ಗುರುವಾರ, ಜುಲೈ 30, 2009

ನಿಸರ್ಗ ಕ್ಯಾಲುಕ್ಯಲೇಟರನ್ನು ದ್ವೇಷಿಸುತ್ತದೆ

ಓ ದೇವರೇ,.. ಮಳೆ ಬರುತ್ತಿಲ್ಲ. ಬರಗಾಲ ಬಡಿದಂತಾಗುತ್ತಿದೆ.

ಮಳೆ ಬಂದು ಸುಮಾರು ದಿನಗಳಾಯಿತು. ಬಯಲುಸೀಮೆಗೆ ಮಳೆಯ ಹನಿಗಳೂ ಬೀಳುತ್ತಿಲ್ಲ. ಮಲೆನಾಡಿನ ಕಾಡುಗಳು ಕಡಿಮೆಯಾಗಿ ಮಳೆರಾಯನ ಬರುವಿಕೆ ಇಲ್ಲವಾಗುತ್ತಿದೆ. ಈ ಬಾರಿ ಮುಂಗಾರು ಕ್ಷೀಣವಾಗಿದೆ. ಕೆಲವೆಡೆ ಮಳೆ ಅಂದ್ರೆ ಮಳೆ ಅಂತೆ... ಹೀಗೆಲ್ಲ ನಾಡಿನಲ್ಲಿನ ಜನರ ಮಾತುಕತೆ ಸಾಗುತ್ತಿರುತ್ತದೆ.

ವೈಜ್ಞಾನಿಕವಾಗಿ ಹಾಗೂ ಸ್ಥಳೀಯವಾಗಿ ಜನರಲ್ಲಿ ಮಳೆಯ ಬಗ್ಗೆ ತಮ್ಮದೇ ಆದ ಅನುಭವ, ಅನುಭಾವಗಳು ಬೇರೂರಿರುತ್ತವೆ. ಇಲ್ಲೊಬ್ಬರು ಪ್ರಕೃತಿ ಮಾತೆಯನ್ನು ಹೀಗೆ ಹೊಗಳುತ್ತಾರೆ.

Nature is man's teacher. She unfolds her treasures to his search, unseals his eye, illumes his mind, and purifies his heart; an influence breathes from all the sights and sounds of her existence. ~Alfred Billings Street

ಆದರೆ, ಮನುಷ್ಯನ ಲೆಕ್ಕಾಚಾರದಂತೆ ಪ್ರಕೃತಿಯಲ್ಲಿ ಎಲ್ಲವೂ ನಡೆಯುವುದಿಲ್ಲ. ಪ್ರಕೃತಿಗೆ ತನ್ನದೇ ಪರಿಸರದ ಅನೇಕ ಕಾರಣಗಳಿರುತ್ತವೆ. ಬೇಸಗೆಯಲ್ಲಿಯೇ ಧೋ ಎಂದು ಮಳೆ ಸುರಿಯಬಹುದು, ಚಳಿಗಾಲದಲ್ಲಿ ಬೇಸಗೆಯ ಅನುಭವವೂ ಆಗಬಹುದು, ಮಳೆಗಾಲದಲ್ಲಿ ಮಳೆಯೇ ಇಲ್ಲವಾಗಬಹುದು. ಮಾನವನ ಲೆಕ್ಕಣಿಕೆಯಂತೆ ವರ್ಷದಲ್ಲಿ ಇಷ್ಟಿಷ್ಟು ತಿಂಗಳು ಬೇಸಗೆ, ಮಳೆ, ಚಳಿ, ಇತ್ಯಾದಿ ಇರಬಹುದು. ಆದರೆ ಪ್ರಕೃತಿಯಲ್ಲಿನ ಲೆಕ್ಕಾಚಾರವೇ ಬೇರೆ. ನಾವಿಲ್ಲಿ ಗುಣಿಸಿದರೆ ಅದು ಭಾಗಿಸಿ, ಕಳೆದು ಎಲ್ಲ ಲೆಕ್ಕ ಹಾಕಬಹುದು.
ಇದರೊಂದಿಗೆ ಮನುಷ್ಯನೇನು ಸಾಮಾನ್ಯನೇ? ಮಳೆ ಬಿತ್ತನೆ ಎಂಬ ಯೋಚನೆಯೊಂದಿಗೆ ಗ್ಲೋಬಲ್‌ ವಾರ್ಮಿಂಗ್ ಇವೆಲ್ಲದರ ಬಗ್ಗೆ ತಲೆಕೆಡಸಿಕೊಂಡರೂ ಪ್ರಕೃತಿಯು ತನ್ನದೇ ಆದ ಅಳತೆಗೋಲಿನಿಂದ ಈ ಭೂಗೋಳದಲ್ಲಿ ಬುಡುಬುಡಿಕೆಯಾಡುತ್ತದೆ.

