ಬುಧವಾರ, ಜನವರಿ 6, 2010

ಅವರ ಹಣೆ ಬರಹ??!!

ಇದು ಯಾರ ಬರೆದ ಕಥೆಯೋ,
ನನಗಾಗಿ ಬಂದ ವ್ಯಥೆಯೋ??

ಈ ಹಾಡಿನ ಸಾಲುಗಳನ್ನು ಕೆಲವೊಮ್ಮೆ ನಮ್ಮಷ್ಟಕ್ಕೆ/ ತಮ್ಮಷ್ಟಕ್ಕೆ/ ನಿಮ್ಮಷ್ಟಕ್ಕೆ ನೀವೇ ಹೇಳಿಕೊಂಡಿರಬಹುದು!?

ಇದೇಕೆ ಹೀಗೆಂದರೆ, ಕಳೆದವಾರ ಮೈಸೂರಿಗೆ ಹೋಗಿದ್ದಾಗ ಆದ ಅನುಭವ ಹಂಚಿಕೊಳ್ಳುವ ಎನಿಸಿತು.
ಚಾಮುಂಡಿ ಬೆಟ್ಟದ ತಪ್ಪಲಿಗೆ ಬರುವ, ನಂಜನಗೂಡಿನ ದಾರಿಯಲ್ಲಿರುವ ಶ್ರೀ ಸಚ್ಚಿದಾನಂದ ಗಣಪತಿ ಆಶ್ರಮಕ್ಕೆ ಹೋಗಿದ್ದೆವು. ವಾಪಸ್ಸು ಬರುವಾಗ ನಗರ ಬಸ್ ನಿಲ್ದಾಣ (ಇಲ್ಲಿ ನಬನಿ ಎಂದೇ ಪರಿಚಿತ) ಬಸ್ಸು ಬಂದಿತು. ಇನ್ನೂ ಹತ್ತುತ್ತಿರುವಾಗಲೇ ಚಾಲಕ ಹೊರಟ. ಕಷ್ಟಪಟ್ಟು ಹತ್ತಿದ್ದಾಯಿತು. ಮಕ್ಕಳೂ ಜೊತೆಯಲ್ಲಿದ್ದರು. ಒಬ್ಬ ವೃದ್ಧರು ತರಕಾರಿ ಚೀಲಗಳ ಸಮೇತ ಮೆಟ್ಟಿಲಲ್ಲಿ ಬೀಳುವಂತಾಗಿ ಜೋತಾಡಿದರು.
ಮುಂದಿನ ನಿಲ್ದಾಣದಲ್ಲಿ, ಕಾಲೇಜು ಹುಡುಗರು, ಹುಡುಗಿಯರು ಬಸ್ಸು ಹತ್ತುವಾಗಲೇ ಬಸ್ಸನ್ನು ಚಲಾಯಿಸಿದ ಚಾಲಕ. ಅದಕ್ಕೆ ಕಂಡಕ್ಟರನೂ ಸಮ್ಮತಿಸಿದ. ಒಂದು ಹುಡುಗ ಮತ್ತು ಹುಡುಗಿ ಪೂರ್ಣವಾಗಿ ಬೀಳುವುದೊಂದು ಬಾಕಿ. ಕೊನೆಗೂ ಬಸ್ಸು ಹತ್ತಿದರು. ನಾನೂ ಸಹ ನನ್ನ ತಂಗಿಯ ಮಗಳನ್ನು ಹತ್ತಿಸುವಾಗ ಹೀಗೇ ಆಗಿತ್ತು. ಕಂಡಕ್ಟ್ರ ಬಂದ. ನಿಲ್ಲಿಸಿ ಎಂದರೂ ರೈಟ್ ಹೇಳೋದ್ಯಾಕೆ? ಬಿದ್ದರೆ ಏನ್ರೀ ಮಾಡೋದು ಎಂದರೆ, ಅವನು ಸಾರಿ ಅಥವಾ ಬೇರೇನಾದರೂ ಹೇಳಬಹುದಿತ್ತು. ಆದರೆ, ಅವ ಅಂದಿದ್ದು ನನ್ನನ್ನಷ್ಟೇ ಅಲ್ಲ ಅಲ್ಲಿದ್ದ ಆ ಮೂರ್‍ನಾಲ್ಕು ಹುಡುಗ-ಹುಡುಗಿಯರನ್ನೂ ಕೆರಳಿಸಿತು.

