ಗುರುವಾರ, ನವೆಂಬರ್ 18, 2010

ಹೈಜಿನ್ ಇಲ್ಲ!! ಒಂದು ಯೋಚನೆ ಬಂತು...

ಎಲ್ಲರಿಗೂ ಉತ್ಥಾನ ದ್ವಾದಶೀ ( ತುಳಸೀ ಹಬ್ಬದ ) ಶುಭಾಶಯಗಳು !

ಹೈಜೀನ್ ಇಲ್ಲ. ಹಳ್ಳಿಗಳಲ್ಲಿ ಮದುವೆ, ನಾಮಕರಣ ಇತ್ಯಾದಿಗಳಿಗೆ ಹೋದರೆ ಸರಿ ಬರಲ್ಲ. ಅಲ್ಲಿನ ಊಟ, ತಿಂಡಿ ವಗೈರೆ ಹೈಜೀನ್ ಇರಲ್ಲ. ಹೀಗೆ ಹೇಳುವುದು ಸುಲಭ. ವಾಸ್ತವದಲ್ಲಿ ಅದೂ ನಿಜವಿರಬಹುದು ಅಥವಾ ಇಲ್ಲದಿರಲೂ ಬಹುದು. ಹೆಚ್ಚಿನ ಸಂದರ್ಭಗಳಲ್ಲಿ ಹೈಜಿನ್ (ಶುಚಿತ್ವ) ಕಡಿಮೆ ಇರುತ್ತದೆ. ಹಾಗೆಂದು ನಮಗೆ ಬೇಕಾದವರ ಸಮಾರಂಭಗಳಿಗೆ ಹೋಗದಿದ್ದರೆ ಅವರಿಗೆ ಬೇಸರವಾಗುವುದಿಲ್ಲವೇ? ಹೋದರೆ, ಅಲ್ಲಿನ ವಾತಾವರಣ ನೋಡಿ ನಮಗೆ ಬೇಸರವಾಗುವುದಿಲ್ಲವೇ? ಖಂಡಿತಾ ಈ ಎರಡಕ್ಕೂ ಉತ್ತರ - ಆಗುತ್ತದೆ ಎನ್ನಬಹುದು.

ಇವೆಲ್ಲ ಸರಿ, ನಮ್ಮಲ್ಲಿಯೇ ಎಷ್ಟು ಜನಕ್ಕೆ ಹೈಜೀನ್ ಬಗ್ಗೆ ತಿಳುವಳಿಕೆಯಿದೆ. ಓದಿದ ಮಂದಿಗೇ ಅಷ್ಟಾಗಿ ಶುಚಿತ್ವದ ಬಗ್ಗೆ ಅರಿವಿಲ್ಲದಿರುವುದನ್ನು ಗಮನಿಸಬಹುದು. ಮಾತನಾಡುವಾಗ ಹಲ್ಲುಗಳ ಸಂಧಿಯಲ್ಲಿ ಕಡ್ಡಿ, ಕಿರುಬೆರಳಿನಲ್ಲಿ ಬೆಳೆಸಿರುವ ಉದ್ದನೆಯ ಉಗುರು ಹಾಕುವುದು ಇತ್ಯಾದಿ. ಇನ್ನು ಕಿವಿಗಳಿಗೆ ಸಿಕ್ಕಿದ ಹಕ್ಕಿಪುಕ್ಕ, ಪಿನ್ನು, ಹುಲ್ಲಿನ ಎಸಳು ಇತ್ಯಾದಿ. ಮೂಗಿಗಂತೂ (ಧೂಳು, ಹೊಗೆ) ಆಗಾಗ್ಗೆ ಶುಚಿತ್ವ ಮಾಡಿಸುತ್ತಲೇ ಇರಬೇಕು, ಆಗೆಲ್ಲಾ ತಂತಾನೇ ಬೆರಳುಗಳು ಚಿನ್ನದ ಗಣಿಯಲ್ಲಿ ಆಡುತ್ತಿರುತ್ತವೆ.

