ಮಂಗಳವಾರ, ಜೂನ್ 9, 2009

ಬದುಕು ವಿಚಿತ್ರ-1

ಇದೀಗ ಇವನಿಗೆ ಸುಮಾರು ೨೨-೨೩ ರ ಪ್ರಾಯ. ಸುಂದರವಾಗಿದ್ದಾನೆ. ಕಣ್ಣುಗಳಲ್ಲಿ ಅದೆಂತಹ ಹೊಳಪಿತ್ತು ಶಾಲೆಗೆ ಹೋಗುತ್ತಿದ್ದ ದಿನಗಳಲ್ಲಿ. ಬುದ್ಧಿವಂತ ಎಂದು ಅವನಿಗೆ ಡಬಲ್ ಪ್ರೊಮೋಷನ್‌ ಸಿಕ್ಕಿ ಮೇಲಿನ ತರಗತಿಯಲ್ಲಿದ್ದ. ಶಾಲೆಯಲ್ಲಿ ವಿವಿಧ ಚಟುವಟಿಕೆಗಳಲ್ಲಿ ಬಹುಮಾನ ಪಡೆದು ಬರುತ್ತಿದ್ದ.

ಅದ್ಯಾವಾಗ ದೂರದ ಶಾಲೆಗೆ, ಉತ್ತಮವಾದ ಶಾಲೆಗೆ ಸೇರಿದನೋ ಅವನಲ್ಲಿದ್ದ ಆ ಸಗುಣಗಳೆಲ್ಲ ಎಲ್ಲಿ ಮಾಯವಾಯಿತೋ? ಏನಾಗಿದೆ ಇವನಿಗೆ?

ಶಾಲೆ ೧೦ನೇ ತರಗತಿ ಮುಗಿಸಿರಬೇಕು! ಕೆಲಸ ನನಗೆ ಒಗ್ಗುವುದಿಲ್ಲ ಎಂದು ಮೊಂಡು ಬಿದ್ದಿದ್ದಾನೆ.

ಯಾವ ಕಷ್ಟಗಳನ್ನೂ ನೀಡದೆ ಇವನನ್ನು ಬೆಳೆಸಿದ್ದಾಳೆ, ಇವನ ಅಮ್ಮ. ತನಗಾಗಿ ಏನೆಲ್ಲ ಮಾಡಿದ್ದಾಳೆ. ಅವಮಾನ, ಅಸಹಾಯಕತೆ ಇವೆಲ್ಲವನ್ನೂ ಮೆಟ್ಟಿ ನಿಂತಿದ್ದಾಳೆ. ಅವನಿಗೆ ಉಸಿರಾಟದ ತೊಂದರೆಯಿದ್ದಾಗ ಔಷಧಿ, ಡಾಕ್ಟ್ರು ಎಂದೆಲ್ಲಾ ಅದೆಷ್ಟು ದುಡಿದ ಹಣವನ್ನೆಲ್ಲಾ ಸುರಿದಿದ್ದಾಳೆ. ಅವನ ಓದಿಗಾಗಿ, ಅವನ ಭವಿಷ್ಯಕ್ಕಾಗಿ ಅದೆಷ್ಟೇ ಕಷ್ಟವಿದ್ದರೂ ಅವನಿಗಾಗಿ ತನ್ನ ಜೀವವನ್ನೇ ತೇಯ್ದಿದ್ದಾಳೆ.

ಅವನ ಪ್ರತಿಯೊಂದು ಹುಟ್ಟುಹಬ್ಬದಂದೂ ಉಡುಗೊರೆ ಕೊಡಿಸಿದ್ದಾಳೆ. ಫೋಟೋ ತೆಗೆಸಿದ್ದಾಳೆ. ನಟನೆ ಕಲಿಯುತ್ತೇನೆಂದಾಗ ತಾನೇ ಮುಂದೆ ನಿಂತು ಅವನಿಗೆ ಫೋಟೋ ಸೆಷನ್‌ಗಾಗಿ ವಿವಿಧ ಡ್ರೆಸ್‌ಗಳನ್ನು ಕೊಡಿಸಿದ್ದಾಳೆ. ಆದರೆ ಅವಳು ತನಗೇನೂ ಮಾಡಿಲ್ಲ, ಕೂಡಿಟ್ಟಿಲ್ಲ ಎಂಬ ಹುಂಬತನ ಇವನದ್ದು. ತನಗಾಗಿ ಅವಳು ಏನೇನೂ ಮಾಡಿಲ್ಲ ತನಗೆ ಎಂದೇ ವಾದಿಸುತ್ತಿದ್ದಾನೆ.
ಉತ್ತಮ ಮಕ್ಕಳ ಜೊತೆ ಬೆರೆಯಲಿ ಎಂದು ಅದೆಷ್ಟು ಮನೆಗಳನ್ನು ಬದಲಾಯಿಸಿದಳೋ, ಅದೆಷ್ಟು ಕಷ್ಟಪಟ್ಟಳೋ ಆ ದೇವರೇ ಬಲ್ಲ.

ಇತ್ತೀಚೆಗಂತೂ ಇವನ ಕಾಟ ತಾಳಲಾರದಷ್ಟಾಗಿದೆ. ಕಾರಣ ಹಣ, ಹಣ.

