ಕ್ಷಣಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕ್ಷಣಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಸೆಪ್ಟೆಂಬರ್ 4, 2012

ಭೇಟಿಯ ಅವಕಾಶ ಕೈತಪ್ಪಿತ್ತು... ಸೆಪ್ಟಂಬರ್‍ ೫ ಕ್ಕೆ ಒಂದು ನೆನಪು


"Those who educate children well are more to be honored than they who produce them; for these only gave them life, those art of living well." ? -- Aristotle

ಸೆಪ್ಟಂಬರ್‍ ೫ ಎಂದ ಕೂಡಲೇ ನೆನಪಾಗುವುದು ಶಿಕ್ಷಕರ ದಿನಾಚರಣೆ.  ಹಾಗೆಯೇ ಈ ದಿನವನ್ನು ಭಾರತದ ಶ್ರೇಷ್ಠ ಶಿಕ್ಷಕ, ಶಿಕ್ಷಣತಜ್ಞ ಹಾಗೂ ಸ್ವತಂತ್ರ ಭಾರತದ ೨ನೇ ರಾಷ್ಟ್ರಪತಿಯಾಗಿ (೧೯೬೨-೧೯೬೬) ಸೇವೆ ಸಲ್ಲಿಸಿದ ಮಹಾನ್‌ ವ್ಯಕ್ತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮದಿನ (ಸೆಪ್ಟೆಂಬರ್‍ ೫, ೧೮೮೮ ರಿಂದ ಏಪ್ರಿಲ್ ೧೭, ೧೯೭೫).

ಸೆಪ್ಟೆಂಬರ್‌ ೫, ಅವರ ಹುಟ್ಟುಹಬ್ಬವನ್ನು ಇವರ ವಿದ್ಯಾರ್ಥಿಗಳು ಹಾಗೂ ಬಂಧು-ಮಿತ್ರರು ಆಚರಿಸಬೇಕೆಂದಾಗ, ಅವರಿಗೆ ಶಿಕ್ಷಕ ವೃತ್ತಿ ಮತ್ತು ಶಿಕ್ಷಣದ ಬಗ್ಗೆ ಅಪಾರ ಗೌರವವಿದ್ದ ಕಾರಣ `ಶಿಕ್ಷಕರ ದಿನಾಚರಣೆ' ಯಾಗಿ ಆಚರಿಸಲು ತಿಳಿಸಿದರಂತೆ. ಅಂದಿನಿಂದ ಇಂದಿನಿವರೆವಿಗೂ `ಶಿಕ್ಷಕರ ದಿನ'ವನ್ನಾಗಿ ಆಚರಿಸಲಾಗುತ್ತಿದೆ.

ಇಂತಹ ಸಮಯದಲ್ಲಿ ಹಾಗೂ ಪ್ರತಿದಿನವೂ ಗುರುವನ್ನು ನೆನಯಬೇಕಾದುದು ವಿದ್ಯಾರ್ಥಿಗಳ ಕರ್ತವ್ಯ.  ಶಿಕ್ಷಕ-ಕಿ ಇವರುಗಳಿಂದ ನಮಗೆ ಜಗದ ಅರಿವು, ಅಕ್ಷರಜ್ಞಾನ ಹೀಗೆ ಒಂದಿಲ್ಲೊಂದು ರೀತಿಯಲ್ಲಿ ನಮಗೆ ತಮ್ಮ ಜ್ಞಾನವನ್ನು ನೀಡುತ್ತಾ, ನಮ್ಮನ್ನು ತಿದ್ದಿತೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಶ್ರಮಿಸುವ ಶಿಕ್ಷಕವೃತ್ತಿಯಲ್ಲಿರುವ ಎಲ್ಲ ಶಿಕ್ಷಕ-ಶಿಕ್ಷಕಿಯರಿಗೆ ನಮ್ಮ ಗೌರವ, ನೆನಪಿನ ಕಾಣಿಕೆಗಳಿರಲಿ. ಅವರ ಹಾರೈಕೆಗಳು ನಮಗೆ ಶ್ರೀರಕ್ಷೆ...

ಕಳೆದವಾರ ನಮಗೆ ಪ್ರಾಥಮಿಕ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕಿಯನ್ನು ಭೇಟಿ ಮಾಡುವ ಅವಕಾಶದಿಂದ ವಂಚಿತನಾದೆ. ನಾನು ಬಸ್ಸಿನಿಂದ ಇಳಿದು ನಮ್ಮ ಮನೆ ಕಡೆಗೆ ಹೋಗುವ ಬೇರೆ ಬಸ್ಸಿಗೆ ಹತ್ತುವ ಸಂದರ್ಭದಲ್ಲಿ ಟೀಚರನ್ನು ನೋಡಿದೆ.  ಜನಜಂಗುಳಿಯಲ್ಲಿ ಅವರನ್ನು ಕಂಡು ಖುಷಿಯಾಯಿತು.  ಆಗ, ಅವರು ರಸ್ತೆ ದಾಟುತ್ತಿದ್ದರು. ಸರಿ, ನಾನಿದ್ದ ಕಡೆಗೆ ರಸ್ತೆ ದಾಟುತ್ತಿದ್ದರಿಂದ ನಾನೂ ಕಾದೆ. ಆದರೆ, ಅಷ್ಟರಲ್ಲಿಯೇ ನಾನು ಇಳಿದ ಬಸ್ಸಿಗೇ ಅವರು ಹತ್ತಿ, ಕ್ಷಣಮಾತ್ರದಲ್ಲಿ ಭೇಟಿಯ ಅವಕಾಶ ಕೈತಪ್ಪಿತ್ತು.

ಅವರನ್ನು ಭೇಟಿ ಮಾಡುತ್ತೇನೆ ಎಂಬ ನಂಬಿಕೆ ನನಗಿದೆ. ಇತ್ತೀಚೆಗೆ ಶಾಲೆಯ ಕಡೆಗೆ ಹೋಗಿಲ್ಲವಾದರೂ, ಕೆಲವೇ ಕೆಲವು ಶಿಕ್ಷಕಿಯರು ಇನ್ನೂ ಬೋಧನಾವೃತ್ತಿಯಲ್ಲಿದ್ದಾರೆಂದು ತಿಳಿಯಿತು.  ಇಲ್ಲಿ ಶಿಕ್ಷಕಿಯರು ಎಂದು ಏಕೆಂದರೆ, ನಮ್ಮ ಶಾಲೆಯಲ್ಲಿ ಶಿಕ್ಷಕರು ತುಂಬಾ ಕಡಿಮೆ ಇದ್ದರು. ಪಿಟಿ ಮೇಷ್ಟ್ರು, ಹೈಸ್ಕೂಲಿನಲ್ಲಿ ಮೂವರು ಶಿಕ್ಷಕರು ಮಾತ್ರ ಇದ್ದ ನೆನಪು...

ಇದೋ ಶಿಕ್ಷಕ ವೃಂದಕ್ಕೆ ನನ್ನ ನಮನಗಳು.


ಚಂದ್ರಶೇಖರ ಬಿ.ಎಚ್.


ಇದನ್ನೂ ಓದಿ: http://www.iloveindia.com/indian-heroes/sarvepalli-radhakrishnan.html

ಮಂಗಳವಾರ, ನವೆಂಬರ್ 29, 2011

ಇನ್ನೊಂದಿಷ್ಟು...

ಇನ್ನೊಂದಿಷ್ಟು ಹೂ ಮತ್ತು ಚಿಟ್ಟೆಗಳನ್ನು ಸೆರೆಹಿಡಿದಿರುವೆ. ಇವುಗಳನ್ನು ನಮ್ಮ ಕಚೇರಿ-ಮನೆ ಆವರಣದಲ್ಲಿ ಸೆರೆಹಿಡಿದಿರುವೆ. ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ...






ಸ್ನೇಹದಿಂದ,
ಚಂದ್ರಶೇಖರ ಬಿ.ಎಚ್.


ಶುಕ್ರವಾರ, ಸೆಪ್ಟೆಂಬರ್ 9, 2011

ಶಿಕ್ಷಕರ ಮತ್ತು ಸಹಪಾಠಿಗಳ ನೆನಪಿನಲ್ಲಿ...

Old messages are deleted when new messages come to inbox. Old friends are ignored when new one comes.  Never do this mistake because some messages can be created but not the same old friend.

ಈ ಮೇಲಿನ ಸಂದೇಶವನ್ನು ನನ್ನ ಸಹೋದ್ಯೋಗಿಯೊಬ್ಬರ ಮಗಳಿಂದ ಬಂದಿತ್ತು.  ಓದುತ್ತಾ ಹೋದಂತೆ, ಈ ಮೇಲಿನ ಮಾತಿನಲ್ಲಿ ಎಂತಹ ನಿಜ ಅಡಗಿದೆ ಎನಿಸಿತು.  ಎಷ್ಟೋ ಬಾರಿ ಶಾಲಾ ಸ್ನೇಹಿತರು, ಅಥವಾ ಅಕ್ಕಪಕ್ಕದ ಮನೆಯ ಮಿತ್ರರು (ಬಾಲ್ಯದ ಜೀವನದಲ್ಲಿ) ಇವರೆಲ್ಲರೊಂದಿಗೆ ಬೆರೆತು ಓದಿರುತ್ತೇವೆ, ಆಡಿರುತ್ತೇವೆ.  ಹಾಗೆಯೇ ಕಾಲ ಕಳೆಯುತ್ತಿದ್ದಂತೆ, ಶಾಲಾ ವಿದ್ಯಾಭ್ಯಾಸ ಮುಗಿದು, ಕಾಲೇಜು, ಅಲ್ಲಿ ಹೊಸ ಮಿತ್ರರು, ನಂತರ ಉದ್ಯೋಗ, ಉದ್ಯೋಗದಲ್ಲಿ ಸಹೋದ್ಯೋಗಿಗಳ ಸ್ನೇಹ, ಆನಂತರ ಅವರಿಂದಲೂ ದೂರವಾಗುತ್ತಾ (ಆಧುನಿಕ ತಂತ್ರಜ್ಞಾನದ ಫಲ) ಫೇಸ್‌ಬುಕ್, ಆರ್ಕುಟ್, ಯಾಹೂ!ಗ್ರೂಪ್‌, ಟ್ಟಿಟ್ಟರ್‌ ಹೀಗೆ ಹೊಸ ಹೊಸ ಸ್ನೇಹ ಸಂಬಂಧಗಳು ಬೆಳೆಯುತ್ತಾ ಹೋಗುತ್ತಿದೆ/ಹೋಗಿರುತ್ತದೆ.  ಎಲ್ಲೋ ಕೆಲವು ಮಂದಿಗೆ ಬಾಲ್ಯಮಿತ್ರರು ಮತ್ತೆ ಸಿಕ್ಕಿರುತ್ತಾರೆ ಅಥವಾ ಅವರೊಡನೆ ಇನ್ನೂ ಸಹ ಸ್ನೇಹಸಂಪರ್ಕ ಇಟ್ಟುಕೊಂಡಿರುತ್ತಾರೆ.  ಆದರೂ, ಎಲ್ಲೋ ಒಂದು ಕಡೆ ಅವರನ್ನೆಲ್ಲ ದೂರ ಮಾಡಿಕೊಂಡಿರುತ್ತೇವೆ (ಉದ್ಯೋಗ ವಲಸೆ, ಪರದೇಶವಾಸ ಅಥವಾ ಇನ್ನೂ ಅನೇಕ ಕಾರಣಗಳು).  ಆದರೂ, ಮೇಲಿನ ವಾಕ್ಯವನ್ನು ಮತ್ತೆ ಮತ್ತೆ ಓದಿದಾಗ... ಏನನಿಸಬಹುದು??? 

ನನಗಂತೂ ಹೌದು, ಕೆಲವು ಬಾಲ್ಯ ಸ್ನೇಹಿತರು ನೆನಪಿನಲ್ಲಿದ್ದಾರೆ, ಕೆಲವರ ಭೇಟಿ ಆಗುತ್ತಿರುತ್ತದೆ.  ಇನ್ನೂ ಕೆಲವರು ವಿದೇಶದಲ್ಲಿದ್ದಾರೆ.  ಆದರೆ ಸಂಪರ್ಕವಿಲ್ಲದಿದ್ದರೂ ಹೇಗೋ ಒಮ್ಮೆಯಾದರೂ ಭೇಟಿ ಮಾಡುವ ಅವಕಾಶ ಒದಗಿಬಂದಾಗ ಸಂತಸವಾಗುತ್ತದೆ....

