ಮಂಗಳವಾರ, ಡಿಸೆಂಬರ್ 8, 2009

ತಪ್ಪಿಸಬಹುದೇ?

ಅಪಘಾತಗಳನ್ನು ತಪ್ಪಿಸಬಹುದೇ? (ಸ್ವಲ್ಪಮಟ್ಟಿಗಾದರೂ)

ಬೆಳಗಾದರೆ ಸಾಕು, ದಿನಪತ್ರಿಕೆಯ ಮೊದಲನೇ ಪುಟದಲ್ಲಿಯೇ ಬಸ್ಸು-ಕಾರು ಡಿಕ್ಕಿ, ಲಾರಿ ಮಗುಚಿ ಮೂರು ಜನರ ಸಾವು. ರೈಲು ಅಪಘಾತ. ಅದರಲ್ಲೂ ಮುಖ್ಯವಾಗಿ ದ್ವಿಚಕ್ರ ವಾಹನ, ಆಟೋರಿಕ್ಷಾ, ಕಾರುಗಳು ಅಪಘಾತಗಳಲ್ಲಿ ನುಜ್ಜುಗುಜ್ಜಾಗಿರುವ ಚಿತ್ರಗಳನ್ನು ಕಾಣುತ್ತೇವೆ. ಹೀಗೇಕೆ ಅಪಘಾತಗಳು ಆಗುತ್ತವೆ? ಇದರಲ್ಲಿ ಯಾರ ತಪ್ಪು ಇದೆ? ಯಾರದು ಇಲ್ಲ? ಇತ್ಯಾದಿ ವಿಚಾರಗಳು ಬರುತ್ತವೆ. ಇವುಗಳ ಬಗ್ಗೆ ನನ್ನ ಮನಸ್ಸಿಗೆ ಒಂದಿಷ್ಟು ಅನಿಸಿಕೆಗಳನ್ನು ಹೀಗೆ ಬರೆದಿರುತ್ತೇನೆ.

ಪ್ರಯಾಣಿಸುವಾಗ ಅಪಘಾತಗಳಾಗುವುದು ಸಹಜ. ಆದರೆ, ಅವುಗಳನ್ನು ತಪ್ಪಿಸಬಹುದೇ? ಎಂಬುದು ಮನಸ್ಸಿಗೆ ಬಾರದಿರದು. ನಮ್ಮ ಬಸ್ಸುಗಳಲ್ಲಿ `ಅಪಘಾತಕ್ಕೆ ಅವಸರವೇ ಕಾರಣ', `ನಿಧಾನವೇ ಪ್ರಧಾನ' ಇತ್ಯಾದಿ ಬರೆದಿರುವುದು ಕೇವಲ ವಾಡಿಕೆಯಂತಾಗಿದೆ. ಏಕೆಂದರೆ ಬಸ್ಸು ಚಾಲನೆ ಮಾಡುವವರೂ ಸಹ `ಆನೆ ಸಾಗಿದ್ದೇ ಹಾದಿ' ಎಂಬಂತೆ ವರ್ತಿಸುವುದೂ ಇದೆ.
ಈಗ ಮುಖ್ಯ ವಿಷಯಕ್ಕೆ ಬರೋಣ. ವಾಹನ ಚಾಲಕರಿಗೆ ಕನಿಷ್ಠ ಸಂಚಾರ ನಿಯಮಗಳು ತಿಳಿದಿರಬೇಕು. ಇಲ್ಲವಾದಲ್ಲಿ ಅಪಘಾತಗಳು ಅಧಿಕವಾಗುತ್ತವೆ. ಅದರಲ್ಲೂ ಯುವಕ-ಯುವತಿಯರಿಗೆ ಕಡ್ಡಾಯವಾಗಿ ತಿಳಿದಿರಬೇಕು. ಆದರೆ, ನಮ್ಮಲ್ಲಿ ಲೈಸೆನ್ಸ್ ಸಿಗುವುದೇ ಅಡ್ಡದಾರಿಯಾಗಿರುವಾಗ ಇನ್ನು ವಾಹನಚಾಲನೆ ಅಡ್ಡಾದಿಡ್ಡಿಯಾಗದೆ ಇರುತ್ತದೆಯೇ? ಇದನ್ನು ನಮ್ಮ ಇಂದಿನ ಯುವಜನಾಂಗಕ್ಕೆ ಯಾವ ರೀತಿ ವಿವರಿಸಬೇಕು ಎಂಬುದೇ ಪ್ರಶ್ನೆಯಾಗುತ್ತಿದೆ. ಏಕೆಂದರೆ, ನಮ್ಮಲ್ಲಿ ಕಟ್ಟುನಿಟ್ಟಾದ ಸಂಚಾರನಿಯಮವು ಇಲ್ಲದಿರುವುದು ಅನಿಸುತ್ತದೆ.

ಮಕ್ಕಳಿರುವಾಗಲೇ ಅವರಲ್ಲಿ ಈ ವಿಚಾರಗಳನ್ನು ತುಂಬಬೇಕು. ಏಕೆಂದರೆ ಚಿಕ್ಕಂದಿನಲ್ಲಿ ಸರಿಯಾಗಿ ಕಲಿತದ್ದು ಕೊನೆತನಕ ಇರುತ್ತದೆ ಅಲ್ಲವೆ? ಇಂದಿನ ಯುವಜನಾಂಗಕ್ಕೆ (ಅದರಲ್ಲೂ ಓದಿದ ಮಂದಿಗೆ) ತಾವು ಮಾಡಿದ್ದೇ ಸರಿ ಎಂಬ ಧೋರಣೆಯೂ ಸಹ ಅಪಘಾತಗಳಿಗೆ ಕಾರಣವಾಗುತ್ತವೆ. ಅಲ್ಲದೆ ಮದ್ಯಪಾನ, ತಂಬಾಕು ಚಟ, ಗುಟ್ಕಾ ಮುಂತಾದವೂ ಸಹ ಪಾಲ್ಗೊಳ್ಳುತ್ತವೆ. ಕೆಲವರು ಈ ವಿಷಯಗಳಲ್ಲಿ ಸರಿಯಾಗಿಯೇ ಇದ್ದರೂ ಸಹ ವಾಹನಚಾಲನೆ ಮಾಡುವಾಗ ಅಪಘಾತಗಳು ಸಂಭವಿಸುತ್ತವೆ. ಹೀಗೇಕೆ?