ಇನ್ನು ತರಕಾರಿಯೋ, ಹೂವೋ ತರಲು ಹೋದರೆ ಎಲ್ಲೋ ಕೆಲವು ಮಂದಿ ಬೀಡಿ/ಸಿಗರೇಟು ಧಂ ಎಳೆಯುತ್ತಿರುವವರು ಕೈತೊಳೆದು ಕೊಡುವವರು ಇದ್ದಾರೆ. ಆದರೆ ಹೆಚ್ಚಿನ ಮಂದಿ ಎಡಗೈನಲ್ಲಿ ಕ್ಯಾರೆಟ್, ಟೊಮೊಟೋ, ಮೂಲಂಗಿ ಕಚ್ಚಿ ತಿನ್ನುತ್ತಾ ತರಕಾರಿ ತೂಗುತ್ತಾರೆ. ಜನ ಅದನ್ನೇ ಕೊಂಡುಕೊಳ್ಳುತ್ತಾರೆ. ಇನ್ನು ಗ್ರಾಹಕರೇನು ಕಡಿಮೆಯಿಲ್ಲ. ಹುರಳಿಕಾಯಿ, ತೊಗರಿ, ಮೂಲಂಗಿ ಯಾವುದೇ ಕೊಳ್ಳಬೇಕಾದರೂ ಮುರಿದು ತಿನ್ನುವ ಅಭ್ಯಾಸ ಬಿಟ್ಟು ಕಚ್ಚಿ ತಿಂದು, ಕೈಯನ್ನು ಬಟ್ಟೆಗೆ ಒರೆಸಿಕೊಂಡು (??) ಹಾಗೆಯೇ ಅದೇ ಕೈನಿಂದಲೇ ತರಕಾರಿ ಕೊಳ್ಳುವುದೂ ಇದೆ. ಆ ತರಕಾರಿ/ಹೂ/ ಕೊಡುವವ ಬಲಗೈ ಅಥವಾ ಎಡಗೈ ಹೆಬ್ಬೆರಳನ್ನು ನಾಲಿಗೆಗೆ ತಗಲಿಸಿ, ಪ್ಲಾಸ್ಟಿಕ್‌ ಕವರ್‌ ಬಿಡಿಸಿ ನೀವು ಕೊಂಡ ಪದಾರ್ಥವನ್ನು ತುಂಬಿ ಕೊಡುತ್ತಾನೆ. ಹಣ್ಣುಮಾರುವವರದ್ದೂ ಇದೇ ಕಥೆ. ಅದರಲ್ಲಿಯೂ ಮಾವಿನ ಹಣ್ಣು ಕೊಳ್ಳುವಾಗಲಂತೂ... ನೆನಪಿಸಿಕೊಂಡರೇ ಬೇಸರವಾಗುತ್ತದೆ.

ಪುಟ್ಟ ಮಕ್ಕಳು, ಶಾಲಾ ಮಕ್ಕಳು (ಪ್ರಾಥಮಿಕ/ಮಾಧ್ಯಮಿಕ) ಇವುಗಳ ಬಗ್ಗೆ ಗಮನವಿರುವುದಿಲ್ಲ. ಕೊಟ್ಟ ಪದಾರ್ಥವನ್ನು ಕಚ್ಚಿತಿನ್ನುವ ರೂಢಿ ಮಾಡಿಕೊಂಡಿರುತ್ತವೆ. ಕೆಲವರಿಗೆ ಹಪ್ಪಳ, ಸಂಡಿಗೆ ಎಡಗೈನಲ್ಲಿ ಕಚ್ಚುತ್ತಾ ಊಟ ಮಾಡುವ ದುರಭ್ಯಾಸವೂ ಇರುತ್ತೆ. ಇವೆಲ್ಲವನ್ನೂ ಮಾಡಬಾರದು ಎಂದು ಚಿಕ್ಕ ಮಕ್ಕಳಿದ್ದಾಗಿನಿಂದ ತಿಳಿಸಿ ಹೇಳಿದರೆ ತಿದ್ದುಕೊಳ್ಳುವರು. ಆದರೆ, ಹಿರಿಯರೇ ಇದನ್ನು ಅಭ್ಯಾಸ ಮಾಡಿಕೊಂಡಿದ್ದರೆ (??) ಏನು ಹೇಳುವುದು. ಮಕ್ಕಳಿಗಾದರೂ ತಿಳಿಸಿ ಹೇಳಬಹುದು, ಆದರೆ ಹಿರಿಯರಿಗೆ ಹೇಳುವುದು ಕಷ್ಟ.

