ಎಲ್ಲರಿಗೂ 'ಕ್ಷಣಚಿಂತನೆ' ಮಾಡುವ ಸಮಯ ಇರುತ್ತದೆ. ಇದು`ಕ್ಷಣ ಚಿಂತಿಸುವ ಸಮಯ'...

೨೪ ನವೆಂಬರ್ ೨೦೦೯

ಎರಡು ಮತ್ತು ಮೂರು?

Photo©Chandrashekara BH,ISEC,24Nov2009
ಒಂದೇ ರೂಪ, ಎರಡು ಗುಣ - ಹೀಗೊಂದು ಚಲನಚಿತ್ರದ ಹೆಸರು
ಅದಕ್ಕೆ ತಕ್ಕಂತೆ ಇಲ್ಲಿದೆ ಒಂದು ಮರಕ್ಕೆ ಬರೆದ ನಂಬರು!
ಬೇರೊಂದು, ಕವಲೆರಡು, ಆದರೂ ಬಿಟ್ಟಿಲ್ಲ ಒಬ್ಬರನೊಬ್ಬರು,
ಒಂದೇ ತಾಯಿಬೇರು, ಜೊತೆಯಲ್ಲಿರುವಾಗ ಬಿಡುವುದಾದರೂ ಯಾರು?
ಆದರೆ, ಯಾರು ಬರೆದರೋ ಇದಕ್ಕೆ ನಂಬರು?
ತಿಳಿದೋ, ತಿಳಿಯದೆಯೋ ಎರಡು ಮತ್ತು ಮೂರು?

ಚಂದ್ರಶೇಖರ ಬಿ.ಎಚ್.
ಫೋಟೋ: ಚಂದ್ರಶೇಖರ ಬಿ.ಎಚ್.

೧೭ ನವೆಂಬರ್ ೨೦೦೯

ಒಂದು ವರ್ಷದ ಚಿಂತನೆಯಿಂದ ಎರಡನೇ ವರ್ಷಕ್ಕೆ...

ಈ ಪುಟವನ್ನು ವಿನ್ಯಾಸಗೊಳಿಸಲು ಕ್ಷಣ ಚಿಂತಿಸಿಲ್ಲ... ಎಂಬುದು ನನ್ನ ಯೋಚನೆ. ಇದು ನನ್ನ ಮೊದಲ ಬ್ಲಾಗಂಚೆಯಲ್ಲಿ ಬರೆದದ್ದು.

http://kshanachintane.blogspot.com/2008/11/blog-post.html

ಈ ಬ್ಲಾಗನ್ನು ಶುರುಮಾಡಿದಾಗ ಎಲ್ಲವೂ ಸಿದ್ಧ ಉಡುಪಿನಂತೆಯೇ ಇದ್ದು ಕೇವಲ ಬರಹವನ್ನು ಅಕ್ಷರ ಪೆಟ್ಟಿಗೆಯಲ್ಲಿ ಹಾಕಿದ್ದರೆ ಮುಗಿದಿತ್ತು. ಅದಕ್ಕೆ ಹಾಗೆ ಬರೆದಿದ್ದೆ.

ಇನ್ನು ನನ್ನ ಆಲೋಚನೆಯಿದ್ದದ್ದು ಸುಭಾಷಿತಗಳ ರೀತಿಯಲ್ಲಿ ಪ್ರಸಿದ್ಧ ವ್ಯಕ್ತಿಗಳ ನುಡಿಗಳನ್ನು ಇಲ್ಲಿ ಬರೆಯಬೇಕೆಂದು ಅನಿಸಿತ್ತು. ಹಾಗೆಯೇ ಒಂದೆರಡು ಬ್ಲಾಗಂಚೆ (ಬ್ಲಾಗ್‌ಪೋಸ್ಟುಗಳು) ಅಂಚಿಸಿದ್ದೆ. ದೀಪವೇ ತೋರು ಸಮಯ ಎಂದು ದೀಪದ ಚಿತ್ರ ಹಾಕಿದ್ದೆ. ಆನಂತರ `ಲಹರಿ' http://kshanachintane.blogspot.com/2008/11/blog-post_21.html ಎಂಬ ಶೀರ್ಷಿಕೆಯಡಿ ಈ ಬ್ಲಾಗಿಗೆ ಈ ಹೆಸರು ಏಕೆ? ಎಂದು ಬರೆದಿದ್ದೆ.

ಬಾಪೂಜಿಗೆ ನಮನ - http://kshanachintane.blogspot.com/2008/11/blog-post_21.html ಎಂದು ಬಾಪೂಜಿಯ ನೆನೆಯುವ ದಿನಕ್ಕೆ ಒಂದೆರಡು ಸಾಲು ಬರೆದಿದ್ದೆ. ಅದಕ್ಕೆ ಪ್ರತಿಕ್ರಿಯೆಯಾಗಿ `ಚಿಂತೆ ಇರಬಾರದು. ಸದಾ ಚಿಂತನೆ ಇರಬೇಕು. ಚಿಂತೆ ಸಜೀವವಾಗಿ ನಮ್ಮನ್ನು ಸುಡುವುದು. ಚಿಂತನೆ ಸದ ನಮ್ಮಲ್ಲಿ ಮನೋವಿಕಾಸವನ್ನುಂಟುಮಾಡುವುದು. ಉತ್ತಮ ಚಿಂತನೆ ನಿಮ್ಮಿಂದ ಹರಿದು ಬರಲಿ ಎಂದು `ಮಾನಸಪೂರ್ವಕವಾಗಿ' ತಿಳಿಸಿದ್ದರು.

ಆಗಿನ್ನೂ ಬರಹವನ್ನು ಕೇವಲ ಒಂದೆರಡು ಸಾಲುಗಳಲ್ಲಿಯೇ ಮುಗಿಸುತ್ತಿದ್ದೆ. ಏಕೆಂದರೆ, `ಪುಟನಾಮವೇ' ಕ್ಷಣ ಚಿಂತನೆ ಎಂದಿಟ್ಟಿದ್ದೆನಲ್ಲ.

ಹೀಗಿರುವಾಗ, ಸ್ವಾಮಿ ವಿವೇಕಾನಂದರ ವಾಣಿಯನ್ನು ಹಾಕಿದ್ದೆ. ಅದೇನೆಂದರೆ, Where can we go to find God if we cannot see Him in our own hearts and in every living being.. ಇದಕ್ಕೆ ಪ್ರತಿಕ್ರಿಯೆಯಾಗಿ, ನಿಮ್ಮದೇ ವಾಕ್ಯದಲ್ಲಿ ಸ್ವಲ್ಪ ವಿವರಣೆಯನ್ನೂ ಬರೆದರೆ ಇನ್ನೂ ಚೆನ್ನಾಗಿರುತ್ತದೆ ಹಾಗೂ ಕನ್ನಡದಲ್ಲಿ ಬರೆಯಿರಿ ಎಂದು `ಬೆಳಕು' ಚೆಲ್ಲಿದವರೊಬ್ಬರು.

