ಯುದ್ದ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಯುದ್ದ ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಬುಧವಾರ, ಮಾರ್ಚ್ 23, 2011

ಮೇರೆ ರಂಗದೇ ಬಸಂತಿ... : ಶಹೀದರುಗಳಿಗೆ ನಮನ

ಇಂದು ಭಗತ್ ಸಿಂಗ್, ರಾಜಗುರು ಮತ್ತು ಸುಖದೇವರನ್ನು ಗಲ್ಲಿಗೇರಿಸಿದ ದಿನ (೨೩ ಮಾರ್ಚ್ ೧೯೩೧). ಈ ಹುತಾತ್ಮರೂ ಇನ್ನೂ ತಾರುಣ್ಯದಲ್ಲಿದ್ದಾಗಲೇ ಭಾರತಮಾತೆಯನ್ನು ಬ್ರಿಟಿಷರಿಂದ ಬಂಧಮುಕ್ತಗೊಳಿಸಲು ಪಣತೊಟ್ಟು, ಪಾರ್ಲಿಮೆಂಟಿನಲ್ಲಿ ಬಾಂಬೆಸೆದು, ಆಂಗ್ಲರ ಪರವಾದ ನ್ಯಾಯಕ್ಕೆ (ಅದು ಯಾವಾಗಲೂ ಹಾಗೆಯೇ ಅಲ್ಲವೇ ಆಳುವವನಿಗೇ ಅಧಿಕಾರ ಮತ್ತು ಕಾನೂನು ತನ್ನ ಮಾತಿನಂತೆ ನಡೆಯುವುದು) ತಮ್ಮನ್ನು ದೇಶಕ್ಕಾಗಿ ಅರ್ಪಿಸಿಕೊಂಡರು. ದೇಶಕ್ಕಾಗಿ ಚಿಂತಿಸಿದರು, ದುಡಿದರು ಹಾಗೂ ತಮ್ಮ ಯೌವನಾವಧಿಯಲ್ಲಿಯೇ ಹುತಾತ್ಮರಾಗಿ ಚಿರಕಾಲ ಜನಮಾನಸದಲ್ಲಿ ಉಳಿದರು. ಇವರೆಲ್ಲ ಪ್ರಾತ:ಸ್ಮರಣೀಯರು. ಅವರು ಅಂದು ನೀಡಿದ ಘೋಷವಾಕ್ಯ ಇಂದಿಗೂ ಪ್ರಸ್ತುತವೆನಿಸುತ್ತದೆ:

“If the deaf are to hear, the sound has to be very loud. When we dropped the bomb, it was not our intention to kill anybody.

ದೇಶಭಕ್ತಿಯ ಪ್ರತಿರೂಪಗಳಾದ ಈ ಹುತಾತ್ಮರುಗಳಿಗೆ ನಮ್ಮೆಲ್ಲರ ನಮನ ಸಲ್ಲಿಸೋಣ.

ಗುರುವಾರ, ಸೆಪ್ಟೆಂಬರ್ 16, 2010

ಮೊನ್ನೆ ದಿನ ಏನಾಯ್ತೂಂದ್ರೇ....

ಮೊನ್ನೆ ದಿನ ಏನಾಯ್ತೂಂದ್ರೇ....

ಮೊನ್ನೆ ಭಾನುವಾರ ಗಣೇಶನ ಹಬ್ಬದ ಮಾರನೇ ದಿನ ನನಗೆ ಸ್ವಲ್ಪ ಸಿಟಿಯಲ್ಲಿ ಕೆಲಸವಿತ್ತು. ಹಾಗೆಯೇ ಕೆಲವು ಮಿತ್ರರನ್ನು ಭೇಟಿ ಮಾಡಲು ಹೋಗಿದ್ದೆ. ನಾನು ನನ್ನ ಸ್ನೇಹಿತ ಇಬ್ಬರೂ ಹಾಗೇ ದಾರಿಯಲ್ಲಿ (ಸೀತಾ ಸರ್ಕಲ್‌ ಹತ್ತಿರ)ನ ಒಂದು ಉಪಹಾರ ಮಂದಿರಕ್ಕೆ ಹೋದೆವು. ಕುಳಿತುಕೊಳ್ಳುವ ಜಾಗಕ್ಕೆ ಹೋದೆವು. ಏಕೆಂದರೆ, ಕನಿಷ್ಠ ಒಂದು ಹತ್ತು ನಿಮಿಷವಾದರೂ ಕುಳಿತು ಮಾತನಾಡುತ್ತಾ ತಿಂಡಿ ತಿನ್ನಬಹುದೆಂಬ ಆಸೆ. .. ತಿಂಡಿ ಕಾಫಿಗೆ ಆರ್ಡರ್‍ ಮಾಡಿ ಮಾತನಾಡುತ್ತಾ ಕುಳಿತೆವು... ಸರಿ ತಿಂಡಿಯೂ ಬಂದಿತು. ತಿಂಡಿ ಸೇವಿಸುತ್ತಾ ನಮ್ಮ ಮಾತು ಮುಂದುವರೆದಿತ್ತು...


ಹೀಗಿರುವಾಗ...

ಎಲ್ಲಿಂದಲೋ ಒಂದು ನೊಣ ಕಾಫಿ ಕಪ್ಪಿಗೆ ಬಿದ್ದಿತ್ತು. ಅವನು ಕಾಫಿ ತಂದಿಟ್ಟಾಗ ಬಿದ್ದಿರಲಿಲ್ಲ. ನಮ್ಮ ಗಮನಕ್ಕೂ ಬಂದಿರಲಿಲ್ಲ.

ಆಗ ನನಗೆ ನೆನಪಾಗಿದ್ದು ಮೇಯರ್‌ ಮುತ್ತಣ್ಣ ಚಲನಚಿತ್ರದಲ್ಲಿನ ಒಂದು ಪಾತ್ರ... ದ್ವಾರಕೀಶ್‌ ಹೋಟೆಲಿನಲ್ಲಿ ನಡೆಸುವ ಕರಾಮತ್ತು. ನಂತರ ಮುತ್ತಣ್ಣನ ಭೇಟಿ... ಇತ್ಯಾದಿ. ಇತ್ಯಾದಿ...

ಆದರೆ, ಇಲ್ಲಿ ಆಗಿದ್ದು ಬೇರೆಯೇ ಕರಾಮತ್ತು!!! ಇನ್ನೇನು ಕಾಫಿ ಕಪ್ಪಿಗೆ ಕೈ ಹಾಕಬೇಕು.....

ನೋಡಿ ನೊಣ ಬಿದ್ದಿದೆ. ಬೇರೆ ಬೇರೊಂದು ಕಪ್ ಕಾಫಿ ಕೊಡಿ ಎಂದಾಗ...

ಆತನ ವಿಚಾರಣೆ ಶುರುವಾಗಬೇಕೆ?

ನೊಣ ಈಗ ಬಿತ್ತಾ?? ಮೊದಲೇ ಬಿದ್ದಿತ್ತಾ??? ಹೀಗೆ....

ನನ್ನ ಸ್ನೇಹಿತ ತಕ್ಷಣಕ್ಕೆ `ನಮಗೇನು ಕನಸು ಬಿದ್ದಿತ್ತೇ? ನೊಣ ಯಾವಾಗ ಬಿತ್ತು? ಹ್ಯಾಗೆ ಬಿತ್ತು? ಅನ್ನೋ ವಿಚಾರಣೆ ಬೇಕಾ? ಎನಕ್ಟಯರಿ ಮಾಡಕ್ಕಾ??? ಎಂಥ ಜನ ಮಾರಾಯ್ರೆ... ಎಂದು ಹಿರಿಯ ಕೆಲಸಗಾರನಿಗೆ ಕೇಳಿದರು.

ಅದೇ ವ್ಯಕ್ತಿ ನಿಧಾನವಾಗಿ ಅಥವಾ ಬೇರೆ ಕೊಡುತ್ತೇನೆ ಎಂದು ಹೇಳಿದ್ದರೆ ಸಾಕಿತ್ತು... ಆತನ ಪ್ರಶ್ನೆ `ನಾವೇ ಕಾಫಿ ಕಪ್ಪಿಗೆ ನೊಣ ಹಾಕಿದ್ದೇವೆ' ಎಂಬ ಧಾಟಿಯಲ್ಲಿತ್ತು...

ಹೊಸ ಕಪ್ಪಿನಲ್ಲಿ ಬಿಸಿಬಿಸಿ ಕಾಫಿ ತಂದಿಟ್ಟು ಆತ ಹೊರಟು ಹೋದ....

ಇಷ್ಟೆಲ್ಲಾ ಏಕೆ ಹೇಳಬೇಕಾಯಿತೆಂದರೆ...

ಕೆಲವು ವ್ಯಕ್ತಿಗಳಿಗೆ ಜೀನವದ ಬೇಸರವೋ ಅಥವಾ ಸರಿಯಾದ ಕೆಲಸವಿಲ್ಲದೇ (ವಿದ್ಯಾವಂತನಾಗಿದ್ದರೂ) ಯಾರ್‍ಯಾರಿಗೋ ಕಾಫೀ, ಟೀ, ತಿಂಡಿ ಎಲ್ಲ ಸಪ್ಲೈ ಮಾಡಬೇಕು ಅಂತಲೋ, ಸಂಬಳ ಕಡಿಮೆಯೋ ಇತ್ಯಾದಿಯನ್ನು ಬಂದ ಗ್ರಾಹಕರ ಬಗ್ಗೆ ಈ ರೀತಿ ಕೇಳುವುದು ಸಭ್ಯವಲ್ಲ ಎಂದು ತಿಳಿದಿದ್ದರೂ ಹೀಗೆ ಮಾಡುತ್ತಾರೆ...

ಇದರಿಂದ ಗ್ರಾಹಕನಿಗೆ ತೊಂದರೆಯೇನಾಗದಿದ್ದರೂ... ಕೆಲಸ ಕೊಟ್ಟವನಿಗೆ ತೊಂದರೆ ಆಗುವುದು ಸಹಜ. ಏಕೆಂದರೆ, ಅಲ್ಲಿ ಶುಚಿತ್ವಕ್ಕೆ ಬೆಲೆಯಿಲ್ಲ, ತರಲೆ ಸಪ್ಲೈಯರ್‌ಗಳು ಹೀಗೆ ಗ್ರಾಹಕರು ತನ್ನಂತಾನೇ ದೂರಾಗುತ್ತಾರೆ... ಎಂಬುದು... ಹಾಗೆಯೇ ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೂ ತೊಂದರೆಯಾಗುವುದಲ್ಲವೇ?


ಗುರುವಾರ, ಆಗಸ್ಟ್ 5, 2010

ಹಿರೋಷಿಮಾ...೬೫

ಮಾನವನ ದಾಹಕ್ಕೆ ಬಲಿಯಾಗುವು ಏನೆಲ್ಲ?

ಒಂದು ದೇಶದಲ್ಲಿನ ಜನಾಂಗದ, ನೈಸರ್ಗಿಕ ಸಂಪತ್ತು, ಜೀವ ಸಂಕುಲವೆಲ್ಲ ನಾಶವಾಗುತ್ತವೆ. ಇಲ್ಲವೇ, ಒಂದಾದ ನಂತರ ಕೊಂಡಿ ಕಳಚಿಕೊಳ್ಳುತ್ತಾ... ಭೀಕರ ಕ್ಷಾಮ ತಲೆದೋರುತ್ತದೆ, ಖಾಯಿಲೆಗಳು, ಅಂಗವೈಕಲ್ಯ, ಕಲುಷಿತ ವಾತಾವರಣ, ಪ್ರಾಣಿಸಂಕುಲದ ನಾಶ... ಹೀಗೆ ಮಾನವನಿರ್ಮಿತ ಬಾಂಬುಗಳಿಂದ ತನಗೆ ತಾನೇ `ಭಸ್ಮಾಸುರ'ನಾಗುತ್ತಾನೆ. ಅದಕ್ಕೆ ಉದಾಹರಣೆ: ಜಪಾನಿನ ನಾಗಸಾಕಿ ಮತ್ತು ಹಿರೋಷಿಮಾ ಮೇಲಿನ ೧೯೪೫ರ ಯುದ್ಧದಲ್ಲಿ ನಡೆದ ಅಣುಬಾಂಬಿನ ದಾಳಿ.