ಮೊನ್ನೆ ಶಿಕ್ಷಕರ ದಿನಾಚರಣೆಗೆ ನಾನು ಓದಿದ್ದ ಶಾಲಾ ಶಿಕ್ಷಕರಲ್ಲಿ ಕೆಲವರನ್ನಾದರೂ ಭೇಟಿ ಮಾಡಬೇಕೆಂಬ ಆಶಯವಿತ್ತು.  ಆದರೆ, ಕಾರಣಾಂತರಗಳಿಂದ ಆಗಲಿಲ್ಲ. ಭಾನುವಾರವೇ ಹೋಗುವ ಇಚ್ಛೆಯಿದ್ದರೂ, ಊರಿನಲ್ಲಿರಿಲಿಲ್ಲವಾಗಿ ಭೇಟಿ ಮಾಡಲು ಆಗಲಿಲ್ಲ.  ಕಡೆಗೆ ದೂರವಾಣಿ ಮೂಲಕ ಪ್ರಯತ್ನಿಸಿದೆ.  ಒಬ್ಬರ ಫೋನ್‌ ನಂಬರ್‌ ಚಾಲ್ತಿಯಲ್ಲಿಲ್ಲ.  ಮತ್ತೊಬ್ಬರು ಉತ್ತರಿಸುತ್ತಿಲ್ಲ.  ಕೊನೆಗೂ ಸಂಜೆ ಶಾಲಾ ಶಿಕ್ಷಕಿ ಫೋನಿನಲ್ಲಿ ಸಿಕ್ಕಿದಾಗ.... ಅದೆಷ್ಟೋ ಖುಷಿಯಾಯಿತು.  ಅವರಿಗೆ ಶುಭಾಶಯ ಹೇಳಿ, ಆರೋಗ್ಯ-ಉದ್ಯೋಗ ವಿಚಾರ ವಿನಿಮಯ ಮಾಡಿಕೊಂಡಿದ್ದಾಯಿತು.  ಆಗ, ನಮ್ಮೊಡನಿದ್ದ ವಿದ್ಯಾರ್ಥಿಗಳ ಬಗ್ಗೆಯೂ ಕೇಳಿದರು. ನನಗೆ ತಿಳಿದವರ ವಿಷಯ ಹೇಳಿದೆ. ಅದೊಂದು ಅದ್ಭುತ ಕ್ಷಣವಾಗಿತ್ತು.  ಏಕೆಂದರೆ, ಸುಮಾರು ಒಂದು ವರ್ಷದಿಂದ ನಾನು ಓದಿದ್ದ ಶಾಲೆಗೆ ಭೇಟಿಕೊಡಲು ಆಗಿರಲಿಲ್ಲ.
ಈ ಮೇಲಿನ ವಾಕ್ಯವನ್ನು ಓದಿದಾಗ ಇವೆಲ್ಲ ನೆನಪಾಯಿತು....

ಶಿಕ್ಷಕರ ಮತ್ತು ಸಹಪಾಠಿಗಳ ನೆನಪಿನಲ್ಲಿ...

ಚಂದ್ರಶೇಖರ

+++++++++++++++++++++++++++++++++
++++++++++++++++++++++++++++++++++

ಬುಧವಾರ, ಆಗಸ್ಟ್ 10, 2011

ಚಿನ್ನದ ಕಾಸು... ನಾನು ಕೊಡೊಲ್ಲ!!

ಚಿನ್ನದ ಕಾಸು... ನಾನು ಕೊಡೊಲ್ಲ!!

ಮೊನ್ನೆ ಕತ್ತರಿಗುಪ್ಪೆ ಕಡೆಯಿಂದ ನಾಗರಬಾವಿ ಕಡೆಗೆ ಹೋಗುವ ಬಸ್ಸಿನಲ್ಲಿ ಬರುತ್ತಿದ್ದೆ.  ಸಂಜೆ ಮಳೆಯಲ್ಲಿ, ಟ್ರಾಫಿಕ್‌ ಜಾಮಿನಲ್ಲಿ ಬಸ್ಸು ರಿಂಗ್ ರೋಡಿನಲ್ಲಿ ಸಿಗ್ನಲಲ್ಲಿ ನಿಂತಿತು.  

ಒಬ್ಬ ಪ್ರಯಾಣಿಕ ಹತ್ತಿದ. ಆತನು ತಲುಪಬೇಕಿದ್ದ ಸ್ಥಳಕ್ಕೆ ಟಿಕೇಟು ಕೊಂಡನು. ಆದರೆ, ಅದರ ಬೆಲೆ ರೂ.೧೫.  ಈತನ ಬಳಿ ೧೦೦ ರ ಒಂದು ನೋಟು ಜೊತೆಗೆ ಒಂದಷ್ಟು ಚಿಲ್ಲರೆ ಇತ್ತು.  ನಿರ್ವಾಹಕ ರೂ. ೫ ಇದೆಯಲ್ಲ ಅದು ಕೊಡು ತೊಂಭತ್ತು ರೂಪಾಯಿ ಕೊಡುತ್ತೇನೆ ಅಂತ.  ಆದರೆ, ಈತ ಐದು ರೂಪಾಯಿನ ಕಾಯಿನ್‌ ಕೊಡಲೊಪ್ಪುತ್ತಿಲ್ಲ.  ಅದು ನನಗೆ ಬೇಕು. ಚೀಟಿಯಲ್ಲಿ ಬರೆದುಕೊಡು ಚಿಲ್ಲರೆ, ಇಳೀವಾಗ ತೊಗೋತೀನಿ ಅಂತ ಇವನ ಹಠ.  ನಿರ್ವಾಹಕ ಚಿಲ್ಲರೆ ಇದೆಯಲ್ಲ ಕೊಡು ಅಂತ ಒಂದೇ ಸಮನೆ ಕೇಳುತ್ತಿದ್ದಾನೆ.  

ಆದರೆ, ಪ್ರಯಾಣಿಕ ರೂ.೧೩ ಕೊಡುತ್ತೇನೆ. ಇಲ್ಲಾಂದರೆ, ನೂರು ರೂಪಾಯಿ ತೊಗೊಂಡು ಚೀಟಿಯಲ್ಲಿ ಉಳಿದ ಚಿಲ್ಲರೆ ಬರೆದುಕೊಡು ಅಂತ ಕೇಳುತ್ತಿದ್ದಾನೆ. ಇದರಿಂದ ನಿರ್ವಾಹಕನಿಗೆ ರೇಗಿತು. ಐದು ರೂಪಾಯಿ ಕೊಡು ಇಲ್ಲಾಂದರೆ ಬೇರೆ ಬಸ್ಸು ಹತ್ತು ಅಂತ.  ಆದರೆ, ಈ ಪ್ರಯಾಣಿಕ ಒಪ್ಪೊತ್ತಿಲ್ಲ.

ಏನಯ್ಯಾ ಮಾಡ್ತೀಯಾ ಆ ಕಾಯಿನ್‌ ಇಟ್ಕೊಂಡು ಅಂತ ನಿರ್ವಾಹಕ. ಅದಕ್ಕೆ.... ಆ ಪ್ರಯಾಣಿಕ ಹೇಳಿದ್ದು:
 
ಇದು ಗೋಲ್ಡ್ ಕಾಯಿನ್‌....
ನನಗೆ ಐದು ರೂಪಾಯಿನ ಈ ಕಾಯಿನ್‌ ಬೇಕು.
ಗೋಲ್ಡ್ ಕಾಯಿನ್ ಇದು. ನಾನು ಕೊಡೊಲ್ಲ.


ನನಗೆ ಇನ್ನೂ ಇಂತಹ ನೂರು ಕಾಯಿನ್‌ ಕೊಡು ತೊಗೊತೀನಿ. ಈ ಕಾಯಿನ್‌ ಕೇಳಬೇಡ. ನೂರು ರೂಪಾಯಿ ಕೊಟ್ಟಿದೀನಿ ಚಿಲ್ಲರೆ ನಿನ್ನತ್ರ ಇದೆ ಕೊಡು. ಇಲ್ಲಾ ಬರೆದುಕೊಂಡು, ಸುಮ್ನೆ ತಲೆ ತಿನ್ಬೇಡ ಎಂದಾಗ...

ನಿರ್ವಾಹಕ ಬಯ್ದುಕೊಳ್ಳುತ್ತಾ.. ನಿನ್ನಂತ ೫-೬ ಜನ ಇದ್ರೆ ನನ್ನ ಕೆಲಸ ಹೋಗುತ್ತೆ, ಅಷ್ಟೆ. ಟಿಕೇಟು ಕೊಡಕ್ಕೆ, ಚಿಲ್ರೆ ಕೊಡಕ್ಕೆ ಆಗಲ್ಲ.. ಎಂದು ಗೊಣಗುತ್ತಾ...ಮರುಮಾತಿಲ್ಲದೇ, ನಿರ್ವಾಹಕ ನೂರು ರೂಪಾಯಿ ತೊಗೊಂಡು ಚಿಲ್ಲರೆ ಕೊಟ್ಟನು.  

ಹೌದು. ಜನಕ್ಕೆ `ಚಿನ್ನ' ಎಂದರೆ ಅಂತಹ ಆಸೆ.  ಚಿನ್ನ/ಬಂಗಾರ ಕೊಳ್ಳಲಾಗದಿದ್ದರೂ ಈ ಐದು ರೂಪಾಯಿನ ಗೋಲ್ಡ್ ಕಲರ್‌ ಕಾಯಿನ್‌ನಲ್ಲೇ ಬಂಗಾರ ಕೊಂಡು ಅನುಭವ ಅವನಿಗಾಗುತ್ತಿರಬೇಕು.  ಅವನ ಹವ್ಯಾಸವೋ ಮತ್ತೊಂದೋ ಒಟ್ಟಿನಲ್ಲಿ ಈ ಘಟನೆ `ಚಿನ್ನ'ದ ರೂಪದ ಯಾವುದೇ ಆದರೂ ಮನುಷ್ಯನನ್ನು ತನ್ನ ಬಲೆಗೆ ಕೆಡವಿಕೊಳ್ಳುತ್ತೆ ಎನ್ನಬಹುದು.

ಏನಂತೀರಿ?

ಚಂದ್ರಶೇಖರ ಬಿ.ಎಚ್.
೧೦/೦೮/೨೦೧೧

ಸೋಮವಾರ, ಜುಲೈ 18, 2011

ದಟ್ ಇಸ್ ದಟ್...

ಬಹಳ ದಿನಗಳಿಂದ ಏನಾದರೂ ಬರೆಯಬೇಕೆಂದುಕೊಂಡರೂ ಬರೆಯಲು ಅದೇಕೋ ಆಗುತ್ತಿರಲಿಲ್ಲ.  ಹೀಗೆಯೇ ಏನಾದರೂ ಬರೆಯಬೇಕೆಂದು ಯೋಚಿಸುತ್ತಾ ಕುಳಿತಿದ್ದೆ ಗಣಕ ಯಂತ್ರದ ಮುಂದೆ.  ಕಚೇರಿಯಲ್ಲಿನ ಬೇರೆಲ್ಲ, ಅಂದರೆ ನನ್ನ ಪಾಲಿನ ಕೆಲಸ ಮುಗಿದಿತ್ತು. ಅತ್ತ ಕಡೆ ಸಭೆ ನಡೆಯುತ್ತಿತ್ತು. ಇಲ್ಲಿ ನಾನು ಖಾಲಿ ಕೂತಿದ್ದೆ. ಏನು ಮಾಡುವುದು? ಯೋಚನೆ. ಯೋಚನೆ??

ಹೀಗಿರುವಾಗ, ಬಿಡುವಿನ ವೇಳೆಯಲ್ಲಿ ಓದಲೆಂದು (ಜಸ್ಟ್ ಕಣ್ಣಾಡಿಸಲು) ಕೆಲವೊಂದು ವಿದ್ಯುನ್ಮಾನ ಪುಸ್ತಕಗಳನ್ನು ಅಂತರ್ಜಾಲದಿಂದ ಇಳಿಸಿಕೊಂಡಿದ್ದನ್ನು ನೋಡುತ್ತಿದ್ದಾಗ: ನಿರ್ಮಲಾ ಎಂಬುವವರು ಬರೆದ, ದಟ್ ಇಸ್ ದಟ್ * ಪುಸ್ತಕ ತೆರೆದೆ. ೧೦೬ ಪುಟದಲ್ಲಿ, ಸುಮ್ಮನೇ ನೂರನೇ ಪುಟಕ್ಕೆ ಕ್ಲಿಕ್ಕಿಸಿದೆ.

