ಗುರುವಾರ, ಡಿಸೆಂಬರ್ 2, 2010

ತಪ್ಪೇ ಮಾಡದವರ್‍ಯಾರವ್ರೆ... ತಪ್ಪೇ ಮಾಡದವರ್‍ ಎಲ್ಲವ್ರೆ???

ತಪ್ಪೇ ಮಾಡದವರ್‍ಯಾರವ್ರೆ... ತಪ್ಪೇ ಮಾಡದವರ್‍ ಎಲ್ಲವ್ರೆ???

ಕೃಷಿ ಭೂಮಿಯಲ್ಲಿ ಅಥವಾ ಹೂದೋಟಗಳಲ್ಲಿ ಬೆಳೆಯ ಜೊತೆಗೆ ಕಳೆಗಳೂ ಬೆಳೆಯುತ್ತವೆ. ಇವುಗಳು ಯಾವುದೇ ಕೃಷಿ ಅಥವಾ ಪೋಷಣೆಯಿಲ್ಲದೆ ಬೆಳೆದುಬಿಡುತ್ತವೆ. ಈ ಕಳೆಗಳನ್ನು ಬೆಳೆಯುವ ಹಂತದಲ್ಲಿಯೇ ಹಾಗೂ ಆಗಾಗ ಕಿತ್ತು ಹಾಕದಿದ್ದರೆ, ಕೈಗೆ ಬರಬಹುದಾದ ಬೆಳೆಗಳನ್ನೆಲ್ಲಾ ನಾಶಮಾಡುವಷ್ಟು ಹುಲುಸಾಗಿ ಆವರಿಸಿಬಿಡುತ್ತವೆ. ಬೆಳೆ ಯಾವುದು? ಕಳೆ ಯಾವುದು? ಎಂದು ತಿಳಿಯುವುದೂ ಕಷ್ಟವಾಗಿ ಕಾಲಿಗೆ ತೊಡರುವಂತೆ ಮಾಡುತ್ತವೆ.

ಮಾನವನ ಅಭ್ಯಾಸಗಳೂ ಹಾಗೂ ದುರಭ್ಯಾಸಗಳು ಸಹ ಹಾಗೆಯೇ. ಅಭ್ಯಾಸಗಳು ನಿಧಾನವಾಗಿ ಒಗ್ಗೂಡುತ್ತಾ ಮಾನವನಲ್ಲಿ ನೆಲೆ ಕಂಡುಕೊಳ್ಳುತ್ತವೆ. ಇದರ ಜೊತೆಗೆ ಸಹವಾಸ ದೋಷವೂ ಸೇರಿದರೆ ಉತ್ತಮ ಅಥವಾ ಅನುಚಿತ ಅಭ್ಯಾಸಗಳೂ ಜೊತೆಗೂಡುತ್ತವೆ. ಕಳೆಗಳೆಂಬ ದುರಭ್ಯಾಸಗಳನ್ನು ಹೊಡೆದೋಡಿಸುವುದಕ್ಕೆಂದೇ ನಮ್ಮ ಮನಸ್ಸನ್ನು ಆಗಾಗ ಪರಿಶೀಲಿಸುತ್ತಿರಬೇಕು. ಜೊತೆಗೆ ಅಂತಹ ಸಂದರ್ಭಗಳನ್ನು ಎದುರಿಸುವ ಶಕ್ಯತೆಯನ್ನೂ ಸಂಪಾದಿಸಬೇಕು. ಕೆಲವೊಮ್ಮೆ ಸ್ನೇಹಿತರ ಬಲವಂತಕ್ಕೋ, ಸಮಾಜದಲ್ಲಿ ಗೌರವ (??) ಸಂಪಾದಿಸುವುದಕ್ಕಾಗಿಯೋ ಒಂದು ಪೆಗ್ ಕುಡಿದರೂ ಅದು ಚಟದಂತೆ ಇವರನ್ನೇ ಹಿಂಬಾಲಿಸುವ ಹಂತಗಳು ಸಾಕಷ್ಟು. ಅಂತಹ ಸಂದರ್ಭವನ್ನು ಆದಷ್ಟೂ ನಿಭಾಯಿಸಿಕೊಂಡು, ದುಶ್ಚಟಗಳನ್ನು ದೂರೀಕರಿಸಬಹುದು. ಇದಕ್ಕೆ ಮನಸ್ಸಿನ ಮೇಲಿನ ಹಿಡಿತ ಬೇಕಿರುತ್ತದೆ.

