ಕವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಕವನ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಗುರುವಾರ, ಮೇ 3, 2012

ವೈಶಾಖ

ವೈಶಾಖ Photo by Chandrashekara BH
ವೈಶಾಖ

ಅಬ್ಬಬ್ಬಾ ಬಿಸಿಲು...
ಅದೋ ಮೋಡ ಕಟ್ಟುತ್ತಿದೆ
ಗಾಳಿ ಬೀಸಿತು, ಕರಿಮೋಡ ಚದುರಿತು

ಸೂರ್ಯನ ಶಾಖ ಭೂಮಿಯ ಮಡಿಲನು
ಇಚ್ಛೆಬಂದಂತೆ ಸೀಳಿ, ಸೀಳಿ ಹಾಕಿದೆ,
ಎಲ್ಲೆಲ್ಲೂ ಹಾಹಾಕಾರ, ನೀರಿಗೆ ಬರ

ಮರಗಿಡಗಳು ಬಿಸಿಳಝಳಕೆ ತತ್ತರಿಸಿ
ತಮ್ಮನ್ನು ತಾವೇ ಸುಟ್ಟು ಉರಿದುಹೋಗಿವೆ...
ಇನ್ನೆಲ್ಲಿಯ ಮಳೆ, ಇಳೆಗಿಲ್ಲ ಕಳೆ

ಅಲ್ಲೊಂದು ಆಶಾಕಿರಣ, ಪುಟ್ಟ ಮೋಡದ
ನಡುವಿಂದ, ಹನಿ ಮಳೆಗಾಗಿ ಚಾತಕನಾಗಿ
ಮುಗಿಲ ಕಡೆಗೆ ಕಣ್ಣೆಟ್ಟಿರಲು...

ಒಂದೇ ಒಂದು ಫಳಕು, ಒಂದೆರಡು ಮಳೆಹನಿ
ತಂಪೆರೆಯಲು ಇಷ್ಟು ಸಾಕೇ... ಎನ್ನುವಾಗ
ಸಿಡಿಲು, ಟಿಸಿಲೊಡೆದು ಮಾಯವಾಗಿದೆ..

ವಸಂತಾಗಮನದಿಂದ ಬರಲಿಲ್ಲ ಮಳೆ
ಒಂದೇ ಬರದ ಮೇಲೆ ಬರೆ... ಹೋದ ವಸಂತ
ವೈಶಾಖ ಬಂದಿದೆ, ಒಂದೇ ಪ್ರಶ್ನೆ ವೈ - ಶಾಖ???

-ಚಂದ್ರಶೇಖರ ಬಿ.ಎಚ್. ಮೇ ೨೦೧೨

ಸೋಮವಾರ, ಅಕ್ಟೋಬರ್ 3, 2011

ಶಾರದೆ, ನಿನ್ನಯ ದಯವಿಲ್ಲದೆ...

|ಶ್ರೀಶಾರದಾಮಾತೆ|
ಶ್ರೀ ಸರಸ್ವತಿ ನಮಸ್ತುಭ್ಯಂ ವರದೇ ಕಾಮ ರೂಪಿಣೇ|
ತ್ವಾಮಹಂ ಪ್ರಾರ್ಥನೆ ದೇವೀ ವಿದ್ಯಾದಾನಂ ಚ ದೇಹಿ ಮೇ||

ಯಾ ದೇವೀ ಸ್ತುತಯೇ ನಿತ್ಯಂ ವಿಭುಹೈರರ್ವೇದಪರಾಗೈ:|
ಸಮೇ ವಸತು ಜಿಹ್ವಾಗ್ರೇ ಬ್ರಹ್ಮರೂಪ ಸರಸ್ವತಿ||


========================


ಶಾರದೆ, ನಿನ್ನಯ ದಯವಿಲ್ಲದೆ
ವಿದ್ಯೆಯಿಲ್ಲ, ವಿನಯವಿಲ್ಲ ನಮಗೆ
ನಿನ್ನೇ ಜಪಿಸುವೆವು, ಸದಾ ಸರ್ವದಾ
ವಿದ್ಯಾದಾನವನು ನೀಡು, ತಾಯೇ ಭಾರತೀ...

