ಬುಧವಾರ, ಆಗಸ್ಟ್ 19, 2009

ರೈಲು ನಿಲ್ದಾಣದಲ್ಲಿನ ಮಾತುಗಳು...

ಮೊನ್ನೆ ದಿನ ಮೈಸೂರಿಗೆಂದು ಕೆಂಗೇರಿ ರೈಲು ನಿಲ್ದಾಣದಲ್ಲಿ ನಿಂತಿದ್ದೆ. ಅಲ್ಲೊಬ್ಬ ಚಿಕ್ಕ ಹುಡುಗ ಬಾಯಿಗೆ ಮಾಸ್ಕ್ ಧರಿಸಿಕೊಂಡು ಬರುತ್ತಿದ್ದ. ಅಲ್ಲಿಯೇ ಇದ್ದ ಒಂದಿಬ್ಬರು ಮಹಿಳೆಯರು `ಹಂದಿ ಜ್ವರ'ದ ಬಗ್ಗೆ ಮಾತನ್ನು ಶುರುಮಾಡಿದರು.

ಮಹಿಳೆ ೧: ಯಾಕ್ ಆ ಹುಡುಗ ಬಾಯ್ಗೆ ಬಟ್ಟೆ ಕಟ್ಕೊಂಡವ್ನೆ?
ಮಹಿಳೆ ೨: ಅದೇಯಾ, ಹಂದಿ ಜ್ವರ ಅಂತ ಟೀವಿಲಿ, ಪೇಪರ್‍ಲಿ ಬರ್‍ತಾಯಿದೆ.
ಮಹಿಳೆ ೧: ಹೌದು, ನಾನೂ ಕೇಳ್ದೆ. ಅದೇನೋ ಅಮೇರಿಕಾ ಕಡೆ ದೇಶದಿಂದ ಬಂದೈತಂತೆ??!!
ಮಹಿಳೆ ೩: ಹಂದಿ ಮಾಂಸ ತಿನ್ನೊದರಿಂದ ಅಂತೆ...
ಮಹಿಳೆ ೨: ಅದೆಲ್ಲ ಅಲ್ವಂತೆ, ಫಾರಿನ್ನೋರು ಬರೋದ್ರಿಂದ ಬರ್‍ತೈತಂತೆ. ಗಾಳೀಲಿ ಸೋಂಕುತ್ತಂತೆ.
ಮಹಿಳೆ ೧: ಅವರ್‍ಗೆಲ್ಲ ಇಲ್ಲಿಗೆ ಬರಕ್ಕೆ ಬಿಡದಿದ್ದರೆ ಆಯ್ತು. ಅದೇನೋ ಕಾಯ್ಲೆನೋ? ಏನೋ?
ಮಹಿಳೆ ೨: ನಮ್ ದೇಶ ನೋಡೋಕೆ ಬರ್‍ತಾರೆ, ಜೊತೆಗೆ ಹಂದಿ ಜ್ವರನೂ ತರ್‍ತಾರೆ.
ಮಹಿಳೆ ೩: ಹಂಗೇನಿಲ್ಲ. ಜನ-ಜಾತ್ರೆ, ಗಾಳಿ ಇವೆಲ್ಲದರಿಂದ ಬರುತ್ತೆ. ಅದೇನೋ ಜ್ವರ ಬಂದು ೨ ದಿನಕ್ಕೆ ರೋಗಿ ಅಷ್ಟೆ... ಅದಕ್ಕೆ ಹುಷಾರಾಗಿರ್‍ಬೇಕು, ಬಾಯಿ ರುಚಿಗೆ ಬಂದದ್ದೆಲ್ಲ ತಿನ್ಬಾರ್‍ದು. ಬಾಯಿಗೆ ಬಟ್ಟೆ ಕಟ್ಟಿಕೊಂಡರೆ, ಒಳ್ಳೇದಂತೆ....
ಮಹಿಳೆ ೧: ಏ, ಸಾಕು.. ಬಿಡ್ರೆ... ಈ ಹಂದಿ ಜ್ವರ-ಗಿರ ಮಾತು
ಎಂದು ತಾವು ಆಡುತ್ತಿದ್ದ ಮಾತುಗಳನ್ನು ಬೇರೆ ವಿಚಾರದೆಡೆಗೆ ತಿರುಗಿಸಲು ಆದೇಶಿಸಿದ್ದಳು.