ಆಗ ಕಂಡಿದ್ದು:

I am that
You art that
And that is that.

ಆಗ ನೆನಪಾಗಿದ್ದು ರವಿಚಂದ್ರನ್‌ ರವರ ಒಂದು ಸಿನಿಮಾದ ಹಾಡು (ಸಿನೆಮಾ ನೆನಪಾಗುತ್ತಿಲ್ಲ). ಡಾ. ಎಸ್ಪಿ ಅವರು ಹಾಡಿದ ಹಂಸಲೇಖರ ಗೀತೆ. ರವಿಚಂದ್ರನ್ ಮತ್ತು ತಾಯ್‌ನಾಗೇಶ್ ನಟಿಸಿದ ಚಿತ್ರದ ಹಾಡು:

ನೀನು ನೀನೇ... ಇಲ್ಲಿ ನಾನು ನಾನೇ...
ನೀನು ನೀನೇ...
ಇಲ್ಲಿ ನಾನು ನಾನೇ...

ಇಲ್ಲಿ ಅಹಂ ಎಂಬುದಾಗಿ ತಿಳಿಯಬಹುದಾದರೂ, ಪ್ರತಿಯೊಬ್ಬರೂ ಅವರು ಅವರೇ ಆಗಿರುತ್ತಾರೆ.  ಒಬ್ಬನಂತೆ ಮತ್ತೊಬ್ಬನಿರುವುದಿಲ್ಲ ಅಥವಾ ಗುಣಸ್ವಭಾವವೂ ಬೇರೆಯದೇ ಆಗಿರುತ್ತದೆ.  ಇಂತಹ ಒಂದು ಸಂದರ್ಭದಲ್ಲಿಯೇ ನನಗೊಂದು ಎಸ್.ಎಂ.ಎಸ್. ನನ್ನ ಸ್ನೇಹಿತೆಯಿಂದ ಬಂದಿತ್ತು. ಅದೇನೆಂದರೆ,

People laugh, because I am different.
I laugh because they all are same!
That's called attitude.
Life is Yours, You live it
in Your Own Way


ಸದಾ ಕಾಲಕ್ಕೂ, ಸಕಲರಿಗೂ ಅನ್ವಯಿಸುತ್ತದೆಯಲ್ಲವೇ? ಯೋಚಿಸಿ ನೋಡಿ..

ಚಂದ್ರಶೇಖರ ಬಿ.ಎಚ್.

*That is That: Essays About True Nature BY NIRMALA Endless Satsang Press, www.endless-satsang.com 

ಶುಕ್ರವಾರ, ಮೇ 20, 2011

ನೊಣವಿನಕೆರೆ - ರಥೋತ್ಸವ - ಭಾಗ-೧

ಕಳೆದ ತಿಂಗಳು ನೊಣವಿನಕೆರೆ ಶ್ರೀ ಬೇಟೆರಾಯಸ್ವಾಮಿ ರಥೋತ್ಸವ ಇದ್ದಿತು. ಬಹಳ ವರ್ಷಗಳ ಹಿಂದೆ ರಥೋತ್ಸವಕ್ಕೆ ಹೋಗಿದ್ದು, ಇತ್ತೀಚೆಗೆ ಭೇಟಿಕೊಡಲು ಆಗಿರಲಿಲ್ಲ.

ಮುಂಜಾನೆ ಬೆಂಗಳೂರಿನಿಂದ ತುರುವೆಕೆರೆಗೆ ಬಸ್‌ ಹತ್ತಿದೆ. ಅಲ್ಲಿ ತಲುಪಿದಾಗ ೧೧.೦೦ ಘಂಟೆಯಾಗಿತ್ತು. ತುರುವೆಕೆರೆಯಲ್ಲಿ ದೇವಸ್ಥಾನಕ್ಕೆಂದು ಹೂವು, ಹಣ್ಣು ಕೊಂಡು, ತಿಪಟೂರು ಮಾರ್ಗವಾಗಿ ಹೋಗುವ ಬಸ್‌ ಹತ್ತಿದರೆ. ಆದರೆ, ಕಂಡಕ್ಟರ್‌ ಹೇಳಿದ್ದು ಹೀಗೆ: "ನಾವು, ನೀವು ಕೇಳಿದ ಊರಿಗೆ ಹೋಗಲು ಎರಡು ತಾಸು ಆಗುತ್ತೆ, ಜೊತೆಗೆ ದರವೂ ಜಾಸ್ತಿ". ಅದರ ಬದಲು, "ಹಳೇ ಬಸ್‌ ಸ್ಟಾಂಡಿನಲ್ಲಿ ಇಳೀರಿ, ಇಪ್ಪತ್ತು ನಿಮಿಷಕ್ಕೆ ಊರಿಗೆ ತಲುಪುತ್ತೀರಿ" ಎಂದು ಚಾಲಕನೂ ತಿಳಿಸಿದ. ನಾನೂ ಹಾಗೆಯೇ ಮಾಡಿದೆ.

ದೇವಾಲಯಕ್ಕೆ ತಲುಪಿದಾಗ ಅದಾಗಲೇ ಮಹಾಮಂಗಾಳರತಿಯಾಗಿ ಪ್ರಸಾದ ವಿತರಣೆಯಾಗುತ್ತಿತ್ತು. ನಾನೂ ದೇವಾಲಯದೊಳಗೆ ಹೋದೆ. ಪೂಜೆ ಮಾಡಿಸಿ ಹೊರಬಂದೆ.

ನಂತರ ದೇವರ ಉತ್ಸವಮೂರ್ತಿ ಪೂಜೆ ಶುರುವಾಯಿತು. ಜನವೋ ಜನ. ದೇವಳದ ಸುತ್ತ ಪ್ರಾಕಾರೋತ್ಸವವಿದ್ದುದರಿಂದ ಯಾರು ಬೇಕಾದರೂ ದೇವರ ಪಲ್ಲಕ್ಕಿಯನ್ನು ಹೊರುವ (ಅಂದರೆ ಹೆಗಲು ಕೊಡುವ) ಅವಕಾಶವಿತ್ತು. ಈ ಸದವಕಾಶ ಬಿಡಬಾರದೆಂದು ನಾನೂ ಗುಂಪಿನಲ್ಲಿ ಸೇರಿದೆ.

ಶ್ರೀ ಬೇಟೆರಾಯಸ್ವಾಮಿಯ ಮೂರ್ತಿಯನ್ನು ಪ್ರಾಕಾರದ ಸುತ್ತ ಒಂದು ಪ್ರದಕ್ಷಿಣೆ ಹಾಕಿ ನಂತರ ದೇವಾಲಯದ ಹೊರಗಿನ ಒಂದು ಕೊಠಡಿಯಲ್ಲಿ ಇಳಿಸಲಾಯಿತು. ಆನಂತರ, ಊರಿನ ಮುಖಂಡರಿಂದ ಪೂಜೆ, ಸರ್ಕಾರಿ ಅಧಿಕಾರಿಗಳಿಂದ, ಆರಕ್ಷಕರಿಂದ ಹೀಗೆ ಪೂಜೆ ನೆರವೇರಿಸಿ, ನಂತರ ರಥಕ್ಕೆ ದೇವರ ಮೂರ್ತಿಯನ್ನು ಕೂರಿಸಲಾಯಿತು. ಇದು ಬಹಳ ಕಷ್ಟದ ಕೆಲಸ. ಏಕೆಂದರೆ, ಅಷ್ಟೆತ್ತರದ ಅಟ್ಟಣಿಗೆಯನೇರಿ ರಥದಲ್ಲಿ ಕೂರಿಸುವುದೆ ಸಾಹಸ. ಅದೂ ನೆರವೇರಿತು. ಇಲ್ಲೆಲ್ಲ ನಾನೂ ಓಡಾಡಿದೆ. ಜೊತೆಗೆ ಒಂದಷ್ಟು ಫೋಟೋಗಳನ್ನೂ ಕ್ಯಾಮೆರಾದಲ್ಲಿ ಸೆರೆಹಿಡಿದೆ.

ಬಿಸಿಲ ಧಗೆ ವಿಪರೀತವಿತ್ತು. ರಥವನ್ನು ಎಳೆಯಲು ಒಂದು ತೊಡಕಿತ್ತು. ಅದೇನೆಂದರೆ, ರಥದ ಗಾಲಿಗಳು ಹಳೆಯದಾಗಿದ್ದರಿಂದ ಹಾಗೂ ಏನಾದರೂ ಅನಾಹುತವಾಗುವ ಆತಂಕವಿದ್ದುದರಿಂದ, ಸರ್ಕಾರೀ ಅಧಿಕಾರಿಗಳಿಂದ ಅನುಮತಿಯಿರಲಿಲ್ಲ. ಗ್ರಾಮಸ್ಥರು ತೇರು ಎಳೆಯಬೇಕೆಂದು, ಆದರೆ ಅಧಿಕಾರಿಗಳು ಬೇಡವೆಂದು. ಸುಮಾರು ಹೊತ್ತು ಇದರ ಬಗ್ಗೆ ಚರ್ಚೆಯಾಗಿ, ಆನಂತರ ಒಂದು ಒಪ್ಪಂದವಾಗಿ ತೇರನ್ನು ನಿಧಾನವಾಗಿ ಎಳೆಯಲು ಅನುಮತಿ ಸಿಕ್ಕಿತು. ನಿಧಾನವಾಗಿ ತೇರನ್ನು ದೇವಾಲಯದ ಮುಂಭಾಗಕ್ಕೆ ಎಳೆಯಲು ಜನರ ಹರ್ಷೋದ್ಗಾರದೊಂದಿಗೆ ತೇರು ದೇವಾಲಯದ ಮುಖ್ಯದ್ವಾರಕ್ಕೆ ಬಂದಿತು. ಆ ಕ್ಷಣವೇ ಮುಖ್ಯದ್ವಾರದಲ್ಲಿ ಪಾನಕ, ಕೋಸಂಬರಿ ಹಂಚಲು ಶುರುವಿಟ್ಟುಕೊಂಡರು. ನಾನು ಮತ್ತೊಂದು ಊರಿಗೆ ಹೋಗಬೇಕಿದ್ದರಿಂದ, ನಮ್ಮ ನೆಂಟರೂ ಅಲ್ಲಿ ಬಂದಿದ್ದರಿಂದ ಅವರೊಂದಿಗೆ ಊಟಕ್ಕೆ ಹೊರಟೆ. ವಾಹ್! ಅದ್ಬುತ ಪ್ರಸಾದ ಸಿಕ್ಕಿತು. ಪಾಯಸ, ಲಾಡುಕಾಳು, ಜಿಲೇಬಿ, ಪುಳಿಯೋಗರೆ, ಬಿಸಿಬೇಳೆಭಾತ್, ಮೊಸರನ್ನ, ಹೀಗೆ ಭರ್ಜರಿ ಊಟವಾಯಿತು. ಬಿಸಿಲ ಝಳಕ್ಕೆ ಬೆವರಿನಿಂದ ತೊಯ್ದದ್ದೇ ಆಯಿತು. ನಂತರ ಸ್ವಲ್ಪಹೊತ್ತು ಅಲ್ಲಿಯೇ ಇದ್ದು ಅರ್ಚಕರಿಗೂ, ಮನೆಯವರಿಗೂ ಧನ್ಯವಾದ ಹೇಳಿ ತಿಪಟೂರಿನ ಕಡೆಗೆ ಹೊರಟೆ.

ಇನ್ನೂ ಇದೆ...

ಮಂಗಳವಾರ, ಏಪ್ರಿಲ್ 19, 2011

ಹಣದಾಸೆಗಾಗಿ...

ಅಪರೂಪಕ್ಕೆಂದು ಈ ಒಂದು ಕಾರ್ಯಕ್ರಮದ ತುಣುಕು ನೋಡಿದೆ...

ಅದು....

