ಗುರುವಾರ, ಡಿಸೆಂಬರ್ 24, 2009

ನಾವ್ ಚಾರಣ ಮಾಡಿದ್ದು - ೨: ಏನಿದು? ಪಾತಾಳಗೆರೆ!!

ಅದೋ! ಅಲ್ಲಿ ಕಂಡಿತು ಪಾತಾಳಗೆರೆ

©Chandrashekara BH,12Dec2009
ಏನಿದು? ಪಾತಾಳಗೆರೆ! ನಾನು ತಿಳಿದದ್ದು ತಪ್ಪೆನಿಸಿತು. ಇದು ಪಾತಾಳೆಗೆರೆ ಎಂಬ ಹೆಸರಿನ ರೆಸಾರ್ಟ್ ನಿಸರ್ಗದ ಮಡಿಲಿನಲ್ಲಿದ್ದು, ಕೊಡಚಾದ್ರಿಯ ಚಾರಣಕ್ಕೆ ಹೋಗುವ (ಜೀಪಿನ ಹಾದಿಯಲ್ಲಿ) ಆರಂಭದಲ್ಲಿಯೇ ಇದಿರುವುದು. ಇದಕ್ಕೆ ಮೊದಲು ಸಣ್ಣ ತೊರೆ. ತೊರೆಯದಾಟಿ ಎಡಕ್ಕೆ ತಿರುಗಿದರೆ `ಪಾತಾಳಗೆರೆ'. ಮೊದಲಿಗೆ ನಾನು ಇದು ಶಾಲೆಯಿರಬೇಕೆಂದು ಕೊಂಡಿದ್ದೆ. ಏಕೆಂದ್ರೆ, ಇದಕ್ಕೆ ಹೋಗುವ ಹಾದಿಯಲ್ಲಿ, ಕೈತೋಟ ಮತ್ತು ಗಿಡಗಳ ಬೇಲಿಯಾಚೆಯಲ್ಲಿ ವಾಲಿಬಾಲ್‌ ನೆಟ್ ಹಾಗೂ ಮೈದಾನವಿದೆ. ಒಟ್ಟಿನಲ್ಲಿ ಸುಂದರವಾದ ಕಾಟೇಜುಗಳು ನಿತ್ಯ ಹಸಿರಿನ ನಡುವಿನಲ್ಲಿ ಆಹ್ಲಾದಕರವಾದ ವಾತಾವರಣದಿಂದ ಕೂಡಿರುವ ಸ್ಥಳ. ಇಲ್ಲಿ ಉಳಿದುಕೊಳ್ಳುವವರಿಗೆ ಎಲ್ಲ ರೀತಿಯ ಅನುಕೂಲವಿದೆಯಂದು, ಕಡಿಮೆ ಬೆಲೆಯಲ್ಲಿ ಕಾಟೇಜುಗಳು ಸಿಗುವುದೆಂದು ತಿಳಿಯಿತು.

©Chandrashekara BH,12Dec2009
ಇಲ್ಲಿಂದ ಸ್ವಲ್ಪ ದೂರಕ್ಕೆ ಶ್ರೀ ಮಂಜುನಾಥಾಯನಮ: ಅಂಗಡಿ. ಅಲ್ಲಿ ಟೀ ಕುಡಿದು, ಬಿಸ್ಕತ್ ಸೇವಿಸಿ, ಶಾಲೆಗೆ ಹೊರಟಿದ್ದ ಮಕ್ಕಳ ಕೈಗೂ ಒಂದಷ್ಟು ಬಿಸ್ಕತ್ ಕೊಟ್ಟು ನಮ್ಮ ಮುಂದಿನ ನಡಿಗೆ ಶುರು ಮಾಡಿದೆವು.
ಹೀಗೆ, ಜೀಪಿನ ಹಾದಿಯಲ್ಲಿ ನಡೆವಾಗ ಎದುರುಗಡೆಯಿಂದ ಬಂದ ಜೀಪಿನವ ದಾರಿಯಲ್ಲಿ `ಕಾಡೆಮ್ಮ''ಇದೆ ಎಂದು ಎಚ್ಚರಿಸಿದರು.

