ಬುಧವಾರ, ಜುಲೈ 1, 2009

ಸ್ವಾತಂತ್ರ್ಯ ಜನ್ಮ ಸಿದ್ಧ ಹಕ್ಕು - ಆದರೆ...

ಸ್ವಾತಂತ್ರ್ಯ ಜನ್ಮ ಸಿದ್ಧ ಹಕ್ಕು - ಆದರೆ... ಈ ರೀತಿಯೆ?

ಭಾರತ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ, ಅರವತ್ತು ಮತ್ತೊಂದು ವರ್ಷವಾಗುತ್ತಾ ಬಂದಿದೆ..... ಆದರೆ, ಜನರ ಮನಸ್ಸಿನಲ್ಲಿ ಸ್ವಾತಂತ್ರ್ಯವೆಂದರೆ ಏನೆಲ್ಲಾ ಇರಬಹುದು? ಈ ಕುರಿತು ಕೆಲವಾರು ಅನಿಸಿಕೆಗಳು ಮತ್ತು ಗುಣಲಕ್ಷಣಗಳು ಕಂಡುಬಂದಿದ್ದು ಹೀಗೆ.

ಸ್ವಚ್ಛಂದ ನಡವಳಿಕೆಯೇ ಸ್ವಾತಂತ್ರ್ಯವೆಂದು ಇಂದಿನ ಯುವ-ಮತ್ತು ವಿದ್ಯಾವಂತ ಜನರಲ್ಲಿ ಮನೆ ಮಾಡಿಕೊಂಡಿದೆ ಎನಿಸುತ್ತಿದೆ. ಯಾವುದೇ ರಾಷ್ಟ್ರೀಯ ಹಬ್ಬವಾಗಿರಲಿ, ನಾಡಹಬ್ಬವಾಗಿರಲಿ ಆ ದಿನದಂದು ಎಲ್ಲೆಲ್ಲೂ ರಜೆ-ಮಜಾದ ವಾತಾವರಣ ಕಾಣುತ್ತೇವೆ. ಆದರೆ ಈ ನೆಲದ, ದೇಶದ, ಜನಾಂಗದ ಸಂಸ್ಕೃತಿ ಇವೆಲ್ಲ ಈ ಹಬ್ಬಗಳಂದು ಶೂನ್ಯವಾದವೇ ಎನ್ನುವಷ್ಟು ಜನರಲ್ಲಿ ಸ್ವಚ್ಛಂದ ಪ್ರವೃತ್ತಿ ಹರಡುತ್ತಿದೆ. ರಜೆ ಬಂದಿತೆಂದರೆ ಆ ದಿನವನ್ನು ಒಂದು ಒಳ್ಳೆಯ ಕೆಲಸಕ್ಕಾಗಿ ಉಪಯೋಗಿಸುವುದು ಅಪರೂಪವಾಗುತ್ತಿದೆ.