ದುಡಿದಿದ್ದರಲ್ಲಿ ಅರ್ಧಭಾಗ ಇವನ ಖರ್ಚಿಗೆ. ಇನ್ನೊಂದು ವರ್ಷ ಸರಿಯಾಗಿ ಕಂಪ್ಯೂಟರ್‍ ಟ್ರೈನಿಂಗ್‌ ಹೋಗಿದ್ದರೆ, ಅವನಿಗೆ ಸಂಪಾದನೆಯೂ ಆಗುತ್ತಿತ್ತು. ಆದರೆ, ಇವನಿಗೆ ಅವೆಲ್ಲ ಬೇಕಿಲ್ಲ. ಹೇಗಿದ್ದರೂ ಅಮ್ಮ ತಂದು ಹಾಕುತ್ತಾಳೆ. ಮೂರು ಮನೆಗೆ ಕೇಳುವಷ್ಟು ಗಲಾಟೆ ಮಾಡಿದರೆ ಸಾಕು ಹಣ ಕೊಡುತ್ತಾಳೆ ಎಂಬ ದು(ದೂ)ರಾಲೋಚನೆಯ ಸುಳಿಯಲ್ಲಿ ಸಿಲುಕಿಸಿ, ಅವಳು ದಿನದಿನವೂ ಕೊರಗುವಂತೆ ಮಾಡಿದ್ದಾನೆ, ಮಾಡುತ್ತಿದ್ದಾನೆ.

ಇವನ ಕಾಟ ತಾಳಲಾರದೆ ಇವಳೇ ಮನೆ ತೊರೆದದ್ದೂ ಆಗಿತ್ತು. ಮತ್ತೆ ಮಮಕಾರದಿಂದ ಮಗನ ಜೊತೆಗೆ ಬಾಳುವ, ಹೊಸ ಬೆಳಕು ಕಾಣುವ ಆಸೆ, ಮಮತೆ ಒಂದಾಗುವಂತೆ ಮಾಡಿತು.

ಆಗೆಲ್ಲ ಅವಳು ಪಟ್ಟ ಕಷ್ಟವೆಷ್ಟು? ತನ್ನ ಮನದ, ಮನೆಯ ನೋವು ಯಾರಿಗೂ ತಿಳಿಯದಿರಲಿ ಎಂದು ತನ್ನ ಪರಿಚಿತರೆಲ್ಲರಿಂದ ದೂರವಿದ್ದದ್ದೂ ಇದೆ. ಆದರೆ ಇವನಿಗೆ ಅವೆಲ್ಲ ಬೇಕಿಲ್ಲ. `ಹಣ' ಒಂದಿದ್ದರೆ ಸಾಕು. ಅದೇನು ಮಾಡುತ್ತಾನೋ ಆ ದುಡ್ಡನ್ನೆಲ್ಲ ತಿಳಿಯದು. ಮಗ ಹಸಿವಿನಿಂದ ಬಳಲಬಾರದು ಎಂದು ಕೊಟ್ಟ ದುಡ್ಡೇ ಇಂದು ಅಮ್ಮನಿಗೆ ಶತ್ರುವಾಗುತ್ತಿದೆಯೇ?
ಮೊನ್ನೆಯಂತೂ ಇದೇ ನೆವದಿಂದ ಮನೆಯಲ್ಲಿದ್ದ ವಸ್ತುಗಳೆಲ್ಲಾ ಚೆಲ್ಲಾಪಿಲ್ಲಿ ಮಾಡಿದ್ದ. ಕೆಟ್ಟದಾಗಿ ನಡೆದುಕೊಂಡಿದ್ದ. ಅಕ್ಕಪಕ್ಕದವರೆಲ್ಲರ ಎದುರೇ ಬೈಯತೊಡಗಿದ್ದ. ಅಷ್ಟೇ ಆಗಿದ್ದರೆ... ಆದರೆ ಇಂದು ಆಗಿದ್ದೇ ಬೇರೆ. ಅಮ್ಮನನ್ನೇ ಹೊಡೆಯಲು ಮುಂದಾಗಿದ್ದ.

ಇವನ್ನೆಲ್ಲ ಇನ್ನೆಷ್ಟು ದಿನ ಅಂತ ಸಹಿಸುವುದು?

ಸದ್ಯಕ್ಕೆ ಒಂದು ದಾರಿ ಕಂಡಿದೆ. ಅದನ್ನೇ ಉಪಯೋಗಿಸೋದು ಅಂತ ನಿರ್ಧರಿಸಿದ್ದಾಳೆ.
(ಮುಂದುವರೆಯುವುದು)

4 ಕಾಮೆಂಟ್‌ಗಳು:

shivu.k ಹೇಳಿದರು...

ಸರ್,

ಮಗ ಈ ಮಟ್ಟಕ್ಕೆ ಹೋಗಬಾರದಿತ್ತು. ಮುಂದುವರಿಕೆಗೆ ಕಾಯುತ್ತಿದ್ದೇನೆ...

Savitha.B.C ಹೇಳಿದರು...

ಹಣದ ಮುಂದೆ ಯಾವ ಸಂಬಂಧವು ದೊಡ್ಡದಲ್ಲ ಎಂಬ ಭಾವನೆ ಅವನದು, ಮುಂದುವರಿದ ಭಾಗಕ್ಕಾಗಿ ಕಾಯುತಿದ್ದೇನೆ......

ಸಾಗರದಾಚೆಯ ಇಂಚರ ಹೇಳಿದರು...

ಕ್ಷಣ ಚಿಂತನೆ,
ತುಂಬಾ ಟಚಿಂಗ ಇದೆ.

ಕ್ಷಣ... ಚಿಂತನೆ... ಹೇಳಿದರು...

nimmellara pratikriyegLige dhanyavaadagaLu.