ಈ ದಿನಾಚರಣೆಯನ್ನು ಯಾವಾಗ ಆರಂಭಿಸಿದರು, ಅದರ ಇತಿಹಾಸ ಇದ್ಯಾವುದನ್ನೂ ಇಲ್ಲಿ ನಾನು ಉಲ್ಲೇಖಿಸುವುದಿಲ್ಲ. ಕಾರಣ. ಸುಮ್ಮನೇ ಅದೊಂದೆ ಪುನರಾವರ್ತನೆಯಾದಂತೆನಿಸುತ್ತದೆ.
ನೀರು ಸಕಲ ಜೀವರಾಶಿಗಳಿಗೆ ಪ್ರಾಣ. ಪರಿಶುದ್ಧ ಜಲದಿಂದ ಉತ್ತಮ ಆರೋಗ್ಯವೂ ಇರುವಂತೆ, ಅಶುದ್ಧ ನೀರಿನಿಂದ ಅನಾರೋಗ್ಯವೂ ಇದೆ. ಈ ವರ್ಷದ ಜಲದಿನಾಚರಣೆಯ ಘೋಷಣೆ: 22 March 2010: Clean Water for a Healthy World ಎಂಬುದಾಗಿದೆ.
ಹಾಗೆಯೇ ಜಲ ಸಂರಕ್ಷಣೆಯನ್ನು ಕುರಿತ ಹಲವಾರು ಕಾರ್ಯಕ್ರಮಗಳು, ಕಾರ್ಯಾಗಾರಗಳನ್ನು ವಿಶ್ವದೆಲ್ಲೆಡೆ ಹಮ್ಮಿಕೊಂಡಿರುವ ವಿಚಾರವೂ ತಿಳಿದಿರುತ್ತದೆ.
ನೀರನ್ನು ಮಿತವಾಗಿ ಬಳಸಿ ಎನ್ನುತ್ತಾರೆ. ಇಂಧನಕ್ಕಿಂತಲೂ ನೀರಿನ ಸಂರಕ್ಷಣೆ ಬಹಳವಾಗಿ ಬೇಕಿದೆ. ಏಕೆಂದರೆ, ಪ್ರತಿಯೊಂದು ಜೀವಿಯ, ಸಸ್ಯಗಳ, ಜಲಚರಗಳ, ಉಭಯವಾಸಿಗಳ ದಾಹ ತಣಿಸಲು ನೀರಿಗಿಂತ ಉತ್ತಮ ಪಾನೀಯ ಮತ್ಯಾವುದೂ ಇಲ್ಲ. ನಾವೆಷ್ಟೇ ಕೃತಕ ಪಾನೀಯಗಳನ್ನು ಸೇವಿಸಿದರೂ `ನೀರಿನಿಂದ' ಸಿಗುವ ಶಾಂತಿ/ಸಮಾಧಾನಕ್ಕೆ ಸಾಟಿ ಯಾವುದೂ ಇಲ್ಲ.
I believe that water is the only drink for a wise man. -Henry David Thoreau
ನಾವಿಂದು ಏನು ಮಾಡುತ್ತಿದ್ದೇವೆ. ಭೂಮಿಯ ಅಂತರ್ಜಲವನ್ನೂ ಹೀರಿದ್ದೇವೆ. ನೀರಿನ ಅವಶ್ಯಕತೆಯಿರುವಾಗಲೇ ಕೆರೆಗಳನ್ನು, ನದಿ-ತೊರೆಗಳನ್ನು ತೊರೆದಿದ್ದೇವೆ. ನೀರಿಗೆ ಬೆಲೆ ಕಟ್ಟಲಾಗುವುದಿಲ್ಲ ಎಂಬ ಅಂಶವನ್ನೇ ಮರೆತಿದ್ದೇವೆ. ನೀರಿರುವ ತಾಣಗಳನ್ನು ನಿತ್ರಾಣವನ್ನಾಗಿ ಮಾಡಿ, ಮನೆ, ರಸ್ತೆಗಳನ್ನು, ಇತ್ಯಾದಿ ನಿರ್ಮಾಣ ಮಾಡಿದ್ದೇವೆ. ಜೊತೆಗೆ ಮಳೆ ಮೋಡಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಕಾರಣ ಅರಣ್ಯನಾಶ. ಅರಣ್ಯ ಬಿಡಿ, ನಮ್ಮ ಮನೆಯ ಸುತ್ತಮುತ್ತಲಿನ ಮರಗಳನ್ನೂ ಸಹ ಕಡಿದು, ರಸ್ತೆ ಅಗಲೀಕರಣದ, ಆಧುನೀಕರಣದ ನೆಪದಲ್ಲಿ ನಾಶಮಾಡಿದ್ದೇವೆ. ನೀರಿಗಾಗಿ ನೆರಳಿಗಾಗಿ ಮರಗಳೂ ಕಾಣುತ್ತಿಲ್ಲ. ಹೀಗಿರುವಾಗ ಮಳೆಗೆ ಬೇಕಾಗುವ, ಆವಿಯಾಗಿ ಮತ್ತೆ ಮಳೆಯಾಗುವ ನೀರೆಲ್ಲಿ ಸಿಗುವುದು?
