ಪ್ರತಿ ದಿನಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
ಪ್ರತಿ ದಿನಗಳು ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಮಂಗಳವಾರ, ಫೆಬ್ರವರಿ 28, 2012

ಉದಯರವಿಯ ಮೊದಲ ಕಿರಣ..


Photo: ©Chandrashekara B.H. Feb, 2009

ಉದಯರವಿಯ ಮೊದಲ ಕಿರಣ..

ಚುಂಬಿಸಿದೆ ತರುಲತೆಗಳ ಮೇಲಿನ
ಮಿನುಗುತಿರುವ ಇಬ್ಬನಿಯ ಹನಿಗಳನು |
ಮೆಲ್ಲನೆ ನಾಚುತಿವೆ ಹಿಮದ ಮಣಿಗಳು
ಹೂ ದಳದಲಿ, ರವಿಯ ಕಿರಣದಾ ಸ್ಪರ್ಶಕೆ ||

ದಿನಕರನ ಪ್ರೀತಿಯ ಪ್ರಥಮ ಕಿರಣ
ತಂದಿದೆ, ಇಳೆಯ ಜೀವಿಗಳೀಗೆ ಹೊಸ ಚೇತನ |
ಬಾನಿನಲ್ಲಿ ಹರಡಿರುವ ಮೇಘಗಳ ನಡುವಿನಲ್ಲಿ,
ತಂಗಾಳಿಯ ಸೊಬಗಿನಲ್ಲಿ ಹಕ್ಕಿಗಳ ಪಯಣ ||

ಇದನೆಲ್ಲ ಕಂಡು ಮುದದಿಂದ ಹಾಡುತಿದೆ, ನನ್ನ ಮನ
ಓ ರವಿರಾಜನೆ, ನಿನಗೆ ನಮನ, ನೀನೆ ನಮ್ಮ ಬಾಳಿನ
ದಾರಿಯ ದೀವಿಗೆ, ನೀನಲ್ಲದೆ ನಮಗಿನ್ನಾರು
ತೋರುವರು ದಾರಿಯನು, ಆ ಹಾದಿ ಸೇರಿಸುವ ಗುರಿಯನ್ನು ||

- ಚಂದ್ರಶೇಖರ ಬಿ. ಎಚ್. ೧೪೬೯೧

ಸೋಮವಾರ, ಜುಲೈ 18, 2011

ದಟ್ ಇಸ್ ದಟ್...

ಬಹಳ ದಿನಗಳಿಂದ ಏನಾದರೂ ಬರೆಯಬೇಕೆಂದುಕೊಂಡರೂ ಬರೆಯಲು ಅದೇಕೋ ಆಗುತ್ತಿರಲಿಲ್ಲ.  ಹೀಗೆಯೇ ಏನಾದರೂ ಬರೆಯಬೇಕೆಂದು ಯೋಚಿಸುತ್ತಾ ಕುಳಿತಿದ್ದೆ ಗಣಕ ಯಂತ್ರದ ಮುಂದೆ.  ಕಚೇರಿಯಲ್ಲಿನ ಬೇರೆಲ್ಲ, ಅಂದರೆ ನನ್ನ ಪಾಲಿನ ಕೆಲಸ ಮುಗಿದಿತ್ತು. ಅತ್ತ ಕಡೆ ಸಭೆ ನಡೆಯುತ್ತಿತ್ತು. ಇಲ್ಲಿ ನಾನು ಖಾಲಿ ಕೂತಿದ್ದೆ. ಏನು ಮಾಡುವುದು? ಯೋಚನೆ. ಯೋಚನೆ??

ಹೀಗಿರುವಾಗ, ಬಿಡುವಿನ ವೇಳೆಯಲ್ಲಿ ಓದಲೆಂದು (ಜಸ್ಟ್ ಕಣ್ಣಾಡಿಸಲು) ಕೆಲವೊಂದು ವಿದ್ಯುನ್ಮಾನ ಪುಸ್ತಕಗಳನ್ನು ಅಂತರ್ಜಾಲದಿಂದ ಇಳಿಸಿಕೊಂಡಿದ್ದನ್ನು ನೋಡುತ್ತಿದ್ದಾಗ: ನಿರ್ಮಲಾ ಎಂಬುವವರು ಬರೆದ, ದಟ್ ಇಸ್ ದಟ್ * ಪುಸ್ತಕ ತೆರೆದೆ. ೧೦೬ ಪುಟದಲ್ಲಿ, ಸುಮ್ಮನೇ ನೂರನೇ ಪುಟಕ್ಕೆ ಕ್ಲಿಕ್ಕಿಸಿದೆ.

ಆಗ ಕಂಡಿದ್ದು:

I am that
You art that
And that is that.

ಆಗ ನೆನಪಾಗಿದ್ದು ರವಿಚಂದ್ರನ್‌ ರವರ ಒಂದು ಸಿನಿಮಾದ ಹಾಡು (ಸಿನೆಮಾ ನೆನಪಾಗುತ್ತಿಲ್ಲ). ಡಾ. ಎಸ್ಪಿ ಅವರು ಹಾಡಿದ ಹಂಸಲೇಖರ ಗೀತೆ. ರವಿಚಂದ್ರನ್ ಮತ್ತು ತಾಯ್‌ನಾಗೇಶ್ ನಟಿಸಿದ ಚಿತ್ರದ ಹಾಡು:

ನೀನು ನೀನೇ... ಇಲ್ಲಿ ನಾನು ನಾನೇ...
ನೀನು ನೀನೇ...
ಇಲ್ಲಿ ನಾನು ನಾನೇ...

ಇಲ್ಲಿ ಅಹಂ ಎಂಬುದಾಗಿ ತಿಳಿಯಬಹುದಾದರೂ, ಪ್ರತಿಯೊಬ್ಬರೂ ಅವರು ಅವರೇ ಆಗಿರುತ್ತಾರೆ.  ಒಬ್ಬನಂತೆ ಮತ್ತೊಬ್ಬನಿರುವುದಿಲ್ಲ ಅಥವಾ ಗುಣಸ್ವಭಾವವೂ ಬೇರೆಯದೇ ಆಗಿರುತ್ತದೆ.  ಇಂತಹ ಒಂದು ಸಂದರ್ಭದಲ್ಲಿಯೇ ನನಗೊಂದು ಎಸ್.ಎಂ.ಎಸ್. ನನ್ನ ಸ್ನೇಹಿತೆಯಿಂದ ಬಂದಿತ್ತು. ಅದೇನೆಂದರೆ,

People laugh, because I am different.
I laugh because they all are same!
That's called attitude.
Life is Yours, You live it
in Your Own Way


ಸದಾ ಕಾಲಕ್ಕೂ, ಸಕಲರಿಗೂ ಅನ್ವಯಿಸುತ್ತದೆಯಲ್ಲವೇ? ಯೋಚಿಸಿ ನೋಡಿ..

ಚಂದ್ರಶೇಖರ ಬಿ.ಎಚ್.

*That is That: Essays About True Nature BY NIRMALA Endless Satsang Press, www.endless-satsang.com 

ಗುರುವಾರ, ಏಪ್ರಿಲ್ 21, 2011

ಬಾಲಜಗತ್ತು ಎತ್ತ ಸಾಗುತ್ತಿದೆ?

ಈಗೊಂದು ಹತ್ತು ದಿನಗಳ ಹಿಂದೆ ಒಂದು ಶನಿವಾರ ಮಧ್ಯಾಹ್ನ ಬಾಪೂಜಿನಗರದ ಸ್ಯಾಟಲೈಟ್‌ ಬಸ್‌ ನಿಲ್ದಾಣದಲ್ಲಿ ನಿಂತಿದ್ದೆ. ವಿಜಯನಗರ ಬಸ್ಸಿಗಾಗಿ ಕಾಯುತ್ತಿದ್ದೆ. ಸುಮಾರು ೮-೯ನೇ ತರಗತಿಯ ಹುಡುಗರು ಮೊಬೈಲ್‌ ಹಿಡಿದು ನಿಂತಿದ್ದರು. ಅದೇನೋ ಹರಟುತ್ತಿದ್ದರು. ಯಾರಿಗಾಗಿಯೋ ಕಾಯುತ್ತಿದ್ದರು. ಕಾಯುತ್ತಿದ್ದವರಿಗೆ ಖುಷಿಯಾಯಿತು. ಅಲ್ಲಿಗೆ ಇಬ್ಬರು ಹುಡುಗಿಯರು ಬಂದರು. ಇನ್ನೇನು ಮುಂದಿನ ವರ್ಷ (ಜೂನ್‌ ಶಾಲೆ ಪುನರಾರಂಭ) ಸಿಗೋಣ ಅಂತ ಮಾತಾಡಿದರು.

ಇನ್ನೊಬ್ಬ ಲೋ, ಫೋನ್‌ ನಂಬರ್‍, ಮೊಬೈಲ್‌ ನಂಬರ್‌ ತೊಗೊಳ್ಳೊ ಎನ್ನುತ್ತಿದ್ದ. ಅವರ ಬಳಿ ಲೇಖನಿ ಇರಲಿಲ್ಲ. ಆ ಹುಡುಗಿ ನಂಬರ್‍ ಬೇಗ ಬರಕೋ ಅಥವಾ ಮೊಬೈಲ್‌ ಸೇವ್‌ ಮಾಡಿಕೋ ಅಂತ.. ಈತ ನಂಬರ್‍ ಬರೆದುಕೊಳ್ಳಲು ನನ್ನ ಬಳಿ ಬಂದು ಲೇಖನಿ ತೆಗೆದುಕೊಂಡು ಹೋದ. ಮತ್ತೆ ಥ್ಯಾಂಕ್ಸ್ ಎಂದು ವಾಪಸ್ಸು ಕೊಟ್ಟೂ ಹೋದ.

ಅ ಹುಡುಗಿಯರೂ ಇನ್ನೂ ಸ್ವಲ್ಪ ಹೊತ್ತು ಮಾತಾಡುತ್ತಿರೋಣ ಅಂದರೆ ನಮ್ಮಮ್ಮ ಕರೀತಿದಾರೆ. ನೋಡು, ಅಲ್ಲಿದಾರೆ. ಬೈ ಎಂದು ಹೊರಟು ಹೋದಳು. ಅವಳ ಗೆಳತಿಯೂ ಸಹ ಹೊರಟುಹೋದಳು.

ಲೋ, ಫೋನ್ ನಂಬರ್‍ ತೊಗೊಂಡೆ. ಆದರೆ ಮೊಬೈಲ್‌ ಫೋನ್‌ನಲ್ಲಿ ಸೇವ್‌ ಮಾಡಿದರೆ ಮನೆಯಲ್ಲಿ ಗೊತ್ತಾಗುತ್ತೆ... ಬೇರೆ ಹೆಸರು ಸೇವ್‌ ಮಾಡಿಕೋ ಎಂದು ಮಾತಾಡುತ್ತಾ ಹೊರಟು ಹೋದರು.

==============

ಇನ್ನೊಂದು ಘಟನೆ...

ವಿಜಯನಗರ ಬಸ್ಸು ನಿಲ್ದಾಣದಲ್ಲಿ ೩-೪ ಶಾಲಾ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ನಿಂತಿದ್ದರು. ಅದೂ ಸ್ವಲ್ಪ ದೂರದೂರದಲ್ಲಿ. ಆ ಗುಂಪಿನಲ್ಲಿನ ಒಂದು ಹುಡುಗಿ ಲೇ, ನನ್ನ ಕಡೆ ಅವನು ನೋಡ್ತಾ ಇಲ್ಲ ಅಂತ...

ಇನ್ನೊಬ್ಬಳು, ಅವನು ನೋಡೋವಾಗ ನೀನು ಈ ಕಡೆ ತಿರುಗಿದ್ದೆ ಅಂತ... ಒಟ್ಟಿನಲ್ಲಿ ಹೀಗೆ ಸಂಭಾಷಿಸುತ್ತಾ ಇದ್ದವರು, ಜನಜಂಗುಳಿ ಜಾಸ್ತಿಯಾಗುತ್ತಿದ್ದಂತೆ ಎಲ್ಲ ಒಟ್ಟಿಗೇ ಸೇರಿ, ಬಟ್ಟೆ, ಫೋನು, ಮುಂದೆ ಎಲ್ಲಿ ಭೇಟಿ ಮಾಡೋದು? ಸಿನಿಮಾ ಅಥವಾ ಪಾರ್ಕಿಗೆ ಹೋಗೋದಾ... ಇಲ್ಲಾ ಫ್ರೆಂಡ್‌ ಮನೆ ಅಂತ ಟ್ರಿಪ್‌ ಹೋಗೋದಾ ಅಂತ ಒಬ್ಬರಿಗೊಬ್ಬರು ಪ್ರಶ್ನೆ ಮಾಡಿಕೊಳ್ಳುತ್ತಿದ್ದರು.

ಕಡೆಗೆ ಒಂದು ಬಸ್‌ ಬಂತು. ಎಲ್ಲ ಹೊರಟು ಹೋದರು. ಆದರೆ.... ಒಬ್ಬ ವಿದ್ಯಾರ್ಥಿನಿ ಮತ್ತು ೩-೪ ವಿದ್ಯಾರ್ಥಿಗಳು ಅಲ್ಲಿಯೇ ಇದ್ದು, ನಂತರ ಒಬ್ಬೊಬ್ಬರೇ ಮರೆಯಾದರು.

==================

ಇಂದಿನ ಬಾಲಜಗತ್ತು ಎತ್ತ ಸಾಗುತ್ತಿದೆ? ಈಗಲೇ ಇವರಿಗೆ ಇದೆಲ್ಲಾ ಬೇಕಾ? ತಮಾಷೆಗೋ ಅಥವಾ ಯಾವುದೋ ಸಿನಿಮಾ ನೋಡಿ, ಅದರಲ್ಲಿನ ಹೀರೋ (??) ಅಥವಾ ವಿಲನ್‌ (??) ಇವರ ನಟನೆಯನ್ನೇ ಅನುಕರಿಸಲು ತವಕಿಸುವುದಕ್ಕೋ?? ಅಥವಾ ಮನೆಯಲ್ಲಿ ಸಭ್ಯರಂತಿದ್ದು ಹಾದಿ ತಪ್ಪುತ್ತಿರುವರೆ? ಯಾರಿಗೆ ಗೊತ್ತು?

===========

ಇದೇನು? ಇವೆಲ್ಲ ಕೇಳಿಸುಕೊಳ್ಳುವ ಕಿವಿ ನಿಮ್ಮದಾಗಿತ್ತೇ ಎಂದರೆ, ಹೌದು. ಏಕೆಂದರೆ, ಅವರಿನ್ನೂ ಹೈಸ್ಕೂಲು ದಾಟಿರದವರು... ಕಡೇ ಪಕ್ಷ ೧೦ನೇ ತರಗತಿ ಪರೀಕ್ಷೆ ಬರೆದವರೂ ಅಲ್ಲ...

chandrashekara b.h.

ಗುರುವಾರ, ನವೆಂಬರ್ 18, 2010

ಹೈಜಿನ್ ಇಲ್ಲ!! ಒಂದು ಯೋಚನೆ ಬಂತು...

ಎಲ್ಲರಿಗೂ ಉತ್ಥಾನ ದ್ವಾದಶೀ ( ತುಳಸೀ ಹಬ್ಬದ ) ಶುಭಾಶಯಗಳು !