ಮತ್ತೊಬ್ಬರಿಂದ, ಬರವಣಿಗೆಯ ಜೊತೆಯಲ್ಲಿ ಛಾಯಾಚಿತ್ರಗಳೂ ಚೆನ್ನಾಗಿವೆ, ಹೀಗೆಯೆ ಬರೆಯುತ್ತಿರಿ. ಹೀಗೆಯೇ ಅನೇಕ ಓದುಗರ ಪ್ರೋತ್ಸಾಹದಿಂದಲೇ ಇಲ್ಲಿಯವರೆವಿಗೆ ಬರೆಯಲು ಸಾಧ್ಯವಾಗಿದೆಯೇನೋ ಅನ್ನಿಸುತ್ತಿದೆ. ಇವೆಲ್ಲದರ ಜೊತೆಯಲ್ಲಿ ಕೆಲವು ಆತ್ಮೀಯರ ಲಭ್ಯತೆಯೂ ಆಗಿದೆ.

1 varsha pooraisitu.. 2ne varshakke...

ಇದೀಗ ಈ ನನ್ನ ಬ್ಲಾಗು ಇಂದಿಗೆ ಒಂದು ವರ್ಷ ಪೂರೈಸಿ ಎರಡನೆಯ (೨ನೇ) ವರ್ಷಕ್ಕೆ ಕಾಲಿಡುತ್ತಿದೆ. ಇದುವರೆವಿಗೆ ಸುಮಾರು ೧೦೦ ಕ್ಕೂ ಮಿಕ್ಕಿ ಬ್ಲಾಗಂಚೆಗಳನ್ನು ಬರೆದಿದ್ದೇನೆ. ನುಡಿಗಟ್ಟುಗಳನ್ನು ಬಳಸಿ ಬರೆದ ಬರಹಗಳೊಂದಿಗೆ, ಸ್ವಾನುಭವ ಅಥವಾ ಯಾವುದೋ ಗಮನಾರ್ಹ ಘಟನೆಯ ಮೆಲಕು, ಒಂದಷ್ಟು ಕವಿತೆಗಳು, ಕೆಲವು ಫೋಟೋ ಹಾಗೂ ಶುಭಾಶಯ ಪತ್ರಗಳೂ ಸೇರಿವೆ.

ಚಿಂತಿಸಲು, ಬರೆಯಲು ಹಾಗೂ ಚಿಂತಿಸಿ ಬರೆಯಲು ನಿಮ್ಮೆಲ್ಲರ ಪ್ರೋತ್ಸಾಹದಿಂದ ಸಾಧ್ಯವಾಗುತ್ತಿದೆ ಎಂದರೆ ತಪ್ಪಾಗದು. ಸಲಹೆ-ಸೂಚನೆ, ಅಭಿಪ್ರಾಯಗಳನ್ನು ತಿಳಿಸುತ್ತಾ ಬರೆಯುವ ಉತ್ಸಾಹ ತುಂಬಿದ ನಿಮ್ಮೆಲ್ಲ ಪ್ರತಿಯೊಬ್ಬರಿಗೂ ಧನ್ಯವಾದಗಳು.

ಸ್ನೇಹದಿಂದ,

ಚಂದ್ರಶೇಖರ ಬಿ.ಎಚ್.
೧೭.೧೧.೨೦೦೯

೧೩ ನವೆಂಬರ್ ೨೦೦೯

ತಿರುಪತಿ ತಿಮ್ಮಪ್ಪ'ನೇ ಕಾಪಾಡಬೇಕು!

ತಿರುಪತಿ ತಿಮ್ಮಪ್ಪ'ನೇ ಕಾಪಾಡಬೇಕು!

೨೦೦೯ ನವೆಂಬರ್‍ ಒಂದರಂದು ತಿರುಮಲ ತಿರುಪತಿಯ ದರ್ಶನಕ್ಕೆ ಹೋಗಿದ್ದಾಗಿನ ಒಂದೆರಡು ಘಟನೆಗಳಿವು

ಘಟನೆ ೧: ಬೆಟ್ಟಕ್ಕೆ ನಡೆದು ಹೋಗುತ್ತಿರುವಾಗ, ಅಲ್ಲಿ ಒಬ್ಬ ಯಾವ ಊರಿನವರು ಎಂದು ಬರುವವರ ಹೋಗುವವರ ಕೇಳುತ್ತಿದ್ದ. ಹೀಗಿರುವಾಗ, ನನಗೂ ಕೇಳಿದ. ಕನ್ನಡ, ಕರ್ನಾಟಕ ಎಂದಾಗ. ನನಗೂ ಕನ್ನಡ ಬರುತ್ತೆ ಎಂದ. ಅವನ ಜೊತೆಯಲ್ಲಿ ಪತ್ನಿ, ಮಗು (???) ಇದ್ದರು. ಮಗು ನಿದ್ದೆ ಮಾಡುತ್ತಿತ್ತು. ನನಗೆ ಸ್ವಲ್ಪ ಸಹಾಯ ಮಾಡುವಿರಾ ಎಂದು ಆತನ ಪ್ರಶ್ನೆ. ಏನು? ಎಂದೆ.

ಸುಮಾರು ೩೦೦೦ ಸಾವಿರ ಪಿಕ್‌ಪಾಕೆಟ್ ಆಯಿತು. ತಿಂಡಿಗೆ ಕಾಸು ಕೊಡಿ ಎಂದ. ನಾನು ಮುಂದಕ್ಕೆ ಹೊರಟೆ.

ಘಟನೆ ೨: ಮೊದಲಿನ ಘಟನೆಯಂತೆಯೇ ಇದೂ ಸಹ. ತಿರುಮಲದ ಪ್ರವೇಶಿಸುವಾಗ ಅಲ್ಲಿಯೂ ಸಹ ಒಬ್ಬ ಹೀಗೆಯೇ. ಆದರೆ ಇಲ್ಲಿ ೨-೩ ವರ್ಷದ ಮಗುವಿತ್ತು. ಅವನೂ ಸಹ, ಮೊದಲಿನವನಂತೆಯೆ ಬರುವ-ಹೋಗುವವರನ್ನು ಪ್ರಶ್ನಿಸುತ್ತಿದ್ದ. ಅವನ ಮಾತಿಗೆ ಉತ್ತರಿಸಿದವರಿಗೆ `ಅದೇ' ಇಂತಿಷ್ಟು ಹಣ ಕಳವಾಯಿತು. ತಿಂಡಿಗೆ .... ಎನ್ನುತ್ತಿದ್ದ.

