ಮಂಗಳವಾರ, ಫೆಬ್ರವರಿ 16, 2010

ಜೊತೆ, ಜೊತೆಯಲಿ...

Alone we can do so little: Together we can do so much. -Helen Keller
ಎಷ್ಟೊಂದು ಅರ್ಥಗರ್ಭಿತವಾದ ನುಡಿಗಳಿವು. ಎಲ್ಲ ಸಂದರ್ಭದಲ್ಲಿಯೂ ಒಪ್ಪುವಂತಹ ಮಾತುಗಳು. ಕೆಲವೊಂದು ಸಂದರ್ಭದಲ್ಲಿ ಒಪ್ಪಿಗೆ ಆಗದಿರಬಹುದು! ಅದು ಬೇರೆ ಮಾತು!!

ಒಬ್ಬ ವ್ಯಕ್ತಿಯ ಚಾರಿತ್ರ್‍ಯ ನಿರ್ಮಾಣವೇ ಆಗಲೀ, ಒಂದು ಸಂಘ-ಸಂಸ್ಥೆಯ ಸ್ಥಾಪನೆಯೇ ಆಗಲಿ, ಒಂದು ಆಟೋಟ, ಸಂಗೀತ ಕಚೇರಿ, ನಾಟಕ, ಸಾಮಾಜಿಕ ಸೇವೆಗಳು, ಸಮಾಜಕ್ಕೆ ಬೇಕಾದ ಉಪಯುಕ್ತ ಯೋಜನೆಗಳು ಇವೆಲ್ಲವಕ್ಕೂ ಇದು ಅನ್ವಯಿಸುವಂತಹುದು.

ಒಗ್ಗಟ್ಟಿನಲ್ಲಿ ಬಲವಿದೆ!
ಉದಾಹರಣೆಗೆ ಒಂದು ಸಂಸ್ಥೆಯಲ್ಲಿ ಒಂದು ಸಮಾರೋಪ ಸಮಾರಂಭ ಎಂದಿಟ್ಟುಕೊಳ್ಳೋಣ. ಇಲ್ಲಿ ಒಬ್ಬೊಬ್ಬರೂ ಒಂದೊಂದು ಕೆಲಸ ಎಂದು ಹಂಚಿಕೊಂಡು, ಒಟ್ಟಾಗಿ ಕಲೆತು ಯಾರು ಯಾವ ಯಾವ ಕೆಲಸ ಮಾಡಬೇಕೆಂಬುದನ್ನು ಮೊದಲೇ ಗೊತ್ತುಪಡಿಸಿಕೊಂಡು ಮುಂದುವರೆದರೆ ಅಲ್ಲಿನ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ಒಬ್ಬನೇ ಎಲ್ಲವನ್ನೂ ನಿಭಾಯಿಸುತ್ತೇನೆ ಎಂದು ಹೊರಟರೆ, ಆಗದು, ಕೆಲಸವೂ ಸಾಗದು, ಮುಗಿಯದು. ನೂರು ಜನರಿಗೆ ಅಂಚೆ ಕಳಿಸಬೇಕಿದೆ. ವಿಳಾಸವೂ ಇದೆ. ಪತ್ರವೂಇದೆ. ಆದರೆ, ಒಬ್ಬನೇ ಪತ್ರವನ್ನು ಮಡಿಸಿ, ವಿಳಾಸ ಬರೆದು/ಅಚ್ಚಿಸಿ/ಟೈಪಿಸಿ, ಗೋಂದು ಹಚ್ಚಿ, ಅಂಚೆ ಪೆಟ್ಟಿಗೆಗೆ ಹಾಕುವ ಸಮಯವನ್ನು ಇಬ್ಬರು - ಮೂರು ಮಂದಿಯೊಂದಿಗೆ ಹಂಚಿಕೊಂಡರೆ, ಕೆಲಸವೂ ಬೇಗನೇ ಮುಗಿಯುತ್ತದೆ, ಜೊತೆಗೆ ಕೆಲಸ ಮುಗಿದದ್ದೂ ತಿಳಿಯುವುದಿಲ್ಲ.

ಹೇಗೆಂದರೆ

, ಒಂದು ಕೈಯಿಂದ ಚಪ್ಪಾಳೆ ಹೊಡೆಯಲು ಆಗುವುದಿಲ್ಲ. ಚಿಟಿಕೆ ಹೊಡೆಯಬಹುದು. ಚಪ್ಪಾಳೆಗೆ ಎರಡೂ ಕೈಗಳು ಬೇಕು. ಇಲ್ಲವಾದರೆ ಚಪ್ಪಾಳೆಯ ಸದ್ದೂ ಕೇಳುವುದಿಲ್ಲ. ಹೀಗೆಯೆ ಒಂದು ಕೆಲಸಕ್ಕೆ ಎರಡಕ್ಕಿಂತ ಹೆಚ್ಚು ಕೈಗಳು ಸೇರ ಯಾವುದೇ ಕೆಲಸವನ್ನು ಮಾಡಿದಾಗ, ಅಂದರೆ 'ಡಿವಿಷನ್‌ ಆಫ್ ಲೇಬರ್‍' ಮಾಡಿಕೊಂಡು ಕಾರ್ಯನಿರ್ವಹಿಸಿದಾಗ ಅಂತಹ ಕೆಲಸ ಕಾರ್ಯಗಳು ಬೇಗನೇ ಮತ್ತು ಅರ್ಥಪೂರ್ಣವಾಗಿ ಸಾಗುತ್ತದೆ.

ಇನ್ನೊಂದು ವಿಚಾರವಾಗಿ ಈ ಉದಾಹರಣೆಯನ್ನು ತೆಗೆದುಕೊಳ್ಳಬಹುದು. ಒಬ್ಬಟ್ಟು ಮಾಡಲು ಕುಳಿತರೂ ಹೂರಣ ಕಲಸಿ, ಲಟ್ಟಿಸಿಕೊಡುವವರು ಒಬ್ಬರಿದ್ದು, ಮತ್ತೊಬ್ಬರು ಬೇಯಿಸುತ್ತಾ ಹೋದರೆ, ಕೆಲಸದ ಹೊರೆ ಹೊರೆಯೆನಿಸುವುದಿಲ್ಲ. ನೂರು ಜನಕ್ಕೆ ಬೇಕಾದರೂ ಹೋಳಿಗೆಯ ರುಚಿಯ ಸವಿಸಬಹುದು, ಒಗ್ಗಟಿನಿಂದ ಕೆಲಸ ಹಂಚಿಕೊಂಡಿದ್ದರೆ. ಇಲ್ಲವಾದರೆ, ಒಗ್ಗರಣೆ ಹಾಕುವ ಜನರೇ ಜಾಸ್ತಿಯಾಗುತ್ತಾರೆ.

ಇನ್ನು ಒಂದು ಸಿನಿಮಾ ನಿರ್ಮಾಣ ಆಗಬೇಕೆಂದರೆ, ನೂರಾರು ಮಂದಿಯ ದುಡಿತ ಇದ್ದರೆ ಮಾತ್ರವೇ ನಾವು, ನೀವು ಚಿತ್ರ ನೋಡಿ ನಲಿಯಬಹುದು. ಒಬ್ಬ ಅಥವಾ ಒಬ್ಬಿಬ್ಬರಿಗಲ್ಲ ಅದರ ಯಶಸ್ಸು ಸಲ್ಲುವುದು, ಒಂದು ತಂಡಕ್ಕೆ.