ಆಗಸ್ಟ್ ೬, ೧೯೪೫, ೧.೪೫ ಎ.ಎಂ. ಗೆ ಯುಎಸ್‌ಬಿ-೨೯ ಎರಡನೇ ಅಣುಬಾಂಬನ್ನು ಹೊತ್ತು ಹಿರೋಷಿಮಾ ಮೇಲೆ ಹಾಕಿತು. ಯುದ್ಧ ವಿಮಾನಚಾಲಕ ಎನೊಲಾ ಗೇ... ಒಂದು ನಿಮಿಷದ ವಿವೇಚನಾ ರಹಿತ ತೀರ್ಮಾನ ಒಂದು ಜನಾಂಗದ, ದೇಶದ ಚಿತ್ರಣವನ್ನೇ ಬದಲಾಯಿಸಿತು. ಇದೆಲ್ಲ ಏಕಾಗಿ? ಇಂದಿಗೆ ೬೫ ವರ್ಷವಾಗುತ್ತಿದೆ. ಅಲ್ಲಿನ ಪರಿಸ್ಥಿತಿಯಲ್ಲಿ ಇನ್ನೂ ಸಹ ಸುಧಾರಣೆ ಕಂಡುಬಂದಿಲ್ಲವೆಂದು ವರದಿಗಳು ತಿಳಿಸುತ್ತವೆ. ಅಣುವಿಕಿರಣದ ಪರಿಣಾಮ ಭಯಾನಕವಾಗಿದ್ದು, ಇನ್ನೂ ಅದರ ಪಳಿಯುಳಿಕೆಗಳಿವೆ ಎಂಬುದಾಗಿ ತಿಳಿದುಬರುತ್ತದೆ.

ಇಂತಹ ಕೃತ್ಯಗಳನ್ನು ವಿಶ್ವ ಸಮುದಾಯ ಖಂಡಿಸಬೇಕು. ಅಣುಬಾಂಬಿನಂತಹ ವಿಶ್ವದ ವಿನಾಶಕಾರೀ ಅಸ್ತ್ರಗಳನ್ನು ಸದ್ಬಳಕೆ (??) ಮಾಡಿಕೊಳ್ಳಬೇಕು. ಅದು ಬಿಟ್ಟು, ಪರರ ಸಂಹಾರಕ್ಕೆ ಉಪಯೋಗಿಸಿದರೆ, `ಭಸ್ಮಾಸುರ' ನ ಗತಿಯೇ ಆಗುವುದು...

ಆ ವಿಚ್ಛದ್ರಕಾರಿ ಆಕ್ರಮಣದಲ್ಲಿ ಲಕ್ಷಾಂತರ ಮಂದಿ ಬೆಂದುಹೋದರು. ಅಂಗವಿಕಲರಾದರು. ಅವರ ನಂತರದ ಪೀಳಿಗೆಯಲ್ಲಿ ಅಣುವಿಕಿರಣದ ಅಂಶ ಇನ್ನೂ ಆರದೆ ಉಳಿದಿರುವುದು ಮಾನವ ಜನಾಂಗಕ್ಕೆ ಒಂದು ಕಪ್ಪು ಚುಕ್ಕೆಯಷ್ಟೇ ಅಲ್ಲ, ಎಂದಿಗೂ ಮರೆಯಲಾಗದಂತಹ ಘಟನೆ... ಇದು ಮಾನವಜನಾಂಗಕ್ಕೆ ಒಂದು ಪಾಠವಾಗಿದೆ.

ಇಂದಿಗೆ ೬೫ ವರ್ಷ. ಆ ದಿನದಿಂದ ಇಂದಿನವರೆಗೂ ನಲುಗಿದವರ ಬಾಳಿನಲ್ಲಿ ಬೆಳಕು ಮೂಡಲಿ.. ಎಂದು ಆಶಿಸೋಣ.

ಪೂರಕ ಓದಿಗಾಗಿ: http://www.hiroshimacommittee.org/
http://www.japaneselifestyle.com.au/travel/hiroshima_bombing.ಹ್ತ್ಮ್

ಮಂಗಳವಾರ, ಜುಲೈ 27, 2010

ಜೈ ಭಾರತ ಮಾತಾ! ಜೈ ಜವಾನ್‌!

ನಿನ್ನೆ ದಿನವೇ ನಮ್ಮ ನಮನವನ್ನು ಹಾಕಬೇಕಿತ್ತು. ಆದರೆ, ಅಂತರ್ಜಾಲದ ಕೊಂಡಿಯ ಸಮಸ್ಯೆಯಿಂದಾಗಿ ಬ್ಲಾಗಿನಲ್ಲಿ ಬರೆಯಲು ಆಗಲಿಲ್ಲ.. ಅದಕ್ಕಾಗಿ ವಿಷಾದಿಸುತ್ತೇನೆ. ಭಾರತ-ಪಾಕಿಸ್ತಾನ ನಡುವೆ ನಡೆದ ಕಾರ್ಗಿಲ್‌ ಯುದ್ಧ ೧೧ನೇ ವರ್ಷಕ್ಕೆ ಕಾಲಿಡುತ್ತಿದೆ.

ಭಾರತೀಯ ವೀರ ಯೋಧರ ತ್ಯಾಗ, ಬಲಿದಾನ, ಧೈರ್ಯ, ಸಾಹಸದಿಂದಾಗಿ ಈ ಯುದ್ಧವನ್ನು ಗೆದ್ದೆವು. ಅಂದು ಇಡೀ ಭಾರತದ ಸಮಸ್ತರೂ ವೀರಯೋಧರ ಜೊತೆಗಿದ್ದರು. ಇಲ್ಲಿ ಅರಳುತ್ತಿದ್ದ ಎಷ್ಟೋ ಯುವ ವೀರರು ತಮ್ಮ ತ್ಯಾಗ ಬಲಿದಾನಗಳಿಂದ ದೇಶವನ್ನು ಮತ್ತು ದೇಶವಾಸಿಗಳನ್ನು ರಕ್ಷಿಸಿದರು.

ವೀರ ಭಾರತೀಯ ಯೋಧರು `ವಿಜಯ' ಪತಾಕೆ ಹಾರಿಸಿ, ಈ ಯುದ್ಧದಲ್ಲಿ ವೀರಮರಣವನ್ನಪ್ಪಿದ, ಗಾಯಗೊಂಡ ಹಾಗೂ ಅವರ ಮನೆಯವರೆಲ್ಲರಿಗೂ ನಮ್ಮ ನಮನಗಳು. ಅವರೆಲ್ಲರೂ ಪ್ರಾತ:ಸ್ಮರಣೀಯರು. ಈ ಭಾರತಕ್ಕೆ ವೀರಯೋಧರನ್ನು ಕೊಟ್ಟ ತಾಯ್ತಂದೆಯರಿಗೆ ನಮ್ಮ ನಮನಗಳು. ಅವರೆಲ್ಲರಿಗೂ ದು:ಖವನ್ನು ಭರಿಸುವ ಶಕ್ತಿಯನ್ನು ಆ `ಶಕ್ತಿ' ಯು ಕೊಡಲಿ...

ಜೈ ಭಾರತ ಮಾತಾ! ಜೈ ಜವಾನ್‌!

ಶುಕ್ರವಾರ, ಜೂನ್ 18, 2010

ಬದುಕೆಂಬ ಬದುಕು


ಬದುಕು ಮುಳ್ಳಿನ ಹಾದಿ
ನಡೆ ನೀನು ದಿಟ್ಟ ಹೆಜ್ಜೆಯಲಿ
ಸಾಗುವುದು ರಹದಾರಿ
ಭವ್ಯ ಜೀವನದ ಸಾರವನು ತೋರಿ

ಬೆದರದಿರು, ಬೆಚ್ಚದಿರು
ಭಾವಪ್ರಭಾವಗಳಿಗೆ ಒಳಗಾಗದೆ
ನಡೆಯುತಿರು, ನುಡಿಯುತಿರು
ನಿತ್ಯ ಸತ್ಯದಾ ಹಾದಿಯಲಿ

ದೂರದಿರು, ಮರುಗದಿರು
ವ್ಯರ್ಥ ಮಿಥ್ಯತೆಗೆ ಬಲಿಯಾಗಿ
ದುಡಿಯುತಿರು, ನೆನೆಯುತಿರು
ಸತ್ಯ ಸಾರ್ಥಕತೆಗೆ ಜೊತೆಯಾಗಿ

ಬರುವುದು ಬದುಕಿನಲಿ
ಹೂವನದ ಸೊಬಗು, ಮುಳ್ಳಿರದ
ಹೂವಿಲ್ಲ, ನೋವಿರದ ಬಾಳಿಲ್ಲ
ನಲಿವಿರದ ಬದುಕಿಲ್ಲ ತಿಳಿಯುತಲಿ
ಸಾಗುತಿರು ನಿನ್ನ ಗುರಿಯ ದಾರಿಯಲ್ಲಿ

- ಚಂದ್ರಶೇಖರ ಬಿ.ಎಚ್.

ಮಂಗಳವಾರ, ಫೆಬ್ರವರಿ 9, 2010

ಶ್ರೀ ವೆಂಕಟಪ್ಪ ಕಲಾ ಮಂದಿರದಲ್ಲಿ, ಒಂದಷ್ಟು ಹೊತ್ತು ವೈಪಿಎಸ್ ಚಿತ್ರಗಳೊಡನೆ..


ಯೂತ್ ಫೋಟೋಗ್ರಫಿಕ್‌ ಸೊಸೈಟಿ - ೩೧ನೇ ರಾಷ್ಟ್ರೀಯ ಸಲೋನ್ ಛಾಯಾಗ್ರಹಣ ಪ್ರದರ್ಶನ ೫ನೇ ಫೆಬ್ರವರಿಯಿಂದ ಆರಂಭವಾಗಿ ೮ನೇ ಫೆಬ್ರವರಿಗೆ ಮುಕ್ತಾಯವಾಗುತ್ತದೆ ಎಂದು ಮಿತ್ರ ಕೆ.ಶಿವೂ (ಛಾಯಾಕನ್ನಡಿ ಬ್ಲಾಗ್‌) ಅವರ ವಿ-ಅಂಚೆಯಿಂದ ತಿಳಿದೆನು. ಇದನ್ನು ಮಾತ್ರ ತಪ್ಪಿಸಿಕೊಳ್ಳಬಾರದು ಎನಿಸಿತು. ಅದಕ್ಕೆಂದೇ ಕಾದಿದ್ದು ಭಾನುವಾರ, ೭.೨.೨೦೦೯ ರಂದು ಹೋಗಿದ್ದೆ. ಇದು ವೆಂಕಟಪ್ಪ ಕಲಾ ಗ್ಯಾಲರಿಯಲ್ಲಿ ಇತ್ತು.

ವೈಪಿಎಸ್‌ ನವರ ಕಾರ್ಯವೈಖರಿಯು ಛಾಯಾಚಿತ್ರಗಳ ಪ್ರದರ್ಶನ ತುಂಬಾ ಅಚ್ಚುಕಟ್ಟಾಗಿ ಮಾಡಿಸಿತ್ತು. ನನಗೊಂದು ಆಲೋಚನೆ ಬಂತು. ಇಲ್ಲಿ ಎಷ್ಟು ಛಾಯಾಚಿತ್ರಗಳನ್ನು ಪ್ರದರ್ಶನಕ್ಕಿಟ್ಟಿರಬಹುದು? ಎಂದು. ಮತ್ತೊಂದು ಸುತ್ತು ಚಿತ್ರಗಳನ್ನು ಬರಿದೇ ಎಣಿಸುತ್ತಾ ಹೋದೆ. ಅಲ್ಲಿದ್ದದ್ದು ೩೧೯. ಇಷ್ಟೂ ಚಿತ್ರಗಳನ್ನು ಸುಂದರವಾಗಿ, ಪ್ರಮಾಣ ಬದ್ಧವಾಗಿ ಪ್ರದರ್ಶನಕ್ಕೆ ಅಣಿಮಾಡಿದ್ದರು. ಕಪ್ಪು-ಬಿಳುಪು, ಬಣ್ಣ, ಪ್ರವಾಸೀ ಹಾಗೂ ವನ್ಯಜೀವಿಗಳು ಹೀಗೆ ಬೇರೆ ಬೇರೆ ವಿಭಾಗಗಳನ್ನು ಮಾಡಿ ಚಿತ್ರಗಳನ್ನು ಪ್ರದರ್ಶಿಸಿದ್ದರು.

