ಶುಕ್ರವಾರ, ಮಾರ್ಚ್ 19, 2010

ತಂತ್ರಜ್ಞಾನದ ನಡುವೆ ಮಾತು ಮತ್ತು ಬರವಣಿಗೆ ಎಲ್ಲಿ ಮಾಯವಾಗಿದೆ?


ಊರಿಗೆ ಹೋಗ್ಬರ್‍ತೀರಾ? ಹೋಗ್ಬನ್ನಿ. ಊರು ತಲುಪಿದ ಮೇಲೆ, ಕ್ಷೇಮ ಸಮಾಚಾರಕ್ಕೆ ಒಂದು ಕಾಗದ ಗೀಚಿ ಹಾಕಿ ಅಥವಾ ಪೋಸ್ಟ್ ಕಾರ್ಡ್ ಹಾಕಿ.

---------------

[ಸ್ನೇಹಿತ ಜೊನಾಥನ್‌ ಬರೆದಿದ್ದ ಪತ್ರ]


ಸುಮಾರು ೨ ದಶಕಗಳ ಹಿಂದಿನ ಮಾತು ಎನಿಸಬಹುದು. ಆದರೆ, ಅದರಲ್ಲಿನ ಆಪ್ತತೆ, ಆತ್ಮೀಯತೆ, ಒಬ್ಬರ ಇತರರ ಪ್ರಯಾಣ, ಪ್ರವಾಸ, ಆರೋಗ್ಯ ಇವುಗಳ ಕುರಿತು ಇರುತ್ತಿದ್ದ ಕಾಳಜಿಯನ್ನು ಪತ್ರಮುಖೇನ ವ್ಯಕ್ತಪಡಿಸುತ್ತಿದ್ದರು. ೧೫ ಪೈಸೆ ಅಂಚೆ ಕಾರ್ಡಿನಲ್ಲಿ ಕ್ಷೇಮ, ಕುಶಲೋಪರಿ ಪತ್ರ ಬಂತೆಂದರೆ ಅದೇ ಖುಷಿ ತರುವ ವಿಚಾರ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಒಂದು ಉದ್ದನೆಯ ದಪ್ಪ ತಂತಿಗೆ ಪತ್ರಗಳನ್ನು ಚುಚ್ಚಿ (ಶೇಖರಿಸುತ್ತಿದ್ದ ವಿಧಾನ) ಇಡುತ್ತಿದ್ದದ್ದು ನೆನಪಿಗೆ ಬರುವುದು.

ಆದರೆ, ತಂತಿ ಅಥವಾ ಟೆಲಿಗ್ರಾಂ ಬಂತೆಂದರೆ, ಯಾರದ್ದಾದರೂ ಶೋಕದ ಸುದ್ದಿಯೆಂಬುದು ಜನಪ್ರಿಯ. ಜೊತೆಗೆ ಸಾಮಾನ್ಯವಾಗಿ ಅದು ತಲುಪುತ್ತಿದ್ದದ್ದು ರಾತ್ರಿಯ ವೇಳೆಗೆ ಎನ್ನಬಹುದು.
--------------
ಆಮೇಲಾಮೇಲೆ ಟೆಲಿಗ್ರಾಮ್ಗಳು ಉದ್ಯೋಗ, ಸಂತೋಷದ ವಿಚಾರಗಳಿಗೂ ಸಂಬಂಧಿಸಿದ್ದಾದರೂ ತಕ್ಷಣಕ್ಕೆ ಗಾಬರಿಯುಂಟು ಮಾಡುವಂತೆಯೇ ಇರುತ್ತಿದ್ದವು. ಇದರ ಒಂದು ಅನುಭವ ನನಗೇ ಆಗಿದೆ. ೧೯೯೨ ರ ಸುಮಾರಿನಲ್ಲಿ ಕೆಲಸಕ್ಕೆಂದು ಅರ್ಜಿ ಹಾಕಿದ್ದೆ. ನನ್ನ ಸ್ನೇಹಿತೆಯೊಬ್ಬರ ಕಚೇರಿಯಲ್ಲಿ ಉದ್ಯೋಗ ಖಾಲಿಯಿದ್ದುದರಿಂದ, ಅವರೂ ಸಹ ಬಯೋಡೇಟಾ ಕೊಡಿರೆಂದು ಕೇಳಿದ್ದರಿಂದ ಕೊಟ್ಟಿದ್ದೆ. ಸುಮಾರು ೧೦-೧೨ ದಿನಗಳ ನಂತರ ರಾತ್ರಿ ೮.೦೦ ರ ವೇಳೆಗೆ ಟೆಲಿಗ್ರಾಂ ಬಂದಿದೆ. ನಾನು ಮನೆಯಲ್ಲಿರಲಿಲ್ಲ. ತಕ್ಷಣಕ್ಕೆ ಮನೆಯಲ್ಲಿ ಗಲಿಬಿಲಿಯೂ ಆಗಿದ್ದು ನಂತರ ತಿಳಿದದ್ದು ಅದು ಬಿಪಿಎಲ್‌ ನವರು ಕಳಿಸಿದ್ದ ಸಂದರ್ಶನದ ತಂತಿ ಸಂದೇಶ ಎಂಬುದು.