ರಾಷ್ಟ್ರೀಯ, ನಾಡ ಹಬ್ಬಗಳೇ ಇರಲಿ ಅಥವಾ ಧಾರ್ಮಿಕ ಹಬ್ಬಗಳೇ ಇರಲಿ ದಶಕಗಳ ಹಿಂದೆ ಮದ್ಯ ಮತ್ತು ಮಾಂಸದಂಗಡಿಗಳು ಹಬ್ಬಗಳ ಮುನ್ನಾದಿನ ಮುಚ್ಚಿರುತ್ತಿದ್ದವು. ಆದರೆ ಇದೀಗ ಎಲ್ಲೆಲ್ಲೂ ಸ್ವಾತಂತ್ರ್ಯದ ಛಾಯೆ ಆವರಿಸಿ, ಇದೇ ವಿಶೇಷ ದಿನಗಳಂದು ಈ ಅಂಗಡಿಗಳು ದಿನಪೂರ್ತಿ ತೆರೆದೇ ಇರುತ್ತವೆ. ಬೇರೆಲ್ಲ ದಿನಗಳಿಗಿಂತ ಇಂತಹ ರಜಾ ಅಥವಾ ಹಬ್ಬದ ದಿನಗಳಂದೇ ಚುರುಕಿನ, ಬಿರುಸಿನ, ಅಧಿಕ ವ್ಯಾಪಾರ ನಡೆಯುತ್ತದೆ. ಇದು ನಿಜವಾಗಲೂ ಸ್ವಾತಂತ್ರ್‍ಯದ ಹೆಸರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಂಡುಬರುತ್ತಿರುವ ಪ್ರವೃತ್ತಿಯಾಗಿದೆ. ಕೆಲವು ವರ್ಷಗಳ ಹಿಂದೆ ಇಂತಹ ದಿನಗಳ ಮುನ್ನಾದಿನ ಪತ್ರಿಕಾ ಪ್ರಕಟಣೆಯಲ್ಲಿ ಇಂತಹ ದಿನದಂದು ಮದ್ಯ-ಮಾಂಸ ಮಾರಾಟ ನಿಷೇಧ ಎಂದು ಕಂಡು ಬರುತ್ತಿದ್ದವು. ಜೊತೆಗೆ ಅಂಗಡಿಗಳವರೇ ಈ ದಿನಗಳಲ್ಲಿ ವ್ಯವಹಾರ ಬಂದ್ ಮಾಡುತ್ತಿದ್ದರು. ಆದರೆ, ಇಂದಿನ ಜನರಲ್ಲಿ ಕನಿಷ್ಠ ಇಂತಹ ನಡವಳಿಕೆ ಕಂಡುಬರದಿರುವುದು ಆತಂಕದ ವಿಚಾರವೇ ಸರಿ. ಅಲ್ಲದೆ ಸರ್ಕಾರವೂ ಸಹ ಇವುಗಳ ಬಗ್ಗೆ ಅಥವಾ ದೇಶದ ಸಂಸ್ಕೃತಿ, ರೀತಿ ನೀತಿಗಳನ್ನು ಗಾಳಿಗೆ ತೂರಿ ಜನರಲ್ಲಿ ಸ್ವಚ್ಛಂದ ಪ್ರವೃತ್ತಿಗೆ ದಾರಿ ಮಾಡಿಕೊಡುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಕನಿಷ್ಠ ಇಂತಹ ರಾಷ್ಟ್ರೀಯ ಹಬ್ಬ ಅಥವಾ ಧಾರ್ಮಿಕ ದಿನಾಚರಣೆಗಳಂದು ಮದ್ಯ ಮಾಂಸ ಮಾರಾಟ ನಿಷೇಧವನ್ನು ಜಾರಿಗೊಳಿಸಿದರೆ ಕುಡಿತದ ಸ್ವಾತಂತ್ರ್ಯಕ್ಕೆ ಧಕ್ಕೆಯೇನೂ ಬರುವುದಿಲ್ಲ ಅಲ್ಲವೆ? ಅದರಲ್ಲೂ ಇಂದಿನ ಯುವ ಜನಾಂಗವು ಭಾರತೀಯ ಸಂಸ್ಕೃತಿಯಿಂದ ದೂರವಾಗುತ್ತಿರುವುದು ವಿಷಾದನೀಯ. ಇಂದಿನ ಯುವ ಮತ್ತು ವಿದ್ಯಾವಂತ ಜನರಲ್ಲಿ ಆರ್ಥಿಕ ಸ್ವಾತಂತ್ರ್ಯ ಇಂತಹ ಸ್ವಚ್ಛಂದ ನಡವಳಿಕೆಗೆ ಕಾರಣವಾಗಿದೆ. ಒಂದು ದೇಶದ ಘನತೆ, ಸಂಸ್ಕೃತಿಯನ್ನು ಉಳಿಸಿ, ಪೋಷಿಸಿಕೊಂಡು ಹೋಗಬೇಕಾದ ಜನತೆಯು ಸ್ವಾತಂತ್ರ್ಯದಿನದಂದೇ ಕುಡಿತದ ಚಟಗಳನ್ನು ಸ್ವಚ್ಛಂದವಾಗಿ ಆಚರಿಸುವುದರಿಂದ ದೇಶದ ಘನತೆಗೆ, ಅಸ್ತಿತ್ವಕ್ಕೆ ಕುಂದುಂಟಾಗುತ್ತದೆ. ಜೊತೆಗೆ ಜನರಲ್ಲಿ ವಿಶ್ವಾಸ, ಸದ್ಗುಣಗಳಿಗಿಂತ ಆಘಾತಕಾರೀ ಅಂಶಗಳಿಗೆ ಕಾರಣೀಭೂತವಾಗುತ್ತದೆ. ಇದು ಒಂದು ವಿಧದಲ್ಲಿ ದೇಶಕ್ಕೆ ಹಾಗೂ ಜನತೆಗೆ ಅಗೌರವ ತರುವ ವಿಚಾರವೇ ಆಗಿದೆ. ಈ ರೀತಿಯ ವ್ಯವಹಾರಗಳು ದೇಶದ್ರೋಹಕ್ಕೆ ಸಮಾನವೆಂದೇ ತಿಳಿಯಬಹುದು.