ಏಕವ್ಯಕ್ತಿ ಪ್ರದರ್ಶನಗಳೂ ನಡೆಯುತ್ತವೆ. ಆದರೆ, ನೋಡುವ ಜನರು ನೂರಾರಿದ್ದರೆ ಮಾತ್ರವೇ ಅದಕ್ಕೆ ಯಶಸ್ಸು, ಹೆಸರು, ಇತ್ಯಾದಿ. ಆ ಏಕ ವ್ಯಕ್ತಿ ಪ್ರದರ್ಶನ ನಡೆಸಿಕೊಡಬೇಕಾದರೂ, ರಂಗಸ್ಥಳ, ವಸ್ತ್ರವಿನ್ಯಾಸ, ಲೈಟಿಂಗ್ಸ್ ಇವೆಲ್ಲದರ ಜೊತೆಗೆ ಜನರೂ ಬಂದರೆ ಮಾತ್ರವೇ ಸಾಧನೆ. ಇಲ್ಲವಾದರೆ,....

ಅದಕ್ಕೇ, ಈ ಮೇಲಿನ ಮಾತನ್ನು ಸರ್ವಕಾಲಕ್ಕೂ ಒಪ್ಪುವಂತಹದ್ದು ಎಂದಿದ್ದು. ಇದು, ಎಂದಿಗೂ ಹುಟ್ಟಿನಿಂದ ಸಾವಿನವರೆವಿಗೆ ಮುಖ್ಯವೆನಿಸುತ್ತದೆ.
Getting together is a start, remaining together is advancement, working together is an achievement.
ನೀವೇನಂತೀರಿ???

[ಈ ಲೇಖನದ ಓದಿಗೆಂದು ಮಿತ್ರರಾದ ಶ್ರೀ ಪರಾಂಜಪೆಯವರ (http://nirpars.blogspot.com/)ಸಲಹೆಗೆ ಕಳಿಸಿದ್ದೆ. ಅವರು ಚಪ್ಪಾಳೆಯ ವಿಷಯವನ್ನು ತಿಳಿಸಿ, ಇದನ್ನೂ ಅಳವಡಿಸಿಕೊಂಡರೆ ಚೆನ್ನಾಗಿರುತ್ತದೆ ಎಂದರು. ಉತ್ತಮ ಸಲಹೆಗಾಗಿ ಅವರಿಗೆ ಧನ್ಯವಾದಗಳು]
ಚಂದ್ರಶೇಖರ ಬಿ.ಎಚ್. ೧೬೦೨೨೦೧೦

16 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ನಾನು ಹೇಳಿದ್ದು ತು೦ಬ ಸಣ್ಣ ವಿಚಾರ, ಅಷ್ಟಕ್ಕೇ ನೀವು ನನಗೆ ಆಭಾರ ವ್ಯಕ್ತ ಪಡಿಸಿದ್ದೀರಿ. ಬೇಕಿರಲಿಲ್ಲ. ನಿಮ್ಮ ಬರಹದೊಳಗಿನ ವಿಚಾರ-ಆಶಯ ಚೆನ್ನಾಗಿದೆ.

ಸಾಗರದಾಚೆಯ ಇಂಚರ ಹೇಳಿದರು...

ತುಂಬಾ ಸುಂದರ ಲೇಖನ
ಬಹಳ ಇಷ್ಟವಾಯಿತು

ವಿ.ಆರ್.ಭಟ್ ಹೇಳಿದರು...

ನೀವು ಹಾಗೆ ಕೇಳಿದರೆ ಒಂದೇ ಕೈಯಿಂದ ಚಪ್ಪಾಳೆ ಆಗದಿದ್ದರೂ ತಬಲಾ, ಮೃದಂಗ ಮುಂತಾದವನ್ನು ನುಡಿಸಬಹುದು ಅಂತಾರೆ, ಲೇಖನ ಚೆನ್ನಾಗಿದೆ!

ಜಲನಯನ ಹೇಳಿದರು...

ಯೋಚನೆಗಳು ಸರಿಯಾದ ದಿಕ್ಕುಹಿಡಿದರೆ ಭಾವನೆಗಳು, ಲೇಖನಿ ಎರಡೂ ಸಾಥ್ ನೀಡ್ತಾವಂತೆ...ಹಾಗೆ ನಿಮ್ಮ ಲೇಖನ...ಮುಂದುವರೆಯಲಿ

AntharangadaMaathugalu ಹೇಳಿದರು...