೧೭೩೨ ರಲ್ಲಿಯೇ ಥಾಮಸ್ ಫುಲ್ಲರ್ ಎಂಬುವವರು ಹೀಗೆ ಹೇಳಿದ್ದಾರೆ. ಅದು ಸರ್ವಕಾಲಕ್ಕೂ ಅನ್ವಯಿಸುವಂತಹುದು. [We never know the worth of water till the well is dry. Thomas Fuller, Gnomologia]
ನೀರಿನ ಪೋಲನ್ನಂತೂ ಹೇಳಿಕೊಳ್ಳಲಾಗದಷ್ಟು ಯಥೇಚ್ಛವಾಗಿ ಮಾಡುತ್ತಿರುತ್ತೇವೆ. ಹೇಗೆ? ಒಂದು ಲೋಟ ನೀರು ಕುಡಿಯ ಬೇಕಿದ್ದರೆ, ನಲ್ಲಿ ತಿರುಗಿಸಿ, ಲೋಟದಲ್ಲಿ ತುಂಬಿ, ಎಡಹಸ್ತವು ನಲ್ಲಿಯ ತಿರುಪಿನ ಮೇಲಿದ್ದು (ನಲ್ಲಿಯಲ್ಲಿ ನೀರು ಬರುವುದ ನಿಲ್ಲಿಸುವ ಸ್ಥಿತಿಯಲ್ಲಿ) ಇದ್ದು, ನೀರನ್ನು ಕುಡಿಯುತ್ತಿರುತ್ತೇವೆ. ಆದರೆ, ಒಂದು ಲೋಟ ನೀರು ಕುಡಿಯುವ ಸಮಯದಲ್ಲಿ ೩-೪ ಲೋಟದಷ್ಟು ನೀರು ಪೋಲಾಗಿರುವುದು ಲೆಕ್ಕಕ್ಕೆ ಸಿಗುವುದಿಲ್ಲ. (ಈ ಉದಾಹರಣೆ ಏಕೆ ಕೊಟ್ಟಿನೆಂದರೆ, ಈಗೊಂದು ಮೂರು ದಿನದ ಹಿಂದೆ ದರ್ಶಿನಿಯಲ್ಲಿ ಕಂಡ ದೃಶ್ಯ).
ಇನ್ನೂ ಹಲವಾರು ವಿಧದಲ್ಲಿ ನೀರು ಪೋಲಾಗುತ್ತದೆ. ಜಲಸಂಪರ್ಕದ ಕಾಲುವೆ ಒಡೆದು ಹೋಗಿರುತ್ತದೆ (ರಸ್ತೆಯ ಮಧ್ಯ, ಅಂತ್ಯ). ಮನೆಯ ಮೇಲಿನ, ಕಚೇರಿಗಳಲ್ಲಿರುವ ನೀರಿನ ಟ್ಯಾಂಕಿನಲ್ಲಿ (ಮೋಟಾರು ಹಾಕಿ, ಮರೆತು) ತುಂಬಿ ಚೆಲ್ಲುವ ದೃಶ್ಯಗಳನ್ನು ನೋಡಿರುತ್ತೀರಿ.
ಕಾರ್ಯಾಗಾರ, ಸಮ್ಮೇಳನಗಳಲ್ಲಿ ನೀರಿನ ಬಾಟಲಿಗಳಲ್ಲಿ ಸಂರಕ್ಷಿಸಿದ ನೀರನ್ನು ಗುಟುಕರಿಸಿ (ಒಂದೆರಡು ಗುಟುಕಷ್ಟೇ ಎನ್ನಬಹುದು) ಹೊಸ ನೀರಿನ ಬಾಟಲಿಗೆ ಕೈ ಚಾಚುವ ಪರಿಸ್ಥಿತಿಯನ್ನು ನೆನೆದರಂತೂ... ದು:ಖವಾಗುತ್ತದೆ. ನೀರಿಗಾಗಿ ಯುದ್ಧಗಳೇ ಆಗಿವೆ, ಆಗುತ್ತಿವೆ. ಇಂತಹ ಜಲವನ್ನು ಹಾಳುಗೆಡುವುದು ಸರಿಯೇ? ಆತ್ಮಾವಲೋಕನ ಮಾಡಿಕೊಳ್ಳಬೇಕು.
