ಗುರುವಾರ, ಆಗಸ್ಟ್ 13, 2009

ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭಕ್ಕೊಂದು ತಿಳುವಳಿಕೆ


ನಿಮಗೆಲ್ಲರಿಗೂ
ಶ್ರೀ ಕೃಷ್ಣ ಜನ್ಮಾಷ್ಠಮಿಯ
ಶುಭಾಶಯಗಳು.

ಸುಮಾರು ನಾಲ್ಕು ವರ್ಷಗಳ ಹಿಂದೆ ನಡೆದಿದ್ದ ಒಂದು ಪುಟ್ಟ ಘಟನೆಯನ್ನು ನಿಮ್ಮೆಲ್ಲರ ಜೊತೆಗೆ ಹಂಚಿಕೊಳ್ಳಬೇಕೆನಿಸಿತು. ಅದರ ಪೂರ್ಣಪಾಠ ಹೀಗಿದೆ.
*******************
ಅಂದು - ಆಗಸ್ಟ್ ೧೮, ೨೦೦೫

ಆಗಸ್ಟ್ ೧೫ರಂದು ಭಾರತ ಆಂಗ್ಲರ ಗುಲಾಮೀತನದಿಂದ ಸ್ವಾತಂತ್ರ್ಯ ಪಡೆದ ದಿನ. ಅಂದು ದೇಶದ ಎಲ್ಲೆಡೆಯೂ ಸಂಭ್ರಮ. ಕಚೇರಿ, ಶಾಲೆ, ಸಂಘಸಂಸ್ಥೆಗಳ ಜನ ಹೀಗೆ ಎಲ್ಲ ಸೇರಿ ತಮ್ಮ ಸಂತಸವನ್ನು ಹಂಚಿಕೊಳ್ಳುವ ದಿನ. ತ್ರಿವರ್ಣಧ್ವಜದ ಹಾರಿಸುವುದು ಅಂದು ಜನರಿಗೆ ಎಲ್ಲಿಲ್ಲದ ಸಂತಸದ ಕ್ಷಣವೂ ಹೌದು. ಆದರೆ, ಬಾವುಟ ಹಾರಿಸಿ, ರಾಷ್ಟ್ರಗೀತೆ ಹಾಡಿದರೆ ಸಾಕೇ? ಜೊತೆಗೆ ತಮ್ಮ ವಾಹನಗಳ ಮೇಲೆ (ಉದಾ: , ಆಟೋಗಳು ಮುಖ್ಯವಾಗಿ) ತ್ರಿವರ್ಣ ಧ್ವಜವನ್ನು ಕಟ್ಟಿಕೊಂಡು ಓಡಾಡುವ ಸಂಭ್ರಮ ಎಲ್ಲ ಸರಿ. ಆದರೆ, ಧ್ವಜವನ್ನು ಹಾರಿಸುವಾಗಿರುವ ಉತ್ಸಾಹ ಇಳಿಸುವಲ್ಲಿಯೂ ಏಕಿಲ್ಲ? ಯಾವ ವೇಳೆಯಲ್ಲಿ ಧ್ವಜಾರೋಹಣ ಮಾಡಬೇಕು ಮತ್ತು ಅದನ್ನು ಇಳಿಸಬೇಕು ಎಂದು ತಿಳಿಯದಿರುವುದೆ? ಇದಕ್ಕೆ ಕಾರಣ ಹಲವಾರು. ಮೊದಲನೆಯದಾಗಿ ನಮ್ಮ ಜನರಿಗೆ ದೇಶ, ರಾಷ್ಟ್ರಧ್ವಜ, ರಾಷ್ಟ್ರಗೀತೆಯ ಬಗ್ಗೆ ಸರಿಯಾದ ತಿಳುವಳಿಕೆ ಅಥವಾ ಮಾಹಿತಿ ಸುಲಭವಾಗಿ ಸಿಕ್ಕಿರುವುದಿಲ್ಲ. ಇದರಿಂದಾಗಿ ಅಚಾತುರ್ಯಗಳು ಆಗುವುದುಂಟು.