ಬಿದ್ರೆ ಅವರ ಹಣೆ ಬರಹ. ನಾನೇನ್ಮಾಡಕ್ಕಾಗಲ್ಲ - ಈ ಮಾತು ಯಾವನಿಗೇ ಆಗಲಿ ಹೇಗಾಗಿರಬೇಡ?

ಆಮೇಲೆ, ಅಲ್ಲಿ ಬಸ್ಸು ನಿಲ್ಲಿಸುವ ಹಾಗಿಲ್ಲ. ಟ್ರಾಫಿಕ್ ಪೊಲೀಸರು ಬಿಡಲ್ಲ, ಎಂದು ಬೇರೇನೋ ಸಬೂಬು ಹೇಳಿದ. ಅಷ್ಟಕ್ಕೂ ಅಲ್ಲೇನೂ ಭಾರೀ ಸಂಚಾರ ದಟ್ಟಣೆಯಿರುವುದಿಲ್ಲ ಮತ್ತು ಜನರ ತಳ್ಳಾಟವೂ ಇರುವುದಿಲ್ಲ. ಅಲ್ಲದೆ ಅಲ್ಲಿ ನಿಲ್ದಾಣವೂ ಸಹ ಇದೆ. ನಾವೂ ಜಗಳ ಮಾಡಿದ್ದು ಆಯಿತು. ಉಪಯೋಗವೇನು? ಎಮ್ಮೆ ಮೇಲೆ ನೀರು ಸುರಿದಂತೆ ಅಷ್ಟೆ.

ಒಂದು ಹುಡುಗಿಯಂತೂ, ನಮ್ಮ ಸೀನಿಯರ್‍ಸ್ ಇದ್ದಿದ್ರೆ ಈವಯ್ಯನಿಗೆ ಸರಿಯಾಗಿ ಮಾಡ್ತಿದ್ರು, ಎಂದು. ಏಕೆಂದರೆ, ಆ ಹುಡುಗಿಯ ಕೈ ಬಾಗಿಲಿಗೆ ಸಿಕ್ಕು ತರಚಿತ್ತು.

ಆಗನ್ನಿಸಿದ್ದು, ಅವನಿಗೋ, ಅವನ ಆಪ್ತರಿಗೋ ಇದೇ ರೀತಿ ಆದರೆ ಅಥವಾ ಆಗಿದ್ದರೆ ಅವನ ಮನಸ್ಥಿತಿ ಹೇಗಿರುತ್ತೆ? ಒಬ್ಬರಿಗೆ ಕೆಡಕು ಬಯಸಬಾರದು. ಇಂತಹ ಚಾಲಕ/ನಿರ್ವಾಹಕರಿಂದ ಅವರಾಡುವ ಮಾತುಗಳಿಂದ ಜನರು ಮನಸ್ಸಿನಲ್ಲಿಯೇ ಅಥವಾ ಬಾಯಿಬಿಟ್ಟೇ ಹೇಳುವಂತಹ ಪ್ರಸಂಗಗಳಿವು.
ಇದು ಒಂದು ಬಸ್ಸಿನಲ್ಲಿನ ಸಂಚಾರದ ಅನುಭವವಲ್ಲ. ಹಿಂದಿನ ದಿನ ಬೃಂದಾವನಕ್ಕೆ ಹೋದಾಗಲೂ ಸಹ ಇದೇ ರೀತಿಯ ಚಿತ್ರಣಗಳನ್ನು ಕಂಡಿದ್ದೆ.