ಇವರಲ್ಲಿ ಯಾರನ್ನು ನಂಬುವುದು? ಮೊದಲನೆಯವನಿಗೆ ಯಾರಾದರೂ ಕನಿಕರಿಸಿ ಹಣ ನೀಡಿದ್ದರೆ, ಎರಡನೆಯವನ ಸ್ಥಿತಿಯನ್ನೂ ಅಂತಹವರು ನೋಡಿದಾಗ ಅವರ ಮನಸ್ಸಿನಲ್ಲಿ ಏನೆನ್ನಿಸಬಹುದು? ಇದೂ ಸಹ ಒಂದು ದಂಧೆಯೇ ಇರಬೇಕಲ್ಲವೇ? ಏಕೆಂದರೆ, ಎರಡೂ ಕಡೆ ಪುಟ್ಟ ಮಕ್ಕಳು, ಒಂದು ಸೂಟ್‌ಕೇಸು, ಭಾಷೆಯ ಬಗೆಗಿನ ಪ್ರಶ್ನೆ, ಅವನಿಂದ ನನಗೂ ಕನ್ನಡ, ಹಿಂದಿ, ತಮಿಳು ಬರುತ್ತೆ.. ಸಹಾಯ ಮಾಡಿ... ಏನಿದೆಲ್ಲ, ಅನಿಸುತ್ತದೆ.

ನಾನೂ ನನ್ನ ಸ್ನೇಹಿತ ೭-೮ ವರ್ಷಗಳ ಹಿಂದೆ ಇಲ್ಲಿಗೆ ಹೋಗಿದ್ದಾಗಲೂ ಸಹ ಇದೇ ರೀತಿಯಲ್ಲಿ ಒಂದು ಸಂಭವಿಸಿತ್ತು. ಅದೂ ವರಾಹ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಹಿಂದಿರುಗುವಾಗ, ದೇವಾಲಯದ ಬಳಿ ದಂಪತಿ-ಮಗಳು (??) ಈ ಮೇಲಿನಂತೆಯೇ ನಡೆದಿತ್ತು. ಆಗ, ೩೦೦ ರೂ ಕಳವಾಗಿದೆ, ಇದೀಗ ೩೦೦೦ ಕಳವಾಗಿದೆ...

ಇದೊಂದು ರೀತಿಯ ಆಧುನಿಕ ದಿರುಸಿನ ಯಾಚನೆಯಿರಬಹುದೇ? ಅಥವಾ ಜನಮರುಳೋ, ಜಾತ್ರೆಮರುಳೋ ಎಂಬಲ್ಲಿ ಇಂತಹ ಬಿಜಿನೆಸ್‌ ನಡೆಯುತ್ತಿರುತ್ತದೆಯೆ? ಅಲ್ಲದೇ, ಇಂತಹವುಗಳಿಂದ ಅದೆಷ್ಟು ಜನ ಮೋಸ ಹೋಗಿರಬಹುದು! ಹೋಗುತ್ತಿರಬಹುದು??? ಎನಿಸಿದರೆ ಅಚ್ಚರಿಯಿಲ್ಲ.... ಅಂತಹವರನ್ನು ಆ `ತಿರುಪತಿ ತಿಮ್ಮಪ್ಪ'ನೇ ಕಾಪಾಡಬೇಕು!

೧೨ ನವೆಂಬರ್ ೨೦೦೯

ಕನ್ನಡ ಬರೊಲ್ಲ! ಅದಕ್ಕೆ!!

ಕನ್ನಡ ಬರೊಲ್ಲ! ಅದಕ್ಕೆ!!

ನಿನ್ನೆ ದಿನ ಬಸ್ಸಿನಲ್ಲಿ ನಡೆದ ಒಂದು ಪುಟ್ಟ ಪ್ರಸಂಗ. ಸಂಜೆ ಆರು ಗಂಟೆಗೆ ಜಯನಗರಕ್ಕೆ ಹೊರಡುವ ಪುಷ್ಪಕ್ ಬಸ್ಸಿಗೆ ಒಬ್ಬ ವೃದ್ಧೆ (ಸುಮಾರು ೬೦-೬೫ ವರ್ಷವಿರಬಹುದು) ಮತ್ತೊಬ್ಬ ಮಹಿಳೆಯ ಜೊತೆ ಬಂದರು. ಜಯನಗರ ನಾಲ್ಕನೇ ಬ್ಲಾಕಿಗೆ ಆ ವೃದ್ಧೆ ಹೋಗುವವರಿದ್ದರು. ಅವರ ಜೊತೆ ಬಂದಿದ್ದ ಮಹಿಳೆ ನಿರ್ವಾಹಕರಿಗೆ (ಕಂಡಕ್ಟರಿಗೆ) ಈ ವೃದ್ಧೆಯನ್ನು ನಾಲ್ಕನೇ ಬ್ಲಾಕಿನಲ್ಲಿ ಇಳಿಸಿರೆಂದು ಹೇಳಿದರು. ನಂತರ, ನಿರ್ವಾಹಕರು ಚೀಟಿ ಕೊಡುತ್ತಾ ಎಂಟು ರೂಪಾಯಿಕೊಡಲು ಆ ವೃದ್ಧೆಗೆ ಕೇಳಿದಾಗ, ಆ ಅಜ್ಜಿಯು ನನಗೆ ಕನ್ನಡ ಬರುವುದಿಲ್ಲ ಎಂದು ಹಿಂದಿಯಲ್ಲಿ ಹೇಳಿ, ಆದ್ದರಿಂದ ತಮಿಳಿನಲ್ಲಿ ಮಾತಾಡಿ ಎಂದರು (ನಿರ್ವಾಹಕರಿಗೆ). ಅಲ್ಲಿಯೇ ಇದ್ದ ಮತ್ತೊಬ್ಬ ಪ್ರಯಾಣಿಕರು, ನೀವು ಇರೋದು ಕನ್ನಡನಾಡಿನಲ್ಲಿ ಕನ್ನಡ ಬರೊಲ್ಲ ಅಂದರೆ ನಂಬೊಲ್ಲ ಎಂದರು (ಕಾರಣ, ಆಕೆ ಮಾರ್ವಾಡಿ). ಅದಕ್ಕೆ, ಆಕೆ ನಾವು ಮದ್ರಾಸಿನಲ್ಲಿ ಇದ್ದೆವು. ಇದೀಗ ಕರ್ನಾಟಕಕ್ಕೆ ಮಗಳ ಮನೆಗೆ ಬಂದಿದೇನೆ. ಅದಕ್ಕೆ ಕನ್ನಡ ಬರೊಲ್ಲ ಎಂದಿದ್ದು ಎನ್ನಬೇಕೆ! ಅಲ್ಲದೆ, ಚಿಲ್ಲರೆ ಸರಿಯಾಗಿ ಕೊಡಿ ಎಂದು ನಿರ್ವಾಹಕರಿಗೆ ತಾಕೀತು (ತಮಾಷೆ ಮಾತಿನಿಂದ) ಮಾಡುತ್ತಿದ್ದರು.