ಹೈಜೀನ್ ಇಲ್ಲ. ಹಳ್ಳಿಗಳಲ್ಲಿ ಮದುವೆ, ನಾಮಕರಣ ಇತ್ಯಾದಿಗಳಿಗೆ ಹೋದರೆ ಸರಿ ಬರಲ್ಲ. ಅಲ್ಲಿನ ಊಟ, ತಿಂಡಿ ವಗೈರೆ ಹೈಜೀನ್ ಇರಲ್ಲ. ಹೀಗೆ ಹೇಳುವುದು ಸುಲಭ. ವಾಸ್ತವದಲ್ಲಿ ಅದೂ ನಿಜವಿರಬಹುದು ಅಥವಾ ಇಲ್ಲದಿರಲೂ ಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಹೈಜಿನ್ (ಶುಚಿತ್ವ) ಕಡಿಮೆ ಇರುತ್ತದೆ. ಹಾಗೆಂದು ನಮಗೆ ಬೇಕಾದವರ ಸಮಾರಂಭಗಳಿಗೆ ಹೋಗದಿದ್ದರೆ ಅವರಿಗೆ ಬೇಸರವಾಗುವುದಿಲ್ಲವೇ? ಹೋದರೆ, ಅಲ್ಲಿನ ವಾತಾವರಣ ನೋಡಿ ನಮಗೆ ಬೇಸರವಾಗುವುದಿಲ್ಲವೇ? ಖಂಡಿತಾ ಈ ಎರಡಕ್ಕೂ ಉತ್ತರ - ಆಗುತ್ತದೆ ಎನ್ನಬಹುದು.

ಇವೆಲ್ಲ ಸರಿ, ನಮ್ಮಲ್ಲಿಯೇ ಎಷ್ಟು ಜನಕ್ಕೆ ಹೈಜೀನ್ ಬಗ್ಗೆ ತಿಳುವಳಿಕೆಯಿದೆ. ಓದಿದ ಮಂದಿಗೇ ಅಷ್ಟಾಗಿ ಶುಚಿತ್ವದ ಬಗ್ಗೆ ಅರಿವಿಲ್ಲದಿರುವುದನ್ನು ಗಮನಿಸಬಹುದು. ಮಾತನಾಡುವಾಗ ಹಲ್ಲುಗಳ ಸಂಧಿಯಲ್ಲಿ ಕಡ್ಡಿ, ಕಿರುಬೆರಳಿನಲ್ಲಿ ಬೆಳೆಸಿರುವ ಉದ್ದನೆಯ ಉಗುರು ಹಾಕುವುದು ಇತ್ಯಾದಿ. ಇನ್ನು ಕಿವಿಗಳಿಗೆ ಸಿಕ್ಕಿದ ಹಕ್ಕಿಪುಕ್ಕ, ಪಿನ್ನು, ಹುಲ್ಲಿನ ಎಸಳು ಇತ್ಯಾದಿ. ಮೂಗಿಗಂತೂ (ಧೂಳು, ಹೊಗೆ) ಆಗಾಗ್ಗೆ ಶುಚಿತ್ವ ಮಾಡಿಸುತ್ತಲೇ ಇರಬೇಕು, ಆಗೆಲ್ಲಾ ತಂತಾನೇ ಬೆರಳುಗಳು ಚಿನ್ನದ ಗಣಿಯಲ್ಲಿ ಆಡುತ್ತಿರುತ್ತವೆ.

ಇನ್ನು ತರಕಾರಿಯೋ, ಹೂವೋ ತರಲು ಹೋದರೆ ಎಲ್ಲೋ ಕೆಲವು ಮಂದಿ ಬೀಡಿ/ಸಿಗರೇಟು ಧಂ ಎಳೆಯುತ್ತಿರುವವರು ಕೈತೊಳೆದು ಕೊಡುವವರು ಇದ್ದಾರೆ. ಆದರೆ ಹೆಚ್ಚಿನ ಮಂದಿ ಎಡಗೈನಲ್ಲಿ ಕ್ಯಾರೆಟ್, ಟೊಮೊಟೋ, ಮೂಲಂಗಿ ಕಚ್ಚಿ ತಿನ್ನುತ್ತಾ ತರಕಾರಿ ತೂಗುತ್ತಾರೆ. ಜನ ಅದನ್ನೇ ಕೊಂಡುಕೊಳ್ಳುತ್ತಾರೆ. ಇನ್ನು ಗ್ರಾಹಕರೇನು ಕಡಿಮೆಯಿಲ್ಲ. ಹುರಳಿಕಾಯಿ, ತೊಗರಿ, ಮೂಲಂಗಿ ಯಾವುದೇ ಕೊಳ್ಳಬೇಕಾದರೂ ಮುರಿದು ತಿನ್ನುವ ಅಭ್ಯಾಸ ಬಿಟ್ಟು ಕಚ್ಚಿ ತಿಂದು, ಕೈಯನ್ನು ಬಟ್ಟೆಗೆ ಒರೆಸಿಕೊಂಡು (??) ಹಾಗೆಯೇ ಅದೇ ಕೈನಿಂದಲೇ ತರಕಾರಿ ಕೊಳ್ಳುವುದೂ ಇದೆ. ಆ ತರಕಾರಿ/ಹೂ/ ಕೊಡುವವ ಬಲಗೈ ಅಥವಾ ಎಡಗೈ ಹೆಬ್ಬೆರಳನ್ನು ನಾಲಿಗೆಗೆ ತಗಲಿಸಿ, ಪ್ಲಾಸ್ಟಿಕ್‌ ಕವರ್‌ ಬಿಡಿಸಿ ನೀವು ಕೊಂಡ ಪದಾರ್ಥವನ್ನು ತುಂಬಿ ಕೊಡುತ್ತಾನೆ. ಹಣ್ಣುಮಾರುವವರದ್ದೂ ಇದೇ ಕಥೆ. ಅದರಲ್ಲಿಯೂ ಮಾವಿನ ಹಣ್ಣು ಕೊಳ್ಳುವಾಗಲಂತೂ... ನೆನಪಿಸಿಕೊಂಡರೇ ಬೇಸರವಾಗುತ್ತದೆ.

ಪುಟ್ಟ ಮಕ್ಕಳು, ಶಾಲಾ ಮಕ್ಕಳು (ಪ್ರಾಥಮಿಕ/ಮಾಧ್ಯಮಿಕ) ಇವುಗಳ ಬಗ್ಗೆ ಗಮನವಿರುವುದಿಲ್ಲ. ಕೊಟ್ಟ ಪದಾರ್ಥವನ್ನು ಕಚ್ಚಿತಿನ್ನುವ ರೂಢಿ ಮಾಡಿಕೊಂಡಿರುತ್ತವೆ. ಕೆಲವರಿಗೆ ಹಪ್ಪಳ, ಸಂಡಿಗೆ ಎಡಗೈನಲ್ಲಿ ಕಚ್ಚುತ್ತಾ ಊಟ ಮಾಡುವ ದುರಭ್ಯಾಸವೂ ಇರುತ್ತೆ. ಇವೆಲ್ಲವನ್ನೂ ಮಾಡಬಾರದು ಎಂದು ಚಿಕ್ಕ ಮಕ್ಕಳಿದ್ದಾಗಿನಿಂದ ತಿಳಿಸಿ ಹೇಳಿದರೆ ತಿದ್ದುಕೊಳ್ಳುವರು. ಆದರೆ, ಹಿರಿಯರೇ ಇದನ್ನು ಅಭ್ಯಾಸ ಮಾಡಿಕೊಂಡಿದ್ದರೆ (??) ಏನು ಹೇಳುವುದು. ಮಕ್ಕಳಿಗಾದರೂ ತಿಳಿಸಿ ಹೇಳಬಹುದು, ಆದರೆ ಹಿರಿಯರಿಗೆ ಹೇಳುವುದು ಕಷ್ಟ.

ಮತ್ತೆ ಮದುವೆ ಮನೆಯ ವಿಚಾರಕ್ಕೆ ಬಂದರೆ, ಕೆಲವರು ಬಫೆ, ಕೆಲವರು ಟೇಬಲ್ ಊಟ, ಬಾಳೆಯೆಲೆಯೂಟ ಹೀಗೆ ಮಾಡಿಸಿರುತ್ತಾರೆ. ಊಟದ ಕೊನೆಯಲ್ಲಿ ಬಾಳೆಹಣ್ಣು ಅಥವಾ ಐಸ್‌ಕ್ರೀಂ ಕೊಡುವ ಪರಿಪಾಠ ಬೇರೆ ಬೆಳೆಸಿಕೊಂಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿಯೋ ತಿಳಿಯದು. ಇದರ ನಡುವೆಯೇ ಫಲತಾಂಬೂಲವನ್ನೂ ಎಲೆಯ ಬಳಿ ಅಥವಾ ಕೈಗೆ ಕೊಡುತ್ತಾರೆ. ಕೆಲವೊಮ್ಮೆ ಎಂಜಲೆಲೆಯ ಮೇಲೆಯೆ ಇಟ್ಟು ಹೋಗುತ್ತಾರೆ. ಕೈ ತೊಳೆದ ಮೇಲೆ ಎಲೆ-ಅಡಿಕೆ ತಾಂಬೂಲಕ್ಕೂ ಮೊದಲು ಬಾಳೆಹಣ್ಣು ಅಥವಾ ಐಸ್‌ಕ್ರೀಂ ತಿನ್ನುವುದು ಸುಲಭವಾಗುತ್ತದೆ. ಏಕೆಂದರೆ, ಎಲೆಯ ಬಳಿಯೇ ಇದ್ದಾಗ ಬಾಳೆಹಣ್ಣು ಸುಲಿಯಲು (ಒಂದು ಕೈನಿಂದ) ಕಷ್ಟ, ಐಸ್‌ಕ್ರೀಂ ತಿನ್ನುವುದೂ ಕಷ್ಟ. ಆಗ ಎರಡೂ ಕೈ ಉಪಯೋಗಿಸಬೇಕಾಗುತ್ತದೆ. ನಂತರ ತಾಂಬೂಲದ ಕವರ್‌ ಅದೇ ಎಂಜಲ (ಎಡ ಕರದಿಂದ) ಕೈನಿಂದ ಹಿಡಿದು ಕೈತೊಳೆಯಲು ಹೋಗುವುದು. ಇದೆಲ್ಲ ಒಂದು ಸಭ್ಯತೆಯೆ ಅನಿಸುವುದು ಸಹಜ. ಆದರೆ, ಜನಕ್ಕೆ ಇವೆಲ್ಲ ಬೇಕಿಲ್ಲ.

ಇನ್ನೂ ಕೆಲವರಿರುತ್ತಾರೆ. ತಮಗೆ ಸಿಹಿ ಇಷ್ಟವಿಲ್ಲ ಎಂದ ಮೇಲೆ ಊಟದಲ್ಲಿ ಹಾಕಿಸಿಕೊಳ್ಳಬಾರದು ಅಥವಾ ಹಾಕಿಸಿಕೊಂಡಮೇಲೆ ತಿನ್ನಬೇಕು ಇಲ್ಲ ಬಿಡಬೇಕು. ಆದರೆ, ತಮ್ಮ ಪಕ್ಕದಲ್ಲಿರುವ ಸ್ನೇಹಿತರಿಗೋ ಬಂಧುಗಳಿಗೋ (ಅದಾಗಲೇ ಊಟ ಶುರು ಮಾಡಿ, ಕೈಬಾಯಿ ಸಮಾರಾಧನೆ ನಡೆಯುತ್ತಿರುತ್ತದೆ) ಪಟಕ್ಕಂತ ಹಾಕುವುದೂ ಇದೆ. ಇನ್ನು ಕೆಲವರೋ ಬಡಿಸಿದವನಿಗೆ ಮತ್ತೆ ಕರೆದು ಈ ಸಿಹಿ ತಿಂಡಿ ಬೇಡ ತೊಗೊ ಎಂದು ಬಲವಂತದಿಂದ (ಎಂಜಲ ಎಲೆಯಿಂದ) ತೆಗೆಸುವವರೂ ಇದ್ದಾರೆ.

ಹೀಗೆಲ್ಲಾ ತಾವೇ ಮಾಡುವಾಗ ಇನ್ನು ಶುಚಿತ್ವ, ಸಭ್ಯತೆ ಎಲ್ಲಿರಬೇಕು? ಎಲ್ಲಿಂದ ಬರುತ್ತೇ? ಎಲ್ಲಿಂದ ಕಾಣುವುದು? ಯೋಚಿಸಬೇಕಾದ ವಿಷಯವೇ, ಅಲ್ಲವೆ?

++++++++++++++++++++
ಇಲ್ಲೊಂದು ಪಟ್ಟಿ ಇದೆ. ಸುಮ್ಮನೇ ಓದಿದರೇ ಅರಿವಾಗುವುದು.

  • Wash your hands well with plenty of soap and hot water before the meal.
  • Do not try this at a restaurant until you have mastered it at home.
  • Do not use your eating hand to pass food once you have begun eating with it. This is a strict no-no.
  • If you lick your fingers clean at the end of the meal, try to do it discreetly and quickly. In general, if you are eating in temples, etc., avoid licking your fingers at the end of the meal. Just wash your hands instead.
  • Practice thoroughly before eating in a public place like temples,restaurants and don't leave food in your hand while eating.
  • People may be so impressed with you for trying that they might forgive your "bad manners".

courtsey: http://www.wikihow.com/Eat-Indian-Food-with-Your-Hands
++++++++++++++++++++
ಬರಹ: ಚಂದ್ರಶೇಖರ ಬಿ.ಎಚ್. ೧೮.೧೧.೨೦೧೦

ಮಂಗಳವಾರ, ನವೆಂಬರ್ 16, 2010

ಮೂರನೇ ವರ್ಷಕ್ಕೆ ಅಡಿಯಿಡುವಲ್ಲಿ...

ಕ್ಷಣ ಚಿಂತನೆ... ಚಿಂತನಾ ಲಹರಿ...

ಸದಾ ಹರಿಯುತ್ತಿರುವ ನದಿಯಂತೆ ಚಿಂತನೆಯೂ ಸಹ ಎಂಬ ಆಶಯದೊಂದಿಗೆ ಶುರು ಮಾಡಿದೆ. ಈ ನನ್ನ (ಗೂಗಲ್‌ ನವರ) ಬ್ಲಾಗಿನಲ್ಲಿ ಇಲ್ಲಿಯವರೆವಿಗೂ ಮಹಾನ್‌ ವ್ಯಕ್ತಿಗಳ ನುಡಿಗಟ್ಟುಗಳನ್ನು ಬಳಸಿಕೊಂಡು ಬರೆದ ಬರಹಗಳು, ವಿವಿಧ ವಿಷಯಗಳು, ಪ್ರವಾಸೀ ಕಥನ, ಸ್ವಗತ ಬರಹಗಳು, ಹಾಗೂ ಛಾಯಾಚಿತ್ರಗಳನ್ನು ಪ್ರಕಟಿಸುತ್ತಾ ಬಂದಿದ್ದೇನೆ. ಈ ಬರಹಗಳಿಗೆ, ಚಿತ್ರಗಳಿಗೆ ಹಲವಾರು ಬ್ಲಾಗಿಗರು ತಮ್ಮ ತಮ್ಮ ಸಲಹೆ, ಪ್ರೋತ್ಸಾಹಗಳನ್ನು ನೀಡುತ್ತಾ ಬಂದಿದ್ದಾರೆ. ಅವರೆಲ್ಲರಿಗೂ ಧನ್ಯವಾದಗಳು.