ದೂರವಾಣಿಯ ಸಂಶೋಧನೆ, ಅದರ ವ್ಯಾಪ್ತಿ ವಿವರಿಸಲಸಾಧ್ಯವಾಗಿದೆ ಇಂದು. ಆದರೆ, ಅಂದಿನ ದಿನಗಳಲ್ಲಿ ಅದರ ಮಹತ್ವ ಸಿರಿವಂತರಿಗೆ ಮಾತ್ರವೇ ಇತ್ತೆನ್ನಬಹುದು. ದೂರವಾಣಿಯಲ್ಲಿ ಸಂಭಾಷಣೆಯ (ದೂರದೂರುಗಳಿಗೆ ಟ್ರಂಕಾಲ್‌ ಬುಕ್‌ ಮಾಡಿ ದಿನಗಟ್ಟಲೇ ಕಾಯುತ್ತಿದ್ದದ್ದು ಸರ್ವೇ ಸಾಮಾನ್ಯವಾಗಿತ್ತು) ನೆಪದಲ್ಲಿ ಪತ್ರದ ಬರವಣಿಗೆಗೆ ಕೊಂಚ ಹೊಡೆತ ಬಿದ್ದಿತ್ತೆಂದು ತಿಳಿಯಬಹುದು. ಆದರೂ ಪತ್ರಬರವಣಿಗೆ ನಡೆದೇ ಇತ್ತು. ಶುಭಾಶಯ ಪತ್ರಗಳ ಕಾಲದಲ್ಲಿಯೂ ಪತ್ರ-ಮಿತ್ರತ್ವ ಮುಂದುವರೆದಿತ್ತು. ಆಕಾಶವಾಣಿ/ದೂರದರ್ಶನಗಳಲ್ಲಿ ಪತ್ರೋತ್ತರ ಕಾರ್ಯಕ್ರಮಗಳನ್ನು ಕೇಳ/ಕಾಣಬಹುದಿತ್ತು. ಈಗಲೂ ಸಹ ಇದೆ.
--------------------
ಫ್ಯಾಕ್ಸ್ ಎಂಬ ಯಂತ್ರದಿಂದಾಗಿ ಚಿತ್ರ-ಬರಹ ಎರಡನ್ನೂ ಕಪ್ಪು-ಬಿಳುಪಿನಲ್ಲಿ ದೂರವಾಣಿಯ ಮೂಲಕ ಕಳಿಸಬಹುದಾದ ವ್ಯವಸ್ಥೆಯು ಮಾತಿಗೆ ಕಡಿವಾಣ (ಜೊತೆಗೆ ದೂರವಾಣಿ ಬಿಲ್ಲುಗಳಿಗೂ) ಹಾಕಿತೆನ್ನಬಹುದು. ಅಲ್ಲದೆ, ಇದರಿಂದಾಗಿ ಯಾವುದೇ ಮಾಹಿತಿಯೂ (ಮಾತಿನ ಮೂಲಕ ಮಾಡಿಕೊಂಡ)/ಒಪ್ಪಂದಗಳೂ ದುರುಪಯೋಗಕ್ಕೆ ಅವಕಾಶವಿಲ್ಲದಂತೆ ಉಪಯೋಗಕ್ಕೆ ಬಂದಿತೆನ್ನಬಹುದು.
-------------------
ಪೇಜರ್‌ ಎಂಬ ಪುಟ್ಟ ಯಂತ್ರದಿಂದ ಫೋನಿಗೆ ಗುದ್ದಾಯಿತು. ಅದಕ್ಕೂ ಪರವಾನಿಗಿ, ತೆರಿಗೆಪಾವತಿ... ಇತ್ಯಾದಿ ಚಾಲ್ತಿಯಲ್ಲಿತ್ತು ಎಂದು ನೆನಪು. ಗಣಕಯಂತ್ರದಲ್ಲಿನ ಮಾಯಾದರ್ಪಣ (?) ಅಂತರ್ಜಾಲದಿಂದಾಗಿ ಬರವಣಿಗೆಯೂ ನಿಂತಿತು. ಕೇವಲ ಚಿತ್ರ-ಧ್ವನಿ ಸಂದೇಶ (ವಿದ್ಯುನ್ಮಾನ ಚಿತ್ರ ಸಂದೇಶ)ಗಳ ಬಳಕೆ. ನಂತರ ಬಂದದ್ದೇ ಮೊಬೈಲ್‌ ಎನ್ನಬಹುದು. ಇದರಲ್ಲಿಯೂ ಸಹ ಸಂಕ್ಷಿಪ್ತ ಸಂದೇಶಗಳಿಂದಾಗಿ ಮಾತನಾಡುವ ವಿಚಾರಕ್ಕೆ ಕುತ್ತಾಯಿತು ಎನ್ನಬಹುದು. ಶುಭಾಶಯ ತಿಳಿಸುವಾಗೆಲ್ಲ ಎಸ್‌ಎಂಎಸ್‌ ಕಳಿಸಿದರೆ ಆಯಿತು. ಅತ್ತಕಡೆಯಿಂದ ಪ್ರತ್ಯುತ್ತರವೂ ಎಸ್‌ಎಂಎಸ್. ಇತ್ತೀಚೆಗಂತೂ ಚಲನಚಿತ್ರಗಳನ್ನೂ, ಧ್ವನಿತರಂಗಗಳನ್ನೂ ಅಚ್ಚಿಸಿ ಕಳಿಸಬಹುದು. ತಂತ್ರಜ್ಞಾನಕ್ಕೆ ಅಭಿನಂದನೆಗಳೆನ್ನಬಹುದು. ಅಲ್ಲದೇ ಅಂತರ್ಜಾಲದ ಬಹುಮಾಧ್ಯಮದ ಪ್ರಭಾವಿಗಳಾದ ವಿಡಿಯೋ ಚಾಟಿಂಗ್, ಟೆಕ್ಸ್ಟ್ ಚಾಟಿಂಗಿನಿಂದಾಗಿ ಅಲ್ಲಿಯೂ ಸಹ ಟೈಪಿಸುವುದು ಚುಟುಕವಾಗಿದೆ. ಇನ್ನೂ ಮುಂದುವರೆದಿರುವ ಸಂಕ್ಷಿಪ್ತದಲ್ಲಿ ಸಂಕ್ಷಿಪ್ತ ಬರವಣಿಗೆಗಳಿಗೆ ಟ್ಟಿಟ್ಟರ್‌ ಎಂಬುವ `ಟ್ವಿಟ್‌' ಬಂದಿದೆ. `ಎಸ್‌ಎಂಎಸ್‌ಗಳಿಂದಾಗಿ ಮಾತಿಗೂ ಬರ' ಬಂದಂತಾಗಿದೆ...
----------------------
ಇನ್ನು ಬ್ಯಾಂಕುಗಳಲ್ಲಿನ ವಹಿವಾಟಿನ ಕುರಿತ ಮಾಹಿತಿ, ಶೇರುವ್ಯಾಪಾರಗಳಲ್ಲಿನ ಮಾಹಿತಿ, ಎಟಿಎಂಗಳಲ್ಲಿ ಈ ಗಣಕಯಂತ್ರದ ಪರಿಧಿಯಿಂದಾಗಿ ಬರವಣಿಗೆ ಸಂಪೂರ್ಣ ನಿಂತಂತಾಯಿತು ಎನ್ನಬಹುದು. ಏಕೆಂದರೆ, ಕೆಲವು ಬಾರಿ ಈ ಸ್ಟೇಟ್‌ಮೆಂಟುಗಳನ್ನು ಅಚ್ಚಿಸಿ ಗ್ರಾಹಕರಿಗೆ ರವಾನಿಸಿರುತ್ತಾರೆ. ಜೊತೆಗೆ ಅಲ್ಲಿಯೂ ಸಹ ಸೈನು, ಸೀಲು ಇತ್ಯಾದಿ ಮಾಯವಾಗಿದೆ. ಕೊನೆಯಲ್ಲಿ ಒಂದು ಸಾಲು: ಕಂಪ್ಯೂಟರ್‌ ಜನರೇಟೆಡ್‌..... ನೊ ಸಿಗ್ನೇಚರ್‍ ರಿಕ್ವೈರ್‍ಡ್. ಹೀಗಾಗಿ ಕಚೇರಿಗಳಲ್ಲಿ ಸಹಿಗಳಿಗೆ ಚುಟುಕು ಸಹಿಗಳೂ ಸೇರಿವೆ (ಉದಾ: ಹಾಜರಾತಿ ಪುಸ್ತಕದಲ್ಲಿ ಕೇವಲ ಇನಿಷಿಯಲ್ಸ್ ಬರೆಯುತ್ತೇವೆ, ಕಾರಣ ಜಾಗ ಸಾಲದು). ಆದರೆ, ಕೆಲವೊಮ್ಮೆ ಇದರಿಂದಾಗಿ ಬ್ಯಾಂಕು, ಅಂಚೆ ಕಚೇರಿ, ವಿಮಾ ನಿಗಮ ಇಲ್ಲೆಲ್ಲ ನಮ್ಮ ಸಹಿ ಬೇಕಾದಾಗ ನಮ್ಮ ಸಹಿಗಳೇ ತಪ್ಪಾಗಿಬಿಡುವ ಸಾಧ್ಯತೆಗಳು ಹೆಚ್ಚಾಗಿವೆ ಎಂದರೆ ಅಚ್ಚರಿಯಿಲ್ಲ. ಏಕೆಂದರೆ, ಬ್ಯಾಂಕಿನಲ್ಲಾಗಲೀ ಇತರೆಡೆಯಾಗಲೀ ಒಬ್ಬ ವ್ಯಕ್ತಿಯ ಮಾದರಿ ಸಹಿಯನ್ನು (ಸ್ಪೆಸಿಮೆನ್‌ ಸಿಗ್ನೇಚರ್‍) ಕನಿಷ್ಠ ಮೂರು ಬಾರಿ ಮಾಡಿಸಿಕೊಂಡಿರುತ್ತಾರೆ. ಆದರೂ, ನಮ್ಮ ಸಹಿ ಕೆಲವೊಮ್ಮೆ ತಾಳೆಯಾಗದೇ (ಮೇಲಿನ ಹಾಜರಾತಿ ಪುಸ್ತಕದಲ್ಲಿನ ಕಾರಣದಿಂದಾಗಿಯೂ ಇರಬಹುದು ಅಥವಾ ಬರವಣಿಗೆಯು ತುಂಬಾ ಸೀಮಿತವಾಗಿರುವುದರಿಂದಲೂ ಇರಬಹುದು) ಅದು ನಮ್ಮಗಳ ಬಗ್ಗೆಯೇ ಅನುಮಾನ ವ್ಯಕ್ತಪಡಿಸುವಂತಹ ಪರಿಸ್ಥಿತಿಗಳೂ ಎದುರಾಗಿದ್ದನ್ನೂ ಕಂಡಿರುತ್ತೇವೆ. ಸಹಿ ಸರಿಯಿಲ್ಲ. ಫೋಟೋ ಕೊಡಿ, ಐಡಿ ಕಾರ್ಡ್ ಕೊಡಿ ಇತ್ಯಾದಿಗಳನ್ನು ಕೊಡುವ ಸಂದರ್ಭಗಳೂ ಬಂದಿರುತ್ತವೆ.
-----------------------
ಇಂತಹ ಒಂದು ವಿಚಾರಧಾರೆ ಇಲ್ಲಿ ಬರೆಯಲು ಕಾರಣ, ಏನಿರಬಹುದು ಎಂದು ನಿಮಗನಿಸಿದ್ದರೆ ಅದೂ ಅಚ್ಚರಿಯೇನಲ್ಲ.