ಒಂದೆರಡು ಸ್ಟಾಪುಗಳು ಸುಮ್ಮನಿದ್ದ ಆಕೆ ಪಕ್ಕದಲ್ಲಿ ಕುಳಿತವರ ಜೊತೆ ಇದು ಯಾವ ಸ್ಟಾಪು, ನೀವು ಎಲ್ಲಿ ಇಳಿಯೋದು ಹೀಗೆ ಅನೇಕ ಪ್ರಷ್ನೆಗಳನ್ನು ಕನ್ನಡದಲ್ಲಿ ಕೇಳುತ್ತ ಮಾತಿಗೆ ಶುರು ಮಾಡಿದರು.

ನಮ್ಮ ಕನ್ನಡನಾಡಿನಲ್ಲಿ ಜನರ ಪ್ರತಿಯೊಂದು ನಡೆನುಡಿಯೂ ಸಹ ಇದೇ ರೀತಿ ಇದೆ ಎನಿಸಿತು. ಹೀಗಿದೆ ನಮ್ಮ ಕರ್ನಾಟಕದಲ್ಲಿನ ಕನ್ನಡ ಜನರ ಪರಿಸ್ಥಿತಿ.

೦೨.೦೬.೨೦೦೧
ಅವರ್ ಕರ್ನಾಟಕ.ಕಾಂ ನಲ್ಲಿ ಪ್ರಕಟವಾಗಿದೆ.

ಚಂದ್ರಶೇಖರ ಬಿ.ಎಚ್. ೧೨.೧೧.೨೦೦೯

೩೧ ಅಕ್ಟೋಬರ್ ೨೦೦೯

ಕನ್ನಡಮ್ಮನ ಆರಾಧನೆ

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಸುಮಾರು ೨೦೦೦ ನೇ ಇಸವಿಯಲ್ಲಿ ಒಂದು ಕವಿತೆ ಬರೆದಿದ್ದೆ.

ನೆರೆ ಹಾವಳಿಯಿಂದಾಗಿ ಈ ಬಾರಿಯ ರಾಜ್ಯೋತ್ಸವ ಕಾರ್ಯಕ್ರಮಗಳು ಸರಳವಾಗಿ ನಡೆಸಲು ರಾಜ್ಯ ಸರ್ಕಾರದ ಮನವಿಯಿದೆ. ಕನ್ನಡವನ್ನು ಉಳಿಸಿ, ಬೆಳೆಸಲು ಸರಳವಾಗಿ ಎಲ್ಲರೊಡನೆ ಬೆರೆತು, ಕಲೆತು, ಓದಿ-ಬರೆದು, ಮಾತಾಡಿದರೆ ಸಾಕೆಂಬುದು ನನ್ನ ಅನಿಸಿಕೆ. ಬಿಡುವಿದ್ದಾಗ ಓದಿ, ನಿಮ್ಮ ಅನಿಸಿಕೆಗಳನ್ನು ತಿಳಿಸಿರಿ.
ಮತ್ತೊಮ್ಮೆ ಎಲ್ಲರಿಗೂ ಶುಭಾಶಯಗಳು.


ಕನ್ನಡಮ್ಮನ ಆರಾಧನೆ

ನವ್ಹೆಂಬರದ ತೇದಿ ಮೊದಲಲಿ, ಹರುಷ ಎಲ್ಲರ ಹೃದಯದಲಿ
ಹಾರಿಸುವರು ಕನ್ನಡ ಬಾವುಟ, ತಾಯಿ-ಕನ್ನಡದೇವಿಯನು ಪೂಜಿಸುತ
ಪಂಪ, ರನ್ನರಿಗೆ ನಮಿಸುತಾ, ವಿದ್ಯಾರಣ್ಯರ ನೆನೆಯುತ
ಚೆನ್ನಮ್ಮ, ಮಲ್ಲಮ್ಮ, ಓಬವ್ವರ ನಾಡಿನಲಿ ಹಾಡುತಾ
ರಾಯಣ್ಣ, ಸಿಂಧೂರಲಕ್ಷ್ಮಣರ ಕೆಚ್ಚು ಮೆಚ್ಚುತಾ
ಹಾರಿಸುವರು ಕನ್ನಡ ಬಾವುಟ, ತಾಯಿ-ಕನ್ನಡದೇವಿಯನು ಪೂಜಿಸುತ
ಕರ್ನಾಟಕ ಸಂಗೀತಕೆ ಕೊಡುಗೆಯಿತ್ತ ದಾಸಶ್ರೇಷ್ಠರ ನೆನೆಯುತಾ
ಯೋಗಿ ಬಸವಣ್ಣ, ಶಿವಶರಣೆ ಅಕ್ಕ, ಜ್ಞಾನಿ ಸರ್ವಜ್ಞರಿಗೆ ನಮಿಸುತಾ
ಭಕ್ತಿಭಾವಗಳಿಗೆ ಶಿರಬಾಗಿ, ಮುಕ್ತರಾದೆವೆಂದು ತಿಳಿಯುತಾ
ಹಾರಿಸುವರು ಕನ್ನಡ ಬಾವುಟ, ತಾಯಿ-ಕನ್ನಡದೇವಿಯನು ಪೂಜಿಸುತ
ಕನ್ನಡ ನೆಲದಲಿ ಹುಟ್ಟಿ-ಬೆಳೆದು, ಉತ್ತಿಬಿತ್ತಿ ಬೆಳೆದು
ಕಾವೇರಿ ನೀರನು ಕುಡಿದು, ಬಾಳಿದಾ, ಬಾಳುತಿರುವ
ಜೀವ-ಜೀವಿಗಳೇ ನೀವೇ, ನೀವೇ ಧನ್ಯರು ಎನ್ನುತಾ
ಹಾರಿಸುವರು ಕನ್ನಡ ಬಾವುಟ, ತಾಯಿ-ಕನ್ನಡದೇವಿಯನು ಪೂಜಿಸುತ
ಒಂದಾಗಿ ಬನ್ನಿ, ಸಾಲಾಗಿ ಬನ್ನಿ, ಜಗಳ ಜಂಜಾಟ ಮರೆತು ಬನ್ನಿ
ಸ್ನೇಹ-ಸೌಹಾರ್ದಭಾವದಲಿ ಬನ್ನಿ, ಮಕ್ಕಳಂತೆಯೆ ಬನ್ನಿ
ಭುವನೇಶವರಿಯ ಪೂಜಿಸುವ ಬನ್ನಿ, ಶಿರಬಾಗಿ ಬನ್ನಿ
ಸಮಸ್ತ ಕನ್ನಡನಾಡಿಗೆ ದುಡಿದು ಶ್ರಮಿಸಿದವರಿಗೆ ನಮಿಸುತ ಬನ್ನಿ
ಕನ್ನಡ-ಭಾಷೆ-ನಾಡನು ಉಳಿಸುವ, ಬೆಳೆಸುವ ಕಾರ್ಯಕೆ ಉತ್ಸಾಹದಲಿ ಬನ್ನಿ
ನವ್ಹೆಂಬರದ ತೇದಿ ಮೊದಲಲಿ, ಹರುಷ ಎಲ್ಲರ ಹೃದಯದಲಿ
ಹಾರಿಸುವರು ಕನ್ನಡ ಬಾವುಟ, ತಾಯಿ-ಕನ್ನಡದೇವಿಯನು ಪೂಜಿಸುತ

- ಚಂದ್ರಶೇಖರ ಬಿ. ಎಚ್.
ಡಿಸೆಂಬರ್ ೦೧, ೨೦೦೦

೨೭ ಅಕ್ಟೋಬರ್ ೨೦೦೯

ಒಂದಷ್ಟು ಮೊಬೈಲು ಸಂದೇಶಗಳು ...

