ಸಹ ಎಂತಹ ಚೇತನವನ್ನು ಕೊಡುತ್ತದೆ, ಅಲ್ಲವೇ?

Never think there is anything impossible for the soul. It is the greatest heresy to think so. If there is sin, this is the only sin; to say that you are weak, or others are weak.

Our duty is to encourage every one in his struggle to live up to his own highest idea, and strive at the same time to make the ideal as near as possible to the Truth.

The will is not free - it is a phenomenon bound by cause and effect - but there is something behind the will which is free.

The world is the great gymnasium where we come to make ourselves strong.

You cannot believe in God until you believe in yourself.

Take up one idea. Make that one idea your life - think of it, dream of it, live on idea. Let the brain, muscles, nerves, every part of your body, be full of that idea, and just leave every other idea alone. This is the way to success.

ಸ್ವಾಮಿ ವಿವೇಕಾನಂದರಿಗೆ ನಮೋನಮ:
ಇದನ್ನೂ ನೋಡಿ: 
http://kshanachintane.blogspot.com/2010/01/blog-post_11.html

ಬುಧವಾರ, ಏಪ್ರಿಲ್ 6, 2011

ರೂಪದರ್ಶಿ

ಮಾರ್ಚ್ ೨೭, ೨೦೧೧ ರಂದು ಸೃಷ್ಟಿ ವೆಂಚರ್‍ಸ್‌ರವರು ಪುಸ್ತಕ ಪರಿಷೆ ಏರ್ಪಡಿಸಿದ್ದರು. ಅಲ್ಲಿ ಹೋಗುವ ಮನಸ್ಸಿತ್ತು. ಶ್ಯಾಮಲಾ ಜನಾರ್ಧನ ಅವರೂ ಬರುತ್ತೇನೆ ಎಂದಿದ್ದರು. ಬೆಳಗ್ಗೆಯೇ ಬಸ್ಸಿನಲ್ಲಿ ಪಯಣಿಸುತ್ತಾ ಸ್ನೇಹಿತ ಶ್ರೀನಾಥ್‌ ಗೆ ಫೋನ್‌ ಮಾಡಿದೆ. ಹೋಗೋಣವಂತೆ. ನಮ್ಮನೇಗೆ ಬನ್ನಿ ಎಂದರು. ಅವರ ಮನೆಗೆ ಭೇಟಿ ಕೊಟ್ಟ ಮೇಲೆ, ಶ್ಯಾಮಲಾರಿಗೆ ಸಂದೇಶ ಕಳಿಸಿದೆ. ನಾವಿನ್ನು ಅಲ್ಲಿಗೆ ತಲುಪುವಷ್ಟರಲ್ಲಿ ನಮಗಾಗಿ ಅಲ್ಲಿ ಕಾದಿದ್ದರು. ಕುಶಲೋಪರಿಯಾದ ಮೇಲೆ ಮಹಡಿ ಹತ್ತಿ ಪುಸ್ತಕ ಪರಿಷೆಯ ಸಭಾಂಗಣಕ್ಕೆ ಕಾಲಿರಿಸಿದೆವು.

ಅಚ್ಚರಿಯಾಯಿತು. ನಾನು ಬಹಳ ದಿನಗಳಿಂದ ಹುಡುಕುತ್ತಿದ್ದ ಪುಸ್ತಕ ಸಿಕ್ಕೇ ಬಿಟ್ಟಿತು. ಅದೂ ಮೊದಲ ಬಾರಿಗೆ ಪುಸ್ತಕವನ್ನು ಜೋಡಿಸಿಟ್ಟಿದ್ದ ಪೆಟ್ಟಿಗೆಯೊಳಗೆ ತಕ್ಷಣವೇ ಸಿಕ್ಕಿತ್ತು. ಖುಷಿಯಾಗಿತ್ತು. ಅದು, ಗೊರೂರು ರಾಮಸ್ವಾಮಿ ಅಯ್ಯಂಗಾರರ `ಅಮೇರಿಕದಲ್ಲಿ ಗೊರೂರು'. ಬಹಳ ಖುಷಿಯಾಯಿತು. ಹೀಗೆಯೆ ಇನ್ನೂ ಬೇರೆ ಬೇರೆ ಪುಸ್ತಕಗಳ ಹೆಸರನ್ನು, ಟಿಪ್ಪಣಿಗಳನ್ನು ಓದುತ್ತಾ/ಹುಡುಕುತ್ತ ಹೋದಂತೆ, ಮತ್ತೊಂದು ಅಪರೂಪದ ಪುಸ್ತಕ ಸಿಕ್ಕಿತು. ಒಬ್ಬರಿಗೆ ಒಂದು ಪುಸ್ತಕ ಉಚಿತ ಎಂದು ಪದೇ ಪದೇ ಬಿತ್ತರಿಸುತ್ತಿದ್ದರು. ಎರಡು ಪುಸ್ತಕದಲ್ಲಿ ಯಾವುದನ್ನು ತೆಗೆದುಕೊಳ್ಳುವುದು? ಎಂಬ ಯೋಚನೆ ಶುರುವಾಯಿತು. ಸರಿ. `ಅಮೇರಿಕದಲ್ಲಿ ಗೊರೂರು' ಪ್ರಕಾಶನ ಸಂಸ್ಥೆಯ ಹೆಸರನ್ನು ನೋಡಿದೆ. ಸ್ನೇಹಿತರೊಂದಿಗೆ ಚರ್ಚಿಸಿದಾಗ, ಈ ಪುಸ್ತಕ ಸಾಹಿತ್ಯ ಪರಿಷತ್ತಿನಲ್ಲಿ ಸಿಗುತ್ತದೆ. ಆದರೆ, ಇನ್ನೊಂದು (ಆಯ್ಕೆ ಮಾಡಿದ್ದ ಮತ್ತೊಂದು ಪುಸ್ತಕ) ಅಪರೂಪದ್ದು. ಅದು ಸಿಗುವುದು ಕಷ್ಟ ಎಂದರು. ನಾನೂ ಯೋಚಿಸಿದೆ. ಕೊನೆಗೆ `.... ಗೊರೂರು' ಬಿಟ್ಟು `ಅಪರೂಪದ' ಪುಸ್ತಕ ತೆಗೆದುಕೊಂಡೆ.

ಅದು ಕೆ.ವಿ. ಅಯ್ಯರ್‌ ಅವರ `ರೂಪದರ್ಶಿ'. ಇದು ೧೯೫೦ ರ ಆಸುಪಾಸಿನಲ್ಲಿ ರೀಡರ್‍ಸ್ ಡೈಜೆಸ್ಟಿನಲ್ಲಿ ಪ್ರಕಟವಾಗಿದ್ದ ಒಂದೆರಡು ಪುಟದ ಬರಹವೇ ಬೃಹತ್‌ ಕಾದಂಬರಿಯಾಗಿ ಶ್ರೀ ಕೆ.ವಿ. ಅಯ್ಯರ್‌ ಅವರಿಂದ ಬರೆಯಲ್ಪಟ್ಟಿದ್ದು. `ರೂಪದರ್ಶಿ' ಓದುತ್ತಿದ್ದೇನೆ. ಸದ್ಯಕ್ಕೆ ಇಷ್ಟು ಸಾಕೆನಿಸಿದೆ. ಪೂರ್ತಿ ಓದಿದ ಮೇಲೆ `ರೂಪದರ್ಶಿ' ಯ ಬಗ್ಗೆ ಬರೆಯುವ ಎಂಬ ಆಲೋಚನೆ ಇದೆ. ನೋಡೋಣ....

ಮತ್ತೊಬ್ಬ ಮಿತ್ರ ಹರ್ಷ ಸಾಲಿಮಠರೂ ಸಿಕ್ಕದ್ದರು. ಒಟ್ಟಿನಲ್ಲಿ ಒಂದು ಪುಸ್ತಕ ಪರಿಷೆಯಿಂದಾಗಿ ಬಹಳಷ್ಟು ದಿನಗಳಿಂದ ಭೇಟಿಯಾಗದಿದ್ದ ಮಿತ್ರರ ಭೇಟಿಯಾಗಿತ್ತು.

ಚಂದ್ರಶೇಖರ ಬಿ.ಎಚ್.

ಸೋಮವಾರ, ಡಿಸೆಂಬರ್ 27, 2010

ಮೈ ಜರ್ನಿ ಇನ್ ಥಿಯೇಟರ್ಸ್ - ಶ್ರೀಮತಿ ಅರುಂಧತಿ ನಾಗ್

Smt.Arundhatinag - Photo by Chandrashekara BH, Dec2010೧೦.೧೨.೨೦೧೦ - ಇಂದು ನಮ್ಮ ಸಂಸ್ಥೆಗೆ ಶ್ರೀಮತಿ ಅರುಂಧತಿ ನಾಗ್ ಬರುತ್ತಾರೆಂದು ತಿಳಿದು ಖುಷಿಯಾಯಿತು. ಕಾರಣ, ಆಕೆಯ ಭಾಷಣ ಕೇಳುವ ಅವಕಾಶ. `ಮೈ ಜರ್ನಿ ಇನ್ ಥಿಯೇಟರ್ಸ್' ಎಂಬುದು ಭಾಷಣದ ಶೀರ್ಷಿಕೆಯಾಗಿತ್ತು.

ಅವರು ಕನ್ನಡದಲ್ಲಿಯೇ ತಮ್ಮ ನಾಟಕ ಜೀವನವನ್ನು ಶುರು ಮಾಡಿದರಾದರೂ, ನಮ್ಮ ಸಂಸ್ಥೆಯಲ್ಲಿ ಎಲ್ಲಾ ಭಾಷಿಕರೂ (ಭಾರತದೆಲ್ಲೆಡೆಯಿಂದ ಬಂದವರು ಇಲ್ಲಿದ್ದಾರೆ) ಹಾಗೂ ಕೆಲವು ವಿದೇಶೀ ಸಂದರ್ಶಕರೂ ಇರುವುದರಿಂದ ಆಂಗ್ಲ ಭಾಷಯೆಯಲ್ಲಿಯೇ ಮುಂದುವರೆಸಿದರು.

ಅವರು ಶಾಲೆಗೆ ಹೋಗುವಾಗಲೇ ನಾಟಕ ರಂಗಕ್ಕೆ ಬಂದರಂತೆ. ತಮ್ಮ ೧೬-೧೭ನೇ ವಯಸ್ಸಿಗೇ. ಕುತೂಹಲಕ್ಕೆಂದು ನಾಟಕ ಕಂಪನಿಗೆ ಹೋದಾಗ ಅಲ್ಲಿದ್ದವರಿಂದ ನೀನು ನಾಟಕ ಮಾಡ್ತೀಯಾ? ಎಂದರಂತೆ. ಅದಕ್ಕೆ ನನಗೆ ನಟನೆ ಬರೋದಿಲ್ಲ, ಹೇಳಿಕೊಟ್ಟರೆ ಮಾಡುವೆ ಎಂದರಂತೆ. ಹೀಗೆ ಅವರ ನಾಟಕ ಜೀವನರಂಗಪ್ರವೇಶವಾಗಿದ್ದೆಂದರು. ರಂಗ ಕ್ಷೇತ್ರದಲ್ಲಿದ್ದಂತಹವರು ಕೈಫಿ ಅಜ್ಮಿ, ಎ.ಕೆ. ಹಾನಗಲ್, ವಿರಾಜ್‌ಕಪೂರ್‌ ಹೀಗೆ ಬಹಳಷ್ಟು ಪ್ರಸಿದ್ಧರಂತೆ. ನಂತರ ನಾಟಕವೇ ಅವರ ವೃತ್ತಿ-ಪ್ರವೃತ್ತಿಯಾಯಿತೆಂದು ತಿಳಿಸಿದರು. ಹುಟ್ಟಿದ್ದು ದೆಹಲಿಯಲ್ಲಿ. ನಾಟಕವೆಂದು ಬಂದಿದ್ದು ಮುಂಬೈಗೆ, ನಂತರ ಕರ್ನಾಟಕ ಸೇರಿದ್ದು ಹೀಗೆ ತಮ್ಮ ಜೀವನವೃತ್ತಾಂತವನ್ನು ತಿಳಿಸಿದರು. ಶಂಕರನಾಗ್ ಮತ್ತು ಇವರ ನಾಟಕದ ದಿನಗಳನ್ನು ನೆನಪಿಸಿಕೊಂಡರು. ಆಗಿನ ಕಾಲದಲ್ಲಿಯೇ ಇವರಿಗೆ ತಿಂಗಳಿಗೆ ಹತ್ತುಸಾವಿರದವರೆವಿಗೂ ವರಮಾನವಿತ್ತಂತೆ...

ಒಂದಾನೊಂದು ಕಾಲದಲ್ಲಿ ಚಿತ್ರದೊಂದಿಗೆ ಶಂಕರ್‌ನಾಗ್‌ ಸಿನಿಮಾ ಸೇರಿದ್ದು. ಆತನ ಸಿನೆಮಾ ಬದುಕು, ಸಿನಿಮಾ ಭರ್ಜರಿ ಪ್ರದರ್ಶನವಾಗಿದ್ದು, ಸೀತಾರಾಮುವಿನಿಂದ ಮತ್ತಷ್ಟು ಚಿತ್ರಗಳಲ್ಲಿ ಶಂಕರ್‌ನಾಗ್‌ ತೊಡಗಿಕೊಂಡಿದ್ದು, ಮಾಲ್ಗುಡಿ ಡೇಸ್‌... ಹೀಗೆ ಸಾಗಿತ್ತು.

ಇದರ ಜೊತೆಗೆ ಇವರ ಮರಾಠಿ ನಾಟಕಗಳು, ಗುಜರಾತಿ, ಛಾಪೇಕರ್‍ ಸೋದರರ ಜೀವನಾಧಾರಿತ ಚಿತ್ರದಲ್ಲಿ ನಟಿಸಿದ್ದು, ಇವೆಲ್ಲ ಹೇಳಿದರು. ಹಾಗೆಯೇ ಶಂಕರನಾಗನನ್ನು ಕಳೆದುಕೊಂಡಾಗ ಅನುಭವಿಸಿದ ದು:ಖ, ನಷ್ಟ. ಅದರಲ್ಲಿಯೂ ಆತನು ಕಂಡ ಕನಸುಗಳನ್ನು ಸಾಕಾರಗೊಳಿಸಲು ಶ್ರಮಿಸಿದ್ದು ಈ ಹತ್ತು ವರ್ಷಗಳಲ್ಲಿ `ರಂಗಶಂಕರ' ಏರಿದ ಎತ್ತರ ಇವೆಲ್ಲವನ್ನೂ ತಿಳಿಸಿದರು.

ಅನೇಕ ಪ್ರಶಸ್ತಿ, ಪುರಸ್ಕಾರಗಳು ಬಂದಿದ್ದರೂ ಸರಳತೆಯಿಂದ ಇರುವ ಅವರ ಗುಣವನ್ನು ಮೆಚ್ಚಬೇಕಾದದ್ದು. ಒಂದು ರೀತಿಯಲ್ಲಿ ಅಹಂ ಎಂಬ ಮೋಹದಿಂದ ಆಕೆ ದೂರ ಇರುವ ಪರಿ ನಿಜಕ್ಕೂ ಅಚ್ಚರಿ ತರಿಸುತ್ತದೆ. ಅಂತಹ ಅಗಾಧ ನೋವಿನೊಡನೆ (ಅಪಘಾತದಿಂದಾಗಿ ಸುಮಾರು ಒಂದೂವರೆ ವರ್ಷ ನಡೆಯಲು ಆಗುತ್ತಿರಲಿಲ್ಲವಂತೆ, ಇದರ ಜೊತೆಗೆ ಶಂಕರನಾಗ್ ತನ್ನ ಕನಸಿನ ರಂಗಕ್ಕೆ, ಸಿನಿಮಾ, ಸಾರ್ವಜನಿಕರಿಗೆ ಉಪಯೋಗ ಮಾಡುವ ಉದ್ಯಮ ಹೀಗೆ ಬಹಳಷ್ಟರಲ್ಲಿ ತೊಡಗಿಸಿ ಸಾಲದ ಹೊರೆಯು ಎರಡೂವರೆಕೋಟಿಗಳಿದ್ದವಂತೆ) `ರಂಗಶಂಕರ' ಸ್ಥಾಪನೆಯ ಸಾಧನೆ ನಿಜಕ್ಕೂ ಮೆಚ್ಚುವಂತಹುದು.

ಕನ್ನಡ ಭಾಷೆಯನ್ನು ಕಲಿತ ಬಗೆಯನ್ನೂ ತಿಳಿಸಿದರು. ಹಿಂದಿ, ಮರಾಠಿ, ಆಂಗ್ಲ, ಗುಜರಾತಿ, ಕೊಂಕಣಿ ಈ ಎಲ್ಲ ಭಾಷೆಗಳನ್ನು ಬಲ್ಲವರಿವರು. ಹಾಗೆಯೇ ನಾಟಕ/ನಟನೆಯಿಂದ ಯಾವುದೇ ವ್ಯಕ್ತಿಯಲ್ಲಿಯೂ ಸಹ ಪರ್ಸನಾಲಿಟಿ ಡೆವಲಪ್‌ಮೆಂಟ್‌ ಆಗುತ್ತದೆ. ನಟನಾಶೈಲಿಯಿಂದ, ಸಂಭಾಷಣಾ ವಿತರಿಸುವ ಕಲೆಯಿಂದ ಯಾವುದೇ ವ್ಯಕ್ತಿಯೂ ಸಹ ತನ್ನನ್ನು ತಾನು ಅಭಿವೃದ್ಧಿಯೊಂದಿಗೆ ಏನನ್ನಾದರೂ ಸಾಧಿಸಬಹುದು. ಸೌಂದರ್ಯವೇ ಮುಖ್ಯವಲ್ಲ ಎಂಬ ಮಾತನ್ನೂ ಹೇಳುತ್ತಾ ತಮ್ಮ ಕೈಗಳೆರಡನ್ನೂ ದೂರ ಚಾಚಿದಾಗ ಪುಟ್ಟದಾಗಿ ಕಂಡರೂ ಅವುಗಳನ್ನೇ ಸ್ವಲ್ಪ ವಿಸ್ತರಿಸುತ್ತಾ ಎತ್ತರಿಸಿದರೆ ಬೃಹತ್ತಾಗಿ ಕಾಣುತ್ತದೆ ಎಂಬಂತ ಸ್ಫೂರ್ತಿದಾಯಕ ಮಾತುಗಳನ್ನು ಆಡಿದರು. ಹೀಗೆ ಅವರ
`ಮೈ ಜರ್ನಿ ಇನ್ ಥಿಯೇಟರ್ಸ್' ಬಗೆಗೆ ತಿಳಿಸಿದರು. ಅಲ್ಲದೇ, ರಂಗಶಂಕರ ಇಂದು ರಂಗವೇದಿಕೆಗಷ್ಟೇ ಅಲ್ಲದೇ ಸಾಮಾಜಿಕ ಜವಾಬ್ದಾರಿಯನ್ನೂ ಮಾಡುತ್ತಿದೆ, ಮಕ್ಕಳಿಗಾಗಿ ಹಾಗೂ ಉದ್ಯೋಗಿಗಳಿಗಾಗಿಯೂ ನಾಟಕದೊಂದಿಗೆ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂಬ ಅಂಶವೂ ತಿಳಿಸಿದರು.

ಒಟ್ಟಿನಲ್ಲಿ ಒಂದು ಸುಂದರ ಸಂಜೆ ನಮ್ಮ ಸಂಸ್ಥೆಯಲ್ಲಿ ಶ್ರೀಮತಿ ಅರುಂಧತಿನಾಗರ ಉಪಸ್ಥಿತಿಯಲ್ಲಿ ನಡೆಯಿತು.

(ಇಲ್ಲಿರುವ ಅವರ ಮಾತುಗಳನ್ನು ನೆನಪಿಸಿಕೊಂಡು ಸರಳವಾಗಿ ಬರೆಯಲು ಪ್ರಯತ್ನಿಸಿದ್ದೇನೆ)

ರಂಗಶಂಕರ ದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಸಂಪರ್ಕಿಸಬಹುದು: www.rangashankara.org/

ನೆನಪಿನ ಬರಹ: ಚಂದ್ರಶೇಖರ ಬಿ.ಎಚ್.

ಗುರುವಾರ, ಡಿಸೆಂಬರ್ 2, 2010

ತಪ್ಪೇ ಮಾಡದವರ್‍ಯಾರವ್ರೆ... ತಪ್ಪೇ ಮಾಡದವರ್‍ ಎಲ್ಲವ್ರೆ???

ತಪ್ಪೇ ಮಾಡದವರ್‍ಯಾರವ್ರೆ... ತಪ್ಪೇ ಮಾಡದವರ್‍ ಎಲ್ಲವ್ರೆ???