ಯುಗಾದಿ ಹಬ್ಬದ ಮುನ್ನಾದಿನ ನನ್ನ ಸ್ನೇಹಿತ ಗೂಗಲ್ಲಿನ ಚಾಟಿನಲ್ಲಿ ಸಿಕ್ಕಿದಾಗ ಸರಳವಾಗಿ/ಸಂಕ್ಷಿಪ್ತವಾಗಿ ಅವನಿಗೆ `ಮುಂಚಿತವಾಗಿ' ಶುಭಾಶಯ ಕೋರಿದೆ. ಆಗ, ಅವನಿಂದ ಎಸ್‌ಎಂಎಸ್ ಬಿಟ್ಟು ಪೋನ್‌ ಮಾಡು ಎಂದ. ಆಗ ನನ್ನ ಕಡೆಯಿಂದ ಕಳಿಸಿದ ಉತ್ತರ, ಮೊಬೈಲಿನಲ್ಲಿಯೂ ಮಾತು ಕಡಿಮೆ, ಏಕೆಂದರೆ, ಅಲ್ಲಿಯೂ ಚುಟುಕು ಸಂದೇಶ ಕಳಿಸುವ ಅವಕಾಶ ಇದೆ, ಅಲ್ಲದೇ ತಂತ್ರಜ್ಞಾನದಿಂದಾಗಿ ಬರವಣಿಗೆ, ಮಾತು ಎಲ್ಲ ನಿಂತಿದೆ ಎಂದೆ. ಹೀಗೆ ಸಾಗಿದ್ದ ನಮ್ಮ ಚಾಟಿಂಗ್‌ ವಿಚಾರವು ನನ್ನಲ್ಲಿ ಈ ಒಂದು ಬರಹವನ್ನು ಬರೆಯುವಂತೆ ಚಿಂತನೆಗೆ ಹಚ್ಚಿತು.
----------------------
ಈ ಆಧುನಿಕ ತಂತ್ರಜ್ಞಾನ ಮತ್ತು ವೇಗದ ಜೀವನಗತಿಯಲ್ಲಿ ಪರಸ್ಪರ ಜನರ ಸಂಬಂಧಗಳು ದೂರವಾಗುತ್ತಿವೆ. ಪ್ರತಿಯೊಂದಕ್ಕೂ ಸಮಯಾಭಾವವು ಕಾಡುತ್ತಿರುವ ಈ ಸನ್ನಿವೇಶಗಳಲ್ಲಿ ಆಧುನಿಕ ತಂತ್ರಜ್ಞಾನಗಳಿಗೆ ಮೊರೆಹೋಗುವುದು ಸಾಮಾನ್ಯವಾಗಿದೆ. ತಂತ್ರಜ್ಞಾನದ ಜೊತೆಗೆ ಜನರಲ್ಲಿನ ಮುಖತ: ಭೇಟಿ, ಮಾತುಕತೆ ಇವೆಲ್ಲವುಗಳಿಗೂ ಮಿತಿಯುಂಟಾಗಿದೆ. ಒಂದು ರೀತಿಯಲ್ಲಿ ವಿಭಕ್ತ ಜೀವನದಲ್ಲಿ ಜನರು ನರಳುತ್ತಿದ್ದಾರೆ. ಹಿಂದೆಲ್ಲಾ ಒಂದು ಪತ್ರ ಅಥವಾ ದೂರವಾಣಿ ಕರೆ ಬಂತೆಂದರೆ ಅದೆಂತಹ ಸಂಭ್ರಮ, ಖುಷಿ ಇರುತ್ತಿತ್ತು. ಇಂದು ಹೆಚ್ಚು ಕಡಿಮೆ ಎಲ್ಲರಲ್ಲಿಯೂ ಸಂಚಾರಿ ದೂರವಾಣಿ (ಮೊಬೈಲ್‌) ಇದ್ದರೂ ಮಾತಿಗೆ ಬರ ಬಂದಿದೆ. ಎಸ್‌ಎಂಎಸ್ ಗಳ ಹಾವಳಿಯಿಂದಾಗಿ ಜನರ ನಡುವಿನ ಮಾತುಕತೆ, ಭೇಟಿ ಎಲ್ಲವೂ ಕೃತಕ, ಕನ್ನಡಿಯೊಳಗಿನ ಗಂಟು ಎನ್ನಬಹುದು. ಖುದ್ದು ಭೇಟಿಯಾಗುವ ಪ್ರಸಂಗಗಳು ಕಡಿಮೆಯಾಗಿರಲು ಹಲವು ಕಾರಣಗಳಿವೆ. ಉದ್ಯೋಗದಲ್ಲಿನ ಸಮಯಾಭಾವ ಅಥವಾ ಹೆಚ್ಚಿನ ಸಮಯ ಉದ್ಯೋಗಸ್ಥಳಗಳಲ್ಲಿ ಕಳೆಯುವುದು, ವಾರಾಂತ್ಯದಲ್ಲಿಯೂ ಮನೆಯವರೊಂದಿಗೆ ಇರಲಾಗದ ಕೆಲವು ಪ್ರಸಂಗಗಳು, ರಾತ್ರಿ ಪಾಳಿ, ಹಗಲು ನಿದ್ದೆ ಅಥವಾ ರಜೆಯ ಅಭಾವ ಇತ್ಯಾದಿ. ಒಟ್ಟಿನಲ್ಲಿ ಪರಸ್ಪರ ಸಂಬಂಧಗಳಲ್ಲಿ ಬಿರುಕುಂಟಾದ ಪ್ರಸಂಗಗಳನ್ನೂ ಕಾಣಬಹುದು ಹಾಗೆಯೇ ವಿರುದ್ಧ ಗತಿಗಳನ್ನೂ ಕಾಣಬಹುದು.