ಮತ್ತೆ ಮದುವೆ ಮನೆಯ ವಿಚಾರಕ್ಕೆ ಬಂದರೆ, ಕೆಲವರು ಬಫೆ, ಕೆಲವರು ಟೇಬಲ್ ಊಟ, ಬಾಳೆಯೆಲೆಯೂಟ ಹೀಗೆ ಮಾಡಿಸಿರುತ್ತಾರೆ. ಊಟದ ಕೊನೆಯಲ್ಲಿ ಬಾಳೆಹಣ್ಣು ಅಥವಾ ಐಸ್‌ಕ್ರೀಂ ಕೊಡುವ ಪರಿಪಾಠ ಬೇರೆ ಬೆಳೆಸಿಕೊಂಡಿದ್ದಾರೆ. ಇದು ಎಷ್ಟರ ಮಟ್ಟಿಗೆ ಸರಿಯೋ ತಿಳಿಯದು. ಇದರ ನಡುವೆಯೇ ಫಲತಾಂಬೂಲವನ್ನೂ ಎಲೆಯ ಬಳಿ ಅಥವಾ ಕೈಗೆ ಕೊಡುತ್ತಾರೆ. ಕೆಲವೊಮ್ಮೆ ಎಂಜಲೆಲೆಯ ಮೇಲೆಯೆ ಇಟ್ಟು ಹೋಗುತ್ತಾರೆ. ಕೈ ತೊಳೆದ ಮೇಲೆ ಎಲೆ-ಅಡಿಕೆ ತಾಂಬೂಲಕ್ಕೂ ಮೊದಲು ಬಾಳೆಹಣ್ಣು ಅಥವಾ ಐಸ್‌ಕ್ರೀಂ ತಿನ್ನುವುದು ಸುಲಭವಾಗುತ್ತದೆ. ಏಕೆಂದರೆ, ಎಲೆಯ ಬಳಿಯೇ ಇದ್ದಾಗ ಬಾಳೆಹಣ್ಣು ಸುಲಿಯಲು (ಒಂದು ಕೈನಿಂದ) ಕಷ್ಟ, ಐಸ್‌ಕ್ರೀಂ ತಿನ್ನುವುದೂ ಕಷ್ಟ. ಆಗ ಎರಡೂ ಕೈ ಉಪಯೋಗಿಸಬೇಕಾಗುತ್ತದೆ. ನಂತರ ತಾಂಬೂಲದ ಕವರ್‌ ಅದೇ ಎಂಜಲ (ಎಡ ಕರದಿಂದ) ಕೈನಿಂದ ಹಿಡಿದು ಕೈತೊಳೆಯಲು ಹೋಗುವುದು. ಇದೆಲ್ಲ ಒಂದು ಸಭ್ಯತೆಯೆ ಅನಿಸುವುದು ಸಹಜ. ಆದರೆ, ಜನಕ್ಕೆ ಇವೆಲ್ಲ ಬೇಕಿಲ್ಲ.

ಇನ್ನೂ ಕೆಲವರಿರುತ್ತಾರೆ. ತಮಗೆ ಸಿಹಿ ಇಷ್ಟವಿಲ್ಲ ಎಂದ ಮೇಲೆ ಊಟದಲ್ಲಿ ಹಾಕಿಸಿಕೊಳ್ಳಬಾರದು ಅಥವಾ ಹಾಕಿಸಿಕೊಂಡಮೇಲೆ ತಿನ್ನಬೇಕು ಇಲ್ಲ ಬಿಡಬೇಕು. ಆದರೆ, ತಮ್ಮ ಪಕ್ಕದಲ್ಲಿರುವ ಸ್ನೇಹಿತರಿಗೋ ಬಂಧುಗಳಿಗೋ (ಅದಾಗಲೇ ಊಟ ಶುರು ಮಾಡಿ, ಕೈಬಾಯಿ ಸಮಾರಾಧನೆ ನಡೆಯುತ್ತಿರುತ್ತದೆ) ಪಟಕ್ಕಂತ ಹಾಕುವುದೂ ಇದೆ. ಇನ್ನು ಕೆಲವರೋ ಬಡಿಸಿದವನಿಗೆ ಮತ್ತೆ ಕರೆದು ಈ ಸಿಹಿ ತಿಂಡಿ ಬೇಡ ತೊಗೊ ಎಂದು ಬಲವಂತದಿಂದ (ಎಂಜಲ ಎಲೆಯಿಂದ) ತೆಗೆಸುವವರೂ ಇದ್ದಾರೆ.