ಪ್ಯಾಟೆ ಹುಡ್ಗೀರ್‌ ಹಳ್ಳಿ ಲೈಫು-೨. ಈ ಒಂದು ರಿಯಾಲಿಟಿ ಷೋನ ಸಾಕಷ್ಟು ಎಪಿಸೋಡುಗಳು ಪ್ರಸಾರವಾಗಿದೆ. ಹೀಗೆ ಮೊನ್ನೆ ಒಂದು ಚಲನಚಿತ್ರದ ನಡುವೆ ಈ ವಾರದ ಎಪಿಸೋಡಿನ ದೃಶ್ಯಾವಳಿ, ಅಲ್ಲಿನ ನಿಯಮಗಳನ್ನು ಜಾಹಿರಾತಿನಂತೆ ತೋರಿಸುತ್ತಿದ್ದರು. ಅದರಲ್ಲಿಯೂ ಯುವತಿಯರು ಕುಸ್ತಿ ಮಾಡುವುದು, ಸುತ್ತಲಿನ ಹಳ್ಳಿಯ ಜನ ಇವರ ಕುಸ್ತಿಯಾಟ ನೋಡುವುದು. ಸೋತವರಿಗೆ ಕೇಕೆ ಹಾಕಿ ನಗುವುದು ಇತ್ಯಾದಿ. ಕುಸ್ತಿಯಾಟದಲ್ಲಿ ಒಬ್ಬ ಯುವತಿಗೆ ಪೆಟ್ಟಾಗಿ ಆಸ್ಪತ್ರೆಯಲ್ಲಿ ಇದ್ದು ಬಂದಿದ್ದೂ ಆಯಿತಂತೆ.

ಮತ್ತೊಂದು ದೃಶ್ಯ ನೋಡಿದೆ. ಭಾರೀ ಎತ್ತೊಂದು ಸುತ್ತಲೂ ಬಂದು ಮಾಡಿದ ಬಯಲಿನಲ್ಲಿ ನಿಂತಿದೆ. ಅದನ್ನು ಇಬ್ಬರು ತರಬೇತುದಾರರು ಹಿಡಿದಿದ್ದಾರೆ. ಆ ಎತ್ತಿನ ಕೊರಳಿಗೆ ಮೂರು ನಿಮಿಷದಲ್ಲಿ ಗಂಟೆ ಕಟ್ಟಬೇಕಂತೆ. ಆ ಎತ್ತನ್ನು ನಾವು ತೆರೆಯ ಮೇಲೆ ನೋಡಿದರೇ ಭಯವೆನಿಸುವಷ್ಟಿದೆ. ಅಂತಹುದಕ್ಕೆ ಇದೊಂದು ಟಾಸ್ಕು. ಜೊತೆಗೆ ಈ ಕಾರ್ಯಕ್ರಮ ನಿರೂಪಕ ಹೇಳುತ್ತಾನೆ. ಧೈರ್ಯ ಇಲ್ಲದಿದ್ದರೆ ಈ ಕಾರ್ಯಕ್ರಮದಿಂದ ಔಟು. ನೋಡಿ ರೂ.೧೫.೦೦ ಲಕ್ಷ ಕಳೆದುಕೊಳ್ಳೊ ಹಾಗಿದ್ದರೆ ಟಾಸ್ಕ್ ಬಿಟ್ಟುಬಿಡಿ. ಇನ್ನೊಂದು ಮಾತು. ಈ ಎತ್ತು ರೇಗಿದರೆ ಅದನ್ನು ನಿಯಂತ್ರಿಸಲು ಕಷ್ಟ. ಜೀವಕ್ಕೇನಾದರೂ (ಈ ಟಾಸ್ಕಿನಲ್ಲಿ ಧೈರ್ಯಮಾಡಿ ಕಟಾಂಜನದೊಳಗೆ ಹೋದವರು) ಅಪಾಯವಾದರೆ `ನಾವು' ಜವಾಬ್ದಾರರಲ್ಲ.

ಇಂತಹ ಕಠಿಣ ನಿಯಮಗಳು. ಅದಕ್ಕಿಂತಲೂ ಯುವತಿಯರನ್ನು ಈ ರೀತಿ ಗೋಳು ಹುಯ್ದುಕೊಳ್ಳೋದು, ಕೇಕೆ ಹಾಕಿ ನಗುವುದು ಇವೆಲ್ಲ ಯಾಕೆ? ಜೊತೆಗೆ ಪ್ರಾಣಕ್ಕೆ ಆಗಲಿ ಅಥವಾ ದೈಹಿಕವಾಗಿ ಅವರಿಗೇನಾದರೂ ಅಪಾಯವೇ ಆದರೂ ಕಾರ್ಯಕ್ರಮವನ್ನು ನಡೆಸುತ್ತಿರುವವರ/ಪ್ರಾಯೋಜಕರು/ ಟಿವಿವಾಹಿನಿಯವರ ಜವಾಬ್ದಾರಿಯಿಲ್ಲ ಎಂದಮೇಲೆ ಹಣದಾಸೆಗಾಗಿ ಈತ ಹೇಳಿದ್ದನ್ನೆಲ್ಲಾ ಮಾಡಲು ಒಪ್ಪಿಕೊಳ್ಳುವ ಈ ಮಂದಿಗೂ ಬುದ್ಧಿ ಭ್ರಮಣೆಯೆ? ಅನ್ನಿಸಿತು. ನೀವ್ಯಾರಾದರೂ ಈ ಕಾರ್ಯಕ್ರಮ ನೋಡಿದ್ದರೆ.... ನಿಮಗೇನನ್ನಿಸಬಹುದು?
ಚಂದ್ರಶೇಖರ ಬಿ.ಎಚ್.

ಮಂಗಳವಾರ, ಮಾರ್ಚ್ 22, 2011

ವಾಟರ್‌ ಫಾರ್‍ ಸಿಟೀಸ್ - ವಿಶ್ವ ಜಲದಿನ - ಹಿತಮಿತ ಬಳಕೆ ಇರಲಿ

ಪಾಟಿನಲ್ಲಿ ನೀರು Photo by Chandrashekara BHಬಿಸಿಲ ಬೇಗೆ ನಿಧಾನವಾಗಿ ಆವರಿಸುತ್ತಿದೆ. ಜಪಾನಿನಲ್ಲಿ ಸಾಗರದ ಆರ್ಭಟದಿಂದಾಗಿ ಅಲ್ಲಿನ ನಿವಾಸಿಗಳಿಗೆ ಕುಡಿಯಲು ಕೇವಲ ೨೦೦ ಎಂ.ಎಲ್. ನೀರು ಕೊಡುತ್ತಿದ್ದಾರೆ ಎಂದು ವರದಿಯಾಗಿತ್ತು. ದೂರದರ್ಶನ ಮಾಧ್ಯಮದಲ್ಲಿಯೂ ತೋರಿಸುತ್ತಿದ್ದರು. ಕಳೆದ ತಿಂಗಳು ನೀರು ಸರಬರಾಜು ಸರಿಯಾಗಿ ಮಾಡುತ್ತಿಲ್ಲ. ನೀರಿನ ಪೂರೈಕೆಯ ಮನವಿಗಳಿಗೆ ಸ್ಪಂದಿಸುತ್ತಿಲ್ಲ ಎಂದು ನಾಗರಿಕರು ಜಲಮಂಡಳಿಗೆ ಮುತ್ತಿಗೆ ಹಾಕಿ ತರಾಟೆಗೆ ತೆಗೆದುಕೊಂಡಿದ್ದರು. ದಿನಪತ್ರಿಕೆಗಳಲ್ಲಿ ನೀರಿಗಾಗಿ ಜನರ ಪರದಾಟದ ವರದಿಗಳು, ಚಿತ್ರಗಳು ಬರುತ್ತಿವೆ.

ನಿನ್ನೆಯ ದಿನ ದೂರದರ್ಶನ ವಾಹಿನಿಯೊಂದರಲ್ಲಿ ಇನ್ನು ಮುಂದೆ ನೀರನ್ನೂ ಸಹ ಪೆಟ್ರೋಲ್‌ಬಂಕಿನಲ್ಲಿ ಪೆಟ್ರೊಲ್, ಡೀಸೆಲ್ ಖರೀದಿಸಿದಂತೆ ಖರೀದಿಸುವ ದಿನಗಳೂ ಹತ್ತಿರವಿಲ್ಲ ಎಂದು ಚರ್ಚೆ ನಡೆಯುತ್ತಿತ್ತು.
ಜಲ, ನೀರು, ಪಾನಿ, ವಾಟರ್‍ ಯಾವುದೇ ಹೆಸರಿನಿಂದ ಕರೆದರೂ ಇದು ಜಗತ್ತಿನ ಜೀವಿಗಳ ಜೀವನಾಡಿ. ಇದರ ಸದುಪಯೋಗ ಅಥವಾ ಅಲಭ್ಯ ಎಂತಹ ಪ್ರಬಲ ಹೊಡೆತ ಕೊಡುತ್ತದೆ ಎಂದು ಅರಿವಾಗುವುದು ನೀರಿಗಾಗಿ ಬವಣೆ ಪಟ್ಟಿದ್ದರೆ ಮಾತ್ರ ಅರ್ಥವಾಗುತ್ತದೆ. ನೀರಿಲ್ಲದೆ ಮರವಿಲ್ಲ ಗಿಡವಿಲ್ಲ, ಬೆಳೆಯಿಲ್ಲ ನೀರು ನೀರಲ್ಲದೆ ಬೇರಿಲ್ಲ ಒಟ್ಟಿನಲ್ಲಿ ಜಗದಲ್ಲಿ ಜೀವಿಗಳಿಲ್ಲ. ಸಕಲ ಜೀವಗಳ ನಾಡಿ ಮಿಡಿತ ಈ ಜಲರಾಶಿ. ಅದು ಕಲುಷಿತ ಅಥವಾ ಕೊರತೆಯುಂಟಾದರೆ ಆಗುವ ತೊಂದರೆಗಳು ಅನೇಕ. ಇಂದು ಹಳ್ಳಿ, ನಗರ, ಪಟ್ಟಣ, ರಾಜ್ಯ, ದೇಶ ಹೀಗೆ ನೀರಿಲ್ಲದೆ ಬದುಕಿಲ್ಲ. ಒಂದು ಲೀಟರ್‌ ನೀರಿಗೆ ರೂ.೧೫ರಿಂದ ೨೦ರ ವರೆಗೂ ಬೆಲೆಯಿಟ್ಟು ಮಾರುತ್ತಾರೆ.

ಮಾರ್ಚ್ ೨೨. ಇಂದು ವಿಶ್ವ ಜಲದಿನ ಎಂಬುದಾಗಿ ಆಚರಿಸುತ್ತಾರೆ. ಈ ವರ್ಷದ ಘೋಷಣೆ " ವಾಟರ್‌ ಫಾರ್‍ ಸಿಟೀಸ್'. ಇದು ಸೂಕ್ತವಾದ ಘೋಷಣೆಯೇ ಆಗಿದೆ ಎನ್ನಬಹುದು. ಹಳ್ಳಿ, ಹೊಲಗದ್ದೆ, ಮನೆ ಮಾರು ಎಲ್ಲ ಬಿಟ್ಟು ಇಂದು ಜನಜೀವನ ಪಟ್ಟಣಗಳಿಗೆ ವಲಸೆಯಾಗುತ್ತಿರುವುದು, ನೀರಿನ ಹಾಹಾಕಾರವಿರುವುದು ಇವೆಲ್ಲ ಸೇರಿಯೇ ಹೀಗೆ ಘೋಷಣೆ ಮಾಡಿರಬಹುದು (ಇದು ನನ್ನ ಅನಿಸಿಕೆಯಷ್ಟೆ).
ವಿಶ್ವ ಜಲ ದಿನದಂದಾದರೂ ಕಡಿಮೆ ನೀರಿನ ಬಳಕೆ ಮಾಡುತ್ತ ಈ ಬೇಸಿಗೆಯನ್ನು ನೀರಿನ ಬವಣೆಯಿಂದ ತೊಂದರೆಗೊಳಗಾಗದಂತೆ ಎಲ್ಲರಿಗೂ ನೀರು ಸಿಗಲೆಂದು ಜಲರಾಶಿಯನ್ನು ಕೇಳಿಕೊಳ್ಳುತ್ತ ಎಲ್ಲರಲ್ಲೂ ಜಾಗೃತಿ ಮೂಡಿಬರಲಿ.