ಏಕೆಂದರೆ, ಕೆಲವರು ತಾವು ಹೋಗಬೇಕಾದ ಸ್ಥಳವನ್ನು ಮೊದಲೇ ಯೋಚಿಸದೇ ದಾರಿಯ ಮಧ್ಯದಲ್ಲಿ ಅದೂ ದಟ್ಟ ವಾಹನ ಸಂಚಾರಗಳಿರುವೆಡೆ ಬಲಗಡೆಗೆ ಹೋಗಬೇಕಿದ್ದವರು ಎಡಗಡೆ ಸೂಚನಾಫಲಕ (ಲೆಫ಼್ಟ್ ಇಂಡಿಕೇಟರ್) ಉಪಯೋಗಿಸುವುದು, ಅಥವಾ ತಕ್ಷಣ ವಾಹನ ನಿಲ್ಲಿಸುವುದು (ರಸ್ತೆಯ ಮಧ್ಯದಲ್ಲಿಯೇ) ಅಥವಾ ತಿರುವಿನಲ್ಲಿ ಬಂದು ಎಲ್ಲಿ ಹೋಗಬೇಕೆಂದು ಯೋಚಿಸುವುದು ಇತ್ಯಾದಿ. ಇದರಿಂದ ಹಿಂದಿನಿಂದ/ಮುಂದಿನಿಂದ ಬರುತ್ತಿರುವ ವಾಹನಗಳವರಿಗೆ ಗೊಂದಲವುಂಟಾಗಿ ಅಪಘಾತಗಳು ಆಗುತ್ತವೆ. ಒಂದು ಬೈಕಿನಲ್ಲಿ ಮೂವರು, ಸ್ಕೂಟರಿನಲ್ಲಂತೂ ಮನೆಮಂದಿಯೆಲ್ಲ ಕುಳಿತು ಪ್ರಯಾಣಿಸುವುದು ಮತ್ತು ಇವೆಲ್ಲಕ್ಕಿಂತಲೂ ಹೆಚ್ಚಾಗಿ ವೇಗವಾಗಿ ಮುನ್ನುಗ್ಗುವುದು. ಆಟೋ, ಲಾರಿಯವರಿಗಂತೂ ರಸ್ತೆಯೆಲ್ಲ ತಮ್ಮ ರಾಜಬೀದಿಗಳೇ ಎಂಬಂತೆ ವರ್ತಿಸುವುದೂ ಒಂದು ಗಮನಿಸಬೇಕಾದ ಅಂಶ ('ಆಟೋ ರಾಜ, ರಸ್ತೆರಾಜ, ಇತ್ಯಾದಿ ಬರಹಗಳನ್ನು ಆಟೋ/ಲಾರಿಗಳ ಮೇಲೆ ಕಾಣಬಹುದು). ಕೆಲವರಿಗಂತೂ ಏನೋ ಧಾವಂತ. ಇವರುಗಳಿಗೆ ತಾವು ಎಷ್ಟು ಕರ್ತವ್ಯ ನಿರತರು ಎಂಬುದು ಎಲ್ಲರಿಗೂ ತಿಳಿಯಲಿ ಎಂಬಂತೆ ಜೋರಾಗಿ ಹೋಗುವುದು. ಕೊನೆಗೆ ಅಲ್ಲೆಲ್ಲೋ ಮೂಲೆ ಅಂಗಡಿಯಲ್ಲಿ ಪಾನ್ ಮಸಾಲ, ಗುಟ್ಕಾ ಅಥವಾ ಸಿಗರೇಟ್ ಕೊಂಡುಕೊಳ್ಳುವುದು. ಕೆಲವರಿಗೆ ಸಿಗ್ನಲ್ಲುಗಳಲ್ಲಿಯೇ ಸಿಕ್ಕಸಿಕ್ಕ ಸಂದಿಗೊಂದಿಗಳಲ್ಲಿ ನುಗ್ಗುವುದೆಂದರೆ ಬಹಳ ಪ್ರಿಯವೆನಿಸುವಂತಿರುತ್ತಾರೆ. ಅಲ್ಲದೇ ಅನಾವಶ್ಯಕವಾಗಿ ದಾರಿಯಲ್ಲಿ (ವಾಹನ ಸಂಚಾರ ವಿರಳವಾಗಿದ್ದರೂ ಸಹ) ಜನರ ನಡುವೆಯೇ ಜೋರಾಗಿ/ಕರ್ಕಶವಾಗಿ ಹಾರ್ನ್ ಮಾಡುತ್ತಾ ಸಾಗುವುದು. ಇದರಿಂದ ಪಾದಚಾರಿ/ವಾಹನಸಂಚಾರಿ ಗೊಂದಲಕ್ಕೀಡಾಗಿ ಅಪಘಾತಗಳು ಆಗುವುದು ಸಾಮಾನ್ಯವಾಗಿದೆ.

ಇತ್ತೀಚೆಗಂತೂ ಮೊಬೈಲು ಹಾವಳಿಯಿಂದಾಗಿ ವಾಹನ ಚಲಾಯಿಸುತ್ತಾ, ಒಂದು ಕಡೆಯಲ್ಲಿ ಕತ್ತನ್ನು ವಾಲಿಸಿಕೊಂಡು ಮಾತನಾಡುತ್ತಾ ಸಾಗುವುದು. ಇದರಿಂದ ಎದುರು ಅಥವಾ ಪಕ್ಕದಲ್ಲಿ ಬರುವ ಜನರಿಗೋ, ವಾಹನಗಳಿಗೋ ಅಥವಾ ರಸ್ತೆಯಲ್ಲಿರಬಹುದಾದ ಹಳ್ಳಕ್ಕೋ ಬೀಳುವುದು ಸಹಜ. ಹಲವು ಅಪಘಾತಗಳು ಮೊಬೈಲು ಗೀಳಿನಿಂದಾಗಿ (ರೈಲ್ವೆ ಹಳಿದಾಟುವಾಗಲೂ ಮೊಬೈಲು ಗುಂಗಿನಿದಾಗಿ ಅಪಘಾತಗಳಾಗಿವೆಯಂತೆ) ಆಗುವುದು ನಿತ್ಯದ ನೋಟವಾಗಿದೆಯೆಂದ್ರೆ ಅಚ್ಚರಿಯಿಲ್ಲ.