ಪ್ರತಿದಿನದ ಸಂಜೆ ನಮ್ಮ ಕಚೇರಿಯ ಸಹೋದ್ಯೋಗಿಗಳೊಡನೆ ವಾಕಿಂಗ್‍ (ವಿರಾಮದ ನಡಿಗೆ ಅನ್ನಬಹುದು!) ಹೋಗುವ ಅಭ್ಯಾಸ. ಜೊತೆಗೆ ಒಂದು ಹೋಟೆಲ್‍ನಲ್ಲಿ ಚಹಾ ಸೇವಿಸಿ ಮನೆಗೆ ಹಿಂದಿರುಗುವುದು ನಮ್ಮ ಅಭ್ಯಾಸ ಹಾಗೂ ಹವ್ಯಾಸ. ಆಗಸ್ಟ್‍ ೧೫ರ ಸಂಜೆ ನಮ್ಮ ನಡಿಗೆ ತಂಡ ಉಪಾಹಾರ ಮಂದಿರದ ಬಳಿ ಕುಳಿತಿತ್ತು. ಅದೇ ಸಮಯಕ್ಕೆ ಒಂದು ಆಟೋ ಬಂದು ನಿಂತಿತು. ಆಟೋಗೆ ರಾಷ್ಟ್ರಧ್ವಜ ಕಟ್ಟಲಾಗಿತ್ತು. ಆಟೋ ಚಾಲಕ ಆಟೋದಲ್ಲಿಯೇ ಕುಳಿತಿದ್ದನು. ಆಗ ನಮ್ಮ ಸ್ನೇಹಿತರು 'ಬಾಪ್ಪಾ ಇಲ್ಲಿ. ಮೊದಲು ಧ್ವಜವನ್ನು ಇಳಿಸು' ಎಂದರು. ಆತ ಮರುಮಾತಿಲ್ಲದೆ (ಸಾಮ್ಯಾನ್ಯವಾಗಿ ಇದಕ್ಕೆ ವಿರುದ್ಧ ಧೋರಣೆಯನ್ನೇ ಓದುಗರು ಕಾಣುತ್ತಿರುತ್ತೀರಿ) ಆತ ಧ್ವಜವನ್ನು ಇಳಿಸಿ ಮಡಿಸಿ ತನ್ನ ಆಟೋದ ಹಿಂದಿನ ಸೀಟಿನಲ್ಲಿ ಇಟ್ಟನು. ಆಗ ನಮ್ಮ ಮಿತ್ರರು ಆ ಆಟೋ ಚಾಲಕನಿಗೆ ಧ್ವಜ ಹಾರಿಸುವುದೊಂದೇ ಮುಖ್ಯವಲ್ಲ. ಅದನ್ನು ಸಂಜೆ ಆರು ಗಂಟೆಯ ನಂತರ ಹಾರಿಸಬಾರದು. ಅದು ಧ್ವಜ ಮತ್ತು ದೇಶಕ್ಕೆ ಅವಮಾನ ಮಾಡಿದಂತೆ ಎಂದರು. ಅದಕ್ಕೆ ಆತ, ತಪ್ಪಾಯಿತು ಹಾಗೂ ನನಗೆ ಗೊತ್ತಿರಲಿಲ್ಲ, ಸ್ವಾಮಿ ಎಂದು ಹೇಳಿದನು. ನಂತರ ಬೇರೆಯವರಿಗೂ ಹೀಗೆ ಹಾರಿಸಿದ್ದರೆ ತಿಳಿಸುತ್ತೇನೆ ಎಂದು ಹೊರಟು ಹೋದನು.

ನೋಡಿದಿರಾ? ಹೇಗೆ ನಮ್ಮಲ್ಲಿ ಓದಿದವರಿಗೂ, ಓದದವರಿಗೂ ಸರಿಯಾದ ಮಾಹಿತಿಯಿಲ್ಲದೆ ಎಂತಹ ತಪ್ಪು ಮಾಡುತ್ತಿರುತ್ತೇವೆ. ಅಲ್ಲದೆ, ಧ್ವಜಾರೋಹಣ ಮತ್ತು ಧ್ವಜ ಇಳಿಸುವಿಕೆಯ ನಿಯಮಗಳು ಇಂತಹ ರಾಷ್ಟ್ರೀಯ ಹಬ್ಬದ ದಿನಗಳಲ್ಲಿ ಅಥವಾ ಅದಕ್ಕೂ ಮುಂಚೆ ಜನರಿಗೆ ತಿಳುವಳಿಕೆ ಕೊಡುವುದನ್ನು ದೂರದರ್ಶನ, ಆಕಾಶವಾಣಿ, ಅಥವಾ ವೃತ್ತಪತ್ರಿಕೆಗಳಲ್ಲಿ ಜಾಹೀರಾತು ಇತ್ಯಾದಿಗಳೊಡನೆ ತಲುಪಿಸಿದರೆ ಇಂತಹ ಅವಘಡಗಳು ಆಗುವುದನ್ನು ತಪ್ಪಿಸಬಹುದಲ್ಲವೆ?

ಲೇಖನ: ಚಂದ್ರಶೇಖರ ಬಿ.ಎಚ್.
*******************

7 ಕಾಮೆಂಟ್‌ಗಳು:

shivu.k ಹೇಳಿದರು...

ಕ್ಷಣ ಚಿಂತನೆ ಸರ್,

ಧ್ವಜ ಇಳಿಸುವ ಬಗ್ಗೆ ನನಗೆ ಸರಿಯಾಗಿ ಮಾಹಿತಿ ಗೊತ್ತಿರಲಿಲ್ಲ. ನನಗೆ ತಿಳಿದುಕೊಂಡಂತೆ ಆಯಿತು. ಮತ್ತೆ ಇವತ್ತು ನಮ್ಮ ರಸ್ತೆಯ ಮಕ್ಕಳೂ ಅವರವರ ಶಾಲೆಗಳಲ್ಲಿ ಧ್ವಜಾರೋಹಣ ಸಂಬ್ರಮದಲ್ಲಿರುತ್ತಾರೆ. ಅದನ್ನು ಮುಗಿಸಿ ಬಂದ ನಂತರ ಈ ವಿಚಾರವನ್ನು ಅವರಿಗೆ ತಿಳಿಸಿಬೇಕು. ಮತ್ತು ಅದನ್ನು ಅವರು ಸೋಮವಾರ ಅವರ ಶಾಲೆಯಲ್ಲೂ ಹೇಳಲು ಹೇಳುತ್ತೇನೆ..

