೧೦.೧೨.೨೦೧೦ - ಇಂದು ನಮ್ಮ ಸಂಸ್ಥೆಗೆ ಶ್ರೀಮತಿ ಅರುಂಧತಿ ನಾಗ್ ಬರುತ್ತಾರೆಂದು ತಿಳಿದು ಖುಷಿಯಾಯಿತು. ಕಾರಣ, ಆಕೆಯ ಭಾಷಣ ಕೇಳುವ ಅವಕಾಶ. `ಮೈ ಜರ್ನಿ ಇನ್ ಥಿಯೇಟರ್ಸ್' ಎಂಬುದು ಭಾಷಣದ ಶೀರ್ಷಿಕೆಯಾಗಿತ್ತು.
ಅವರು ಕನ್ನಡದಲ್ಲಿಯೇ ತಮ್ಮ ನಾಟಕ ಜೀವನವನ್ನು ಶುರು ಮಾಡಿದರಾದರೂ, ನಮ್ಮ ಸಂಸ್ಥೆಯಲ್ಲಿ ಎಲ್ಲಾ ಭಾಷಿಕರೂ (ಭಾರತದೆಲ್ಲೆಡೆಯಿಂದ ಬಂದವರು ಇಲ್ಲಿದ್ದಾರೆ) ಹಾಗೂ ಕೆಲವು ವಿದೇಶೀ ಸಂದರ್ಶಕರೂ ಇರುವುದರಿಂದ ಆಂಗ್ಲ ಭಾಷಯೆಯಲ್ಲಿಯೇ ಮುಂದುವರೆಸಿದರು.
ಅವರು ಶಾಲೆಗೆ ಹೋಗುವಾಗಲೇ ನಾಟಕ ರಂಗಕ್ಕೆ ಬಂದರಂತೆ. ತಮ್ಮ ೧೬-೧೭ನೇ ವಯಸ್ಸಿಗೇ. ಕುತೂಹಲಕ್ಕೆಂದು ನಾಟಕ ಕಂಪನಿಗೆ ಹೋದಾಗ ಅಲ್ಲಿದ್ದವರಿಂದ ನೀನು ನಾಟಕ ಮಾಡ್ತೀಯಾ? ಎಂದರಂತೆ. ಅದಕ್ಕೆ ನನಗೆ ನಟನೆ ಬರೋದಿಲ್ಲ, ಹೇಳಿಕೊಟ್ಟರೆ ಮಾಡುವೆ ಎಂದರಂತೆ. ಹೀಗೆ ಅವರ ನಾಟಕ ಜೀವನರಂಗಪ್ರವೇಶವಾಗಿದ್ದೆಂದರು. ರಂಗ ಕ್ಷೇತ್ರದಲ್ಲಿದ್ದಂತಹವರು ಕೈಫಿ ಅಜ್ಮಿ, ಎ.ಕೆ. ಹಾನಗಲ್, ವಿರಾಜ್‌ಕಪೂರ್ ಹೀಗೆ ಬಹಳಷ್ಟು ಪ್ರಸಿದ್ಧರಂತೆ. ನಂತರ ನಾಟಕವೇ ಅವರ ವೃತ್ತಿ-ಪ್ರವೃತ್ತಿಯಾಯಿತೆಂದು ತಿಳಿಸಿದರು. ಹುಟ್ಟಿದ್ದು ದೆಹಲಿಯಲ್ಲಿ. ನಾಟಕವೆಂದು ಬಂದಿದ್ದು ಮುಂಬೈಗೆ, ನಂತರ ಕರ್ನಾಟಕ ಸೇರಿದ್ದು ಹೀಗೆ ತಮ್ಮ ಜೀವನವೃತ್ತಾಂತವನ್ನು ತಿಳಿಸಿದರು. ಶಂಕರನಾಗ್ ಮತ್ತು ಇವರ ನಾಟಕದ ದಿನಗಳನ್ನು ನೆನಪಿಸಿಕೊಂಡರು. ಆಗಿನ ಕಾಲದಲ್ಲಿಯೇ ಇವರಿಗೆ ತಿಂಗಳಿಗೆ ಹತ್ತುಸಾವಿರದವರೆವಿಗೂ ವರಮಾನವಿತ್ತಂತೆ...