ಬರಹಗಳಿಗೆ ವಿಷಯಗಳ ಬರವಿರದಿದ್ದರೂ ಕೆಲವೊಮ್ಮೆ ಏನು ಬರೆಯಬೇಕು? ಯಾಕೆ ಬರೆಯಬೇಕು ಎಂಬುದು ಹೊಳೆಯದೇ ಮಿತ್ರರೊಂದಿಗೆ ಚರ್ಚಿಸಿದ್ದಿದೆ. ಆಗೆಲ್ಲ ಅವರ ಅಭಿಪ್ರಾಯ ಅಥವಾ ಸಲಹೆಗಳಿಂದ ಒಂದಷ್ಟು ಬರವಣಿಗೆ ಸಾಗುತ್ತಾ ಬಂದಿದೆ. ಅವರೆಲ್ಲರ ಪ್ರೋತ್ಸಾಹದಿಂದ ಇ‌ಲ್ಲಿಯವರೆವಿಗೂ ಅಂದರೆ
ಎರಡು ವರ್ಷ ಮುಗಿಸುತ್ತಾ ಮೂರನೇ ವರ್ಷಕ್ಕೆ ಬರಹದ ಕಾಲ್ನಡಿಗೆಯನ್ನು ಶುರು ಮಾಡುತ್ತಿದ್ದೇನೆ.

ಬ್ಲಾಗಿನಿಂದಾಗಿ ಹಲವಾರು ಮಿತ್ರರು ಸಿಕ್ಕಿದ್ದಾರೆ. ಅವರೆಲ್ಲರ ಒಡನಾಟವೂ, ಆತ್ಮೀಯತೆಯೂ ಸಿಕ್ಕಿದೆ ಹಾಗೂ ವ್ಯಕ್ತಿತ್ವ ನಿರ್ಮಾಣಕ್ಕೂ ಸಹಕಾರಿಯಾಗಿದೆ.

ಮೂಲತ: ಗೂಗಲ್‌ ಕಂಪನಿಯವರಿಗೆ ವಂದನೆಗಳನ್ನು ತಿಳಿಸುತ್ತೇನೆ. ಏಕೆಂದರೆ, ಅವರ ಈ ಸೋಷಿಯಲ್ ನೆಟ್ವರ್ಕ್‌ನಿಂದಾಗಿ ಬ್ಲಾಗ್ ಉಚಿತವಾಗಿ ದೊರಕಿದ್ದು ಅದರ ಸದುಪಯೋಗ ಪಡೆಯುತ್ತಿದ್ದೇನೆ.

ನನ್ನ ಬ್ಲಾಗಿನಲ್ಲಿ ಬರಹ ಯೂನಿಕೋಡ್‌ ಉಪಯೋಗಿಸುವುದರಿಂದ ಅನೇಕರಿಗೆ ಓದಲು ಅನುಕೂಲವಾಗಿದೆ ಎಂಬುದು ನನ್ನ ಅನಿಸಿಕೆ. ಬರಹ ತಂತ್ರಾಂಶ ತಯಾರಿಕರಿಗೂ ಧನ್ಯವಾದಗಳು.

ಇದರೊಂದಿಗೆ ನಿಮ್ಮೆಲ್ಲರ ಕ್ಷಣ ಪ್ರತಿಕ್ರಿಯೆಯೇ ಮೂರನೇ ವರ್ಷಕ್ಕೆ ಬ್ಲಾಗನ್ನು ವಿಸ್ತರಿಸುವ ಹುಮ್ಮಸ್ಸು ಕೊಟ್ಟಿದೆ ಹಾಗೂ ಕೊಡುತ್ತದೆ ಎಂಬ ಆಶಯದಿಂದ, ನಿಮ್ಮೆಲ್ಲರಿಗೂ ನನ್ನ ಕೃತಜ್ಞತೆಗಳು ಹಾಗು ಧನ್ಯವಾದಗಳನ್ನು ತಿಳಿಸುತ್ತೇನೆ.

ಇಂತಿ,

ಚಂದ್ರಶೇಖರ ಬಿ.ಎಚ್.

ಶುಕ್ರವಾರ, ನವೆಂಬರ್ 12, 2010

ಮುಸುಕಿದೀ ಮಬ್ಬಿನಲಿ - ಆದರೆ..

Photo: ಚಂದ್ರಶೇಖರ ಬಿಎಚ್ Chandrashekara BH
Behind every cloud is another cloud. - Judy Garland

ಈ ಮಾತನ್ನು ಪ್ರತಿಯೊಬ್ಬ ವ್ಯಕ್ತಿಗೂ ಹಾಗೆಯೇ ಪ್ರತಿಯೊಂದು ಕಷ್ಟನಷ್ಟ-ಸುಖ ಸಂತೋಷಗಳಿಗೂ ಅನ್ವಯಿಸಿಕೊಳ್ಳಬಹುದಲ್ಲವೇ?

ಹಾಗೆಯೇ ಪ್ರತಿಯೊಂದು ಸುಂದರ ಕ್ಷಣಗಳನ್ನೂ ಈ ರೀತಿ ತಿಳಿಯಬಹುದಲ್ಲವೆ? Happiness is like a cloud, if you stare at it long enough, it evaporates. - Sarah McLachlan

ಪತ್ರಿಕೋದ್ಯಮ ವಿಷಯಕ್ಕೆ ಬಂದರೆ ಹೀಗೂ ಅಂದುಕೊಳ್ಳಬಹುದು: In journalistic terms, syndication is equivalent to ascending to heaven on a pillar of cloud. - John Skow

ಮೋಡದ ಮುಸುಕು ಇದೀಗ ಹೊರಗೆ ಕವಿದಿದೆ ನಿನ್ನೆ ಮೊನ್ನೆಯಿಂದ, ಅದರ ಹಿಂದೆಯೇ ಆಶಾಭಾವನೆಗಳ ಹೊಂಗಿರಣಗಳನ್ನು ಕಾಣಬೇಕಾದರೆ ಹೀಗಿರಬೇಕಲ್ಲವೆ? Climb up on some hill at sunrise. Everybody needs perspective once in a while, and you'll find it there. ~Robb Sagendorph


ಕೃಪೆ: ಆಕರಗಳಿಂದ ಆರಿಸಿದ್ದು.

ಬುಧವಾರ, ನವೆಂಬರ್ 3, 2010

ಬದುಕೊಂದು ಪಯಣ

Photo:Chandrashekara B.H.Sept2010
ಬದುಕೊಂದು ಪಯಣ

ಹುಟ್ಟೆಂಬುದು ಆರಂಭ
ಸಾವೆಂಬುದು ಅಂತ್ಯದ ತಾಣ

ನಡುವಿಹುದು ಜೀವನ ಪಯಣ

ಶೈಶವದಿಂದ ಬಾಲ್ಯದೆಡೆಗೆ
ಯೌವ್ವನದಿಂದ ಹಿರಿತನದೆಡೆಗೆ
ಸಾಗುತಿಹುದು ಜೀವನ ಪಯಣ

ಅಜ್ಞಾನದಿಂದ ಸುಜ್ಞಾನದೆಡೆಗೆ
ಕೆಲಬಾರಿ ಜ್ಞಾನದಿಂದ ಅಜ್ಞಾನದೆಡೆಗೆ

ಸಾಗುತಿಹುದು ಜೀವನ ಪಯಣ


ಬೆಳಕಿನಿಂದ ಕತ್ತಲೆಡೆಗೆ
ಕತ್ತಲಿಂದ ಬೆಳಕಿನೆಡೆಗೆ
ಸಾಗುತಿಹುದು ಜೀವನ ಪಯಣ

ದೌರ್ಬಲ್ಯದಿಂದ ದೃಢತೆಯೆಡೆಗೆ
ದೃಢತೆಯಿಂ ಜಡತತ್ವದೆಡೆಗೆ

ಸಾಗುತಿಹುದು ಜೀವನ ಪಯಣ


ನಂಬಿಕೆಯಿಂದ ಪ್ರಾರ್ಥನೆಯೆಡೆಗೆ
ಸಶಕ್ತಿಯಿಂದ ಸಹನಾಶಕ್ತಿಯೆಡೆಗೆ
ಸಾಗುತಿಹುದು ಜೀವನ ಪಯಣ

ನಂಬಿಕೆಯಿಂ ಅಪನಂಬಿಕೆಗಳೆಡೆಗೆ
ಸಹನೆಯಿಂದ ಕಡುಕೋಪದೆಡೆಗೆ

ಸಾಗುತಿಹುದು ಜೀವನ ಪಯಣ


ಛಲದಿಂದ ಮುನ್ನುಗುವೆಡೆಗೆ
ಅಂತಸ್ಸತ್ವವನು ಎಬ್ಬಿಸುವೆಡೆಗೆ
ಸಾಗುತಿಹುದು ಜೀವನ ಪಯಣ

ಹಲವೊಮ್ಮೆ ಅಧೈರ್ಯದೆಡೆಗೆ
ಅಂತಸ್ಸತ್ವದಿಂ ನಿಶ್ಶಕ್ತಿಯೆಡೆಗೆ
ಸಾಗುತಿಹುದು ಜೀವನ ಪಯಣ

ಇರಲಿ ಎಂದಿಗೂ ಎದೆಗುಂದದ ಛಲ
ಹಿಂದಿಕ್ಕದ ಹೆಜ್ಜೆ, ಕಾರಣ
ಸಾಗುತಿಹುದು ಜೀವನ ಪಯಣ

ಹುಟ್ಟೆಂಬುದು ಆರಂಭ
ಸಾವೆಂಬುದು ಅಂತ್ಯದ ತಾಣ
ನಡುವಿಹುದು ಜೀವನ ಪಯಣ, ಚಾರಣ


ಚಿತ್ರ-ಕವನ: ಚಂದ್ರಶೇಖರ ಬಿ.ಎಚ್. ೩.೧೧.೨೦೧೦


ಗುರುವಾರ, ಸೆಪ್ಟೆಂಬರ್ 16, 2010

ಮೊನ್ನೆ ದಿನ ಏನಾಯ್ತೂಂದ್ರೇ....

ಮೊನ್ನೆ ದಿನ ಏನಾಯ್ತೂಂದ್ರೇ....

ಮೊನ್ನೆ ಭಾನುವಾರ ಗಣೇಶನ ಹಬ್ಬದ ಮಾರನೇ ದಿನ ನನಗೆ ಸ್ವಲ್ಪ ಸಿಟಿಯಲ್ಲಿ ಕೆಲಸವಿತ್ತು. ಹಾಗೆಯೇ ಕೆಲವು ಮಿತ್ರರನ್ನು ಭೇಟಿ ಮಾಡಲು ಹೋಗಿದ್ದೆ. ನಾನು ನನ್ನ ಸ್ನೇಹಿತ ಇಬ್ಬರೂ ಹಾಗೇ ದಾರಿಯಲ್ಲಿ (ಸೀತಾ ಸರ್ಕಲ್‌ ಹತ್ತಿರ)ನ ಒಂದು ಉಪಹಾರ ಮಂದಿರಕ್ಕೆ ಹೋದೆವು. ಕುಳಿತುಕೊಳ್ಳುವ ಜಾಗಕ್ಕೆ ಹೋದೆವು. ಏಕೆಂದರೆ, ಕನಿಷ್ಠ ಒಂದು ಹತ್ತು ನಿಮಿಷವಾದರೂ ಕುಳಿತು ಮಾತನಾಡುತ್ತಾ ತಿಂಡಿ ತಿನ್ನಬಹುದೆಂಬ ಆಸೆ. .. ತಿಂಡಿ ಕಾಫಿಗೆ ಆರ್ಡರ್‍ ಮಾಡಿ ಮಾತನಾಡುತ್ತಾ ಕುಳಿತೆವು... ಸರಿ ತಿಂಡಿಯೂ ಬಂದಿತು. ತಿಂಡಿ ಸೇವಿಸುತ್ತಾ ನಮ್ಮ ಮಾತು ಮುಂದುವರೆದಿತ್ತು...


ಹೀಗಿರುವಾಗ...

ಎಲ್ಲಿಂದಲೋ ಒಂದು ನೊಣ ಕಾಫಿ ಕಪ್ಪಿಗೆ ಬಿದ್ದಿತ್ತು. ಅವನು ಕಾಫಿ ತಂದಿಟ್ಟಾಗ ಬಿದ್ದಿರಲಿಲ್ಲ. ನಮ್ಮ ಗಮನಕ್ಕೂ ಬಂದಿರಲಿಲ್ಲ.

ಆಗ ನನಗೆ ನೆನಪಾಗಿದ್ದು ಮೇಯರ್‌ ಮುತ್ತಣ್ಣ ಚಲನಚಿತ್ರದಲ್ಲಿನ ಒಂದು ಪಾತ್ರ... ದ್ವಾರಕೀಶ್‌ ಹೋಟೆಲಿನಲ್ಲಿ ನಡೆಸುವ ಕರಾಮತ್ತು. ನಂತರ ಮುತ್ತಣ್ಣನ ಭೇಟಿ... ಇತ್ಯಾದಿ. ಇತ್ಯಾದಿ...

ಆದರೆ, ಇಲ್ಲಿ ಆಗಿದ್ದು ಬೇರೆಯೇ ಕರಾಮತ್ತು!!! ಇನ್ನೇನು ಕಾಫಿ ಕಪ್ಪಿಗೆ ಕೈ ಹಾಕಬೇಕು.....

ನೋಡಿ ನೊಣ ಬಿದ್ದಿದೆ. ಬೇರೆ ಬೇರೊಂದು ಕಪ್ ಕಾಫಿ ಕೊಡಿ ಎಂದಾಗ...

ಆತನ ವಿಚಾರಣೆ ಶುರುವಾಗಬೇಕೆ?

ನೊಣ ಈಗ ಬಿತ್ತಾ?? ಮೊದಲೇ ಬಿದ್ದಿತ್ತಾ??? ಹೀಗೆ....

ನನ್ನ ಸ್ನೇಹಿತ ತಕ್ಷಣಕ್ಕೆ `ನಮಗೇನು ಕನಸು ಬಿದ್ದಿತ್ತೇ? ನೊಣ ಯಾವಾಗ ಬಿತ್ತು? ಹ್ಯಾಗೆ ಬಿತ್ತು? ಅನ್ನೋ ವಿಚಾರಣೆ ಬೇಕಾ? ಎನಕ್ಟಯರಿ ಮಾಡಕ್ಕಾ??? ಎಂಥ ಜನ ಮಾರಾಯ್ರೆ... ಎಂದು ಹಿರಿಯ ಕೆಲಸಗಾರನಿಗೆ ಕೇಳಿದರು.

ಅದೇ ವ್ಯಕ್ತಿ ನಿಧಾನವಾಗಿ ಅಥವಾ ಬೇರೆ ಕೊಡುತ್ತೇನೆ ಎಂದು ಹೇಳಿದ್ದರೆ ಸಾಕಿತ್ತು... ಆತನ ಪ್ರಶ್ನೆ `ನಾವೇ ಕಾಫಿ ಕಪ್ಪಿಗೆ ನೊಣ ಹಾಕಿದ್ದೇವೆ' ಎಂಬ ಧಾಟಿಯಲ್ಲಿತ್ತು...

ಹೊಸ ಕಪ್ಪಿನಲ್ಲಿ ಬಿಸಿಬಿಸಿ ಕಾಫಿ ತಂದಿಟ್ಟು ಆತ ಹೊರಟು ಹೋದ....

ಇಷ್ಟೆಲ್ಲಾ ಏಕೆ ಹೇಳಬೇಕಾಯಿತೆಂದರೆ...