ಚಂದ್ರೂ ಅವರೆ...
ಲೇಖನ ಚೆನ್ನಾಗಿದೆ. ಹೌದು ಈಗ ಈ ಕೂಡಿ ಬಾಳುವ, ಕೂಡಿ ಕೆಲಸ ಮಾಡುವ ಮಂತ್ರವೇ ನಮ್ಮ ದೇಶದ ಏಳಿಗೆಗೆ ಬೇಕಾಗಿರುವುದು...ನನಗೆ ನಿಮ್ಮ ಲೇಖನ ಓದಿ...ಹಿಂದಿಯ ಸಾಥೀ ಹಾತ್ ಬಡಾವೋ...ಹಾಡು ನೆನಪಾಯಿತು..

ಕ್ಷಣ... ಚಿಂತನೆ... bhchandru ಹೇಳಿದರು...

ಪರಾಂಜಪೆ ಸರ್‍, ಸಣ್ಣ ವಿಚಾರಗಳೇ ಯಾವಾಗಲೂ ತಕ್ಷಣಕ್ಕೆ ಹೊಳೆಯುವುದಿಲ್ಲ. ಅದಕ್ಕೆ ಬೇರೆಯವರ ಸಲಹೆಯೂ ಇರಬೇಕು. ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

ಸ್ನೇಹದಿಂದ,

ತೇಜಸ್ವಿನಿ ಹೆಗಡೆ- ಹೇಳಿದರು...

ಉತ್ತಮ ಲೇಖನ. ನಿಜ...ಒಗ್ಗಟ್ಟಿನಲ್ಲಿ ಬಲವಿದೆ. ಆದರೆ ಆ ಒಗ್ಗಟ್ಟು ಧನಾತ್ಮಕವಾಗಿರಬೇಕು. ಸುಕಾರ್ಯಕ್ಕೆ ಆಗಿರಬೇಕು. ಇಲ್ಲದಿದ್ದರೆ ಒಮ್ಮೊಮ್ಮೆ ಒಗ್ಗಟ್ಟೂ ವಿನಾಶವನ್ನು ತರಬಹುದು! ಅಲ್ಲವೇ?

ಕ್ಷಣ... ಚಿಂತನೆ... bhchandru ಹೇಳಿದರು...

ಗುರು ಅವರೆ, ಲೇಖನ ಇಷ್ಟವಾಗಿದಕ್ಕೆ ಧನ್ಯವಾದಗಳು.

ಸ್ನೇಹದಿಂದ,

ಕ್ಷಣ... ಚಿಂತನೆ... bhchandru ಹೇಳಿದರು...

ಭಟ್ ಅವರೆ, ತಬಲವನ್ನೂ ಒಂದೇ ಕೈಯಿಂದ ನುಡಿಸಿದರೂ ಸಾಥ್ಗೆ ಇನ್ನೊಂದು ಕೈ ಬೇಕು. ಅನಿಸಿಕೆಗಳಿಗೆ ಧನ್ಯವಾದಗಳು. ಹೀಗೆಯೆ ಬರುತ್ತಿರಿ.
ಸ್ನೇಹದಿಂದ,

ಕ್ಷಣ... ಚಿಂತನೆ... bhchandru ಹೇಳಿದರು...

ಜಲನಯನರೆ, ನಿಮ್ಮ ಪ್ರೋತ್ಸಾಹದ ನುಡಿಗಳಿಗೆ ವಂದನೆಗಳು. ಇನ್ನಷ್ಟು ಬರೆಯಲು ಯೋಚಿಸುತ್ತೇನೆ.
ಹೀಗೆಯೆ ಬರುತ್ತಿರಿ.

ಸ್ನೇಹದಿಂದ,

ಕ್ಷಣ... ಚಿಂತನೆ... bhchandru ಹೇಳಿದರು...