ಕೃಷಿ ಭೂಮಿಯಲ್ಲಿ ಅಥವಾ ಹೂದೋಟಗಳಲ್ಲಿ ಬೆಳೆಯ ಜೊತೆಗೆ ಕಳೆಗಳೂ ಬೆಳೆಯುತ್ತವೆ. ಇವುಗಳು ಯಾವುದೇ ಕೃಷಿ ಅಥವಾ ಪೋಷಣೆಯಿಲ್ಲದೆ ಬೆಳೆದುಬಿಡುತ್ತವೆ. ಈ ಕಳೆಗಳನ್ನು ಬೆಳೆಯುವ ಹಂತದಲ್ಲಿಯೇ ಹಾಗೂ ಆಗಾಗ ಕಿತ್ತು ಹಾಕದಿದ್ದರೆ, ಕೈಗೆ ಬರಬಹುದಾದ ಬೆಳೆಗಳನ್ನೆಲ್ಲಾ ನಾಶಮಾಡುವಷ್ಟು ಹುಲುಸಾಗಿ ಆವರಿಸಿಬಿಡುತ್ತವೆ. ಬೆಳೆ ಯಾವುದು? ಕಳೆ ಯಾವುದು? ಎಂದು ತಿಳಿಯುವುದೂ ಕಷ್ಟವಾಗಿ ಕಾಲಿಗೆ ತೊಡರುವಂತೆ ಮಾಡುತ್ತವೆ.

ಮಾನವನ ಅಭ್ಯಾಸಗಳೂ ಹಾಗೂ ದುರಭ್ಯಾಸಗಳು ಸಹ ಹಾಗೆಯೇ. ಅಭ್ಯಾಸಗಳು ನಿಧಾನವಾಗಿ ಒಗ್ಗೂಡುತ್ತಾ ಮಾನವನಲ್ಲಿ ನೆಲೆ ಕಂಡುಕೊಳ್ಳುತ್ತವೆ. ಇದರ ಜೊತೆಗೆ ಸಹವಾಸ ದೋಷವೂ ಸೇರಿದರೆ ಉತ್ತಮ ಅಥವಾ ಅನುಚಿತ ಅಭ್ಯಾಸಗಳೂ ಜೊತೆಗೂಡುತ್ತವೆ. ಕಳೆಗಳೆಂಬ ದುರಭ್ಯಾಸಗಳನ್ನು ಹೊಡೆದೋಡಿಸುವುದಕ್ಕೆಂದೇ ನಮ್ಮ ಮನಸ್ಸನ್ನು ಆಗಾಗ ಪರಿಶೀಲಿಸುತ್ತಿರಬೇಕು. ಜೊತೆಗೆ ಅಂತಹ ಸಂದರ್ಭಗಳನ್ನು ಎದುರಿಸುವ ಶಕ್ಯತೆಯನ್ನೂ ಸಂಪಾದಿಸಬೇಕು. ಕೆಲವೊಮ್ಮೆ ಸ್ನೇಹಿತರ ಬಲವಂತಕ್ಕೋ, ಸಮಾಜದಲ್ಲಿ ಗೌರವ (??) ಸಂಪಾದಿಸುವುದಕ್ಕಾಗಿಯೋ ಒಂದು ಪೆಗ್ ಕುಡಿದರೂ ಅದು ಚಟದಂತೆ ಇವರನ್ನೇ ಹಿಂಬಾಲಿಸುವ ಹಂತಗಳು ಸಾಕಷ್ಟು. ಅಂತಹ ಸಂದರ್ಭವನ್ನು ಆದಷ್ಟೂ ನಿಭಾಯಿಸಿಕೊಂಡು, ದುಶ್ಚಟಗಳನ್ನು ದೂರೀಕರಿಸಬಹುದು. ಇದಕ್ಕೆ ಮನಸ್ಸಿನ ಮೇಲಿನ ಹಿಡಿತ ಬೇಕಿರುತ್ತದೆ.

ಕಾಫೀ ಅಥವಾ ಟೀ ಅಥವಾ ಗುಟ್ಕಾ ಅಥವಾ ಹೊಗೆಸೊಪ್ಪು ಅಥವಾ ಧೂಮಪಾನ ಅಥವಾ ... ಇತ್ಯಾದಿ ಹವ್ಯಾಸಗಳು, ದುರಭ್ಯಾಸಗಳಾಗಿ ಹೋದರೆ ಅವುಗಳನ್ನು ನಿಯಂತ್ರಣಕ್ಕೆ ತಂದು, ಆರೋಗ್ಯವನ್ನು ಮತ್ತೆ ಕಾಪಾಡಿಕೊಳ್ಳುವ ಹಂತಕ್ಕೆ ತರಲು ಹಲವಾರು ಮಾರ್ಗಗಳು, ಚಿಕಿತ್ಸೆಗಳಿರಬಹುದು. ಆದರೆ, ಸ್ವನಿಯಂತ್ರಣದಿಂದ ಮಿತವಾಗಿ, ಹಿತವಾಗಿ ಅಭ್ಯಾಸವಿದ್ದರೆ, ಯಾವುದೇ ಹಾನಿಯಿಲ್ಲ ಎನ್ನಬಹುದು. ಇದರಿಂದ ತನಗಷ್ಟೇ ಅಲ್ಲದೇ ತನ್ನ ನಂಬಿದವರನ್ನೂ ಸಂತೋಷಪಡಿಸಬಹುದು.

ತಪ್ಪನ್ನು ತಿದ್ದಿಕೊಳ್ಳುವ ಮನಸ್ಸುಳ್ಳವರಿಗೆ ಇವೆಲ್ಲ ಹೇಳಬೇಕಿಲ್ಲವಾದರೂ ಕೆಲವೊಮ್ಮೆ... ತಪ್ಪೇ ಮಾಡದವರ್‍ಯಾರವ್ರೆ?? ಅಂತ ಮತ್ತೆ ಮತ್ತೆ ದು-ಅಭ್ಯಾಸಗಳಿಗೆ ಮನಸ್ಸು ಹೋಗುತ್ತಿರುತ್ತದೆ.

ಯಾರಿಂದಲೇ ಆಗಲೀ ಒಳ್ಳೆಯ ಅಭ್ಯಾಸಗಳು ಅಥವಾ ದುರಭ್ಯಾಸಗಳು ಬರಬಹುದು. ಅದನ್ನು ನಾವು ನಮ್ಮಲ್ಲಿ ಅಳವಡಿಸಿಕೊಳ್ಳುವಲ್ಲಿ ನಾವೇ ಮುಖ್ಯವಾಗಿರುತ್ತೇವೆ ಎಂಬುದನ್ನು ಮರೆಯದಿದ್ದರೆ.... ತಪ್ಪು ಮಾಡದವರ್‍ಯಾರವ್ರೆ ?? ಎಂದು ಹಾಡಬೇಕಿಲ್ಲ ಅಥವಾ ನಮ್ಮನ್ನು ಸಮಾಧಾನಗೊಳಿಸಿಕೊಳ್ಳಬೇಕಿಲ್ಲ, ಅಲ್ಲವೇ?

HUMAN FAULTS ARE LIKE GARDEN WEEDS. THEY GROW WITHOUT CULTIVATION AND SOON TAKE OVER THE PLACE IF THEY AREN'T THINNED OUT.

ಶುಕ್ರವಾರ, ನವೆಂಬರ್ 12, 2010

ಮುಸುಕಿದೀ ಮಬ್ಬಿನಲಿ - ಆದರೆ..

Photo: ಚಂದ್ರಶೇಖರ ಬಿಎಚ್ Chandrashekara BH
Behind every cloud is another cloud. - Judy Garland

ಈ ಮಾತನ್ನು ಪ್ರತಿಯೊಬ್ಬ ವ್ಯಕ್ತಿಗೂ ಹಾಗೆಯೇ ಪ್ರತಿಯೊಂದು ಕಷ್ಟನಷ್ಟ-ಸುಖ ಸಂತೋಷಗಳಿಗೂ ಅನ್ವಯಿಸಿಕೊಳ್ಳಬಹುದಲ್ಲವೇ?

ಹಾಗೆಯೇ ಪ್ರತಿಯೊಂದು ಸುಂದರ ಕ್ಷಣಗಳನ್ನೂ ಈ ರೀತಿ ತಿಳಿಯಬಹುದಲ್ಲವೆ? Happiness is like a cloud, if you stare at it long enough, it evaporates. - Sarah McLachlan

ಪತ್ರಿಕೋದ್ಯಮ ವಿಷಯಕ್ಕೆ ಬಂದರೆ ಹೀಗೂ ಅಂದುಕೊಳ್ಳಬಹುದು: In journalistic terms, syndication is equivalent to ascending to heaven on a pillar of cloud. - John Skow

ಮೋಡದ ಮುಸುಕು ಇದೀಗ ಹೊರಗೆ ಕವಿದಿದೆ ನಿನ್ನೆ ಮೊನ್ನೆಯಿಂದ, ಅದರ ಹಿಂದೆಯೇ ಆಶಾಭಾವನೆಗಳ ಹೊಂಗಿರಣಗಳನ್ನು ಕಾಣಬೇಕಾದರೆ ಹೀಗಿರಬೇಕಲ್ಲವೆ? Climb up on some hill at sunrise. Everybody needs perspective once in a while, and you'll find it there. ~Robb Sagendorph


ಕೃಪೆ: ಆಕರಗಳಿಂದ ಆರಿಸಿದ್ದು.

ಬುಧವಾರ, ನವೆಂಬರ್ 3, 2010

ಬದುಕೊಂದು ಪಯಣ

Photo:Chandrashekara B.H.Sept2010
ಬದುಕೊಂದು ಪಯಣ

ಹುಟ್ಟೆಂಬುದು ಆರಂಭ
ಸಾವೆಂಬುದು ಅಂತ್ಯದ ತಾಣ

ನಡುವಿಹುದು ಜೀವನ ಪಯಣ

ಶೈಶವದಿಂದ ಬಾಲ್ಯದೆಡೆಗೆ
ಯೌವ್ವನದಿಂದ ಹಿರಿತನದೆಡೆಗೆ
ಸಾಗುತಿಹುದು ಜೀವನ ಪಯಣ

ಅಜ್ಞಾನದಿಂದ ಸುಜ್ಞಾನದೆಡೆಗೆ
ಕೆಲಬಾರಿ ಜ್ಞಾನದಿಂದ ಅಜ್ಞಾನದೆಡೆಗೆ

ಸಾಗುತಿಹುದು ಜೀವನ ಪಯಣ


ಬೆಳಕಿನಿಂದ ಕತ್ತಲೆಡೆಗೆ
ಕತ್ತಲಿಂದ ಬೆಳಕಿನೆಡೆಗೆ
ಸಾಗುತಿಹುದು ಜೀವನ ಪಯಣ

ದೌರ್ಬಲ್ಯದಿಂದ ದೃಢತೆಯೆಡೆಗೆ
ದೃಢತೆಯಿಂ ಜಡತತ್ವದೆಡೆಗೆ

ಸಾಗುತಿಹುದು ಜೀವನ ಪಯಣ


ನಂಬಿಕೆಯಿಂದ ಪ್ರಾರ್ಥನೆಯೆಡೆಗೆ
ಸಶಕ್ತಿಯಿಂದ ಸಹನಾಶಕ್ತಿಯೆಡೆಗೆ
ಸಾಗುತಿಹುದು ಜೀವನ ಪಯಣ

ನಂಬಿಕೆಯಿಂ ಅಪನಂಬಿಕೆಗಳೆಡೆಗೆ
ಸಹನೆಯಿಂದ ಕಡುಕೋಪದೆಡೆಗೆ

ಸಾಗುತಿಹುದು ಜೀವನ ಪಯಣ


ಛಲದಿಂದ ಮುನ್ನುಗುವೆಡೆಗೆ
ಅಂತಸ್ಸತ್ವವನು ಎಬ್ಬಿಸುವೆಡೆಗೆ
ಸಾಗುತಿಹುದು ಜೀವನ ಪಯಣ

ಹಲವೊಮ್ಮೆ ಅಧೈರ್ಯದೆಡೆಗೆ
ಅಂತಸ್ಸತ್ವದಿಂ ನಿಶ್ಶಕ್ತಿಯೆಡೆಗೆ
ಸಾಗುತಿಹುದು ಜೀವನ ಪಯಣ

ಇರಲಿ ಎಂದಿಗೂ ಎದೆಗುಂದದ ಛಲ
ಹಿಂದಿಕ್ಕದ ಹೆಜ್ಜೆ, ಕಾರಣ
ಸಾಗುತಿಹುದು ಜೀವನ ಪಯಣ

ಹುಟ್ಟೆಂಬುದು ಆರಂಭ
ಸಾವೆಂಬುದು ಅಂತ್ಯದ ತಾಣ
ನಡುವಿಹುದು ಜೀವನ ಪಯಣ, ಚಾರಣ


ಚಿತ್ರ-ಕವನ: ಚಂದ್ರಶೇಖರ ಬಿ.ಎಚ್. ೩.೧೧.೨೦೧೦


ಸೋಮವಾರ, ಅಕ್ಟೋಬರ್ 11, 2010

ಹತ್ತು - ಹತ್ತು - ಹತ್ತು - ನೆನಪಿನ ಹೊತ್ತು...

ಮಳೆಗಾಲದಲ್ಲೆರಡು ದಿನ - ಭಾಗ ೧ ರಿಂದ ಭಾಗ ೨ನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ತಯಾರಿಯಲ್ಲಿದ್ದೇನೆ. ಅದರ ನಡುವೆ ವಿಶ್ವದ ಟಿ.ವಿ. ಚಾನಲ್‌ಗಳಲ್ಲಿ ಪ್ರತಿ ೨೦ ನಿಮಿಷಕ್ಕೆ ಒಮ್ಮೆ ಬರುವ ಬ್ರೇಕ್‌ನಂತೆ ನಮ್ಮ ಪ್ರಯಾಣಾನುಭವಕ್ಕೆ ಸದ್ಯ ಒಂದು ಪುಟ್ಟ ವಿರಾಮ ಕೊಟ್ಟಿದ್ದೇನೆ. ಈ ಪುಟ್ಟ ಬ್ರೇಕ್‌ನಲ್ಲಿ ಮತ್ತೊಂದು ನೆನಪಿನ ಕ್ಷಣಗಳ ಕಥನವಿದೆ...
+++++++++++++++
ನಿನ್ನೆ (೧೦.೧೦.೧೦) ಬೆಳಗಿನ ಹತ್ತು ಘಂಟೆಗೆ ಪರಾಂಜಪೆ ಸರ್‍ ದೂರವಾಣಿ ಕರೆಮಾಡಿದ್ದರು. ನಂತರ ಗಾಂಧಿಬಜಾರಿನಲ್ಲಿ ಭೇಟಿಯಾಗುವ ಎಂದು ನಾನು ಹೊರಟೆ. ಸರಿ ಸುಮಾರು ೧೨.೦೦ ಘಂಟೆಗೆ ಭೇಟಿಯಾದೆವು. ಆಗ ತಿಳಿಯಿತು ಮತ್ತೊಬ್ಬ ಬ್ಲಾಗ್‌ ಮಿತ್ರರ ಮನೆಗೆ ಹೋಗುವ ವಿಚಾರ.
ಇದು ಒಂದು ಆಕಸ್ಮಿಕ ಭೇಟಿ ಆಗಿತ್ತು ನನಗೆ!

ಸರಿ ಸುಮಾರು ೧೨.೨೦ ರ ವೇಳೆಗೆ ದೂರವಾಣಿಯಲ್ಲಿ `ನೀವೂ ಖಂಡಿತಾ ಬನ್ನಿ' ಎಂದು (ಪರಾಂಜಪೆ ಸರ್‍, ಅದಾಗಲೇ ಫೋನಿನಲ್ಲಿ ನಾನೂ ಜೊತೆಗಿರುವ ವಿಷಯ ತಿಳಿಸಿದ್ದರು, ಅವರಿಗೆ) ಆಮಂತ್ರಣವಿತ್ತರು. ಒಂದರ್ಧ ಘಂಟೆಯಲ್ಲಿ ರೆಡಿಯಾಗಿರುತ್ತೇನೆ ಎಂದೂ ಅವರು ತಿಳಿಸಿದರು. ಸರಿ... ನಾವು ಪದ್ಮನಾಭನಗರ ಬಸ್‌ ಹತ್ತಿ ಅಲ್ಲಿ ಇಳಿದು ಆಟೋದಲ್ಲಿ ಪ್ರಯಾಣಿಸಿದೆವು. ಅದು ಖೋಡೇಸ್‌ ಬ್ರೂವರೀಸ್ ಹತ್ತಿರದ ಸಿಗ್ನಲ್ಲಿನಲ್ಲಿ ಇಳಿದೆವು. ನಂತರ ಸುಮಾರು ಒಂದೂವರೆ ಕಿ.ಮೀ. ನಡೆದೆವು. ಅಲ್ಲಿಂದ ಅವರ ಮನೆಗೆ ದಾರಿಯನ್ನು ಅವರ ಮಗ ತಿಳಿಸಿದ. ಹೀಗೆ ನಾವಿಬ್ಬರ ಮನೆ ತಲುಪಿದ್ದಾಯಿತು.

ನಂತರದ ಸರದಿ, ಇನ್ನೊಬ್ಬ ಹಿರಿಯ ಮಿತ್ರರು ಮತ್ತು ಅವರ ತಮ್ಮ ಬರುತ್ತಿರುವ ವಿಚಾರವೂ ತಿಳಿಯಿತು.
ಇದೇನಪ್ಪಾ?? ಬರೀ ಕುತೂಹಲವೇ ಇದೆ! ಎಂದು ನಿಮಗನ್ನಿಸಿರಬಹುದು. ಹೌದು. ಇದು ಒಂದು ರೀತಿಯ ಸೆಂಟಿಮೆಂಟಿನಲ್ಲಿ ಕಟ್ಟಿದ ಸ್ನೇಹದ ನಂಟಿನ ಬರಹ ಎನ್ನಬಹುದು.

ಈವರೆಗಿನ ಪೀಠಿಕೆಯಲ್ಲಿಯೇ ಕೆಲವು ಬ್ಲಾಗ್‌ ಮಿತ್ರರಿಗೆ, ನಾವುಗಳು ಯಾರ ಮನೆಗೆ ನಮ್ಮ ಭೇಟಿಕೊಡುತ್ತಿದ್ದೇವೆ ಎಂದು ಗಟ್ಟಿಯಾಗಿ ಊಹಿಸಿರುತ್ತಾರೆ.
ಅದು ಇಟ್ಟಿಗೆ ಸಿಮೆಂಟು - ಕೋಣನಕುಂಟೆಯಲ್ಲಿ ವಾಸವಿರುವ ಬ್ಲಾಗಿಗ ಶ್ರೀ ಪ್ರಕಾಶ್ ಹೆಗ್ಡೆ ಮನೆಗೆ ನಮ್ಮ ಭೇಟಿಯಾಗಿತ್ತು.

ಪರಾಂಜಪೆ ಸರ್‍, ನಿಮ್ಮೊಳಗೊಬ್ಬ ಬಾಲು, ಮತ್ತೊಬ್ಬ ಬಾಲು ಮತ್ತು ನಾನು - ಹೀಗೆ ನಾಲ್ವರ ಭೇಟಿ ಪ್ರಕಾಶಣ್ಣನ ಮನೆಯಲ್ಲಿ ಭೇಟಿಯಾದೆವು. ನಾವಿಬ್ಬರೂ ತುಂಬಾ ಮುಂಚೆಯೇ ಅವರ ಮನೆಗೆ ಹೋದೆವೆನೋ ಅನಿಸಿತು. ಅಲ್ಲಿ ರಾಜಕೀಯ, ಕಾಮನ್‌ವೆಲ್ತ್‌ ಇವುಗಳ ಬಗ್ಗೆ ಚರ್ಚಿಸುತ್ತಿರುವಾಗ ಬಾಲು ಸರ್‌ ದ್ವಯರ ಆಗಮನವಾಯಿತು. ಅದೂ ಇದೂ ಮಾತಾಡುತ್ತಾ... ಅವರ ಮನೆಯವರೆಲ್ಲರ ಪರಿಚಯ ಮಾಡಿಕೊಳ್ಳುತ್ತಾ... ಊಟಕ್ಕೆ ಕುಳಿತಿದ್ದಾಯಿತು.