ಇಲ್ಲಿ ಒಂದಷ್ಟು ಸಂಕ್ಷಿಪ್ತ ಸಂದೇಶಗಳನ್ನು ನನ್ನ ಸ್ನೇಹಿತರು ಮೊಬೈಲಿಗೆ ಕಳಿಸಿದ್ದರು. ಕೆಲವು ಸಂದೇಶಗಳು ಚಿಂತನೆಗೆ ಹಚ್ಚುವಂತಹವು. ಅವುಗಳನ್ನು ಕೆಲವನ್ನು ಬ್ಲಾಗಿನಲ್ಲಿ ಬರೆಯಬೇಕೆನಿಸಿತು. ಆಂಗ್ಲದಲ್ಲಿರುವ ಸಂದೇಶಗಳನ್ನು ಕನ್ನಡಕ್ಕೆ ಅನುವಾದಿಸಲು ಪ್ರಯತ್ನಿಸಿದೆ. ಆದರೆ ಅವುಗಳನ್ನು ಹಾಗೇ ಓದಿಕೊಂಡರೆ, ಅದರ ಸೊಗಸೇ ಬೇರೆ ಎನ್ನಿಸಿತು. ಹೀಗಾಗಿ ಆಂಗ್ಲದಲ್ಲಿಯೇ ಉಳಿಸಿದ್ದೇನೆ. ಇವೆಲ್ಲ ಸದಾಕಾಲಕ್ಕೂ ಅನ್ವಯಿಸುವಂತಹುದು ಎಂದು ನನ್ನ ಅನಿಸಿಕೆ...

ಇದೋ ನಿಮಗಾಗಿ...

***
ಮುಗ್ಧ ಮಗುವಿನ ನುಡಿಗಳು: `ಈ ವಿಶ್ವವನ್ನೇ ನನ್ನ ಒಂದು ಕೈಯಿಂದ ಗೆಲ್ಲಬಲ್ಲೆ, ನನ್ನಮ್ಮ ಇನ್ನೊಂದು ಕೈ ಹಿಡಿದರೆ...'
***
ಸ್ನೇಹ ಉಸಿರಾಗಿ,
ಉಸಿರು ಹಸಿರಾಗಿ,
ಹಸಿರು ಜೀವವಾಗಿ,
ಜೀವ ಬದುಕಾಗಿ,
ಬದುಕು ಬೆಳಕಾಗಿ,
ಬೆಳಕು ಗೆಲುವಾಗಿ,
ಗೆಲುವು ಸದಾ ನಗುವ ತರಲಿ
ಆಅ ನಗುವು ಸದಾ ನಿಮ್ಮದಾಗಿರಲಿ.

****
Everyone you meet is not just a coincidence but destiny. Leave something wonderful to those who pass your life so they will find it hard to erase you from their heart.
****
Old messages are deleted when new messages come to inbox. Old friends are ignored when new one comes. Never do this mistake, because some messages can be created but not the same old Friend.
****
Love is not winning someone but loosing yourself to some one, when you are loved by someone it's not due to your excellence of mind but due to purity of your heart.
****
Four rules to have a happy life. Who help you? Don't forget them.
Who love you, don't hate them
Who believe you, don't cheat them
Who care you, don't neglect them.
****
Some tough battles have to be fought alone, some paths have to be crossed alone, so never be emotionally attached with anyone, you never know when you have to walk alone.
****
ಸಂಗ್ರಹಿಸಿದ್ದು: ಚಂದ್ರಶೇಖರ ಬಿ.ಎಚ್.

೨೨ ಅಕ್ಟೋಬರ್ ೨೦೦೯

ಕಾವಲು ಸಿಪಾಯಿ... ಯ ಕಥೆ

ಐರ್‍ಲೆಂಡಿನ ಒಂದು ಕಥೆಯನ್ನು ಓದಿದೆ. ಅದರ ಸಾರಾಂಶವನ್ನು ಹಂಚಿಕೊಳ್ಳಬೇಕೆನಿಸಿತು. ಕಥೆಗಾರ: ಲಿಯಾಮ್ ಒ' ಫ್ಲಹರ್ಟಿ. ಅವನ ಒಂದು ಕಥೆಯ ಹೆಸರು: ಹೊಂಚು ಸಿಪಾಯಿ. ಇದು ನವಕರ್ನಾಟಕ ಪ್ರಕಾಶನದ ವಿಶ್ವಕಥಾ ಕೋಶದಲ್ಲಿದೆ. ಓದುತ್ತಿರುವಂತೆಯೇ ಆ ಯುದ್ಧರಂಗದ ಚಿತ್ರಣ ಕಣ್ತುಂಬಿ ಬರುತ್ತದೆ. ಓದುತ್ತಾ ಹೋದಂತೆ ಕೊನೆಯಲ್ಲಿ....
***
ಮುಂದೆ ಓದಿ.
***
ಆಗ ರಿಪಬ್ಲಿಕನ್ಸ್ ಮತ್ತು ಫ್ರೀಸ್ಟೇಟರ್‍ಸಗಳ ಮಧ್ಯೆ ಅಂತರರ್ಯುದ್ಧ ನಡೆಯುತ್ತಿತ್ತು. ಅದೊಂದು ಜೂನ್ ತಿಂಗಳ ಒಂದು ರಾತ್ರಿ. ಡಬ್ಲಿನ್ ನಗರ ಕತ್ತಲಲ್ಲಿ ಮುಳುಗಿತ್ತು. ಫೋರ್‍ಕೋರ್ಟ್ಸ್ ಮುತ್ತಿಗೆಗೆ ಒಳಗಾಗಿತ್ತು. ಮೆಷಿನ್‌ಗನ್‌ಗಳು ಸದ್ದುಮಾಡುತ್ತಿದ್ದವು.

