ಸೋಮವಾರ, ಡಿಸೆಂಬರ್ 21, 2009

ನಾವ್ ಚಾರಣ ಮಾಡಿದ್ದು - ೧

ನಾವ್ ಚಾರಣ ಮಾಡಿದ್ದು - ೧

ಬಹಳ ದಿನಗಳಿಂದ ಹೋಗಬೇಕೆಂದುಕೊಂಡಿದ್ದ ಪ್ರವಾಸೀ ಸ್ಥಳಕ್ಕೆ ಇಂದು ಹೋಗುವ ಚಾಲನೆ ಸಿಕ್ಕಿತ್ತು. ಅಂತೂ ಇಂತೂ ಗಾಡಿ ಬಂದಿದ್ದು ೮.೩೦ಕ್ಕೆ. ನಾವ್ ಹೊರಡಬೇಕಿದ್ದು ೬.೩೦ಕ್ಕೆ. ಹೊರಟಮೇಲೆ ಹೊತ್ತೇನು, ಗೊತ್ತೇನು? ಅದೂ ಮುನ್ನೂರು + ಕಿ.ಮೀ. ಕ್ರಮಿಸಬೇಕಿತ್ತು...!!!

ಆಟೋ ಬರಹ ಆಗಾಗ ಕಾಣತ್ತಲ್ಲ ಹಾಗೆ, `ಮೈಸೂರು ಮಲ್ಲಿಗೆ ನೀ ಹೊರಟಿದ್ದು ಎಲ್ಲಿಗೆ'? ಹೀಗೆ ಹಲವರ ಪ್ರಶ್ನೆ. ಏಕೆಂದರೆ, ನಾವುಗಳು ಹೊರಟಿದ್ದು ನೇರ ಕಚೇರಿ ಕೆಲಸ ಮುಗಿಸಿಕೊಂಡು ಸಂಜೆ ೬.೩೦ರಿಂದ ಕ್ವಾಲಿಸ್‌ಗಾಗಿ ಕಾಯುತ್ತಾ ಕುಳಿತಿದ್ದೆವು. ನಿಮಗೆಲ್ಲಾ ನವಗ್ರಹ ಸಿನಿಮಾ ನೆನಪಿರಬಹುದು. ದರ್ಶನ್ ತೂಗುದೀಪ್, ತರುಣ್, ಸೃಜನ್ ಇತ್ಯಾದಿಯವರದ್ದು. ಹಾಗೆಯೇ ನಮ್ಮ ಟೀಮು ಇದ್ದದ್ದು.

ಯಾರು ಯಾರು ನೀವ್ಯಾರು ಎಂದರೆ: ಮಿಸ್ ಗಳಾದ ಸ೧, ಸ೨, ಮ, ಪ್ರ. ಮಿಸ್ಟರ್‍ಗಳು: ಭಾ, ಉ, ಕ, ಮೊ ಮತ್ತು ನಾನು.

೮.೩೦ಕ್ಕೆ ಕ್ವಾರ್ಟರ್ಸಿನ ಗಣೇಶನಗುಡಿಯಲ್ಲಿ ಕ್ವಾಲಿಸ್‌ಗೆ ಪೂಜೆ ಮಾಡಿಸಿ ಹೊರಟೆವು. ಮಾಗಡಿರಸ್ತೆಯಲ್ಲಿ ಊಟ ಮುಗಿಸಿದರು ಸಹಪಯಣಿಗರು. ಎಲ್ಲರಿಗೂ ಸಂಭ್ರಮವೋ ಸಂಭ್ರಮ. ಏಕೆಂದರೆ, ಹಲವರಿಗೆ ಇದು ಮೊದಲ ಚಾರಣದ ಖುಷಿ. ಜೊತೆಗೆ ನಮ್ಮಲ್ಲಿ ಯಾರೂ ಈ ಒಂದು ಚಾರಣ ಸ್ಥಳಕ್ಕೆ ಹೋಗಿದ್ದಿಲ್ಲ. ಮಧ್ಯರಾತ್ರಿ ಕಡೂರಿನಲ್ಲಿ ಟೀ ಕುಡಿದೆವು. ನಂತರ ಶಿವಮೊಗ್ಗೆಯಲ್ಲಿ ಒಂದೈದು ನಿಮಿಷ ವಿರಾಮ, ಟೀ. ಅಲ್ಲಾಗಲೇ ಗಾಡಿಯಿಂದ ಹೊರಗಿಳಿದರೆ ನಡುಗಿಸುತ್ತಿತ್ತು ಚಳಿ.