ಜನರೊಂದಿಗೆ ಪ್ರತಿನಿತ್ಯವೂ ಬೆರೆಯುವ ಇವರಿಗೆ ಸ್ವಲ್ಪವಾದರೂ ಸೌಜನ್ಯ, ಸಭ್ಯತೆ, ಕರುಣೆ ಇವೆಲ್ಲ ಇದ್ದರೆ ಪ್ರಯಾಣಿಕರು ಬಸ್ಸಿನ ಚಕ್ರಕ್ಕೆ ಸಿಲುಕಿ ನರಳುವುದು, ಯಾರದೋ ತಪ್ಪಿಗೆ, ಯಾರದೋ ಆತುರಕ್ಕೆ ಜೀವನ ಪರ್ಯಂತ ಅಂಗಹೀನರೋ, ಆಪ್ತರಿಗೆ ದೂರಾಗುವುದೋ ತಪ್ಪಿಸಬಹುದಲ್ಲವೇ?
***

6 ಕಾಮೆಂಟ್‌ಗಳು:

Subrahmanya Bhat ಹೇಳಿದರು...

ನನ್ನಕ್ಕನಿಗೂ ಇಂತಹುದೇ ಒಂದು ಅನುಭವವಾಗಿತ್ತು. ಚಾಲಕ ಆತುರದಲ್ಲಿ ಚಲಿಸಿ ಅವಳು ನೆಲಕ್ಕೆ ಬಿದ್ದಿದ್ದಳು. ಜನಗಳೂ foot board ಮೇಲೆ ನಿಲ್ಲುವುದನ್ನೂ ಬಿಡುದಿಲ್ಲವಲ್ಲ !.
ಮಾನವೀಯತೆ ಬೆಳೆಸಿಕೊಳ್ಳುವುದೊಂದೇ ಇದಕ್ಕೆ ಪರಿಹಾರ. ನಿಮ್ಮ ಲೇಖನವೂ ಅದನ್ನೇ ಹೇಳುತ್ತಿದೆ. ಉತ್ತಮ ಲೇಖನ. ವಂದನೆಗಳು

ಕ್ಷಣ... ಚಿಂತನೆ... bhchandru ಹೇಳಿದರು...

ಸರ್‍, ಹೆಚ್ಚಾಗಿ ಬೇಜವಾಬ್ದಾರಿಯಿಂದಾಗಿ ಇಂತಹ ಅನಾಹುತಗಳೂ ಆಗುತ್ತವೆ. ಮಾನವೀಯತೆ ಮತ್ತು ತಾಳ್ಮೆ, ಪ್ರಯಾಣಿಕರ ಹಿತವನ್ನು ಗಮನದಲ್ಲಿಟ್ಟುಕೊಳ್ಳುವುದು ಒಂದು ಪರಿಹಾರ ಸೂತ್ರವೂ ಅಹುದು.

ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

PARAANJAPE K.N. ಹೇಳಿದರು...