ಒಂದಾನೊಂದು ಕಾಲದಲ್ಲಿ ಚಿತ್ರದೊಂದಿಗೆ ಶಂಕರ್‌ನಾಗ್ ಸಿನಿಮಾ ಸೇರಿದ್ದು. ಆತನ ಸಿನೆಮಾ ಬದುಕು, ಸಿನಿಮಾ ಭರ್ಜರಿ ಪ್ರದರ್ಶನವಾಗಿದ್ದು, ಸೀತಾರಾಮುವಿನಿಂದ ಮತ್ತಷ್ಟು ಚಿತ್ರಗಳಲ್ಲಿ ಶಂಕರ್‌ನಾಗ್ ತೊಡಗಿಕೊಂಡಿದ್ದು, ಮಾಲ್ಗುಡಿ ಡೇಸ್... ಹೀಗೆ ಸಾಗಿತ್ತು.
ಇದರ ಜೊತೆಗೆ ಇವರ ಮರಾಠಿ ನಾಟಕಗಳು, ಗುಜರಾತಿ, ಛಾಪೇಕರ್ ಸೋದರರ ಜೀವನಾಧಾರಿತ ಚಿತ್ರದಲ್ಲಿ ನಟಿಸಿದ್ದು, ಇವೆಲ್ಲ ಹೇಳಿದರು. ಹಾಗೆಯೇ ಶಂಕರನಾಗನನ್ನು ಕಳೆದುಕೊಂಡಾಗ ಅನುಭವಿಸಿದ ದು:ಖ, ನಷ್ಟ. ಅದರಲ್ಲಿಯೂ ಆತನು ಕಂಡ ಕನಸುಗಳನ್ನು ಸಾಕಾರಗೊಳಿಸಲು ಶ್ರಮಿಸಿದ್ದು ಈ ಹತ್ತು ವರ್ಷಗಳಲ್ಲಿ `ರಂಗಶಂಕರ' ಏರಿದ ಎತ್ತರ ಇವೆಲ್ಲವನ್ನೂ ತಿಳಿಸಿದರು.
ಅನೇಕ ಪ್ರಶಸ್ತಿ, ಪುರಸ್ಕಾರಗಳು ಬಂದಿದ್ದರೂ ಸರಳತೆಯಿಂದ ಇರುವ ಅವರ ಗುಣವನ್ನು ಮೆಚ್ಚಬೇಕಾದದ್ದು. ಒಂದು ರೀತಿಯಲ್ಲಿ ಅಹಂ ಎಂಬ ಮೋಹದಿಂದ ಆಕೆ ದೂರ ಇರುವ ಪರಿ ನಿಜಕ್ಕೂ ಅಚ್ಚರಿ ತರಿಸುತ್ತದೆ. ಅಂತಹ ಅಗಾಧ ನೋವಿನೊಡನೆ (ಅಪಘಾತದಿಂದಾಗಿ ಸುಮಾರು ಒಂದೂವರೆ ವರ್ಷ ನಡೆಯಲು ಆಗುತ್ತಿರಲಿಲ್ಲವಂತೆ, ಇದರ ಜೊತೆಗೆ ಶಂಕರನಾಗ್ ತನ್ನ ಕನಸಿನ ರಂಗಕ್ಕೆ, ಸಿನಿಮಾ, ಸಾರ್ವಜನಿಕರಿಗೆ ಉಪಯೋಗ ಮಾಡುವ ಉದ್ಯಮ ಹೀಗೆ ಬಹಳಷ್ಟರಲ್ಲಿ ತೊಡಗಿಸಿ ಸಾಲದ ಹೊರೆಯು ಎರಡೂವರೆಕೋಟಿಗಳಿದ್ದವಂತೆ) `ರಂಗಶಂಕರ' ಸ್ಥಾಪನೆಯ ಸಾಧನೆ ನಿಜಕ್ಕೂ ಮೆಚ್ಚುವಂತಹುದು.