ಮಿಸ್. ಸ೨. ಕಾಲು ಹಾದಿ ಹುಡುಕಿಹೊರಟರು, ಜೊತೆಗೆ ನಾನೂ ಹೊರಟೆ. ಹೀಗೆ ಕಾಲುದಾರಿಯಿಂದಾಗಿ ಜೀಪಿನ ಹಾದಿಯನ್ನು ಕಡಿತಗೊಳಿಸುತ್ತಾ ಸುಮಾರು ದೂರವನ್ನು ಎಲ್ಲರೂ ಕ್ರಮಿಸುತ್ತಿದ್ದೆವು. ಒಮ್ಮೆ ಸ್ವಲ್ಪ ದೂರ ಕಾಲಿನ ಹಾದಿ ಕಾಣಿಸಿತು. ಹತ್ತಿದ್ದೆವು. ಮತ್ತೆ ಮುಂದೆ ಕಾಲುದಾರಿ ಕಾಣಿಸುತ್ತಿಲ್ಲ. ನಾವಿಬ್ಬರೂ ವಾಪಾಸು ಬಂದೆವು. ಅದಾಗಲೇ ಉಳಿದವರು ನಮಗಿಂತ ಸ್ವಲ್ಪ ದೂರ ಮುಂದಿದ್ದರು. ಮತ್ತೆ ಎಲ್ಲರೂ ಜೊತೆಯಾಗಿ ಹೊರಟೆವು. ಕೆಲವು ಕಡೆ ಕಾಲುದಾರಿ ಪ್ರಯಾಸಕರವಾಗಿತ್ತು.

ಮುಂದೆ ಉಳಿದವರು ಬರಲೆಂದು ವಿಶ್ರಮಿಸುತ್ತಿರುವಾಗ ಮೋಟರುಬೈಕಿನಲ್ಲಿ ಒಬ್ಬರು ಬಂದರು. ಅವರನ್ನು ಕಾಲುದಾರಿ (ಶಾರ್ಟ್‌ರೂಟ್‌) ಇದೆಯಾ ಮುಂದಕ್ಕೆ ಎಂದು ಕೇಳಿದೆವು. ನಿಮಗೆಲ್ಲಿ ಹಾದಿ ಕಂಡಂತೆ ಅನಿಸುವುದೋ ಅದೆಲ್ಲವೂ ಬೆಟ್ಟಕ್ಕೆ ಹೋಗುವ ದಾರಿ. ಹೋಗಿ ಎಂದರು. ಅಲ್ಲಿಗೆ ಉಳಿದ ನಮ್ಮ ತಂಡದವರೂ ಬಂದರು.

ಜೀಪಿನ ಹಾದಿಯಲ್ಲಿ ಯುವಕರ ಗುಂಪೊಂದು ಕೆಳಗಿಳಿಯುತ್ತಿತ್ತು. ಅಲ್ಲಿನ ಗಲಾಟೆಗೆ (ಒಂದಿಬ್ಬರು ಕುಡಿದು ಮತ್ತೇರಿದ್ದರು) ಹಾದಿಯಲ್ಲಿದ್ದ ಕಾಡೆಮ್ಮೆ ಕಾಡಿನ ಹಾದಿ ಹಿಡಿದದ್ದು ಕಾಣಿಸಿತು.


ಹೊಟ್ಟೆಗೇನಿಲ್ಲ. ಹಸಿವಾಗುತ್ತಿದೆ, ನೀರು ಖಾಲಿಯಾಗುತ್ತಿದೆ. ಕಾಲುದಾರಿಯಲ್ಲಿ ಒಂದು ಸಣ್ಣ ಝರಿ ಹರಿಯುತ್ತಿತ್ತು. ಅಲ್ಲಿ ಸ್ವಲ್ಪ ಸುಧಾರಿಸಿಕೊಂಡು, ನೀರುಕುಡಿದು ಹೊರಟಾಗ ಒಂಥರಾ ಖುಷಿ. ಒಂದಿಬ್ಬರು ಬಂಡೆಯಮೇಲೆ ಕಾಲಿಡುವಾಗ ಜಾರಿ ಅಲ್ಲಿಯೇ ಕುಸಿದರು. ಹೀಗೆ ನಮ್ಮ ಮುಂದಿನ ಪಯಣ ಸಾಗಿತ್ತು.

©Chandrashekara BH,12Dec2009
ಗಾಳಿಯೋ ಗಾಳಿಯು: ಇದೀಗ ಬೆಳಗಿನ ೯.೪೫ರ ಸಮಯ. ಮಿಸ್. ಸ೨. ಮತ್ತು ನಾನು ಕಾಲು ಹಾದಿಯಲ್ಲಿ ಮುನ್ನುಗುತ್ತಾ ಹೋದೆವು. ಜೀಪಿನ ದಾರಿಯಲ್ಲಾದರೆ ಮತ್ತೂ ಬಳಸಿಬರಬೇಕಲ್ಲ ಎಂದು ಕಾಲ್ದಾರಿಯಲ್ಲಿ ಸಾಗುತ್ತಿದ್ದೆವು. ಅಲ್ಲಿ ಆಳೆತ್ತರದ ಹುಲ್ಲುಗಳು ಬೆಳೆದಿದ್ದವು. ಕೋಲಿನಿಂದ ಹುಲ್ಲನ್ನು ಸವರುತ್ತಾ (ಹಾವಿದ್ದರೆ, ಚೇಳಿದ್ದರೆ...) ಮುಂದೆ ಸಾಗುತ್ತಿದ್ದಂತೆ ಬೆಟ್ಟದ ನೆತ್ತಿಗೆ ಬಂದಿದ್ದೆವು. ಉಳಿದವರೂ ಅದೇ ಹಾದಿ ಬಂದರೂ ಪಕ್ಕಕ್ಕೆ ಸರಿದು ಜೀಪಿನ ಹಾದಿಗೆ ಬಂದಿದ್ದರು.