ಹೀಗೆಲ್ಲಾ ತಾವೇ ಮಾಡುವಾಗ ಇನ್ನು ಶುಚಿತ್ವ, ಸಭ್ಯತೆ ಎಲ್ಲಿರಬೇಕು? ಎಲ್ಲಿಂದ ಬರುತ್ತೇ? ಎಲ್ಲಿಂದ ಕಾಣುವುದು? ಯೋಚಿಸಬೇಕಾದ ವಿಷಯವೇ, ಅಲ್ಲವೆ?

++++++++++++++++++++
ಇಲ್ಲೊಂದು ಪಟ್ಟಿ ಇದೆ. ಸುಮ್ಮನೇ ಓದಿದರೇ ಅರಿವಾಗುವುದು.

  • Wash your hands well with plenty of soap and hot water before the meal.
  • Do not try this at a restaurant until you have mastered it at home.
  • Do not use your eating hand to pass food once you have begun eating with it. This is a strict no-no.
  • If you lick your fingers clean at the end of the meal, try to do it discreetly and quickly. In general, if you are eating in temples, etc., avoid licking your fingers at the end of the meal. Just wash your hands instead.
  • Practice thoroughly before eating in a public place like temples,restaurants and don't leave food in your hand while eating.
  • People may be so impressed with you for trying that they might forgive your "bad manners".

courtsey: http://www.wikihow.com/Eat-Indian-Food-with-Your-Hands
++++++++++++++++++++
ಬರಹ: ಚಂದ್ರಶೇಖರ ಬಿ.ಎಚ್. ೧೮.೧೧.೨೦೧೦

10 ಕಾಮೆಂಟ್‌ಗಳು:

ಸೀತಾರಾಮ. ಕೆ. / SITARAM.K ಹೇಳಿದರು...

- ಸಾಕಷ್ಟು ರಾಸಾಯನಿಕವನ್ನ ನಾವು ಹೈಜಿನ್ ಹೆಸರಲ್ಲಿ ತಿನ್ನುತ್ತೇವೆ. ಆಹಾರ ಸ೦ರಕ್ಷಣೆಗೆ ಕೆಡದಂತೆ ಇಡಲು ಮತ್ತು ಹುಳುಗಳಾಗದಂತಿರಲು ಬೀಜದಿಂದ -ಸಸಿಯಾಗಿ -ಫಲವಾಗಿ ನಮ್ಮ ಬಾಯಿ ಸೇರುವವರೆಗೆ ಅದಕ್ಕೆ ಮಾರಕ ರಾಸಾಯನಿಕ ಸೇರಿಸಿ, ನೋಡಲು ಸುಂದರ ಮಾಡಿ, ಹತ್ತು ಸಲ ಸೋಪು ಹಚ್ಚಿ ಕೈ ತೊಳೆದು, ಮಾರಕ ಪಾತ್ರೆ ತೊಳೆವ ಸೋಪಿನಿಂದ ಪಾತ್ರೆಗಳನ್ನು ತೊಳೆದು ಊಟ ಮಾಡುತ್ತೇವೆ. ಆದರೆ ನಾವು ತಿನ್ನುವ ಆಹಾರದಲ್ಲಿ ಬೆರೆತ ರಾಸಾಯನಿಕ ವಿಷಗಳನ್ನು ತೊಳೆದು ತೆಗೆಯಲಾಗುತ್ತದೆ?

ಬಿಸ್ಲೇರಿ ಬಾಟಲ್ಲಿನಲ್ಲಿ ಹಲವು ದಿನ ಸಂಗ್ರಹಿಸಿಟ್ಟ ಶುಧ್ಧ ನೀರಿನಲ್ಲಿ ಬಾಟಲಿಯ ವಿಷ ರಾಸಾಯನಿಕಗಳು ಬೇರೆಯುವದು ನಮಗೆ ಗೊತ್ತೆ?

ಬೂದಿ, ಮಣ್ಣು, ಸವಳು ಹಚ್ಚಿ ಕೈ ತೊಳೆದು ಊಟ ಮಾಡುವ ನಮ್ಮ ಸನಾತನ ಸಂಪ್ರದಾಯ. ಸಾವಯುವ ಕೃಷಿ, ಜೈವಿಕ ಗೊಬ್ಬರ ಹೀಗೆ ನಡೆಯುತ್ತಿದ್ದ ಸಂಪ್ರದಾಯದ ಕೃಷಿ ಬಿಟ್ಟು ಮಾರಕ ಕ್ರಿಮಿನಾಶಕ ಮತ್ತು ರಸಗೊಬ್ಬರ ಬೆಳೆಸಿ ಆಹಾರದ ಹೆಸರಲ್ಲಿ ವಿಷ ತಿನ್ನ್ನುತ್ತಿದ್ದೇವೆ.