ಪ್ರಕಾಶಣ್ಣರ ಮನೆ (ನಮ್ಮನೆ) ಯಲ್ಲಿ ಊಟದ ರುಚಿಯ ಸವಿದೆವು. ಪಾಯಸ, ಅಮಟೆಕಾಯಿ ಗೊಜ್ಜು, ಕೆಸುವಿನೆಲೆಯ ಚಟ್ಟಿ, ಬದನೆಕಾಯಿ ಪಲ್ಯ, ಹುಣಸೆ ತೊಕ್ಕು, ತಂಬುಳಿ, ತೊವ್ವೆ ಮತ್ತು ಹಪ್ಪಳ ಎಲ್ಲ ವ್ಯಂಜನಗಳನ್ನೂ ಸವಿದದ್ದಾಯಿತು. ಅಪ್ಪೆ ಹುಳಿಯನ್ನೂ ನೆನಪಿಸಿಕೊಂಡೆವು.
ಊಟದ ನಡುವೆ ಮಾತು ಶಿರಸಿ, ಯಲ್ಲಾಪುರ, ಬನವಾಸಿ, ಎಲ್ಲ ಕಡೆ ಹರಿದಾಡಿತು. ಊಟದ ನಂತರ ರಾಜಕೀಯದ ವಿಷಯ, ನಂತರ ಕವನ, ಕವಿತೆ, ಬ್ಲಾಗಿಗ ಮಿತ್ರರ ಒಂದೆರಡು ಫೋನ್‌ಕರೆಗಳಿಗೆ ಪ್ರಕಾಶಣ್ಣರ ರಿಪ್ಲೈಗಳು, ನಡುನಡುವೆ....ಸ್ವಾರಸ್ಯಕರ ಕಥೆಗಳು... ಗಾದೆಗಳು... ಹೀಗೆ ಸಾಗುತ್ತಾ ಹಿರಿಯ ಸಾಹಿತಿಗಳು, ಯಕ್ಷಗಾನ, ಸಿನೆಮಾ ಎಲ್ಲವೂ ಅಲ್ಲಿತ್ತು. ಅದಾಗಲೇ ಹಸಿದಿದ್ದವರಿಗೆ ಪ್ರೀತಿಯಿಂದ ಉಣಬಡಿಸಿದ ಅವರೆಲ್ಲರಿಗೂ ನಮ್ಮ ಧನ್ಯವಾದಗಳು. ಅನ್ನದಾತೋ ಸುಖೀಭವ:

+++++++++

ಒಂದಷ್ಟು ನೆನಪಿನಿಂದ:

ರಾಜಕಾರಣಿಗಳ ಸರಳತೆಯ ಬಗ್ಗೆ ಒಂದು ವಿಚಾರ ಬಂದಿತು. ಲಾಲಬಹದ್ದೂರ್‌ ಶಾಸ್ತ್ರಿಯವರು ಮತ್ತು ಜಾರ್ಜ್ ಫರ್ನಾಂಡಿಸ್ ಅವರ ಸರಳ ಜೀವನವನ್ನು ಇಂದಿನ ರಾಜಕೀಯ ನೇತಾರರು (??) ಬಗೆಗೆ ಹೋಲಿಸಲೇ ಬಾರದು ಎಂಬುದಾಗಿ...

ತ್ರಿವೇಣಿ, ಎಂ.ಕೆ. ಇಂದಿರಾ, ಡಾ.ಎಸ್.ಎಲ್.ಭೈರಪ್ಪ, ಪೂಚಂತೇ... ಹೀಗೆ ಅವರ ಬರಹಗಳನ್ನು ಅದರಲ್ಲಿಯೂ ತ್ರಿವೇಣಿ, ಎಂ.ಕೆ. ಇಂದಿರಾ ಅವರುಗಳಿದ್ದ ಆಗಿನ ಪರಿಸರದಿಂದ ಮೂಡಿಬಂದ ಕೃತಿಗಳನ್ನೂ ಕುರಿತು ಮಾತಾಡಿದ್ದಾಯಿತು.

ಇನ್ನು ಪ್ರಕಾಶಣ್ಣರು ತಮ್ಮ ಕಾಲೇಜಿಗಿನ ದಿನಗಳಲ್ಲಿ (ಚುನಾವಣೆಗೆ ನಿಂತಾಗ ಭರವಸೆಯಿತ್ತಿದ್ದ ಮಾತಿಗೆ ಹೇಳಿದ್ದ ಅಕ್ಷರಶ: ನಡೆಸಿಕೊಡಬೇಕಾಗಿ ಬಂದ ಸಂದರ್ಭ) ಡಾ. ಕೆ.ಶಿವರಾಮ ಕಾರಂತರನ್ನು ಭೇಟಿಯಾಗಿದ್ದು, ಅವರೊಡನೆ ಮಾತಾಡಿದ್ದು, ಊಟಮಾಡಿದ್ದು ಎಲ್ಲ ನೆನಪಿಸಿಕೊಂಡರು.

ಆದರೆ, ನಮಗರಿವಿಲ್ಲದಂತೆಯೇ ಡಾ. ಕಾರಂತರ ನಡೆ, ನುಡಿ, ಅವರ ಬರವಣಿಗೆಯಲ್ಲಿನ ಓಘ, ವಿದೇಶಗಳಿಗೆ ಯಕ್ಷಗಾನದ ಪ್ರಚುರಪಡಿಸಿದ್ದು, ವಿಜ್ಞಾನದ ವಿಷಯಗಳು, ಅವರ ವಾಕ್ಪಟುತ್ವ, ಇವೆಲ್ಲ ಇಲ್ಲದೇ ಅವರನ್ನು ಕಡಲತೀರದ ಭಾರ್ಗವ ಎಂಬ ಬಿರುದು ಕೊಡಲು ಸಾಧ್ಯವಿತ್ತೇ, ತಮಗೆ ಪ್ರದಾನ ಮಾಡಿದ್ದ ಪ್ರಶಸ್ತಿಯನ್ನು ಹಿಂದಿರುಗಿಸಿದ ವಿಷಯ, ಅವರು ಚುನಾವಣೆಗೆ ನಿಂತು ಸೋತಿದ್ದು... ಇವೆಲ್ಲ ಮಾತಾಡಿದೆವು. ಏಕೆಂದರೆ, ನಿನ್ನೆ ದಿನ `ಕಡಲತೀರದ ಭಾರ್ಗವ ರ ಜನ್ಮದಿನವಾಗಿತ್ತು ಎಂದು ನನಗೆ ತಿಳಿದದ್ದು ಇಂದಿನ (೧೧.೧೦.೨೦೧೦) ರ ದಿನಪತ್ರಿಕೆಯನ್ನು ಓದಿದಾಗ ಎಂದರೆ ತಪ್ಪೇನಿಲ್ಲ.

+++++++++
ಇಲ್ಲೊಂದೆರಡು ಅಪರೂಪದ ಅಂತರ್ಜಾಲ ತಾಣಗಳು ಹುಡುಕಾಟದಲ್ಲಿ ಸಿಕ್ಕಿವೆ. ಬಿಡುವಿದ್ದಾಗ ನೋಡಿ: http://shivaramkarantha.in/ ಪರಾಂಜಪೆ ಸರ್‍ ಕಳಿಸಿಕೊಟ್ಟ ಲಿಂಕಿದು (ನಿನ್ನೆ ದಿನ ಬಿಡುಗಡೆಯಾಗಿದ್ದಂತೆ) ಗೂಗಲ್ಲಿನಲ್ಲಿ ಹುಡುಕಿದಾಗ ಸಿಕ್ಕಿದ್ದು: http://karanth.kannadavedike.net/

++++++++++

ಮನೆಗೆ ಹೊರಡುವ ವೇಳೆಗೆ ಕಷಾಯ ಸೇವನೆಯೂ ಆಯಿತು. (ಮಲೆನಾಡಿನ ಮನೆಗಳಲ್ಲಿ ಹಾಗೂ ಅಲ್ಲಿನ ಹೋಟೆಲುಗಳಲ್ಲಿ ಕಾಫೀ, ಟೀ ಜೊತೆಗೆ ಕಷಾಯವೂ ಸಿಗುತ್ತದೆ) ಪ್ರಕಾಶಣ್ಣರಿಂದ ಪ್ರತಿಯೊಬ್ಬರಿಗೂ ಒಂದೊಂದು ಪುಸ್ತಕ ಉಡುಗೊರೆಯನ್ನು ಕೊಟ್ಟರು. ಹಾಗೆಯೇ ನಮ್ಮಿಂದ ನೆನಪಿನ ಪುಸ್ತಕದಲ್ಲಿ ಒಂದೆರಡು ಅನಿಸಿಕೆಗಳನ್ನೂ ಪಡೆದುಕೊಂಡರು. ಈ ಪುಸ್ತಕವನ್ನಿಡಲು ಹಿನ್ನೆಲೆಯನ್ನೂ ತಿಳಿಸಿದರು (ದಿವಂಗತ ಕೃಷ್ಣಾನಂದ ಕಾಮತರು ಹೀಗೆ ಒಂದು ಪುಸ್ತಕವನ್ನು ಇಟ್ಟಿದ್ದರಂತೆ, ಆ ವಿಷಯವನ್ನು ಮಿತ್ರ ಡಿ.ಜಿ.ಮಲ್ಲಿಕಾರ್ಜುನ ತಿಳಿಸಿ... ಅದನ್ನು ಇವರೂ ತಮ್ಮಲ್ಲಿ ಅಳವಡಿಸಿಕೊಂಡಿದ್ದಾರೆ...)

++++++++++

ಇಷ್ಟೆಲ್ಲ ವಿಚಾರವನ್ನು ಬರೆಯಲು ಮನಸ್ಸೇಕಾಯಿತೆಂದರೆ, ಡಾ. ಕೆ. ಶಿವರಾಮ ಕಾರಂತರ ಜನ್ಮದಿನವನ್ನು ನಿನ್ನೆ ಅಚಾನಕ್ಕಾಗಿ ಅವರ ನೆನಪಿನಲ್ಲಿ ಕಳೆದೆವಲ್ಲಾ ಎಂಬುದರಿಂದಾಗಿ.... ಇವಿಷ್ಟು ನಿನ್ನೆ ನಮ್ಮ ಆಕಸ್ಮಿಕವಾದ ಭೇಟಿಯ ವಿಚಾರವನ್ನು ಹಂಚಿಕೊಳ್ಳಬೇಕೆನಿಸಿತು... ++++++++++++

ಮಂಗಳವಾರ, ಅಕ್ಟೋಬರ್ 5, 2010

ಮಳೆಗಾಲದಲ್ಲೆರಡು ದಿನಗಳ ಪ್ರವಾಸ - ೧


ಮಳೆಗಾಲದಲ್ಲೆರಡು ದಿನಗಳ ಪ್ರವಾಸ - ೧

ಸುಮಾರು ತಿಂಗಳುಗಳಿಂದ ಪ್ರವಾಸ ಹೋಗದೇ ಎಲ್ಲರ ಮನಸ್ಸೂ ಜಿಡ್ಡುಗಟ್ಟಿತ್ತು. ಈ ನೆಪದಿಂದಾಗಿ ದಿನಾಂಕ ೧೭.೯.೨೦೧೦ ರ ಸಂಜೆ ೧೩ ಜನರ ನಮ್ಮ ತಂಡ ದಾಂಡೇಲಿ ಕಡೆಗೆ ಪಯಣಿಸಿತು. ಈ ತಂಡದಲ್ಲಿ ಸವಿತಾ, ಮಮತಾ, ಶ್ವೇತ, ಸಾಹಿತಿ, ಗುರು, ಭಾಸ್ಕರ್‍, ಉಮೇಶಬಾಬು, ರಾಘವೇಂದ್ರ, ಅಶ್ಫಾಕ್, ರಫೀಕ್, ಕೇದಾರ್‍, ಖಲೀಲ್ ಮತ್ತು ನಾನು.
ಇಡೀ ರಾತ್ರಿಯಲ್ಲಿ ಪಯಣ ಸಾಗುತ್ತಿದೆ. ಈ ಟೋಲ್‌ಗೇಟಿನವರ ಹಾವಳಿ ಜಾಸ್ತಿ ಅನ್ನಿಸಿಬಿಟ್ಟಿತು. ಇನ್ನೇನು ನಿದ್ದೆಯ ಜೊಂಪು ಹತ್ತಿದೆ ಎನ್ನುವಾಗ ಟೋಲ್‌ಗೇಟ್ ದರ್ಶನ. ಚಾಲಕನಿಂದ ಸರ್‍, ೨೦ ರೂಪಾಯಿ... ಈ ನಮ್ಮ ಭಾಸ್ಕರನಿಗೆ ನಿದ್ದೆಯೋ ನಿದ್ದೆ. ಹೂಂ, ತೊಗೊಳ್ಳಿ, ಆಯ್ತಾ...? ಲೈಟ್‌ ಆರಿಸಿ, ಮತ್ತೆ ನಿದ್ದೆಗೆ ಜಾರುವುದು.

೧೮.೯.೨೦೧೦ ರ ಬೆಳಗ್ಗೆ ದಾಂಡೇಲಿಯಲ್ಲಿ ಸ್ಟೇಟ್‌ ಲಾಡ್ಜದಲ್ಲಿ ರೆಫ್ರೆಶ್‌ ಆಗಿ, ಸಂತೋಷ ಹೋಟೆಲಿನಲ್ಲಿ ಬೆಳಗಿನ ಉಪಹಾರ ಮುಗಿಸಿ ಸಿಂಥೇರಿ ರಾಕ್‌ ಎಂಬ ಸ್ಥಳಕ್ಕೆ ಹೊರಟೆವು. ಉಳವಿ ಕ್ಷೇತ್ರಕ್ಕೆ ಹೋಗುವ ಜಂಕ್ಷನ್‌ನಲ್ಲಿ ಗುರುವಿನ ಸ್ನೇಹಿತ ಶ್ರೀಪಾದರನ್ನು ಕೂಡಿಕೊಂಡು ಗುಂದ ಊರಿನ ಹಾದಿಯಲ್ಲಿ ಸಿಂಥೇರಿ ರಾಕ್‌ ಕಡೆಗೆ ಪಯಣಿಸಿದೆವು. ಸುತ್ತಲೂ ಹಸಿರಹೊದ್ದ ವನಸಿರಿ. ಹೆಚ್ಚಾಗಿ ಬಿದಿರ ಬೆಳೆಯೇ ಕಣ್ಣಿಗೆ ಕಾಣುತ್ತಿದ್ದದ್ದು. ೧೦.೨೫ ರ ಹೊತ್ತಿಗೆ ಸಿಂಥೇರಿ ರಾಕಿನ ಮುಖ್ಯದ್ವಾರಕ್ಕೆ ಬಂದೆವು.
ವಾಹ್‌! ಸಿಂಥೇರಿ ರಾಕ್ವಾಹ್‌! ಸಿಂಥೇರಿ ರಾಕ್‌ ನೋಡುತ್ತಿದ್ದಂತೆ ರೋಮಾಂಚನವಾಗುತ್ತದೆ. ೩೦೦ ಅಡಿ ಎತ್ತರದ ಬೃಹತ್‌ ಬಂಡೆ. ಕಾನೇರಿ ದಡದಲ್ಲಿರುವ ಇದು ಶಿಥಲೀಕರಣದಿಂದಾಗಿ ಮನೋಹರ ಭೂರಚನೆಯಾಗಿದೆ. ಅಲ್ಲಲ್ಲಿ ಪೊಳ್ಳು ಜಾಗಗಳಿವೆ ಬಂಡೆಗಳಲ್ಲಿ ಹಾಗೂ ಪಾರಿವಾಳಗಳ ಅವಾಸಸ್ಥಾನವೆಂದು ಬೋರ್ಡು ಇದೆ. ಜೇನುಗೂಡುಗಳ (ಜೇನೆಲ್ಲ ಖಾಲಿಯಾಗಿದ್ದ) ತುಂಬಾ ಕಾಣಬಹುದು. ಹಿಂದಿನ ದಿನದ ಆಯಾಸವೆಲ್ಲ ಈ ಕಾನೇರಿಕೊಳ್ಳದ ಸಿಂಚನದಿಂದ ಪರಿಹಾರವಾಯಿತು. ತಂಪಾದ ಪ್ರದೇಶವಿದ್ದರೂ ನೀರಿನ ಸಿಂಚನದ ಖುಷಿಯನ್ನು ಹೊಂದಿ ವಾಪಸ್ಸು ಬರುವಾಗ ಸೆಖೆಯನ್ನು ತಡೆಯಲಾಗದು. ರಭಸದಿಂದ ಹರಿಯುತ್ತಾ ಧುಮ್ಮಿಕ್ಕುವ ಕಾನೇರಿ ನದಿಯ ಆರ್ಭಟ ಖುಷಿಕೊಡುತ್ತದೆ. ಬಂಡೆಗಳ ಬಳಿ ಹರಿಯುವ ನೀರಿನ ಬಳಿ ಜಿಗಣೆಕಾಣದಿದ್ದರೂ, ತೇವಾಂಶವುಳ್ಳ ಮೆಟ್ಟಿಲುಗಳ ಮೇಲೆ ಇವೆ. ಒಂದೆರಡು ಜಿಗಣೆಗಳು ನಮ್ಮ ಸ್ನೇಹಿತರಿಗೆ ಅಂಟಿಕೊಂಡಿದ್ದ ಕಣ್ಣಾರೆ ನೋಡಿದೆವು. ಸುಮಾರು ಒಂದು ಘಂಟೆ ಕಳೆದದ್ದು ತಿಳಿಯಲೇ ಇಲ್ಲ.

ಅಲ್ಲಲ್ಲಿಯೇ ವಿವಿಧ ಕಲ್ಲುಗಳಿಗೆ ಸಂಬಂಧಪಟ್ಟ ವಿವರಗಳು ಮತ್ತು ಕಲ್ಲುಗಳನ್ನು ಇಟ್ಟಿದ್ದಾರೆ. ಇಲ್ಲಿಗೆ ಬರುವವರಿಗೆ ನಿರ್ವಹಣಾ ವೆಚ್ಚ ಎಂದು ರೂ.೫.೦೦. ಹಾಗೂ ಶಾಲಾ ಮಕ್ಕಳಿಗೆ ರೂ.೨.೦೦ ಶುಲ್ಕ ವಿಧಿಸುತ್ತಾರೆ.


ಪ್ಲಾಸ್ಟಿಕ್‌ ನಿಷೇಧ:
ಎಲ್ಲೆಡೆಯೂ ಪ್ಲಾಸ್ಟಿಕ್‌ ನಿಷೇಧ ಎಂಬ ಫಲಕ ಸಾಮಾನ್ಯವಾಗಿ ನೋಡುತ್ತಿರುತ್ತೇವೆ. ಹಾಗೆಯೇ ಅದನ್ನು ಉಪಯೋಗಿಸುವುದನ್ನು ಬಿಡಬೇಕೆಂದರೂ ಬಿಡದ ಪೆಡಂಭೂತವಾಗಿ ಬೆಳೆದಿದೆ. ಇಂತಹ ಒಂದು ದೃಶ್ಯವನ್ನು ಇಲ್ಲಿ ನೋಡಿದೆವು. ಅದರ ಚಿತ್ರವನ್ನು ಎಲ್ಲರೂ ತೊಗೊಂಡಿದ್ದಾಯಿತು. ಚಿತ್ರ ನೋಡಿದರೇ ಸಾಕು ಏನೇನೆಲ್ಲಾ ಅನಿಸುತ್ತದೆ...

`ಉಳವಿ'ಯ ಸುಳಿವು.
ಸಿಂಥೇರಿಯಿಂದ ಉಳವಿ ಕಡೆಗೆ ಹೊರಟೆವು. ಸುಮಾರು ೧/೨ ಘಂಟೆ ಪ್ರಯಾಣ. ಅಲ್ಲಿಗೆ ತಲುಪಿದಾಗ ಮಧ್ಯಾಹ್ನ ೧೨.೦೦ ಆಗುತ್ತಾ ಬಂದಿತ್ತು. ಇಲ್ಲಿ ಚೆನ್ನಬಸವಣ್ಣನ ಸಮಾಧಿಯಿದೆ. ಸುಂದರ ದೇವಾಲಯ ಮ ದೇವಾಲಯದ ಮುಂಭಾಗದಲ್ಲಿ ಒಂದು ದೊಡ್ಡ ಕಲ್ಯಾಣಿ ಇದೆ. ಇಲ್ಲಿ ಇದರಂಚಿಗೆ ಆ ಕಡೆಯಿಂದ ನೀರಿನ ಹರಿವಿನ ಸದ್ದು ಕೇಳುತ್ತಿತ್ತು. ಬಲಗಡೆಗೆ ಕಣ್ಣಳತೆಯಷ್ಟು ಹಸಿರೋ ಹಸಿರು. ಇದರ ಸುತ್ತ ಮುತ್ತ ಅನೇಕ ವೀಕ್ಷಣೀಯ ಸ್ಥಳಗಳಿವೆ: ಶ್ರೀ ವೀರಭದ್ರೇಶ್ವರ ದೇವಾಲಯ, ಆಕಳಗವಿ, ಮಹಾಮನೆ ಗವಿ, ವಿಭೂತಿ ಕಣಜ ಹೀಗೆ...
ಇಲ್ಲಿ ನಿತ್ಯ ದಾಸೋಹವಿದೆ. ನಾವೂ ಊಟ ಮುಗಿಸಿದೆವು. ಅನ್ನ, ಸಾಂಬಾರು, ಪಾಯಸ, ಪಲ್ಯ, ಮೊಸರು ಎಲ್ಲವನ್ನೂ ಬಡಿಸಿದರು. ರುಚಿಯಾದ ಊಟ ಹಸಿದಿದ್ದ ನಮಗೆ ಖುಷಿಕೊಟ್ಟಿತು. ಎರಡು ಘಂಟೆಯವರಿವಿಗೂ ಅಲ್ಲಿದ್ದು ಯಲ್ಲಾಪುರದ ಕಡೆಗೆ ಹೊರಟೆವು.