ಅಷ್ಟರಲ್ಲಿ ರೈಲು ಬಂತು, ಜನರ ನಡುವೆ ಅವರು ಒಬ್ಬೊಬ್ಬರೇ ಜಾಗ ಹಿಡಿಯಲು ರೈಲಿಗೆ ನುಗ್ಗಿದ್ದರು.
ಒಟ್ಟಿನಲ್ಲಿ ಹಂದಿ ಜ್ವರದ ಬಗ್ಗೆ ಜನರು ಏನೆಲ್ಲಾ ತಿಳಿದಿದ್ದಾರೆ ಎಂದು ಅರ್ಥವಾಗುವಷ್ಟು ವಿಚಾರವಿದೆ. ಜೊತೆಗೆ ತಮ್ಮದೇ ಆದ ಊಹಾಪೋಹಗಳೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳುವ ಪರಿ ಹೀಗಿದೆಯೆಂದರೆ, ಜನರಲ್ಲಿ ಆತಂಕದ ವಾತಾವರಣ ಇಲ್ಲದೆಯೇ ಇರುತ್ತದೆಯೇ?

ಅಂದ ಹಾಗೆ, ನಾನು ವಾಪಸು ಮೈಸೂರಿನಿಂದ ಬರುವಾಗ ನನ್ನ ಬೋಗಿಯಲ್ಲಿದ್ದ ಸುಮಾರು ಜನರು ಬಾಯಿಗೆ ಮಾಸ್ಕ್, ಬಟ್ಟೆ ಧರಿಸಿದ್ದರು, ಜೊತೆಗೆ ನಾನೂ ಸಹ. ಇವೆಲ್ಲ ಮುನ್ನೆಚ್ಚರಿಕೆ ಕ್ರಮವಾಗಿ ಎಂದು ಬೇರೆ
ಹೇಳಬೇಕಿಲ್ಲ. ನೀವೇನಂತೀರಿ.

ಇಷ್ಟೆಲ್ಲ ಬರೆಯುವಷ್ಟರಲ್ಲಿ ನಿನ್ನೆ ನನಗೊಂದು ಒಂದು ಮೊಬೈಲ್ ಸಂದೇಶ ಬಂದಿತು.
ಹೇಳಿ ಬರೋದು ಜೀವನ,
ಹೇಳ್ದೆ ಬರೋದು ಮರಣ,
ತಿಳಿದು ಆಗೋದು ದ್ವೇಷ,
ತಿಳಿಯದೇ ಆಗೋದು ಪ್ರೀತಿ,
ತಿಳಿಯದೇ, ಹೇಳದೇ, ಕೇಳದೇ ಬರುವುದು
ಹಂದಿ ಜ್ವರ,
ಹುಷಾರಾಗಿರಿ...

2 ಕಾಮೆಂಟ್‌ಗಳು:

Ittigecement ಹೇಳಿದರು...

ಚಂದ್ರ ಶೇಖರ್....

ತುಂಬಾ ಮಾರ್ಮಿಕವಾಗಿ ಬರೆದಿದ್ದೀರಿ...

ಕೊನೆಯ ಸಾಲುಗಳು ಮನ ತಟ್ಟುವಂತಿದೆ....

ಅಭಿನಂದನೆಗಳು...

ಕ್ಷಣ... ಚಿಂತನೆ... ಹೇಳಿದರು...

ಪ್ರಕಾಶ್ ಸರ್‍, ಈ ಬರಹದಲ್ಲಿನ ಕೊನೆಯ ಸಾಲುಗಳನ್ನು ನನ್ನ ಸಹೋದ್ಯೋಗಿಯ ಮಗಳು ನನಗೆ ಮೊಬೈಲ್‌ ಸಂದೇಶ ಕಳಿಸಿದ್ದು, ಅದನ್ನೇ ಇಲ್ಲಿ ಬರೆದಿದ್ದೆ.

ಧನ್ಯವಾದಗಳು.