ಕೆ.ಶಿವೂ ಅವರೂ ಸಿಕ್ಕಿದ್ದರು. ಇದರ ಜೊತೆಗೆ ನಮ್ಮ ಸಂಸ್ಥೆಯ ಮೊದಲ ರಿಜಿಸ್ಟ್ರಾರ್‌ ಅವರ ಸ್ನೇಹಿತರೂ ಸಹ ಭೇಟಿಯಾಗಿದ್ದು ಒಂದು ವಿಶೇಷ ಎನ್ನಬಹುದು. ಕಸ್ತೂರಿ ಚಾನಲ್ಲಿನವರು, ಹಾಗೆಯೇ ಶಿವುರವರ ಮುಂಬೈ ಮಿತ್ರರೂ ಬಂದಿದ್ದರು. ಸಂಜೆಯ ವೇಳೆಗೆ ಪ್ರಶಸ್ತಿ ಪ್ರದಾನ ಸಮಾರಂಭವಿತ್ತು. ನಾನು ಮನೆಗೆ ಹೋಗಲೇ ಬೇಕಿದ್ದರಿಂದ, ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬಿಡಬೇಕಾಯಿತು.

ನನ್ನ ಸಹೋದ್ಯೋಗಿಗಳೂ ಸಹ ಸುಮಾರು ೪.೦೦ರ ವೇಳೆಗೆ ಬಂದರು. ಇದೇ ಸಮಯಕ್ಕೆ ಶ್ರೀಲಂಕಾದ ಛಾಯಾಗ್ರಾಹಕರ ಒಂದು ತಂಡವೂ ಬಂದಿತ್ತು ಎಂದು ತಿಳಿದುಬಂದಿತು (ಆಗ ನಾನು ನನ್ನ ಸಹೋದ್ಯೋಗಿ ಮಿತ್ರರ ಬರುವಿಕೆಗಾಗಿ ಹೊರಹೋಗಿದ್ದೆ). ಹಲವಾರು ವಿದೇಶೀ ಪ್ರವಾಸಿಗರೂ ಸಹ ಇಲ್ಲಿಗೆ ಭೇಟಿಕೊಟ್ಟು ಚಿತ್ರಗಳನ್ನು ವೀಕ್ಷಿಸುತ್ತಿದ್ದರು. ತಮ್ಮ ದೇಶದ ಚಿತ್ರಗಳು, ವಿಶೇಷತೆಗಳೇನಾದರೂ ಇರಬಹುದೇ? ಎಂದೂ ಹುಡುಕುತ್ತಿದ್ದರು.

ಅಲ್ಲಿದ್ದ ಅಭಿಪ್ರಾಯ ಪುಸ್ತಕದಲ್ಲಿ ಅನೇಕ ವೀಕ್ಷಕರು ತಮಗನಿಸಿದ್ದನ್ನು (ಚಿತ್ರಗಳನ್ನು ನೋಡಿ) ಬರಹ ರೂಪಕ್ಕಿಳಿಸಿದ್ದರು. ನಾನೂ ಸಹ ನನ್ನ ಅನಿಸಿಕೆಗಳನ್ನು ಆ ಪುಸ್ತಕದಲ್ಲಿ ಬರೆದೆನು. ಒಟ್ಟಿನಲ್ಲಿ ಪ್ರಕೃತಿಯಲ್ಲಿನ ವೈಶಿಷ್ಟ್ಯಗಳು, ಮಕ್ಕಳ ಹಿರಿಯರ ಭಾವನೆಗಳು, ದೂರದೇಶಗಳ ಬಗ್ಗೆ ಇವನ್ನೆಲ್ಲ ನೋಡುವ, ತಿಳಿಯುವ ಒಂದು ಉತ್ತಮ ಅವಕಾಶವಾಗಿತ್ತು.

ಇಲ್ಲಿ ೧೫-೨೦ ರ ವಯೋಮಾನದೊಳಗಿನ ಹುಡುಗ ತೆಗೆದಿರುವ ನಾಗರಹಾವಿನ ಚಿತ್ರ ಸೂಪರ್‌!!!. ಹಲವಾರು ಚಿತ್ರಗಳು ನಮ್ಮ ಮನಸ್ಸೆಂಬ ಕ್ಯಾಮೆರಾದಲ್ಲಿ ಖಂಡಿತ ದಾಖಲಾಗಿವೆ ಎಂದರೆ ಅಚ್ಚರಿಯೇನಿಲ್ಲ!

ನಿಮಗಾಗಿ ಇಲ್ಲೊಂದಿಷ್ಟು ಫೋಟೋಗಳಿವೆ. ಇಲ್ಲಿರುವ ಚಿತ್ರಗಳಿಗೆ ಶೀರ್ಷಿಕೆಯನ್ನು ನಾನು ಕೊಟ್ಟಿರುವುದಿಲ್ಲ. ಏಕೆಂದರೆ, ಚಿತ್ರಗಳೇ ಸಂಭಾಷಿಸುತ್ತವೆ ನೋಡುಗರೊಡನೆ!

ಇಲ್ಲಿ ಪ್ರದರ್ಶನಕ್ಕಿರುವ ಫೋಟೋಗಳನ್ನು ಸೆರೆಹಿಡಿಯಬಹುದೇ ಎಂದು ಅಲ್ಲಿದ್ದ ಸಂಚಾಲಕರನ್ನು ಕೇಳಿದೆ. ಅವರು ಧಾರಾಳವಾಗಿ ಎಂದರು. ಹಾಗಾಗಿ ಇಲ್ಲೊಂದಿಷ್ಟು ಚಿತ್ರಗಳು ನಿಮಗಾಗಿ...













ಚಿತ್ರ ಕೃಪೆ: ವೈ.ಪಿ.ಎಸ್. ಬೆಂಗಳೂರು
ಚಂದ್ರಶೇಖರ ಬಿ.ಎಚ್.೯.೨.೨೦೧೦

ಬುಧವಾರ, ಜನವರಿ 6, 2010

ಅವರ ಹಣೆ ಬರಹ??!!

ಇದು ಯಾರ ಬರೆದ ಕಥೆಯೋ,
ನನಗಾಗಿ ಬಂದ ವ್ಯಥೆಯೋ??

ಈ ಹಾಡಿನ ಸಾಲುಗಳನ್ನು ಕೆಲವೊಮ್ಮೆ ನಮ್ಮಷ್ಟಕ್ಕೆ/ ತಮ್ಮಷ್ಟಕ್ಕೆ/ ನಿಮ್ಮಷ್ಟಕ್ಕೆ ನೀವೇ ಹೇಳಿಕೊಂಡಿರಬಹುದು!?

ಇದೇಕೆ ಹೀಗೆಂದರೆ, ಕಳೆದವಾರ ಮೈಸೂರಿಗೆ ಹೋಗಿದ್ದಾಗ ಆದ ಅನುಭವ ಹಂಚಿಕೊಳ್ಳುವ ಎನಿಸಿತು.
ಚಾಮುಂಡಿ ಬೆಟ್ಟದ ತಪ್ಪಲಿಗೆ ಬರುವ, ನಂಜನಗೂಡಿನ ದಾರಿಯಲ್ಲಿರುವ ಶ್ರೀ ಸಚ್ಚಿದಾನಂದ ಗಣಪತಿ ಆಶ್ರಮಕ್ಕೆ ಹೋಗಿದ್ದೆವು. ವಾಪಸ್ಸು ಬರುವಾಗ ನಗರ ಬಸ್ ನಿಲ್ದಾಣ (ಇಲ್ಲಿ ನಬನಿ ಎಂದೇ ಪರಿಚಿತ) ಬಸ್ಸು ಬಂದಿತು. ಇನ್ನೂ ಹತ್ತುತ್ತಿರುವಾಗಲೇ ಚಾಲಕ ಹೊರಟ. ಕಷ್ಟಪಟ್ಟು ಹತ್ತಿದ್ದಾಯಿತು. ಮಕ್ಕಳೂ ಜೊತೆಯಲ್ಲಿದ್ದರು. ಒಬ್ಬ ವೃದ್ಧರು ತರಕಾರಿ ಚೀಲಗಳ ಸಮೇತ ಮೆಟ್ಟಿಲಲ್ಲಿ ಬೀಳುವಂತಾಗಿ ಜೋತಾಡಿದರು.
ಮುಂದಿನ ನಿಲ್ದಾಣದಲ್ಲಿ, ಕಾಲೇಜು ಹುಡುಗರು, ಹುಡುಗಿಯರು ಬಸ್ಸು ಹತ್ತುವಾಗಲೇ ಬಸ್ಸನ್ನು ಚಲಾಯಿಸಿದ ಚಾಲಕ. ಅದಕ್ಕೆ ಕಂಡಕ್ಟರನೂ ಸಮ್ಮತಿಸಿದ. ಒಂದು ಹುಡುಗ ಮತ್ತು ಹುಡುಗಿ ಪೂರ್ಣವಾಗಿ ಬೀಳುವುದೊಂದು ಬಾಕಿ. ಕೊನೆಗೂ ಬಸ್ಸು ಹತ್ತಿದರು. ನಾನೂ ಸಹ ನನ್ನ ತಂಗಿಯ ಮಗಳನ್ನು ಹತ್ತಿಸುವಾಗ ಹೀಗೇ ಆಗಿತ್ತು. ಕಂಡಕ್ಟ್ರ ಬಂದ. ನಿಲ್ಲಿಸಿ ಎಂದರೂ ರೈಟ್ ಹೇಳೋದ್ಯಾಕೆ? ಬಿದ್ದರೆ ಏನ್ರೀ ಮಾಡೋದು ಎಂದರೆ, ಅವನು ಸಾರಿ ಅಥವಾ ಬೇರೇನಾದರೂ ಹೇಳಬಹುದಿತ್ತು. ಆದರೆ, ಅವ ಅಂದಿದ್ದು ನನ್ನನ್ನಷ್ಟೇ ಅಲ್ಲ ಅಲ್ಲಿದ್ದ ಆ ಮೂರ್‍ನಾಲ್ಕು ಹುಡುಗ-ಹುಡುಗಿಯರನ್ನೂ ಕೆರಳಿಸಿತು.

ಬಿದ್ರೆ ಅವರ ಹಣೆ ಬರಹ. ನಾನೇನ್ಮಾಡಕ್ಕಾಗಲ್ಲ - ಈ ಮಾತು ಯಾವನಿಗೇ ಆಗಲಿ ಹೇಗಾಗಿರಬೇಡ?

ಆಮೇಲೆ, ಅಲ್ಲಿ ಬಸ್ಸು ನಿಲ್ಲಿಸುವ ಹಾಗಿಲ್ಲ. ಟ್ರಾಫಿಕ್ ಪೊಲೀಸರು ಬಿಡಲ್ಲ, ಎಂದು ಬೇರೇನೋ ಸಬೂಬು ಹೇಳಿದ. ಅಷ್ಟಕ್ಕೂ ಅಲ್ಲೇನೂ ಭಾರೀ ಸಂಚಾರ ದಟ್ಟಣೆಯಿರುವುದಿಲ್ಲ ಮತ್ತು ಜನರ ತಳ್ಳಾಟವೂ ಇರುವುದಿಲ್ಲ. ಅಲ್ಲದೆ ಅಲ್ಲಿ ನಿಲ್ದಾಣವೂ ಸಹ ಇದೆ. ನಾವೂ ಜಗಳ ಮಾಡಿದ್ದು ಆಯಿತು. ಉಪಯೋಗವೇನು? ಎಮ್ಮೆ ಮೇಲೆ ನೀರು ಸುರಿದಂತೆ ಅಷ್ಟೆ.

ಒಂದು ಹುಡುಗಿಯಂತೂ, ನಮ್ಮ ಸೀನಿಯರ್‍ಸ್ ಇದ್ದಿದ್ರೆ ಈವಯ್ಯನಿಗೆ ಸರಿಯಾಗಿ ಮಾಡ್ತಿದ್ರು, ಎಂದು. ಏಕೆಂದರೆ, ಆ ಹುಡುಗಿಯ ಕೈ ಬಾಗಿಲಿಗೆ ಸಿಕ್ಕು ತರಚಿತ್ತು.