ದಾರಿಯಲ್ಲಿ ಮಿತ್ರ ಶ್ರೀಪಾದರನ್ನು ದಾಂಡೇಲಿ ಕ್ರಾಸಿನಲ್ಲಿ ಇಳಿಸಿ ಮುಂದುವರೆದೆವು. ಹಾದಿಯಲ್ಲಿ ಸುಮಾರು ೩.೧೫ ರ ವೇಳೆಗೆ ನಾವು ನಾಗಝರಿ ಕಣಿವೆಯ ದರ್ಶನಕ್ಕೆಂದು ಸ್ವಲ್ಪ ಹೊತ್ತು ನಿಂತೆವು. ಮನಮೋಹಕ, ರೋಮಾಂಚಕ ದೃಶ್ಯ ಮನಸ್ಸು ಮತ್ತು ಕಣ್ಣುತುಂಬಿಕೊಂಡೆವು.


ಮಾಗೋಡಿಗೆ ದೌಡು


ನಂತರ ಮಾಗೋಡು ಅಥವಾ ಸಾತೋಡಿ ಜಲಪಾತಕ್ಕೆ ಎಂದು ಹೊರಟೆವಾದರೂ ಸಮಯಾಭಾವದಿಂದ ಮಾಗೋಡು ಜಲಪಾತಕ್ಕೆ ಪಯಣಿಸಿದೆವು. ಸಂಜೆ ೫.೦೦ ರ ವೇಳೆಗೆ ಮಾಗೋಡು ಜಲಪಾತ ತಲುಪಿದೆವು. ಇಲ್ಲಿಯೂ ಪ್ರವೇಶ ಶುಲ್ಕ ರೂ.೫.೦೦ ಇದೆ. ಭೇಡ್ತಿ ನದಿಯು ಮಾಗೋಡು ಜಲಪಾತವೆಂದು ಪ್ರಸಿದ್ಧಿ ಪಡೆದಿದೆ. ಈ ನದಿಯು ಹುಬ್ಬಳ್ಳಿಯ ಉಣಕಲ್‌ ಕಡೆಯಿಂದ ಹುಟ್ಟಿ, ಪಶ್ಚಿಮಾಭಿಮುಖವಾಗಿ ಹರಿದು ಯಲ್ಲಾಪುರ, ಮುಂಡಗೋಡ ದ ಗಡಿಗಳಲ್ಲಿ ಹರಿಯುತ್ತಾ ಮಾಗೋಡು ಎಂಬುದಾಗಿ ಕರೆಸಿಕೊಳ್ಳುತ್ತಾ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಅಷ್ಟು ದೂರದಿಂದಲೇ ಜಲಪಾತದ ಅಬ್ಬರದ ಮೊರೆತ ಕೇಳುತ್ತಾ ಬರುತ್ತದೆ. ಇದು ಸುಮಾರು ೬೫೦ ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಪಾತ. ನಯನಮನೋಹರವಾಗುತ್ತಾ ತುಂತುರು ಹನಿಗಳು ಅಲ್ಲೆಲ್ಲಾ ಮೋಡದಂತೆ ಹಬ್ಬತ್ತಾ ಮತ್ತೊಮ್ಮೆ ಜಲಪಾತವನ್ನೇ ಆವರಿಸಿ ಕೇವಲ ಶಬ್ದ ಮಾತ್ರ ಕೇಳುವಂತೆ ಮಾಡುತ್ತದೆ. ಈ ದೃಶ್ಯವನ್ನು ನಾವು ಮತ್ತಷ್ಟು ಮೇಲಕ್ಕೆ ಹತ್ತಿ (ವ್ಯೂಪಾಯಿಂಟ್‌) ಹೋಗುತ್ತ ಇದ್ದಂತೆ ಸುತ್ತಲೂ ಮಿಸ್ಟ್‌ ಆವರಿಸಿರುತ್ತದೆ. ಬಿಸಿಲಝಳ ಬಿದ್ದಂತೆ ಸುಂದರ ದೃಶ್ಯ ಸಂಯೋಜನೆ ಆಗುತ್ತದೆ. ವಾಹ್‌! ಎಂಬ ಉದ್ಗಾರ ತಂತಾನೆ ಹೊಮ್ಮುತ್ತದೆ. ನಿಜಕ್ಕೂ ಮೈಮನಗಳಿಗೆ ಆಗಿದ್ದ ಆಯಾಸವೆಲ್ಲ ಕ್ಷಣಮಾತ್ರದಲ್ಲಿ ಮರೆಯಿಸುವಂತಿದೆ ಮಾಗೋಡು ಜಲಪಾತ. ಒಮ್ಮೆಯಾದರೂ ನೋಡಿ ಬರಬೇಕಾದ ಸ್ಥಳ.

ಇಲ್ಲಿ ಭಾನುವಾರ ಅಥವಾ ರಜಾದಿನಗಳಂದು ಜನಸಮೂಹ ಜಾಸ್ತಿ. ಹತ್ತಿರದ ಹೋಟೆಲು ಎಂದರೆ ಯಲ್ಲಾಪುರಕ್ಕೆ ಹೋಗಬೇಕು. ಊಟತಿಂಡಿ ಜೊತೆಯಲ್ಲಿ ಒಯ್ದರೆ ಉತ್ತಮ. ಪ್ರವೇಶ ದ್ವಾರಕ್ಕೂ ಮುಂಚೆ (ವಾಹನ ನಿಲುಗಡೆ ಸ್ಥಳದಲ್ಲಿ) ಶೌಚಾಲಯವಿದೆ. ಆದರೆ ಸದಾ ಬೀಗ ಜಡಿದಿರುತ್ತದಂತೆ. ಪ್ರವೇಶದ್ವಾರದಲ್ಲಿ ಕುಡಿಯುವ ನೀರು ಇದೆ. ಒಂದೊಂದು ಶೌಚಾಯಗಳಿದ್ದರೂ ಶುಚಿಯಾಗಿಲ್ಲ. ಇಲ್ಲಿಗೆ ಎನ್‌ಹೆಚ್-೧೭ ರಸ್ತೆ ಚೆನ್ನಾಗಿದೆ. ಇದಿಷ್ಟು ಮಾಗೋಡಿನ ಪರಿಸರ ನಾವಿದ್ದ ಕೆಲವೇ ಸಮಯದಲ್ಲಿ ಕಂಡುಬಂದದ್ದು.


ಮಾಗೋಡಿನಿಂದ ಜೇನುಕಲ್ಲು ಗುಡ್ಡದೆಡೆಗೆ ಮುತ್ತಿಗೆ:

ಸಂಜೆ ೬.೧೫ ರ ವೇಳೆಗೆ ಜೇನುಕಲ್ಲು ಗುಡ್ಡ ತಲುಪಿದೆವು. ಮಾಗೋಡಿನಿಂದ ೭ ಕಿ.ಮೀ. ಇದ್ದು ಯಲ್ಲಾಪುರದಿಂದ ಸುಮಾರು ೧೭ ಕಿ.ಮೀ. ದೂರದಲ್ಲಿದೆ. ಸುತ್ತಲೂ ಕಾಡಿನ ಹಾದಿ. ಮಣ್ಣಿನ ರಸ್ತೆ. ಮಳೆ ಬಂದಿದ್ದರಂತೂ ವಾಹನ ನಡೆಸಲು ಬಹಳ ಕಷ್ಟವಾಗುತ್ತದೆ. ಕಿರಿದಾದ ಹಾದಿ. ಬೇಡ್ತಿ ನದಿಯು ಕವಲಾಗಿ ಹರಿದು ಈ ಗುಡ್ಡದ ಹಿಂದೆ ನುಸುಳುತ್ತಾ ಅರೇಬಿಯನ್‌ ಸಮುದ್ರವನ್ನು ಸೇರುತ್ತದೆ. ನದಿಯ

ಇದು ಸುಮಾರು ೪೫೦ ಮೀಟರ್‌ ಎತ್ತರವಿದೆ. ಸುತ್ತಲೂ ಹಸಿರ ಕಾನನ. ಇಲ್ಲಿಗೆ ಚಾರಣಿಗರ ಭೇಟಿ ಇದ್ದೇ ಇರುತ್ತದೆ. ಸಂಜೆಯ ಸೂರ್ಯಾಸ್ತ ನೋಡಲು ಪ್ರಶಸ್ತವಾದ ಸ್ಥಳ. ದೂರದ ಕಣಿವೆಯಲ್ಲಿ ನದಿಯ ಹರಿಯುವಿಕೆ ಕಾಣುತ್ತದೆ. ಮನಮೋಹಕ ದೃಶ್ಯಗಳನ್ನು ಕಾಣಬಹುದು. ಇಲ್ಲಿ ಒಂದೆರಡು ಮಂಟಪಗಳಿವೆ. ಕಬ್ಬಿಣದ ತಡೆಗೋಡೆಯಿದೆ. ಆದರೆ, ಮಳೆ ಮತ್ತು ತುಕ್ಕಿನಿಂದಾಗಿ ಅಷ್ಟು ಗಟ್ಟಿಯಾಗಿಲ್ಲ ಈ ಕಬ್ಬಿಣದ ಸರಳುಗಳು. ಅಲ್ಲದೇ ಗುಡ್ಡದ ಮಣ್ಣಿನ ಕುಸಿತದ ಕುರುಹುಗಳೂ ಇರುವುದರಿಂದ ಕಬ್ಬಿಣದ ಸರಳ ಒರಗುವುದು, ಹತ್ತುವುದು ಅಪಾಯಕಾರಿ. ಇಲ್ಲಿ ಸುಮಾರು ಅರ್ಧ ಘಂಟೆ ಇದ್ದೆವು. ಮಳೆಯ ಹನಿಗಳಿಂದಾಗಿ ಮತ್ತೆ ದಾರಿಯಲ್ಲಿ ತೊಂದರೆಯಾಗದಿರಲಿ ಎಂದು ಇದ್ದ ಸಮಯದಲ್ಲೇ ಒಂದಷ್ಟು ಛಾಯಾಚಿತ್ರ ತೆಗೆದುಕೊಂಡು ಸೂರ್ಯಾಸ್ತದ ಚೂರುಪಾರು ನೋಡಿಕೊಂಡು ಶಿರಸಿಯ ಕಡೆಗೆ ಹೊರಟೆವು.

& & & &

ಅಂದಹಾಗೆ... ಹಾಡು ಕೇಳುತ್ತಾ... ಹಾಗೆಯೇ ಮುಂಗಾರು ಮಳೆ ಸಿನಿಮಾ ನೋಡುತ್ತಿದ್ದೆವು. ಆ ಸಿನೆಮಾ ಪೂರ್ಣವಾಗಿ ನೋಡಲಾಗಲಿಲ್ಲ ಎಂದು ಸಾಹಿತಿಯವರ ಅಂಬೋಣ. ಜೊತೆಗೆ ಜಾಕಿ ಚಿತ್ರದ ಹಾಡು ಮತ್ತೆ ಮತ್ತೆ ಕೇಳಿಸುತ್ತಿದ್ದ ರಾಘು ಅವರು... ಪದೇ ಪದೇ ಹಾಡು ಬದಲಾಯಿಸಲು ಚಾಲಕನಿಗೆ ತಾಕೀತು. ೨೦ ಸಾಂಗು ಮುಂದಕ್ಕೆ ಎಂದಾಗ ಮತ್ತೆ ಮೊದಲೇ ಕೇಳಿದ್ದ ಹಾಡೇ ಬರುವುದು ಹೀಗೆ ಒಂದು ರೀತಿಯಲ್ಲಿ ಟೀಕೆ-ತಮಾಷೆ ಅಂತ್ಯಾಕ್ಷರಿ ಎಲ್ಲ ಚೆನ್ನಾಗಿದ್ದು, ಸಂತಸಪಟ್ಟರು.

ಇವಿಷ್ಟು ನಮ್ಮೆಲ್ಲರ ಮೊದಲ ದಿನದ ಪ್ರವಾಸ ಕಥನ. ಆ ಕ್ಷಣದಲ್ಲಿ ನನ್ನ ಗಮನಕ್ಕೆ ಬಂದಂತಹ ಮಾಹಿತಿಯನ್ನು ಆಧರಿಸಿ ಇಲ್ಲಿ ಪ್ರವಾಸ ಕಥನ ಬರೆದಿರುತ್ತೇನೆ. ಮಾಹಿತಿಗಳು ತಪ್ಪಿದ್ದರೆ/ಸರಿಯಿದ್ದರೆ ನಿಮ್ಮ ಅಭಿಪ್ರಾಯಗಳ ಮೂಲಕ ತಿಳಿಸಿ.

ಮುಂದಿನ ಪ್ರಯಾಣ ಮುಂದುವರೆಯುವುದು.... ಅಲ್ಲಿಯವರೆಗೆ ಖುಷಿಯ `ಕ್ಷಣಗಳು' ನಿಮ್ಮೊಂದಿಗಿರಲಿ!

ಶನಿವಾರ, ಸೆಪ್ಟೆಂಬರ್ 4, 2010

ಶಿಕ್ಷಕರ ದಿನಕ್ಕಾಗಿ ಹೀಗೊಂದು ನೆನಪು...

ಗುರುವಿಲ್ಲದೆ ಗುರಿಯ ಸೇರುವುದು ಅಸಾಧ್ಯ!

ಗುರುವೆಂದರೆ ಒಂದು ಆದರ್ಶ, ಸಂಸ್ಕೃತಿ, ವಿದ್ಯೆ, ವಿನಯ ಇತ್ಯಾದಿ ಎಲ್ಲವನ್ನೂ ಬಿಂಬಿಸುವಂತಹವನು...

ದ್ರೋಣಾಚಾರ್ಯರ ಪ್ರತಿಮೆಯನ್ನೇ ತನ್ನ ಗುರುವಾಗಿ ಪಡೆದು ಧನುರ್ವಿದ್ಯಾಧರನಾದವನು ಏಕಲವ್ಯ.

ಪ್ರಾಥಮಿಕ ಶಾಲೆಯಿಂದ, ಕಾಲೇಜು, ಉದ್ಯೋಗ ಹೀಗೆ ಎಲ್ಲೆಡೆಯೂ ಶಾಲೆಯಲ್ಲಿದ್ದ, ಅಕ್ಷರ ಕಲಿಸಿದ, ಶಿಕ್ಷಿಸಿದ, ಬುದ್ಧಿ ಹೇಳಿದ, ಸಂತೈಸಿದ ಗುರುಗಳು (ಶಿಕ್ಷಕಿಯರೇ ಹೆಚ್ಚು) ಆಗಾಗ ನೆನಪಿಗೆ ಬರುತ್ತಿರುತ್ತಾರೆ.

ಹೀಗೆಯೇ ೪-೫ ತಿಂಗಳ ಹಿಂದೆ ಈ ಅಂತರ್ಜಾಲದ ಒಂದು ತಾಣದಲ್ಲಿ, ನನ್ನ ಪ್ರಾಥಮಿಕ ಶಾಲಾ ಶಿಕ್ಷಿಯೊಬ್ಬರ ಛಾಯಾಚಿತ್ರವೊಂದು ಸಿಕ್ಕಿತು. ಆಗ ನಿಜಕ್ಕೂ ಖುಷಿಯಾಯಿತು. ಏಕೆಂದರೆ, ಈ ಹಿಂದೆ ಅವರ ಮತ್ತು ಅವರ ಸಹಶಿಕ್ಷಕಿಯರೆಲ್ಲ ನಮಗೆ ಬೋಧಿಸಿದವರೇ ಆಗಿದ್ದಾರೆ...

  • ನನಗೂ ಶಾಲೆ ಬಿಟ್ಟ ಮೇಲೆ, ಕಾಲೇಜು, ಕೆಲಸ ಹೀಗೆ ಬೇರೆಬೇರೆ ಬ್ಯುಸಿ (??) ಕಾರಣಗಳಿಂದಾಗಿ ಮತ್ತೆ ಶಾಲಾ ವಲಯಕ್ಕೆಹೋಗಲು ಆಗಿರಲಿಲ್ಲ. ಹೋದರೂ ಅದು ಭಾನುವಾರವಾಗಿದ್ದರೆ ಏನುಪಯೋಗ? ಕೆಲವು ಬಾರಿ ಮಾತ್ರ ದಾರಿಯಲ್ಲಿ ಸಿಕ್ಕಟೀಚರ್ ಜೊತೆ ಒಂದೆರಡು ಮಾತು ಅಥವಾ ನಮಸ್ಕಾರ ಹೇಳಿದ್ದಿರಬಹುದು ಅಷ್ಟೆ...
  • ಒಂದೆರಡು ಬಾರಿ ಕೆಲವೇ ಶಿಕ್ಷಕಿಯರ ಮನೆಗಳಿಗೆ ಸ್ನೇಹಿತರೊಡಗೂಡಿ ಭೇಟಿಯಿತ್ತದ್ದಿದೆ. ಅದೂ ಬಹಳ ವರ್ಷಗಳ ಹಿಂದೆ.
  • ನಮಗಿದ್ದ ಹೆಡ್ ಮೇಡಂ (ಈಗಿಲ್ಲ)ರವರನ್ನು ಕಂಡರೆ ದಿಗಿಲು ಇತ್ತು ಎಲ್ಲರಿಗೂ. ಆದರೆ ಅವರ ಪ್ರೀತಿತುಂಬಿದ ನುಡಿಗಳು ನಮಗೆಮಾತೇ ಹೊರಡದಂತೆ ಮಾಡುತ್ತಿದ್ದವು. ಅಲ್ಲದೇ ಅವರ ಮನೆಯಲ್ಲಿಯೇ ಒಂದು ಮತ್ತು ಎರಡನೇ ತರಗತಿ ನಡೆಯುತ್ತಿದ್ದವು. -ರವರೆಗೆ ಬೇರೊಂದು ಸ್ಥಳದಲ್ಲಿ ವಿಶಾಲ ಕಟ್ಟಡವನ್ನು ಕಟ್ಟಿಸಿ ಅಲ್ಲಿಗೆ ವಿದ್ಯಾರ್ಥಿಗಳು ಬರುವಂತೆ ಮಾಡಿದ್ದರು. ಶಾಲಾವಾರ್ಷಿಕೋತ್ಸವ ಒಂದು ಭರ್ಜರಿಯಾಗಿ ನಡೆದಿತ್ತು. ಶಾಲಾ ಫೀಜು ಕಟ್ಟಲು ಆಗದೇ ಇದ್ದಾಗ ನಮ್ಮ ಪರೀಕ್ಷಾ ಫಲಿತಾಂಶತಿಳಿಸುವುದಿಲ್ಲ ಎಂದು ವಾಪಸ್ಸು ಮನೆಗೆ ಕಳಿಸುತ್ತಿದ್ದರು. ಮುಂದಿನ ತರಗತಿಗೆ ಸೇರುತ್ತಿದ್ದೆವು (ಫೀ ಮುಂದಿನ ತರಗತಿಯ ಜೊತೆಗೆಸೇರಕೊಳ್ಳುತ್ತಿತ್ತು, ಕೆಲವೊಮ್ಮೆ).
  • ಇನ್ನು ಅವರ ಪತಿಯರವರು ಶಾಲಾ ಸೆಕ್ರೆಟರಿಯಾಗಿದ್ದರು. ಅವರಿಗೂ ಅಷ್ಟೆ ಮಕ್ಕಳೆಂದರೆ ಅತೀವ ಪ್ರೀತಿ, ವಾತ್ಸಲ್ಯ. ಸ್ವಾತಂತ್ರ್ಯದ ದಿನದ ಹೋರಾಟದ ಕಥೆಗಳನ್ನು ನಮಗೆಲ್ಲ ಹೇಳುತ್ತಿದ್ದರು. ದಿನವೂ ಬೈಸಿಕಲ್ಲಿನಲ್ಲಿ ಅವರು ಬರುವಾಗ ಶಾಲಾಮಕ್ಕಳು ಸಿಕ್ಕರೆ ಅವರ ಚೀಲ ಅಥವಾ ಮಕ್ಕಳನ್ನೆ ಸೈಕಲ್ಲಿನಲ್ಲಿ ಕೂರಿಸಿ ಕರೆತರುತ್ತಿದ್ದದ್ದೂ ಉಂಟು. ಇವೆಲ್ಲ ನೆನಪುಗಳು ಸದಾಕಾಡುತ್ತವೆ.
  • ಒಮ್ಮೆ ಮೊದಲ ಬಾರಿಗೆ ತಿರುಪತಿಗೆ ಹೋಗಿ ಬಂದಾಗ ನನ್ನ ತಲೆ ಗುಂಡಗಾಗಿತ್ತು. ಟೋಪಿ ಧರಿಸಿದ್ದೆ. ಕ್ಲಾಸಿನಲ್ಲಿ ಟೋಪಿಹಾಕ್ಕೋತೀಯಾ ಅಂತ ಆನ್ವಟಿ ಎಂಬ ಹಿಂದಿ ಟೀಚರ್ಗದರಿದ್ದರು. ವಿಧಿಯಿಲ್ಲದೇ ಟೋಪಿ ತೆಗೆದಿದ್ದೆ...

