ಶುಕ್ರವಾರ, ಆಗಸ್ಟ್ 7, 2009

ಕಾಫಿಯ ನೆನಪಿನಲ್ಲಿ...

©Photo: Chandrashekara B.H. June2009
ಬೆಳಗಿನ ಕಾಫಿಯ ಸವಿಯುವ, ಅದರ ಸ್ವಾದಿಷ್ಟತೆಯನ್ನು ಆಸ್ವಾದಿಸುವ ಒಂದೇ ಯೋಚನೆಯಿಂದ ನಮ್ಮ ಬೆಳಗು ಶುರುವಾಗುತ್ತದೆ. ಇದರ ಆಸ್ವಾದನೆಯನ್ನು ಯಾರೂ ಅಲ್ಲಗಳೆಯಲಾರರು. ಕಾಫಿಗೆ ಅಂತಹ ಒಂದು ಮಾದಕಶಕ್ತಿಯಿರುವುದರಿಂದಲೇ ನಮ್ಮ ದಿನವು ಶುರುವಾಗುವುದು ಅದರ ಸೇವನೆಯ ಆರಂಭದಿಂದಲೇ ಎನಬಹುದು.

ಕಾಫಿಯಲ್ಲಿರುವ ಕೆಫೀನ್ ಎಂಬ ಪದಾರ್ಥವು ಈ ಉಲ್ಲಾಸಕ್ಕೆ ಕಾರಣ. ಈ ಕೆಫೀನ್‌ನಿಂದ ಉಲ್ಲಾಸದ ಜೊತೆಗೆ ದೀರ್ಘಕಾಲೀನ ನೆನಪಿನ ಶಕ್ತಿ ಮತ್ತು ಶೀಘ್ರಕಲಿಕಾ ವಿಧಾನವನ್ನು ಹೆಚ್ಚಿಸುವಲ್ಲಿ ಪ್ರಯೋಜನಕಾರಿ ಎಂದು ಸಂಶೋಧನೆಗಳ ಅಂಬೋಣ. ಆದರೆ, ಸಂಶೋಧನೆಗೆಂದು ಸ್ಯಾಂಪಲ್‌ ಕೆಫೀನ್‌ ಪ್ರಮಾಣದ ಪ್ರಯೋಗವಷ್ಟೆ. ಇದರ ದೀರ್ಘಕಾಲೀನ ಅಥವಾ ಚಟದ ಪ್ರಭಾವ ನರಮಂಡಲಗಳಲ್ಲಿ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದು ಸರಿಯಾಗಿ ತಿಳಿಯದು. ನಮ್ಮ ದೇಹದಲ್ಲಿ ಸ್ವಾಭಾವಿಕವಾಗಿ ತಯಾರಾಗುವ ರಾಸಾಯನಿಕಗಳಲ್ಲಿ ಕೆಲವನ್ನು ಕೆಫೀನ್‌ ಅನುಕರಿಸುತ್ತದೆ ಎಂದು ಸಂಶೋಧನೆ ತಿಳಿಸುತ್ತದಂತೆ. ಸ್ವಾಭಾವಿಕವಾಗಿ ತಯಾರಾಗುವ ರಾಸಾಯನಿಕಗಳ ಬದಲಿಗೆ ಕೆಫೀನ್‌ನ ಸತತ ಸೇವನೆಯಿಂದ ಸ್ವಾಭಾವಿಕತೆಯನ್ನು ಯಾಕೆ ನೀಗಿಸಿಕೊಳ್ಳಬಾರದು?

ಇಂದಿನ ಆಧುನಿಕತೆಯಲ್ಲಿ ಕಾಫಿ ಕುಡಿಯದ ಜನರು ಕಡಿಮೆಯೆಂದೇ ಹೇಳಬಹುದು. ಯಾರದಾದರೂ ನೆಂಟರ ಭೇಟಿಗೆ ಹೋಗಲಿ ಮೊದಲು ಕಾಫಿ ನಂತರ ಮಾತುಕತೆ ಸಾಗುತ್ತದೆ. ಗೆಳೆಯರೋ, ಸಹೋದ್ಯೋಗಿಗಳೋ, ಅಪರೂಪಕ್ಕೆ ಅಥವಾ ಅವ್ಯಾಹತವಾಗಿ ಒಂದು ಕಪ್ ಕಾಫಿ... ಹೋಗೋಣ ಎಂಬುದರಿಂದಲೇ ಭೇಟಿಗಳೆಲ್ಲ ಶುರುವಾಗುತ್ತದೆ ಎಂದರೆ ಅಚ್ಚರಿಯೇನಿಲ್ಲ.