ಆಗನ್ನಿಸಿದ್ದು, ಅವನಿಗೋ, ಅವನ ಆಪ್ತರಿಗೋ ಇದೇ ರೀತಿ ಆದರೆ ಅಥವಾ ಆಗಿದ್ದರೆ ಅವನ ಮನಸ್ಥಿತಿ ಹೇಗಿರುತ್ತೆ? ಒಬ್ಬರಿಗೆ ಕೆಡಕು ಬಯಸಬಾರದು. ಇಂತಹ ಚಾಲಕ/ನಿರ್ವಾಹಕರಿಂದ ಅವರಾಡುವ ಮಾತುಗಳಿಂದ ಜನರು ಮನಸ್ಸಿನಲ್ಲಿಯೇ ಅಥವಾ ಬಾಯಿಬಿಟ್ಟೇ ಹೇಳುವಂತಹ ಪ್ರಸಂಗಗಳಿವು.
ಇದು ಒಂದು ಬಸ್ಸಿನಲ್ಲಿನ ಸಂಚಾರದ ಅನುಭವವಲ್ಲ. ಹಿಂದಿನ ದಿನ ಬೃಂದಾವನಕ್ಕೆ ಹೋದಾಗಲೂ ಸಹ ಇದೇ ರೀತಿಯ ಚಿತ್ರಣಗಳನ್ನು ಕಂಡಿದ್ದೆ.

ಜನರೊಂದಿಗೆ ಪ್ರತಿನಿತ್ಯವೂ ಬೆರೆಯುವ ಇವರಿಗೆ ಸ್ವಲ್ಪವಾದರೂ ಸೌಜನ್ಯ, ಸಭ್ಯತೆ, ಕರುಣೆ ಇವೆಲ್ಲ ಇದ್ದರೆ ಪ್ರಯಾಣಿಕರು ಬಸ್ಸಿನ ಚಕ್ರಕ್ಕೆ ಸಿಲುಕಿ ನರಳುವುದು, ಯಾರದೋ ತಪ್ಪಿಗೆ, ಯಾರದೋ ಆತುರಕ್ಕೆ ಜೀವನ ಪರ್ಯಂತ ಅಂಗಹೀನರೋ, ಆಪ್ತರಿಗೆ ದೂರಾಗುವುದೋ ತಪ್ಪಿಸಬಹುದಲ್ಲವೇ?
***

ಗುರುವಾರ, ಜುಲೈ 30, 2009

ನಿಸರ್ಗ ಕ್ಯಾಲುಕ್ಯಲೇಟರನ್ನು ದ್ವೇಷಿಸುತ್ತದೆ

ಓ ದೇವರೇ,.. ಮಳೆ ಬರುತ್ತಿಲ್ಲ. ಬರಗಾಲ ಬಡಿದಂತಾಗುತ್ತಿದೆ.

ಮಳೆ ಬಂದು ಸುಮಾರು ದಿನಗಳಾಯಿತು. ಬಯಲುಸೀಮೆಗೆ ಮಳೆಯ ಹನಿಗಳೂ ಬೀಳುತ್ತಿಲ್ಲ. ಮಲೆನಾಡಿನ ಕಾಡುಗಳು ಕಡಿಮೆಯಾಗಿ ಮಳೆರಾಯನ ಬರುವಿಕೆ ಇಲ್ಲವಾಗುತ್ತಿದೆ. ಈ ಬಾರಿ ಮುಂಗಾರು ಕ್ಷೀಣವಾಗಿದೆ. ಕೆಲವೆಡೆ ಮಳೆ ಅಂದ್ರೆ ಮಳೆ ಅಂತೆ... ಹೀಗೆಲ್ಲ ನಾಡಿನಲ್ಲಿನ ಜನರ ಮಾತುಕತೆ ಸಾಗುತ್ತಿರುತ್ತದೆ.

ವೈಜ್ಞಾನಿಕವಾಗಿ ಹಾಗೂ ಸ್ಥಳೀಯವಾಗಿ ಜನರಲ್ಲಿ ಮಳೆಯ ಬಗ್ಗೆ ತಮ್ಮದೇ ಆದ ಅನುಭವ, ಅನುಭಾವಗಳು ಬೇರೂರಿರುತ್ತವೆ. ಇಲ್ಲೊಬ್ಬರು ಪ್ರಕೃತಿ ಮಾತೆಯನ್ನು ಹೀಗೆ ಹೊಗಳುತ್ತಾರೆ.

Nature is man's teacher. She unfolds her treasures to his search, unseals his eye, illumes his mind, and purifies his heart; an influence breathes from all the sights and sounds of her existence. ~Alfred Billings Street

ಆದರೆ, ಮನುಷ್ಯನ ಲೆಕ್ಕಾಚಾರದಂತೆ ಪ್ರಕೃತಿಯಲ್ಲಿ ಎಲ್ಲವೂ ನಡೆಯುವುದಿಲ್ಲ. ಪ್ರಕೃತಿಗೆ ತನ್ನದೇ ಪರಿಸರದ ಅನೇಕ ಕಾರಣಗಳಿರುತ್ತವೆ. ಬೇಸಗೆಯಲ್ಲಿಯೇ ಧೋ ಎಂದು ಮಳೆ ಸುರಿಯಬಹುದು, ಚಳಿಗಾಲದಲ್ಲಿ ಬೇಸಗೆಯ ಅನುಭವವೂ ಆಗಬಹುದು, ಮಳೆಗಾಲದಲ್ಲಿ ಮಳೆಯೇ ಇಲ್ಲವಾಗಬಹುದು. ಮಾನವನ ಲೆಕ್ಕಣಿಕೆಯಂತೆ ವರ್ಷದಲ್ಲಿ ಇಷ್ಟಿಷ್ಟು ತಿಂಗಳು ಬೇಸಗೆ, ಮಳೆ, ಚಳಿ, ಇತ್ಯಾದಿ ಇರಬಹುದು. ಆದರೆ ಪ್ರಕೃತಿಯಲ್ಲಿನ ಲೆಕ್ಕಾಚಾರವೇ ಬೇರೆ. ನಾವಿಲ್ಲಿ ಗುಣಿಸಿದರೆ ಅದು ಭಾಗಿಸಿ, ಕಳೆದು ಎಲ್ಲ ಲೆಕ್ಕ ಹಾಕಬಹುದು.
ಇದರೊಂದಿಗೆ ಮನುಷ್ಯನೇನು ಸಾಮಾನ್ಯನೇ? ಮಳೆ ಬಿತ್ತನೆ ಎಂಬ ಯೋಚನೆಯೊಂದಿಗೆ ಗ್ಲೋಬಲ್‌ ವಾರ್ಮಿಂಗ್ ಇವೆಲ್ಲದರ ಬಗ್ಗೆ ತಲೆಕೆಡಸಿಕೊಂಡರೂ ಪ್ರಕೃತಿಯು ತನ್ನದೇ ಆದ ಅಳತೆಗೋಲಿನಿಂದ ಈ ಭೂಗೋಳದಲ್ಲಿ ಬುಡುಬುಡಿಕೆಯಾಡುತ್ತದೆ.

`ಪ್ರಕೃತಿಯು ಮಾನವನ ಆಸೆಗಳನ್ನು ಪೂರೈಸಬಹುದು. ಆದರೆ ದುರಾಸೆಗಳನ್ನಲ್ಲ', ಎಂದು ಮಹಾತ್ಮಾ ಗಾಂಧಿಯವರ ಮಾತೊಂದಿದೆ. ಈ ಮಾತನ್ನು ಸರಿಯಾಗಿ ಅರ್ಥಮಾಡಿಕೊಂಡವರಿಗಿಂತ ಪ್ರಕೃತಿಯಿಂದಲೇ `ಅರ್ಥ' (ಹಣ) ಮಾಡಿಕೊಳ್ಳಲು ಹವಣಿಸುವವರೇ ಅಧಿಕ. ಅದರಿಂದಾಗಿಯೇ ಎಂತೆಂತಹ ಮಳೆಕಾಡುಗಳೂ ನಾಶವಾಗಿ ಹೋಗಿವೆ/ಹೋಗುತ್ತಿವೆ. ಹರಿಯುತ್ತಿದ್ದ ತೊರೆಗಳೆಲ್ಲ ತೆರೆಯಮರೆಗೆ ಸರಿದಿವೆ. ಕೆಲವು ಮೋರಿಗಳಾಗಿ ಢಾಳಾಗಿ ನಾರುತ್ತಿವೆ. ಇಲ್ಲೆಲ್ಲ ಮಾನವನ ದುರಾಸೆಯ ದೃಷ್ಟಿಯೇ ಕಾಣುತ್ತದೆ.

ಬೆಟ್ಟಗುಡ್ಡಗಳು, ಹೆಮ್ಮರಗಳು ಇವೆಲ್ಲ ನಾಶವಾಗುತ್ತಾ ಹೋದಾಗ ಮಳೆ ಮೋಡಗಳನ್ನು ತಡೆದು ಮಳೆಸುರಿಸುವ ಪ್ರಕೃತಿಯ `ಲೆಕ್ಕ' ತಪ್ಪಾಗಿ ಹೋಗುತ್ತಿದೆ. ಬಿಸಿಲಬೇಗೆ, ಚಳಿಗಾಲ ಇವೆಲ್ಲ ಏರುಪೇರಾಗಿ ಕೆಲವೆಡೆ ಪ್ರವಾಹಗಳೇರ್ಪಟ್ಟರೆ, ಹಲವೆಡೆ ವಾತಾವರಣದಲ್ಲಿನ ತಾಪಮಾನ ಮಾನವನ ಲೆಕ್ಕಾಚಾರಕ್ಕಿಂತಲೂ ಏರುಪೇರಾಗುತ್ತಿವೆ. ಇಂತಹ ಮಾನವನ ದುರಾಸೆಯ ಕಾರಣದಿಂದಲೇ ರಾಲ್ಫ್‌ ವಾಲ್ಡೋ ಎಮರ್ಸ್‌ನ್‌ ಅವರು ಹೀಗೆ ಹೇಳಿರಬೇಕು?! Nature hates Calculators ಎಂದು.

ಈ ಭೂಮಂಡಲದಲ್ಲಿ ಇವನ್ನೆಲ್ಲ ಸರಿದೂಗಿಸಲು ಮತ್ತೊಂದು ಪ್ರಕೃತಿಯ ನಕಲು ಭೂಮಿಯು ನಮಗಿಲ್ಲ. ಅಂದರೆ, ವಿನ್ಸ್‌ಟನ್‌ ಚರ್ಚಿಲ್‌ ರವರು ಹೇಳಿರುವಂತೆ `Nature will not be admired by proxy'.