  • ಇನ್ನೊಮ್ಮೆ ಶಾಲೆಯಲ್ಲಿ ಆಟಕ್ಕೆಂದು ಬಿಟ್ಟಾಗ - ನಮ್ಮ ಸಹಪಾಠಿಯರೊಂದಿಗೆ ಆಡುತ್ತಾ... ಆಟದಲ್ಲಿ ಸೋತವರು ಒಂದು ಕಾಲಿನಲ್ಲಿಕುಂಟುತ್ತಾ ಅವರು ಹೇಳಿದಷ್ಟು ದೂರ ಹೋಗಬೇಕು ಅಥವಾ ಒಂದಿಪತ್ತು ಅಡಿ ಬೆನ್ನಮೇಲೆ ಕೂರಿಸಿಕೊಂಡ ಹೋಗಬೇಕಿತ್ತು.. ಇದುಒಬ್ಬ ಟೀಚರ್ಗಮನಕ್ಕೆ ಬಂದು ಎಲ್ಲರಿಗೂ ಗದರಿದ್ದಲ್ಲದೇ... ಕಟ್ಟಿಗೆಯೇಟಿನ ಶಿಕ್ಷೆ ಕೊಟ್ಟಿದ್ದರು...
  • ಇನ್ನೊಬ್ಬರು ದೇವಿಕಾ ಟೀಚರ್‌.. ಇವರು ನಮಗೆ - ನೇ ತರಗತಿಯಲ್ಲಿ ಪಾಠ ಹೇಳಿಕೊಡುತ್ತಿದ್ದರು. ಇವರ ವಿಷಯ ಇಂಗ್ಲಿಷ್ಮತ್ತು ವಿಜ್ಞಾನ... ಒಮ್ಮೆ ಇಂಗ್ಲಿಷ್ ಒಂದು ಪದದ ಅರ್ಥ ಕೇಳಿದರು ಎಲ್ಲ ಮಕ್ಕಳಿಗೂ... ಆದರೆ ಕೆಲವು ಪರ್ಯಾಯ ಪದಗಳುತಿಳಿಯುತ್ತಿಲ್ಲ. ಕ್ರೌನ್ಪದದ ಅರ್ಥ - ಕಿರೀಟ ಎಂಬುದು ಸಾಮಾನ್ಯವಾಗಿ ತಿಳಿದಿದ್ದೆವು. ಹುಂಜದ ತಲೆಯ ಮೇಲಿನದಕ್ಕೆ ಉತ್ತರಕೇಳಿದ್ದರು... ನಾನು ತುರಾಯಿ ಎಂದು ಹೇಳಿದ್ದೆ. ಅಂದಿನಿಂದ ವಿಶೇಷ ಅಕ್ಕರೆ ನನಗೆ ತೋರುತ್ತಿದ್ದರು. ಕೆಲವೊಮ್ಮೆ ವಿಜ್ಞಾನದನೋಟ್ಸ್ ಬರೆದುಕೊಟ್ಟಿದ್ದರು.
  • ಇನ್ನೊಬ್ಬರು ಎಮಿಲಿ ಲೋಬೋ. ಇವರೆಂದರೆ ಕಾಲೇಜು ಬಿಟ್ಟು ಕೆಲಸಕ್ಕೆ ಸೇರಿದ್ದರೂ ಒಂಥರಾ ಭಯ (?) ಇತ್ತು ಎನ್ನಬಹುದು. ಅವರೊಮ್ಮೆ ಕಾಣಿಸಿಕೊಂಡರೆ ಇಡೀ ತರಗತಿ ಗಪ್ಚುಪ್‌. ನಮಗೆ ಗಣಿತದ ಟೀಚರ್ಆಗಿದ್ದರು. ಮಕ್ಕಳಲ್ಲಿ ಭಾಷಾ ಉಚ್ಛಾರಣೆಯಲ್ಲಿತಪ್ಪು ಕಂಡರೆ ಹೊಡೆತ ಬೀಳುತ್ತಿತ್ತು. ಸರಿಯಾಗಿ ಕಲಿವವರೆಗೂ ಬಿಡುತ್ತಿರಲಿಲ್ಲ. ಇದೀಗ ಮುಖ್ಯೋಪಾಧ್ಯಾಯಿನಿಯಾಗಿದ್ದಾರೆ.. ಕಳೆದೆರಡು ತಿಂಗಳ ಹಿಂದೆ ಅವರನ್ನು ಭೇಟಿ ಮಾಡಿದ್ದೆ. ಜೊತೆಗೆ ಪ್ರೌಢಶಾಲಾ ಟೀಚರುಗಳೂ ಸಿಕ್ಕಿದ್ದರು. ಖುಷಿಯಾಗಿತ್ತು.
  • ಮನೋರಮಾ - ಇವರಿಗೆ ಮಕ್ಕಳ ಕಂಡರೆ ತುಂಬಾ ಸಂತಸ. ನಾವೆಲ್ಲ ಸ್ನೇಹಿತರು ಸುಮಾರು ವರ್ಷಗಳ ನಂತರ ಮನೆಗೆಹೋದಾಗ `ನನ್ನ ಮಕ್ಕಳು ಬಂದಿದ್ದಾರೆ' ಎಂದು ಕೊಬ್ಬರಿ ಮಿಠಾಯಿ ಮಾಡಿಕೊಟ್ಟಿದ್ದರು. ಏಯ್! ಎಂದರೆ ಸಾಕು ತರಗತಿಯೆಲ್ಲನಿಶ್ಶಬ್ದವಾಗುತ್ತಿತ್ತು. ಕಿಟಕಿ ಸರಳಿನಿಂದ ಅದೆಷ್ಟೋ ಹೊಡೆತ ತಿಂದದ್ದಿದೆ (ಎಲ್ಲರೂ ಎನ್ನಬಹುದು). ಇವನ್ನೆಲ್ಲ ಅವರೊಡನೆ ಇತ್ತೀಚೆಗೆನೆನಪಿಸಿಕೊಂಡೆ...
  • ಪ್ರಮೀಳಾ ಎಂಬುವವರು ಬರವಣಿಗೆ (ಕಾಪಿರೈಟಿಂಗ್) ಎಷ್ಟು ಕೊಡುತ್ತಿದ್ದರೆಂದರೆ... ಅಬ್ಬಬ್ಬಾ... ಬರೆಯಲು ಆಗದಷ್ಟು... ರಿಂದಸಾವಿರ, ಸಾವಿರ ಹೀಗೆ... ಬರೆಯದಿದ್ದಾಗ ಬೆಂಚಿನ ಮೇಲೆ ನಿಲ್ಲುವ ಶಿಕ್ಷೆ.. ಅದೆಷ್ಟು ಮಂದಿ ನಿಲ್ಲುತ್ತಿದ್ದೆವೋ! ಪದ್ಮಾವತಿಎಂಬುವರು ಹಿಂದಿ, ಸಮಾಜ (ನಾವು ಹೈಸ್ಕೂಲಿನಲ್ಲಿದ್ದಾಗ ನಮ್ಮನ್ನಗಲಿದರು) ಪಾಠಮಾಡುತ್ತಿದ್ದರು. ತುಂಬಾ ಚೆನ್ನಾಗಿ ಇತಿಹಾಸತಿಳಿಸುತ್ತಿದ್ದರು. ಆಗೆಲ್ಲ ಇಸವಿಗಳ ನೆನಪು ಇಟ್ಟುಕೊಳ್ಳಬೇಕಿತ್ತು... (ಈಗ ಎಲ್ಲ ಮರೆತಿದೆ).
  • ಇನ್ನು ಲಲಿತಾ, ಗಿರಿಜಾ, ಪ್ರೇಮ ಹೀಗೆ ಇಬ್ಬಿಬ್ಬರು ಟೀಚರ್ ಇದ್ದರು. ಸಿದ್ಧಮ್ಮ, ಸರಳ, ಸುಧಾ, ಲಕ್ಮ್ಮೀ ಹೀಗೆ ಬಹಳ ಟೀಚರ್ಇದ್ದರು. ಅವರೆಲ್ಲರ ಪ್ರೀತಿ ಆಗ ಅರಿಯಲಾಗುತ್ತಿರಲಿಲ್ಲ ಅಷ್ಟೇ...‍
  • ಪಿ.ಟಿ. ಮಾಸ್ತರು ಇದ್ದರು. ಅವರಿಗೆ ಕೇಸವ ಎಂದರೇ ಒಂಥರಾ ಖುಷಿ.... ಶಕಾರ ಬರುತ್ತಿರಲಿಲ್ಲ.... ನಾವೆಲ್ಲ ಒಮ್ಮೆ ಕೇಸವ ಎಂದುಹೆಸರ ಹೇಳಿ ನಕ್ಕಿದ್ದಾಗ ಒದೆ ಬಿದ್ದಿತ್ತು. ಮೊನ್ನೆ ಶಾಲೆಗೆ ಹೋದಾಗ ಸಿಕ್ಕಿದ್ದರು. ಈಗ ೫೦+ ಅವರಿಗೆ ನನ್ನನ್ನ ಗುರುತು ಹಿಡಿದರು. ನಮ್ಮೊಡನಿದ್ದ ಗೆಳೆಯರನ್ನೆಲ್ಲ ಕೇಳಿದರು... ಖುಷಿಯಾಯಿತು..
  • ಇನ್ನು ನಮ್ಮ ಹೆಡ್ ಮೀದ ಉಷಾರಾವ್ ಒಬ್ಬರು ಇಂಗ್ಲಿಷ್ಪಾಠ ಮಾಡುತ್ತಿದ್ದರು. ಫುಲ್ ಇಂಗ್ಲಿಷ್‌. ನಮಗೆ ಉಹೂಂ! ಅರ್ಥಆಗುತ್ತಿರಲಿಲ್ಲ. ಆದರೆ, ನಂತರ ಅರ್ಥವಾಗಿಸುತ್ತಿದ್ದರು. ಪದಗಳ ಅರ್ಥ, ಸ್ಪೆಲ್ಲಿಂಗ್ ಎಲ್ಲ ತಿದ್ದಿ ತೀಡಿ ಕಲಿಸಿದವರು.
  • ಒಮ್ಮೆ ನಾವೆಲ್ಲ ಮಕ್ಕಳೂ (- ಮಕ್ಕಳು ಅಂದರೆ ತಂಗಿಯರು, ಚಿಕ್ಕಮ್ಮನ ಮಕ್ಕಳು ಹೀಗೆ) ಶಾಲೆಯಲ್ಲಿ ಮಧ್ಯಾಹ್ನ ಸುಮ್ಮನೇಅಲ್ಲಿಗೆ ಹೋಗಬೇಕು ಹೀಗೆ ಏನೋ ನೆಪಹೇಳಿ ಮನೆಮಂದಿಯ ಜೊತೆ ಚಲನಚಿತ್ರಕ್ಕೆ ಹೋಗಿದ್ದೆವು. ಅದು ಹೇಗೋ ಅವರಿಗೆತಿಳಿದುಬಿಡುತ್ತಿತ್ತು. ಒಮ್ಮೆ ಹೀಗೆ ಹೋಗಿರುವಾಗ ಅದೇ ಚಲನ ಚಿತ್ರ ನೋಡಲು ಕೆಲವು ಟೀಚರ್ ಬಂದಿದ್ದರು. ಅದೂಸಾಲದೆಂಬಂತೆ ನಮ್ಮ ಪಕ್ಕದಲ್ಲಿಯೇ (ಆಗೆಲ್ಲ ಟೆಂಟು ಸಿನಿಮಾ ನೆಲವೇ ಜಾಸ್ತಿ ಹೋಗುತ್ತಿದ್ದದ್ದು) ಕುಳಿತಿರಬೇಕೆ? ಸಿನಿಮಾ ಹೆಸರೂನೆನಪಿಲ್ಲ (ಬಹುಶ: ಕರುಳಿನ ಕರೆ ಅಥವಾ ದ್ವಾರಕೀಶ್ ಚಿತ್ರ ಗುರು ಶಿಷ್ಯರು ಇರಬೇಕು). ಮಾರನೇ ದಿನ ಇದೇ ಶಾಲೆಯಲ್ಲಿವಿಷಯವಾಗಿತ್ತು... ಹಹಹ್ಹ...

ಹೈಸ್ಕೂಲಿನ ಟೀಚರ್‍ಸ್ ಜೊತೆಯ ಒಡನಾಟ ತುಂಬಾ ಕಡಿಮೆ (ಕೇವಲ ಮೂರು ವರ್ಷಗಳು). ಆದರೂ ಕೆಲವೇ ಕೆಲವರು ಮತ್ತೆ ಮತ್ತೆ ನೆನಪಾಗುತ್ತಾರೆ. ಕೆಲವರು ಆಗೀಗ ಸಿಕ್ಕದ್ದಾರೆ.. ಸಿಕ್ಕುತ್ತಿರುತ್ತಾರೆ...

  • ಎಲ್ಲಕಿಂತ ಮುಖ್ಯವಾಗಿ ನಮಗೆಲ್ಲಾ ಒಂದು ವಿದ್ಯೆಯನ್ನು ಧಾರೆಯೆರೆಯಲು ಶ್ರಮ ಪಟ್ಟ ಹಿರಿಯ ವೃಂದಗಳಿಂದ ಭಾಷಾಶುದ್ಧಿ, ಉತ್ತಮ ಗುಣಗಳನ್ನು ಕಲಿತಿದ್ದೇವೆ. ಅವರೆಲ್ಲರ ನೆನಪುಗಳು ಆಗಾಗ ಬರುತ್ತಿರುತ್ತದೆ. ಕೆಲವರು ನಮ್ಮೊಂದಿಗಿಲ್ಲ. ಕೆಲವರು ಇನ್ನೂವೃತ್ತಿಯಲ್ಲಿದ್ದಾರೆ, ಮತ್ತೆ ಕೆಲವರು ನಿವೃತ್ತರಾಗಿದ್ದಾರೆ.

ಇದೆಲ್ಲ ನೆನಪಿಸಿಕೊಂಡಾಗ ನಾವಿಷ್ಟರ ಮಟ್ಟಿಗೆ ಬೆಳೆಯಲು ಇಂತಹ ಗುರುಗಳಲ್ಲದೇ ಇನ್ಯಾರಿಂದ ದಾರಿತೋರಲು ಸಾಧ್ಯ? ಮನೆಯೇ ಮೊದಲ ಶಾಲೆಯಾದರೂ.. ನಂತರದ ಶಾಲೆ ಗುರುವಿನೊಡನೆ ಕಳೆದ, ಬರೆದ, ಕೂಡಿದ ಕ್ಷಣಗಳು ಅದ್ಭುತ. ಅವನ್ನೆಲ್ಲ ಮರೆಯಲುಂಟೇ? ಗುರುವಿಲ್ಲದ ಮನೆಯಿಲ್ಲ, ಗುರಿಯಿಲ್ಲದ ಬದುಕಿಲ್ಲ... ಇದ್ದರೂ ಒಂದು ಗುರು-ಗುರಿ ಇರಲೇಬೇಕು... ಇರುತ್ತದೆ. ಅದರ ವ್ಯಾಪ್ತಿ ಊಹೆಗೆ ಮೀರುವಂತಹುದು.

ಇಂತಹ ಗುರುಗಳನ್ನು ಎಲ್ಲರೂ ಒಂದಲ್ಲಾ ಒಂದು ವಿಧದಲ್ಲಿ ಪಡೆದಿರುತ್ತಾರೆ. ಹಾಗೆಯೇ ಉತ್ತಮ ಶಿಷ್ಯರನ್ನೂ ಗುರುಗಳು ಪಡೆದರೆ... ಅದರ ಪರಿಧಿಯೇ ಬೇರೆ ಇರುತ್ತದೆ. ಹಾಗಾಗುವುದು ಅಪರೂಪ...

ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ ಎಂದರು ದಾಸರು... ಆದರೆ ಇಂದಿನ ದಿನಗಳಲ್ಲಿ ಗುರುವೇ ನೀ ಗುಲಾಮನಾಗಿರುವ ತನಕ ಸಂಬಳವಿಲ್ಲ, ಉಂಬಳವಿಲ್ಲ.. ಎನ್ನುವವರೂ ಇದ್ದಾರೆ.. ಏನೆನ್ನಬೇಕು ಇದಕ್ಕೆ???

ಭಾರತದ ರಾಷ್ಟ್ರಪತಿಯಾಗಿದ್ದ, ಶಿಕ್ಷಣತಜ್ಞ ಡಾ|| ಸರ್ವಪಲ್ಲಿ ರಾಧಾಕೃಷ್ಣನ್ರವರ ಜನ್ಮ ದಿನ (ಸೆಪ್ಟೆಂಬರ್, ೧೮೮೮ - ೧೯೭೫). ದಿನವಾದರೂ ಗುರುಗಳನ್ನು ನೆನಯದಿದ್ದರೆ... ಹೇಗೆ? ಹಾಗೆಂದುಕೊಳ್ಳುತ್ತಲೇ ನನ್ನ ನೆನಪಿನಲ್ಲುಳಿದವನ್ನು ಇಲ್ಲಿ ನಿಮ್ಮೊಡನೆ ಹಂಚಿಕೊಂಡೆ. (ಇನ್ನೂ ಇವೆ... ಸಾಧ್ಯವಾದರೆ ಆಗಾಗ ಬರೆಯುತ್ತೇನೆ ಅಂದುಕೊಂಡಿರುವೆ...)

ಸನ್ಮಾರ್ಗ, ವಿದ್ಯೆ, ಭಾಷೆ, ಸಂಸ್ಕೃತಿ ಇವುಗಳನ್ನೆಲ್ಲ ಕಲಿಸಿದ ಹಾಗೂ ನಮ್ಮೆಲ್ಲರ ಮನದಲ್ಲಿ ಮನೆಮಾಡಿರುವ ಎಲ್ಲ ಗುರುಗಳಿಗೂ ಮನ:ಪೂರ್ವಕ ನಮಸ್ಕಾರಗಳು.

ಇಲ್ಲಿ ನಮ್ಮ ಯಾವುದೇ ಶಿಕ್ಷಕಿ/ ಇವರುಗಳಿಗೆ ನೋವಾಗದಿರುವಂತೆ ನೆನಪಿಸಿಕೊಂಡಿದ್ದೇನೆ ಎಂದುಕೊಂಡಿದ್ದೇನೆ. ತಪ್ಪಾಗಿದ್ದರೆ... ಕ್ಷಮೆಯಿರಲಿ, ಮಿಸ್!

-ಚಂದ್ರಶೇಖರ ಬಿ.ಎಚ್.

ಬುಧವಾರ, ಆಗಸ್ಟ್ 25, 2010

ನಯನದಲಿ ಇದೇನಿದು...?

**********************************************
ಬೆಳಗಿನ ಮಂಜಿನ ಹನಿಗಳು
ಎಸ್‌ಎಮ್‌ಎಸ್ ಸಂದೇಶಗಳು
ನೀನು ಬರುತಿರುವೆಯಾ!
ಜಲನಯನ - ನೋಡಲು
ಗುಬ್ಬಿ-ಎಂಜಲು ಸವಿಯಲು
ಎಂಬುದಕೆ ಆಗಬಹುದು, ಬರುತಿಹೆನು
ಎಂದು ಮರುತ್ತರವಾಗಿ ಸಂದೇಶ ರವಾನಿಸಿದ್ದೆ.

ಖಂಡಿತಾ ಬನ್ನಿ, ಅಲ್ಲಿಯೇ ಸಿಗೋಣ
ಬಹಳ ದಿನಗಳ ನಂತರ ನಮ್ಮ ಭೇಟಿ
ನಾನು ಊರಿನಿಂದ ಬರುತಿರುವೆ
ನೀವು ಬರದಿದ್ದರೆ, ಹೇಗೆ? ಹೀಗೆ
ಪ್ರಶ್ನೆಗಳ-ಉತ್ತರಗಳ ಒತ್ತಾಯದ ಸುರಿಮಳೆ
ಹಿಂದಿನ ದಿನದ ಜಡಿಮಳೆ ನೆನೆದು
ಇಂದೂ ನೆನೆಯಬೇಕೆ? ಎಂದನಿಸಿದರೂ...
ಮನಸು ಬದಲಾಗಿ, ಉಸ್ಸೆಂದು ಬಸ್ಸನೇರಿ
ಹೊರಟಿದ್ದೆ... ನಾಲ್ಕು ಬಸ್ಸು ಹತ್ತಿ
ಹತ್ತರ ಸಮಯಕ್ಕೆ `ನಯನ' ದಲಿದ್ದೆ.