ಕಾಫಿಯಲ್ಲಿ ಅನೇಕ ಸ್ವಾದದ ಕಾಫಿಪೇಯಗಳಿವೆ. ಅವುಗಳಲ್ಲಿ ಕೆಲವು: ಅಮೇರಿಕನ್‌ (ರೆಗ್ಯುಲರ್‍), ಫ್ರೆಂಚ್, ಇಟಾಲಿಯನ್, ವಿಯನ್ನೆಸ್‌ ರೋಸ್ಟ ಇತ್ಯಾದಿ. ಬ್ರೆಜಿ಼ಲ್‌ ಕಾಫಿ ತುಂಬಾ ಫೇಮಸ್ಸು. ನಮ್ಮ ಚಿಕ್ಕಮಗಳೂರು, ಕೂರ್ಗ್ ಕಾಫಿಯೂ ಸಹ ಫೇಮಸ್ಸು. ಇದರ ಜೊತೆಗೆ ಅರೇಬಿಯನ್‌ ಕಾಫೀ ಸಹಾ... ಆಹಾ.. ಹಾ... ಇವೆಲ್ಲದರ ಸ್ವಾದಿಷ್ಟವನ್ನು ಆಸ್ವಾದಿಸುವಂತಾದರೆ... ಅದೂ ಸಹ ನಮ್ಮ ಕೆಫೆ಼ ಕಾಫೀ ಡೇ ಶಾಪುಗಳಲ್ಲಿ ಸಿಗಬಹುದು (ನನಗೆ ಗೊತ್ತಿಲ್ಲ). ಇವೆಲ್ಲ ಕೆಫೀನ್‌ ಇರುವ ಕಾಫಿಯ ಪೇಯಗಳಾದರೆ, ಕೆಫೀನ್‌ರಹಿತ ಕಾಫಿ ಸಹ ದೊರಕುತ್ತದಂತೆ. ದಿಢೀರ್‍ ಕಾಫಿ, ಫ್ರೀಜ್ಡ್-ಡ್ರೈ ಕಾಫಿಗಳೂ ಸಹ ಸಿಗುತ್ತವೆ.

ಕಾಫಿಯನ್ನು ಕೊಳ್ಳಲು, ಬೆಳೆಯಲು, ಆಸ್ವಾದಿಸಲು ಮಾರ್ಗದರ್ಶಿಯಾಗಿ `ದಿ ಜಾಯ್ ಆಫ್ ಕಾಫಿ (ಆಂಗ್ಲ)' ಎಂಬ ಪುಸ್ತಕವೂ ಬರೆಯಲ್ಪಟ್ಟಿದೆ. ಈ ಪುಸ್ತಕದಲ್ಲಿ ಕೇವಲ ಕಾಫಿಯ ಬಗ್ಗೆಯ ವಿವರಗಳಲ್ಲದೆ, ಅನೇಕ ವಿಧದ ಚಹಾ ಬಗ್ಗೆಯೂ ವಿವರಣೆಗಳಿವೆಯಂತೆ (ಓದುಗರ ಅಭಿಪ್ರಾಯಗಳಂತೆ).

ನಮ್ಮ ಡಾ. ಬಿ.ಜಿ.ಎಲ್. ಸ್ವಾಮಿಯವರ `ಸಾಕ್ಷಾತ್ಕಾರದ ಹಾದಿಯಲ್ಲಿ' ಪುಸ್ತಕದಲ್ಲಿ ಕಾಫೀ, ಚಹಾ ಅಲ್ಲದೆ ತಂಬಾಕು, ವೀಳ್ಯ ಇವುಗಳ ಬಗ್ಗೆಯಲ್ಲಿ ಹಾಸ್ಯಲೇಪಿತ ಬರಹಗಳೊಂದಿಗೆ ಸವಿವರಗಳಿವೆ.
ಕಾಫಿಯ ಬಗ್ಗೆ ಒಂದು ಹಾಡನ್ನೂ ಸಹ ಬರೆದಿದ್ದಾರೆ. ಬಾಬ್ ಹಿಲ್ಲರಡ್ ಮತ್ತು ರಿಚರಡ್ ಮೈಲ್ಸ್ ಎಂಬುವರು `ದಿ ಕಾಫಿ ಸಾಂಗ್' ಎಂಬ ಕವನವನ್ನೂ ಸಹ ರಚಿಸಿದ್ದಾರೆ. ಈ ಹಾಡನ್ನು ಫ್ರಾಂಕ್ ಸಿನಾತ್ರಾ ಅದನ್ನು ಹಾಡಿದ್ದಾರಂತೆ...