++++++++++++++++++++++++
ನಾಳೆ ಶ್ರೀ ವರಮಹಾಲಕ್ಷ್ಮೀ ಹಬ್ಬ. ಎಲ್ಲರಿಗೂ ಆ ದೇವಿಯು ಶಾಂತಿ, ಸೌಭಾಗ್ಯಗಳನ್ನು ಅನುಗ್ರಹಿಸಲಿ. ಎಲ್ಲರಿಗೂ ಹಬ್ಬದ ಶುಭಾಶಯಗಳು.
++++++++++++++++++++++++
ಲೇಖನ: ಚಂದ್ರಶೇಖರ ಬಿ.ಎಚ್.
೩೦೦೭೨೦೦೯

ಬುಧವಾರ, ಜುಲೈ 1, 2009

ಸ್ವಾತಂತ್ರ್ಯ ಜನ್ಮ ಸಿದ್ಧ ಹಕ್ಕು - ಆದರೆ... - ಭಾಗ 2

ಸ್ವಾತಂತ್ರ್ಯ ಜನ್ಮ ಸಿದ್ಧ ಹಕ್ಕು - ಆದರೆ... ಈ ರೀತಿಯೆ? - ಭಾಗ 2

ಇದು ಒಂದು ವಿಧದಲ್ಲಿ ರಾಷ್ಟ್ರೀಯ ಹಬ್ಬ ಅಥವಾ ಯಾವುದೇ ಧಾರ್ಮಿಕ ಹಬ್ಬಗಳಲ್ಲಿ ಆಚರಣೆಯಾದರೆ, ಕೆಲವರು ತಮ್ಮ ಸ್ವಾತಂತ್ರ್ಯವನ್ನು ಮತ್ತೊಂದು ರೀತಿಯಲ್ಲಿ ಆಚರಿಸುವವರೂ ಇದ್ದಾರೆ. ರಾಷ್ಟ್ರೀಯ ಅಥವಾ ನಾಡ ಹಬ್ಬಗಳಲ್ಲಿ ಧ್ವಜಾರೋಹಣ ಮಾಡುವಾಗ ಇರುವ ಶ್ರದ್ಧೆ, ಗೌರವ ಧ್ವಜವನ್ನು ಇಳಿಸಬೇಕಾದರೂ ಇರುವುದು ಮುಖ್ಯ. ಇದರ ಬಗ್ಗೆ ತಿಳಿದವರು ಬಹಳ ಕಡಿಮೆ ಜನರಿದ್ದಾರೆಂದರೆ ತಪ್ಪಾಗಲಾರದು. ರಾಷ್ಟ್ರಧ್ವಜವನ್ನು ಎಲ್ಲಿ, ಯಾವ ವೇಳೆ ಮತ್ತು ಯಾವ ಎತ್ತರದಲ್ಲಿ ಹಾರಿಸಬೇಕು ಎಂದೂ ತಿಳಿದಿರಬೇಕು. ಕೆಲವೊಮ್ಮೆ ಧ್ವಜವನ್ನು ವಾಹನಗಳಿಗೆ ಕಟ್ಟಿ ತಮ್ಮ ದೇಶಪ್ರೇಮವನ್ನೇನೋ ತೋರಿಸುತ್ತಾರೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಧ್ವಜವನ್ನು ೨-೩ ದಿನಗಳಾದರೂ, ಬಿಸಿಲಲ್ಲಿ, ಮಳೆ-ಗಾಳಿಯಲ್ಲಿ ಹಾರಾಡಿ ಹರಿಯುವವರೆಗೂ ಗಮನಿಸುವ ವಿಚಾರವೇ ಅನೇಕ ಜನರಲ್ಲಿ ಇಲ್ಲವಾಗಿದೆ. ಇನ್ನು ರಾಷ್ಟ್ರಗೀತೆ, ನಾಡಗೀತೆ ಇವುಗಳಿಗೆ ಗೌರವ ತೋರುವ ವಿಚಾರದಲ್ಲೂ ಅಸಡ್ಡೆ ಕಂಡುಬರುತ್ತಿರುತ್ತದೆ. ಇವೆಲ್ಲ ಸ್ವಾತಂತ್ರ್ಯ ನಂತರದ ಸ್ವತಂತ್ರ ಪ್ರವೃತ್ತಿಯೇ ಆಗಿದೆ ಮತ್ತು ಇಂತಹ ಅನೀತಿಗಳನ್ನು ನಿವಾರಿಸಬೇಕಾಗಿರುತ್ತದೆ.


ಮೇಲಿನ ರೀತಿಗಳಲ್ಲಿ ಇದೊಂದು ಬಗೆಯ ಅಗೌರವ ತೋರುವ ದ್ಯೋತಕವಾದರೆ, ಇನ್ನೊಂದು ಬಗೆಯದು ಒಟ್ಟಿಗೇ ಅನೇಕ ಸಮಾರಂಭಗಳಲ್ಲಿ ಭಾಗವಹಿಸಲು ಸಮ್ಮತಿಸುವುದು. ತಮ್ಮ ಹೆಸರನ್ನು ಆಮಂತ್ರಣ ಪತ್ರಿಕೆಗಳಲ್ಲಿ ಹಾಕದಿದ್ದರೆ ಸಂಘಟಕರನ್ನು ನಿಂದಿಸುವುದು. ಅದಕ್ಕಿಂತಲೂ ಹೆಚ್ಚಾಗಿ ದೇಶದ ಅಭಿವೃದ್ಧಿ ಕುರಿತು ಭಾಷಣ ಮಾಡುವ ಆತುರ ತೋರಿ ಎಲ್ಲೆಡೆಯೂ ಅಚಾತುರ್ಯವಾಗುವಂತಹ ಕೆಲಸ ಮಾಡುವುದು ಆಗಾಗ ಕಂಡು ಬರುವ ವಿಚಾರ. ಹಾಗೆಯೇ ಶಾಲೆ-ಕಾಲೇಜು ಸಮಾರಂಭಗಳಿಗೆ ಸಮಯಕ್ಕೆ ಸರಿಯಾಗಿ ಬರದೇ ಶಾಲಾ ಮಕ್ಕಳನ್ನು ಬಿಸಿಲು, ಮಳೆ, ಚಳಿಯಲ್ಲಿ ಕಾದಿರಿಸಿ ಅವರ ಆಟ-ಪಾಠಗಳ ಸ್ವಾತಂತ್ರ್ಯವನ್ನು ಕಸಿದುಕೊಂಡು ಸಾಧಿಸುವುದಾದರೂ ಏನಿರಬಹುದು? ಶೂನ್ಯವೆನ್ನಬಹುದೇ ಅಥವಾ ಪತ್ರಿಕಾ ಪ್ರಚಾರಕ್ಕೆ ಅವಕಾಶವಾದಿಗಳೆನ್ನಬಹುದೆ?


ಪರರ ಸ್ವಾತಂತ್ರ್ಯವನ್ನು ಮತ್ತು ಅವರ ಆಸ್ತಿ ಹಕ್ಕುಗಳನ್ನು ತಂತ್ರಗಾರಿಕೆಯಿಂದ ಕಸಿದುಕೊಳ್ಳುವ ಬುದ್ಧಿವಂತರಿಗೇನೂ ಕಡಿಮೆಯಿಲ್ಲ. ಇಂತಹ ಘಟನೆಗಳು ನಿಜಜೀವನ ಹಾಗೂ ಕಥೆ, ಕಾದಂಬರಿ, ಸಿನಿಮಾ-ಧಾರಾವಾಹಿಗಳಲ್ಲಿ ಅನುಭವಕ್ಕೆ ಕಂಡುಬರುತ್ತಲೇ ಇರುತ್ತವೆ. ಯಾರದೋ ಜಮೀನು, ಆಸ್ತಿ-ಮನೆ ಇಂತಹವುಗಳನ್ನು ಸ್ವಂತದ್ದೆಂದು ನಂಬಿಸಿ ಇತರರಿಗೆ ಮಾರಾಟ ಮಾಡುವುದೂ ಒಂದು ವಿಧದ ಸ್ವಾತಂತ್ರ್ಯ ಹರಣವೇ ಹೌದು. ಇಲ್ಲಿಯೂ ಸಹ ಸ್ವಚ್ಛಂದ ವ್ಯವಹಾರವು ಯಾರನ್ನೋ ತಮ್ಮ ಇಚ್ಛಾನುಸಾರ ಸಾರಾಸಗಟಾಗಿ ಕಷ್ಟಕೋಟಲೆಗಳಿಗೆ ತಳ್ಳುವ ಸ್ವಾತಂತ್ರ್ಯತೆಯೇ ಮೆರೆಯುತ್ತಿದೆ.


ಇನ್ನು ಯಾವುದಾದರೂ ಒಬ್ಬ ಪ್ರಸಿದ್ಧ ಸಾಹಿತಿಯ ಕಾದಂಬರಿಯೋ, ಒಂದು ಪುಸ್ತಕವೋ ಬಿಡುಗಡೆಗೆ ಸಿದ್ಧವಾಗಿದೆಯೆಂದು ತಿಳಿದಾಕ್ಷಣವೇ ಮೂಲ ಪ್ರಕಾಶಕರ/ನದ ಪ್ರತಿಗಳು ಬೇರೆಲ್ಲೋ ಸ್ವತಂತ್ರವಾಗಿ ಪ್ರಕಟಿಸುವ ಕೆಲವರ ಸ್ವಾತಂತ್ರ್ಯಯಾಭಿಮಾನವಂತೂ ಅಬ್ಬಬ್ಬಾ ಎನಿಸುತ್ತದೆ.
ಇತ್ತೀಚಿನ ದಿನಗಳಲ್ಲಿ ಪೋಷಕರು-ಮಕ್ಕಳು ಇವರ ಹಣದಾಸೆಗಿನ ಮನೋಭಾವ ಸ್ವೇಚ್ಛೆಯಾಗಿ ಪರೋಪಕಾರದ ನೆಪದಲ್ಲಿ ವಂಚಿಸುವ ಹಂತ ತಲುಪಿದೆ. ಅಲ್ಲದೆ ಪ್ರತ್ಯಕ್ಷವಾಗಿಯೇ ಪೋಷಕರು ತಮ್ಮ ಮಕ್ಕಳಿಗೆ ಸ್ವಚ್ಛಂದವಾಗಿ ಬದುಕಲು ಹಣಬೇಕು ಎಂಬ ಕಾರಣ (ತಲೆದುಂಬಿಸಿ)ನೀಡಿ ವಂಚನೆ, ಕೊಲೆ ಇತ್ಯಾದಿ ಕುಕೃತ್ಯಗಳಲ್ಲಿ ಪಾಲ್ಗೊಳ್ಳುವಷ್ಟು ಸ್ವಾತಂತ್ರ್ಯವನ್ನು ನೀಡುತ್ತಿರುವುದು ವಿಷಾದನೀಯ. ಇಂತಹ ದೃಶ್ಯಗಳನ್ನು ಚಲನಚಿತ್ರಗಳಲ್ಲಿ ಕಾಣುತ್ತಿದೆವು. ಆದರೆ ಇಂದು ಈ ದೃಶ್ಯಾವಳಿಗಳು ನಮ್ಮ ನಿಮ್ಮ ಅಕ್ಕಪಕ್ಕದಲ್ಲೇ ನಡೆಯುತ್ತಿರುವುದು ನಿಜಕ್ಕೂ ಗಾಬರಿಯುಂಟು ಮಾಡುತ್ತಿವೆ. ಇದೂ ಸಹ ಒಂದು ವಿಧದಲ್ಲಿ ಸ್ವಾತಂತ್ರ್ಯವೇ ಎನ್ನಬಹುದು!!


ಇನ್ನು ಸಿನಿಮಾ ಪೋಸ್ಟರಗಳು, ಅಶ್ಲೀಲ ಚಿತ್ರಗಳು, ಗೋಡೆಬರಹಗಳು ಮುಂತಾದವುಗಳನ್ನು ಇಲ್ಲಿ ಚೀಟಿ ಅಂಟಿಸಬಾರದು ಎಂಬ ಸ್ಥಳಗಳಲ್ಲೇ ಅಂಟಿಸಿ ಪರರ ಮನೆಯ, ಕಛೇರಿಯ ಗೋಡೆಗಳನ್ನು ಅವಲಕ್ಷಣದ ಪಾತ್ರಗಳನ್ನಾಗಿ ಸೃಷ್ಟಿಸುವುದು ಯಾವ ಪರಿಯ ಸ್ವಾತಂತ್ರ್ಯ ಎಂದು ನೀವೇ ಊಹಿಸಿ ನೋಡಿ. ಹಾಗೂ ಶುಭಾಶಯ ಕೋರುವ ನೆಪದಲ್ಲಿ ದೊಡ್ಡ ದೊಡ್ಡ ಬ್ಯಾನರುಗಳು, ಭಿತ್ತಿಪತ್ರಗಳ ಭರಾಟೆಯಂತೂ ಎಲ್ಲೆಲ್ಲೂ ಮುಕ್ತವಾಗಿ ಕಾಣಿಸುವುದು ಅತಿರೇಕವೆನಿಸುತ್ತದೆ. ಜೊತೆಗೆ ರಸ್ತೆಗಳ ಇಕ್ಕೆಲಗಳಲ್ಲಿ, ಗಲ್ಲಿಗಲ್ಲಿಗಳಲ್ಲಿ ಭಿತ್ತಿಪತ್ರಗಳು, ಬ್ಯಾನರ್‌ಗಳು, ಕಟೌಟ್‌ಗಳು ಇವುಗಳು ಪದೇ ಪದೇ ತಲೆ ಎತ್ತಿನಿಲ್ಲುವಷ್ಟು ಸ್ವಾತಂತ್ರ್ಯವು ಹಗಲಿರುಳು ಕಾಣುತ್ತಿರುತ್ತವೆ. ಇದು ಸ್ವಾತಂತ್ರ್ಯ ದ ಪರಾಕಾಷ್ಠೆಯಲ್ಲದೆ ಮತ್ತೇನು?