ಕೆಲವು ವ್ಯಕ್ತಿಗಳಿಗೆ ಜೀನವದ ಬೇಸರವೋ ಅಥವಾ ಸರಿಯಾದ ಕೆಲಸವಿಲ್ಲದೇ (ವಿದ್ಯಾವಂತನಾಗಿದ್ದರೂ) ಯಾರ್‍ಯಾರಿಗೋ ಕಾಫೀ, ಟೀ, ತಿಂಡಿ ಎಲ್ಲ ಸಪ್ಲೈ ಮಾಡಬೇಕು ಅಂತಲೋ, ಸಂಬಳ ಕಡಿಮೆಯೋ ಇತ್ಯಾದಿಯನ್ನು ಬಂದ ಗ್ರಾಹಕರ ಬಗ್ಗೆ ಈ ರೀತಿ ಕೇಳುವುದು ಸಭ್ಯವಲ್ಲ ಎಂದು ತಿಳಿದಿದ್ದರೂ ಹೀಗೆ ಮಾಡುತ್ತಾರೆ...

ಇದರಿಂದ ಗ್ರಾಹಕನಿಗೆ ತೊಂದರೆಯೇನಾಗದಿದ್ದರೂ... ಕೆಲಸ ಕೊಟ್ಟವನಿಗೆ ತೊಂದರೆ ಆಗುವುದು ಸಹಜ. ಏಕೆಂದರೆ, ಅಲ್ಲಿ ಶುಚಿತ್ವಕ್ಕೆ ಬೆಲೆಯಿಲ್ಲ, ತರಲೆ ಸಪ್ಲೈಯರ್‌ಗಳು ಹೀಗೆ ಗ್ರಾಹಕರು ತನ್ನಂತಾನೇ ದೂರಾಗುತ್ತಾರೆ... ಎಂಬುದು... ಹಾಗೆಯೇ ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೂ ತೊಂದರೆಯಾಗುವುದಲ್ಲವೇ?


ಶುಕ್ರವಾರ, ಜೂನ್ 18, 2010

ಬದುಕೆಂಬ ಬದುಕು


ಬದುಕು ಮುಳ್ಳಿನ ಹಾದಿ
ನಡೆ ನೀನು ದಿಟ್ಟ ಹೆಜ್ಜೆಯಲಿ
ಸಾಗುವುದು ರಹದಾರಿ
ಭವ್ಯ ಜೀವನದ ಸಾರವನು ತೋರಿ

ಬೆದರದಿರು, ಬೆಚ್ಚದಿರು
ಭಾವಪ್ರಭಾವಗಳಿಗೆ ಒಳಗಾಗದೆ
ನಡೆಯುತಿರು, ನುಡಿಯುತಿರು
ನಿತ್ಯ ಸತ್ಯದಾ ಹಾದಿಯಲಿ

ದೂರದಿರು, ಮರುಗದಿರು
ವ್ಯರ್ಥ ಮಿಥ್ಯತೆಗೆ ಬಲಿಯಾಗಿ
ದುಡಿಯುತಿರು, ನೆನೆಯುತಿರು
ಸತ್ಯ ಸಾರ್ಥಕತೆಗೆ ಜೊತೆಯಾಗಿ

ಬರುವುದು ಬದುಕಿನಲಿ
ಹೂವನದ ಸೊಬಗು, ಮುಳ್ಳಿರದ
ಹೂವಿಲ್ಲ, ನೋವಿರದ ಬಾಳಿಲ್ಲ
ನಲಿವಿರದ ಬದುಕಿಲ್ಲ ತಿಳಿಯುತಲಿ
ಸಾಗುತಿರು ನಿನ್ನ ಗುರಿಯ ದಾರಿಯಲ್ಲಿ

- ಚಂದ್ರಶೇಖರ ಬಿ.ಎಚ್.

ಮಂಗಳವಾರ, ಜೂನ್ 8, 2010

ಬದಲಾವಣೆಗೆ ಹೆದರಬೇಡಿ!

ಜನ ಚೇಂಜ್‌ ಕೇಳುತ್ತಾರೆ. ಹಾಗಂತ ಬದಲಾವಣೆಗಳಿಗೆ ಹೆದರುವುದು ತರವೇ?

ಆಧುನಿಕತೆ ದಿನದಿಂದ ದಿನಕ್ಕೆ ಮುನ್ನುಗುತ್ತಲೇ ಇದೆ. ಹಾಗೆಂದು ಅತಿರೇಕದ ಬದಲಾವಣೆಗಳಿಗೆ ಒಗ್ಗಿಕೊಳ್ಳುವುದೂ
ಕಷ್ಟಸಾಧ್ಯವೇ ಹೌದು! ಉದಾಹರಣೆಗೆ, ಒಂದು ಕಾಲದಲ್ಲಿ ಬೆರಳಚ್ಚುಗಾರ ಎಂದರೆ ಒಂದು ಹೆಮ್ಮೆಯ ವಿಚಾರವಾಗಿತ್ತು. ಏಕೆಂದರೆ, ಬೆರಳಚ್ಚಿನ ಕೌಶಲ ಸಿದ್ಧಿಸಿಕೊಳ್ಳಲು ಬಹಳ ತ್ರಾಸದಿಂದ ಕಲಿಯುತ್ತಿದ್ದರು. ಅದನ್ನು ಬಳಸಿಕೊಂಡೇ ಹಲವರಿಗೆ ಉದ್ಯೋಗದೊಂದಿಗೆ ಜೀವನವೂ ಒಂದು ಹಂತಕ್ಕೆ ಮುಟ್ಟುವಂತಿತ್ತು. ಆನಂತರ, ಆಧುನಿಕತೆ ಮಜಲಿನಲ್ಲಿ ಮೂಡಿಬಂದ ಎಲೆಕ್ಟ್ರಾನಿಕ್‌ ಬೆರಳಚ್ಚು ಯಂತ್ರಗಳು ಕೆಲವರಿಗೆ ಅಡಚಣೆಯುಂಟುಮಾಡಿದರೂ, ಜೀವನಕ್ಕೆ ತೊಂದರೆ ಕೊಡಲಿಲ್ಲ ಎನ್ನಬಹುದು. ಆದರೆ, ಆಧುನಿಕ ಆವಿಷ್ಕಾರವಾದ ಗಣಕಯಂತ್ರದಿಂದಾಗಿ ಬಹಳಷ್ಟು ಬೆರಳಚ್ಚುಗಾರರಿಗೆ ಒಂದು ಹೆದರಿಕೆಯಿತ್ತು. ಕಾರಣ ಗಣಕಯಂತ್ರದ ತಂತ್ರದಿಂದಾಗಿ ತಮ್ಮ ಉದ್ಯೋಗಕ್ಕೇ ಕುತ್ತು ಬರುವುದೇನೋ ಎಂಬ ಅನುಮಾನ. ತಂತ್ರಾಂಶದ ಕಲಿಕೆ, ಉಪಯೋಗ ಹೇಗೆಂದು ತಿಳಿಯದೇ, ಅದರಲ್ಲಿಯೂ ಕಮ್ಯಾಂಡರುಗಳೆಂಬ ಕಮ್ಯಾಂಡುಗಳ ನೆನಪಿನಲ್ಲಿರಿಸಿಕೊಂಡು ಗಣಕಯಂತ್ರ ಚಲಾಯಿಸುವುದು ಕಷ್ಟ ಎಂಬ ಹೆದರಿಕೆಯಿಂದಾಗಿಯೂ ಉದ್ಯೋಗಕ್ಕೆ ತೊಂದರೆ ತಂದುಕೊಂಡವರೂ ಇದ್ದಾರೆ (ಆಗಿನ ಒಂದು ಹಂತದಲ್ಲಿ). ಕೆಲವರು ಅದರಿಂದಾಗಿ ಬೇರೆ ಉದ್ಯೋಗಕ್ಕೂ ಎಡತಾಕಿದ್ದೂ ಇದೆ. ಆನಂತರದ, ವಿಂಡೋಸ್‌ನಿಂದಾಗಿ ಕೆಲವರು ಗಣಕಯಂತ್ರದ ತಂತ್ರಕ್ಕೆ ಒಲಿದು, ಅದನ್ನೇ ಒಲಿಸಿಕೊಂಡು ಜೀವನ ಕಂಡು ಕೊಂಡವರೂ ಇದ್ದಾರೆ. ಇವರಿಗೆಲ್ಲ ಹೊಸದೊಂದು ಕಿಟಕಿ ಕಟಕಿಯಾಡದೇ ಕೆಲಸ ಕೊಟ್ಟಿದೆ.


ಇಲ್ಲಿ ಏಕೆ ಪ್ರಸ್ತಾಪಿಸಲು ಯೋಚಿಸಿದೆನೆಂದರೆ, `ಡೋಂಟ್ ಬಿ ಅಫ್ರೇಡ್‌ ಆಫ್ ಚೇಂಜ್' ಎಂಬ ಒಂದು ಪೋಸ್ಟರಿನಿಂದಾಗಿ. ಇದರಲ್ಲಿ ಬೆರಳಚ್ಚುಗಾರ್ತಿಯೊಂದಿಗೆ ಒಂದು ಬೆರಳಚ್ಚು ಯಂತ್ರವಿದೆ. ಅದರ ಕೆಳಗಿನ ಬರಹ ಈ ಮೇಲಿನದು. ಅದಕ್ಕೇ, ಹೇಳಿದ್ದು ಬದಲಾವಣೆ ಎಲ್ಲ ಹಂತದಲ್ಲಿಯೂ ಇರುತ್ತದೆ. ಇರಲೇ ಬೇಕು. ಹಾಗೆಂದು ಬದಲಾವಣೆಗೆ ಹೆದರಿ ಕುಳಿತರೆ, ಬದುಕು ಸಸಾರವಾಗದೇ ತತ್ವಾರಕ್ಕೆ ತುತ್ತಾಗುವುದಿಲ್ಲವೇ?

ಆದ್ದರಿಂದ: 'ಬದಲಾವಣೆಗೆ ಹೆದರಬೇಡಿ!'.

ಚಿತ್ರ ಕೃಪೆ: courtsey: http://www.aegee.kiev.ua/Press.aspx?id=9

ಸೋಮವಾರ, ಮಾರ್ಚ್ 22, 2010

ಜೀವನದಿ, ನೀ ಜಲಧಾರೆ..

ಮಾರ್ಚ್ ೨೨. ಇಂದು ವಿಶ್ವ ಜಲ ದಿನಾಚರಣೆ.

ಈ ದಿನಾಚರಣೆಯನ್ನು ಯಾವಾಗ ಆರಂಭಿಸಿದರು, ಅದರ ಇತಿಹಾಸ ಇದ್ಯಾವುದನ್ನೂ ಇಲ್ಲಿ ನಾನು ಉಲ್ಲೇಖಿಸುವುದಿಲ್ಲ. ಕಾರಣ. ಸುಮ್ಮನೇ ಅದೊಂದೆ ಪುನರಾವರ್ತನೆಯಾದಂತೆನಿಸುತ್ತದೆ.
ನೀರು ಸಕಲ ಜೀವರಾಶಿಗಳಿಗೆ ಪ್ರಾಣ. ಪರಿಶುದ್ಧ ಜಲದಿಂದ ಉತ್ತಮ ಆರೋಗ್ಯವೂ ಇರುವಂತೆ, ಅಶುದ್ಧ ನೀರಿನಿಂದ ಅನಾರೋಗ್ಯವೂ ಇದೆ. ಈ ವರ್ಷದ ಜಲದಿನಾಚರಣೆಯ ಘೋಷಣೆ: 22 March 2010: Clean Water for a Healthy World ಎಂಬುದಾಗಿದೆ.

ಹಾಗೆಯೇ ಜಲ ಸಂರಕ್ಷಣೆಯನ್ನು ಕುರಿತ ಹಲವಾರು ಕಾರ್ಯಕ್ರಮಗಳು, ಕಾರ್ಯಾಗಾರಗಳನ್ನು ವಿಶ್ವದೆಲ್ಲೆಡೆ ಹಮ್ಮಿಕೊಂಡಿರುವ ವಿಚಾರವೂ ತಿಳಿದಿರುತ್ತದೆ.
ನೀರನ್ನು ಮಿತವಾಗಿ ಬಳಸಿ ಎನ್ನುತ್ತಾರೆ. ಇಂಧನಕ್ಕಿಂತಲೂ ನೀರಿನ ಸಂರಕ್ಷಣೆ ಬಹಳವಾಗಿ ಬೇಕಿದೆ. ಏಕೆಂದರೆ, ಪ್ರತಿಯೊಂದು ಜೀವಿಯ, ಸಸ್ಯಗಳ, ಜಲಚರಗಳ, ಉಭಯವಾಸಿಗಳ ದಾಹ ತಣಿಸಲು ನೀರಿಗಿಂತ ಉತ್ತಮ ಪಾನೀಯ ಮತ್ಯಾವುದೂ ಇಲ್ಲ. ನಾವೆಷ್ಟೇ ಕೃತಕ ಪಾನೀಯಗಳನ್ನು ಸೇವಿಸಿದರೂ `ನೀರಿನಿಂದ' ಸಿಗುವ ಶಾಂತಿ/ಸಮಾಧಾನಕ್ಕೆ ಸಾಟಿ ಯಾವುದೂ ಇಲ್ಲ.


I believe that water is the only drink for a wise man. -Henry David Thoreau

ನಾವಿಂದು ಏನು ಮಾಡುತ್ತಿದ್ದೇವೆ. ಭೂಮಿಯ ಅಂತರ್ಜಲವನ್ನೂ ಹೀರಿದ್ದೇವೆ. ನೀರಿನ ಅವಶ್ಯಕತೆಯಿರುವಾಗಲೇ ಕೆರೆಗಳನ್ನು, ನದಿ-ತೊರೆಗಳನ್ನು ತೊರೆದಿದ್ದೇವೆ. ನೀರಿಗೆ ಬೆಲೆ ಕಟ್ಟಲಾಗುವುದಿಲ್ಲ ಎಂಬ ಅಂಶವನ್ನೇ ಮರೆತಿದ್ದೇವೆ. ನೀರಿರುವ ತಾಣಗಳನ್ನು ನಿತ್ರಾಣವನ್ನಾಗಿ ಮಾಡಿ, ಮನೆ, ರಸ್ತೆಗಳನ್ನು, ಇತ್ಯಾದಿ ನಿರ್ಮಾಣ ಮಾಡಿದ್ದೇವೆ. ಜೊತೆಗೆ ಮಳೆ ಮೋಡಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಕಾರಣ ಅರಣ್ಯನಾಶ. ಅರಣ್ಯ ಬಿಡಿ, ನಮ್ಮ ಮನೆಯ ಸುತ್ತಮುತ್ತಲಿನ ಮರಗಳನ್ನೂ ಸಹ ಕಡಿದು, ರಸ್ತೆ ಅಗಲೀಕರಣದ, ಆಧುನೀಕರಣದ ನೆಪದಲ್ಲಿ ನಾಶಮಾಡಿದ್ದೇವೆ. ನೀರಿಗಾಗಿ ನೆರಳಿಗಾಗಿ ಮರಗಳೂ ಕಾಣುತ್ತಿಲ್ಲ. ಹೀಗಿರುವಾಗ ಮಳೆಗೆ ಬೇಕಾಗುವ, ಆವಿಯಾಗಿ ಮತ್ತೆ ಮಳೆಯಾಗುವ ನೀರೆಲ್ಲಿ ಸಿಗುವುದು?