----------------------
ಇವೆಲ್ಲ ಯೋಚನೆಗಳೂ ನನ್ನ ಸ್ನೇಹಿತನೊಡನೆ ಚಾಟಿಸುವಾಗ (ಗೂಗಲ್‌) ನಾವೇಕೆ ಹೀಗಾದೆವು ಎನ್ನಿಸಿ, ಸಹಬ್ಲಾಗಿಗರೊಡನೆ ಹಂಚಿಕೊಳ್ಳುವ ಎಂದು ಬರೆಯಲು ಪ್ರೇರೇಪಣೆ ನೀಡಿತು. ಕ್ರೋಢೀಕೃತವಾಗಿ ಹೇಳಬೇಕೆಂದರೆ, ತಂತ್ರಜ್ಞಾನದ ಅತಿಬಳಕೆಯಿಂದ ಸಮಾಜದಲ್ಲಿ ಅಂದರೆ, ಪೋಷಕರು, ಬಂಧು-ಮಿತ್ರರು ಇತ್ಯಾದಿಗಳವರ ನಡುವಿನ ಸಂಬಂಧಕ್ಕೆ ಕುಂದಂತೂ ಆಗುತ್ತಿದೆ. ಜನರೊಳಗಿನ ಭಾವನೆಗಳನ್ನು ಮಾತಿನ ಮೂಲಕ, ಭೇಟಿಯ ಮೂಲಕ ವ್ಯಕ್ತಪಡಿಸಲಾಗದೇ ಒಂದು ವಿಧದ ಮಾನಸಿಕ ಖಿನ್ನತೆಯುಳ್ಳವರನ್ನೂ ಕಾಣಬಹುದಾಗಿದೆ. ಬಹುಮಾಧ್ಯಮ ಬಹುಮಂದಿಯ ಬಾಂಧವ್ಯ, ಬಂಧನಗಳನ್ನು ಬೀದಿಗೆಸೆಯುವಂತಾಗಬಾರದು, ಅಲ್ಲವೇ?
-------------------
ಆದರೆ, ಇವೆಲ್ಲವೂ ಹಳತಾದರೂ ಖುಷಿ ಕೊಡುವಂತೆಯೇ, ಹೊಸ ಆವಿಷ್ಕಾರಗಳೂ ಸಹ ಜನರಲ್ಲಿ, ಅವರ ಬಾಳಿನಲ್ಲಿ ಅನೇಕ ಬದಲಾವಣೆಗಳನ್ನು, ಖುಷಿ, ಸಂತಸದ ಕ್ಷಣಗಳನ್ನೂ ತಂದಿದೆಯೆನ್ನಬಹುದು. ಉದಾಹರಣೆಗೆ, ನಾವೀಗ ಉಪಯೋಗಿಸುತ್ತಿರುವ ಮಾಯಾದರ್ಪಣದಂತಿರುವ - ಅಂತರ್ಜಾಲ. ವಿಶ್ವವನ್ನೇ ಚಿಕ್ಕದಾಗಿ ಮಾಡಿರುವ, ಮನೆಯವರಿಂದ, ಸ್ನೇಹಿತರಿಂದ, ಶಾಲೆಯಿಂದ, ಉದ್ಯೋಗದಿಂದ ಹೀಗೆ ವಿದೇಶಗಳಲ್ಲಿರುವವರೊಡನೆಯೂ ಸಂಪರ್ಕ ಸಾಧಿಸಬಹುದಾದ ಕ್ರಾಂತಿಯೇನೂ ಕಡಿಮೆಯಲ್ಲ. ಈ ತಂತ್ರಜ್ಞಾನದಿಂದಾಗಿ ಅದೆಷ್ಟೋ ಮಂದಿಗೆ ಉದ್ಯೋಗ, ಜೀವನ ಎಲ್ಲ ಸಿಕ್ಕಿರುವಂತೆಯೇ ಹಳೆಯ ಹಾಗೂ ಹೊಸಸಂಬಂಧಗಳೂ ನಿರಂತರವಾಗಿ ಸಂಪರ್ಕದಲ್ಲಿರುವಂತೆ ಆಗಿದೆ. ಅದೂ ಅಲ್ಲದೆ, ವಿಡಿಯೋ ಕಾನ್ಫರೆನ್ಸ್ಗಳ ಮೂಲಕ ಪರ ಊರಿನಲ್ಲಿರುವ, ಅಲ್ಲಿನವರ ಆರೋಗ್ಯ, ವೈದ್ಯಕೀಯ ಚಿಕಿತ್ಸೆ, ವಿದ್ಯೆ, ಉದ್ಯೋಗ, ವಿವಾಹ ಹೀಗೆ ಸಮಾಜದಲ್ಲಿ ಉಪಯೋಗವಾಗಿದೆ ಮತ್ತು ಉಪಯೋಗವಾಗುತ್ತಿದೆ. ಅನೇಕ ಜನರ ಪ್ರಾಣದಾನಕ್ಕೆ, ವಿದ್ಯಾದಾನಕ್ಕೆ, ಇವೆಲ್ಲ ಆಧುನಿಕ ಸಂಪರ್ಕಸಾಧನಗಳೂ ಸಹ ಸಹಕಾರಿಯಾಗಿವೆ.
---------------------------
ನಿನ್ನೆಯ ಡಾ. ಡಿ.ವಿ.ಗುಂಡಪ್ಪನವರ ಜನ್ಮದಿನ (೧೨೩ನೇ ಜನ್ಮದಿನ). ಅವರನ್ನೂ ನೆನಪಿಸಿಕೊಳ್ಳುತ್ತಾ....ಹಾಗಾಗಿ ಡಿವಿಜಿಯವರ ಈ ನುಡಿಮುತ್ತನ್ನು ಸದಾ ನೆನಪಿನಲ್ಲಿಡಬೇಕೆನಿಸುತ್ತದೆ.