ಇತ್ತ ಕಡೆ ತ್ಯಾಜ್ಯದ ವಿಲೇವಾರಿಯು ಖಾಲಿ ನಿವೇಶನಗಳಲ್ಲಿ, ಶಾಲಾ-ಕಾಲೇಜುಗಳ ಮೈದಾನಗಳಲ್ಲಿ, ರಸ್ತೆಯಲ್ಲಿ ಹೀಗೆ ಎಲ್ಲೆಂದರಲ್ಲಿ ಕಟ್ಟಡ ನಿರ್ಮಾಣಗಳ ತ್ಯಾಜ್ಯಗಳು, ಮನೆ-ಜಾನುವಾರುಗಳ ಕಸ, ಪ್ಲಾಸ್ಟಿಕ್ ವಸ್ತುಗಳು, ಇತ್ಯಾದಿಗಳನ್ನು ಹಾಕುವುದೂ ಇತ್ತೀಚೆಗೆ ಸ್ವತಂತ್ರ್‍ಯ ಪ್ರಚೋದನೆಯಾಗಿದೆ.


ಸಾಕುಪ್ರಾಣಿಗಳ ಮಲಮೂತ್ರ ವಿಸರ್ಜನೆಯ ಸ್ಥಳಗಳಂತೂ ಸಾರ್ವಜನಿಕ ರಸ್ತೆ ಹಾಗೂ ಪರಿಚಿತರ ಅಥವಾ ಅಪರಿಚಿತರ ಮನೆಗಳ ಮುಂದೆಯೇ ಸ್ವಚ್ಛಂದವಾಗಿ ಮಾಡಿಸುವ ಜನರಿಗೇನೂ ಕಡಿಮೆಯಿಲ್ಲ. ತಾವು, ತಮ್ಮ ಮನೆಯ ಸ್ವಚ್ಛತೆ ಇಂತಹ ಸ್ವಂತ ವಿಚಾರವೇ ಇವರುಗಳಲ್ಲಿ ಹೆಚ್ಚಾಗಿದ್ದು ಬೇರೆಯವರ ಸ್ವಾತಂತ್ರ್‍ಯವನ್ನು ಕಸಕ್ಕಿಂತ ಕಡಿಮೆಯಂತೆ ಕಾಣುವ ಪ್ರವೃತ್ತಿ ಹೆಚ್ಚಾಗುತ್ತಿವೆ. ಜೊತೆಗೆ ಪರದೇಶಗಳಲ್ಲಿ ಸಾಕು ಪ್ರಾಣಿಗಳ ಪೋಷಣೆ, ನಿರ್ವಹಣೆಯ ಬಗ್ಗೆ ಬೇಕಾದಷ್ಟು ಹೆಮ್ಮೆಯಿಂದ ಮಾತನಾಡುವ ಇಂತಹ ಜನರಿಗೆ ತಮ್ಮದೇ ರಸ್ತೆಯ, ಸುತ್ತಮುತ್ತಲಿನ ಪರಿಸರದ ನಿಜ ವಿಚಾರಗಳು ತಿಳಿಯದಿರುವುದು ನಿಜಕ್ಕೂ ವಿಷಾದದ ವಿಚಾರ.


ಒಟ್ಟಿನಲ್ಲಿ ಸ್ವಾತಂತ್ರ್ಯ ದಿನೋತ್ಸವವನ್ನೇ ಆಗಲಿ ಅಥವಾ ಪರರ ಸ್ವಾತಂತ್ರ್ಯದ ಸಂತಸವನ್ನೇ ಆಗಲಿ ಸರ್ವತಂತ್ರ ಸ್ವತಂತ್ರ ಸ್ಚೇಚ್ಛಾಪ್ರವೃತ್ತಿಯಿಂದ ಆಚರಿಸದೇ ಶ್ರದ್ಧೆ, ಆಸಕ್ತಿ, ದೇಶಕ್ಕೆ ಮತ್ತು ಪ್ರಜೆಗಳಿಗೆ ಗೌರವ ತರುವ ರೀತಿಯಲ್ಲಿ ಆಚರಿಸಬೇಕು. ಅದನ್ನು ಬಿಟ್ಟು ಸ್ವಚ್ಛಂದ ವರ್ತನೆಯಿಂದ, ದ್ವೇಷದಿಂದ ಬಡಿದಾಡುವ, ದೇಶಕ್ಕೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆ ತರುವಂತೆ ಆಚರಿಸಬಾರದು ಎಂದು ಅರಿವು ಮೂಡಿಸುವುದಾದರೂ ಹೇಗೆ? ಅಥವಾ ಸ್ವಾತಂತ್ರ್ಯ ವೆಂದರೆ ಏನು? ಸ್ವಚ್ಛಂದ ಪ್ರವೃತ್ತಿಯಿಂದ ತಮಗೆ ಇಚ್ಛೆಬಂದಂತೆ ಬದುಕುವುದೇ ಅಥವಾ ತಮ್ಮತನವನ್ನು ಎಲ್ಲೆ ಮೀರಿ ಪ್ರದರ್ಶಿಸುವುದೆ? ಎಂಬುದೇ ಸ್ವತಂತ್ರ ಪ್ರಶ್ನೆಯಾಗಿದೆ!!


ಇಲ್ಲಿಗೆ ಮುಗಿಯುವುದಿಲ್ಲ. ಇದು ಮುಂದುವರೆಯುತ್ತಲೇ ಇರುತ್ತದೆ...

ಸ್ವಾತಂತ್ರ್ಯ ಜನ್ಮ ಸಿದ್ಧ ಹಕ್ಕು - ಆದರೆ...

ಸ್ವಾತಂತ್ರ್ಯ ಜನ್ಮ ಸಿದ್ಧ ಹಕ್ಕು - ಆದರೆ... ಈ ರೀತಿಯೆ?

ಭಾರತ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ, ಅರವತ್ತು ಮತ್ತೊಂದು ವರ್ಷವಾಗುತ್ತಾ ಬಂದಿದೆ..... ಆದರೆ, ಜನರ ಮನಸ್ಸಿನಲ್ಲಿ ಸ್ವಾತಂತ್ರ್ಯವೆಂದರೆ ಏನೆಲ್ಲಾ ಇರಬಹುದು? ಈ ಕುರಿತು ಕೆಲವಾರು ಅನಿಸಿಕೆಗಳು ಮತ್ತು ಗುಣಲಕ್ಷಣಗಳು ಕಂಡುಬಂದಿದ್ದು ಹೀಗೆ.

ಸ್ವಚ್ಛಂದ ನಡವಳಿಕೆಯೇ ಸ್ವಾತಂತ್ರ್ಯವೆಂದು ಇಂದಿನ ಯುವ-ಮತ್ತು ವಿದ್ಯಾವಂತ ಜನರಲ್ಲಿ ಮನೆ ಮಾಡಿಕೊಂಡಿದೆ ಎನಿಸುತ್ತಿದೆ. ಯಾವುದೇ ರಾಷ್ಟ್ರೀಯ ಹಬ್ಬವಾಗಿರಲಿ, ನಾಡಹಬ್ಬವಾಗಿರಲಿ ಆ ದಿನದಂದು ಎಲ್ಲೆಲ್ಲೂ ರಜೆ-ಮಜಾದ ವಾತಾವರಣ ಕಾಣುತ್ತೇವೆ. ಆದರೆ ಈ ನೆಲದ, ದೇಶದ, ಜನಾಂಗದ ಸಂಸ್ಕೃತಿ ಇವೆಲ್ಲ ಈ ಹಬ್ಬಗಳಂದು ಶೂನ್ಯವಾದವೇ ಎನ್ನುವಷ್ಟು ಜನರಲ್ಲಿ ಸ್ವಚ್ಛಂದ ಪ್ರವೃತ್ತಿ ಹರಡುತ್ತಿದೆ. ರಜೆ ಬಂದಿತೆಂದರೆ ಆ ದಿನವನ್ನು ಒಂದು ಒಳ್ಳೆಯ ಕೆಲಸಕ್ಕಾಗಿ ಉಪಯೋಗಿಸುವುದು ಅಪರೂಪವಾಗುತ್ತಿದೆ.

ರಾಷ್ಟ್ರೀಯ, ನಾಡ ಹಬ್ಬಗಳೇ ಇರಲಿ ಅಥವಾ ಧಾರ್ಮಿಕ ಹಬ್ಬಗಳೇ ಇರಲಿ ದಶಕಗಳ ಹಿಂದೆ ಮದ್ಯ ಮತ್ತು ಮಾಂಸದಂಗಡಿಗಳು ಹಬ್ಬಗಳ ಮುನ್ನಾದಿನ ಮುಚ್ಚಿರುತ್ತಿದ್ದವು. ಆದರೆ ಇದೀಗ ಎಲ್ಲೆಲ್ಲೂ ಸ್ವಾತಂತ್ರ್ಯದ ಛಾಯೆ ಆವರಿಸಿ, ಇದೇ ವಿಶೇಷ ದಿನಗಳಂದು ಈ ಅಂಗಡಿಗಳು ದಿನಪೂರ್ತಿ ತೆರೆದೇ ಇರುತ್ತವೆ. ಬೇರೆಲ್ಲ ದಿನಗಳಿಗಿಂತ ಇಂತಹ ರಜಾ ಅಥವಾ ಹಬ್ಬದ ದಿನಗಳಂದೇ ಚುರುಕಿನ, ಬಿರುಸಿನ, ಅಧಿಕ ವ್ಯಾಪಾರ ನಡೆಯುತ್ತದೆ. ಇದು ನಿಜವಾಗಲೂ ಸ್ವಾತಂತ್ರ್‍ಯದ ಹೆಸರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಂಡುಬರುತ್ತಿರುವ ಪ್ರವೃತ್ತಿಯಾಗಿದೆ. ಕೆಲವು ವರ್ಷಗಳ ಹಿಂದೆ ಇಂತಹ ದಿನಗಳ ಮುನ್ನಾದಿನ ಪತ್ರಿಕಾ ಪ್ರಕಟಣೆಯಲ್ಲಿ ಇಂತಹ ದಿನದಂದು ಮದ್ಯ-ಮಾಂಸ ಮಾರಾಟ ನಿಷೇಧ ಎಂದು ಕಂಡು ಬರುತ್ತಿದ್ದವು. ಜೊತೆಗೆ ಅಂಗಡಿಗಳವರೇ ಈ ದಿನಗಳಲ್ಲಿ ವ್ಯವಹಾರ ಬಂದ್ ಮಾಡುತ್ತಿದ್ದರು. ಆದರೆ, ಇಂದಿನ ಜನರಲ್ಲಿ ಕನಿಷ್ಠ ಇಂತಹ ನಡವಳಿಕೆ ಕಂಡುಬರದಿರುವುದು ಆತಂಕದ ವಿಚಾರವೇ ಸರಿ. ಅಲ್ಲದೆ ಸರ್ಕಾರವೂ ಸಹ ಇವುಗಳ ಬಗ್ಗೆ ಅಥವಾ ದೇಶದ ಸಂಸ್ಕೃತಿ, ರೀತಿ ನೀತಿಗಳನ್ನು ಗಾಳಿಗೆ ತೂರಿ ಜನರಲ್ಲಿ ಸ್ವಚ್ಛಂದ ಪ್ರವೃತ್ತಿಗೆ ದಾರಿ ಮಾಡಿಕೊಡುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಕನಿಷ್ಠ ಇಂತಹ ರಾಷ್ಟ್ರೀಯ ಹಬ್ಬ ಅಥವಾ ಧಾರ್ಮಿಕ ದಿನಾಚರಣೆಗಳಂದು ಮದ್ಯ ಮಾಂಸ ಮಾರಾಟ ನಿಷೇಧವನ್ನು ಜಾರಿಗೊಳಿಸಿದರೆ ಕುಡಿತದ ಸ್ವಾತಂತ್ರ್ಯಕ್ಕೆ ಧಕ್ಕೆಯೇನೂ ಬರುವುದಿಲ್ಲ ಅಲ್ಲವೆ? ಅದರಲ್ಲೂ ಇಂದಿನ ಯುವ ಜನಾಂಗವು ಭಾರತೀಯ ಸಂಸ್ಕೃತಿಯಿಂದ ದೂರವಾಗುತ್ತಿರುವುದು ವಿಷಾದನೀಯ. ಇಂದಿನ ಯುವ ಮತ್ತು ವಿದ್ಯಾವಂತ ಜನರಲ್ಲಿ ಆರ್ಥಿಕ ಸ್ವಾತಂತ್ರ್ಯ ಇಂತಹ ಸ್ವಚ್ಛಂದ ನಡವಳಿಕೆಗೆ ಕಾರಣವಾಗಿದೆ. ಒಂದು ದೇಶದ ಘನತೆ, ಸಂಸ್ಕೃತಿಯನ್ನು ಉಳಿಸಿ, ಪೋಷಿಸಿಕೊಂಡು ಹೋಗಬೇಕಾದ ಜನತೆಯು ಸ್ವಾತಂತ್ರ್ಯದಿನದಂದೇ ಕುಡಿತದ ಚಟಗಳನ್ನು ಸ್ವಚ್ಛಂದವಾಗಿ ಆಚರಿಸುವುದರಿಂದ ದೇಶದ ಘನತೆಗೆ, ಅಸ್ತಿತ್ವಕ್ಕೆ ಕುಂದುಂಟಾಗುತ್ತದೆ. ಜೊತೆಗೆ ಜನರಲ್ಲಿ ವಿಶ್ವಾಸ, ಸದ್ಗುಣಗಳಿಗಿಂತ ಆಘಾತಕಾರೀ ಅಂಶಗಳಿಗೆ ಕಾರಣೀಭೂತವಾಗುತ್ತದೆ. ಇದು ಒಂದು ವಿಧದಲ್ಲಿ ದೇಶಕ್ಕೆ ಹಾಗೂ ಜನತೆಗೆ ಅಗೌರವ ತರುವ ವಿಚಾರವೇ ಆಗಿದೆ. ಈ ರೀತಿಯ ವ್ಯವಹಾರಗಳು ದೇಶದ್ರೋಹಕ್ಕೆ ಸಮಾನವೆಂದೇ ತಿಳಿಯಬಹುದು.