೧೭೩೨ ರಲ್ಲಿಯೇ ಥಾಮಸ್‌ ಫುಲ್ಲರ್‌ ಎಂಬುವವರು ಹೀಗೆ ಹೇಳಿದ್ದಾರೆ. ಅದು ಸರ್ವಕಾಲಕ್ಕೂ ಅನ್ವಯಿಸುವಂತಹುದು. [We never know the worth of water till the well is dry. Thomas Fuller, Gnomologia]

ನೀರಿನ ಪೋಲನ್ನಂತೂ ಹೇಳಿಕೊಳ್ಳಲಾಗದಷ್ಟು ಯಥೇಚ್ಛವಾಗಿ ಮಾಡುತ್ತಿರುತ್ತೇವೆ. ಹೇಗೆ? ಒಂದು ಲೋಟ ನೀರು ಕುಡಿಯ ಬೇಕಿದ್ದರೆ, ನಲ್ಲಿ ತಿರುಗಿಸಿ, ಲೋಟದಲ್ಲಿ ತುಂಬಿ, ಎಡಹಸ್ತವು ನಲ್ಲಿಯ ತಿರುಪಿನ ಮೇಲಿದ್ದು (ನಲ್ಲಿಯಲ್ಲಿ ನೀರು ಬರುವುದ ನಿಲ್ಲಿಸುವ ಸ್ಥಿತಿಯಲ್ಲಿ) ಇದ್ದು, ನೀರನ್ನು ಕುಡಿಯುತ್ತಿರುತ್ತೇವೆ. ಆದರೆ, ಒಂದು ಲೋಟ ನೀರು ಕುಡಿಯುವ ಸಮಯದಲ್ಲಿ ೩-೪ ಲೋಟದಷ್ಟು ನೀರು ಪೋಲಾಗಿರುವುದು ಲೆಕ್ಕಕ್ಕೆ ಸಿಗುವುದಿಲ್ಲ. (ಈ ಉದಾಹರಣೆ ಏಕೆ ಕೊಟ್ಟಿನೆಂದರೆ, ಈಗೊಂದು ಮೂರು ದಿನದ ಹಿಂದೆ ದರ್ಶಿನಿಯಲ್ಲಿ ಕಂಡ ದೃಶ್ಯ).

ಇನ್ನೂ ಹಲವಾರು ವಿಧದಲ್ಲಿ ನೀರು ಪೋಲಾಗುತ್ತದೆ. ಜಲಸಂಪರ್ಕದ ಕಾಲುವೆ ಒಡೆದು ಹೋಗಿರುತ್ತದೆ (ರಸ್ತೆಯ ಮಧ್ಯ, ಅಂತ್ಯ). ಮನೆಯ ಮೇಲಿನ, ಕಚೇರಿಗಳಲ್ಲಿರುವ ನೀರಿನ ಟ್ಯಾಂಕಿನಲ್ಲಿ (ಮೋಟಾರು ಹಾಕಿ, ಮರೆತು) ತುಂಬಿ ಚೆಲ್ಲುವ ದೃಶ್ಯಗಳನ್ನು ನೋಡಿರುತ್ತೀರಿ.



ಕಾರ್ಯಾಗಾರ, ಸಮ್ಮೇಳನಗಳಲ್ಲಿ ನೀರಿನ ಬಾಟಲಿಗಳಲ್ಲಿ ಸಂರಕ್ಷಿಸಿದ ನೀರನ್ನು ಗುಟುಕರಿಸಿ (ಒಂದೆರಡು ಗುಟುಕಷ್ಟೇ ಎನ್ನಬಹುದು) ಹೊಸ ನೀರಿನ ಬಾಟಲಿಗೆ ಕೈ ಚಾಚುವ ಪರಿಸ್ಥಿತಿಯನ್ನು ನೆನೆದರಂತೂ... ದು:ಖವಾಗುತ್ತದೆ. ನೀರಿಗಾಗಿ ಯುದ್ಧಗಳೇ ಆಗಿವೆ, ಆಗುತ್ತಿವೆ. ಇಂತಹ ಜಲವನ್ನು ಹಾಳುಗೆಡುವುದು ಸರಿಯೇ? ಆತ್ಮಾವಲೋಕನ ಮಾಡಿಕೊಳ್ಳಬೇಕು.

ಇನ್ನು ಕೆಲವು ಕಡೆ ಬೋರುವೆಲ್ಲುಗಳಲ್ಲಿ ನೀರಿರುವುದಿಲ್ಲ. ಅಥವಾ ಅದರ ಸುತ್ತಮುತ್ತಲೆಲ್ಲ ಕಸದ ರಾಶಿಯಿದ್ದು, ಅಲ್ಲಿಯೇ ನೀರನ್ನು ಪಡೆಯುವ, ಕುಡಿಯುವ ದೃಶ್ಯಗಳೂ ಕಾಣುತ್ತಿರುತ್ತವೆ. ಇದರಿಂದ ಆರೋಗ್ಯ ಸಮಸ್ಯೆಯೂ ಉಂಟಾಗುವುದು.

ಸಕಲ ಜೀವಜಾತಕೆ ಸಲಿಲವೇ ಮದ್ದು. ಶುದ್ಧವಾದ ನೀರಿಗೆ ರೋಗಗಳನ್ನು ವಾಸಿಮಾಡುವ ಗುಣವಿದೆ. ಇದನ್ನು ವೈಜ್ಞಾನಿಕವಾಗಿಯೂ ಖಚಿತಪಡಿಸಿದ್ದಾರೆ. ಅದಕ್ಕೆ ಐಸ್ಯಾಕ್ ಡಿನ್ಸೆನ್‌ ಹೀಗೆ ಹೇಳುತ್ತಾರೆ: The cure for anything is salt water - sweat, tears, or the sea. -Isak Dinesen

ಅಲ್ಲದೇ, ನೀರನ್ನು ಕಲುಷಿತಗೊಳಿಸಿದರೆ, ಅದನ್ನು ಮತ್ತೆ ಶುದ್ಧೀಕರಿಸುವುದು ಸಾಧ್ಯವೇ ಇಲ್ಲ. ಅದಕ್ಕೆ ಆಫ್ರಿಕಾದ ಒಂದು ನುಡಿಗಟ್ಟು ಹೀಗಿದೆ: Filthy water cannot be washed. -African Proverb

ಹೀಗಿರುವಾಗ ನೀರನ್ನು ಮಿತವಾಗಿ, ಶುದ್ಧವಾಗಿ ಬಳಸಬೇಕಾದುದು ಅತಿ ಅವಶ್ಯವಾಗಿದೆ. ಇದು ಕೇವಲ ಈ ಒಂದು ದಿನಾಚರಣೆಗೆ ಮಾತ್ರವಲ್ಲದೇ, ಪ್ರತಿದಿನದ, ಪ್ರತಿಯೊಬ್ಬರ ಮನದಾಳದಲ್ಲಿ ಮೂಡಿಬರಬೇಕು. ಹಾಗೂ ಈ ವಿಚಾರದಲ್ಲಿ ಪ್ರತಿಯೊಬ್ಬರೂ ಪ್ರತಿದಿನ ಭಾಗಿಯಾಗಬೇಕಾಗಿದೆ.

ಲೇಖನ: ಚಂದ್ರಶೇಖರ ಬಿ.ಎಚ್.೨೨೦೩೨೦೧೦

ಶುಕ್ರವಾರ, ಮಾರ್ಚ್ 19, 2010

ತಂತ್ರಜ್ಞಾನದ ನಡುವೆ ಮಾತು ಮತ್ತು ಬರವಣಿಗೆ ಎಲ್ಲಿ ಮಾಯವಾಗಿದೆ?


ಊರಿಗೆ ಹೋಗ್ಬರ್‍ತೀರಾ? ಹೋಗ್ಬನ್ನಿ. ಊರು ತಲುಪಿದ ಮೇಲೆ, ಕ್ಷೇಮ ಸಮಾಚಾರಕ್ಕೆ ಒಂದು ಕಾಗದ ಗೀಚಿ ಹಾಕಿ ಅಥವಾ ಪೋಸ್ಟ್ ಕಾರ್ಡ್ ಹಾಕಿ.

---------------

[ಸ್ನೇಹಿತ ಜೊನಾಥನ್‌ ಬರೆದಿದ್ದ ಪತ್ರ]


ಸುಮಾರು ೨ ದಶಕಗಳ ಹಿಂದಿನ ಮಾತು ಎನಿಸಬಹುದು. ಆದರೆ, ಅದರಲ್ಲಿನ ಆಪ್ತತೆ, ಆತ್ಮೀಯತೆ, ಒಬ್ಬರ ಇತರರ ಪ್ರಯಾಣ, ಪ್ರವಾಸ, ಆರೋಗ್ಯ ಇವುಗಳ ಕುರಿತು ಇರುತ್ತಿದ್ದ ಕಾಳಜಿಯನ್ನು ಪತ್ರಮುಖೇನ ವ್ಯಕ್ತಪಡಿಸುತ್ತಿದ್ದರು. ೧೫ ಪೈಸೆ ಅಂಚೆ ಕಾರ್ಡಿನಲ್ಲಿ ಕ್ಷೇಮ, ಕುಶಲೋಪರಿ ಪತ್ರ ಬಂತೆಂದರೆ ಅದೇ ಖುಷಿ ತರುವ ವಿಚಾರ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಒಂದು ಉದ್ದನೆಯ ದಪ್ಪ ತಂತಿಗೆ ಪತ್ರಗಳನ್ನು ಚುಚ್ಚಿ (ಶೇಖರಿಸುತ್ತಿದ್ದ ವಿಧಾನ) ಇಡುತ್ತಿದ್ದದ್ದು ನೆನಪಿಗೆ ಬರುವುದು.

ಆದರೆ, ತಂತಿ ಅಥವಾ ಟೆಲಿಗ್ರಾಂ ಬಂತೆಂದರೆ, ಯಾರದ್ದಾದರೂ ಶೋಕದ ಸುದ್ದಿಯೆಂಬುದು ಜನಪ್ರಿಯ. ಜೊತೆಗೆ ಸಾಮಾನ್ಯವಾಗಿ ಅದು ತಲುಪುತ್ತಿದ್ದದ್ದು ರಾತ್ರಿಯ ವೇಳೆಗೆ ಎನ್ನಬಹುದು.
--------------
ಆಮೇಲಾಮೇಲೆ ಟೆಲಿಗ್ರಾಮ್ಗಳು ಉದ್ಯೋಗ, ಸಂತೋಷದ ವಿಚಾರಗಳಿಗೂ ಸಂಬಂಧಿಸಿದ್ದಾದರೂ ತಕ್ಷಣಕ್ಕೆ ಗಾಬರಿಯುಂಟು ಮಾಡುವಂತೆಯೇ ಇರುತ್ತಿದ್ದವು. ಇದರ ಒಂದು ಅನುಭವ ನನಗೇ ಆಗಿದೆ. ೧೯೯೨ ರ ಸುಮಾರಿನಲ್ಲಿ ಕೆಲಸಕ್ಕೆಂದು ಅರ್ಜಿ ಹಾಕಿದ್ದೆ. ನನ್ನ ಸ್ನೇಹಿತೆಯೊಬ್ಬರ ಕಚೇರಿಯಲ್ಲಿ ಉದ್ಯೋಗ ಖಾಲಿಯಿದ್ದುದರಿಂದ, ಅವರೂ ಸಹ ಬಯೋಡೇಟಾ ಕೊಡಿರೆಂದು ಕೇಳಿದ್ದರಿಂದ ಕೊಟ್ಟಿದ್ದೆ. ಸುಮಾರು ೧೦-೧೨ ದಿನಗಳ ನಂತರ ರಾತ್ರಿ ೮.೦೦ ರ ವೇಳೆಗೆ ಟೆಲಿಗ್ರಾಂ ಬಂದಿದೆ. ನಾನು ಮನೆಯಲ್ಲಿರಲಿಲ್ಲ. ತಕ್ಷಣಕ್ಕೆ ಮನೆಯಲ್ಲಿ ಗಲಿಬಿಲಿಯೂ ಆಗಿದ್ದು ನಂತರ ತಿಳಿದದ್ದು ಅದು ಬಿಪಿಎಲ್‌ ನವರು ಕಳಿಸಿದ್ದ ಸಂದರ್ಶನದ ತಂತಿ ಸಂದೇಶ ಎಂಬುದು.