ಆ ರಾತ್ರಿಯಲ್ಲಿ ಒ'ಕಾನಲ್‌ ಸೇತುವೆಯ ಬಳಿಯಿದ್ದ ಒಂದು ಮನೆಯ ಮಾಡಿನ ಮೇಲೊಬ್ಬ ರಿಪಬ್ಲಿಕನ್‌ ಪಡೆಗೆ ಸೇರಿದ ಸಿಪಾಯಿಯು ಕಾಯುತ್ತಾ ಕುಳಿತಿದ್ದ. ಹೆಗಲಲ್ಲಿ ದುರ್ಬಿನು, ಬಂದೂಕು ಹಿಡಿದಿದ್ದ ಅವನೊಬ್ಬ ವಿದ್ಯಾರ್ಥಿಯಂತೆ ಕಾಣುತ್ತಿದ್ದ. ಅವನ ಕಣ್ಣುಗಳು ಹೊಳೆಯುತ್ತಿದ್ದವು. ಸಾವನ್ನು ಕಂಡರೂ ಅವನಿಗೇನೂ ಅನ್ನಿಸುವಂತಿಲ್ಲ. ಸಿಗರೇಟು ಸೇದಬೇಕೆನಿಸಿತು. ವಿಸ್ಕಿ ಕುಡಿದ. ಸರಿ, ಸಿಗರೇಟನ್ನು ಹೊತ್ತಿಸಿದರೆ, ಆ ಬೆಳಕಿನಲ್ಲಿ ಶತ್ರುವಿನ ಗುಂಡಿನ ದಾಳಿ ನಡೆಯುವುದಿತು. ಆದರೂ, ಸಿಗರೇಟು ಹತ್ತಿಸಿ ಒಂದು ಧಂ ಎಳೆಯುವಷ್ಟರಲ್ಲಿ ಬದಿಯ ಗೋಡೆಗೆ ಶತ್ರುವಿನ ಗುಂಡು ಹಾರಿ ಬಂದು ತಾಕಿತ್ತು. ಸಿಗರೇಟು ಬಿಸಾಕಿ ತೆವಳುತ್ತ ಗೋಡೆಯ ಮೇಲಿಂದ ಇಣುಕಿದ. ತಕ್ಷಣ ಬೆಳಕೊಂದು ಮಿಂಚಿ, ಮತ್ತೊಂದು ಗುಂಡು ತಲೆಯ ಮೇಲೆ ಹಾದುಹೋಯಿತು. ಬೆಳಕು ರಸ್ತೆಯ ಅ ಕಡೆಯಲ್ಲಿ ಕಂಡಿತ್ತು. ಶಸ್ತ್ರ ಸಜ್ಜಿತ ವಾಹನ ಸೇತುವೆಯ ಮೇಲೆ ಸಾಗುತ್ತಿದೆ. ಅದು ಶತ್ರುವಿನದ್ದು. ಈತ ನಡುಗಿದ. ಒಬ್ಬ ಮುದುಕಿ ಗಾಡಿಯವನೊಂದಿಗೆ ಏನೋ ಹೇಳಿದಳು. ಸಿಪಾಯಿ ಅಡಗಿದ್ದ ಬುರುಜಿನ ಬಾಗಿಲು ತೆಗೆಯಿತು. ತಕ್ಷಣ ಈತ ಗುಂಡುಹಾರಿಸಿ ಅವನನ್ನು ಕೆಡವಿದ. ಮುದುಕಿ ಕಿರುಚುತ್ತಾ ಓಡಿ ಚರಂಡಿಯೊಳಗೆ ಬಿದ್ದಳು. ಇವನ ಕೈಲಿದ್ದ ಬಂದೂಕು ಕೆಳಗೆ ಬಿದ್ದಿತು. ಅದನ್ನು ತೆಗೆಯಬೇಕೆಂದಿರುವಾಗ, ಮುದುಕಿಯ ಚೀರುವಿಕೆಯಿಂದಾಗಿ ಶತ್ರು ನೆಲೆಯಿಂದ ಮತ್ತೊಂದು ಗುಂಡು ಇವನ ಬಲಗೈಗೆ ಬಡಿದಿತ್ತು. ಶಪಿಸುತ್ತಾ ಕುಳಿತ. ಕಷ್ಟಪಟ್ಟು ತೆವಳುತ್ತಾ ಗೋಡೆಯ ಬದಿಯಿಂದ ಕೆಳಗೆ ಬಂದ. ಗುಂಡು ಬಿದ್ದ ಜಾಗಕ್ಕೆ ಅಯೋಡಿನ್‌ ಸೀಸೆಯನ್ನು ಒಡೆದು ಗಾಯದ ಮೇಲೆ ಹನಿಸಿದ. ಅಸಾಧ್ಯ ನೋವು. ಹತ್ತಿಯಿಟ್ಟು ಬಟ್ಟೆ ಕಟ್ಟಿದ.

ಕೆಳಗಿನ ರಸ್ತೆ ಪ್ರಶಾಂತವಾಗಿತ್ತು. ಇವನು ತಪ್ಪಿಸಿಕೊಂಡು ಹೋಗದಂತೆ ಎದುರು ಛಾವಣಿಯ ಮೇಲಿದ್ದ ಸಿಪಾಯಿ ಕಾಯುತ್ತಿದ್ದ. ಈತನಿಗೊಂದು ಉಪಾಯ ಹೊಳೆದು, ತನ್ನ ಟೋಪಿಯನ್ನು ಬಂದೂಕಿಗೆ ಸಿಕ್ಕಿಸಿದ. ನಿಧಾನವಾಗಿ ಬಂದೂಕನ್ನು ಸುತ್ತಲಿನ ಗೋಡೆಯ ಮೇಲಿಂದ ಸ್ವಲ್ಪವೇ ಕಾಣುವಂತೆ ಎತ್ತಿ ಹಿಡಿದ. ಇದನ್ನು ಕಂಡು ಆ ಕಡೆಯ ಸಿಪಾಯಿ ಗುಂಡು ಹಾರಿಸಿದ್ದ. ಬಂದೂಕನ್ನು ಈ ಸಿಪಾಯಿ ಕೆಳಕ್ಕೆ ಒಬ್ಬ ಮನುಷ್ಯ ಬೀಳುವಂತೆ ಮುಂದೆಮಾಡಿದಾಗ ಟೋಪಿ ಬಿದ್ದಿತು. ಇವನ ಉಪಾಯ ಫಲಿಸಿತ್ತು. ಆ ಕಡೆಯ ಶತ್ರು ಸಿಪಾಯಿ ಇವನನ್ನು ಕೊಂದೆನೆಂದು ತಿಳಿದ.