[ವಿಶೇಷ ಸೂಚನೆ: ಯಾರಿಗೂ ನೋವುಂಟು ಮಾಡುವುದಿಲ್ಲ ಈ ನನ್ನ ಬರಹ ಎಂಬ ನಂಬಿಕೆಯಿಂದ, ನನ್ನ ಗಮನಕ್ಕೆ ಬಂದು ನೆನಪಿನಲ್ಲಿದ್ದ ಪ್ರಸಂಗಗಳನ್ನು ಬರೆದಿದ್ದೇನೆ.]

ನಯನ ಸಭಾಂಗಣಕ್ಕೆ ಬಂದಾಗ ಪ್ರಕಾಶಣ್ಣ, ಪರಾಂಜಪೆ ಸರ್‍, ಶಿವು, ಮಲ್ಲಿಕಾರ್ಜುನ ಹೀಗೆ ಗೊತ್ತಿದ್ದವರೊಡನೆ ಇರುವಾಗ ಇನ್ನೂ ಹಲವು ಬ್ಲಾಗಿಗರ ಪರಿಚಯವಾಯಿತು. ಶ್ಯಾಮಲಾರವರ ಕರೆಬಂದಿತು. ಜೊತೆಗೆ ಸುರೇಶ ಅತ್ರಾಡಿಯವರ ಪರಿಚಯ. ಒಂದಷ್ಟು ಮಾತುಕತೆ. ನಿಮಗೀಗಾಲೇ ಗೊತ್ತಿರುವಂತೆ ಪುಸ್ತಕ ಬಿಡುಗಡೆ ಸಮಾರಂಭವಾದ ಮೇಲೆ... ಒಂದಷ್ಟು ಹೊತ್ತು ವಿಚಾರ ವಿನಿಮಯ, ಪುಸ್ತಕಕೊಳ್ಳುವಿಕೆ, ಸಹಿ ತೆಗೆದುಕೊಳ್ಳುವಿಕೆ... ನಗು, ನಲಿವು ಎಲ್ಲ ನಡೆಯುತ್ತಿರುವಾಗ ಮತ್ತಷ್ಟು ಮಿತ್ರರನ್ನು ಪರಿಚಯಿಸಿಕೊಂಡಿದ್ದಾಯಿತು.

ಶ್ರೀಯುತ ವಿ.ಆರ್‍.ಭಟ್ಟರಲ್ಲವೇ ನೀವು ಎಂದಾಕ್ಷಣ, ನೀವುಗಳು ಫೋಟೋ ಹಾಕೋದಿಲ್ಲ ಅದರಿಂದ ಗುರುತು ಹಿಡಿಯಲು ಕಷ್ಟವಾಗುತ್ತೆ, ಫೋಟೋ ಹಾಕಿ ಎಂಬ ತಾಕೀತು(??!!), ಪ್ರೀತಿಯಿಂದ ಬಂದಿತು.

ಇದರ ನಡುವೆ ಶಿವು ಅವರಿಗೆ ತಿಂಡಿ=ಕಾಫಿ ಬಂದಿಲ್ಲವೆಂಬ ಯೋಚನೆ...

ಛಾಯಾಚಿತ್ರ ಪ್ರದರ್ಶನದಿಂದ ನನಗೂ ಹೊಸಬಗೆಯ ವಿಚಾರಗಳು (ಛಾಯಾಗ್ರಹಣ ಕುರಿತು) ತಿಳಿಯಲು ಅನುಕೂಲವಾಯಿತು.

ಪಾಲಚಂದ್ರರನ್ನು ಮಾತಾಡಿಸುತ್ತಾ ಅನುಭವ ಮಂಟಪದಲ್ಲಿ ಹಾಕಿರುವ ಸೈಕಲ್‌ ಸವಾರಿಯ ಚಿತ್ರದ ಬಗ್ಗೆ ತಿಳಿಸಿದಾಗ ಅವರು ಉತ್ತರಿಸಿದ್ದು... ಇಲ್ಲಿಗೆ ಈಗ ನಾವು ಬೈಸಿಕಲ್ಲಿನಲ್ಲಿಯೇ ಬಂದಿರುವುದು ಎಂದರು. ಖುಷಿಯಾಯಿತು. ಏಕೆಂದರೆ, ಅವರ ಸೈಕಲ್‌ ಪ್ರೀತಿಯ ಕಂಡು...

ಇನ್ನು ನಿಮ್ಮಳಗೊಬ್ಬ ಬಾಲು (ಶ್ರೀಯುತ ಬಾಲಸುಬ್ರಮಣ್ಯ) ಇವರು ಪರಿಚಯಿಸಿಕೊಳ್ಳುವಾಗ... ಹೊಸ ವಿಷಯ ತಿಳಿಯಿತು. ಛಾಯಾಗ್ರಹಣ ಹವ್ಯಾಸ ಅವರದ್ದು. ಇದರ ಜೊತೆಗೆ ಅವರು ಶ್ರೀರಂಗಪಟ್ಟಣದ ಬಗೆಗೆ ತಿಳಿಯದ ಅನೇಕ ವಿಚಾರಗಳನ್ನು ಕ್ರೋಢೀಕರಿಸಿ ಒಂದು ಬ್ಲಾಗ್‌ ತಯಾರಿಸುವ ವಿಚಾರ.

ಶ್ರೀಯುತ ವಿ.ಆರ್‍. ಭಟ್‌ ಅವರನ್ನು ಕಂಡಾಗ, ಅದೂ ವೇದಿಕೆಯಲ್ಲಿ ಅವರು ಕಾಣಿಸಿಕೊಂಡಾಗ ಕೆಲವರಿಗೆ ಹೇಗನ್ನಿಸಿರಬಹುದು? ಅವರನ್ನು ಕಂಡಾಗ ಯಾರೋ ಒಬ್ಬರು ಪದೇ ಪದೇ ನೆನಪಾದರು. ಯಾಕೆಂದರೆ, ಹೆಚ್ಚಿನ ಅಭಿಮಾನಿಗಳು ಆತನಿಗಿದ್ದಾರೆ.. ಯಾರಿರಬಹುದು? ನನಗೆ ಯಾರೋ ನೆನಪಾಗುತ್ತಿದ್ದಾರೆ ಅನಿಸಿದರೂ, ಹೊಳೆಯುತ್ತಿರಲಿಲ್ಲ. ಅಂಥವನೊಬ್ಬ ಕೋಟಿಗೊಬ್ಬ!!! ನನ್ನ ಪಕ್ಕದಲ್ಲಿಯೇ ಇದ್ದವರು .... ಮಾತುಗಳು ಡಾ.ವಿಷ್ಣುವರ್ಧನ್‌ ನೆನಪಿಸಿದರು. ವೇದಿಕೆಯಲ್ಲಿದ್ದ ಭಟ್ಟರ ಚಹರೆ, ಮಾತು, ವರ್ತನೆ, ಎಲ್ಲ `ಆ ರಾಮಾಚಾರಿ' ಯ ನೆನಪನ್ನು ತಂದಿತ್ತು... (ಇದರಿಂದ ಭಟ್ಟರಿಗೆ ಖುಷಿ ಎನ್ನುವ ಅನಿಸಿಕೆ ನನ್ನದು)

ಇದೆಲ್ಲಕಿಂತ ಆ ನಂತರದ ಉಡುಗೊರೆ ಸಮಾರಂಭದಲ್ಲಿ ನನ್ನನ್ನೂ ಕರೆದದ್ದು. ಇದಕ್ಕೆ ನಾನು ಅರ್ಹನೇ? ಎಂಬುದು ನನ್ನ ವಿಚಾರ. ಆದರೆ ಕುತೂಹಲ. ಈ ಪ್ರಕಾಶಣ್ಣ ಒಂದಿಲ್ಲಾ ಒಂದು ಫನ್‌ತೋಷಕ ಇಟ್ಟಿರುತ್ತಾರೆ ಅನಿಸಿತು.

ಹೊರ ಆವರಣದಲ್ಲಿ ಎಲ್ಲರ ಉಡುಗೊರೆಯ ಪಟ್ಟಣಗಳೂ ಬಿಚ್ಚಕೊಳ್ಳುವಾಗ, ಅವರುಗಳಿಗೆ ಸಿಕ್ಕ ಉಡುಗೊರೆಯ ತೋರಿಸುವಾಗ,, ನನಗೂ ಒಂಥರಾ ಕಸಿವಿಸಿ. ನನಗೇನು ಬಂದಿರಬಹುದು??? ಕೊನೆಗೂ ಉಡುಗೊರೆಯೊಂದ ಕೊಟ್ಟಿದ್ದರು. ಅದೂ ಹಸಿವಾಗಿರುವಾಗ `ಪಾರ್ಲೆ-ಜಿ' ಶಕ್ತಿ ಬಿಸ್ಕತ್ತು. ಉಪಯೋಗಿಸುವ ಯೋಚನೆ ಹೊಳೆಯಲೇ ಇಲ್ಲ. ಏಕೆಂದರೆ,... ಉಡುಗೊರೆಯ ನೋಡಿದೊಡನೆ ಹಸಿವು ಮಾಯವಾಗಿತ್ತು. ಖುಷಿಯಾಗಿತ್ತು...

ಹಾಡುಗಾರರಿಂದ ಮೂಡಿಬಂದ ಹಾಡುಗಳು ಸಖತ್ತಾಗಿದ್ದವು. ಮೊದಲಿಗೆ ಪ್ರಾರ್ಥನೆಗಾಗಿ ಹಾಡಿದ ಪುರಂದರದಾಸರ ಗೀತೆ ಅದ್ಭುತವಾಗಿತ್ತು. ಹಾಗೆಯೇ ಎಲ್ಲೋ ಹುಡುಕಿದೆ ಇಲ್ಲದ ದೇವರ; ನಿಂಗಿ.. ನಿಂಗಿ... ಹಾಗೂ ಹಿಂದಿಯ ಹಾಡುಗಳು ಸ್ವರ ತಪ್ಪಿದಂತೆನಿಸಿದರೂ, ಸಂತ ಸತಂದವು..

ಚೇತನಾ-ನಂಜುಂಡ, ಸುಘೋಷ್, ಶಿವಪ್ರಕಾಶ್, ಗುರುಪ್ರಸಾದ್, ಉಮೇಶ ದೇಸಾಯಿ, ಮಹೇಶ್, ಪ್ರವೀಣ್, ನವೀನ್, ದಿವ್ಯಾ, ಪ್ರಗತಿ-ದಿಲೀಪ್, ಸೀತಾರಾಮ್ ಕೆ. ಭಟ್ ದ್ವಯರು, ಡಾ.ಕೃಷ್ಣಮೂರ್ತಿ, ಉದಯ್ ಹೆಗ್ಡೆ, ಮಲ್ಲಿಕಾರ್ಜುನ, ಅವರ ಛಾಯಾಚಿತ್ರ ಗುರು ಎಮ್.ಎಸ್. ಹೆಬ್ಬಾರ್‍ ಇತ್ಯಾದಿ. ಕೆಲವರ ಹೆಸರು ನೆನಪಿಗೆ ಬರುತ್ತಿಲ್ಲ (ಹೆಸರು ತಪ್ಪಾಗಬಾರದಲ್ಲವೇ?) ಹೀಗೆ ಇವರೆಲ್ಲರ ಪರಿಚಯವಾಗಿದ್ದು ಮತ್ತೂ ಖುಷಿಕೊಟ್ಟ ವಿಚಾರ.

ನಾನೂ ಕ್ಯಾಮೆರಾ ತಂದಿದ್ದೆ. ಅದರ ಜೊತೆಗೆ ಬೇಕಿದ್ದ ಶಕ್ತಿ ಮಾಯವಾಗಿತ್ತು (ಸೆಲ್‌ಗಳು). ಹಾಗಾಗಿ ಫೋಟೋ ತೆಗೆಯಲು ಆಗಲಿಲ್ಲ. ಮತ್ತಷ್ಟು ಮಧುರ ನೆನಪುಗಳನ್ನು ಕಳೆದುಕೊಂಡೆನಾದರೂ, ಕೆಲವರು ತಮ್ಮ ಬ್ಲಾಗುಗಳಲ್ಲಿ ಚಿತ್ರ ಪ್ರಕಟಿಸುತ್ತಾರೆಂಬ ಸಂತಸ ನೂರ್ಮಡಿಯಾಗಿದೆ.

ಇದೊಂದು ಸುಂದರವಾದ ಭಾನುವಾರವಾಗಿತ್ತು ಎಂಬುದೇ ವಿಶೇಷಾನುಭವ ಕೊಟ್ಟಿದೆ. ಇಂತಹ ಮತ್ತೊಂದು ದಿನಕ್ಕಾಗಿ ಕಾಯೋಣ!, ಅದು ಯಾರಿಂದ ಶುರುವಾಗುವುದೋ ತಿಳಿಯದು. ಒಟ್ಟಿನಲ್ಲಿ ಮತ್ತೆ ಭೇಟಿಯಾಗುತ್ತೇವೆಯಲ್ಲವೆ?