ಶ್ವೇತಾಂಬರಧಾರಿಣೀ, ಶುಭದೇ
ನೀ ದಾರಿ ತೋರದೇ, ಜ್ಞಾನಗಂಗೆ ಹರಿಸದೇ
ಅಜ್ಞಾನ ತೊಳೆಯದು ನಮಗೆ,
ಜ್ಞಾನವನು ನೀಡೆಮಗೆ, ತಾಯೇ ಭಾರತೀ...

ವಾಣೀ, ವಾಗೀಶ್ವರೀ, ನಮ್ಮ ಜಿಹ್ವಾಗ್ರದಲಿ
ಸವಿನುಡಿಗಳ ನುಡಿಸಿ, ಶಾಂತಿಮಂತ್ರವನುಳಿಸಿ
ಪೊರೆಯೆ, ಪರಮಬ್ರಹ್ಮನ ರಾಣಿ,
ಪರಮಾಪ್ತವಾಗಿರಲು ಮನಸುಕೊಡು, ತಾಯೇ ಭಾರತೀ...

ವೀಣಾಧಾರಿಣಿ, ಸಂಗೀತ ವಿಲಾಸಿನಿ,ನಮ್ಮಯ
ಬಾಳಿನೊಳು ಸಂತಸದ ಶೃತಿ ಸೇರಿಸಿ,
ಅದರಲಿ ತಾಳ ತಪ್ಪದ ಬಾಳು ಕೊಡು, ತಾಯೇ ಭಾರತೀ...

ಇದೋ ನಿನಗೆ ನಮನ, ನಿನ್ನ ನಾಮವೆ ನಮಗೆ ಮನನ
ಆಗಿರಲೆಂದು ಜೀವನ, ಪಾವನ ಎಂದು ಹಾರೈಸೆ, ಭಕ್ತಿಯಲಿ
ಬೇಡಿಕೊಂಬೆವು, ಕೊಡುತಾಯೆ ವರವನ್ನ, ತಾಯೇ ಭಾರತೀ...
===================

ಎಲ್ಲರಿಗೂ, ಶ್ರೀ ಸರಸ್ವತೀ ದೇವಿಯ ಕೃಪೆಯಿರಲಿ. 

-ಚಂದ್ರಶೇಖರ ಬಿ.ಎಚ್. ೩/೧೦/೨೦೧೧

ಗುರುವಾರ, ಜೂನ್ 9, 2011

ಆರು ಬಲ್ಲರು........

ಅಂತರ್ಜಾಲವು ಬಂದ ಹೊಸದರಲ್ಲಿ, ನಾವು ನಾಲ್ವರು ಸ್ನೇಹಿತರು ಸೇರಿ ಕೃತಿ ಚೇತನ ಎಂಬ ವಿದ್ಯುನ್ಮಾನ ಪತ್ರಿಕೆಯನ್ನು ಮಾಡುತ್ತಿದ್ದೆವು. ಆ ಸಮಯದಲ್ಲಿ ಹಿರಿಯ ಬರಹಗಾರರಾದ ಶ್ರೀಮತಿ ವಾಣಿ ರಾಮ್‍ದಾಸ್‍ ಅವರು ಒಂದು ಕವನವನ್ನು ಕೊಟ್ಟಿದ್ದರು. ಅದನ್ನು ಮತ್ತೊಮ್ಮೆ ಇಲ್ಲಿ ಪ್ರಸ್ತುತಪಡಿಸುತ್ತಿರುವೆನು.


ಆರು ಬಲ್ಲರು........


ಅಪರಿಚಿತ ನಗೆಯಲಿ ಪರಿಚಿತ ಭಾವ
ನೀನ್ಯಾರೋ, ನಾನ್ಯಾರೋ ಜನ್ಮಾಂತರ ಸ್ನೇಹ
ಭರವಸೆಯ ಆಶಾಕಿರಣ ಅರಸಿತು ನೇಹ
ಪ್ರತಿ ಆತ್ಮದಲೂ ಪ್ರೀತಿಯ ಮೋಹ
ಯಾವ ಮೋಡದಲಿ ಯಾವ ಹನಿಯೋ ಬಲ್ಲವರಾರು?||