ಕಾಫೀ ಅಥವಾ ಟೀ ಅಥವಾ ಗುಟ್ಕಾ ಅಥವಾ ಹೊಗೆಸೊಪ್ಪು ಅಥವಾ ಧೂಮಪಾನ ಅಥವಾ ... ಇತ್ಯಾದಿ ಹವ್ಯಾಸಗಳು, ದುರಭ್ಯಾಸಗಳಾಗಿ ಹೋದರೆ ಅವುಗಳನ್ನು ನಿಯಂತ್ರಣಕ್ಕೆ ತಂದು, ಆರೋಗ್ಯವನ್ನು ಮತ್ತೆ ಕಾಪಾಡಿಕೊಳ್ಳುವ ಹಂತಕ್ಕೆ ತರಲು ಹಲವಾರು ಮಾರ್ಗಗಳು, ಚಿಕಿತ್ಸೆಗಳಿರಬಹುದು. ಆದರೆ, ಸ್ವನಿಯಂತ್ರಣದಿಂದ ಮಿತವಾಗಿ, ಹಿತವಾಗಿ ಅಭ್ಯಾಸವಿದ್ದರೆ, ಯಾವುದೇ ಹಾನಿಯಿಲ್ಲ ಎನ್ನಬಹುದು. ಇದರಿಂದ ತನಗಷ್ಟೇ ಅಲ್ಲದೇ ತನ್ನ ನಂಬಿದವರನ್ನೂ ಸಂತೋಷಪಡಿಸಬಹುದು.

ತಪ್ಪನ್ನು ತಿದ್ದಿಕೊಳ್ಳುವ ಮನಸ್ಸುಳ್ಳವರಿಗೆ ಇವೆಲ್ಲ ಹೇಳಬೇಕಿಲ್ಲವಾದರೂ ಕೆಲವೊಮ್ಮೆ... ತಪ್ಪೇ ಮಾಡದವರ್‍ಯಾರವ್ರೆ?? ಅಂತ ಮತ್ತೆ ಮತ್ತೆ ದು-ಅಭ್ಯಾಸಗಳಿಗೆ ಮನಸ್ಸು ಹೋಗುತ್ತಿರುತ್ತದೆ.

ಯಾರಿಂದಲೇ ಆಗಲೀ ಒಳ್ಳೆಯ ಅಭ್ಯಾಸಗಳು ಅಥವಾ ದುರಭ್ಯಾಸಗಳು ಬರಬಹುದು. ಅದನ್ನು ನಾವು ನಮ್ಮಲ್ಲಿ ಅಳವಡಿಸಿಕೊಳ್ಳುವಲ್ಲಿ ನಾವೇ ಮುಖ್ಯವಾಗಿರುತ್ತೇವೆ ಎಂಬುದನ್ನು ಮರೆಯದಿದ್ದರೆ.... ತಪ್ಪು ಮಾಡದವರ್‍ಯಾರವ್ರೆ ?? ಎಂದು ಹಾಡಬೇಕಿಲ್ಲ ಅಥವಾ ನಮ್ಮನ್ನು ಸಮಾಧಾನಗೊಳಿಸಿಕೊಳ್ಳಬೇಕಿಲ್ಲ, ಅಲ್ಲವೇ?

HUMAN FAULTS ARE LIKE GARDEN WEEDS. THEY GROW WITHOUT CULTIVATION AND SOON TAKE OVER THE PLACE IF THEY AREN'T THINNED OUT.

6 ಕಾಮೆಂಟ್‌ಗಳು:

ವಿ.ಆರ್.ಭಟ್ ಹೇಳಿದರು...

ಅಪ್ಪಟ ಸತ್ಯವೊಂದನ್ನು ಮುಚ್ಚುಮರೆಯಿಲ್ಲದೇ ಹೇಳಿದ್ದೀರಿ, ಇವತ್ತಿನ ಢಾಂಬಿಕತನ ಎಷ್ಟು ಎಂದರೆ ಬೇಕಾಗದಿದ್ದರೂ ಬಡಸಿಕೊಂಡು ಊಟದಲ್ಲಿ ಒಂದಷ್ಟು ಹಾಗೇ ಬಿಡುವುದು, ಸಿರಿವಂತರೆಂದು ತೋರಿಸಿಕೊಳ್ಳಲು ಅನೇಕ ರೀತಿಯ ಸಿಹಿತಿಂಡಿಗಳನ್ನು ಮಾಡುತ್ತಾರೆ, ಅಷ್ಟೆಲ್ಲಾ ಮಾಡುವ ಜನ ಅಲ್ಲೇ ಎದುರಿಗೆ ಭಿಕ್ಷುಕನೊಬ್ಬ ಹಸಿದುಬೇಡಿದರೆ ದೂರ ಅಟ್ಟುತ್ತಾರೆ! ಅಸಹ್ಯವಾದ ಉಡುಗೆ ತೊಟ್ಟ ಆತ ಅಲ್ಲಿ ನಿಂತರೆ ಅವರ ಅಂತಸ್ತಿಗೆ ಏನಾಗಬೇಡ!--ಇದು ಇಂದಿನ ಸಮಾಜದ ಡೋಂಗೀತನ, ಲೇಖನ ಹಿಡಿಸಿತು, ಧನ್ಯವಾದಗಳು

PARAANJAPE K.N. ಹೇಳಿದರು...

ವಿಚಾರ ಚೆನ್ನಾಗಿದೆ

ಅನಂತರಾಜ್ ಹೇಳಿದರು...