ನನ್ನ ಸ್ನೇಹಿತ ನಮ್ಮ ಮನೆಗೆ ಬಂದಾಕ್ಷಣ (ಅಪರೂಪಕ್ಕೆ ಆತ ಬರುವುದೇ ಮಧ್ಯಾಹ್ನದ ಸಮಯದಲ್ಲಿ ಬಿಡುವಿದ್ದಾಗ...) ಊಟಕ್ಕೆ ಬಾ.. ಎಂದರೆ, ಊಟ ಏನೂ ಬೇಡ, ಒಂದಲೋಟ ಕಾಫಿ ಕೊಡಿ. ನಿಮ್ಮನೆ ಕಾಫಿ ಚೆನ್ನಾಗಿರುತ್ತೆ. ಆಮೇಲೆ ಊಟ ಅಂತಾನೆ.

ಕಳೆದ ತಿಂಗಳು ನನ್ನ ಸ್ನೇಹಿತ (ಅಮೇರಿಕನ್‌ - ಕನ್ನಡದ ಬಗ್ಗೆ ಆತನಿಗೆ ಬಹಳ ಪ್ರೀತಿ) ಬಂದಿದ್ದಾಗ `ಕಾಫೀ'ಯನ್ನು ಬಹಳ ಇಷ್ಟಪಟ್ಟ. ಅಲ್ಲದೆ ಮತ್ತಷ್ಟು ಹಾಕಿಸಿಕೊಂಡು ಕಾಫಿಯನ್ನು ಸವಿಯುತ್ತಾ... ನನಗೆ ಕಾಫೀ ತುಂಬಾ ಇಷ್ಟ... ಟೀ ಅಂದ್ರ ಕಷ್ಟ. ಉತ್ತರ ಭಾರತ ಪ್ರವಾಸದಲ್ಲಿದ್ದಾಗ ಕಾಫಿಗಾಗಿ ಬಹಳ ಹುಡುಕಾಟ ನಡೆಸುತ್ತಿದ್ದೆ ಎಂದೂ ತಿಳಿಸಿದ. ಹೀಗಿದೆ ಕಾಫೀ ಕಥೆ.

ಆದರೆ, ಸತತ ಚಟವಾದರೆ ಇದೂ ಒಂದು ಸಮಸ್ಯೆಯಾಗಿ ಪರಿಣಾಮ ಬೀರುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ನಾನಾ ತೊಂದರೆಗಳಿಗೆ ಎಡೆ ಮಾಡಿಕೊಡಲೂ ಬಹುದು. ಜೊತೆಗೆ ಕಾಫೀ ಪುಡಿಯ ಬೆಲೆ ಜಾಸ್ತಿಯಾಗಿರುವುದರಿಂದ ಆದಷ್ಟು ಕಡಿಮೆ ಪ್ರಮಾಣದಲ್ಲಿ ಕಾಫಿ ಸೇವನೆ ಆರೋಗ್ಯಕ್ಕೆ ಹಾಗೂ ಜೇಬಿಗೆ ಅನುಕೂಲಕರವೇ ಹೊರತು ಹಾನಿಕರವಲ್ಲ ಎಂಬುದು ಇತ್ತೀಚೆಗಿನ ಸಂ(ಯೋಚನೆ)ಶೋಧನೆ. ನೀವೇನಂತೀರಿ?