ಆ ಕರಾಳ ಕತ್ತಲೆಯಲ್ಲಿ, `ದೂನ' ಎಂಬ ತಂಗುದಾಣದ ಬಳಿಯೇ ನಮ್ಮ ಗಾಡಿಯ ಚಕ್ರದ ಪಂಕ್ಚರ್‌. ಆಕಾಶದಲ್ಲಿ ಒಂದೆಡೆ ಚಂದ್ರ ಮತ್ತು ನಕ್ಷತ್ರಲೋಕ. ಆಗೊಂದು, ಈಗೊಂದು ವಾಹನಗಳ ಸಂಚಾರ. ಗಾಡಿಗೆ ಹೊಸ ಚಕ್ರ ಹಾಕಿಕೊಂಡು ಮುಂದಿನ ಪಯಣ ಹೊಸನಗರ ಕಡೆಗೆ ಹೊರಟೆವು. ಹೊಸನಗರದಲ್ಲಿ ಮುಂಜಾವಿನ ಸಮಯದಲ್ಲಿ ಚಾಲಕನಿಗೆ ಒಂದಿಷ್ಟು ಹೊತ್ತು ನಿದ್ದೆಗೆ ಅವಕಾಶ. ಮತ್ತೆ ಪಯಣ.

ಆ ಮುಂಜಾವಿನ ಮಂಜಿನಲ್ಲಿ ಕಂಡು ಬಂದಿತ್ತು ಕೋಟೆ. ಇದು `ನಗರ'ದಲ್ಲಿರುವ ಕೋಟೆ. ಅ ಕೋಟೆಯನ್ನು ನೋಡಬೇಕೆಂಬಾಸೆ. ಆದರೆ ಕತ್ತಲು ಇನ್ನೂ ಕವಿದಿದ್ದರಿಂದ ನೋಡಲಾಗಲಿಲ್ಲ. ಫೋಟೋ ತೆಗೆದರೂ ಆ ಕತ್ತಲಲ್ಲಿ ಬರಲಿಲ್ಲ.©Chandrashekara BH,Dec2009
ನಗರ: ಇದು ಶಿವಮೊಗ್ಗೆಯಿಂದ ೧೯ ಕಿ.ಮೀ. ದೂರದಲ್ಲಿದೆ. ಇಲ್ಲಿರುವ ಕೋಟೆ ೧೬ನೇ ಶತಮಾನದ್ದಿದ್ದು, ಇದಕ್ಕೆ ಬೀಂದನೂರು ಕೋಟೆ ಎಂದು ಹೆಸರು. ಇದು ಕೆಳದಿಯ ಅರಸರ ರಾಜಧಾನಿಯಾಗಿತ್ತು ಮತ್ತು ಇದನ್ನು ಹೈದರ್‍ ಅಲಿಯು ವಶಪಡಿಸಿಕೊಂಡನಂತೆ. (ಆಧಾರ: http://www.shimoga.nic.in/temple.htm)

ಡಾ. ಜಿ.ಪಿ. ರಾಜರತ್ನಂ ಅವರ ಈ ಒಂದು ಕವನ ನೆನಪಿಸುವಂತಿತ್ತು ಅಲ್ಲಿನ ತಾಣ:
ಭೂಮಿನ್ ತಬ್ಬಿದ್ ಮೋಡ್ ಇದ್ದಾಂಗೆ,
ಬೆಳ್ಳಿ ಬಳಿದ ರೋಡಿದ್ದಂಗೆ,ಮಡಿಕೇರಿಲಿ ಮಂಜೂ...

©Chandrashekara BH,Dec2009
ನಂತರ ಕೊಡಚಾದ್ರಿಯ ರಸ್ತೆ. ತುಂಬಾ ಚೆನ್ನಾಗಿದೆ ರಸ್ತೆ. ಸುತ್ತಲೂ ಮಂಜು ಮುಸುಕಿತ್ತು ಮತ್ತು ದಾರಿಯೆಲ್ಲ ಮಂಜಿನಿಂದ ಮುಚ್ಚಿತ್ತು. ಚಳಿಗಾಳಿ. ಕೊಡಚಾದ್ರಿಯ ಪ್ರವೇಶದ್ವಾರಕ್ಕೆ ೬.೪೫ ಕ್ಕೆ ತಲುಪಿದೆವು.