ಅಂತರಂಗದ ಮಾತುಗಳು...
ಹಳೆಯ ಹಿಂದಿ ಹಾಡನ್ನು ನೆನಪಿಸಿದ್ದೀರಿ. ನಮ್ಮಲ್ಲಿಯೇ ಒಂದು ಕನ್ನಡ ಚಲನಚಿತ್ರ ಬಂದಿತ್ತು. ಕೂಡಿಬಾಳಿದರೆ ಸ್ವರ್ಗ ಸುಖ ಎಂದು....

ಹೀಗೆಯೇ ಅನೇಕ ಕನ್ನಡ ಚಿತ್ರಗೀತೆಗಳೂ ಒಗ್ಗಟ್ಟಿನ ಬಗ್ಗೆ ಕೇಳುತ್ತಿರುತ್ತೇವೆ. ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು.

ಸ್ನೇಹದಿಂದ,

ಕ್ಷಣ... ಚಿಂತನೆ... bhchandru ಹೇಳಿದರು...

ತೇಜಸ್ವಿನಿಯವರೆ,

ನಿಮ್ಮ ಅನಿಸಿಕೆ ನಿಜವೇ ಹೌದು. ಈ ವಿಚಾರವನ್ನು ತಿಳಿಸಿದ್ದಕ್ಕಾಗಿ ಧನ್ಯವಾದಗಳು. ನನಗೆ ಮೊದಲು ಬರೆಯಬೇಕೆನಿಸಿದ್ದು ಈ ಧನಾತ್ಮಕ ವಿಚಾರದ ಬಗ್ಗೆ. ಆದರೆ, ಬರೆದದ್ದು ಇನ್ನೆನೋ. ಲೇಖನ ಮೆಚ್ಚಿದ್ದಕ್ಕಾಗಿ ವಂದನೆಗಳು.

ಸ್ನೇಹದಿಂದ,

ಗುರು-ದೆಸೆ !! ಹೇಳಿದರು...

'ಕ್ಷಣ... ಚಿಂತನೆ... bhchandru' ಅವ್ರೆ..,

ಹೌದು..! ಆದ್ರೆ, ಕೆಲವೊಮ್ಮೆ ಚಪ್ಪಾಳೆಗೆ ಇನ್ನೊಂದು ಕೈ ಸಿಗದಿದ್ದರೆ.. ಒಂದು ಕೈಯಲ್ಲಿ ಚಿಟಿಕೆ ಹೊಡೆದೆ ಸಂತೋಷ ಪಡಬೇಕು..

ನನ್ನ 'ಮನಸಿನಮನೆ'ಗೆ ಬನ್ನಿ:http://manasinamane.blogspot.com/

ಕ್ಷಣ... ಚಿಂತನೆ... bhchandru ಹೇಳಿದರು...

ಗುರು-ದೆಸೆ !!, ಲೇಖನ ಮೆಚ್ಚಿದ್ದಕ್ಕಾಗಿ ವಂದನೆಗಳು.

shivu.k ಹೇಳಿದರು...

ಸರ್,

ಕೆಲಸವನ್ನು ಹಂಚಿಕೊಂಡಾಗ ಆಗುವ ಅನುಕೂಲಗಳನ್ನು ಚೆನ್ನಾಗಿ ಬರೆದಿದ್ದೀರಿ. ನಾನಿದನ್ನು ಓದಿರಲಿಲ್ಲ. ಈಗ ಬಿಡುವು ಮಾಡಿಕೊಂಡು ಓದಿದೆ.

ಸೀತಾರಾಮ. ಕೆ. ಹೇಳಿದರು...

ಓದುಗರು ಹಾಗೂ ಬರಹಗಾರರು ಇಬ್ಬರು ಸೇರಿದರೆ ಚಪ್ಪಳೆ ಹೊಡೆಯಬಹುದು ಅಲ್ಲವೇ. ಸ೦ಘಶಕ್ತಿ ಬಗ್ಗೆ ಸೂಕ್ತ ಮಾಹಿತಿ ನೀಡಿದ್ದಿರಾ. ಧನ್ಯವಾದಗಳು.