ಪ್ರವಾಹದ ಮೊರೆತದಲಿ ಹೃದಯದ ಹಾಡು
ತುಡಿತ ಮಿಡಿತಗಳಲಿ ತವಕಿಸುತಿದೆ ನೋಡು
ಸೆಳೆತಗಳ ಸುಳಿಯಲಿ ಸಿಲುಕಿದೆ ಮನಸು
ಕೆರೆ ನದಿಯತ್ತ, ನದಿ ಸಾಗರದತ್ತ
ಸಾಗರವೆಲ್ಲಿಗೋ ಬಲ್ಲವರಾರು?||

ಕಾಯುತಿದೆ ಭೂಮಿ ಮಳೆಯ ಆಗಮನಕೆ
ತಪಿಸಿ, ತವಕಿಸಿದೆ ನೈದಿಲೆ ಚಂದ್ರಮನ ನೋಟಕೆ
ಹೃದಯದ ಚಿಪ್ಪಿನೊಳಗೆ ಪರಿತಪಿಸುತಿದೆ ಜೀವ
ಎಲ್ಲ ಮನಸ್ಸುಗಳಲಿ ನಿರಂತರ ದಾಹ
ಯಾವ ಮೇಘ ಯಾವ ಗಿರಿಯ ಚುಂಬಿಸುವುದೋ ಆರು ಬಲ್ಲರು?||

ಅರ್ಥವೇ ಆಗದು ಈ ಜೀವನ ಪರಿ
ಅರ್ಥೈಸಿಕೊಳ್ಳುವ ಗೋಜಿಗೆ ಹೋಗದಿರುವುದೇ ಸರಿ
ಅನುಭವವೇ ಜೀವನದ ಅರ್ಥವೇ,
ಅರ್ಥಗಿರ್ಥಗಳ ಹುಡುಕಿ ಅಳಲಿ, ಬಳಲಿರುವೆ
ಇದೇ ಜೀವನದ ಅರ್ಥ, ಎಂದು ತಿಳಿಸುವರಾರು?||


- ವಾಣಿ ರಾಮದಾಸ್

ಬುಧವಾರ, ಮೇ 4, 2011

ಓ! ಚಲುವೆ...

ಓ ಚಲುವೆ - ರಾಗ ತಾಳ

ಓ ಚಲುವೆ ನಾಟ್ಯದ ಸಿರಿನವಿಲೆ

ಹಂಸದ ನಡೆಯವಳೆ

ನಿನ್ನ ಮೋಹದ ಅಮಲಿನಲಿ ನಾ ಮೈ ಮರೆತಿರುವೆ......

ನನ್ನ ಮನಸಿನ ಮಂದಿರದಿ ದೇವತೆ ನೀನಾದೆ

ನನ್ನ ಕನಸಿನ ಲೋಕದಲಿ ರಾಣಿಯು ನೀನಾದೆ

ನನ್ನ ಮಧುರ ಶ್ರುತಿಗಳ ಆಲೆಗಳಲಿ ತೇಲುವ ದೋಣಿಯು ನೀ

ಬಾ ತೀರದಿ ಕಾಯುತಿರೆ, ಈ ಹೃದಯವು ಮಿಡಿಯುತಿದೆ !!

ಓ ಚಲುವೆ (ಪಲ್ಲವಿ)

ವಿಕಸಿತ ಕುಸುಮದಲೂ ನಿನ್ನ ಹೂ ನಗೆ ಮೂಡುವುದು

ತೇಲುವ ಮುಗಿಲಿನಲೂ ನಿನ್ನ ರೂಪವೆ ಕಾಣುವುದು

ನನ್ನ ದೇಹದ ಪ್ರತಿ ಕಣ ಕಣದಲ್ಲೂ ನೀನೆ ತುಂಬಿರುವೆ

ಕಣ್ ತೆರೆದರೆ ಕಾಣಿಸುವೆ, ಈ ಮನದಲಿ ಉಳಿದಿರುವೆ

!! ಓ ಚಲುವೆ (ಪಲ್ಲವಿ)

ಸುಂದರಿಯೇ ನನ್ನ ಅಶಾ ಮಂಜರಿಯೆ

ನನ್ನ ತನುವಿನ ಅಣು ಅಣುವೆ

ನಿನ್ನ ಪ್ರೇಮದ ಪಂಜರದಿ ನಾ ಜಪಿಸುವ ಗಿಳಿಯಾದೆ,

ತಪಿಸುವ ಮಣಿಯಾದೆ

!!ಓ ಚಲುವೆ (ಪಲ್ಲವಿ)

Gift by PTN