ಜೀಪಿನವರು ನಮ್ಮ ಗಾಡಿಯನ್ನು ಮೇಲಕ್ಕೆ ಹತ್ತಲು ಬಿಡಗೊಡಲಿಲ್ಲ . ಕಾರಣ, ಅದು ಜೀಪಿನ ರಸ್ತೆ. ಅದು ರಸ್ತೆಯೆಂಬ ಮಾಯಾಲೋಕವಷ್ಟೆ! ರಸ್ತೆಯೆಲ್ಲ ಅಯೋಮಯ. ಕಲ್ಲುಗಳು, ತಗ್ಗು-ದಿಣ್ಣೆಗಳಿಂದ ಕೂಡಿದ್ದ (ಆ ರಸ್ತೆ?!) ಜೀಪಿಗೆ ಮಾತ್ರ ಫೇವರೈಟ್‌ ಎನ್ನಬಹುದು. ಅಲ್ಲಿಯೇ ನಮಗೆ ಸಣ್ಣ ತೊರೆ ಕಾಣಿಸಿತು. ಆ ತೊರೆಯಲ್ಲಿ ಕೊರೆಯುವ ಛಳಿಯಲ್ಲಿ ಕೈಕಾಲು ಮುಖ ಮಾರ್ಜನ ನಡೆಯಿತು. ನಂತರ ಒಂಬತ್ತು ಮತ್ತೊಂದು ಕಿ.ಮೀ. ಚಾರಣಕ್ಕೆ ಹೊರಟೆವು. ಅದು ೭.೦೦ ರ ಸಮಯ.

ಅದೋ! ಅಲ್ಲಿ ಕಂಡಿತು ಪಾತಾಳಗೆರೆ!!!

ಮುಂದುವರೆಯುವುದು...
ಚಿತ್ರ-ಲೇಖನ: ಚಂದ್ರಶೇಖರ ಬಿ.ಎಚ್. ೨೦೦೯

5 ಕಾಮೆಂಟ್‌ಗಳು:

ಸಾಗರದಾಚೆಯ ಇಂಚರ ಹೇಳಿದರು...

ಸರ್ ಚೆನ್ನಾಗಿದೆ ಪ್ರವಾಸದ ಅನುಭವ
ಮುಂದಿನ ಕಂತಿಗಾಗಿ ಕಾಯುತ್ತಿದ್ದೇವೆ

shivu.k ಹೇಳಿದರು...

ಸರ್,

ನಿಮ್ಮ ಚಾರಣ ಪ್ರವಾಸದ ಇಂಚಿಂಚನ್ನು ವಿವರಿಸಿ ಹೇಳುತ್ತಿದ್ದೀರಿ...ಕುತೂಹಲವೆನಿಸಿದೆ. ನಾನು ಕೂಡ ಕೊಡಚಾದ್ರಿಯ ಚಾರಣ ಹೋಗಿ ಬಂದಿದ್ದೇನೆ. ಆದ್ರ ಬಗ್ಗೆ ಬರೆಯೋಣವೆಂದರೇ ಅದರ ಪೋಟೊಗಳೇ ನನ್ನ ಬಳಿ ಇಲ್ಲ. ಅದು ನೆಗಟೀವ್‍ನಲ್ಲಿ ಕ್ಲಿಕ್ಕಿಸಿದ್ದು ಹುಡುಕಬೇಕು. ನೋಡೋಣ ಮುಂದೆಂದಾದರೂ ಬರೆಯಬೇಕೆನ್ನುವ ಆಸೆ ನಿಮ್ಮ ಚಾರಣ ಓದಿದ ಮೇಲೆ ಬರಬಹುದೇನೋ...
ಮುಂದುವರಿಸಿ...

PARAANJAPE K.N. ಹೇಳಿದರು...

ಚೆನ್ನಾಗಿದೆ ನಿಮ್ಮ ಚಾರಣದ ಅನುಭವ ಕಥನ, ಮು೦ದುವರಿಸಿ, ಉತ್ಸುಕನಾಗಿದ್ದೇನೆ.

AntharangadaMaathugalu ಹೇಳಿದರು...

ಚಂದ್ರು ಅವರೆ...
ಚಾರಣದ ಅನುಭವ, ಒಳ್ಳೊಳ್ಳೆಯ ಹಾಡುಗಳ ಸಮೇತ, ಕುತೂಹಲಕರವಾಗಿದೆ. ಚಿತ್ರಗಳೂ ತುಂಬಾ ಚೆನ್ನಾಗಿವೆ. ಬೇಗ ಮುಂದುವರೆಸಿ......

ಕ್ಷಣ... ಚಿಂತನೆ... ಹೇಳಿದರು...

ಗುರು, ಶಿವು, ಪರಾಂಜಪೆ ಸರ್‍ ಮತ್ತು ಶ್ಯಾಮಲಾ: ನಿಮ್ಮೆಲ್ಲರ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು.

ಸ್ನೇಹದಿಂದ,