(ಮುಂದುವರೆಯುವುದು)
ಚಂದ್ರಶೇಖರ ಬಿ.ಎಚ್.
ಈ ಲೇಖನವನ್ನು ೨೦೦೭ ರಲ್ಲಿಯೇ ಬರೆದಿದ್ದೆ. ಒಂದಿಷ್ಟು ಬದಲಾವಣೆಯೊಂದಿಗೆ ಇಲ್ಲಿ ಬರೆದಿದ್ದೇನೆ.

ಮಂಗಳವಾರ, ಜೂನ್ 9, 2009

ಬದುಕು ವಿಚಿತ್ರ-1

ಇದೀಗ ಇವನಿಗೆ ಸುಮಾರು ೨೨-೨೩ ರ ಪ್ರಾಯ. ಸುಂದರವಾಗಿದ್ದಾನೆ. ಕಣ್ಣುಗಳಲ್ಲಿ ಅದೆಂತಹ ಹೊಳಪಿತ್ತು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ. ಬುದ್ಧಿವಂತ ಎಂದು ಅವನಿಗೆ ಡಬಲ್ ಪ್ರೊಮೋಷನ್‌ ಸಿಕ್ಕಿ ಮೇಲಿನ ತರಗತಿಯಲ್ಲಿದ್ದ. ಶಾಲೆಯಲ್ಲಿ ವಿವಿಧ ಚಟುವಟಿಕೆಗಳಲ್ಲಿ ಬಹುಮಾನ ಪಡೆದು ಬರುತ್ತಿದ್ದ.

ಅದ್ಯಾವಾಗ ದೂರದ ಶಾಲೆಗೆ, ಉತ್ತಮವಾದ ಶಾಲೆಗೆ ಸೇರಿದನೋ ಅವನಲ್ಲಿದ್ದ ಆ ಸಗುಣಗಳೆಲ್ಲ ಎಲ್ಲಿ ಮಾಯವಾಯಿತೋ? ಏನಾಗಿದೆ ಇವನಿಗೆ?

ಶಾಲೆ ೧೦ನೇ ತರಗತಿ ಮುಗಿಸಿರಬೇಕು! ಕೆಲಸ ನನಗೆ ಒಗ್ಗುವುದಿಲ್ಲ ಎಂದು ಮೊಂಡು ಬಿದ್ದಿದ್ದಾನೆ.

ಯಾವ ಕಷ್ಟಗಳನ್ನೂ ನೀಡದೆ ಇವನನ್ನು ಬೆಳೆಸಿದ್ದಾಳೆ, ಇವನ ಅಮ್ಮ. ತನಗಾಗಿ ಏನೆಲ್ಲ ಮಾಡಿದ್ದಾಳೆ. ಅವಮಾನ, ಅಸಹಾಯಕತೆ ಇವೆಲ್ಲವನ್ನೂ ಮೆಟ್ಟಿ ನಿಂತಿದ್ದಾಳೆ. ಅವನಿಗೆ ಉಸಿರಾಟದ ತೊಂದರೆಯಿದ್ದಾಗ ಔಷಧಿ, ಡಾಕ್ಟ್ರು ಎಂದೆಲ್ಲಾ ಅದೆಷ್ಟು ದುಡಿದ ಹಣವನ್ನೆಲ್ಲಾ ಸುರಿದಿದ್ದಾಳೆ. ಅವನ ಓದಿಗಾಗಿ, ಅವನ ಭವಿಷ್ಯಕ್ಕಾಗಿ ಅದೆಷ್ಟೇ ಕಷ್ಟವಿದ್ದರೂ ಅವನಿಗಾಗಿ ತನ್ನ ಜೀವವನ್ನೇ ತೇಯ್ದಿದ್ದಾಳೆ.

ಅವನ ಪ್ರತಿಯೊಂದು ಹುಟ್ಟುಹಬ್ಬದಂದೂ ಉಡುಗೊರೆ ಕೊಡಿಸಿದ್ದಾಳೆ. ಫೋಟೋ ತೆಗೆಸಿದ್ದಾಳೆ. ನಟನೆ ಕಲಿಯುತ್ತೇನೆಂದಾಗ ತಾನೇ ಮುಂದೆ ನಿಂತು ಅವನಿಗೆ ಫೋಟೋ ಸೆಷನ್‌ಗಾಗಿ ವಿವಿಧ ಡ್ರೆಸ್‌ಗಳನ್ನು ಕೊಡಿಸಿದ್ದಾಳೆ. ಆದರೆ ಅವಳು ತನಗೇನೂ ಮಾಡಿಲ್ಲ, ಕೂಡಿಟ್ಟಿಲ್ಲ ಎಂಬ ಹುಂಬತನ ಇವನದ್ದು. ತನಗಾಗಿ ಅವಳು ಏನೇನೂ ಮಾಡಿಲ್ಲ ತನಗೆ ಎಂದೇ ವಾದಿಸುತ್ತಿದ್ದಾನೆ.
ಉತ್ತಮ ಮಕ್ಕಳ ಜೊತೆ ಬೆರೆಯಲಿ ಎಂದು ಅದೆಷ್ಟು ಮನೆಗಳನ್ನು ಬದಲಾಯಿಸಿದಳೋ, ಅದೆಷ್ಟು ಕಷ್ಟಪಟ್ಟಳೋ ಆ ದೇವರೇ ಬಲ್ಲ.

ಇತ್ತೀಚೆಗಂತೂ ಇವನ ಕಾಟ ತಾಳಲಾರದಷ್ಟಾಗಿದೆ. ಕಾರಣ ಹಣ, ಹಣ.

ದುಡಿದಿದ್ದರಲ್ಲಿ ಅರ್ಧಭಾಗ ಇವನ ಖರ್ಚಿಗೆ. ಇನ್ನೊಂದು ವರ್ಷ ಸರಿಯಾಗಿ ಕಂಪ್ಯೂಟರ್‍ ಟ್ರೈನಿಂಗ್‌ ಹೋಗಿದ್ದರೆ, ಅವನಿಗೆ ಸಂಪಾದನೆಯೂ ಆಗುತ್ತಿತ್ತು. ಆದರೆ, ಇವನಿಗೆ ಅವೆಲ್ಲ ಬೇಕಿಲ್ಲ. ಹೇಗಿದ್ದರೂ ಅಮ್ಮ ತಂದು ಹಾಕುತ್ತಾಳೆ. ಮೂರು ಮನೆಗೆ ಕೇಳುವಷ್ಟು ಗಲಾಟೆ ಮಾಡಿದರೆ ಸಾಕು ಹಣ ಕೊಡುತ್ತಾಳೆ ಎಂಬ ದು(ದೂ)ರಾಲೋಚನೆಯ ಸುಳಿಯಲ್ಲಿ ಸಿಲುಕಿಸಿ, ಅವಳು ದಿನದಿನವೂ ಕೊರಗುವಂತೆ ಮಾಡಿದ್ದಾನೆ, ಮಾಡುತ್ತಿದ್ದಾನೆ.

ಇವನ ಕಾಟ ತಾಳಲಾರದೆ ಇವಳೇ ಮನೆ ತೊರೆದದ್ದೂ ಆಗಿತ್ತು. ಮತ್ತೆ ಮಮಕಾರದಿಂದ ಮಗನ ಜೊತೆಗೆ ಬಾಳುವ, ಹೊಸ ಬೆಳಕು ಕಾಣುವ ಆಸೆ, ಮಮತೆ ಒಂದಾಗುವಂತೆ ಮಾಡಿತು.

ಆಗೆಲ್ಲ ಅವಳು ಪಟ್ಟ ಕಷ್ಟವೆಷ್ಟು? ತನ್ನ ಮನದ, ಮನೆಯ ನೋವು ಯಾರಿಗೂ ತಿಳಿಯದಿರಲಿ ಎಂದು ತನ್ನ ಪರಿಚಿತರೆಲ್ಲರಿಂದ ದೂರವಿದ್ದದ್ದೂ ಇದೆ. ಆದರೆ ಇವನಿಗೆ ಅವೆಲ್ಲ ಬೇಕಿಲ್ಲ. `ಹಣ' ಒಂದಿದ್ದರೆ ಸಾಕು. ಅದೇನು ಮಾಡುತ್ತಾನೋ ಆ ದುಡ್ಡನ್ನೆಲ್ಲ ತಿಳಿಯದು. ಮಗ ಹಸಿವಿನಿಂದ ಬಳಲಬಾರದು ಎಂದು ಕೊಟ್ಟ ದುಡ್ಡೇ ಇಂದು ಅಮ್ಮನಿಗೆ ಶತ್ರುವಾಗುತ್ತಿದೆಯೇ?
ಮೊನ್ನೆಯಂತೂ ಇದೇ ನೆವದಿಂದ ಮನೆಯಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿ ಮಾಡಿದ್ದ. ಕೆಟ್ಟದಾಗಿ ನಡೆದುಕೊಂಡಿದ್ದ. ಅಕ್ಕಪಕ್ಕದವರೆಲ್ಲರ ಎದುರೇ ಬೈಯತೊಡಗಿದ್ದ. ಅಷ್ಟೇ ಆಗಿದ್ದರೆ... ಆದರೆ ಇಂದು ಆಗಿದ್ದೇ ಬೇರೆ. ಅಮ್ಮನನ್ನೇ ಹೊಡೆಯಲು ಮುಂದಾಗಿದ್ದ.

ಇವನ್ನೆಲ್ಲ ಇನ್ನೆಷ್ಟು ದಿನ ಅಂತ ಸಹಿಸುವುದು?