ಹೆಚ್ಚಿನ ಮಾಹಿತಿಗಾಗಿ ಈ ಅಂತರ್ಜಾಲಗಳನ್ನು ನೋಡಬಹುದು:

http://www.uneca.org/awich/Announcements%202010/WWD%202011%20First%20AnnouncementREV.pdf
http://www.worldwaterday2011.org/
http://www.indiawaterportal.org/
http://expressbuzz.com/cities/bangalore/quenching-bangalore%E2%80%99s-thirst-is-a-big-challenge/258686.html


ಚಂದ್ರಶೇಖರ ಬಿ.ಎಚ್.
೨೨-೦೩-೨೦೧೧

ಕಳೆದ ವರ್ಷದ ಲೇಖನ ಇಲ್ಲಿದೆ: http://kshanachintane.blogspot.com/2010/03/blog-post_22.html

ಮಂಗಳವಾರ, ಜನವರಿ 11, 2011

ಪದ ಕಟ್ಟಿ ಆಡುವ ಆಟ

ಪದ ಕಟ್ಟಿ ಆಡುವ ಆಟ

ಪದಕಟ್ಟುವ ಆಟ, ಇದನ್ನು ಆಂಗ್ಲದಲ್ಲಿ ವರ್ಡ್ ಬಿಲ್ಡಿಂಗ್ ಎಂದು ಕರೆಯುತ್ತಾರೆ. ಒಂದು ಮೂರು-ನಾಲ್ಕು ಅಕ್ಷರಗಳನ್ನು ಬರೆದು ಅವುಗಳ ನಡುವೆ ಜಾಗ ಬಿಡುವುದು. ಆ ಅಕ್ಷರಗಳ ನಡುವೆ, ಹಿಂದೆ, ಮುಂದೆ ಒಂದು ಅಥವಾ ಹಲವು ಪದಗಳ ರಚನೆಯನ್ನು ಮಾಡಲು ಪ್ರಯತ್ನಿಸುವ ಆಟವನ್ನು ಪದಕಟ್ಟುವ ಆಟವೆನ್ನಬಹುದು. ಇದರಿಂದ ಹೊಸ ಪದಗಳ ಪರಿಚಯ, ಅವುಗಳ ಕಾಗುಣಿತ ಇತ್ಯಾದಿಗಳ ಅರಿವು ಉಂಟಾಗುವುದರಲ್ಲಿ ಸಂದೇಹವೇ ಇಲ್ಲ. ಉದಾ: ಆಂಗ್ಲದಲ್ಲಿ ಕೊಡುವುದಾದರೆ, A ಮತ್ತು T . ಈ ಅಕ್ಷರಗಳ ನಡುವೆ ಮತ್ತು ಹಿಂದೆ-ಮುಂದೆ ಬೇರೆ ಸ್ವರ ಅಥವಾ ವ್ಯಂಜನಾಕ್ಷರ ಬರೆದು ಪದಗಳನ್ನು ರಚಿಸಬಹುದು. A ಮತ್ತು T ಮಧ್ಯೆ N ಬರೆದಾಗ ANT ಆಗುತ್ತದೆ. ಇದೇ ರೀತಿ A(r)T, M(a)RT, SH(i)RT, ಹೀಗೆ ಬೇರೆ ಬೇರೆ ಪದಗಳ ರಚನೆ ಮಾಡಿ ಆಟ ಆಡಬಹುದು.

ಕನ್ನಡದಲ್ಲಿ ಪದ ಕಟ್ಟುವ ಆಟವನ್ನು ಸಹ ಇದೇ ವಿಧಾನದಲ್ಲಿ ಆಡಬಹುದು. ಈಗ ಒಂದೆರಡು
ಅಕ್ಷರಗಳನ್ನು ಬರೆಯೋಣ.

ಕ ಮತ್ತು ಲ. ಇವುಗಳ ನಡುವೆ, ಹಿಂದೆ, ಮುಂದೆ ಸ್ವರ, ವ್ಯಂಜನಗಳನ್ನು ಸೇರಿಸಿ ಪದ ರಚನೆ ಮಾಡುವುದಾದರೆ, ಪದಗಳು ಕೆಳಗೆ ಅಚ್ಚಿಸಿದಂತೆ ಇರಬಹುದೆ?

ಕಲಾ, ಕಲಸು, ಕೆಲಸ, ಕಲಿತ, ಕಲಿಸು, ಕಲೆ, ಕುಲ ಇತ್ಯಾದಿ.

ಕನ್ನಡದಲ್ಲಿ ಕೆಲವೊಮ್ಮೆ ಒಂದು ಸ್ವರ/ವ್ಯಂಜನಕ್ಕಿಂತ ದೀರ್ಘ ಸ್ವರಗಳನ್ನು ಉಪಯೋಗಿಸಿದಾಗ ಕೆಲವೊಂದು ಪದಗಳನ್ನು ರಚಿಸಬಹುದು.

ಈ ಪದ ಕಟ್ಟುವ ಆಟದಿಂದ ಪದಗಳ ಪರಿಚಯದೊಂದಿಗೆ, ಒಂದು ಪದಕ್ಕೆ ಇರುವ ಬೇರೆ ಬೇರೆ ಅರ್ಥಗಳಲ್ಲದೆ, ಮೆದುಳಿಗೆ ಕಸರತ್ತು ಕೊಡುವಂತಹದೇ ಆಗಿದೆ. ಅಲ್ಲದೆ, ಕಾಗುಣಿತ, ವ್ಯಾಕರಣದಲ್ಲಿ ಬರುವ ಸಂಧಿಗಳು, ಇವುಗಳೊಂದಿಗೆ ಪದಗಳ ಉಪಯೋಗದ ಅನುಭವವನ್ನೂ ಕೊಡುವಂತಹುದಾಗಿದೆ.

ಇದಕ್ಕಿಂತ ಸ್ವಲ್ಪ ಬೇರೆ ವಿಧಾನದಲ್ಲಿ ಪದಬಂಧ ಇರುತ್ತದೆ. ಅಲ್ಲಿ ಅಕ್ಷರಗಳ ಸಂಖ್ಯೆ, ಜೊತೆಗೆ ಪದ ಹೊಂದಿಸುವುದಕ್ಕಾಗಿ ಸುಳಿವು ಕೂಡ ಇರುತ್ತದೆ. ಆದರೆ ಪದ ಕಟ್ಟುವ ಆಟದಲ್ಲಿ ಅಕ್ಷರಗಳೆ ಸುಳಿವಾಗಿ ಮಾರ್ಪಡುತ್ತವೆ.

ನಿಮಗೆ ಪದ ಕಟ್ಟುವ ಆಟ ಇಷ್ಟವಾಯಿತೆ?
ನಿಮ್ಮ ಅಭಿಪ್ರಾಯಗಳನ್ನು ಪದಗಳೊಡನೆ ಬೆರೆಸಿ
ವಿ-ಅಂಚೆಯ ಮೂಲಕ ಕದ ತಟ್ಟಿ ಕಳುಹಿಸುವಿರಲ್ಲಾ!.

ಚಂದ್ರಶೇಖರ ಬಿ.ಎಚ್.
೦೧.೦೧.೧೧


ಗುರುವಾರ, ಡಿಸೆಂಬರ್ 2, 2010

ತಪ್ಪೇ ಮಾಡದವರ್‍ಯಾರವ್ರೆ... ತಪ್ಪೇ ಮಾಡದವರ್‍ ಎಲ್ಲವ್ರೆ???

ತಪ್ಪೇ ಮಾಡದವರ್‍ಯಾರವ್ರೆ... ತಪ್ಪೇ ಮಾಡದವರ್‍ ಎಲ್ಲವ್ರೆ???

ಕೃಷಿ ಭೂಮಿಯಲ್ಲಿ ಅಥವಾ ಹೂದೋಟಗಳಲ್ಲಿ ಬೆಳೆಯ ಜೊತೆಗೆ ಕಳೆಗಳೂ ಬೆಳೆಯುತ್ತವೆ. ಇವುಗಳು ಯಾವುದೇ ಕೃಷಿ ಅಥವಾ ಪೋಷಣೆಯಿಲ್ಲದೆ ಬೆಳೆದುಬಿಡುತ್ತವೆ. ಈ ಕಳೆಗಳನ್ನು ಬೆಳೆಯುವ ಹಂತದಲ್ಲಿಯೇ ಹಾಗೂ ಆಗಾಗ ಕಿತ್ತು ಹಾಕದಿದ್ದರೆ, ಕೈಗೆ ಬರಬಹುದಾದ ಬೆಳೆಗಳನ್ನೆಲ್ಲಾ ನಾಶಮಾಡುವಷ್ಟು ಹುಲುಸಾಗಿ ಆವರಿಸಿಬಿಡುತ್ತವೆ. ಬೆಳೆ ಯಾವುದು? ಕಳೆ ಯಾವುದು? ಎಂದು ತಿಳಿಯುವುದೂ ಕಷ್ಟವಾಗಿ ಕಾಲಿಗೆ ತೊಡರುವಂತೆ ಮಾಡುತ್ತವೆ.

ಮಾನವನ ಅಭ್ಯಾಸಗಳೂ ಹಾಗೂ ದುರಭ್ಯಾಸಗಳು ಸಹ ಹಾಗೆಯೇ. ಅಭ್ಯಾಸಗಳು ನಿಧಾನವಾಗಿ ಒಗ್ಗೂಡುತ್ತಾ ಮಾನವನಲ್ಲಿ ನೆಲೆ ಕಂಡುಕೊಳ್ಳುತ್ತವೆ. ಇದರ ಜೊತೆಗೆ ಸಹವಾಸ ದೋಷವೂ ಸೇರಿದರೆ ಉತ್ತಮ ಅಥವಾ ಅನುಚಿತ ಅಭ್ಯಾಸಗಳೂ ಜೊತೆಗೂಡುತ್ತವೆ. ಕಳೆಗಳೆಂಬ ದುರಭ್ಯಾಸಗಳನ್ನು ಹೊಡೆದೋಡಿಸುವುದಕ್ಕೆಂದೇ ನಮ್ಮ ಮನಸ್ಸನ್ನು ಆಗಾಗ ಪರಿಶೀಲಿಸುತ್ತಿರಬೇಕು. ಜೊತೆಗೆ ಅಂತಹ ಸಂದರ್ಭಗಳನ್ನು ಎದುರಿಸುವ ಶಕ್ಯತೆಯನ್ನೂ ಸಂಪಾದಿಸಬೇಕು. ಕೆಲವೊಮ್ಮೆ ಸ್ನೇಹಿತರ ಬಲವಂತಕ್ಕೋ, ಸಮಾಜದಲ್ಲಿ ಗೌರವ (??) ಸಂಪಾದಿಸುವುದಕ್ಕಾಗಿಯೋ ಒಂದು ಪೆಗ್ ಕುಡಿದರೂ ಅದು ಚಟದಂತೆ ಇವರನ್ನೇ ಹಿಂಬಾಲಿಸುವ ಹಂತಗಳು ಸಾಕಷ್ಟು. ಅಂತಹ ಸಂದರ್ಭವನ್ನು ಆದಷ್ಟೂ ನಿಭಾಯಿಸಿಕೊಂಡು, ದುಶ್ಚಟಗಳನ್ನು ದೂರೀಕರಿಸಬಹುದು. ಇದಕ್ಕೆ ಮನಸ್ಸಿನ ಮೇಲಿನ ಹಿಡಿತ ಬೇಕಿರುತ್ತದೆ.