ಹೀಗಾಗಿ, ಜನರೇ ಇವನ್ನೆಲ್ಲ ಅರಿತು ರಸ್ತೆಯ ನಿಯಮಗಳನ್ನು ಕಿಂಚಿತ್ತಾದರೂ ಪಾಲಿಸಿದ್ರೆ ಹಾಗೂ ವಾಹನ ಸವಾರರಿಗೆ ಸ್ವಲ್ಪ ಸಂಯಮವಿದ್ದರೆ ಈಗೀಗ ಆಗುತ್ತಿರುವ ವಾಹನಾಪಘಾತಗಳನ್ನು ಸ್ವಲ್ಪಮಟ್ಟಿಗಾದರೂ ತಪ್ಪಿಸಬಹುದು, ಅಲ್ಲವೆ?

ಯಾಕೆಂದರೆ, Accident first occurs in mind and then on road. ನೆನಪಿರಲಿ.

ಚಂದ್ರಶೇಖರ ಬಿ.ಎಚ್.೦೮.೧೨.೨೦೦೯

10 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ಸರ್,
ನೀವು ಹೇಳೋದು ಸರಿ,
ಜನರಿಗೆ ಪ್ರಜ್ಞೆ ಇದ್ರೆ ಎಹ್ತೋ ಅನಾಹುತ ತಪ್ಪಿಸಬಹುದು
ಎಲ್ಲದಕ್ಕೂ ಸರಕಾರ ಅಂತಿದ್ರೆ ಏನೂ ಆಗೋಲ್ಲ
ಒಳ್ಳೆಯ ಲೇಖನ

shivu.k ಹೇಳಿದರು...

ಸರ್,

ನಿಯಮಗಳನ್ನು ಪ್ರತಿಯೊಬ್ಬರು ಅರಿತರಷ್ಟೇ ಸಾಲದು. ನಿತ್ಯವೂ ಪಾಲಿಸಬೇಕು. ಆಗ ಖಂಡಿತ ನೀವು ಹೇಳಿದಂತೆ ಅಪಘಾತ ತಪ್ಪುತ್ತದೆ. ಸರ್ಕಾರವೂ ಎಷ್ಟು ಅಂತ ಮಾಡಲು ಸಾಧ್ಯ. ಅದಕ್ಕೆ ವಿದೇಶಗಳಲ್ಲಿ ಅಲ್ಲಿನ ಪ್ರಜೆಗಳು ನಿಯಮಗಳನ್ನು ಸರಿಯಾಗಿ ಪಾಲಿಸುವುದರಿಂದ ಅಲ್ಲಿ ಅಪಘಾತಗಳು ಕಡಿಮೆ ಎಂದು ಕೇಳಿದ್ದೇನೆ.
ತಿಳಿವಳಿಕೆಯುಕ್ತ ಬರಹ...

ಧನ್ಯವಾದಗಳು.

PARAANJAPE K.N. ಹೇಳಿದರು...

ಲೇಖನದ ವಿಷಯ-ಆಶಯ ಎರಡೂ ಚೆನ್ನಾಗಿವೆ. ನೀವ೦ದಿದ್ದು ನಿಜ, ಮೊಬೈಲುಗಳ ಭರಾಟೆಯಲ್ಲಿ ಜನ ಮೈಮರೆತು ಅಪಘಾತಗಳಿಗೆ ಕಾರಣರಾಗುತ್ತಿದ್ದಾರೆ. ಉತ್ತಮ ಬರಹ.

ಕ್ಷಣ... ಚಿಂತನೆ... ಹೇಳಿದರು...

ಗುರು ಅವರೆ, ಜನರಿಗೆ ಪ್ರಜ್ಞೆ ಇದೆ. ಆದರೆ, ನಿಯಮ ಪಾಲಿಸಲು ಪುರಸೊತ್ತಿಲ್ಲ ಎನ್ನಬಹುದು. ಇಲ್ಲಿ ಸರಕಾರದ ನಿಯಮಗಳನ್ನು ಕನಿಷ್ಠ ಪಾಲಿಸಿದರೂ ಸಾಕು. ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

ಸ್ನೇಹದಿಂದ,

ಕ್ಷಣ... ಚಿಂತನೆ... ಹೇಳಿದರು...