`ಹೊಸ ಚಿಗುರು ಹಳೆ ಬೇರು, ಕೂಡಿರಲು ಮರ ಸೊಬಗು'
-------------------------
ಇದಿಷ್ಟನ್ನೇ ನೆನೆಯುವ...

ಇನ್ನೂ ಬರೆಯಬಹುದಿತ್ತಾದರೂ, ಓದುಗರಿಗೆ ಬೇಸರವಾಗದಿರಲೆಂದು ಸಂಕ್ಷಿಪ್ತವಾಗಿ ಬರೆಯುವ ಪ್ರಯತ್ನ ಮಾಡಿದೆ. ನೀವೇನಂತೀರಿ? ಎಂಬ ಕ್ಷಣ ಕುತೂಹಲವಿದೆ. ಚುಟುಕಾಗಿರಲಿ/ದೀರ್ಘವಾಗಿರಲಿ, ನಿಮ್ಮ ಪ್ರತಿಕ್ರಿಯೆಗಳನ್ನು ಬರೆಯಲು/ಟೈಪಿಸಲು/ಕಳಿಸಲು ಮರೆಯಬೇಡಿ!
-------------
[ಈ ಲೇಖನದ ಕರಡು ಪ್ರತಿಯನ್ನು ನನ್ನಿಬ್ಬರು ಹಿರಿಯ ಮಿತ್ರರಿಗೆ ಕಳಿಸಿದ್ದೆ. ಅವರುಗಳು ಕೆಲವೊಂದು ಸಾಲುಗಳಲ್ಲಿ ವಿಷಯವನ್ನು ಮುಕ್ತವಾಗಿಸಿ ಹಾಗೂ ತಮ್ಮಂತರಂಗದಲ್ಲಿನ ವಿಷಯಗಳನ್ನು ತಿಳಿಸಿ ಈ ಲೇಖನಕ್ಕೆ ಮತ್ತಷ್ಟು ಶಕ್ತಿತುಂಬಿದರು. ಅವರಿಗೆ ನನ್ನ ಕೃತಜ್ಞತೆಗಳು]