ಹೈಜಿನ್ ಎಂದುಕೊಂಡು ರಾಸಾಯನಿಕ ಹಾಕಿ ಹುಳು ಬರದಂತೆ ಕಾಪಾಡಿದ ಮಾಲ್ ನ ಆಹಾರಗಳನ್ನು ಶುಧ್ಧ ಎಂದು ತಿಂದು ಗುರುತೇ ಸಿಗದ ಹೊಸಕಾಯಿಲೆಗಳಿಗೆ ಆಹಾರವಾಗುತ್ತಿದ್ದೇವೆ.

ಕ್ಯಾನ್ಸರ ರೋಗಕ್ಕೆ ಕಾರಣ ಈ ಎಲ್ಲ ರಾಸಾಯನಿಕ ಆಹಾರಗಳು.

ವೈಧ್ಯರೊಬ್ಬರು ಹುಳು ಹಿಡಿದ ತರಕಾರಿ ಆರಿಸಿ ತರುತ್ತಿದ್ದುದ್ದನ್ನ ನೋಡಿ ಯಾರೋ ಕೇಳಿದಾಗ ಹುಳು ಹಿಡಿದಿದೆಯೆಂದರೆ ಅದರಲ್ಲಿ ರಾಸಾಯನಿಕಗಳು ಕಡಿಮೆ ಇವೆ ಎಂದು ಅರ್ಥ. ಅದಕ್ಕೆ ಅದನ್ನು ತೆಗೆದುಕೊಂಡು ಹುಳು ಹಿಡಿದ ಭಾಗ ತೆಗೆದೋ ಸ್ವಚ್ಚಗೊಲಿಸಿಯೋ ತಿನ್ನುವದು ಮೇಲು ಎಂದರಂತೆ.

ನಾಗರಾಜ್ .ಕೆ (NRK) ಹೇಳಿದರು...

This kind of Small things can make big differences. Thank u...

shivu.k ಹೇಳಿದರು...

sir,

nanu maduve maneyalli idellavannu regular agi noduthiruthene. nanage ivella gothe agiralilla. nimma tips chennagide...

ಕ್ಷಣ... ಚಿಂತನೆ... ಹೇಳಿದರು...

ಸೀತಾರಾಮ ಸರ್‍, ನೀವು ತಿಳಿಸಿರುವ ವಿಷಯದಲ್ಲಿ ಸಾಕಷ್ಟು ಮಾಹಿತಿ ಇದೆ. ಆದರೆ, ಕೊನೆಯಲ್ಲಿನ ಪ್ಯಾರಾದಲ್ಲಿರುವಂತೆ ಯಾರೂ ಯೋಚಿಸರು.

ಪ್ರತಿಕ್ರಿಯೆಗೆ ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ನಾಗರಾಜ್‌ ಅವರೆ, ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಶಿವು ಸರ್‍, ಇವೆಲ್ಲ ಮಾಮೂಲು ಅಂತ ಜನ ಹಾಗೇ ಇರಬಾರದಲ್ಲವೆ? ಅದರಿಂದ ಅನಾರೋಗ್ಯವೂ ಕಾಡುತ್ತದೆ ಎಂಬುದನ್ನರಿತರೆ ಒಳ್ಳೆಯದು.

ಧನ್ಯವಾದಗಳು.

shaamala ಹೇಳಿದರು...

ಇದಕ್ಕೆ ಅಲ್ಲವೇ ನಮ್ಮ ಹಿರಿಯರು ಬಹಳ ಹಿಂದೆಯೇ ಎಂಜಲು, ಮುಸುರೆ ಎಂದು ನಿಯಮ ಮಾಡಿದ್ದದ್ದು. ನಾವು ಅತ್ತ ಕಡೆ ಸಂಪ್ರದಾಯಗಳನ್ನು ಬಿಟ್ಟೆವು, ಇತ್ತ ಕಡೆ ಪಾಶ್ಚಾತ್ಯರ hygiene ಕೂಡ ಕಲಿಯಲಿಲ್ಲ, ಹಾಗೂ ಕೆಟ್ಟು ಹೀಗೂ ಕೆಟ್ಟೆವು. ಪಾಶ್ಚಾತ್ಯರ hygiene ಆಚರಣೆಗಿಂತ ನಮ್ಮ ಸಂಪ್ರದಾಯದಲ್ಲೇ ಹೆಚ್ಚಿನ ಆರೋಗ್ಯಪೂರ್ಣ ಅಭ್ಯಾಸಗಳು ಕಂಡುಬರತ್ತೆ. ಉದಾಹರಣೆಗೆ -ಪಾಶ್ಚಾತ್ಯರ ಅಡುಗೆಯವ ಅಡುಗೆ ಮಾಡ್ತಾ ರುಚಿ ನೋಡಿ, ಆ ಎಂಜಲನ್ನೇ ತನ್ನ ಗಿರಾಕಿಗಳಿಗೆ ದಯಪಾಲಿಸ್ತಾನೆ. ಅವನಿಗೆ ಖಾಯಿಲೆ ಇದ್ದಲ್ಲಿ ನಮಗೂ ಬರುವುದು ಖಚಿತ.