©Chandrashekara BH,12Dec2009
ಇಲ್ಲಂತೂ ಗಾಳಿಯೋ ಗಾಳಿ. ಅಲ್ಲಿನವರೆವಿಗೂ ಹತ್ತುವಾಗ ಆಗಿದ್ದ ಆಯಾಸವೆಲ್ಲ ಸಿಹಿಗಾಳಿಗೆ ಕರಗಿ ಹೋಗಿದ್ದವು. ಅಲ್ಲಲ್ಲಿ ಒಂದೆರಡು ಕಡೆ ಕಲ್ಲಿನಿಂದ ಪೀಠದಂತೆ ನಿರ್ಮಿಸಿದ್ದರು. ಅದರ ಮೇಲೆ ನಿಂತಾಗ ಗಾಳಿಯಲ್ಲಿ ತೇಲಿದ ಅನುಭವ. ಖುಷಿಯೋ ಖುಷಿ. ಸುತ್ತಲೂ ಅದಾಗಲೇ ಸೂರ್ಯರಶ್ಮಿಯಿಂದ ಮಂಜಿನ ಹನಿಗಳು ಆವಿಯಾಗುತ್ತಿದ್ದವು. ಕೆಲವು ಬೆಟ್ಟಗಳು ಮೋಡದ ನೆರಳಿಂದ ಮುಚ್ಚಿದ್ದವು. ನಿಜಕ್ಕೂ ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಭಾಸವಾಗಿತ್ತು.

ಇದೀಗ ನೆನಪಾಗಿದ್ದು: ಕೋಟಿಗೊಬ್ಬ ಚಲನಚಿತ್ರದ `ಕಾವೇರಿಗೆ ಕಾಲುಂಗುರ ತೊಡಿಸಿ, ಕೊಡಚಾದ್ರಿಗೆ ಕೈಬಳೆ ತೊಡಿಸಿ...' ಗೀತೆ. ಈ ಸಿನೆಮಾದಲ್ಲಿ ಹಾಡು ನಾಯಕಿಗೆ ಹೇಳಿರಬಹುದು. ಆದರೆ, ಇಲ್ಲಿ ಪ್ರಕೃತಿಮಾತೆಗೆ ಈ ಹಾಡನ್ನು ಅರ್ಪಿಸಬಹುದು.

©Chandrashekara BH,12Dec2009
ಸ೧. ಮ. ಪ್ರ, ಉ, ಭಾ, ಕ, ಅ. ಇವರೆಲ್ಲರ ದಂಡೂ ಬಂದಾಯಿತು. ಒಂದಷ್ಟು ವಿಶಿಷ್ಟ ಫೋಟೋ ಭಂಗಿಗಳನ್ನು ತೆಗೆದರು, ಮರ ಹತ್ತಿದ್ದರು, ಕುಣಿದಾಡಿದ್ದರು. ಏಕೆಂದರೆ, ದೂರದಲ್ಲಿ ತೊನೆಯಾಡುತ್ತಿದ್ದ ಹುಲ್ಲಿನ ರಾಶಿ ರಾಶಿ ಬೆಟ್ಟವನ್ನೇ ತೇಲಿಸಿದಂತೆ ಇತ್ತು.

ಮುಂದೆ, ಇನ್ನರ್ಧ ಘಂಟೆಯ ಹಾದಿ. ಜೀಪಿನ ಹಾದಿಯಲ್ಲಿಯೇ ನಮ್ಮ ನಡಿಗೆ ಸಾಗಿದೆ. ಆದರೆ, ಸ೨ ಮತ್ತು ನಾನು ಹತ್ತಿರದ ಹಾದಿಗಾಗಿ ಹುಡುಕಿ ಸ್ವಲ್ಪ ಹುಲ್ಲಿನ ಹಾದಿ ತುಳಿದಿದ್ದೆವು. ಆಳೆತ್ತರದ ಹುಲ್ಲಿನ ರಾಶಿಯಿಂದಾಗಿ ಮುಂದೆ ಸಾಗದೆ ವಾಪಸಾದೆವು. ಕಾರಣ: ಅಲ್ಲೇನಿರುವುದೋ ಬಲ್ಲವರಾರು?