--------------- ಚಿತ್ರ ಕೃಪೆ: ಐಸ್ಟಾಕ್ ಫೋಟೋ
----------------
ಲೇಖನ: ಚಂದ್ರಶೇಖರ ಬಿಎಚ್.
೧೯.೦೩.೨೦೧೦

4 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ವಿಚಾರಾರ್ಹ ಲೇಖನ. ಹೌದು ಇ೦ದು ವಿಶ್ವ ಚಿಕ್ಕದಾಗಿದೆ, ಆದರೆ ಪಕ್ಕದ ಮನೆಯವನ ಹೆಸರು-ಉದ್ಯೋಗ ಗೊತ್ತಿಲ್ಲ, ಅನ್ನುವ ಸ್ಥಿತಿ ನಮ್ಮದಾಗಿದೆ. ನೀವು ಹೇಳುವ೦ತೆ ಪೋಸ್ಟ್ ಕಾರ್ಡ್ ಯುಗದಲ್ಲಿ ಇದ್ದ ಪ್ರೀತಿ, ಅನುಬ೦ಧ, ಬಾ೦ಧವ್ಯ, ಅ೦ತಃಕರಣ ಈಗಿಲ್ಲ ಅನ್ನುವುದೂ ಕೂಡ ವಿಷಾದದ ಸ೦ಗತಿ. ಒಟ್ಟಿನಲ್ಲಿ "ಕಾಲಕ್ಕೆ ತಕ್ಕ ಕೋಲ" ಕಟ್ಟಿಕೊ೦ಡು ನಾವೆಲ್ಲರೂ ಸಾಗುತ್ತಿದ್ದೇವೆ. ಇನ್ನು ಕೆಲ ವರ್ಷ ಗಳಲ್ಲಿ ಪೋಸ್ಟ್ ಕಾರ್ಡ್ ಬಳಕೆಯೇ ಇಲ್ಲವಾಗಿ, ಮು೦ದಿನ ಪೀಳಿಗೆಗೆ ಅದೊ೦ದು ಅಸ೦ಗತ ವಿಚಾರವೆನಿಸಬಹುದು. ಉತ್ತಮ ಬರಹ.

ಸೀತಾರಾಮ. ಕೆ. ಹೇಳಿದರು...

ಚುಟುಕಾಗಿ ಹೇಳಬೇಕೆ೦ದರೆ "ಮಾಹಿತಿಯುಕ್ತ ಲೇಖನ" :-))

AntharangadaMaathugalu ಹೇಳಿದರು...

ಚಂದ್ರೂ..
ಲೇಖನ ಅರ್ಥಪೂರ್ಣವಾಗಿದೆ... ಅಂದಿನಿಂದ ಇಂದಿನವರೆಗಿನ ಕೊಂಡಿ ಚೆನ್ನಾಗಿ ಬೆಸೆದಿದೆ. ಈಗ ತಮಾಷ ಎಂದರೆ, ನಮಗೆ ಪಕ್ಕದ ಮನೆಯವರ ಹೆಸರು ಗೊತ್ತಿರೋಲ್ಲ.... ಆದರೆ ಪ್ರಪಂಚದ ಯಾವುದೋ ತುದಿಯಲ್ಲಿ ಕುಳಿತಿರುವ.. ಬ್ಲಾಗಿಸುತ್ತಿರುವ...ಟ್ವಿಟ್ಟಿಸುತ್ತಿರುವ.. ಚಾಟಿಸುತ್ತಿರುವವರ ಸಮಾಚಾರ ಗೊತ್ತಿರುತ್ತದೆ.. :-) ಇದೇ ತಂತ್ರಜ್ಞಾನದ ವಿಶೇಷತೆ ಮತ್ತು ವೈಯುಕ್ತಿಕ ಸಂಪರ್ಕದ ಕೊರತೆ...
ಹೊಂದುವ ಚಿತ್ರಗಳನ್ನೂ ಹಾಕಿ ರಂಗು ಬಳಿದಿದ್ದೀರಿ ಬರಹಕ್ಕೆ... ಇಷ್ಟವಾಯಿತು....

ಮನದಾಳದಿಂದ ಹೇಳಿದರು...

ಪತ್ರ ವ್ಯವಹಾರಗಳಲ್ಲಿನ ಆತ್ಮೀಯತೆ ಇಂದಿನ ಫೋನ್, ಚಾಟಿಂಗ್ ಯುಗದಲ್ಲಿ ಎಲ್ಲಿದೆ? ನಿಮ್ಮ ಲೇಖನ ವಿಚಾರಾರ್ಹ.