ಕ್ಷಣ... ಚಿಂತನೆ... ಹೇಳಿದರು...

ಶ್ಯಾಮಲಾ ಅವರೆ, ನಿಮ್ಮ ಅನಿಸಿಕೆಗಳು ನಿಜ. ಪಾಶ್ಚಾತ್ಯರೇಕೆ? ನಮ್ಮ ಅಡಿಗೆಯವರುಗಳೇ ಹೋಟೆಲುಗಳಲ್ಲಿ, ಮೆಸ್‌ಗಳಲ್ಲಿ, ಮದುವೆ, ಮುಂಜಿ ಇತ್ಯಾದಿ ಸ್ಥಳಗಳಲ್ಲಿ ಹೀಗೆಲ್ಲ ಮಾಡುತ್ತಾರೆ.
ನಿಮ್ಮ ಅನಿಸಿಕೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

ದೀಪಸ್ಮಿತಾ ಹೇಳಿದರು...

ಒಳ್ಳೆಯ ಮಾಹಿತಿ. ದೊಡ್ಡದೊಡ್ಡದರಲ್ಲಿ ಯೋಚಿಸುವ ಸಣ್ಣಸಣ್ಣ ವಿಚಾರದಲ್ಲಿ ಅಲಕ್ಷ್ಯ ಮಾಡುತ್ತೇವೆ. ಅವೇ ಮುಖ್ಯವಾಗಿರುತ್ತವೆ

KALADAKANNADI ಹೇಳಿದರು...

ಚಿ೦ತನಾರ್ಹ ಬರಹ! ಕೆಲವೊ೦ದು ನಮ್ಮಿ೦ದ ಸಣ್ಣದೆ೦ದು ಉಪೇಕ್ಷೆಗೊಳಗಾಗುವ ಸ೦ಗತಿಗಳು ಮು೦ದೆ ಬೃಹದಾಕಾರದ ಸಮಸ್ಯೆಗಳನ್ನು ತ೦ದೊಡ್ಡಿ ಬಿಡುತ್ತವೆ!ನಾವು ಎಚ್ಚೆತ್ತುಕೊಳ್ಳು ವಷ್ಟರಲ್ಲಿ ನಮ್ಮ ಅರೋಗ್ಯ, ಸಮಾಜ, ಸ೦ಸ್ಕೃತಿ ಎಲ್ಲವೂ ಕೆಸರಿನ ಗು೦ಡಿಯೊಳಗೆ ಹೂತು ಹೋಗಿಬಿಟ್ಟಿರುತ್ತವೆ!ಮುಖ್ಯವಾಗಿ ಹಿರಿಯರು ಕಿರಿಯರಿಗೆ ಸಣ್ಣ ವಯಸ್ಸಿನಿ೦ದಲೇ ಈ ಅ೦ಶಗಳನ್ನು ಮನನ ಮಾಡಿಕೊಡಬೇಕು! ಆದರೆ ಯಾರಿಗಾದರೂ ಇ೦ತಹವುಗಳಿಗಾಗಿ ಎಲ್ಲಿದೆ ಸಮಯ?
ಯೋಚಿಸತಕ್ಕ೦ತ ಅ೦ಶಗಳು. ಧನ್ಯವಾದಗಳು. ಒ೦ದೊಳ್ಳೆಯ ಬರಹ ನೀಡಿದ್ದಕ್ಕಾಗಿ.
ನಮಸ್ಕಾರಗಳೊ೦ದಿಗೆ,
ನಿಮ್ಮವ ನಾವಡ.