(ಮುಂದುವರೆಯುವುದು)
ಚಂದ್ರಶೇಖರ ಬಿ.ಎಚ್.
ಈ ಲೇಖನವನ್ನು ೨೦೦೭ ರಲ್ಲಿಯೇ ಬರೆದಿದ್ದೆ. ಒಂದಿಷ್ಟು ಬದಲಾವಣೆಯೊಂದಿಗೆ ಇಲ್ಲಿ ಬರೆದಿದ್ದೇನೆ.

4 ಕಾಮೆಂಟ್‌ಗಳು:

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ಕ್ಷಣ ಚಿಂತನೆ....

ಇಂಥಹ ಭಾವನೆಗಳು ಮೊದಲು ಜನರಿಗೆ(ನಮಗೆ) ಅನಿಸಬೇಕು...
ಆಗ ಕಾನೂನು ಇಲ್ಲದೆಯೂ ಆಗಿಬಿಡುತ್ತದೆ...

ಮೂಲತಹ ನಮಗೆ ಅನಿಸದಿದ್ದರೆ..
ಯಾವ ಕಾನೂನು ಇದ್ದರೂ ಏನೂ ಮಾಡಲಾಗುವದಿಲ್ಲ...
ಹಿಂದಿನ ದಿನವೇ ತಂದಿಟ್ಟುಕೊಳ್ಳುತ್ತಾರೆ...

ನಮ್ಮಲ್ಲೇ ಬದಲಾವಣೆ ಆಗಬೇಕಿದೆ...

ಕ್ಷಣ... ಚಿಂತನೆ... Think a while ಹೇಳಿದರು...

ಸರ್‍, ನಿಮ್ಮ ಅಭಿಪ್ರಾಯವು ಸರಿಯಾದದ್ದೇ. ಆದರೆ ಬೇಲಿಯೇ ... ಹೊಲ ಮೇಯ್ದಂತೆ ಆಗಿರುವಾಗ ಇವೆಲ್ಲ ಯೋಚಿಸಲು ಯಾರಿಗೂ ಪುರಸೊತ್ತಿಲ್ಲ. ಮತ್ತು ಅವೆಲ್ಲ ಬೇಕಿಲ್ಲ. ಜೊತೆಗೆ ಅದರಿಂದೇನುಲಾಭ ಎನ್ನುವ ಮನೋಭಾವವೇ ಕಾರಣವಿರಬಹುದು.

ವಿಶ್ವಾಸದೊಂದಿಗೆ,

ಚಂದ್ರಶೇಖರ ಬಿ.ಎಚ್.

Savitha.B.C ಹೇಳಿದರು...

ಹೌದು ಸರ್,
ನಿಮ್ಮ ಅಭಿಪ್ರಾಯ ತುಂಬ ಸರಿಯಾದುದ್ದು.

ಕ್ಷಣ... ಚಿಂತನೆ... Think a while ಹೇಳಿದರು...

thanks savitha.