ಇವನಿಗೆ ಆ ಕಡೆಯ ಶತ್ರು ಸಿಪಾಯಿಯ ಛಾಯೆ ಆ ಮಂದ ಬೆಳಕಿನಲ್ಲಿ ಕಾಣುತ್ತಿತ್ತು. ಬಲಗೈ ನಡುಗುತ್ತಿದ್ದರೂ ಕಷ್ಟಪಟ್ಟು ಬಂದೂಕನ್ನು ಗುರಿ ಮಾಡಿದ. ತುಪಾಕಿ ಸಿಡಿಯಿತು. ಆ ಕಡೆಯ ಶತ್ರು ಸಿಪಾಯಿಗೆ ಗುಂಡು ತಗುಲಿತ್ತು. ಕೈಲಿದ್ದ ಬಂದೂಕು ಕೆಳಗಿದ್ದ ಸಲೂನಿನ ಅಂಗಡಿಯ ಕಂಬಕ್ಕೆ ತಾಕಿ ಸದ್ದು ಮಾಡುತ್ತಾ ಬಿದ್ದಿತು. ಆತ ಕೆಳಗೆ ಬಿದ್ದು ಸತ್ತ.

ಶತ್ರು ಸಿಪಾಯಿ ಕೆಳಗೆ ಬಿದ್ದುದನ್ನು ನೋಡಿ ಇವನು ನಡುಗಿದ. ಇವನಲ್ಲಿದ್ದ ಹೋರಾಟದ ತೀವ್ರತೆ ಬತ್ತಿತು. ಪಶ್ಚಾತ್ತಾಪದಿಂದ ಕುಂದಿದ. ಬೆವರ ತೊಡಗಿದ. ಶತ್ರುವಿನ ಛಿದ್ರವಾದ ದೇಹದ ಮಾಂಸದಿಂದ ಇವನಿಗೆ ವಾಕರಿಕೆಯಂತಾಯಿತು. ಇವನು ತನಗೆ ತಾನೇ ಬಯ್ಯತೊಡಗಿದ್ದ. ಎಲ್ಲರನ್ನೂ ಬಯ್ಯುತ್ತಿದ್ದ.

ಕೈಲಿದ್ದ ಬಂದೂಕನ್ನು ಒಮ್ಮೆ ನೋಡಿದ. ಬೇಸರದಿಂದ ಬಿಸಾಕಿದ ರಭಸಕ್ಕೆ ಕೆಳಗೆ ಬಿದ್ದು ಆಕಸ್ಮಿಕವಾಗಿ ಗುಂಡು ಇವನ ತಲೆಯ ಮೇಲೆಯೇ ಹಾರಿತ್ತು. ವಿಸ್ಕಿ ತೆಗೆದು ಹೀರಿದ. ಶತ್ರುವನ್ನು ಕೊಂದ ವಿಷಯ ತನ್ನ ನಾಯಕನಿಗೆ ತಿಳಿಸಬೇಕೆಂದು ತನ್ನಲಿದ್ದ ಪಿಸ್ತೂಲನ್ನು ಜೇಬಿಗಿಡುತ್ತಾ, ತೆವಳುತ್ತಾ ಛಾವಣಿಯಿಂದ ಇಳಿಯ ತೊಡಗಿದ. ಹಾಗೂ ಹೀಗೂ ರಸ್ತೆಗಿಳಿದು ಬಂದ.

ರಸ್ತೆಯ ಗಲ್ಲಿಯಲ್ಲಿ ಬರುವಾಗ ತಕ್ಷಣ ಅವನಿಗೊಂದು ಯೋಚನೆ ಬಂತು. ಶತ್ರು ಸಿಪಾಯಿಯ ಗುರಿಗಾರಿಕೆಯ ಕುತೂಹಲ ಇವನಲ್ಲಿ ಇಣುಕಿತು. ಸತ್ತ ಆ ಶತ್ರು ಸಿಪಾಯಿಗೆ ಮೆಚ್ಚುಗೆ ತೋರಿದ. ತನಗೆ ಗೊತ್ತಿದ್ದವನಿರಬಹುದೇ ಎಂದು ಯೋಚಿಸುತ್ತಾ ಹೋದ. ಸೈನ್ಯ ಇಬ್ಭಾಗವಾಗುವಾಗ ತನ್ನ ಜೊತೆಯಲ್ಲಿದ್ದವನಿರಬಹುದೇ ಎಂದು ಯೋಚಿಸಿದ. ಹೇಗಾದರೂ ಸರಿ, ಅವನನ್ನು ನೋಡುವ ಎಂದು ಮುಂದೆ ಹೊರಟ. ರಸ್ತೆಯ ಆ ತುದಿಯಲ್ಲಿ ಭೀಕರ ಕಾಳಗ ನಡೆಯುತ್ತಿತ್ತು. ಈ ಪ್ರದೇಶ ಪ್ರಶಾಂತವಾಗಿತ್ತು.
***
ರಸ್ತೆ ದಾಟುತ್ತಿರುವಂತೆಯೇ ಮೆಷಿನ್‌ ಗನ್ನಿನಿಂದ ಗುಂಡಿನ ಸುರಿಮಳೆ. ಹಾಗೂ ಹೀಗೂ ಇವನು ತಪ್ಪಿಸಿಕೊಂಡು ಶತ್ರು ಸಿಪಾಯಿಯ ಹೆಣದ ಪಕ್ಕಕ್ಕೆ ಮುಖಡಿಯಾಗಿ ಬಿದ್ದ. ಗುಂಡಿನ ಸದ್ದು ನಿಂತಿತು.

ಶತ್ರು ಸಿಪಾಯಿಯ ಹೆಣವನ್ನು ಕೊಂಚ ಹೊರಳಿಸಿ ನೋಡಿದ.
ಆಗ ಅಲ್ಲಿ ಕಂಡಿದ್ದು......
ತನ್ನ ಒಡಹುಟ್ಟಿದವನ ಮುಖ. ಅದು ನಿರ್ಜೀವವಾಗಿತ್ತು.
***

ಇದನ್ನು ಓದಿದ ಮೇಲೆ ನಿಮಗೂ ಹೀಗನ್ನಿಸಿರಬಹುದು? ಅನಾದಿ ಕಾಲದಿಂದ ಯುದ್ಧ - ಏತಕ್ಕಾಗಿ ಯುದ್ಧ? ಜನಾಂಗಗಳಿಗಾಗಿ, ಭೂಮಿಗಾಗಿ, ಸಂಪತ್ತಿಗಾಗಿ, ಹೆಣ್ಣಿಗಾಗಿ... ಒಬ್ಬರ ಹಕ್ಕನ್ನು ಸ್ಥಾಪಿಸಿಕೊಳ್ಳುವುದಕ್ಕಾಗಿ... ಭಯಂಕರ ಯುದ್ಧಗಳು ನಡೆದಿವೆ. ನಡೆಯುತ್ತಿವೆ.
****
ಚಂದ್ರಶೇಖರ ಬಿ.ಎಚ್.
೨೨.೧೦.೨೦೦೯

೨೦ ಅಕ್ಟೋಬರ್ ೨೦೦೯

ಅಬ್ಬಬ್ಬಾ...!! ಪಟಾಕಿ ಸದ್ದು.