ಧನ್ಯವಾದಗಳು.

ತೇಜಸ್ವಿನಿ ಹೆಗಡೆ ಹೇಳಿದರು...

ಸಕಾಲಿಕ ಲೇಖನ. ತುಂಬಾ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ. ಧನ್ಯವಾದಗಳು.

ಸಾಗರದಾಚೆಯ ಇಂಚರ ಹೇಳಿದರು...

ಒಳ್ಳೆಯ ಮಾಹಿತಿ, ನಾನೂ ಎಷ್ಟೊಂದು ಕಡೆ ಆಗಸ್ಟ್ ೧೫ ಮತ್ತು ೧೬ ರ ಬೆಲಿಗಿನವರೆಗೋಒ ದ್ವಜ ಹಾರುತ್ತಿದ್ದುದು ನೋಡಿದ್ದೇನೆ.
ತಿಳಿಸಿದ್ದಕ್ಕೆ ಧನ್ಯವಾದಗಳು

ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

ಸರ್,
ನನಗೂ ಈ ವಿಷಯ ತಿಳಿದಿರಲಿಲ್ಲ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡು ಆದಷ್ಟು ಹೆಚ್ಚು ಜನಕ್ಕೆ ತಿಳಿಸುವೆ. ಧನ್ಯವಾದಗಳು.

Ittigecement ಹೇಳಿದರು...

ಚಂದ್ರ ಶೇಖರ್...

ಈ ವಿಷಯ ನನಗೂ ತಿಳಿದಿರಲಿಲ್ಲ...

ಉಪಯುಕ್ತ ಮಾಹಿತಿ..

ಧನ್ಯವಾದಗಳು..

ಕ್ಷಣ... ಚಿಂತನೆ... ಹೇಳಿದರು...

ಶಿವು ಸರ್‍, ತೇಜಸ್ವಿನಿ ಮೇಡಂ, ಗುರುಮೂರ್ತಿ ಸರ್‍, ಮಲ್ಲಿಕಾರ್ಜುನ್‌ ಮತ್ತು ಪ್ರಕಾಶ್ ಸರ್‌, ನಿಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು. ನನಗೂ ಸಹ ಇದರ ಬಗ್ಗೆ ಸರಿಯಾದ ಮಾಹಿತಿಯಿರಲಿಲ್ಲ. ಅಂದು ನಡೆದ ಆಟೋರಿಕ್ಷಾ ಘಟನೆಯ ನಂತರ ಪ್ರತಿಯೊಂದು ರಾಷ್ಟ್ರೀಯ ಹಬ್ಬದ ಮಾರನೆಯ ದಿನದ ದಿನಪತ್ರಿಕೆಯಲ್ಲಿ ಬರುವ (ಧ್ವಜಾರೋಹಣದ ಬಗ್ಗೆ) ಸುದ್ದಿಗಳನ್ನು ಗಮನಿಸುತ್ತಿದ್ದೆ. ಹೀಗಾಗಿ ಈ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಂಡೆ ಮತ್ತು ಅದರ ಮೂಲಕ ಧ್ವಜಾರೋಹಣ ಹಾಗೂ ಅವರೋಹಣದ ವಿಷಯವನ್ನು ತಿಳಿಸಲು ಸಾಧ್ಯವಾಯಿತು. ಲೇಖನ ಸಾರ್ಥಕವಾಯಿತು ಎನಿಸಿತು.

ರಾಜ್ಯದ ಕೆಲವು ಕಡೆಗಳಲ್ಲಿ ಧ್ವಜಾರೋಹಣದ ವರದಿಯ ಜೊತೆಗೆ ೨೪ ತಾಸು ಧ್ವಜ ಹಾರಾಡಿದ್ದು, ಕೊನೆಗೆ ಗ್ರಾಮಸ್ಥರು ಅದನ್ನು ಇಳಿಸಿದರೆಂಬ ಸುದ್ದಿಗಳೂ ಬಂದಿವೆ. ಇಲ್ಲೆಲ್ಲ ಜನರಲ್ಲಿನ ಜಾಗೃತಿ ಎಚ್ಚೆತ್ತುಕೊಂಡಿಲ್ಲವೆಂದೇ ಹೇಳಬಹುದು.

ಧನ್ಯವಾದಗಳು ಮತ್ತೊಮ್ಮೆ,

ಚಂದ್ರಶೇಖರ ಬಿ.ಎಚ್.

Bhaskar ಹೇಳಿದರು...

sir, chennagide. bhaskar