ಸದ್ಯಕ್ಕೆ ಒಂದು ದಾರಿ ಕಂಡಿದೆ. ಅದನ್ನೇ ಉಪಯೋಗಿಸೋದು ಅಂತ ನಿರ್ಧರಿಸಿದ್ದಾಳೆ.
(ಮುಂದುವರೆಯುವುದು)

ಬುಧವಾರ, ಮೇ 13, 2009

ಎಲ್ಲಿಗೆ ಸಾರ್‌,ಯಾವ್ ಸ್ಟಾಪು? ಟಿಕೆಟೋ, ಪಾಸೋ

ಎಪಿಸೋಡ್ -೧
ಹೆಲ್ಲೋ ಸಾರ್‍,
ಎಲ್ಲಿಗೆ ಸಾರ್‌,ಯಾವ್ ಸ್ಟಾಪು?
ನನಗ್ಗೊತ್ತು ಬಿಡ್ರಿ.
ಸರಿ, ಪಾಸೋ, ಟಿಕೆಟೋ
ಪಾಸು.
ಇದು ಮೊನ್ನೆ ಬಸ್ಸಿನಲ್ಲಿ ನಡೆದ ಚಿಕ್ಕ ಸಂಭಾಷಣೆ.
ಬಸ್ಸು ಸಿಗ್ನಲ್ಲಿನಲ್ಲಿ ಎಡಕ್ಕೆ ತಿರುಗಿತು. ಆಗ ಆ ವ್ಯಕ್ತಿ, ಯಾಕ್ರೀ ಈ ಕಡೆ ಹೋಗ್ತೀರಾ? ರಿಂಗ್ ರೋಡಿನಲ್ಲಿ ಹೋಗ್ರೀ?
ನೀ ಹೋಗಪ್ಪ. ನೀನು ಸರಿದಾರಿಲೇ ಹೋಗ್ತಿದೀಯ. ಮತ್ತು ಅಲ್ಲಿದ್ದ ಬಹುಪಾಲು ಪ್ರಯಾಣಿಕರಿಗೆ ಅದು ಗೊತ್ತಿರುವ ವಿಚಾರವಾಗಿತ್ತು. ಬಸ್ಸು ಸರಿಯಾದ ಮಾರ್ಗದಲ್ಲಿಯೇ ಹೋಗುತ್ತಿದೆ.
ರೀ, ನಿಲ್ಲಿಸ್ರೀ. ಯಾಕ್ರೀ ರೂಟ್‌ ಚೇಂಜ್‌ ಮಾಡ್ತೀರಾ? ಇದು ಆ ವ್ಯಕ್ತಿಯ ಪ್ರಶ್ನೆ. ನಾನು ಡ್ರೈವರ್‌ ಕೇಳಿದ್ದೆ, ಹೋಗುತ್ತೆ ಅಂದಿದ್ರು ಅದಕ್ಕೆ ರಿಂಗ್ ರೋಡು ಎಂದಿದ್ದು, ಆ ವ್ಯಕ್ತಿಯ ಮಾತು.
ಆದರೆ, ನಿರ್ವಾಹಕ ಹೇಳಿದ್ದು. ನಾ ಕೇಳಿದಾಗ ನನಗ್ಗೊತ್ತು, ನಾನೆಲ್ಲಿಗೆ ಹೋಗೋದು ಅಂದೆ. ಇದೀಗ ತರಲೆ ....
ಕೊನೆಗೆ ಸಿಗ್ನಲ್ಲಿನಲ್ಲಿ ಆ ವ್ಯಕ್ತಿ ಇಳಿದು ಹೋದ.
****
ಎಪಿಸೋಡ್ -೨
ಸಾರ್‌, ಟಿಕೆಟೋ, ಪಾಸೋ.
ಆ ಪ್ರಯಾಣಿಕ ಸೀಟುಗಾಗಿ ತಡಕಾಡಿ (ಖಾಲಿ ಇದ್ದ ಬಸ್ಸಿನಲ್ಲಿ) ಕೊನೆಯ ಸೀಟಿಗೆ ಹೋದ.
ರೀ, ಸ್ಟೇಜ್‌ ಇದೆ ಮುಂದೆ, ನಿಮ್ದು ಟಿಕೆಟೋ, ಪಾಸೋ? ಮತ್ತದೇ ಪ್ರಶ್ನೆ.
ಪ್ರಯಾಣಿಕ ಹೇಳಿದ್ದು: ಬೇಕಾದ್ರೆ ತೊಗೊತೀನಿ.
ಅಲ್ರೀ, ಕೇಳಿದ್ದಕ್ಕೆ ಸರಿಯಾಗಿ ಹೇಳ್ರೀ.

ನೀವೇನ್‌ ಕೇಳೋದು? (ಆತನ ಧೋರಣೆ ಹೀಗಿತ್ತು), ನಂತರ `ಪಾಸು' ಎಂದು ಆತ ಹೇಳುವಷ್ಟು ವ್ಯವಧಾನವೇ ಇಲ್ಲದಂತೆ ಹೇಳಿದ.
--------------
ಈ ಎರಡೂ ಘಟನೆಗಳಲ್ಲಿ ಅವಿದ್ಯಾವಂತರಿರಲಿಲ್ಲ. ಆದರೂ ಹೀಗೇಕೆ? ಒಂದು ಚಿಕ್ಕ ಪ್ರಶ್ನೆಗೆ ಇಷ್ಟೊಂದು ಮಾತಿಗೆ ಮಾತು ಬೆಳೆದು, ಇತರ ಪ್ರಯಾಣಿಕರಿಗೂ ಕಿರಿಕಿರಿ, ಕಿರುಚಾಟ, ಕಂಡಕ್ಟರ್‍-ಡ್ರೈವರ್‍ - ಇವರ ತಾಳ್ಮೆಗೆ ಕಡಿವಾಣ ಹಾಕುವಂತೆ ಯಾಕೆ ಹೀಗೆ ವಿದ್ಯಾವಂತ ಜನರೇ ವರ್ತಿಸುತ್ತಾರೆ. ಇಂದಿನ ವೇಗಕ್ಕೆ, ದುಡಿಮೆಗೆ ಹೊಂದಾಣಿಕೆ ಆಗುತ್ತಿಲ್ಲದಿರುವುದರಿಂದಲೇ ಅಥವಾ ಅವನೇನು ಮಹಾ? ಎಂಬ ಧೋರಣೆಯಿಂದಲೇ?

ಅದರಲ್ಲಿಯೂ ಈ ಎರಡೂ ಘಟನೆಗಳು ನಡೆದಿದ್ದು ಪ್ರಯಾಣಿಕರ ಸಂಖ್ಯೆ ಕಡಿಮೆಯಿದ್ದಾಗ ಮತ್ತು ಭಾನುವಾರದಂದು. ರಜಾ ದಿನದಂದೇ ಹೀಗಿದ್ದರೆ, ಇನ್ನು ಪ್ರತಿದಿನ ಪ್ರಯಾಣಿಕರ ಈ ಬೇಜವಾಬ್ದಾರಿ ಉತ್ತರಗಳು ಇನ್ನು ಹೇಗಿರಬಹುದು?
ಇದರಿಂದ ಆಗುವ ತೊಂದರೆಗಳು ಅನೇಕವೆಂದರೆ ಅತಿಶಯವೇನಲ್ಲ. ನೀವೇನಂತೀರಿ?

ಬುಧವಾರ, ಏಪ್ರಿಲ್ 15, 2009

ಬ್ರೂಸ್ ಲೀ ನುಡಿಗಳು

ಸಸ್ನೇಹಿಗಳೇ,

ಮೊನ್ನೆ ದಿನ ನನ್ನ ಕ್ಯಾಮೆರಾಕ್ಕೆ ಸೆಲ್ ಹಾಕಿ ಪರೀಕ್ಷಿಸುವಾಗ ಸುತ್ತ ಕಣ್ಣಾಡಿಸಿದೆ. ಯಾವುದಾದ್ರೂ ಚಿತ್ರ ತೆಗೆಯೋಕೆ. ಯಾವ ಚಿತ್ರ ತೆಗೆಯೋದು? ಕಿಟಕಿಯಿಂದ ಬರೀ ಒಣಹುಲ್ಲುಗಳು ಕಾಣುತ್ತಿವೆ. ಸರಿ, ಕಚೇರಿಯಲ್ಲಿ ಗಣಕಯಂತ್ರ, ಪಂಖಾ ಇತ್ಯಾದಿ ಕಾಣಿಸಿತು. ಇವೆಲ್ಲ ಸರಿಯಲ್ಲ ಅನಿಸಿತು. ಹಾಗೇ ನನ್ನ ಬಲಗಡೆಗೆ ತಿರುಗಿದೆ. ಅದೇ ದಿನವೂ ನೋಡುತ್ತಿದ್ದ ಕೋಟುಗಳು. ಇವು ಅಂತಿಂತಹ ಕೋಟುಗಳಲ್ಲ. ಒಂದು ಕಾಲದಲ್ಲಿ ಜಗತ್ತಿನ ಸಿನೆಮಾ ಪ್ರೇಮಿಗಳಿಗೆ ಅದರಲ್ಲಿಯೂ ಯಾವುದೇ ಹಿರಿ-ಕಿರಿ ಎಂಬ ಭೇದಭಾವವಿಲ್ಲದೆ ರಂಜಿಸಿದ, ಅತಿ ಕಿರಿಯ ವಯಸ್ಸಿನಲ್ಲಿಯೇ ಅಗಲಿದ ಕರಾಟೆ ಕಿಂಗ್ `ಬ್ರೂಸ್ ಲೀ'ಯ ನುಡಿಮುತ್ತುಗಳು. ನನ್ನ ಕಚೇರಿ ಕೊಠಡಿಯಲ್ಲಿ ಬ್ರೂಸ್ ಲೀ ನುಡಿಗಟ್ಟುಗಳನ್ನು ಪ್ರಿಂಟಿಸಿ ಹಾಕಿಕೊಂಡಿದ್ದೆ. ಅದನ್ನೇ ಕ್ಯಾಮೆರಾದಲ್ಲಿ ಸೆರೆಹಿಡಿದೆ.

ಇಂದಿನ ಸ್ಪರ್ಧಾತ್ಮಕ ಜೀವನದಲ್ಲಿ ಮೊದಲಿಗೆ ಅಳವಡಿಸಿಕೊಳ್ಳಬೇಕಾದ ಒಂದಂಶವನ್ನು `ಬ್ರೂಸ್‌ ಲೀ' ಯ ಈ ನುಡಿಯನ್ನು ಮನನ ಮಾಡಿಕೊಂಡರೆ ಜೀವನ ಸುಖವೆಂಬುದರಲ್ಲಿ ಎರಡು ಮಾತಿಲ್ಲ ಅಲ್ಲವೇ ಎಂದು ಒಂದು ಕ್ಷಣ ಅನಿಸಿತು. ಅದೇನೆಂದರೆ, ಅದೇನೆಂದರೆ, ಕಾಂಪಿಟಿಷನ್‌: ಇಟ್ ರಿಕ್ವೈರ್‍ಸ್ ಕಂಟ್ರೋಲ್ಡ್ ಕ್ರುಯೆಲ್ಟಿ. (ಫೋಟೋ: ಚಂದ್ರಶೇಖರ ಬಿ.ಎಚ್. ೨೦೦೯)

ನಿಮಗೇನನ್ನಿಸರಬಹುದು? ಎಂದು ಕ್ಷಣ ಕುತೂಹಲದಿಂದ ಕಾದಿರುವೆ.
ವಿಶ್ವಾಸದೊಂದಿಗೆ,

ಬುಧವಾರ, ಮಾರ್ಚ್ 18, 2009

ಮನೆ - ಮನಗಳಲ್ಲಿ ...




ಮನಸ್ಸು ಹಾಗೂ ಮನೆಯನ್ನು ಒಡೆಯುವುದು ಎಷ್ಟು ಸುಲಭದ ಕೆಲಸ. ಆದರೆ ಅದನ್ನೇ ಒಂದುಗೂಡಿಸುವುದು ಅಥವಾ ಕಟ್ಟುವುದು ಎಷ್ಟು ದುಸ್ತರ ಅಲ್ಲವೇ?
ಇಲ್ಲಿ ಸೊಗಸಾಗಿ ಬೆಳೆಯುತ್ತಿದ್ದ ಹುತ್ತವನ್ನು ಕಡಿದು ಬೇರೆಡೆ ಸ್ಥಳಾಂತರಿಸಲು ಪ್ರಯತ್ನಿಸಿ ಕೊನೆಗೆ ಅದರ ಮೇಲ್ಭಾಗ ಇಬ್ಭಾಗವಾದಾಗ ಅಲ್ಲಿಯೇ ಬಿಟ್ಟಿದ್ದಾರೆ. ಆದರೆ ಮತ್ತೆ ಗೆದ್ದಲುಹುಳುಗಳು ಸ್ವರಕ್ಷಣೆಗಾಗಿ ಮತ್ತೆ ಗೂಡು ಮಾಡಿಕೊಳ್ಳುತ್ತಿವೆ. ಹೀಗೆಯೇ ಮಾನವ, ಪಶು ಪಕ್ಷಿ ಜೀವನಗಳೂ ನಿರಂತರ ಸಾಗುತ್ತಿದೆ ಎಂದು ಅನಿಸುತಿದೆ ಈ ಕ್ಷಣ....