ನಿಮಗಾಗಿರುವ ಅನುಭವಕ್ಕೆ ಸಮನಾದ ಅನುಭವ ನನಗೂ ಆಗಿದ್ದಿದೆ. ಬಸ್ ಚಾಲಕ-ನಿರ್ವಾಹಕರಿ೦ದ ಸೌಜನ್ಯ ನಿರೀಕ್ಷಿಸುವುದು ಸಾಧ್ಯವೇ ಇಲ್ಲವೇನೋ ಎ೦ಬ೦ತೆ ಇರುತ್ತದೆ ಅವರ ವರ್ತನೆ. ನಾನು ಮ೦ಗಳುರಿನಲ್ಲಿ ಹಲವು ವರ್ಷ ಇದ್ದೆ. ಅಲ್ಲಿನ ಖಾಸಗಿ ಬಸ್ಸಿನವರ ವರ್ತನೆಯ೦ತೂ ಅತ್ಯ೦ತ ದುಸ್ತರ.ಅವರಿಗೆ ಪೈಪೋಟಿಯ ಭರಾಟೆ. ಅನೇಕ ಮಹಿಳೆಯರು ಬಸ್ಸಿನಿ೦ದ ಇಳಿಯುತ್ತಿದ್ದಾಗಲೇ ಬಸ್ ಮುಂದೆ ಹೋಗಿ ಬಿದ್ದದ್ದನ್ನು ಕ೦ಡಿದ್ದೇನೆ. . ಈ ನಡುವೆ ಕೆಲವು ಮ೦ದಿ ಸೌಜನ್ಯವ೦ತರೂ ಇದ್ದಾರೆ. ಆದರೆ ಒಟ್ಟಾರೆಯಾಗಿ ಇವರಿಗೆಲ್ಲ ಮಾನವೀಯತೆ-ಶಿಸ್ತು-ಸ೦ಯಮ-ಸೌಜನ್ಯದ ಪಾಠ ಕಲಿಸಬೇಕಾದ ತುರ್ತು ಅಗತ್ಯವಿದೆ ಅನ್ನಿಸುತ್ತಿದೆ.

ಸಾಗರದಾಚೆಯ ಇಂಚರ ಹೇಳಿದರು...

ಉತ್ತಮ ಲೇಖನ ಸರ್,
ಮಾನವೀಯತೆ ಇರದವರು ಮಾತ್ರ ಹೀಗೆ ಮಾಡಲು ಸಾದ್ಯ
ವೈಚಾರಿಕ ಬರಹ

shivu ಹೇಳಿದರು...

ಸರ್,

ಮೈಸೂರಲ್ಲಿ ನೀವು ಅಥವ ಅಲ್ಲಿನ ಹುಡುಗ ಹುಡುಗಿಯರು ಇಂಥದ್ದನ್ನು ನೋಡಿ ಸುಮ್ಮನೇ ಆಗಿಬಿಟ್ಟಿದ್ದೀರಿ. ಇದೇ ರೀತಿ ನಮ್ಮ ದಿನಪತ್ರಿಕೆ ವಿತರಣೆಯ ಸ್ಥಳದಲ್ಲಿ ಆಗಿದ್ದರೇ ನಾವೆಲ್ಲಾ ಅವರಿಗೆ ಸರಿಯಾಗಿ ಬುದ್ಧಿಕಲಿಸಿಬಿಡುತ್ತಿದ್ದೆವು. ಅವರ ಬಸ್ಸನ್ನು ನಿಲ್ಲಿಸಿ, ಅದಕ್ಕೆ ಆಡ್ಡವಾಗಿ ನಮ್ಮ ಟೂವೀಲರುಗಳನ್ನು ನಿಲ್ಲಿಸಿ ಅವನನ್ನು ಹಣ್ಣುಗಾಯಿ ನೀರುಗಾಯಿ ಮಾಡಿಬಿಡುತ್ತಿದ್ದೆವು. ಅದರಿಂದಾಗಿ ನಮ್ಮ ಸ್ಥಳದಲ್ಲಿ ಈ ಚಾಲಕರು ಭಯಭಕ್ತಿಯಿಂದ ಚಲಿಸುತ್ತಾರೆ...

ಸುಮ್ಮನಿದ್ದರೇ ಏನು ಆಗೋಲ್ಲ ಸಾರ್...

ಕ್ಷಣ... ಚಿಂತನೆ... bhchandru ಹೇಳಿದರು...

ನಿಮ್ಮ ನಿಮ್ಮ ಅನುಭವಗಳೊಡನೆ ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಧನ್ಯವಾದಗಳು.

ಒಂದು ನೀತಿಯನ್ನಂತು ನಾವು ಅನುಸರಿಸಬೇಕು: ನಿಧಾನವೇ ಪ್ರಧಾನ ಮತ್ತು ಜಾಗೃತ ಮನಸ್ಸಿನಲ್ಲಿರಬೇಕು.

ಸ್ನೇಹದಿಂದ,