ಕಾಫೀ ಅಥವಾ ಟೀ ಅಥವಾ ಗುಟ್ಕಾ ಅಥವಾ ಹೊಗೆಸೊಪ್ಪು ಅಥವಾ ಧೂಮಪಾನ ಅಥವಾ ... ಇತ್ಯಾದಿ ಹವ್ಯಾಸಗಳು, ದುರಭ್ಯಾಸಗಳಾಗಿ ಹೋದರೆ ಅವುಗಳನ್ನು ನಿಯಂತ್ರಣಕ್ಕೆ ತಂದು, ಆರೋಗ್ಯವನ್ನು ಮತ್ತೆ ಕಾಪಾಡಿಕೊಳ್ಳುವ ಹಂತಕ್ಕೆ ತರಲು ಹಲವಾರು ಮಾರ್ಗಗಳು, ಚಿಕಿತ್ಸೆಗಳಿರಬಹುದು. ಆದರೆ, ಸ್ವನಿಯಂತ್ರಣದಿಂದ ಮಿತವಾಗಿ, ಹಿತವಾಗಿ ಅಭ್ಯಾಸವಿದ್ದರೆ, ಯಾವುದೇ ಹಾನಿಯಿಲ್ಲ ಎನ್ನಬಹುದು. ಇದರಿಂದ ತನಗಷ್ಟೇ ಅಲ್ಲದೇ ತನ್ನ ನಂಬಿದವರನ್ನೂ ಸಂತೋಷಪಡಿಸಬಹುದು.

ತಪ್ಪನ್ನು ತಿದ್ದಿಕೊಳ್ಳುವ ಮನಸ್ಸುಳ್ಳವರಿಗೆ ಇವೆಲ್ಲ ಹೇಳಬೇಕಿಲ್ಲವಾದರೂ ಕೆಲವೊಮ್ಮೆ... ತಪ್ಪೇ ಮಾಡದವರ್‍ಯಾರವ್ರೆ?? ಅಂತ ಮತ್ತೆ ಮತ್ತೆ ದು-ಅಭ್ಯಾಸಗಳಿಗೆ ಮನಸ್ಸು ಹೋಗುತ್ತಿರುತ್ತದೆ.

ಯಾರಿಂದಲೇ ಆಗಲೀ ಒಳ್ಳೆಯ ಅಭ್ಯಾಸಗಳು ಅಥವಾ ದುರಭ್ಯಾಸಗಳು ಬರಬಹುದು. ಅದನ್ನು ನಾವು ನಮ್ಮಲ್ಲಿ ಅಳವಡಿಸಿಕೊಳ್ಳುವಲ್ಲಿ ನಾವೇ ಮುಖ್ಯವಾಗಿರುತ್ತೇವೆ ಎಂಬುದನ್ನು ಮರೆಯದಿದ್ದರೆ.... ತಪ್ಪು ಮಾಡದವರ್‍ಯಾರವ್ರೆ ?? ಎಂದು ಹಾಡಬೇಕಿಲ್ಲ ಅಥವಾ ನಮ್ಮನ್ನು ಸಮಾಧಾನಗೊಳಿಸಿಕೊಳ್ಳಬೇಕಿಲ್ಲ, ಅಲ್ಲವೇ?

HUMAN FAULTS ARE LIKE GARDEN WEEDS. THEY GROW WITHOUT CULTIVATION AND SOON TAKE OVER THE PLACE IF THEY AREN'T THINNED OUT.

ಮಂಗಳವಾರ, ನವೆಂಬರ್ 16, 2010

ಮೂರನೇ ವರ್ಷಕ್ಕೆ ಅಡಿಯಿಡುವಲ್ಲಿ...

ಕ್ಷಣ ಚಿಂತನೆ... ಚಿಂತನಾ ಲಹರಿ...

ಸದಾ ಹರಿಯುತ್ತಿರುವ ನದಿಯಂತೆ ಚಿಂತನೆಯೂ ಸಹ ಎಂಬ ಆಶಯದೊಂದಿಗೆ ಶುರು ಮಾಡಿದೆ. ಈ ನನ್ನ (ಗೂಗಲ್‌ ನವರ) ಬ್ಲಾಗಿನಲ್ಲಿ ಇಲ್ಲಿಯವರೆವಿಗೂ ಮಹಾನ್‌ ವ್ಯಕ್ತಿಗಳ ನುಡಿಗಟ್ಟುಗಳನ್ನು ಬಳಸಿಕೊಂಡು ಬರೆದ ಬರಹಗಳು, ವಿವಿಧ ವಿಷಯಗಳು, ಪ್ರವಾಸೀ ಕಥನ, ಸ್ವಗತ ಬರಹಗಳು, ಹಾಗೂ ಛಾಯಾಚಿತ್ರಗಳನ್ನು ಪ್ರಕಟಿಸುತ್ತಾ ಬಂದಿದ್ದೇನೆ. ಈ ಬರಹಗಳಿಗೆ, ಚಿತ್ರಗಳಿಗೆ ಹಲವಾರು ಬ್ಲಾಗಿಗರು ತಮ್ಮ ತಮ್ಮ ಸಲಹೆ, ಪ್ರೋತ್ಸಾಹಗಳನ್ನು ನೀಡುತ್ತಾ ಬಂದಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು.

ಬರಹಗಳಿಗೆ ವಿಷಯಗಳ ಬರವಿರದಿದ್ದರೂ ಕೆಲವೊಮ್ಮೆ ಏನು ಬರೆಯಬೇಕು? ಯಾಕೆ ಬರೆಯಬೇಕು ಎಂಬುದು ಹೊಳೆಯದೇ ಮಿತ್ರರೊಂದಿಗೆ ಚರ್ಚಿಸಿದ್ದಿದೆ. ಆಗೆಲ್ಲ ಅವರ ಅಭಿಪ್ರಾಯ ಅಥವಾ ಸಲಹೆಗಳಿಂದ ಒಂದಷ್ಟು ಬರವಣಿಗೆ ಸಾಗುತ್ತಾ ಬಂದಿದೆ. ಅವರೆಲ್ಲರ ಪ್ರೋತ್ಸಾಹದಿಂದ ಇ‌ಲ್ಲಿಯವರೆವಿಗೂ ಅಂದರೆ
ಎರಡು ವರ್ಷ ಮುಗಿಸುತ್ತಾ ಮೂರನೇ ವರ್ಷಕ್ಕೆ ಬರಹದ ಕಾಲ್ನಡಿಗೆಯನ್ನು ಶುರು ಮಾಡುತ್ತಿದ್ದೇನೆ.

ಬ್ಲಾಗಿನಿಂದಾಗಿ ಹಲವಾರು ಮಿತ್ರರು ಸಿಕ್ಕಿದ್ದಾರೆ. ಅವರೆಲ್ಲರ ಒಡನಾಟವೂ, ಆತ್ಮೀಯತೆಯೂ ಸಿಕ್ಕಿದೆ ಹಾಗೂ ವ್ಯಕ್ತಿತ್ವ ನಿರ್ಮಾಣಕ್ಕೂ ಸಹಕಾರಿಯಾಗಿದೆ.

ಮೂಲತ: ಗೂಗಲ್‌ ಕಂಪನಿಯವರಿಗೆ ವಂದನೆಗಳನ್ನು ತಿಳಿಸುತ್ತೇನೆ. ಏಕೆಂದರೆ, ಅವರ ಈ ಸೋಷಿಯಲ್ ನೆಟ್ವರ್ಕ್‌ನಿಂದಾಗಿ ಬ್ಲಾಗ್ ಉಚಿತವಾಗಿ ದೊರಕಿದ್ದು ಅದರ ಸದುಪಯೋಗ ಪಡೆಯುತ್ತಿದ್ದೇನೆ.

ನನ್ನ ಬ್ಲಾಗಿನಲ್ಲಿ ಬರಹ ಯೂನಿಕೋಡ್‌ ಉಪಯೋಗಿಸುವುದರಿಂದ ಅನೇಕರಿಗೆ ಓದಲು ಅನುಕೂಲವಾಗಿದೆ ಎಂಬುದು ನನ್ನ ಅನಿಸಿಕೆ. ಬರಹ ತಂತ್ರಾಂಶ ತಯಾರಿಕರಿಗೂ ಧನ್ಯವಾದಗಳು.

ಇದರೊಂದಿಗೆ ನಿಮ್ಮೆಲ್ಲರ ಕ್ಷಣ ಪ್ರತಿಕ್ರಿಯೆಯೇ ಮೂರನೇ ವರ್ಷಕ್ಕೆ ಬ್ಲಾಗನ್ನು ವಿಸ್ತರಿಸುವ ಹುಮ್ಮಸ್ಸು ಕೊಟ್ಟಿದೆ ಹಾಗೂ ಕೊಡುತ್ತದೆ ಎಂಬ ಆಶಯದಿಂದ, ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಗಳು ಹಾಗು ಧನ್ಯವಾದಗಳನ್ನು ತಿಳಿಸುತ್ತೇನೆ.

ಇಂತಿ,

ಚಂದ್ರಶೇಖರ ಬಿ.ಎಚ್.

ಶುಕ್ರವಾರ, ನವೆಂಬರ್ 12, 2010

ಮುಸುಕಿದೀ ಮಬ್ಬಿನಲಿ - ಆದರೆ..

Photo: ಚಂದ್ರಶೇಖರ ಬಿಎಚ್ Chandrashekara BH
Behind every cloud is another cloud. - Judy Garland

ಈ ಮಾತನ್ನು ಪ್ರತಿಯೊಬ್ಬ ವ್ಯಕ್ತಿಗೂ ಹಾಗೆಯೇ ಪ್ರತಿಯೊಂದು ಕಷ್ಟನಷ್ಟ-ಸುಖ ಸಂತೋಷಗಳಿಗೂ ಅನ್ವಯಿಸಿಕೊಳ್ಳಬಹುದಲ್ಲವೇ?

ಹಾಗೆಯೇ ಪ್ರತಿಯೊಂದು ಸುಂದರ ಕ್ಷಣಗಳನ್ನೂ ಈ ರೀತಿ ತಿಳಿಯಬಹುದಲ್ಲವೆ? Happiness is like a cloud, if you stare at it long enough, it evaporates. - Sarah McLachlan

ಪತ್ರಿಕೋದ್ಯಮ ವಿಷಯಕ್ಕೆ ಬಂದರೆ ಹೀಗೂ ಅಂದುಕೊಳ್ಳಬಹುದು: In journalistic terms, syndication is equivalent to ascending to heaven on a pillar of cloud. - John Skow

ಮೋಡದ ಮುಸುಕು ಇದೀಗ ಹೊರಗೆ ಕವಿದಿದೆ ನಿನ್ನೆ ಮೊನ್ನೆಯಿಂದ, ಅದರ ಹಿಂದೆಯೇ ಆಶಾಭಾವನೆಗಳ ಹೊಂಗಿರಣಗಳನ್ನು ಕಾಣಬೇಕಾದರೆ ಹೀಗಿರಬೇಕಲ್ಲವೆ? Climb up on some hill at sunrise. Everybody needs perspective once in a while, and you'll find it there. ~Robb Sagendorph


ಕೃಪೆ: ಆಕರಗಳಿಂದ ಆರಿಸಿದ್ದು.

ಮಂಗಳವಾರ, ನವೆಂಬರ್ 9, 2010

ಸ್ಫೂರ್ತಿಯ ಚಿಲುಮೆ: ಶಂಕರ ನಾಗರಕಟ್ಟೆ... ಇಂದು ನಿಮ್ಮ ಜನ್ಮದಿನ


೪ನೇ ತಾರೀಖು ಬ್ಲಾಗ್‌ ಮಿತ್ರರೊಬ್ಬರು ನನಗೆ ನಾಳೆ ದಿನ ಜಯನಗರದ ಟೋಟಲ್‌ಕನ್ನಡ ದಲ್ಲಿ ಪುಸ್ತಕ ಬಿಡುಗಡೆ ಇದೆ ಬನ್ನಿ ಎಂದು ಕರೆದರು. ಆದರೆ, ವೈಯಕ್ತಿಕ ಕಾರಣಗಳಿಂದ ಅಲ್ಲಿಗೆ ಹೋಗಲು ಆಗಲಿಲ್ಲ. ಅದು ಕನ್ನಡದ ಸಹಜ ನಟ ಅನಂತನಾಗ್‌ರವರು ಬರೆದ ತಮ್ಮ `ತಮ್ಮನ' ಪುಸ್ತಕ ಬಿಡುಗಡೆ ಕಾರ್ಯಕ್ರಮವಾಗಿತ್ತು. ನನ್ನ ತಮ್ಮ ಶಂಕರ ಪುಸ್ತಕರ ಹೆಸರು.