ಇನ್ನು ಕೆಲವು ಕಡೆ ಬೋರುವೆಲ್ಲುಗಳಲ್ಲಿ ನೀರಿರುವುದಿಲ್ಲ. ಅಥವಾ ಅದರ ಸುತ್ತಮುತ್ತಲೆಲ್ಲ ಕಸದ ರಾಶಿಯಿದ್ದು, ಅಲ್ಲಿಯೇ ನೀರನ್ನು ಪಡೆಯುವ, ಕುಡಿಯುವ ದೃಶ್ಯಗಳೂ ಕಾಣುತ್ತಿರುತ್ತವೆ. ಇದರಿಂದ ಆರೋಗ್ಯ ಸಮಸ್ಯೆಯೂ ಉಂಟಾಗುವುದು.
ಸಕಲ ಜೀವಜಾತಕೆ ಸಲಿಲವೇ ಮದ್ದು. ಶುದ್ಧವಾದ ನೀರಿಗೆ ರೋಗಗಳನ್ನು ವಾಸಿಮಾಡುವ ಗುಣವಿದೆ. ಇದನ್ನು ವೈಜ್ಞಾನಿಕವಾಗಿಯೂ ಖಚಿತಪಡಿಸಿದ್ದಾರೆ. ಅದಕ್ಕೆ ಐಸ್ಯಾಕ್ ಡಿನ್ಸೆನ್ ಹೀಗೆ ಹೇಳುತ್ತಾರೆ: The cure for anything is salt water - sweat, tears, or the sea. -Isak Dinesen
ಅಲ್ಲದೇ, ನೀರನ್ನು ಕಲುಷಿತಗೊಳಿಸಿದರೆ, ಅದನ್ನು ಮತ್ತೆ ಶುದ್ಧೀಕರಿಸುವುದು ಸಾಧ್ಯವೇ ಇಲ್ಲ. ಅದಕ್ಕೆ ಆಫ್ರಿಕಾದ ಒಂದು ನುಡಿಗಟ್ಟು ಹೀಗಿದೆ: Filthy water cannot be washed. -African Proverb
ಹೀಗಿರುವಾಗ ನೀರನ್ನು ಮಿತವಾಗಿ, ಶುದ್ಧವಾಗಿ ಬಳಸಬೇಕಾದುದು ಅತಿ ಅವಶ್ಯವಾಗಿದೆ. ಇದು ಕೇವಲ ಈ ಒಂದು ದಿನಾಚರಣೆಗೆ ಮಾತ್ರವಲ್ಲದೇ, ಪ್ರತಿದಿನದ, ಪ್ರತಿಯೊಬ್ಬರ ಮನದಾಳದಲ್ಲಿ ಮೂಡಿಬರಬೇಕು. ಹಾಗೂ ಈ ವಿಚಾರದಲ್ಲಿ ಪ್ರತಿಯೊಬ್ಬರೂ ಪ್ರತಿದಿನ ಭಾಗಿಯಾಗಬೇಕಾಗಿದೆ.
ಲೇಖನ: ಚಂದ್ರಶೇಖರ ಬಿ.ಎಚ್.೨೨೦೩೨೦೧೦
12 ಕಾಮೆಂಟ್‌ಗಳು:
ವಿಶ್ವ ಜಲ ದಿನಾಚರಣೆಯ ನಿಜವಾದ ಅರ್ಥ ಮನಗಂಡು
ಪ್ರಥ್ವಿಯ ಜಲ ಸಂಪತ್ತನ್ನು ಹಾಳು ಮಾಡದೆ ಇರೋಣ ಅಲ್ಲವೇ
ವಿಶ್ವ-ಜಲದಿನಾಚರಣೆ ದಿನದ೦ದು ಸೂಕ್ತ ಕಾಳಜಿಯ ವಿಷಯದ ಲೇಖನ. ತಮ್ಮ ಲೇಖನ ಚೆನ್ನಾಗಿದೆ. ಎಲ್ಲರಿಗೂ ಜಲ-ಉಪಯೋಗದ ಬಗ್ಗೆ ಕಾಳಜಿ ಹೊ೦ದಬೇಕಾದುದು ಮತ್ತು ನೀರಿನ ಪೋಲನ್ನು ತಡೆಯುವದು ಅವಶ್ಯವಾಗಿದೆ.