ಕನ್ನಡ ಭಾಷೆಯನ್ನು ಕಲಿತ ಬಗೆಯನ್ನೂ ತಿಳಿಸಿದರು. ಹಿಂದಿ, ಮರಾಠಿ, ಆಂಗ್ಲ, ಗುಜರಾತಿ, ಕೊಂಕಣಿ ಈ ಎಲ್ಲ ಭಾಷೆಗಳನ್ನು ಬಲ್ಲವರಿವರು. ಹಾಗೆಯೇ ನಾಟಕ/ನಟನೆಯಿಂದ ಯಾವುದೇ ವ್ಯಕ್ತಿಯಲ್ಲಿಯೂ ಸಹ ಪರ್ಸನಾಲಿಟಿ ಡೆವಲಪ್‌ಮೆಂಟ್ ಆಗುತ್ತದೆ. ನಟನಾಶೈಲಿಯಿಂದ, ಸಂಭಾಷಣಾ ವಿತರಿಸುವ ಕಲೆಯಿಂದ ಯಾವುದೇ ವ್ಯಕ್ತಿಯೂ ಸಹ ತನ್ನನ್ನು ತಾನು ಅಭಿವೃದ್ಧಿಯೊಂದಿಗೆ ಏನನ್ನಾದರೂ ಸಾಧಿಸಬಹುದು. ಸೌಂದರ್ಯವೇ ಮುಖ್ಯವಲ್ಲ ಎಂಬ ಮಾತನ್ನೂ ಹೇಳುತ್ತಾ ತಮ್ಮ ಕೈಗಳೆರಡನ್ನೂ ದೂರ ಚಾಚಿದಾಗ ಪುಟ್ಟದಾಗಿ ಕಂಡರೂ ಅವುಗಳನ್ನೇ ಸ್ವಲ್ಪ ವಿಸ್ತರಿಸುತ್ತಾ ಎತ್ತರಿಸಿದರೆ ಬೃಹತ್ತಾಗಿ ಕಾಣುತ್ತದೆ ಎಂಬಂತ ಸ್ಫೂರ್ತಿದಾಯಕ ಮಾತುಗಳನ್ನು ಆಡಿದರು. ಹೀಗೆ ಅವರ `ಮೈ ಜರ್ನಿ ಇನ್ ಥಿಯೇಟರ್ಸ್' ಬಗೆಗೆ ತಿಳಿಸಿದರು. ಅಲ್ಲದೇ, ರಂಗಶಂಕರ ಇಂದು ರಂಗವೇದಿಕೆಗಷ್ಟೇ ಅಲ್ಲದೇ ಸಾಮಾಜಿಕ ಜವಾಬ್ದಾರಿಯನ್ನೂ ಮಾಡುತ್ತಿದೆ, ಮಕ್ಕಳಿಗಾಗಿ ಹಾಗೂ ಉದ್ಯೋಗಿಗಳಿಗಾಗಿಯೂ ನಾಟಕದೊಂದಿಗೆ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂಬ ಅಂಶವೂ ತಿಳಿಸಿದರು.
ಒಟ್ಟಿನಲ್ಲಿ ಒಂದು ಸುಂದರ ಸಂಜೆ ನಮ್ಮ ಸಂಸ್ಥೆಯಲ್ಲಿ ಶ್ರೀಮತಿ ಅರುಂಧತಿನಾಗರ ಉಪಸ್ಥಿತಿಯಲ್ಲಿ ನಡೆಯಿತು.
(ಇಲ್ಲಿರುವ ಅವರ ಮಾತುಗಳನ್ನು ನೆನಪಿಸಿಕೊಂಡು ಸರಳವಾಗಿ ಬರೆಯಲು ಪ್ರಯತ್ನಿಸಿದ್ದೇನೆ)
ರಂಗಶಂಕರ ದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಸಂಪರ್ಕಿಸಬಹುದು: www.rangashankara.org/
ನೆನಪಿನ ಬರಹ: ಚಂದ್ರಶೇಖರ ಬಿ.ಎಚ್.
5 ಕಾಮೆಂಟ್‌ಗಳು:
ಆರುಂಧತಿ ಬಗ್ಗೆ ಬಹಳ ಚೆನ್ನಾಗಿ ಬರೆದಿದ್ದೀರಿ.
thanks sir.
ಆರುಂದತಿ ನಾಗ್ ಬಗ್ಗೆ ಉತ್ತಮವಾಗಿ ಬರೆದಿದ್ದೀರಿ..
Chandru sir,ArundhatiNag BTM nalli irtaare annisutte,
pratidina beligge avra haage iruva obbaranna nodteene...
ondu dina matadi kelbeku..
ಶಿವು ಸರ್, ಬರಹ ಇಷ್ಟವಾಗಿದ್ದಕ್ಕೆ ಧನ್ಯವಾದಗಳು.
@@@@@@@@@@
ಶ್ವೇತ ಮೇಡಂ,
ಒಮ್ಮೆ ಮಾತಾಡಿಸಿಬಿಡಿ. ಅನುಮಾನ ಪರಿಹಾರವಾಗುತ್ತದೆ.
ಧನ್ಯವಾದಗಳು.
ಕಾಮೆಂಟ್ ಪೋಸ್ಟ್ ಮಾಡಿ