ಇಂದು ಬೆಳಗ್ಗೆ ಅದೇ ಮಿತ್ರರಿಂದ ಈವತ್ತು ಶಂಕರ್‌ನಾಗ್‌ ಜನ್ಮದಿನ ಎಂದು ತಿಳಿಸಿದರು. ಏನಾದರೂ ಬರೆಯಿರಿ ಅವರ ಬಗ್ಗೆ ಎಂದೂ ಹೇಳಿದರು. ಏನೆಂದು ಬರೆಯುವುದು ಆತನ ಬಗ್ಗೆ.

ಅವರ ಬಗ್ಗೆ ಹೇಳಬಹುದಾದರೆ, ನಟ, ನಿರ್ದೇಶಕ, ರಂಗಕರ್ಮಿ ಶಂಕರ್‌ನಾಗ್‌ ಒಂದು ಚಿಲುಮೆಯ ಸ್ಫೂರ್ತಿ, ಚಟುವಟಿಕೆಯ ಆಗರ, ಅಗಾಧ ಕನಸುಗಾರ, ಅಸಾಧ್ಯವೆಂಬ ಮಾತಿಗೆ ದೂರ, ಛಲಗಾರ, ಅಷ್ಟೇ ಅಲ್ಲದೇ ಸಂಕೇತ್‌ ಎಂಬ ಸ್ಟುಡಿಯೋ ಹುಟ್ಟಿಗೆ ಕಾರಣಕರ್ತ. ಒಂದಷ್ಟು ರಾಜಕೀಯ ಕಾರ್ಯದಲ್ಲೂ ಸಕ್ರಿಯನಾಗಿದ್ದವರು. ಹಾಗೆಯೇ, ಆಟೋರಿಕ್ಷಾದವರ ಕಣ್ಮಣಿ, ಆಟೋರಿಕ್ಷಾಗಳ ಮೇಲೆ ಆತನ ಚಿತ್ರವಿಲ್ಲದ ಆಟೋ ಊಹಿಸಿಕೊಳ್ಳುವುದೂ ಕಷ್ಟ. ಶಂಕರ್‌ನಾಗರ ಬಗ್ಗೆ ಒಂದೆರಡು ಸಾಲು ಬರೆಯಲೂ ಸಾಧ್ಯವಾಗದಷ್ಟು ಅಗಾಧ ರೂಪಿ ಎನ್ನಬಹುದು.

ಅತಿ ಚಿಕ್ಕ ವಯಸ್ಸಿನಲ್ಲಿಯೇ ಮಹತ್‌ಸಾಧನೆಗಳನ್ನು ಮಾಡಿದ ಹಾಗೂ ಇನ್ನೂ ಮಾಡಬೇಕೆಂದಿದ್ದ ಒಬ್ಬ ಕನಸುಗಾರ ಶಂಕರ್‌ನಾಗ್ ಜನ್ಮ ದಿನ ಇಂದು (೯ ನವೆಂಬರ್‌, ೧೯೫೪) ಆದರೆ, ಆತ ಅಕಾಲದಲ್ಲಿಯೇ ಬಿಟ್ಟು ಹೋದ ನೆನಪುಗಳು ಅನೇಕ (ಸೆಪ್ಟೆಂಬರ್‍ ೩೦, ೧೯೯೦). ಅದರಲ್ಲಿ ಮಾಲ್ಗುಡಿ ಡೇಸ್‌... ರಾಷ್ಟ್ರವ್ಯಾಪಿ ಧಾರಾವಾಹಿಯಾಗಿ ಮಾಡಿದ್ದೂ ಸಹ ಒಂದು ವಿಶೇಷ ಸಾಧನೆ.

ಆತನನ್ನು ಒಮ್ಮೆ ಸ್ವತ: ನಾನು ಕಂಡಿದ್ದು ಬಸವನಗುಡಿಯ ನ್ಯಾಷನಲ್‌ ಕಾಲೇಜಿಗೆ ಹೋಗುವ ನಾರ್ತ್‌ರೋಡ್‌ನಲ್ಲಿ, ತನ್ನ ಕಾರನ್ನು ಚಲಾಯಿಸುತ್ತಾ ಸಾಗುತ್ತಿದ್ದದ್ದು.

ದಿವಂಗತ ಶಂಕರ್‌ನಾಗ್‌ ಹೆಸರಿನಲ್ಲಿ ಬೆಂಗಳೂರಿನಲ್ಲಿ ಚಿತ್ರಮಂದಿರವೂ ಇದೆ. ರಂಗಶಂಕರ ರಂಗಮಂದಿರವೂ ಇದೆ. ಹೀಗೆ ಆತನ ನೆನಪು ಸದಾ ಜನಮಾನಸದಲ್ಲಿದೆ.

ಆತನ ಚಿತ್ರಗಳನ್ನು ಮನೆಮಂದಿಯೆಲ್ಲ ಖುಷಿಯಿಂದ ನೋಡಬಹುದಿತ್ತು. ಸೀತಾ ರಾಮು, ಮಿಂಚಿನ ಓಟ, ನೋಡಿ ಸ್ವಾಮಿ ನಾವಿರೋದೇ ಹೀಗೆ, ಸಿಬಿಐ ಶಂಕರ್‍, ಸಾಂಗ್ಲಿಯಾನ (ಭಾಗ೧ ೧-೨), ಗೆದ್ದಮಗ, ಹೀಗೆ ಅನೇಕ ಚಿತ್ರಗಳು. ಒಂದಾನೊಂದು ಕಾಲದಲ್ಲಿ - ಮೊದಲ ಚಲನಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಬಂದಿತ್ತು. ಹೀಗೆ ಸಾಗುತ್ತದೆ, ಆತನ ಚಲನಚಿತ್ರ, ನಾಟಕ, ನಿರ್ದೇಶನ ಜೀವನಗಾಥೆ. ಆತನೊಬ್ಬ ಬಲು ಆತ್ಮೀಯ ವ್ಯಕ್ತಿಯಾಗಿದ್ದರು.

ಇನ್ನು ಹೆಚ್ಚಿನ ವಿವರಗಳಿಗಾಗಿ ಇಲ್ಲೊಂದಷ್ಟು ಜಾಲತಾಣಗಳಿವೆ ನೋಡಿ:
http://www.shankarnag.in/
http://www.chakpak.com/celebrity/shankar-nag/biography/11656

ಶಂಕರ್‌ನಾಗ್‌, ನಿಮಗೆ ನಮನಗಳು.


ಚಿತ್ರಕೃಪೆ: ಗೂಗಲ್‌ ಇಮೇಜ್ ಸರ್ಚ್ (Photo courtsey: Google image search)

ಸೋಮವಾರ, ನವೆಂಬರ್ 8, 2010

ಮನಸು, ಕಣ್ಣು, ಕಿವಿ, ಹೃದಯ ಎಚ್ಚರವಿರಲಿ...

"Be civil to all; sociable to many; familiar with few; friend to one; enemy to none."
- Benjamin Franklin

ಇದು ಹೇಳುವುದಕ್ಕೆ ಅಥವಾ ಕೇಳುವುದಕ್ಕೆ ಚೆನ್ನಾಗಿರುತ್ತದೆ. ಏಕೆಂದರೆ, ಇದರಂತೆ ನಡೆದುಕೊಳ್ಳುವುದು ಬಹಳವೇ ಕಷ್ಟಸಾಧ್ಯ. ಮನುಷ್ಯನಿಗೆ ಏನೆಲ್ಲ ಇದ್ದರೂ ಇವೆಲ್ಲ ಕ್ಷಣಿಕಮಾತ್ರ.

ಮೊನ್ನೆ ದಿನ, ದೀಪಾವಳಿ ಹಬ್ಬದ ಸಂಭ್ರಮ. ಎಲ್ಲೆಲ್ಲೂ ಪಟಾಕಿ ಸದ್ದು, ಬೆಳಕಿನ ಕಿರಣಗಳ ಜಟಾಪಟಿ, ರಾಕೆಟ್‌, ಹೂಕುಂಡಗಳ ಚಟಪಟಿ ಹೀಗೆ ಸಾಗಿತ್ತು. ಆದರೆ, ನಾವು ಸಂಜೆಯ ವಿಹಾರಕ್ಕೆಂದು ಮನೆಯ ಹತ್ತಿರದ ಬಸ್ ನಿಲ್ದಾಣದ/ಅಂಗಡಿಗಳ ಹತ್ತಿರ ನಿಂತಿದ್ದೆವು. ಅಲ್ಲಿಯೇ ಒಬ್ಬಾತ ಹಚ್ಚಿದ ರಾಕೆಟ್‌ ಮೇಲೇನೋ ಹೋಯಿತು. ಆದರೆ ಮರಗಿಡಗಳ ಅಡೆತಡೆಗಳಿಂದಾಗಿ ಅಂಗಡಿಗೆ ನುಗ್ಗಿತು. ಅಂಗಡಿಯಲ್ಲಿದ್ದ ಗ್ರಾಹಕರ ನಡುವೆ ಬಿದ್ದು ಸಿಡಿಯಿತು. ಒಂದಿಬ್ಬರ ಬಟ್ಟೆಗೆ ಕಿಡಿಯು ಹಾರಿ ಬಟ್ಟೆಗಳು ಸುಟ್ಟವು. ನಂತರ ಮತ್ತೊಂದು ರಾಕೆಟ್ ಅದೇ ಮಾದರಿಯಲ್ಲಿ (ದಾರಿಯಲ್ಲಿ) ಹಾಯ್ದುಬಂದು ನಮ್ಮ ಜೊತೆಗೆ ಸ್ಕೂಟರಿನಲ್ಲಿ ಮಾತಾಡುತ್ತಿದ್ದವರ ಗಾಡಿಯ ಕೆಳಗೆ ಸಿಡಿಯಿತು. ಇದರಿಂದ ಅವರ ಬಟ್ಟೆಯೂ ಸಹ ಹಾಳಾಯಿತು. ಆದರೆ ಈ ಎರಡೂ ಘಟನೆಗಳಲ್ಲಿ ಯಾರಿಗೂ ಸುಟ್ಟಗಾಯದ ತೊಂದರೆಯಾಗದಿದ್ದರೂ ಒಟ್ಟಿನಲ್ಲಿ ಅವಘಡವಂತೂ ಆಗಿತ್ತು. ಯಾರೋ ಚಿಕ್ಕಮಕ್ಕಳು ಈ ರೀತಿ ಪಟಾಕಿ ಹಚ್ಚಿದ್ದರೆ ಅದು ಬೇರೆ ವಿಷಯ. ಇದರಿಂದ ಯಾರು ಪಟಾಕಿ ಹಚ್ಚುತ್ತಿದ್ದನೋ ಆತನಿಗೆ ನೋಡಪ್ಪ ಹೀಗಾಯಿತು. ರಾಕೆಟ್ ಬಿಡುವಾಗ (ಮರಗಿಡಗಳಿಲ್ಲದೆ ಕಡೆ ನೋಡಿ ಬಿಡು) ಎಚ್ಚರಿಕೆಯಿಂದ ಹಾರಿಸು ಎಂದು ನಮ್ಮೊಡನಿಂದ ಸಹೋದ್ಯೋಗಿ ಹೇಳಿದರೆ ಇವರ ಮೇಲೆ ಜಗಳಕ್ಕೆ ಬೀಳುವುದೆ? ಅಷ್ಟಕ್ಕೂ ಈ ಮಂದಿಯೆಲ್ಲ ಚಿಕ್ಕವರಿಂದಲೇ ನೋಡಿದ ವ್ಯಕ್ತಿಯೇ ಹೀಗೆ ಹೇಳಿದ್ದಕ್ಕೆ ಹರಿಹಾಯ್ದರೆ ಇನ್ನು ಗೊತ್ತು ಪರಿಚಯವಿಲ್ಲದವರ ಪ್ರಶ್ನೆ ಮಾಡಿದ್ದರೆ ಅವರಿಗೆ ಹೊಡೆದೇ ಬಿಡುತ್ತಿದ್ದರೇನೋ? ಓದಿದ ಮಾತ್ರಕ್ಕೆ ಬುದ್ಧಿ ಬರುವುದಿಲ್ಲ. ಮೊದಲು ನಗರದಲ್ಲಿದ್ದ ಮಾತ್ರಕ್ಕೆ ನಾಗರಿಕನಾಗುವುದಿಲ್ಲ. ಅವರಲ್ಲಿನ ಸಹನೆ, ನಡವಳಿಕೆ ನಾಗರಿಕತೆಯನ್ನು ತೋರಿಸಬಹುದು, ಅಲ್ಲವೇ? ಆದ್ದರಿಂದ ಬೀ ಸಿವಿಲ್ ಟು ಆಲ್...