ಚಂದ್ರಶೇಖರ ಬಿ.ಎಚ್.೨೫೮೨೦೧೦

ಮಂಗಳವಾರ, ಆಗಸ್ಟ್ 24, 2010

ಅದಕ್ಕೆ ನಿಮ್ಗೆ ಡಿಸ್ಕೌಂಟ್ ಇಲ್ಲ!!!


~~~~~****~~~~~
~~~~~ರಕ್ಷಾಬಂಧನದ ಶುಭಾಶಯಗಳು ~~~~~
~~~~~****~~~~~

ಅಚಾನಕ್ಕಾಗಿ ಬರುವಂತಹ ಮಾತುಗಳು ದಿಗ್ಭ್ರಮೆ ಅಥವಾ ಎಲ್ಲ ದಿಕ್ಕುಗಳನ್ನೂ ಒಮ್ಮೆನೋಡುವಂತೆ ಮಾಡುತ್ತದೆ ಎನ್ನಬಹುದು!

ಕಳೆದ ವಾರ ನನ್ನ ಸ್ನೇಹಿತನ ಜೊತೆ ಮಾತಾಡುತ್ತಿರುವಾಗ ಹೀಗೆಯೆ ಪುಸ್ತಕಗಳ ಕುರಿತು ಮಾತು ಬಂತು. ೧೮೫೭ ಭಾರತ ಮಹಾಸಂಗ್ರಾಮ ಓದಿದೆ. ನನ್ನ ಬಳಿ ಇಂತಹ ಲೇಖಕರ ಪುಸ್ತಕವಿದೆ. ಕವಲು ಓದಿದಿರಾ? ಎಸ್.ಎಲ್.ಭೈರಪ್ಪನವರ ಕೃತಿ ತುಂಬಾ ಜನ ಇಷ್ಟಪಡುತ್ತಾರೆ. ಹೀಗೆ ಮಾತು ಮುಂದುವರೆದಿತ್ತು.

ಕೆಲವೊಮ್ಮೆ ಪುಸ್ತಕ ಕೊಳ್ಳುವ ಅಂತ ಅಂಗಡಿಗೆ ಹೋಗಿದ್ದರೂ, ಪುಸ್ತಕದ ಬೆಲೆ, ಶೀರ್ಷಿಕೆ, ಜೊತೆಗೆ ಬರಹಗಾರರು ಯಾರು ಎಂದು ಹಿಂಬದಿಯ ಪುಟ ನೋಡದೇಕೊಳ್ಳುವುದಿಲ್ಲ. ಕೊಳ್ಳುವುದಕ್ಕೆ ಮುಂಚೆ ಪುಸ್ತಕದಲ್ಲಿನ ಒಂದೆರಡು ಅಧ್ಯಾಯದನಡುವಿನ ಹಾಳೆಗಳನ್ನು ಓತಪ್ರೋತವಾಗಿ ತಿರುವಿ, ಹಾಗೆ ಹೀಗೆ ಯೋಚಿಸಿಕೊಳ್ಳುವುದು ಅಥವಾ ಏಕ್ದಂ ಕೊಂಡೇ ಬಿಡುವುದು, ಹೀಗೆ ಸಾಗುತ್ತಿತ್ತು. ಜೊತೆಗೆಡಿಸ್ಕೌಂಟು ಉಂಟಾ? ಎಂಬ ಪ್ರಶ್ನೆಯನ್ನು ಪುಸ್ತಕದಂಗಡಿಯವರಿಗೆ ಆಗಾಗತೂರುವುದೂ ಉಂಟು. ಕೆಲವೊಮ್ಮೆ ಕೆಲವು ಪುಸ್ತಕಗಳಿಗೆ ಡಿಸ್ಕೌಂಟು ಸಿಗುತ್ತದೆ. ಕೆಲವಕ್ಕೆ ಇಲ್ಲ ಎನ್ನುತ್ತಾರೆ.

ಇಂತಹದೇ ಒಂದು ಸಂದರ್ಭವಂತೆ ಅದು. ಒಂದು ಪುಸ್ತಕಕ್ಕೆ ಸೋಡಿ ಕೊಟ್ಟರು. ಮತ್ತೊಂದಕ್ಕೆ ಕೇಳಿದ್ದಕ್ಕೆ ಉತ್ತರ ಅಚಾನಕ್ಕಾಗಿ ಬಂದಾಗ?? ಹೀಗಾಯಿತಂತೆ..

ಹೇಗೆ? ಮತ್ತು ಯಾವ ಪುಸ್ತಕಗಳು??

ಎಲ್ಲರಿಗೂ ಗೊತ್ತಿರುವಂತೆ ಗಾಂಧೀಜಿಯ ಹತ್ಯೆಯನ್ನು ನಾಥೋರಾಂ ಗೋಡ್ಸೆ ಮಾಡಿದ್ದು, ಇದರಲ್ಲಿ ಸೋದರ ವಿನಾಯಕ ಗೋಡ್ಸೆ ಈ ಸಂಚಿನಲ್ಲಿದ್ದಾರೆ ಎಂಬ ಆರೋಪ, ಇತ್ಯಾದಿ ವಿಚಾರಣೆಗಳು. ನಂತರ ಒಬ್ಬರಿಗೆ ಗಲ್ಲು, ಮತ್ತೊಬ್ಬರಿಗೆ ಜೀವಾವಧಿ ಶಿಕ್ಷೆ.. ಇಬ್ಬರಿಂದಲೂ ಗಾಂಧೀಜಿ ಹತ್ಯೆಯ ಕುರಿತಾಗಿ ಬರವಣಿಗೆ. ಅದರಲ್ಲಿ ನಾಥೋರಾಮ್ನದು `ನಾನೇಕೆ ಗಾಂಧಿಯನ್ನು ಕೊಂದೆ? ಆದರೆ, ವಿನಾಯಕಗೋಡ್ಸೆದು `ಗಾಂಧಿ ಹತ್ಯೆ ಮತ್ತು ನಾನು'.

ಶೇಕಡಾ ೧೦ ರಂತೆ ಎರಡನೆಯ ಪುಸ್ತಕಕ್ಕೆ ಸೋಡಿ ಸಿಕ್ಕಿತಂತೆ. ಸರಿ, ಮೊದಲನೆಯಪುಸ್ತಕ ಡಿಸ್ಕೌಂಟು ಕೇಳಿದ್ದಕ್ಕೆ...

ಗಾಂಧೀಜಿಯನ್ನು ಕೊಂದಿದ್ದಕ್ಕೆ `ನಿಮ್ಗೆ' ಡಿಸ್ಕೌಂಟು ಕೊಡೋದಿಲ್ಲ, ಎಂದು ಆ ನಿಮಿಷಕ್ಕೇ ಅಂಗಡಿಯಾಕೆಯಿಂದ ಉತ್ತರ ಬಂದಿತಂತೆ.

ತಕ್ಷಣಕ್ಕೆ ಉತ್ತರ ಕೇಳಿದರೆ.... ಇವರೇ (ಪುಸ್ತಕ ಕೊಳ್ಳುತ್ತಿರುವವರೇ) ಮಹಾತ್ಮಾಗಾಂಧೀಜಿಯವರನ್ನು ಕೊಂದರೇನೋ ಎಂಬ ಭಾವನೆ. ಆದರೆ, ಅದು ಆಕೆಯಿಂದ ಬಂದ ಅಚಾನಕ್ಕಾದ (ನಾವು ನಕ್ಕಿದ್ದೇ ನಕ್ಕಿದ್ದು) ಮಾತುಗಳಾದರೂ, ತಕ್ಷಣಕ್ಕೆತಲ್ಲಣವಾದರೂ, ನಗುಮೂಡಿಸಿತ್ತಂತೆ...

(ಇದು ನನ್ನ ಗೆಳೆಯರಿಗಾದ ಅನುಭವ. ಮತ್ತು ನಿಮ್ಮೊಡನೆ ಹಂಚಿಕೊಳ್ಳುವುದಕ್ಕೆ ಅವರ ಅಭ್ಯಂತರವಿಲ್ಲ ಎಂಬ ಕಾರಣದಿಂದ ಇಲ್ಲಿ ಬರೆದಿರುವೆನು. ಈ ವಿಷಯ ತಿಳಿಸಿದ ಗೆಳೆಯರಿಗೆ ಧನ್ಯವಾದಗಳು).

-ಚಂದ್ರಶೇಖರ ಬಿ.ಎಚ್. ೨೧೮೨೦೧೦

ಶುಕ್ರವಾರ, ಆಗಸ್ಟ್ 13, 2010

ಬಾಂಧವ್ಯದ ದಿನ

ನಾಗರಪಂಚಮಿಯದು ದಿನ
ಅಣ್ಣತಂಗಿಯರ ಬಾಂಧವ್ಯದ ದಿನ
ನಾಗದೇವತೆಯ ಪೂಜಿಸುವ ದಿನ
ಸೋದರಸೋದರಿಯರ ಹರಸುವ ದಿನ
ತಣ್ಣಗಿರಲಿ ತವರು ಮನೆಯ ಬಂಧನ
ಎಂದು ಹರಸುವ ಮನ, ಹಾರೈಸುವ ದಿನ


ಎಲ್ಲರಿಗೂ ನಾಗರಪಂಚಮಿ ಹಬ್ಬದ ಶುಭಾಶಯಗಳು!

ಗುರುವಾರ, ಆಗಸ್ಟ್ 5, 2010

ಹಿರೋಷಿಮಾ...೬೫

ಮಾನವನ ದಾಹಕ್ಕೆ ಬಲಿಯಾಗುವು ಏನೆಲ್ಲ?

ಒಂದು ದೇಶದಲ್ಲಿನ ಜನಾಂಗದ, ನೈಸರ್ಗಿಕ ಸಂಪತ್ತು, ಜೀವ ಸಂಕುಲವೆಲ್ಲ ನಾಶವಾಗುತ್ತವೆ. ಇಲ್ಲವೇ, ಒಂದಾದ ನಂತರ ಕೊಂಡಿ ಕಳಚಿಕೊಳ್ಳುತ್ತಾ... ಭೀಕರ ಕ್ಷಾಮ ತಲೆದೋರುತ್ತದೆ, ಖಾಯಿಲೆಗಳು, ಅಂಗವೈಕಲ್ಯ, ಕಲುಷಿತ ವಾತಾವರಣ, ಪ್ರಾಣಿಸಂಕುಲದ ನಾಶ... ಹೀಗೆ ಮಾನವನಿರ್ಮಿತ ಬಾಂಬುಗಳಿಂದ ತನಗೆ ತಾನೇ `ಭಸ್ಮಾಸುರ'ನಾಗುತ್ತಾನೆ. ಅದಕ್ಕೆ ಉದಾಹರಣೆ: ಜಪಾನಿನ ನಾಗಸಾಕಿ ಮತ್ತು ಹಿರೋಷಿಮಾ ಮೇಲಿನ ೧೯೪೫ರ ಯುದ್ಧದಲ್ಲಿ ನಡೆದ ಅಣುಬಾಂಬಿನ ದಾಳಿ.

ಆಗಸ್ಟ್ ೬, ೧೯೪೫, ೧.೪೫ ಎ.ಎಂ. ಗೆ ಯುಎಸ್‌ಬಿ-೨೯ ಎರಡನೇ ಅಣುಬಾಂಬನ್ನು ಹೊತ್ತು ಹಿರೋಷಿಮಾ ಮೇಲೆ ಹಾಕಿತು. ಯುದ್ಧ ವಿಮಾನಚಾಲಕ ಎನೊಲಾ ಗೇ... ಒಂದು ನಿಮಿಷದ ವಿವೇಚನಾ ರಹಿತ ತೀರ್ಮಾನ ಒಂದು ಜನಾಂಗದ, ದೇಶದ ಚಿತ್ರಣವನ್ನೇ ಬದಲಾಯಿಸಿತು. ಇದೆಲ್ಲ ಏಕಾಗಿ? ಇಂದಿಗೆ ೬೫ ವರ್ಷವಾಗುತ್ತಿದೆ. ಅಲ್ಲಿನ ಪರಿಸ್ಥಿತಿಯಲ್ಲಿ ಇನ್ನೂ ಸಹ ಸುಧಾರಣೆ ಕಂಡುಬಂದಿಲ್ಲವೆಂದು ವರದಿಗಳು ತಿಳಿಸುತ್ತವೆ. ಅಣುವಿಕಿರಣದ ಪರಿಣಾಮ ಭಯಾನಕವಾಗಿದ್ದು, ಇನ್ನೂ ಅದರ ಪಳಿಯುಳಿಕೆಗಳಿವೆ ಎಂಬುದಾಗಿ ತಿಳಿದುಬರುತ್ತದೆ.

ಇಂತಹ ಕೃತ್ಯಗಳನ್ನು ವಿಶ್ವ ಸಮುದಾಯ ಖಂಡಿಸಬೇಕು. ಅಣುಬಾಂಬಿನಂತಹ ವಿಶ್ವದ ವಿನಾಶಕಾರೀ ಅಸ್ತ್ರಗಳನ್ನು ಸದ್ಬಳಕೆ (??) ಮಾಡಿಕೊಳ್ಳಬೇಕು. ಅದು ಬಿಟ್ಟು, ಪರರ ಸಂಹಾರಕ್ಕೆ ಉಪಯೋಗಿಸಿದರೆ, `ಭಸ್ಮಾಸುರ' ನ ಗತಿಯೇ ಆಗುವುದು...

ಆ ವಿಚ್ಛದ್ರಕಾರಿ ಆಕ್ರಮಣದಲ್ಲಿ ಲಕ್ಷಾಂತರ ಮಂದಿ ಬೆಂದುಹೋದರು. ಅಂಗವಿಕಲರಾದರು. ಅವರ ನಂತರದ ಪೀಳಿಗೆಯಲ್ಲಿ ಅಣುವಿಕಿರಣದ ಅಂಶ ಇನ್ನೂ ಆರದೆ ಉಳಿದಿರುವುದು ಮಾನವ ಜನಾಂಗಕ್ಕೆ ಒಂದು ಕಪ್ಪು ಚುಕ್ಕೆಯಷ್ಟೇ ಅಲ್ಲ, ಎಂದಿಗೂ ಮರೆಯಲಾಗದಂತಹ ಘಟನೆ... ಇದು ಮಾನವಜನಾಂಗಕ್ಕೆ ಒಂದು ಪಾಠವಾಗಿದೆ.

ಇಂದಿಗೆ ೬೫ ವರ್ಷ. ಆ ದಿನದಿಂದ ಇಂದಿನವರೆಗೂ ನಲುಗಿದವರ ಬಾಳಿನಲ್ಲಿ ಬೆಳಕು ಮೂಡಲಿ.. ಎಂದು ಆಶಿಸೋಣ.

ಪೂರಕ ಓದಿಗಾಗಿ: http://www.hiroshimacommittee.org/
http://www.japaneselifestyle.com.au/travel/hiroshima_bombing.ಹ್ತ್ಮ್

ಮಂಗಳವಾರ, ಜುಲೈ 27, 2010

ನೆನಪಿನಲ್ಲಿ

ದಶಕಗಳಿಗೂ ಮೀರಿದ ಒಂದು ದಿನ. ಆ ದಿನಾಂಕ, ವರ್ಷ ನೆನಪಿಲ್ಲವಾದರೂ ಆಜುಬಾಜಿನ ವರ್ಷಗಳ ನೆನಪಿದೆ. ಸುಮಾರು ೧೯೯೦-೯೨ ಇರಬಹುದು. ಆಗೆಲ್ಲ ರಕ್ಷಾ ಬಂಧನವೆಂದರೆ, ಆರ್‌ಎಸ್‌ಎಸ್‌ನವರ ಪೆರೇಡಿನಲ್ಲಿ ಸ್ನೇಹಿತರು ಸಂಗ್ರಹಿಸಿ ತರುತ್ತಿದ್ದ ರಾಖಿದಾರಗಳು. ಹೀಗೆಯೇ ಆ ವರ್ಷವೂ ಸ್ನೇಹಿತರ ಮನೆಯಲ್ಲಿ ರಾಖಿಹಬ್ಬದ ಸಂಭ್ರಮ. ಆ ದಿನಗಳಲ್ಲಿ ನಾವುಗಳೇ ರೇಷ್ಮೆ ನೂಲಿನ ದಾರದಿಂದ ಕುಚ್ಚುಕಟ್ಟಿ ದಾರ ಸೇರಿಸಿ ರಾಖೀ ತಯಾರಿಸುತ್ತಿದ್ದೆವು (ನಾವುಗಳು ಆಗ ಅಂಗಡಿಗಳಿಂದ ಕೊಂಡು ತರುವುದು ಅಪರೂಪವಾಗಿತ್ತು).

ಅದೇ ದಿನ ನನ್ನ ಕೈಗೂ ರಕ್ಷಾ ಬಂಧನವಾಯಿತು ನನಗಿಂತ ೫-೬ ವರ್ಷ ಹಿರಿಯರೊಬ್ಬರಿಂದ. ಅಂದಿನಿಂದ ಮೊನ್ನೆಮೊನ್ನೆಯವರೆವಿಗೂ ಈ ಬಂಧ ಸೋದರ/ರಿ ಸಂಬಂಧ ಸಾಗುತ್ತಿತ್ತು. ಸಂಸ್ಕೃತ ತರಗತಿಗಳಲ್ಲಿ ಸಿಗುತ್ತಿದ್ದೆವು. ವಾರದಲ್ಲಿ ಹೀಗೆ ಒಂದಿಲ್ಲೊಂದು ಬಾರಿಯಾದರೂ ಈ ಅಕ್ಕ-ತಮ್ಮನ ಭೇಟಿ ತಪ್ಪುತ್ತಿರಲಿಲ್ಲ. ಆದರೆ. ಕೆಲವಾರು ವರ್ಷಗಳಿಂದ ಅದೇಕೋ ಕಾಣೆಯಾದರು (ಇದೇ ಊರಿನಲ್ಲಿದ್ದರೂ ಭೇಟಿಯಾಗದೇ ವರ್ಷಗಳೇ ಉರುಳಿದವು). ಇವರ ಮಧುರ ಮಂಜುಳಧ್ವನಿ ಮರೆಯಲುಂಟೆ???

ಹೀಗೇ ಮತ್ತೊಬ್ಬರು ಸಹಾ ದೂರಾದರು. ಅದಕ್ಕೆ ಅನ್ಯ ಕಾರಣಗಳಿದ್ದರೂ ಮಾತುಗಳಿಲ್ಲ. ಕೇವಲ ಮುಗುಳ್ನಗೆಯೊಂದೆ ಕುಶಲ ಕ್ಷೇಮವೆಲ್ಲವನ್ನೂ ಸೂಚಿಸುವಂತಹ ಒಂದು ಒಪ್ಪಂದವಾಯಿತು (??) ಎನ್ನಬಹುದು. ಹೌದು, ಇದು ಮಾತಿನಲ್ಲಿ ಹೇಳಲಾಗದ ಒಬ್ಬ ಸೋದರಿಯ ಕಥೆಯಾಯಿತು. ಆನಂತರ ಒಮ್ಮೆ ಮಾತ್ರ ಭೇಟಿಯಾಗಿದ್ದು. ಈಗೆಲ್ಲಿದ್ದಾರೆ ತಿಳಿಯದು. ಆದರೂ ಕೆಲವೊಮ್ಮೆ. ಅಪರಿಚಿತರಾಗಿ ಬಂದು ಚಿರಪರಿಚಿತರಾಗಿ ಹೋಗುವಾಗ ನೆನಪೊಂದೆ ಕಾಣಿಕೆ ಎಂಬಂತೆ... ಆಗುವುದು ಸಹಜ. ನಕ್ಕರೂ ಸಂತೋಷವೇ... ನುಡಿಯದಿದ್ದರೂ ಸುಖವಾಗಿರಲೆಂದು ಮನಬಯಸಿತ್ತು. ಏಕೆಂದರೆ, ಅವರು ರಾಖೀಸೋದರಿ... ಅವರ ಮಮತೆ ಮರೆಯಲುಂಟೆ.

ಏಕೆಂದರೆ, ಒಡಹುಟ್ಟಿದವರು ಮಾತ್ರವೇ ಅಣ್ಣ, ತಂಗಿ, ತಮ್ಮ, ಅಕ್ಕ ಹೀಗೆ ಆಗಬೇಕೆಂದೇನಿಲ್ಲ, ಅಲ್ಲವೇ?

ಆಕಸ್ಮಿಕವಾಗಿ ಎಂದೋ ಈ ಇಬ್ಬರು ಅಕ್ಕ ತಂಗಿಯ ನೆನಪಿನಲ್ಲಿ ಬರೆದಿದ್ದ ಸಾಲುಗಳು ಡೈರಿಯಲ್ಲಿಂದು ಸಿಕ್ಕಿತು. ಏಕೆಂದರೆ, ಅಂತಹ ಅಪರೂಪದವರು ಮತ್ತೆ ಸಿಗುವುದು ಎಂದೋ ತಿಳಿದವರಾರು??? ಅಲ್ಲದೇ ಇನ್ನೇನು ಮುಂದಿನ ತಿಂಗಳು ರಕ್ಷಾಬಂಧನ ಬರುತ್ತಿದೆ. ಆವಾಗ ಇವರು ಮತ್ತೆ ಸಿಗಬಹುದೇನೋ??

ದೊರಕಿತೆನೆಗೆ ನನ್ನ ಭಾಗ್ಯನಿಧಿ,
ಅಕ್ಕ ನಿನ್ನ ಪ್ರೀತಿ ರೂಪದಿ
ಮರೆಸಿತೆನ್ನ ಮನಸಿನಾ ದು:ಖ
ನಿನ್ನ ಮೃದು ಮಾತದು ಅಕ್ಕಾ.. ಅಕ್ಕಾ...

ಅಳಿಸಿ ಹೋದವು ಪರಿತಾಪಗಳು
ನಿನ್ನ ನಗುವ ಸದ್ದನಾಲಿಸಿ,,
ಉಳಿಯಿತೆನ್ನ ಹೃದಯದಲಿ
ನಿನ್ನ ಪ್ರೀತಿತುಂಬಿದಾ ನುಡಿಗಳು...

ಆದರೆ...

ಅದೊಂದು ದಿನ ನೀ ದೂರಾದೆ???
ಕಾರಣ ನಿನಗೆ ತಿಳಿಯದೇ?? ನೀ ಮಾತಾಡದಿದ್ದರೂ
ಪರವಾಗಿಲ್ಲ,
ಎಲ್ಲಿದ್ದರೂ ಸದಾ ನಗುತಿರು... ನಿರಂತರ
ಸುಖವಾಗಿರು, ಖುಷಿಯಾಗಿರು, ಓ ನನ್ನ ಭಗಿನಿ...


chandrashekara b.h.
-------------------------------
"To go anywhere, begin by taking a first step." -Caine

ಜೈ ಭಾರತ ಮಾತಾ! ಜೈ ಜವಾನ್‌!

ನಿನ್ನೆ ದಿನವೇ ನಮ್ಮ ನಮನವನ್ನು ಹಾಕಬೇಕಿತ್ತು. ಆದರೆ, ಅಂತರ್ಜಾಲದ ಕೊಂಡಿಯ ಸಮಸ್ಯೆಯಿಂದಾಗಿ ಬ್ಲಾಗಿನಲ್ಲಿ ಬರೆಯಲು ಆಗಲಿಲ್ಲ.. ಅದಕ್ಕಾಗಿ ವಿಷಾದಿಸುತ್ತೇನೆ. ಭಾರತ-ಪಾಕಿಸ್ತಾನ ನಡುವೆ ನಡೆದ ಕಾರ್ಗಿಲ್‌ ಯುದ್ಧ ೧೧ನೇ ವರ್ಷಕ್ಕೆ ಕಾಲಿಡುತ್ತಿದೆ.

ಭಾರತೀಯ ವೀರ ಯೋಧರ ತ್ಯಾಗ, ಬಲಿದಾನ, ಧೈರ್ಯ, ಸಾಹಸದಿಂದಾಗಿ ಈ ಯುದ್ಧವನ್ನು ಗೆದ್ದೆವು. ಅಂದು ಇಡೀ ಭಾರತದ ಸಮಸ್ತರೂ ವೀರಯೋಧರ ಜೊತೆಗಿದ್ದರು. ಇಲ್ಲಿ ಅರಳುತ್ತಿದ್ದ ಎಷ್ಟೋ ಯುವ ವೀರರು ತಮ್ಮ ತ್ಯಾಗ ಬಲಿದಾನಗಳಿಂದ ದೇಶವನ್ನು ಮತ್ತು ದೇಶವಾಸಿಗಳನ್ನು ರಕ್ಷಿಸಿದರು.