ಮಾಹಿತಿ ಪೂರ್ಣ ಲೇಖನ.. ತುಂಬಾ ಚೆನ್ನಾಗಿದೆ ಸರ್.....
"we never know the worth of water till the well is dry"...ತುಂಬಾ ಸತ್ಯವಾದ ಮಾತು.
ನಮ್ಮೆಲ್ಲ "ದಿನಾಚರಣೆ ಗಳು ಆ ದಿನಕ್ಕೆ ಮಾತ್ರ ಸೀಮಿತವಾಗದೆ ವರುಷ ಪೂರ್ತಿ ಅದನ್ನು ಪಾಲಿಸು ವ೦ತಾದಾಗ ಮಾತ್ರ ಅದು ಅರ್ಥಪೂರ್ಣವೆನಿಸುತ್ತದೆ. ಈಗ೦ತೂ ಪ್ರತಿನಿತ್ಯ ಒ೦ದಿಲ್ಲೊ೦ದು ವಿಷಯದ ಮೇಲೆ "ದಿನಾಚರಣೆ" ಇದೆ. ಆದರೆ ಇದೆಲ್ಲ ಸಾ೦ಕೇತಿಕ ಅನಿಸುತ್ತಿದೆ. ನೀರಿನ ವಿಚಾರದಲ್ಲಿ ನೀವು ಹೇಳಿದ್ದು ಅಕ್ಷರಶಃ ಸತ್ಯ. ನೀರಿಲ್ಲದ ಬರದ ಊರಲ್ಲಿ ಹನಿ ನೀರಿಗೆ ಪರದಾಡುತ್ತಿದ್ದರೆ, ಭರಪೂರ ನೀರು ಸಿಗುವ ಊರಿನಲ್ಲಿ ನೀರನ್ನು ಪೋಲು ಮಾಡುತ್ತಿರು ತ್ತೇವೆ. ಒ೦ದು "ವಸ್ತು" ಅಥವಾ "ವಿಚಾರದ"ನಿಜ ಮೌಲ್ಯ ಗೊತ್ತಾಗೋದು ಅದು "ಇಲ್ಲ' ವಾದಾಗ ಅಥವಾ ಪೂರೈಕೆಯಲ್ಲಿ "ಕೊರತೆ" ಉ೦ಟಾದಾಗ. ಇನ್ನು ಕೆಲ ವರ್ಷಗಳಲ್ಲಿ ನೀರಿನ ಅ೦ತರ್ಜಲ ಬತ್ತಿ ನಾವೆಲ್ಲಾ ಏನೇನು ಅನುಭವಿಸುವುದು ಇದೆಯೋ ?? ಸಕಾಲಿಕ ಬರಹ, ಚೆನ್ನಾಗಿದೆ.
ಗುರು ಅವರೆ, ಜಲಸಂಪತ್ತನ್ನಷ್ಟೇ ಅಲ್ಲದೇ ಪೃಥ್ವಿಯ ಎಲ್ಲ ಸಂಪತ್ತುಗಳನ್ನೂ ಉಳಿಸಿ, ಬೆಳೆಸಬೇಕಾಗಿದೆ. ಆದರೆ, ಜಾಗೃತಿ ಮಾಡುವವರೂ ಬೇಕಲ್ಲವೇ? ಅಭಿಪ್ರಾಯಗಳಿಗೆ ಧನ್ಯವಾದಗಳು.
ಸ್ನೇಹದಿಂದ,
ಸೀತಾರಾಮ ಅವರೆ, ನಿಮ್ಮ ಅನಿಸಿಕೆಗಳಿಗೆ ವಂದನೆಗಳು. ನೀರನ್ನು ಪೋಲುಮಾಡದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರಿಗೂ ಸೇರಿದ್ದು..
ಇದನ್ನು ಮನೆಯಿಂದ, ಮಕ್ಕಳಿಂದಲೇ ಆರಂಭಿಸಬೇಕು.
ಸ್ನೇಹದಿಂದ,
ಓ ಮನಸೇ... ನೀನೇಕೆ ಹೀಗೆ?
ನಿಮ್ಮ ಮನದಾಳದ ಮಾತುಗಳಿಗೆ ಸ್ವಾಗತ.
ಹೀಗೆಯೆ ಬರುತ್ತಿರಿ. ಧನ್ಯವಾದಗಳು..