ಯಾರಿಗೂ ಹೇಳ್ಬೇಡಿ ಅಂತ ಒಂದು ಚಲನಚಿತ್ರ ಬಂದಿತ್ತು. ಅದರಲ್ಲಿನ ನಾಯಕ, ವಠಾರ ಹೆಂಗಳೆಯರಿಗೆಲ್ಲ ಮನೆ ನಿವೇಶನ ಕೊಡಿಸುತ್ತೇನೆ ಎಂದು ನಂಬಿಸಿ, ಅವರಿಂದಲೇ ಹಣ ತೆಗೆದುಕೊಂಡು ತಾನೇ ಒಂದು ನಿವೇಶನ ಖರೀದಿಸಿರುತ್ತಾನೆ. ಆದರೆ, ಆ ನಿವೇಶನ ಆ ವಠಾರದಲ್ಲಿನ ಒಬ್ಬ ಸರ್ಕಾರೀ ನೌಕರನದ್ದೇ ಆಗಿರುತ್ತದೆ. ನಿವೇಶನ ಕೊಳ್ಳುವಾಗ ಸರಿಯಾಗಿ ಗಮನಿಸಿದೇ ಅದೇ ಜಾಗದಲ್ಲಿ ಮನೆಯನ್ನೂ ಕಟ್ಟಿಸುತ್ತಾನೆ. ಆ ಮನೆಯ ಗೃಹಪ್ರವೇಶದ ಸಮಯ ಬಂದಾಗ ನಿವೇಶನ ಮತ್ತು ಮನೆಯ ನಿಜವಾದ ವಾರಸುದಾರ ಯಾರೆಂದು ತಿಳಿಯುತ್ತದೆ. ಕೊನೆಗೆ ನಿಜಾಂಶ ಎಲ್ಲ ತಿಳಿದು ಸಂತಸದಲ್ಲಿ ಚಿತ್ರ ಅಂತ್ಯವಾಗುತ್ತದೆ. ಆದರೆ ಚಿತ್ರದ ಮಾತೆಂದು ಇಟ್ಟುಕೊಳ್ಳಬಹುದು. ಎಲ್ಲರಿಗೂ ಸಮಾಜಸೇವೆ ಮಾಡುವ ಸೋಗಿನಲ್ಲಿ ಕಳ್ಳರು, ವಂಚಕರು ಇದ್ದೇ ಇರುತ್ತಾರೆ. ಎಚ್ಚರಿಕೆ ಅಗತ್ಯ. ಸೋಷಿಯಬಲ್‌ ಟು ಮೆನಿ... ಎಚ್ಚರವಿರದಿದ್ದರೆ... ನೋ ಮನಿ, ನೋ ಹನಿ...

ಕೆಲವಂ ಬಲ್ಲವರಿಂದ ತಿಳಿದು ಎಂಬಂತಿದ್ದರೆ ಒಳ್ಳೆಯದು. ಇಲ್ಲಿ ಯಾವುದೇ ನಕಾರಾತ್ಮಕ ಚಿಂತನೆ ಬೇಡ. ನಮಗೆ ಗೊತ್ತಿರುವದನ್ನೇ ಬಿಂಬಿಸಬಹುದು. ಕೆಲವರಿರುತ್ತಾರೆ.... ತಮಗೆಲ್ಲಾ ಗೊತ್ತು ಎಂಬ ಭಾವನೆಯಿಂದ. ಆದರೆ ಅವರಿಗೇ ಗೊತ್ತಿಲ್ಲದ ಒಂದು ಅಭಾವ ಅವರಲ್ಲಿ ಮನೆ ಮಾಡಿರಬಹುದು. ಇಲ್ಲಿಯೂ ಎಚ್ಚರ ತಪ್ಪಿ ನಡೆದರೆ, ಅಪಮಾನವೆಂಬ ಅಪಘಾತಕ್ಕೆ ಗುರಿಯಾಗಬಹುದು ಅಥವಾ ತಪ್ಪು ತಿದ್ದುಕೊಳ್ಳುವ ಅವಕಾಶವೂ ಸಿಗಬಹುದು...

ಒಬ್ಬರಿಗೆ ಮಾತ್ರ ಮಿತ್ರರಾಗಿರುವುದು ಬಹಳ ಕಷ್ಟ. ಅಜೀವ ಮಿತ್ರರೇ ಬೇರೆ. ಆಗೊಮ್ಮೆ ಈಗೊಮ್ಮೆ ಸಿಗುವ ಬಾಲ್ಯದ ಮಿತ್ರರೇ ಬೇರೆ. ಆತ್ಮೀಯ ಮಿತ್ರರೆಂದು ಒಬ್ಬರಿಗೇ ಸ್ನೇಹವನ್ನು ಕೊಡುವುದು ಬಹಳ ಕಷ್ಟವಾದ ಮಾತು. ದುರ್ಯೋಧನನಿಗೆ ಕರ್ಣನಿದ್ದಂತೆ, ಶ್ರೀಕೃಷ್ಣನಿಗೆ ಸುಧಾಮನಿದ್ದಂತೆ... ನಮ್ಮ ಬಾಳಿನಲ್ಲೂ ಒಬ್ಬ ಆತ್ಮೀಯ ಮಿತ್ರ ಇರುತ್ತಾನೆ. ಆ ಮಿತ್ರತ್ವವನ್ನು ತಿಳಿಯುವುದು ಅಷ್ಟು ಸುಲಭದ ಮಾತಲ್ಲ. ಒಂದಲ್ಲಾ ಒಂದು ವಿಷಯಕ್ಕೆ ಮಿತ್ರತ್ವ ಹೋಗಿ ದ್ವೇಷವೂ ಸುಳಿಯಬಹುದು. (ಇತ್ತೀಚೆಗಿನ ವಿದ್ಯಮಾನದಲ್ಲಿ ಸ್ನೇಹಕ್ಕೆ ಬೆಲೆಯೇ ಇಲ್ಲವಾಗಿದೆ. ಕ್ಷುಲ್ಲಕ ವಿಚಾರಗಳಿಗೆ, ರೇಗಿಸಿದ ಎಂಬ ಕಾರಣಕ್ಕೆ ಕೊಲೆಗಳನ್ನೂ ಮಾಡುವಂತರ ಮಿತ್ರ(???) ಇರುತ್ತಾರೆ, ಪತ್ರಿಕೆಯಲ್ಲಿ ದಿನವೂ ಕಾಣಬಹುದು). ಸ್ನೇಹಕ್ಕೆ ಕಟ್ಟುಬಿದ್ದೋ ಅಥವಾ ಇನ್ಯಾವುದೋ ಕಾರಣಕ್ಕೋ ವೈರಿಯೇ ಆಗುವುದೂ ತರವಲ್ಲ. ಆದರೆ, ನಮ್ಮ ಸ್ನೇಹಿತ/ತೆ ಯಾರಾದರೂ ಸರಿಯೇ ನಿಜವಾದ ಸಾಧನೆಗಳನ್ನು ಮಾಡಿದಾಗ ಅವರನ್ನು ಶ್ಲಾಘಿಸಬೇಕು ಅಥವಾ ಸಂತಸ ತೋರಿಸಬೇಕು. ಅದನ್ನು ಬಿಟ್ಟು ದ್ವೇಷ ತುಂಬಿಕೊಂಡರೆ, ನಾವು ಏನನ್ನು ಸಾಧಿಸಿದಂತಾಗುತ್ತದೆ. ಅದಕ್ಕೆಂದೇ ಯಾರಿಗೂ ವೈರಿಯಾಗಬೇಡ ಎಂಬ ಮಾತನ್ನು ಸದಾ ನೆನಪಿನಲ್ಲಿಟ್ಟರೆ, ನಾವೂ ಏನಾದರೂ ಸಾಧಿಸಬಹುದು. ಅಥವಾ ಮಾನವ ಎಂಬ ಪದಕ್ಕೆ ಸೂಕ್ತ ಉದಾಹರಣೆಯಾಗಬಹುದು.

ಯಾರನ್ನೇ ಆಗಲಿ ಹೀಗೆ ಗುರುತಿಸಬಹುದು: "Fish and visitors smell in three days."- Benjamin Franklin
ಎಂದ ಮೇಲೆ ಎಲ್ಲೇ ಇರಿ, ಹೇಗೇ ಇರಿ, ಸದಾ ಎಚ್ಚರವಿರಿ, ಮನಸು, ಕಣ್ಣು, ಕಿವಿ, ಹೃದಯ ಎಚ್ಚರವಿರಲಿ....

ಬುಧವಾರ, ನವೆಂಬರ್ 3, 2010

ಬದುಕೊಂದು ಪಯಣ

Photo:Chandrashekara B.H.Sept2010
ಬದುಕೊಂದು ಪಯಣ

ಹುಟ್ಟೆಂಬುದು ಆರಂಭ
ಸಾವೆಂಬುದು ಅಂತ್ಯದ ತಾಣ

ನಡುವಿಹುದು ಜೀವನ ಪಯಣ

ಶೈಶವದಿಂದ ಬಾಲ್ಯದೆಡೆಗೆ
ಯೌವ್ವನದಿಂದ ಹಿರಿತನದೆಡೆಗೆ
ಸಾಗುತಿಹುದು ಜೀವನ ಪಯಣ

ಅಜ್ಞಾನದಿಂದ ಸುಜ್ಞಾನದೆಡೆಗೆ
ಕೆಲಬಾರಿ ಜ್ಞಾನದಿಂದ ಅಜ್ಞಾನದೆಡೆಗೆ

ಸಾಗುತಿಹುದು ಜೀವನ ಪಯಣ


ಬೆಳಕಿನಿಂದ ಕತ್ತಲೆಡೆಗೆ
ಕತ್ತಲಿಂದ ಬೆಳಕಿನೆಡೆಗೆ
ಸಾಗುತಿಹುದು ಜೀವನ ಪಯಣ

ದೌರ್ಬಲ್ಯದಿಂದ ದೃಢತೆಯೆಡೆಗೆ
ದೃಢತೆಯಿಂ ಜಡತತ್ವದೆಡೆಗೆ

ಸಾಗುತಿಹುದು ಜೀವನ ಪಯಣ


ನಂಬಿಕೆಯಿಂದ ಪ್ರಾರ್ಥನೆಯೆಡೆಗೆ
ಸಶಕ್ತಿಯಿಂದ ಸಹನಾಶಕ್ತಿಯೆಡೆಗೆ
ಸಾಗುತಿಹುದು ಜೀವನ ಪಯಣ

ನಂಬಿಕೆಯಿಂ ಅಪನಂಬಿಕೆಗಳೆಡೆಗೆ
ಸಹನೆಯಿಂದ ಕಡುಕೋಪದೆಡೆಗೆ

ಸಾಗುತಿಹುದು ಜೀವನ ಪಯಣ


ಛಲದಿಂದ ಮುನ್ನುಗುವೆಡೆಗೆ
ಅಂತಸ್ಸತ್ವವನು ಎಬ್ಬಿಸುವೆಡೆಗೆ
ಸಾಗುತಿಹುದು ಜೀವನ ಪಯಣ

ಹಲವೊಮ್ಮೆ ಅಧೈರ್ಯದೆಡೆಗೆ
ಅಂತಸ್ಸತ್ವದಿಂ ನಿಶ್ಶಕ್ತಿಯೆಡೆಗೆ
ಸಾಗುತಿಹುದು ಜೀವನ ಪಯಣ

ಇರಲಿ ಎಂದಿಗೂ ಎದೆಗುಂದದ ಛಲ
ಹಿಂದಿಕ್ಕದ ಹೆಜ್ಜೆ, ಕಾರಣ
ಸಾಗುತಿಹುದು ಜೀವನ ಪಯಣ

ಹುಟ್ಟೆಂಬುದು ಆರಂಭ
ಸಾವೆಂಬುದು ಅಂತ್ಯದ ತಾಣ
ನಡುವಿಹುದು ಜೀವನ ಪಯಣ, ಚಾರಣ


ಚಿತ್ರ-ಕವನ: ಚಂದ್ರಶೇಖರ ಬಿ.ಎಚ್. ೩.೧೧.೨೦೧೦