`ಪ್ರಕೃತಿಯು ಮಾನವನ ಆಸೆಗಳನ್ನು ಪೂರೈಸಬಹುದು. ಆದರೆ ದುರಾಸೆಗಳನ್ನಲ್ಲ', ಎಂದು ಮಹಾತ್ಮಾ ಗಾಂಧಿಯವರ ಮಾತೊಂದಿದೆ. ಈ ಮಾತನ್ನು ಸರಿಯಾಗಿ ಅರ್ಥಮಾಡಿಕೊಂಡವರಿಗಿಂತ ಪ್ರಕೃತಿಯಿಂದಲೇ `ಅರ್ಥ' (ಹಣ) ಮಾಡಿಕೊಳ್ಳಲು ಹವಣಿಸುವವರೇ ಅಧಿಕ. ಅದರಿಂದಾಗಿಯೇ ಎಂತೆಂತಹ ಮಳೆಕಾಡುಗಳೂ ನಾಶವಾಗಿ ಹೋಗಿವೆ/ಹೋಗುತ್ತಿವೆ. ಹರಿಯುತ್ತಿದ್ದ ತೊರೆಗಳೆಲ್ಲ ತೆರೆಯಮರೆಗೆ ಸರಿದಿವೆ. ಕೆಲವು ಮೋರಿಗಳಾಗಿ ಢಾಳಾಗಿ ನಾರುತ್ತಿವೆ. ಇಲ್ಲೆಲ್ಲ ಮಾನವನ ದುರಾಸೆಯ ದೃಷ್ಟಿಯೇ ಕಾಣುತ್ತದೆ.

ಬೆಟ್ಟಗುಡ್ಡಗಳು, ಹೆಮ್ಮರಗಳು ಇವೆಲ್ಲ ನಾಶವಾಗುತ್ತಾ ಹೋದಾಗ ಮಳೆ ಮೋಡಗಳನ್ನು ತಡೆದು ಮಳೆಸುರಿಸುವ ಪ್ರಕೃತಿಯ `ಲೆಕ್ಕ' ತಪ್ಪಾಗಿ ಹೋಗುತ್ತಿದೆ. ಬಿಸಿಲಬೇಗೆ, ಚಳಿಗಾಲ ಇವೆಲ್ಲ ಏರುಪೇರಾಗಿ ಕೆಲವೆಡೆ ಪ್ರವಾಹಗಳೇರ್ಪಟ್ಟರೆ, ಹಲವೆಡೆ ವಾತಾವರಣದಲ್ಲಿನ ತಾಪಮಾನ ಮಾನವನ ಲೆಕ್ಕಾಚಾರಕ್ಕಿಂತಲೂ ಏರುಪೇರಾಗುತ್ತಿವೆ. ಇಂತಹ ಮಾನವನ ದುರಾಸೆಯ ಕಾರಣದಿಂದಲೇ ರಾಲ್ಫ್‌ ವಾಲ್ಡೋ ಎಮರ್ಸ್‌ನ್‌ ಅವರು ಹೀಗೆ ಹೇಳಿರಬೇಕು?! Nature hates Calculators ಎಂದು.

ಈ ಭೂಮಂಡಲದಲ್ಲಿ ಇವನ್ನೆಲ್ಲ ಸರಿದೂಗಿಸಲು ಮತ್ತೊಂದು ಪ್ರಕೃತಿಯ ನಕಲು ಭೂಮಿಯು ನಮಗಿಲ್ಲ. ಅಂದರೆ, ವಿನ್ಸ್‌ಟನ್‌ ಚರ್ಚಿಲ್‌ ರವರು ಹೇಳಿರುವಂತೆ `Nature will not be admired by proxy'.


++++++++++++++++++++++++
ನಾಳೆ ಶ್ರೀ ವರಮಹಾಲಕ್ಷ್ಮೀ ಹಬ್ಬ. ಎಲ್ಲರಿಗೂ ಆ ದೇವಿಯು ಶಾಂತಿ, ಸೌಭಾಗ್ಯಗಳನ್ನು ಅನುಗ್ರಹಿಸಲಿ. ಎಲ್ಲರಿಗೂ ಹಬ್ಬದ ಶುಭಾಶಯಗಳು.
++++++++++++++++++++++++
ಲೇಖನ: ಚಂದ್ರಶೇಖರ ಬಿ.ಎಚ್.
೩೦೦೭೨೦೦೯

4 ಕಾಮೆಂಟ್‌ಗಳು:

shivu.k ಹೇಳಿದರು...

ಕ್ಷಣಚಿಂತನೆ ಸರ್,

ಪ್ರಕೃತಿಯನ್ನು ನಾವು ನಿಯಂತ್ರಿಸಲು ಪ್ರಯತ್ನಿಸಿದರೂ ಅದು ಸಾದ್ಯವೆ...ನಿಜಕ್ಕೂ ನಿಮ್ಮ ಲೇಖನ ಅರ್ಥಪೂರ್ಣವಾಗಿದೆ.

ನಿಮಗೂ ವರಮಹಾಲಕ್ಷ್ಮಿ ಹಬ್ಬದ ಶುಭಾಶಯಗಳು.

ಕ್ಷಣ... ಚಿಂತನೆ... ಹೇಳಿದರು...

ಶಿವು ಸರ್‍, ನಿಮ್ಮ ಮಾತು ನಿಜ. ಧನ್ಯವಾದಗಳು.

ನಿಮಗೂ ಸಹ ವರಮಹಾಲಕ್ಷ್ಮೀ ಹಬ್ಬದ ಶುಭಾಶಯಗಳು.

ಸ್ನೇಹದಿಂದ,

ಚಂದ್ರಶೇಖರ ಬಿ.ಎಚ್.

Unknown ಹೇಳಿದರು...

ಪ್ರಕೃತಿ ಮಾತೆ ಕೈಗೆ ಗಣಕ ಯಂತ್ರವೂ ಸಿಗದಂತೆ ಎಚ್ಚರ ವಹಿಸೋಣ. . .

ಕ್ಷಣ... ಚಿಂತನೆ... ಹೇಳಿದರು...

ರಾಮಗೋಪಾಲ್ ಅವ್ರೆ, ನಿಮ್ಮ ಅನಿಸಿಕೆಗಳಿಗೆ ಥ್ಯಾಂಕ್ಸ್.