ಸರಿ, ಸದ್ಯಕ್ಕೆ ಕಚೇರಿ ಕೆಲಸ ಮುಗಿಸಿ ಮನೆಗೆ ಹೋಗಿ ಕಾಫಿ ಕುಡಿವ...
ಲೇಖನ: ಚಂದ್ರಶೇಖರ ಬಿ.ಎಚ್.
ಆಧಾರ (ಅಂತರ್ಜಾಲತಾಣಗಳು)

4 ಕಾಮೆಂಟ್‌ಗಳು:

Ittigecement ಹೇಳಿದರು...

ಚಂದ್ರ ಶೇಖರ್...

ಅತಿಯಾದರೆ... ಅಮೃತವೂ ವಿಷವಾಗುತ್ತದೆ ಎನ್ನುವ ಗಾದೆಯಿದೆ....
ಹಾಗೆಯೆ ಕಾಫಿಯೂ ಕೂಡ...


ಬೆಳಗಿನ ಛಳಿಯಲ್ಲಿ...
ಬೆಚ್ಚನೆಯ ಕಾಫಿಯ ಸೊಗಸು...
ವರ್ಣಿಸಲು ಶಬ್ಧಗಳು ಸಾಲುವದಿಲ್ಲ....

shivu.k ಹೇಳಿದರು...

ಕ್ಷಣ ಚಿಂತನೆ ಸರ್,

ಪೂರ್ತಿ ಲೇಖನವನ್ನು ಓದಿದ ಮೇಲೆ ಬಿಸಿ ಬಿಸಿ ಚಿಕ್ಕಮಗಳೂರಿನ ಕಾಫಿ ಕುಡಿದಂತೆ ಆಯ್ತು. ನನಗೆ ಚಿಕ್ಕಮಗಳೂರಿನ ಕಾಫಿ ಅಂದ್ರೆ ತುಂಬಾ ಇಷ್ಟ. ಅಲ್ಲಿ ಪ್ರತಿಯೊಂದು ಮನೆಯಲ್ಲೂ ಕಾಫಿಯನ್ನು ತುಂಬಾ ಚೆನ್ನಾಗಿ ಮಾಡುತ್ತಾರೆ.

ಕಾಫಿಯ ಬಗ್ಗೆ ಎಷ್ಟೊಂದು ವಿಚಾರವನ್ನು, ಮಾಹಿತಿಯನ್ನು ಕಲೆಹಾಕಿದ್ದೀರಿ. ನಮ್ಮ ಓಣಿಯ ಹೈಸ್ಕೂಲ್ ಮಕ್ಕಳು ಅನೇಕ ವಿಚಾರಗಳಿಗಾಗಿ ನನ್ನ ಬಳಿ ಬರುತ್ತಾರೆ. ಕಾಫಿಯ ವಿಚಾರ ಬಂದರೆ ನೇರ ನಿಮ್ಮ ಬ್ಲಾಗ್ ತೋರಿಸುತ್ತೇನೆ.

ತುಂಬಾ ಒಳ್ಳೆಯ ಬರಹ...

ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಪ್ರಕಾಶ್ ಸರ್‍, ಕಾಫಿಯ ಲೇಖನವನ್ನು ಓದಿ ಕಾಫಿಯ ಸವಿಯನ್ನು ನೆನಪಿಸಿಕೊಂಡು ಬರೆದ ನಿಮ್ಮ ನುಡಿಗಳು ಕಾಫಿಯ ಫ್ಲೇವರಿನಷ್ಟೇ ಸೊಗಸಾಗಿದೆ. ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಶಿವು ಸರ್‍, ಈ ಲೇಖನ ಇಷ್ಟವಾಗಿದ್ದರ ಜೊತೆಗೆ ನಿಮಗೆ ಚಿಕ್ಕಮಗಳೂರಿನ ಕಾಫಿ ಪ್ರಿಯವೆಂದು ತಿಳಿಸಿದ್ದೀರಿ.

ನಿಮ್ಮ ಓಣಿಯ ಮಕ್ಕಳಿಗೆ ತಿಳಿ ಹೇಳುವಷ್ಟು ಮಾಹಿತಿ ನನ್ನ ಈ ಪುಟ್ಟ ಲೇಖನದಿಂದ ಸಿಗುವುದಾದರೆ, ಅದು ಕಾಫಿಯನ್ನು ಹೀರಿದಷ್ಟು ಆಹ್ಲಾದವೆನಿಸುತ್ತದೆ. ಧನ್ಯವಾದಗಳು.