ದೂರವಾಣಿಯ ಸಂಶೋಧನೆ, ಅದರ ವ್ಯಾಪ್ತಿ ವಿವರಿಸಲಸಾಧ್ಯವಾಗಿದೆ ಇಂದು. ಆದರೆ, ಅಂದಿನ ದಿನಗಳಲ್ಲಿ ಅದರ ಮಹತ್ವ ಸಿರಿವಂತರಿಗೆ ಮಾತ್ರವೇ ಇತ್ತೆನ್ನಬಹುದು. ದೂರವಾಣಿಯಲ್ಲಿ ಸಂಭಾಷಣೆಯ (ದೂರದೂರುಗಳಿಗೆ ಟ್ರಂಕಾಲ್‌ ಬುಕ್‌ ಮಾಡಿ ದಿನಗಟ್ಟಲೇ ಕಾಯುತ್ತಿದ್ದದ್ದು ಸರ್ವೇ ಸಾಮಾನ್ಯವಾಗಿತ್ತು) ನೆಪದಲ್ಲಿ ಪತ್ರದ ಬರವಣಿಗೆಗೆ ಕೊಂಚ ಹೊಡೆತ ಬಿದ್ದಿತ್ತೆಂದು ತಿಳಿಯಬಹುದು. ಆದರೂ ಪತ್ರಬರವಣಿಗೆ ನಡೆದೇ ಇತ್ತು. ಶುಭಾಶಯ ಪತ್ರಗಳ ಕಾಲದಲ್ಲಿಯೂ ಪತ್ರ-ಮಿತ್ರತ್ವ ಮುಂದುವರೆದಿತ್ತು. ಆಕಾಶವಾಣಿ/ದೂರದರ್ಶನಗಳಲ್ಲಿ ಪತ್ರೋತ್ತರ ಕಾರ್ಯಕ್ರಮಗಳನ್ನು ಕೇಳ/ಕಾಣಬಹುದಿತ್ತು. ಈಗಲೂ ಸಹ ಇದೆ.
--------------------
ಫ್ಯಾಕ್ಸ್ ಎಂಬ ಯಂತ್ರದಿಂದಾಗಿ ಚಿತ್ರ-ಬರಹ ಎರಡನ್ನೂ ಕಪ್ಪು-ಬಿಳುಪಿನಲ್ಲಿ ದೂರವಾಣಿಯ ಮೂಲಕ ಕಳಿಸಬಹುದಾದ ವ್ಯವಸ್ಥೆಯು ಮಾತಿಗೆ ಕಡಿವಾಣ (ಜೊತೆಗೆ ದೂರವಾಣಿ ಬಿಲ್ಲುಗಳಿಗೂ) ಹಾಕಿತೆನ್ನಬಹುದು. ಅಲ್ಲದೆ, ಇದರಿಂದಾಗಿ ಯಾವುದೇ ಮಾಹಿತಿಯೂ (ಮಾತಿನ ಮೂಲಕ ಮಾಡಿಕೊಂಡ)/ಒಪ್ಪಂದಗಳೂ ದುರುಪಯೋಗಕ್ಕೆ ಅವಕಾಶವಿಲ್ಲದಂತೆ ಉಪಯೋಗಕ್ಕೆ ಬಂದಿತೆನ್ನಬಹುದು.
-------------------
ಪೇಜರ್‌ ಎಂಬ ಪುಟ್ಟ ಯಂತ್ರದಿಂದ ಫೋನಿಗೆ ಗುದ್ದಾಯಿತು. ಅದಕ್ಕೂ ಪರವಾನಿಗಿ, ತೆರಿಗೆಪಾವತಿ... ಇತ್ಯಾದಿ ಚಾಲ್ತಿಯಲ್ಲಿತ್ತು ಎಂದು ನೆನಪು. ಗಣಕಯಂತ್ರದಲ್ಲಿನ ಮಾಯಾದರ್ಪಣ (?) ಅಂತರ್ಜಾಲದಿಂದಾಗಿ ಬರವಣಿಗೆಯೂ ನಿಂತಿತು. ಕೇವಲ ಚಿತ್ರ-ಧ್ವನಿ ಸಂದೇಶ (ವಿದ್ಯುನ್ಮಾನ ಚಿತ್ರ ಸಂದೇಶ)ಗಳ ಬಳಕೆ. ನಂತರ ಬಂದದ್ದೇ ಮೊಬೈಲ್‌ ಎನ್ನಬಹುದು. ಇದರಲ್ಲಿಯೂ ಸಹ ಸಂಕ್ಷಿಪ್ತ ಸಂದೇಶಗಳಿಂದಾಗಿ ಮಾತನಾಡುವ ವಿಚಾರಕ್ಕೆ ಕುತ್ತಾಯಿತು ಎನ್ನಬಹುದು. ಶುಭಾಶಯ ತಿಳಿಸುವಾಗೆಲ್ಲ ಎಸ್‌ಎಂಎಸ್‌ ಕಳಿಸಿದರೆ ಆಯಿತು. ಅತ್ತಕಡೆಯಿಂದ ಪ್ರತ್ಯುತ್ತರವೂ ಎಸ್‌ಎಂಎಸ್. ಇತ್ತೀಚೆಗಂತೂ ಚಲನಚಿತ್ರಗಳನ್ನೂ, ಧ್ವನಿತರಂಗಗಳನ್ನೂ ಅಚ್ಚಿಸಿ ಕಳಿಸಬಹುದು. ತಂತ್ರಜ್ಞಾನಕ್ಕೆ ಅಭಿನಂದನೆಗಳೆನ್ನಬಹುದು. ಅಲ್ಲದೇ ಅಂತರ್ಜಾಲದ ಬಹುಮಾಧ್ಯಮದ ಪ್ರಭಾವಿಗಳಾದ ವಿಡಿಯೋ ಚಾಟಿಂಗ್, ಟೆಕ್ಸ್ಟ್ ಚಾಟಿಂಗಿನಿಂದಾಗಿ ಅಲ್ಲಿಯೂ ಸಹ ಟೈಪಿಸುವುದು ಚುಟುಕವಾಗಿದೆ. ಇನ್ನೂ ಮುಂದುವರೆದಿರುವ ಸಂಕ್ಷಿಪ್ತದಲ್ಲಿ ಸಂಕ್ಷಿಪ್ತ ಬರವಣಿಗೆಗಳಿಗೆ ಟ್ಟಿಟ್ಟರ್‌ ಎಂಬುವ `ಟ್ವಿಟ್‌' ಬಂದಿದೆ. `ಎಸ್‌ಎಂಎಸ್‌ಗಳಿಂದಾಗಿ ಮಾತಿಗೂ ಬರ' ಬಂದಂತಾಗಿದೆ...
----------------------
ಇನ್ನು ಬ್ಯಾಂಕುಗಳಲ್ಲಿನ ವಹಿವಾಟಿನ ಕುರಿತ ಮಾಹಿತಿ, ಶೇರುವ್ಯಾಪಾರಗಳಲ್ಲಿನ ಮಾಹಿತಿ, ಎಟಿಎಂಗಳಲ್ಲಿ ಈ ಗಣಕಯಂತ್ರದ ಪರಿಧಿಯಿಂದಾಗಿ ಬರವಣಿಗೆ ಸಂಪೂರ್ಣ ನಿಂತಂತಾಯಿತು ಎನ್ನಬಹುದು. ಏಕೆಂದರೆ, ಕೆಲವು ಬಾರಿ ಈ ಸ್ಟೇಟ್‌ಮೆಂಟುಗಳನ್ನು ಅಚ್ಚಿಸಿ ಗ್ರಾಹಕರಿಗೆ ರವಾನಿಸಿರುತ್ತಾರೆ. ಜೊತೆಗೆ ಅಲ್ಲಿಯೂ ಸಹ ಸೈನು, ಸೀಲು ಇತ್ಯಾದಿ ಮಾಯವಾಗಿದೆ. ಕೊನೆಯಲ್ಲಿ ಒಂದು ಸಾಲು: ಕಂಪ್ಯೂಟರ್‌ ಜನರೇಟೆಡ್‌..... ನೊ ಸಿಗ್ನೇಚರ್‍ ರಿಕ್ವೈರ್‍ಡ್. ಹೀಗಾಗಿ ಕಚೇರಿಗಳಲ್ಲಿ ಸಹಿಗಳಿಗೆ ಚುಟುಕು ಸಹಿಗಳೂ ಸೇರಿವೆ (ಉದಾ: ಹಾಜರಾತಿ ಪುಸ್ತಕದಲ್ಲಿ ಕೇವಲ ಇನಿಷಿಯಲ್ಸ್ ಬರೆಯುತ್ತೇವೆ, ಕಾರಣ ಜಾಗ ಸಾಲದು). ಆದರೆ, ಕೆಲವೊಮ್ಮೆ ಇದರಿಂದಾಗಿ ಬ್ಯಾಂಕು, ಅಂಚೆ ಕಚೇರಿ, ವಿಮಾ ನಿಗಮ ಇಲ್ಲೆಲ್ಲ ನಮ್ಮ ಸಹಿ ಬೇಕಾದಾಗ ನಮ್ಮ ಸಹಿಗಳೇ ತಪ್ಪಾಗಿಬಿಡುವ ಸಾಧ್ಯತೆಗಳು ಹೆಚ್ಚಾಗಿವೆ ಎಂದರೆ ಅಚ್ಚರಿಯಿಲ್ಲ. ಏಕೆಂದರೆ, ಬ್ಯಾಂಕಿನಲ್ಲಾಗಲೀ ಇತರೆಡೆಯಾಗಲೀ ಒಬ್ಬ ವ್ಯಕ್ತಿಯ ಮಾದರಿ ಸಹಿಯನ್ನು (ಸ್ಪೆಸಿಮೆನ್‌ ಸಿಗ್ನೇಚರ್‍) ಕನಿಷ್ಠ ಮೂರು ಬಾರಿ ಮಾಡಿಸಿಕೊಂಡಿರುತ್ತಾರೆ. ಆದರೂ, ನಮ್ಮ ಸಹಿ ಕೆಲವೊಮ್ಮೆ ತಾಳೆಯಾಗದೇ (ಮೇಲಿನ ಹಾಜರಾತಿ ಪುಸ್ತಕದಲ್ಲಿನ ಕಾರಣದಿಂದಾಗಿಯೂ ಇರಬಹುದು ಅಥವಾ ಬರವಣಿಗೆಯು ತುಂಬಾ ಸೀಮಿತವಾಗಿರುವುದರಿಂದಲೂ ಇರಬಹುದು) ಅದು ನಮ್ಮಗಳ ಬಗ್ಗೆಯೇ ಅನುಮಾನ ವ್ಯಕ್ತಪಡಿಸುವಂತಹ ಪರಿಸ್ಥಿತಿಗಳೂ ಎದುರಾಗಿದ್ದನ್ನೂ ಕಂಡಿರುತ್ತೇವೆ. ಸಹಿ ಸರಿಯಿಲ್ಲ. ಫೋಟೋ ಕೊಡಿ, ಐಡಿ ಕಾರ್ಡ್ ಕೊಡಿ ಇತ್ಯಾದಿಗಳನ್ನು ಕೊಡುವ ಸಂದರ್ಭಗಳೂ ಬಂದಿರುತ್ತವೆ.
-----------------------
ಇಂತಹ ಒಂದು ವಿಚಾರಧಾರೆ ಇಲ್ಲಿ ಬರೆಯಲು ಕಾರಣ, ಏನಿರಬಹುದು ಎಂದು ನಿಮಗನಿಸಿದ್ದರೆ ಅದೂ ಅಚ್ಚರಿಯೇನಲ್ಲ.

ಯುಗಾದಿ ಹಬ್ಬದ ಮುನ್ನಾದಿನ ನನ್ನ ಸ್ನೇಹಿತ ಗೂಗಲ್ಲಿನ ಚಾಟಿನಲ್ಲಿ ಸಿಕ್ಕಿದಾಗ ಸರಳವಾಗಿ/ಸಂಕ್ಷಿಪ್ತವಾಗಿ ಅವನಿಗೆ `ಮುಂಚಿತವಾಗಿ' ಶುಭಾಶಯ ಕೋರಿದೆ. ಆಗ, ಅವನಿಂದ ಎಸ್‌ಎಂಎಸ್ ಬಿಟ್ಟು ಪೋನ್‌ ಮಾಡು ಎಂದ. ಆಗ ನನ್ನ ಕಡೆಯಿಂದ ಕಳಿಸಿದ ಉತ್ತರ, ಮೊಬೈಲಿನಲ್ಲಿಯೂ ಮಾತು ಕಡಿಮೆ, ಏಕೆಂದರೆ, ಅಲ್ಲಿಯೂ ಚುಟುಕು ಸಂದೇಶ ಕಳಿಸುವ ಅವಕಾಶ ಇದೆ, ಅಲ್ಲದೇ ತಂತ್ರಜ್ಞಾನದಿಂದಾಗಿ ಬರವಣಿಗೆ, ಮಾತು ಎಲ್ಲ ನಿಂತಿದೆ ಎಂದೆ. ಹೀಗೆ ಸಾಗಿದ್ದ ನಮ್ಮ ಚಾಟಿಂಗ್‌ ವಿಚಾರವು ನನ್ನಲ್ಲಿ ಈ ಒಂದು ಬರಹವನ್ನು ಬರೆಯುವಂತೆ ಚಿಂತನೆಗೆ ಹಚ್ಚಿತು.
----------------------
ಈ ಆಧುನಿಕ ತಂತ್ರಜ್ಞಾನ ಮತ್ತು ವೇಗದ ಜೀವನಗತಿಯಲ್ಲಿ ಪರಸ್ಪರ ಜನರ ಸಂಬಂಧಗಳು ದೂರವಾಗುತ್ತಿವೆ. ಪ್ರತಿಯೊಂದಕ್ಕೂ ಸಮಯಾಭಾವವು ಕಾಡುತ್ತಿರುವ ಈ ಸನ್ನಿವೇಶಗಳಲ್ಲಿ ಆಧುನಿಕ ತಂತ್ರಜ್ಞಾನಗಳಿಗೆ ಮೊರೆಹೋಗುವುದು ಸಾಮಾನ್ಯವಾಗಿದೆ. ತಂತ್ರಜ್ಞಾನದ ಜೊತೆಗೆ ಜನರಲ್ಲಿನ ಮುಖತ: ಭೇಟಿ, ಮಾತುಕತೆ ಇವೆಲ್ಲವುಗಳಿಗೂ ಮಿತಿಯುಂಟಾಗಿದೆ. ಒಂದು ರೀತಿಯಲ್ಲಿ ವಿಭಕ್ತ ಜೀವನದಲ್ಲಿ ಜನರು ನರಳುತ್ತಿದ್ದಾರೆ. ಹಿಂದೆಲ್ಲಾ ಒಂದು ಪತ್ರ ಅಥವಾ ದೂರವಾಣಿ ಕರೆ ಬಂತೆಂದರೆ ಅದೆಂತಹ ಸಂಭ್ರಮ, ಖುಷಿ ಇರುತ್ತಿತ್ತು. ಇಂದು ಹೆಚ್ಚು ಕಡಿಮೆ ಎಲ್ಲರಲ್ಲಿಯೂ ಸಂಚಾರಿ ದೂರವಾಣಿ (ಮೊಬೈಲ್‌) ಇದ್ದರೂ ಮಾತಿಗೆ ಬರ ಬಂದಿದೆ. ಎಸ್‌ಎಂಎಸ್ ಗಳ ಹಾವಳಿಯಿಂದಾಗಿ ಜನರ ನಡುವಿನ ಮಾತುಕತೆ, ಭೇಟಿ ಎಲ್ಲವೂ ಕೃತಕ, ಕನ್ನಡಿಯೊಳಗಿನ ಗಂಟು ಎನ್ನಬಹುದು. ಖುದ್ದು ಭೇಟಿಯಾಗುವ ಪ್ರಸಂಗಗಳು ಕಡಿಮೆಯಾಗಿರಲು ಹಲವು ಕಾರಣಗಳಿವೆ. ಉದ್ಯೋಗದಲ್ಲಿನ ಸಮಯಾಭಾವ ಅಥವಾ ಹೆಚ್ಚಿನ ಸಮಯ ಉದ್ಯೋಗಸ್ಥಳಗಳಲ್ಲಿ ಕಳೆಯುವುದು, ವಾರಾಂತ್ಯದಲ್ಲಿಯೂ ಮನೆಯವರೊಂದಿಗೆ ಇರಲಾಗದ ಕೆಲವು ಪ್ರಸಂಗಗಳು, ರಾತ್ರಿ ಪಾಳಿ, ಹಗಲು ನಿದ್ದೆ ಅಥವಾ ರಜೆಯ ಅಭಾವ ಇತ್ಯಾದಿ. ಒಟ್ಟಿನಲ್ಲಿ ಪರಸ್ಪರ ಸಂಬಂಧಗಳಲ್ಲಿ ಬಿರುಕುಂಟಾದ ಪ್ರಸಂಗಗಳನ್ನೂ ಕಾಣಬಹುದು ಹಾಗೆಯೇ ವಿರುದ್ಧ ಗತಿಗಳನ್ನೂ ಕಾಣಬಹುದು.