ಸ್ನೇಹದಿಂದ,
ಪರಾಂಜಪೆ ಸರ್, ನಿಮ್ಮ ಅನಿಸಿಕೆಗಳಿಗೆ ವಂದನೆಗಳು. ಕೊನೆಯ ಮಾತೆಂಬಂತೆ, ನೀರಿನ ವಿಚಾರದಲ್ಲಿ ನೀವು ತಿಳಿಸಿರುವುದು ಖಂಡಿತಾ ನಿಜಕ್ಕೆ ಸನಿಹದಲ್ಲಿದ್ದೇವೆ.
ಸ್ನೇಹದಿಂದ,
ಪಾಶ್ಚಾತ್ಯ ಸಂಸ್ಕೃತಿಯಂತೆ ನಾವು ಎಷ್ಟೊಂದು ದಿನಗಳನ್ನು ಅಷ್ಟು ಅಬ್ಬರದಲ್ಲಿ ಆಚರಿಸುತ್ತೇವೆ.. ಆದರೆ ಅತ್ಯಂತ ಅವಶ್ಯಕವಾದ ಈ ಜಲದಿನ, ಪರಿಸರ ರಕ್ಷಣೆಯ ದಿನಗಳು, ಹೆಚ್ಚು ಸದ್ದು ಗದ್ದಲವಿಲ್ಲದೇ ಮುಗಿದುಹೋಗುತ್ತದೆ. ಈ ಬರಹ ಜಲದಿನದ ದಿನವೇ ಬರೆದು ನಿಮ್ಮ ಕಾಳಜಿ ವ್ಯಕ್ತಪಡಿಸಿದ್ದೀರಿ ಚಂದ್ರೂ.... ವಂದನೆಗಳು...
ವಿಶ್ವ ಜಲ ದಿನಾಚರಣೆಯ ಈ ಸಂದರ್ಭದಲ್ಲಿ ನಿಮ್ಮ ಲೇಖನ ಯೋಚನಾರ್ಹ. ಕೇವಲ ಆಚರಣೆಗಳಲ್ಲೇ ಮುಗಿದು ಹೋಗುವ ಇಂತಹ ದಿನಗಳ ಮಹತ್ವದ ಅರಿವು ನಿಜವಾಗಿಯೂ ನಮಗಿದೆಯೇ? ಅದರ ಬಗ್ಗೆ ಎಂದಾದರೂ ಯೋಚಿಸಿದ್ದೇವೆಯೇ? ಇಂದಿನ ದಿನಗಳಲ್ಲಿ ನೀರಿಗಾಗಿ ನಡೆಯುವ ಹಾಹಾಕಾರ ನಮಗೆಲ್ಲ ಗೊತ್ತೇ ಇದೆ. ನೀರಿನ ಮಹತ್ವವನ್ನು ಅರ್ಥ ಮಾಡಿಕೊಂಡು, ನೀರೆಂಬ ಅಮೂಲ್ಯ ರತ್ನವನ್ನು ಹಾಳುಗೆಡವದೆ, ಮುಂದಿನ ಪೀಳಿಗೆಗೆ ಸ್ವಲ್ಪ ಉಳಿಸುವ ಪ್ರಯತ್ನ ಮಾಡೋಣ.
ಒಳ್ಳೆ ಮಾಹಿತಿಯುಕ್ತ ಲೇಖನ...
ಮನದಾಳದಿಂದ, ನಿಮ್ಮ ಅನಿಸಿಕೆಗಳು ನಿಜ. ನೀರನ್ನು ನಾವು ಮುಂದಿನ ಪೀಳಿಗೆಗೆ ಉಳಿಸುತ್ತೇವೋ ಇಲ್ಲವೋ ತಿಳಿಯದು. ಅದಕ್ಕೆ ನೀರನ್ನು ಪೋಲುಮಾಡದಂತೆ ಎಚ್ಚರಿಕೆ, ತಿಳುವಳಿಕೆ ಅಗತ್ಯ. ಅನಸಿಕೆಗಳಿಗೆ ವಂದನೆಗಳು.
@@@@@@@
ಸವಿಗನಸು ಅವರೆ, ನಿಮಗೆ ಸ್ವಾಗತ ಹಾಗೂ ಅನಿಸಿಕೆಗಳಿಗೆ ಧನ್ಯವಾದಗಳು. ಹೀಗೆಯೆ ಬರುತ್ತಿರಿ.
ಕಾಮೆಂಟ್ ಪೋಸ್ಟ್ ಮಾಡಿ