ಢಂ, ಢಮಾರ್‍, ಜ಼ುರ್‍, ಬ್ಲಬ್,
ಅಬ್ಬಬ್ಬಾ...!! ಪಟಾಕಿ ಸದ್ದು. ತಲೆ ಸಿಡಿಸುವಂತಹ ಸಿಡಿಮದ್ದಿನ ಶಬ್ದ!!!

ಕಳೆದ ಮೂರು ದಿನಗಳಿಂದ ಇದುವೇ ನಗರದೆಲ್ಲೆಡೆ ಆಗಿದ್ದ ದೀಪಾವಳಿ ಹಬ್ಬದ ಸಂಭ್ರಮ.

ಸಂಭ್ರಮ ಒಂದು ಕಡೆಯಾದರೆ, ಆ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಬಂದವರ ಕಣ್ಣು, ದೇಹಕ್ಕೆಲ್ಲ ಪಟಾಕಿಯ ಕಿಡಿಗಳು ಮಾಡಿದ ಗಾಯಗಳನ್ನು ಮರುದಿನ ಪತ್ರಿಕೆಯಲ್ಲಿ ನೋಡಿದಾಗ ತುಂಬಾ ಬೇಸರವಾಯಿತು. ಯಾರೋ ಹಚ್ಚಿದ ಸಿಡಿಮದ್ದಿನ ಪಟಾಕಿ ಪಟ್ಟೆಂದು ನಡೆವವರ ಮೇಲೆಯೇ ಹಾದು ಸದ್ದಿಲ್ಲದೇ ಕಣ್ದೀಪವನ್ನು ಅಳಿಸಿಹಾಕಿತಲ್ಲಾ ಎಂದು ಮನ ನೋಯುತ್ತದೆ. ಉದ್ದೇಶ ಪೂರ್ವಕವಾಗಿ ಇವೆಲ್ಲ ನಡೆಯದಿದ್ದರೂ, ಕೊಂಚ ಅಜಾಗರೂಕತೆ ಎಂತಹ ಅನಾಹುತಗಳಿಗೆ ಎಡೆ ಮಾಡಿಕೊಡುತ್ತದೆಯಲ್ಲವೆ?

ನಿನ್ನೆ ಸಂಜೆ ಸುಮಾರು ಏಳರ ಸಮಯಕ್ಕೆ ಸುಮ್ಮನೇ ಮನೆಯಿಂದ ಹತ್ತಿರವಿದ್ದ ಅಂಗಡಿಗೆಂದು ಹೊರಟೆ. ಅಂಗಡಿಯವನು ಬಾಗಿಲು ಹಾಕಿದ್ದ. ಅಲ್ಲೆ ಒಂದಿಬ್ಬರು ಪಟಾಕಿ ಸಿಡಿಸುತ್ತಾ ಸಂಭ್ರಮಿಸುತ್ತಿದ್ದರು. ಕೆಲವರು ದ್ವಿಚಕ್ರವಾಹನದಲ್ಲಿ ಬರುತ್ತಿದ್ದರು. ಕೆಲವರು ಆಟೋ, ಕಾರು ಹೀಗೆ. ಇನ್ನು ನಡೆಯುವವರೂ ಇದ್ದರೆನ್ನಿ.
ಅದೇ ಸಮಯಕ್ಕೆ ಒಬ್ಬ ಹಚ್ಚಿದ ಸಣ್ಣ ಪಟಾಕಿ ಸಿಡಿದು ದಾರಿಯಲ್ಲಿ ಹೋಗುತ್ತಿದ್ದವರ ಬಟ್ಟೆಗೆ ಕಿಡಿತಗಲಿತು. ಸದ್ಯಕ್ಕೆ ಅವರಿಗೆ ತೊಂದರೆಯಾಗಿಲಿಲ್ಲ. ಆದರೆ, ಇಲ್ಲಿ ಪಟಾಕಿ ಹಚ್ಚುವ ಜನರು ಯಾರೇ ಆಗಿರಲಿ ರಸ್ತೆಯಲ್ಲಿ ಬರುವ ಜನರಿಗೆ ಒಂದು ಸಣ್ಣ ಎಚ್ಚರಿಕೆಯಾಗಿ ಅಲ್ಲೆ ನಿಂತು ಹೊರಡುವಂತೆ ಮಾಡಿದ್ದರೆ ಹೀಗಾಗುತ್ತಿರಲಿಲ್ಲ. ಇನ್ನು ಕೆಲವು ಜನರದ್ದು ಭಂಡ ಧೈರ್ಯ ಎನ್ನಿ. ಪಟಾಕಿ ಸರಮಾಲೆ ಅಲ್ಲಿಯೇ ಸಿಡಿಯುತ್ತಿದ್ದರೂ ಅದರ ಮಗ್ಗುಲಿನಲ್ಲಿಯೇ ವಾಹನ ಚಲಾಯಿಸುವ ಸಾಹಸ ಮಾಡುವವರೂ ಇದ್ದಾರೆ. ಅಕಸ್ಮಾತ್, ಪಟಾಕಿಯ ಕಿಡಿಗಳು (ಸರಹಚ್ಚಿದ್ದಾಗ ಪಟಾಕಿಗಳು ೨೦-೩೦ ಅಡಿ ಸಿಡಿಯುತ್ತವೆ) ಸವಾರನಿಗೋ ಅಥವಾ ಹಿಂಬದಿ ಕುಳಿತವರಿಗೋ ಅಥವಾ ವಾಹನದ ತೈಲ ಪೈಪಿಗೋ ತಗಲಿದರೆ ಆಗುವ ಅನಾಹುತ ಮತ್ತೆ ಸರಿಪಡಿಸಲು ಆಗುವುದೇ?

ಪಟಾಕಿ ಹಚ್ಚುವ ಮಂದಿಗಿಂತ, ರಸ್ತೆಯಲ್ಲಿ ನಡೆಯುವವರು, ನೋಡುವವರು ಎಚ್ಚರಿಕೆ ವಹಿಸಬೇಕಾದ್ದು ಅತ್ಯವಶ್ಯಕ ಅಲ್ಲವೇ? ಅಲ್ಪ ಸಮಯ ಉಳಿಸಲು ಬಾಳ ಸಮಯವನ್ನು ಹಾಳು ಮಾಡಿಕೊಳ್ಳುವುದು ತರವೇ?
ಕಳೆ ಮೂರು ದಿನಗಳಲ್ಲಿ ಪಟಾಕಿಯ ಸಿಡಿತದಿಂದ ಕಣ್ಣು, ಕೈ, ದೇಹದ ಅಂಗಗಳಿಗೆ ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ, ಅವರ ದೃಷ್ಟಿಗಳು ಮರಳಿ ಬರಲಿ, ಎಂದು ಆಶಿಸುತ್ತೇನೆ.

ಚಂದ್ರಶೇಖರ ಬಿ.ಎಚ್.೨೦.೧೦.೨೦೦೯