----------------------
ಇವೆಲ್ಲ ಯೋಚನೆಗಳೂ ನನ್ನ ಸ್ನೇಹಿತನೊಡನೆ ಚಾಟಿಸುವಾಗ (ಗೂಗಲ್‌) ನಾವೇಕೆ ಹೀಗಾದೆವು ಎನ್ನಿಸಿ, ಸಹಬ್ಲಾಗಿಗರೊಡನೆ ಹಂಚಿಕೊಳ್ಳುವ ಎಂದು ಬರೆಯಲು ಪ್ರೇರೇಪಣೆ ನೀಡಿತು. ಕ್ರೋಢೀಕೃತವಾಗಿ ಹೇಳಬೇಕೆಂದರೆ, ತಂತ್ರಜ್ಞಾನದ ಅತಿಬಳಕೆಯಿಂದ ಸಮಾಜದಲ್ಲಿ ಅಂದರೆ, ಪೋಷಕರು, ಬಂಧು-ಮಿತ್ರರು ಇತ್ಯಾದಿಗಳವರ ನಡುವಿನ ಸಂಬಂಧಕ್ಕೆ ಕುಂದಂತೂ ಆಗುತ್ತಿದೆ. ಜನರೊಳಗಿನ ಭಾವನೆಗಳನ್ನು ಮಾತಿನ ಮೂಲಕ, ಭೇಟಿಯ ಮೂಲಕ ವ್ಯಕ್ತಪಡಿಸಲಾಗದೇ ಒಂದು ವಿಧದ ಮಾನಸಿಕ ಖಿನ್ನತೆಯುಳ್ಳವರನ್ನೂ ಕಾಣಬಹುದಾಗಿದೆ. ಬಹುಮಾಧ್ಯಮ ಬಹುಮಂದಿಯ ಬಾಂಧವ್ಯ, ಬಂಧನಗಳನ್ನು ಬೀದಿಗೆಸೆಯುವಂತಾಗಬಾರದು, ಅಲ್ಲವೇ?
-------------------
ಆದರೆ, ಇವೆಲ್ಲವೂ ಹಳತಾದರೂ ಖುಷಿ ಕೊಡುವಂತೆಯೇ, ಹೊಸ ಆವಿಷ್ಕಾರಗಳೂ ಸಹ ಜನರಲ್ಲಿ, ಅವರ ಬಾಳಿನಲ್ಲಿ ಅನೇಕ ಬದಲಾವಣೆಗಳನ್ನು, ಖುಷಿ, ಸಂತಸದ ಕ್ಷಣಗಳನ್ನೂ ತಂದಿದೆಯೆನ್ನಬಹುದು. ಉದಾಹರಣೆಗೆ, ನಾವೀಗ ಉಪಯೋಗಿಸುತ್ತಿರುವ ಮಾಯಾದರ್ಪಣದಂತಿರುವ - ಅಂತರ್ಜಾಲ. ವಿಶ್ವವನ್ನೇ ಚಿಕ್ಕದಾಗಿ ಮಾಡಿರುವ, ಮನೆಯವರಿಂದ, ಸ್ನೇಹಿತರಿಂದ, ಶಾಲೆಯಿಂದ, ಉದ್ಯೋಗದಿಂದ ಹೀಗೆ ವಿದೇಶಗಳಲ್ಲಿರುವವರೊಡನೆಯೂ ಸಂಪರ್ಕ ಸಾಧಿಸಬಹುದಾದ ಕ್ರಾಂತಿಯೇನೂ ಕಡಿಮೆಯಲ್ಲ. ಈ ತಂತ್ರಜ್ಞಾನದಿಂದಾಗಿ ಅದೆಷ್ಟೋ ಮಂದಿಗೆ ಉದ್ಯೋಗ, ಜೀವನ ಎಲ್ಲ ಸಿಕ್ಕಿರುವಂತೆಯೇ ಹಳೆಯ ಹಾಗೂ ಹೊಸಸಂಬಂಧಗಳೂ ನಿರಂತರವಾಗಿ ಸಂಪರ್ಕದಲ್ಲಿರುವಂತೆ ಆಗಿದೆ. ಅದೂ ಅಲ್ಲದೆ, ವಿಡಿಯೋ ಕಾನ್ಫರೆನ್ಸ್ಗಳ ಮೂಲಕ ಪರ ಊರಿನಲ್ಲಿರುವ, ಅಲ್ಲಿನವರ ಆರೋಗ್ಯ, ವೈದ್ಯಕೀಯ ಚಿಕಿತ್ಸೆ, ವಿದ್ಯೆ, ಉದ್ಯೋಗ, ವಿವಾಹ ಹೀಗೆ ಸಮಾಜದಲ್ಲಿ ಉಪಯೋಗವಾಗಿದೆ ಮತ್ತು ಉಪಯೋಗವಾಗುತ್ತಿದೆ. ಅನೇಕ ಜನರ ಪ್ರಾಣದಾನಕ್ಕೆ, ವಿದ್ಯಾದಾನಕ್ಕೆ, ಇವೆಲ್ಲ ಆಧುನಿಕ ಸಂಪರ್ಕಸಾಧನಗಳೂ ಸಹ ಸಹಕಾರಿಯಾಗಿವೆ.
---------------------------
ನಿನ್ನೆಯ ಡಾ. ಡಿ.ವಿ.ಗುಂಡಪ್ಪನವರ ಜನ್ಮದಿನ (೧೨೩ನೇ ಜನ್ಮದಿನ). ಅವರನ್ನೂ ನೆನಪಿಸಿಕೊಳ್ಳುತ್ತಾ....ಹಾಗಾಗಿ ಡಿವಿಜಿಯವರ ಈ ನುಡಿಮುತ್ತನ್ನು ಸದಾ ನೆನಪಿನಲ್ಲಿಡಬೇಕೆನಿಸುತ್ತದೆ.

`ಹೊಸ ಚಿಗುರು ಹಳೆ ಬೇರು, ಕೂಡಿರಲು ಮರ ಸೊಬಗು'
-------------------------
ಇದಿಷ್ಟನ್ನೇ ನೆನೆಯುವ...

ಇನ್ನೂ ಬರೆಯಬಹುದಿತ್ತಾದರೂ, ಓದುಗರಿಗೆ ಬೇಸರವಾಗದಿರಲೆಂದು ಸಂಕ್ಷಿಪ್ತವಾಗಿ ಬರೆಯುವ ಪ್ರಯತ್ನ ಮಾಡಿದೆ. ನೀವೇನಂತೀರಿ? ಎಂಬ ಕ್ಷಣ ಕುತೂಹಲವಿದೆ. ಚುಟುಕಾಗಿರಲಿ/ದೀರ್ಘವಾಗಿರಲಿ, ನಿಮ್ಮ ಪ್ರತಿಕ್ರಿಯೆಗಳನ್ನು ಬರೆಯಲು/ಟೈಪಿಸಲು/ಕಳಿಸಲು ಮರೆಯಬೇಡಿ!
-------------
[ಈ ಲೇಖನದ ಕರಡು ಪ್ರತಿಯನ್ನು ನನ್ನಿಬ್ಬರು ಹಿರಿಯ ಮಿತ್ರರಿಗೆ ಕಳಿಸಿದ್ದೆ. ಅವರುಗಳು ಕೆಲವೊಂದು ಸಾಲುಗಳಲ್ಲಿ ವಿಷಯವನ್ನು ಮುಕ್ತವಾಗಿಸಿ ಹಾಗೂ ತಮ್ಮಂತರಂಗದಲ್ಲಿನ ವಿಷಯಗಳನ್ನು ತಿಳಿಸಿ ಈ ಲೇಖನಕ್ಕೆ ಮತ್ತಷ್ಟು ಶಕ್ತಿತುಂಬಿದರು. ಅವರಿಗೆ ನನ್ನ ಕೃತಜ್ಞತೆಗಳು]

--------------- ಚಿತ್ರ ಕೃಪೆ: ಐಸ್ಟಾಕ್ ಫೋಟೋ
----------------
ಲೇಖನ: ಚಂದ್ರಶೇಖರ ಬಿಎಚ್.
೧೯.೦೩.೨೦೧೦

ಮಂಗಳವಾರ, ಫೆಬ್ರವರಿ 16, 2010

ಜೊತೆ, ಜೊತೆಯಲಿ...

Alone we can do so little: Together we can do so much. -Helen Keller
ಎಷ್ಟೊಂದು ಅರ್ಥಗರ್ಭಿತವಾದ ನುಡಿಗಳಿವು. ಎಲ್ಲ ಸಂದರ್ಭದಲ್ಲಿಯೂ ಒಪ್ಪುವಂತಹ ಮಾತುಗಳು. ಕೆಲವೊಂದು ಸಂದರ್ಭದಲ್ಲಿ ಒಪ್ಪಿಗೆ ಆಗದಿರಬಹುದು! ಅದು ಬೇರೆ ಮಾತು!!

ಒಬ್ಬ ವ್ಯಕ್ತಿಯ ಚಾರಿತ್ರ್‍ಯ ನಿರ್ಮಾಣವೇ ಆಗಲೀ, ಒಂದು ಸಂಘ-ಸಂಸ್ಥೆಯ ಸ್ಥಾಪನೆಯೇ ಆಗಲಿ, ಒಂದು ಆಟೋಟ, ಸಂಗೀತ ಕಚೇರಿ, ನಾಟಕ, ಸಾಮಾಜಿಕ ಸೇವೆಗಳು, ಸಮಾಜಕ್ಕೆ ಬೇಕಾದ ಉಪಯುಕ್ತ ಯೋಜನೆಗಳು ಇವೆಲ್ಲವಕ್ಕೂ ಇದು ಅನ್ವಯಿಸುವಂತಹುದು.

ಒಗ್ಗಟ್ಟಿನಲ್ಲಿ ಬಲವಿದೆ!
ಉದಾಹರಣೆಗೆ ಒಂದು ಸಂಸ್ಥೆಯಲ್ಲಿ ಒಂದು ಸಮಾರೋಪ ಸಮಾರಂಭ ಎಂದಿಟ್ಟುಕೊಳ್ಳೋಣ. ಇಲ್ಲಿ ಒಬ್ಬೊಬ್ಬರೂ ಒಂದೊಂದು ಕೆಲಸ ಎಂದು ಹಂಚಿಕೊಂಡು, ಒಟ್ಟಾಗಿ ಕಲೆತು ಯಾರು ಯಾವ ಯಾವ ಕೆಲಸ ಮಾಡಬೇಕೆಂಬುದನ್ನು ಮೊದಲೇ ಗೊತ್ತುಪಡಿಸಿಕೊಂಡು ಮುಂದುವರೆದರೆ ಅಲ್ಲಿನ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಒಬ್ಬನೇ ಎಲ್ಲವನ್ನೂ ನಿಭಾಯಿಸುತ್ತೇನೆ ಎಂದು ಹೊರಟರೆ, ಆಗದು, ಕೆಲಸವೂ ಸಾಗದು, ಮುಗಿಯದು. ನೂರು ಜನರಿಗೆ ಅಂಚೆ ಕಳಿಸಬೇಕಿದೆ. ವಿಳಾಸವೂ ಇದೆ. ಪತ್ರವೂಇದೆ. ಆದರೆ, ಒಬ್ಬನೇ ಪತ್ರವನ್ನು ಮಡಿಸಿ, ವಿಳಾಸ ಬರೆದು/ಅಚ್ಚಿಸಿ/ಟೈಪಿಸಿ, ಗೋಂದು ಹಚ್ಚಿ, ಅಂಚೆ ಪೆಟ್ಟಿಗೆಗೆ ಹಾಕುವ ಸಮಯವನ್ನು ಇಬ್ಬರು - ಮೂರು ಮಂದಿಯೊಂದಿಗೆ ಹಂಚಿಕೊಂಡರೆ, ಕೆಲಸವೂ ಬೇಗನೇ ಮುಗಿಯುತ್ತದೆ, ಜೊತೆಗೆ ಕೆಲಸ ಮುಗಿದದ್ದೂ ತಿಳಿಯುವುದಿಲ್ಲ.

ಹೇಗೆಂದರೆ

, ಒಂದು ಕೈಯಿಂದ ಚಪ್ಪಾಳೆ ಹೊಡೆಯಲು ಆಗುವುದಿಲ್ಲ. ಚಿಟಿಕೆ ಹೊಡೆಯಬಹುದು. ಚಪ್ಪಾಳೆಗೆ ಎರಡೂ ಕೈಗಳು ಬೇಕು. ಇಲ್ಲವಾದರೆ ಚಪ್ಪಾಳೆಯ ಸದ್ದೂ ಕೇಳುವುದಿಲ್ಲ. ಹೀಗೆಯೆ ಒಂದು ಕೆಲಸಕ್ಕೆ ಎರಡಕ್ಕಿಂತ ಹೆಚ್ಚು ಕೈಗಳು ಸೇರ ಯಾವುದೇ ಕೆಲಸವನ್ನು ಮಾಡಿದಾಗ, ಅಂದರೆ 'ಡಿವಿಷನ್‌ ಆಫ್ ಲೇಬರ್‍' ಮಾಡಿಕೊಂಡು ಕಾರ್ಯನಿರ್ವಹಿಸಿದಾಗ ಅಂತಹ ಕೆಲಸ ಕಾರ್ಯಗಳು ಬೇಗನೇ ಮತ್ತು ಅರ್ಥಪೂರ್ಣವಾಗಿ ಸಾಗುತ್ತದೆ.

ಇನ್ನೊಂದು ವಿಚಾರವಾಗಿ ಈ ಉದಾಹರಣೆಯನ್ನು ತೆಗೆದುಕೊಳ್ಳಬಹುದು. ಒಬ್ಬಟ್ಟು ಮಾಡಲು ಕುಳಿತರೂ ಹೂರಣ ಕಲಸಿ, ಲಟ್ಟಿಸಿಕೊಡುವವರು ಒಬ್ಬರಿದ್ದು, ಮತ್ತೊಬ್ಬರು ಬೇಯಿಸುತ್ತಾ ಹೋದರೆ, ಕೆಲಸದ ಹೊರೆ ಹೊರೆಯೆನಿಸುವುದಿಲ್ಲ. ನೂರು ಜನಕ್ಕೆ ಬೇಕಾದರೂ ಹೋಳಿಗೆಯ ರುಚಿಯ ಸವಿಸಬಹುದು, ಒಗ್ಗಟಿನಿಂದ ಕೆಲಸ ಹಂಚಿಕೊಂಡಿದ್ದರೆ. ಇಲ್ಲವಾದರೆ, ಒಗ್ಗರಣೆ ಹಾಕುವ ಜನರೇ ಜಾಸ್ತಿಯಾಗುತ್ತಾರೆ.

ಇನ್ನು ಒಂದು ಸಿನಿಮಾ ನಿರ್ಮಾಣ ಆಗಬೇಕೆಂದರೆ, ನೂರಾರು ಮಂದಿಯ ದುಡಿತ ಇದ್ದರೆ ಮಾತ್ರವೇ ನಾವು, ನೀವು ಚಿತ್ರ ನೋಡಿ ನಲಿಯಬಹುದು. ಒಬ್ಬ ಅಥವಾ ಒಬ್ಬಿಬ್ಬರಿಗಲ್ಲ ಅದರ ಯಶಸ್ಸು ಸಲ್ಲುವುದು, ಒಂದು ತಂಡಕ್ಕೆ.

ಏಕವ್ಯಕ್ತಿ ಪ್ರದರ್ಶನಗಳೂ ನಡೆಯುತ್ತವೆ. ಆದರೆ, ನೋಡುವ ಜನರು ನೂರಾರಿದ್ದರೆ ಮಾತ್ರವೇ ಅದಕ್ಕೆ ಯಶಸ್ಸು, ಹೆಸರು, ಇತ್ಯಾದಿ. ಆ ಏಕ ವ್ಯಕ್ತಿ ಪ್ರದರ್ಶನ ನಡೆಸಿಕೊಡಬೇಕಾದರೂ, ರಂಗಸ್ಥಳ, ವಸ್ತ್ರವಿನ್ಯಾಸ, ಲೈಟಿಂಗ್ಸ್ ಇವೆಲ್ಲದರ ಜೊತೆಗೆ ಜನರೂ ಬಂದರೆ ಮಾತ್ರವೇ ಸಾಧನೆ. ಇಲ್ಲವಾದರೆ,....

ಅದಕ್ಕೇ, ಈ ಮೇಲಿನ ಮಾತನ್ನು ಸರ್ವಕಾಲಕ್ಕೂ ಒಪ್ಪುವಂತಹದ್ದು ಎಂದಿದ್ದು. ಇದು, ಎಂದಿಗೂ ಹುಟ್ಟಿನಿಂದ ಸಾವಿನವರೆವಿಗೆ ಮುಖ್ಯವೆನಿಸುತ್ತದೆ.
Getting together is a start, remaining together is advancement, working together is an achievement.
ನೀವೇನಂತೀರಿ???

[ಈ ಲೇಖನದ ಓದಿಗೆಂದು ಮಿತ್ರರಾದ ಶ್ರೀ ಪರಾಂಜಪೆಯವರ (http://nirpars.blogspot.com/)ಸಲಹೆಗೆ ಕಳಿಸಿದ್ದೆ. ಅವರು ಚಪ್ಪಾಳೆಯ ವಿಷಯವನ್ನು ತಿಳಿಸಿ, ಇದನ್ನೂ ಅಳವಡಿಸಿಕೊಂಡರೆ ಚೆನ್ನಾಗಿರುತ್ತದೆ ಎಂದರು. ಉತ್ತಮ ಸಲಹೆಗಾಗಿ ಅವರಿಗೆ ಧನ್ಯವಾದಗಳು]
ಚಂದ್ರಶೇಖರ ಬಿ.ಎಚ್. ೧೬೦೨೨೦೧೦

ಬುಧವಾರ, ಜನವರಿ 13, 2010

ಸಂಕ್ರಾಂತಿಯ ಶುಭಾಶಯಗಳು!