ವೀರ ಭಾರತೀಯ ಯೋಧರು `ವಿಜಯ' ಪತಾಕೆ ಹಾರಿಸಿ, ಈ ಯುದ್ಧದಲ್ಲಿ ವೀರಮರಣವನ್ನಪ್ಪಿದ, ಗಾಯಗೊಂಡ ಹಾಗೂ ಅವರ ಮನೆಯವರೆಲ್ಲರಿಗೂ ನಮ್ಮ ನಮನಗಳು. ಅವರೆಲ್ಲರೂ ಪ್ರಾತ:ಸ್ಮರಣೀಯರು. ಈ ಭಾರತಕ್ಕೆ ವೀರಯೋಧರನ್ನು ಕೊಟ್ಟ ತಾಯ್ತಂದೆಯರಿಗೆ ನಮ್ಮ ನಮನಗಳು. ಅವರೆಲ್ಲರಿಗೂ ದು:ಖವನ್ನು ಭರಿಸುವ ಶಕ್ತಿಯನ್ನು ಆ `ಶಕ್ತಿ' ಯು ಕೊಡಲಿ...

ಜೈ ಭಾರತ ಮಾತಾ! ಜೈ ಜವಾನ್‌!

ಸೋಮವಾರ, ಮೇ 3, 2010

ಏನನು ಹೇಳುತಿವೆ?

ಏನನು ಹೇಳುತಿವೆ, ಈ ಚಿತ್ರಗಳು?

ಕಪ್ಪುಬಿಳುಪಿನ ಹೊಳಪಿನವು?

ಈ ಕಪ್ಪು ಬಿಳುಪಿನ ಚಿತ್ರಗಳಲ್ಲಿ ಅದೇನೋ ಸೆಳತವಿದೆ ಅನ್ನಿಸಿತು,, ನನಗೆ.

ನಿಮಗೆ?ಏನನ್ನಿಸಿರಬಹುದು? ಕುತೂಹಲವಿದೆ.

ಫೋಟೋ: ಚಂದ್ರಶೇಖರ ಬಿ.ಎಚ್. ತಿರುಪತಿ ೨೦೦೯ Chandrashekara B.H. Tirupati, 2009

ಫೋಟೋ: ಚಂದ್ರಶೇಖರ ಬಿ.ಎಚ್. ತಿರುಮಲತಿರುಪತಿ,೨೦೦೯

ಫೋಟೋ: ಚಂದ್ರಶೇಖರ ಬಿ.ಎಚ್. ಕ್ಯಾಂಪಸ್,೨೦೧೦ Chandrashekara B.H. Campus, 2010

ಫೋಟೋ: ಚಂದ್ರಶೇಖರ ಬಿ.ಎಚ್. ಕ್ಯಾಂಪಸ್,೨೦೧೦

ಫೋಟೋ: ಚಂದ್ರಶೇಖರ ಬಿ.ಎಚ್. ಕ್ಯಾಂಪಸ್,೨೦೧೦ Chandrashekara B.H. Campus, 2010

ಫೋಟೋ: ಚಂದ್ರಶೇಖರ ಬಿ.ಎಚ್. ಕ್ಯಾಂಪಸ್,೨೦೧೦

ಫೋಟೋ: ಚಂದ್ರಶೇಖರ ಬಿ.ಎಚ್. ಧರ್ಮಸ್ಥಳದಿಂದ,೨೦೦೯ Chandrashekara B.H. Dharmastha, 2009

ಫೋಟೋ: ಚಂದ್ರಶೇಖರ ಬಿ.ಎಚ್. ಧರ್ಮಸ್ಥಳ, ಬಾಹುಬಲಿ ಬೆಟ್ಟದಿಂದ,೨೦೦೯


ಫೋಟೋಗಳು: ಚಂದ್ರಶೇಖರ ಬಿ.ಎಚ್. ೨೦೦೮-೨೦೧೦

ಸೋಮವಾರ, ಏಪ್ರಿಲ್ 26, 2010

ಬೇಸಿಗೆ ಶಿಬಿರಗಳು ಬೇಕೆ?


ಬೇಸಿಗೆ ಎಂದ ಕೂಡಲೇ ರಜೆ ನೆನಪಾಗುತ್ತದೆ. ಶಾಲೆ-ಕಾಲೇಜುಗಳಿಗೆ ಬೇಸಿಗೆ ರಜೆ ಬಂದಾಗ ಮಕ್ಕಳಿಗೆ ಖುಷಿಯೋ ಖುಷಿ. ಆದರೆ, ಶಿಕ್ಷಕರಿಗೆ ಬೇಸಿಗೆ ರಜೆಯಲ್ಲಿಯೂ ಕೆಲಸ ಶಾಲೆಗೆ ಸಂಬಂಧಪಟ್ಟ ಅಥವಾ ಸರ್ಕಾರದಿಂದ ಆದೇಶಿಸಲ್ಪಟ್ಟ ಕೆಲಸಗಳು ಇರುತ್ತವೆ.

ಬೇಸಿಗೆಯಲ್ಲಿ ಮಕ್ಕಳಿಗೆ ಶಾಲೆಗೆ ರಜೆ ಕೊಡುವ ಉದ್ದೇಶ ತಮ್ಮ ವರ್ಷಪೂರ್ತಿಯ ಏಕತಾನತೆಯುಳ್ಳ ಕಲಿಕೆಯಿಂದ ಹೊರಬರಲಿ, ಮಕ್ಕಳ ಮನಸ್ಸು ಹಗುರವಾಗಲಿ, ಎಂಬುದಷ್ಟೇ ಅಲ್ಲದೇ ನಿಜಜೀವನದ ಜಗತ್ತನ್ನು ನೋಡಲು, ಹೊಸ ಹೊಸ ತಿಳುವಳಿಕೆಯನ್ನು ಅರಿಯಲು ಸಹಾಯವಾಗಲಿ ಎಂಬುದಾಗಿರುತ್ತದೆ.
ನಾವೆಲ್ಲ ಶಾಲೆ ಕಲಿಯುವಾಗ ಶಾಲೆಗೆ ಬೇಸಿಗೆ ರಜೆ ಬಂತೆದಂರೆ ಅಜ್ಜಿ ಮನೆ, ಅಜ್ಜನ ಊರು, ಟೂರು ಹೀಗೆಲ್ಲಾ ಒಂದರಿಂದ ಒಂದೂವರೆ ತಿಂಗಳವರೆಗೆ ಸುತ್ತಾಟ, ನೆಂಟರ ಮನೆಗಳಿಗೆ ಅಲೆದಾಟ, ತೋಟವೋ, ಸಿನಿಮಾನೋ ನೋಡುವ ಹಟ ಇವೆಲ್ಲ ಸರ್ವೇ ಸಾಮಾನ್ಯವಾಗಿದ್ದವು. ತೋಟಕ್ಕೆ ಹೋದರೆ ಮಾವಿನ ಮಿಡಿ ಕೀಳುವುದು, ಚಿಟ್ಟೆ-ಓತಿಕ್ಯಾತ ಹಿಡಿಯುವುದು, ಈಜಾಟ, ದನಕರುಗಳಿದ್ದರೆ ಅವುಗಳೊಡನೆ ಒಡನಾಟ, ಎತ್ತಿನ ಗಾಡಿಯಿದ್ದರೆ ಗಾಡಿಗೆ ಎತ್ತು ಹೂಡುವ, ಗಾಡಿಯಲ್ಲಿ ಪಕ್ಕದೂರು, ಸಂತೆಗೆ ಹೊಗುವುದು ಇವೆಲ್ಲವೂ ಇದ್ದವು. ಇವುಗಳಲ್ಲದೆ, ಚಿನ್ನಿ-ದಾಂಡು, ಮರಕೋತಿಯಾಟ, ಗಾಳಿಪಟ ಹಾರಿಸುವುದು, ಕುಂಟೆಬಿಲ್ಲೆ, ಕವಡೆ, ಚೌಕಾಭಾರ, ಲಗೋರಿ, ಹೀಗೆ ಅನೇಕ ವಿಧದ ಮನರಂಜನೆಗಳಿದ್ದವು. ಆಗೆಲ್ಲ ಸಿನಿಮಾ ಎಂದರೆ ದೇವರದ್ದೋ ಅಥವಾ ಮಕ್ಕಳ ಚಿತ್ರ ಯಾವುದಾದರೂ ಇದ್ದರೆ ಹೋಗುವುದಿತ್ತು. ಕೆಲವು ಆಟಗಳನ್ನು ನಗರ ಪ್ರದೇಶಗಲ್ಲಿಯೂ ಆಡುವುದು ಸರ್ವೇ ಸಾಮಾನ್ಯವಾಗಿತ್ತು. ಈಗಿನಂತೆ ಕ್ರಿಕೆಟ್‌ ಆಡುತ್ತಿದ್ದರೂ, ಗೋಲಿ, ಬುಗುರಿ, ಗಾಳಿಪಟ, ಚಿಟ್ಟೆ ಹಿಡಿಯುವುದು, ಇವೆಲ್ಲವೂ ಸೋಜಿಗವಾಗಿದ್ದವು.

ಆದರೆ, ಇಂದಿನ ಮಕ್ಕಳಿಗೆ?? ಶಾಲೆ ಬಿಟ್ಟರೆ, ಮನೆಗಿಂತ ಹೆಚ್ಚಾಗಿ ಅಮರಿಕೊಳ್ಳುವುದು ಟ್ಯೂಷನ್, ಕಂಪ್ಯೂಟರ್‍ ಕ್ಲಾಸ್, ಕ್ವಿಝ್, ಹೀಗೆ ಥರಾವರಿ ಕೋರ್ಸುಗಳು.

ಪಟ್ಟಣ-ನಗರ ಪ್ರದೇಶಗಳಲ್ಲಿ ಮಕ್ಕಳಿಗೆ ಬೇಸಿಗೆ ರಜೆ ಬರುವುದಕ್ಕೂ ಒಂದು ತಿಂಗಳ ಮುಂಚೆಯೇ `ಸಮ್ಮರ್‍ ಕೋರ್ಸ್' ಅಥವಾ `ಬೇಸಿಗೆ ಶಿಬಿರ'ಗಳ ಬಿಸಿ ಪ್ರತಿ ಬೀದಿಯಲ್ಲಿ, ದಿನನಿತ್ಯದ ಪೇಪರಿನಲ್ಲಿ, ರೇಡಿಯೋ ಹೀಗೆ ಬಹುಮಾಧ್ಯಮಗಳಲ್ಲಿ ಜಾಹಿರಾತುಗಳೊಂದಿಗೆ, ಶಾಲಾ ಮಕ್ಕಳಿಗಿಂತ ಅವರ ತಾಯಿತಂದೆಯರು/ಪೋಷಕರಿಗೆ ಒಂದು ವಿಧದ ಯೋಚನೆ/ಯೋಜನೆಗಳನ್ನು ತಲುಪಿಸುತ್ತವೆ. ಇದರಿಂದಾಗಿ, ಮಕ್ಕಳಿಸ್ಕೂಲ್‌ ಮನೇಲಲ್ವೇ? ಎಂಬುದನ್ನು `ಬೇಸಿಗೆ ಶಿಬಿರ'ಗಳಲ್ಲಿ ಕಾಣುವಂತಾಗಿದೆ. ಮಕ್ಕಳನ್ನು ಯಾವಾಗಲೂ ಕ್ರಿಯಾಶೀಲರಾಗಿರುವಂತೆ ಮಾಡಲು ಇಂತಹ ಶಿಬಿರಗಳು ಬೇಕು ಎಂಬಂತಾಗಿಯೋ ಅಥವಾ ಮಕ್ಕಳ `ಕಾಟ/ತುಂಟಾಟ' ಗಳಿಂದ ರಕ್ಷಿಸಿಕೊಳ್ಳಲೋ ಇವುಗಳು ನೆನಪಾಗುತ್ತವೆ, ಜೊತೆಗೆ ನೆಪಗಳಾಗುತ್ತಿವೆ. ನಿಜಕ್ಕೂ `ಬೇಸಿಗೆ ಶಿಬಿರ' ಗಳು ಬೇಕೆ? ಎಂದು ಯಾಕೆ ಯೋಚಿಸುವುದಿಲ್ಲ.
ಮೊದಲೇ ಮಕ್ಕಳ ಮನಸ್ಸು ಹೂವಿನಂತಹದು. ಮಕ್ಕಳಿಗೆ ಬೇಸಿಗೆಯ ರಜೆಯ ಮಜವನ್ನು ಅನುಭವಿಸಲು ಬಿಡದೇ ಇರುವುದು ಸರಿಯೇ? ತಮ್ಮ ಮಕ್ಕಳು ತಮ್ಮ ಭವಿಷ್ಯತ್ತಿನಲ್ಲಿ ಏನೇನೋ ಆಗಬೇಕೆಂಬ ಮಹತ್ವಾಕಾಂಕ್ಷೆಯ ಹಪಾಹಪಿತನಗಳು ಪೋಷಕರಲ್ಲಿ ಬೆಳೆಯುತ್ತಾ ಮಕ್ಕಳು `ಯಾಂತ್ರೀಕೃತ'ವಾಗುತ್ತಿದ್ದಾರೆ. ಇಂದಿನ ಮಕ್ಕಳಿಗೆ ಮನೆಯಲ್ಲಿನ ಸಂಬಂಧಗಳ ಬಗ್ಗೆ ಅಸಡ್ಡೆ, ಅಲ್ಲದೇ, ಅಜ್ಜಿ, ತಾತ ಇವರುಗಳ ಬಗ್ಗೆಯೂ ತಿಳಿಯದೇ, ಸಂಬಂಧಗಳೂ ಬಿಟ್ಟುಹೋಗುತ್ತಿರುವುದು, ಯಾರಿಗೆ ಯಾರೂ ಬೇಡ ಎಂಬ ಒಂಟಿತನದ ಪ್ರವೃತ್ತಿಯು ಬೆಳೆಯುತ್ತಿವೆ. ಇದಾಗಲೇ ಅನೇಕ ಕುಟುಂಬಗಳು `ವಿಭಕ್ತ'ವಾಗಿರುವುದೂ ಇಂತಹ ಮನೋಭಾವಗಳಿಂದಲೇ ಇರಬಹುದು.

ಕೆಲವು ಮಕ್ಕಳಿಗೆ ಹಳ್ಳಿಗಳಿಗೆ, ಪ್ರಕೃತಿ ವೀಕ್ಷಣೆಗೆ ಹೋಗಬೇಕೆಂಬ ಹಂಬಲಗಳೆಲ್ಲಾ ಇದ್ದರೂ ಅವಕಾಶ ವಂಚಿತರಾಗುತ್ತಿದ್ದಾರೆ. ಇವೆಲ್ಲ ನಿಜಕ್ಕೂ ಬೇಕೆ? ಕೆಲವು ಮಕ್ಕಳಿಗೆ ಶಿಬಿರಗಳು ಇಷ್ಟವಾಗಿದ್ದರೂ ಎಲ್ಲ ಮಕ್ಕಳಿಗೂ ಇಂತಹವು ಇಷ್ಟವಿರುವುದಿಲ್ಲ. ಇದರಿಂದ ಪೋಷಕರಿಗೂ ತೊಂದರೆ, ಮಕ್ಕಳಿಗೂ ತೊಂದರೆ.
ಅಲ್ಲದೇ, ಈ ಶಿಬಿರಗಳಲ್ಲಿ ಸೇರುವುದಕ್ಕೆ ಇಂತಿಷ್ಟು ಹಣ ಎಂಬುದಾಗಿರುತ್ತದೆ. ಅದು ಕೇವಲ ನೂರು ಸಾವಿರಲ್ಲ, ಎರಡು ಸಾವಿರದಿಂದ ಐದು ಸಾವಿರದವರೆಗೂ ಇದ್ದು, ೧೦ ದಿನವೋ ಅಥವಾ ೧೫ ದಿನವೋ ಶಿಬಿರಗಳು ನಡೆಸುತ್ತಾರೆ. ಇದು ಪೋಷಕರಿಗೂ ಹೊರೆಯಾಗುತ್ತದೆ ಎಂಬುದನ್ನೂ ಪೋಷಕರೇ ಯೋಚಿಸಬೇಕು. ಎಲ್ಲರೂ ಒಂದೇ ಬಗೆಯಲ್ಲಿ ಶಿಬಿರಗಳಿಗೆ ಸೇರಿಸುವ ಇರಾದೆಯಿಂದಾಗಿ ಮಕ್ಕಳಿಗೆ ಅನಾನುಕೂಲವೇ ಆಗುವುದು (ಏಕೆಂದರೆ, ಒಂದು ಶಿಬಿರಕ್ಕೆ ಕೆಲವೊಮ್ಮೆ ೧೦-೨೦ ಮಕ್ಕಳ ಬದಲು ೫೦-೬೦ ಮಕ್ಕಳ ಪ್ರವೇಶವಿದ್ದರೆ, ಸಂಸ್ಥೆಗೆ ಲಾಭವೇ ಹೊರತು ಮಕ್ಕಳು ಅಥವಾ ಪೋಷಕರಿಗೆ ಅಲ್ಲ) ಎಂಬುದನ್ನೂ ಅರಿಯಬೇಕಿದೆ. ಅಲ್ಲದೇ, ಏಕತಾನತೆಯಿಂದ ಮಕ್ಕಳಲ್ಲಿ ಭವಿಷ್ಯದಲ್ಲಿ ಪೋಷಕರನ್ನು ದೂರುವಂತಾಗಬಾರದು, ಖಿನ್ನತೆಯಿಂದು ಬಳಲುವಂತಾಹಬಾರದು ಅಥವಾ ವಿದ್ಯಾಭ್ಯಾಸದಲ್ಲಿ ಸೊರಗುವಂತಾಗಬಾರದು. ನೀವೇನಂತೀರಿ?

ಬೇಸಿಗೆ ಶಿಬಿರ ಬೇಕೆ? ಬೇಡವೇ? ನಿಮ್ಮ ಮಕ್ಕಳು ನೀವು ಬಾಲ್ಯದಲ್ಲಿ ಬೆಳೆದಂತೆ ಆಟೋಟಗಳೊಂದಿಗೆ, ಅಜ್ಜ ಅಜ್ಜಿ, ನೆಂಟರಿಷ್ಟರು ಇವರುಗಳೊಂದಿಗೆ ಬೆರೆತು ಬೆಳೆಯಬಾರದೆ? ನೀವೇ ಯೋಚಿಸಿ.

* * *

[ಈ ಮೇಲಿನ ಬರಹಕ್ಕೆ ಸ್ಫೂರ್ತಿ, ಸಲಹೆಗಳನ್ನು ಕೊಟ್ಟಂತಹ ಜೀವನ್ಮುಖಿಯ ಶ್ರೀ ಪರಾಂಜಪೆಯವರಿಗೆ ಹಾಗೂ ಕಾಗುಣಿತ ದೋಷಗಳನ್ನು ಸರಿಪಡಿಸಿದ ಅಂತರಂಗದ ಮಾತಿನ ಒಡತಿಗೆ ಕೃತಜ್ಞತೆಗಳು]

* * *

ಚಂದ್ರಶೇಖರ ಬಿ.ಎಚ್.
೨೬.೦೪.೨೦೧೦

ಶುಕ್ರವಾರ, ಏಪ್ರಿಲ್ 23, 2010

ಮುತ್ತಿನ ಹನಿಗಳು - ಮಲ್ಲಿಗೆಯ ಚಲ್ಲಿದವು

ಮೊನ್ನೆ ಸಂಜೆ (೨೧.೦೪.೨೦೧೦ ರಂದು) ಕಚೇರಿಯ ಕೆಲಸದಲ್ಲಿ ನಿರತನಾಗಿದ್ದೆ. ನನ್ನ ಕೊಠಡಿಯ ಪಕ್ಕದಲ್ಲಿಯೇ ಕಿಟಕಿಗೆ ಹತ್ತಿರವೇ ನಾನು ಕುಳಿತುಕೊಳ್ಳುವುದು. ಹೊರಗೆ ಹಸಿರನ್ನು, ಆಗಾಗ ಗಾಳಿಯನ್ನು ಸವಿಯುವ ಭಾಗ್ಯ ನನ್ನದಾಗಿದೆ. ಹೀಗಿರುವಾಗ, ಸಂಜೆ ನಾಲ್ಕರ ಸಮಯದಲ್ಲಿ ಗಾಳಿ ಬೀಸುತ್ತಲಿದೆ. ಅದೂ ವಿಪರೀತ ಜೋರಾಗಿ, ಅದರಿಂದಾಗಿ ಮರಗಳು, ಕೊಂಬೆರೆಂಬೆಗಳು ತೂಗಾಡುತ್ತಾ... ಭೂಮಿಗೆ ನಮಿಸುವಂತೆ ಆಡುತ್ತಿವೆ. ಅದೇ ಸಮಯದಲ್ಲಿ ಮೋಡ ಕವಿದ ವಾತಾವರಣ. ಜೊತೆಗೆ ಮಿಂಚಿನ ಚಿತ್ತಾರ, ಗುಡುಗು-ಸಿಡಿಲಿನ ಆರ್ಭಟ. ಒಂದೊಂದೇ ಹನಿಗಳು ನೆಲವನ್ನು ಮುಟ್ಟುತ್ತಾ... ರಭಸವಾಗಿ, ಫಟ್‌, ಫಟ್‌, ಎಂದು ಬೀಳುತ್ತಲಿವೆ.

ಸ್ವಲ್ಪ ಹೊತ್ತು ಮಳೆಯೊಂದಿಗೆ ಗಾಳಿ, ಕಣ್ಕೋರೈಸುವ ಮಿಂಚು, ಸಿಡಿಲು.. ಅಬ್ಬಬ್ಬಾ... ಭಯಾನಕವಾಗಿತ್ತು. ಏಕೆಂದರೆ, ಕಿಟಕಿಯ ಹತ್ತಿರವೇ ಕುಳಿತಿದ್ದೆ. ತಕ್ಷಣಕ್ಕೆ ವಿದ್ಯುತ್ ಕೈಕೊಟ್ಟಿತು. ಗಣಕಯಂತ್ರ ಸ್ಥಬ್ಧವಾಯಿತು. ಕಿಟಕಿಯ ಗಾಜುಗಳಿಗೆ ಟಪ್, ಟಪ್ ಎಂದು ಬೀಳುತ್ತಿದ್ದ ಹನಿಗಳೊಂದಿಗೆ `ಆಲಿಕಲ್ಲಿನ' ಸಿಂಚನ.

ಕಚೇರಿಯಿಂದ ಹೊರಬಂದು ನಿಂತೆವು. ಅಗೋ! ಆಲಿಕಲ್ಲು, ಅಲ್ಲೊಂದು, ಇಲ್ಲೊಂದು ಎನ್ನತ್ತಾ... ಅವುಗಳನ್ನು ಹೆಕ್ಕುತ್ತಿದ್ದಂತೆಯೇ.. ವರ್ಷಧಾರೆಯೊಡಗೂಡಿ `ಬಿಳಿಯ ಮುತ್ತಿನ ಹರಳಿನಂತೆ, ಮಲ್ಲಿಗೆಯಂತೆ ಹುಲ್ಲುಹಾಸಿನ ಮೇಲೆಲ್ಲಾ ಆಲಿಕಲ್ಲಿನ ಸುರಿಮಳೆ'. ಅವುಗಳನ್ನು ನನ್ನ ಪುಟ್ಟ ಕ್ಯಾಮೆರಾದಿಂದ ಸೆರೆಹಿಡಿಯುವ ಸಾಹಸ ಮಾಡಿದ್ದೇನೆ. ಇದೋ ನಿಮಗಾಗಿ, ನಿಮ್ಮ ಖುಷಿಗಾಗಿ!

ಸ್ನೇಹದಿಂದ,Photo:Chandrashekara BH, 210410; ಚಂದ್ರಶೇಖರ ಬಿ.ಎಚ್.
Photo:Chandrashekara BH, 210410; ಚಂದ್ರಶೇಖರ ಬಿ.ಎಚ್.
Photo:Chandrashekara BH, 210410; ಚಂದ್ರಶೇಖರ ಬಿ.ಎಚ್.
Photo:Chandrashekara BH, 210410; ಚಂದ್ರಶೇಖರ ಬಿ.ಎಚ್.
ಛಾಯಾಚಿತ್ರ/ಬರಹ: ಚಂದ್ರಶೇಖರ ಬಿ.ಎಚ್.

ಮಂಗಳವಾರ, ಮಾರ್ಚ್ 30, 2010

ಪೌರ್ಣಿಮೆಯ ಚಂದ...

Photo by Chandrashekara BH,29032010

ಬಾನಂಗಳದಲಿ ಚಂದ್ರಮ
ಸಂಜೆಗತ್ತಲಿಗೆ ಸಂಭ್ರಮ

ಕ್ಷೀರಧಾರೆಯ ಬೆಳಕು
ಕರಗಿಸೆ ಕತ್ತಲ ಮುಸುಕು

ತಂಗಾಳಿ ಹಾಡಿ ಹೇಳಲು
ತಾರೆ ನೂರು ಮಿನುಗಲು

ಅದುವೇ ಹುಣ್ಣಿಮೆಯ ಚಂದ್ರಮ
ನಿನಗೆ ನೀನೇ ಉಪಮ, ಅನುಪಮ

[ಇಂದು ಚಿತ್ರಾ ಪೂರ್ಣಿಮೆ + ಬೆಂಗಳೂರು ಕರಗ ಮಹೋತ್ಸವ. ಎಲ್ಲರಿಗೂ ಮಂಗಳವಾಗಲಿ]