ಉತ್ತಮ ವಿಚಾರವನ್ನು ಮ೦ಡಿಸಿದ್ದೀರಿ ಚ೦ದ್ರು ಸರ್. ಕಳೆ-ಬೆಳೆಗೆ, ದುರಭ್ಯಾಸ-ಸದಭ್ಯಾಸಗಳನ್ನು ಹೋಲಿಸಿದ್ದು ಸೂಕ್ತವಾಗಿದೆ. ತಪ್ಪನ್ನು ತಿದ್ದುಕೊಳ್ಳುವ ಮನಸ್ಸಿಲ್ಲದೇ - ತಪ್ಪೇ ಮಾಡದವರ್‍ ಎಲ್ಲವ್ರೆ???ಎನ್ನುವ ಸೋಗಿನಲ್ಲಿ ಆತ್ಮವ೦ಚನೆ ಮಾಡಿಕೊಳ್ಳುವವರ ಸ೦ಖ್ಯೆಯೇ ಅಧಿಕವಾಗಿದೆ. ಆದರೆ "ಸ್ವನಿಯಂತ್ರಣದಿಂದ ಮಿತವಾಗಿ, ಹಿತವಾಗಿ ಅಭ್ಯಾಸವಿದ್ದರೆ, ಯಾವುದೇ ಹಾನಿಯಿಲ್ಲ ಎನ್ನಬಹುದು."..ಇದಕ್ಕೆ ನನ್ನ ಸಹಮತಿ ಇಲ್ಲ. ದುರಾಭ್ಯಾಸಗಳು ಹಿತವಾಗಿ ಮಿತವಾಗಿ ಇದ್ದರೂ ಅವು ದುರಾಭ್ಯಾಸಗಳೇ ತಾನೆ?

ಅನ೦ತ್

shivu.k ಹೇಳಿದರು...

ಚಂದ್ರು ಸರ್,

ಕೆಲವು ಸತ್ಯಗಳು ನಮಗೆಲ್ಲಾ ಗೊತ್ತಾಗುವುದಿಲ್ಲ. ನೀವು ಅದಕ್ಕೆ ಚೆನ್ನಾಗಿ ವಿವರಿಸಿ ಹೇಳಿದ್ದೀರಿ. ಧನ್ಯವಾದಗಳು.

AntharangadaMaathugalu ಹೇಳಿದರು...

ಚಂದ್ರೂ...
ವಿಚಾರ ಚಿಂತನಯೋಗ್ಯವಾದದ್ದು... ಚೆನ್ನಾಗಿದೆ. ಇತಿ-ಮಿತಿ ಎನ್ನುವುದು ದುರಭ್ಯಾಸಗಳಿಗೆ ಹೊಂದುವ ಪದಗಳಲ್ಲ ಎಂದು ನನ್ನ ಅಭಿಪ್ರಾಯ. ಧೂಮಪಾನ, ಕುಡಿತಗಳಂತಹ ದುಶ್ಚಟಗಳು ಬಿಟ್ಟರೆ... ಪೂರ್ಣವಾಗಿ ಬಿಟ್ಟುಬಿಡಬೇಕು. ಇದರಲ್ಲಿ ಮಿತಿಯ ಸೀಮೆ ಅತಿ ದೊಡ್ಡದಾಗಿ ಕೊನೆಗೆ ಇಲ್ಲದಂತೇ ಆಗಿಬಿಡತ್ತೆ ಎನ್ನುವುದು ನನ್ನ ಅಭಿಪ್ರಾಯ.

ಶ್ಯಾಮಲ

ಕ್ಷಣ... ಚಿಂತನೆ... bhchandru ಹೇಳಿದರು...

ಭಟ್ ಸರ್‍, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ಹೌದು, ನಿಮ್ಮ ಮಾತೂ ನಿಜವೇ ಹೌದು. ಏಕೆಂದರೆ, ಜನ ಹಾಗಿದ್ದಾರೆ.
@@@
ಪರಾಂಜಪೆ ಸರ್‍, ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು.

@@@@
ಅನಂತರಾಜ್ ಸರ್‍, ನಿಮ್ಮ ಅನಿಸಿಕೆಗಳು ನನಗೂ ಸಹಮತವಿದೆ. ಧನ್ಯವಾದಗಳು.

@@@@
ಶಿವು ಸರ್‍, ಇವೆಲ್ಲ ನಮ್ಮೊಳಗೆ ಇರುತ್ತವೆ ಅಥವಾ ಬೇರೆಯವರಲ್ಲಿ ಕಂಡರೂ ಕೆಲವೊಮ್ಮೆ ತಿಳಿದಿರುವುದಿಲ್ಲ. ಅನಿಸಿಕೆಗಳಿಗೆ ಧನ್ಯವಾದಗಳು.

@@@@
ಶ್ಯಾಮಲಾ ಅವರೆ, ನಿಮ್ಮ ಮಾತು ನಿಜ. ಆದರೆ, ಅದು ಅಷ್ಟು ಸುಲಭವೇ ಅನ್ನಿಸದಿರದು. ಪ್ರಯತ್ನಪಟ್ಟರೆ ಎಲ್ಲ ಸಾಧ್ಯ. ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.