ಸಂಕ್ರಾಂತಿಯು ಜಗದ ಜನರಲ್ಲಿ ಮತ್ತಷ್ಟು ಹೊಸ ಕಾಂತಿಯನು, ಶಾಂತಿಯನು ತರಲೆಂದು ಆಶಿಸುತ್ತಾ... ಎಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳು.


ಸೋಮವಾರ, ಜನವರಿ 11, 2010

ರಾಷ್ಟೀಯ ಯುವ ದಿನಾಚರಣೆ - ಸ್ವಾಮಿ ವಿವೇಕಾನಂದರು

उत्तिष्ठता जाग्रत, प्राप्यवरान् निबॊधता ।
ಉತ್ತಿಷ್ಠತಾ ಜಾಗ್ರತ, ಪ್ರಾಪ್ಯವರಾನ್ ನಿಬೋಧತಾ

ಏಳಿ, ಎದ್ದೇಳಿ, ಗುರಿ ಮುಟ್ಟುವವರೆಗೂ ನಿಲ್ಲದಿರಿ! ಈ ಸಿಂಹಘರ್ಜನೆಯನ್ನು ಕೇಳದವರಾರು? ಇದು ಹಿಂದೂ ಸಂನ್ಯಾಸಿ, ಮಹಾನ್ ದೇಶಭಕ್ತ, ಯುವಶಕ್ತಿಯ ಪ್ರತೀಕ ಸ್ವಾಮಿ ವಿವೇಕಾನಂದರದೆಂದು ಎಲ್ಲರೂ ತಿಳಿದಿರುವವರೇ?

ಜನವರಿ ೧೨, ೧೮೬೩: ಶ್ರೀ ರಾಮಕೃಷ್ಣ ಪರಮಹಂಸರು ಮತ್ತು ಶ್ರೀ ಮಾತೆ ಶಾರದಾದೇವಿಯರ ನೇರ ಶಿಷ್ಯಮ ಪ್ರೀತಿಯ ನರೇನ್ ಅಂದರೆ, ಮುಂದೆ ಸ್ವಾಮಿ ವಿವೇಕಾನಂದ ಎಂಬ ಹೆಸಿರನಿಂದ ಭಾರತೀಯತೆಯನ್ನು ವಿಶ್ವಕ್ಕೇ ಸಾರಿದ ಧೀಮಂತರ ಜನ್ಮದಿನವಿದು. ನಾಳೆಗೆ ೧೪೭ ನೇ ವರ್ಷದ ಜನ್ಮದಿನ.

೧೯೮೪ ರಲ್ಲಿ, ಭಾರತ ಸರ್ಕಾರವು ಸ್ವಾಮೀಜಿಯವರ ಜನ್ಮದಿನಾಚರಣೆಯನ್ನು `ರಾಷ್ಟ್ರೀಯ ಯುವ' ದಿನವೆಂದು ೧೯೮೫ರಿಂದ ಜಾರಿಗೆ ಬರುವಂತೆ ಆದೇಶಿಸಿತು. ಭಾರತ ಸರ್ಕಾರದ ಆದೇಶದ ನುಡಿಗಳು: "It was felt that the philosophy of Swamiji and the ideals for which he lived and worked could be a great source of inspiration for the Indian Youth.'

೧೯೮೫ರಿಂದ ಚಾಚೂ ತಪ್ಪದೆ ಯುವದಿನವನ್ನು ಆಚರಿಸುತ್ತಾ, ಹಲವು ಸಂಘಸಂಸ್ಥೆಗಳು, ಸರ್ಕಾರದ ವತಿಯಿಂದ, ಸರ್ಕಾರೇತರ ಹಾಗೂ ಶ್ರೀ ರಾಮಕೃಷ್ಣ ಮಿಷನ್ ವತಿಯಿಂದ ಆಚರಿಸುತ್ತಾ ಬಂದಿರುತ್ತಾರೆ. ಅನೇಕ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಈ ಸಂದರ್ಭದಲ್ಲಿ ನಡೆಸುತ್ತಾ ಬಂದಿರುವುದನ್ನು ಗಮನಿಸಬಹುದು.

ಸ್ವಾಮಿ ವಿವೇಕಾನಂದರು ಕೇವಲ ಯುವಕರಿಗಷ್ಟೇ ಅಲ್ಲ, ಎಲ್ಲ ವಯೋಮಾನದವರಿಗೂ, ಸ್ರೀ-ಪುರುಷರಿಗೂ ಬೇಕಾದಂತಹ ಶಕ್ತಿಯ ಸಿಂಚನ. ಅವರ ಮಿಂಚಿನಂತಹ ಮಾತುಗಳು ಅಧೀರನನ್ನು ಸಹ ಧೀರನನ್ನಾಗಿ ಮಾಡುವಂತಹವು. ಯುವಶಕ್ತಿಯನ್ನು ಒಂದುಗೂಡಿಸುವ ಅವರ ಸಿಂಹವಾಣಿಯನ್ನು ನೆನೆಯುತ್ತಾ, ಈ ಶಕ್ತಿಯನ್ನು ಉತ್ತಮ ಸಮಾಜ, ಜನತೆ, ಘನತೆಯನ್ನು ಮೈಗೂಡಿಸಿಕೊಳ್ಳುವಲ್ಲಿ ಪ್ರೇರೇಪಿಸುವ ಶಕ್ತಿಯನ್ನಾಗಿ ಮಾಡಿಕೊಳ್ಳುವ..

  • All differences in this world are of degree, and not of kind, because oneness is the secret of everything.
  • Condemn none: if you can stretch out a helping hand, do so. If you cannot, fold your hands, bless your brothers, and let them go their own way.
  • If faith in ourselves had been more extensively taught and practiced, I am sure a very large portion of the evils and miseries that we have would have vanished.
  • If money help a man to do good to others, it is of some value; but if not, it is simply a mass of evil, and the sooner it is got rid of, the better.
  • The world is the great gymnasium where we come to make ourselves strong.
  • Take up one idea. Make that one idea your life - think of it, dream of it, live on idea. Let the brain, muscles, nerves, every part of your body, be full of that idea, and just leave every other idea alone. This is the way to success.

ಜುಲೈ ೪, ೧೯೦೨ರಂದು ಸ್ವಾಮಿ ವಿವೇಕಾನಂದರು ದೇಹತ್ಯಾಗವಾಯಿತು.

ಆತ್ಮನೋ ಮೋಕ್ಷಾರ್ಥಂ ಜಗತ ಹಿತಾಯ ಚ - ಇದು ಬೆಂಗಳೂರಿನ ಶ್ರೀ ರಾಮಕೃಷ್ಣ ಮಠದಲ್ಲಿ ಕಂಡು ಬರುವ ಸಂಸ್ಕೃತೋಕ್ತಿ.

ಆ ಮಹಾನ್ ಚೇತನಕ್ಕೆ ನಮ್ಮೆಲ್ಲರ ನಮನಗಳು.

ಬುಧವಾರ, ಜನವರಿ 6, 2010

ಅವರ ಹಣೆ ಬರಹ??!!

ಇದು ಯಾರ ಬರೆದ ಕಥೆಯೋ,
ನನಗಾಗಿ ಬಂದ ವ್ಯಥೆಯೋ??

ಈ ಹಾಡಿನ ಸಾಲುಗಳನ್ನು ಕೆಲವೊಮ್ಮೆ ನಮ್ಮಷ್ಟಕ್ಕೆ/ ತಮ್ಮಷ್ಟಕ್ಕೆ/ ನಿಮ್ಮಷ್ಟಕ್ಕೆ ನೀವೇ ಹೇಳಿಕೊಂಡಿರಬಹುದು!?

ಇದೇಕೆ ಹೀಗೆಂದರೆ, ಕಳೆದವಾರ ಮೈಸೂರಿಗೆ ಹೋಗಿದ್ದಾಗ ಆದ ಅನುಭವ ಹಂಚಿಕೊಳ್ಳುವ ಎನಿಸಿತು.
ಚಾಮುಂಡಿ ಬೆಟ್ಟದ ತಪ್ಪಲಿಗೆ ಬರುವ, ನಂಜನಗೂಡಿನ ದಾರಿಯಲ್ಲಿರುವ ಶ್ರೀ ಸಚ್ಚಿದಾನಂದ ಗಣಪತಿ ಆಶ್ರಮಕ್ಕೆ ಹೋಗಿದ್ದೆವು. ವಾಪಸ್ಸು ಬರುವಾಗ ನಗರ ಬಸ್ ನಿಲ್ದಾಣ (ಇಲ್ಲಿ ನಬನಿ ಎಂದೇ ಪರಿಚಿತ) ಬಸ್ಸು ಬಂದಿತು. ಇನ್ನೂ ಹತ್ತುತ್ತಿರುವಾಗಲೇ ಚಾಲಕ ಹೊರಟ. ಕಷ್ಟಪಟ್ಟು ಹತ್ತಿದ್ದಾಯಿತು. ಮಕ್ಕಳೂ ಜೊತೆಯಲ್ಲಿದ್ದರು. ಒಬ್ಬ ವೃದ್ಧರು ತರಕಾರಿ ಚೀಲಗಳ ಸಮೇತ ಮೆಟ್ಟಿಲಲ್ಲಿ ಬೀಳುವಂತಾಗಿ ಜೋತಾಡಿದರು.
ಮುಂದಿನ ನಿಲ್ದಾಣದಲ್ಲಿ, ಕಾಲೇಜು ಹುಡುಗರು, ಹುಡುಗಿಯರು ಬಸ್ಸು ಹತ್ತುವಾಗಲೇ ಬಸ್ಸನ್ನು ಚಲಾಯಿಸಿದ ಚಾಲಕ. ಅದಕ್ಕೆ ಕಂಡಕ್ಟರನೂ ಸಮ್ಮತಿಸಿದ. ಒಂದು ಹುಡುಗ ಮತ್ತು ಹುಡುಗಿ ಪೂರ್ಣವಾಗಿ ಬೀಳುವುದೊಂದು ಬಾಕಿ. ಕೊನೆಗೂ ಬಸ್ಸು ಹತ್ತಿದರು. ನಾನೂ ಸಹ ನನ್ನ ತಂಗಿಯ ಮಗಳನ್ನು ಹತ್ತಿಸುವಾಗ ಹೀಗೇ ಆಗಿತ್ತು. ಕಂಡಕ್ಟ್ರ ಬಂದ. ನಿಲ್ಲಿಸಿ ಎಂದರೂ ರೈಟ್ ಹೇಳೋದ್ಯಾಕೆ? ಬಿದ್ದರೆ ಏನ್ರೀ ಮಾಡೋದು ಎಂದರೆ, ಅವನು ಸಾರಿ ಅಥವಾ ಬೇರೇನಾದರೂ ಹೇಳಬಹುದಿತ್ತು. ಆದರೆ, ಅವ ಅಂದಿದ್ದು ನನ್ನನ್ನಷ್ಟೇ ಅಲ್ಲ ಅಲ್ಲಿದ್ದ ಆ ಮೂರ್‍ನಾಲ್ಕು ಹುಡುಗ-ಹುಡುಗಿಯರನ್ನೂ ಕೆರಳಿಸಿತು.

ಬಿದ್ರೆ ಅವರ ಹಣೆ ಬರಹ. ನಾನೇನ್ಮಾಡಕ್ಕಾಗಲ್ಲ - ಈ ಮಾತು ಯಾವನಿಗೇ ಆಗಲಿ ಹೇಗಾಗಿರಬೇಡ?

ಆಮೇಲೆ, ಅಲ್ಲಿ ಬಸ್ಸು ನಿಲ್ಲಿಸುವ ಹಾಗಿಲ್ಲ. ಟ್ರಾಫಿಕ್ ಪೊಲೀಸರು ಬಿಡಲ್ಲ, ಎಂದು ಬೇರೇನೋ ಸಬೂಬು ಹೇಳಿದ. ಅಷ್ಟಕ್ಕೂ ಅಲ್ಲೇನೂ ಭಾರೀ ಸಂಚಾರ ದಟ್ಟಣೆಯಿರುವುದಿಲ್ಲ ಮತ್ತು ಜನರ ತಳ್ಳಾಟವೂ ಇರುವುದಿಲ್ಲ. ಅಲ್ಲದೆ ಅಲ್ಲಿ ನಿಲ್ದಾಣವೂ ಸಹ ಇದೆ. ನಾವೂ ಜಗಳ ಮಾಡಿದ್ದು ಆಯಿತು. ಉಪಯೋಗವೇನು? ಎಮ್ಮೆ ಮೇಲೆ ನೀರು ಸುರಿದಂತೆ ಅಷ್ಟೆ.

ಒಂದು ಹುಡುಗಿಯಂತೂ, ನಮ್ಮ ಸೀನಿಯರ್‍ಸ್ ಇದ್ದಿದ್ರೆ ಈವಯ್ಯನಿಗೆ ಸರಿಯಾಗಿ ಮಾಡ್ತಿದ್ರು, ಎಂದು. ಏಕೆಂದರೆ, ಆ ಹುಡುಗಿಯ ಕೈ ಬಾಗಿಲಿಗೆ ಸಿಕ್ಕು ತರಚಿತ್ತು.

ಆಗನ್ನಿಸಿದ್ದು, ಅವನಿಗೋ, ಅವನ ಆಪ್ತರಿಗೋ ಇದೇ ರೀತಿ ಆದರೆ ಅಥವಾ ಆಗಿದ್ದರೆ ಅವನ ಮನಸ್ಥಿತಿ ಹೇಗಿರುತ್ತೆ? ಒಬ್ಬರಿಗೆ ಕೆಡಕು ಬಯಸಬಾರದು. ಇಂತಹ ಚಾಲಕ/ನಿರ್ವಾಹಕರಿಂದ ಅವರಾಡುವ ಮಾತುಗಳಿಂದ ಜನರು ಮನಸ್ಸಿನಲ್ಲಿಯೇ ಅಥವಾ ಬಾಯಿಬಿಟ್ಟೇ ಹೇಳುವಂತಹ ಪ್ರಸಂಗಗಳಿವು.
ಇದು ಒಂದು ಬಸ್ಸಿನಲ್ಲಿನ ಸಂಚಾರದ ಅನುಭವವಲ್ಲ. ಹಿಂದಿನ ದಿನ ಬೃಂದಾವನಕ್ಕೆ ಹೋದಾಗಲೂ ಸಹ ಇದೇ ರೀತಿಯ ಚಿತ್ರಣಗಳನ್ನು ಕಂಡಿದ್ದೆ.

ಜನರೊಂದಿಗೆ ಪ್ರತಿನಿತ್ಯವೂ ಬೆರೆಯುವ ಇವರಿಗೆ ಸ್ವಲ್ಪವಾದರೂ ಸೌಜನ್ಯ, ಸಭ್ಯತೆ, ಕರುಣೆ ಇವೆಲ್ಲ ಇದ್ದರೆ ಪ್ರಯಾಣಿಕರು ಬಸ್ಸಿನ ಚಕ್ರಕ್ಕೆ ಸಿಲುಕಿ ನರಳುವುದು, ಯಾರದೋ ತಪ್ಪಿಗೆ, ಯಾರದೋ ಆತುರಕ್ಕೆ ಜೀವನ ಪರ್ಯಂತ ಅಂಗಹೀನರೋ, ಆಪ್ತರಿಗೆ ದೂರಾಗುವುದೋ ತಪ್ಪಿಸಬಹುದಲ್ಲವೇ?
***