ಶಿವು ಅವರೆ, ನಿಮ್ಮ ಅಭಿಪ್ರಾಯ ಒಪ್ಪುತ್ತೇನೆ. ವಿದೇಶಗಳಲ್ಲಿ ಅಲ್ಲಿನ ಪ್ರಜೆಗಳಿಗೆ ಚಿಕ್ಕವರಿಂದಲೇ ನಿಯಮಗಳ ತಿಳುವಳಿಕೆ ಕೊಡುತ್ತಾರಂತೆ. ಒಮ್ಮೆ ನನ್ನ ವಿದೇಶಿ ಸ್ನೇಹಿತನೊಬ್ಬನ ಜೊತೆ ಮೆಜೆಸ್ಟಿಕ್‌ನಲ್ಲಿ ರಸ್ತೆ ದಾಟುವ ಎಂದರೆ, 'ನೋ, ಮೇಲ್ಸೇತುವೆ ಮೇಲೆ ಹೋಗೋಣ' ಎಂದಿದ್ದರು. ಅವರ ಸಾಮಾಜಿಕ ಪ್ರಜ್ಞೆ ಮತ್ತು ನಿಯಮ ಪಾಲನೆ ಇಷ್ಟವಾಯಿತು.
ನಿಮ್ಮ ಅನಿಸಿಕೆಗಳಿಗೆ ವಂದನೆಗಳು.

ಸ್ನೇಹದಿಂದ,

ಕ್ಷಣ... ಚಿಂತನೆ... ಹೇಳಿದರು...

ಪರಾಂಜಪೆ ಸರ್‍, ಮೊಬೈಲುಗಳ ಭರಾಟೆಯಿಂದಲೆ ಹೆಚ್ಚಿನ ಅನಾಹುತಗಳು ಆಗುತ್ತಿವೆ. ದಿನವೂ ನಮ್ಮ ಕಣ್ಣೆದುರೇ ಇಂತಹ ಅಚಾತುರ್ಯಗಳನ್ನು ಕಾಣಬಹುದು.

ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು.

ಸ್ನೇಹದಿಂದ,

Shweta ಹೇಳಿದರು...

houdu sir... neevu heliro maatu tumba uttama vaagide......

ಕ್ಷಣ... ಚಿಂತನೆ... ಹೇಳಿದರು...

ಶ್ವೇತಾ ಅವರೆ, ಧನ್ಯವಾದಗಳು.

AntharangadaMaathugalu ಹೇಳಿದರು...

ಚಂದ್ರು ಅವರೇ...
ಸತ್ಯವಾದ ಮಾತು ಹೇಳಿದ್ದೀರಿ... ರಸ್ತೆಯಲ್ಲಿ ಓಡಾಡುವವರು, ತಮ್ಮ ತಲೆಯನ್ನು ಸಮಸ್ಯೆಗಳ ಗೂಡನ್ನಾಗಿ ಮಾಡಿಕೊಂಡು ಹೋದರೆ ಅನಾಹುತಗಳು ತಪ್ಪಿದ್ದಲ್ಲ. ನಾನೂ ಕೆಲವರನ್ನು ಗಮನಿಸಿದ್ದೇನೆ. ತಮ್ಮ ಮೊಬೈಲ್ಗಳಲ್ಲಿ ಸಂಸಾರದ ಎಲ್ಲಾ ತಾಪತ್ರಯಗಳನ್ನೂ ಚರ್ಚಿಸುತ್ತಾ, ಎತ್ತಲೋ ನೋಡುತ್ತಾ ರಸ್ತೆಯಲ್ಲಿ ಹೋಗುತ್ತಿರುತ್ತಾರೆ... ಪ್ರಜ್ಞಾಪೂರ್ವಕವಾಗಿ ಚಲಿಸಿದರೆ, ಅಪಘಾತಗಳ ಸಂಖ್ಯೆಯನ್ನು ಖಂಡಿತಾ ಕಡಿಮೆ ಮಾಡಬಹುದು... ಒಳ್ಳೆಯ ಕಾಳಜಿಯಿಂದ ಕೂಡಿದ ಬರಹ........

ಕ್ಷಣ... ಚಿಂತನೆ... ಹೇಳಿದರು...

ಶ್ಯಾಮಲಾ ಅವರೆ, ನಿಮ್ಮ ಅಭಿಪ್ರಾಯಗಳಿಗೆ ಧನ್ಯವಾದಗಳು. ಹೀಗೆಯೆ ಬರುತ್ತಿರಿ.

ಸ್ನೇಹದಿಂದ,