ಮುಂದುವರೆಯುವುದು...
ಚಿತ್ರ-ಲೇಖನ: ಚಂದ್ರಶೇಖರ ಬಿ.ಎಚ್.
(ಚಾರಣಕ್ಕೆ ಬಂದಿದ್ದವರ ನಿಜನಾಮಧೇಯವನ್ನು ಇಲ್ಲಿ ಬಳಸದೇ ಅವರುಗಳ ಹೆಸರಿನ ಮೊದಲಕ್ಷರವನ್ನು ಬಳಸಿರುತ್ತೇನೆ. ಏಕೆಂದರೆ, ಇದರಿಂದ ಅವರ್‍ಯಾರಿಗೂ ಬೇಸರವಾಗದಿರಲೆಂದು!)

7 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ಅನುಭವನ ಕಥನ ಚೆನ್ನಾಗಿದೆ. ಕೊನೆಗೂ ನಿಮಗೆ ಕಾಡೆಮ್ಮೆ ಮುಖಾಮುಖಿ ಯಾಗಲಿಲ್ಲವೇ ? ಮು೦ದುವರಿಸಿ, ಇನ್ನಷ್ಟು ಫೋಟೋ ಗಳನ್ನು ಹಾಕಿರಿ.

shivu.k ಹೇಳಿದರು...

ಸರ್,

ನಾವು ಆಗ ಹೋಗಿದ್ದಾಗ ಪಾತಾಳಗೆರೆ ರೆಸಾರ್ಟ್ ಇರಲಿಲ್ಲ. ಈಗ ಹೊಸದಾಗಿ ಕಟ್ಟಿರಬೇಕು. ಮತ್ತೆ ಹುಲ್ಲಿನ ಹಾದಿಯನ್ನು ತಲುಪಿದಾಗ ಮಾತ್ರ ಅದೆಂತ ಗಾಳಿ ಅಲ್ವಾ..ಹಾಗೆ ಖುಷಿಯೂ ಆಗುತ್ತದೆ...ಮುಂದುವರಿಸಿ..ಸರ್.

Shweta ಹೇಳಿದರು...

wow prakriti maate nijakku dhanyalu...

ಕ್ಷಣ... ಚಿಂತನೆ... ಹೇಳಿದರು...

ಪರಾಂಜಪೆ ಸರ್‍ , ನಮಗೆ ಕಾಡೆಮ್ಮೆ ಕಾಣಿಸಿತು, ಆದರೆ, ಅದು ಸ್ಪಷ್ಟವಾಗಿ ಕಾಣಲಿಲ್ಲ. ಕಾರಣ ಆ ಯುವಕರ ಗಲಾಟೆ.
ಮುಂದಿನ ಕಂತಿನಲ್ಲಿ ಮತ್ತಷ್ಟು ಫೋಟೋಗಳನ್ನು ಹಾಕುವೆ.

ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಶಿವು ಸರ್‍, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

ನನಗೂ ಇದು ಮೊದಲ ಚಾರಣ ಕೊಡಚಾದ್ರಿಗೆ. ನನಗೆ ದಾರಿ ಗೊತ್ತಿರಲಿಲ್ಲ. ಭೂಪಟದಲ್ಲಿ ನೋಡಿದ್ದು, ಗೆಳೆಯರಿಂದ ಕೇಳಿದ್ದು - ನಿಟ್ಟೂರು ಕಡೆಯ ದಾರಿ)

ಹೌದು ಹೊಸದಾಗಿ ಇದ್ನ್ನು ಕಟ್ಟಿರಬೇಕು. ಹುಲ್ಲಿನ ಹಾದಿಯನ್ನು ತಲುಪಿದಾಗ ಅಲ್ಲಿ ಬೀಸುವ ಗಾಳಿಯನ್ನು ಅನುಭವಿಸಿಯೇ ತೀರಬೇಕು. ಅಷ್ಟೊಂದು ಖುಷಿಯಾಗುತ್ತದೆ.

ಹೀಗೆಯೆ ಬರುತ್ತಿರಿ,

ಕ್ಷಣ... ಚಿಂತನೆ... ಹೇಳಿದರು...

ಶ್ವೇತಾ ಅವರೆ, ನಿಮ್ಮ ಅಚ್ಚರಿಯ ಅನಿಸಿಕೆಗಳಿಗೆ ಧನ್ಯವಾದಗಳು.
ಹೀಗೆಯೆ ಬರುತ್ತಿರಿ...

Nisha ಹೇಳಿದರು...

sundaravada chitragalu. Nimma anubahva kathana chennagide.