ಪ್ರಸಂಗ ೧:
ರೀ.. ಪಾಸ್ ಮಾಡ್ಸಿದೀನಿ, ನಾನು.
ಸರಿ. ರೀ... ಆದರೆ, ಈ ಮಗೂಗೆ ಟಿಕೆಟ್ ತೊಗೊಬೇಕು.
ಯಾಕೆ? ಇಲ್ಲೇ ಕ್ರಾಸಿನಲ್ಲಿ ಇಳೀತೀವಿ. ನನ್ಹತ್ರ ಪಾಸಿದೆ.
ಅದೆಲ್ಲಾ ಆಗೊಲ್ಲಾ. ಟಿಕೆಟ್ ತೊಗೊಳಿ. ಇಲ್ಲ ಇಳೀರಿ. ಚೆಕ್ಕಿಂಗ್ ಬಂದ್ರೆ ನನ್ನ ಕೆಲಸಕ್ಕೆ ಕುತ್ತು.
ನಾನ್ ಫೈನ್ ಕಟ್ತೀನಿ. ದುಡ್ಡು ಕೊಟ್ಟು ಫೈನ್ ಕಟ್ತೀನಿ.
ನೀವು ಫೈನ್ ಕಟ್ಟೋದೂ ಸಾಕು, ನಮಗೆ ಮೆಮೋನೂ ಬೇಡ. ದಯವಿಟ್ಟು ಇಳೀರಿ. ಇಲ್ಲ ಟಿಕೆಟ್ ತೊಗೊಳಿ.
ಕೊನೆಗೂ ಕಂಡಕ್ಟರು ಆ ಮಹಿಳೆಯನ್ನು, ಅವಳ ೧೦-೧೨ ವರ್ಷದ ಮಗಳನ್ನು ಇಳಿಸುವಲ್ಲಿ ಯಶಸ್ವಿಯಾದ.
ಇಲ್ಲಿ ಒಂದು ಯೋಚನೆ. ಆಯಮ್ಮನ ಬಳಿ ದುಡ್ಡು ಇದ್ದು, ಚೆಕಿಂಗ್ ಬಂದಾಗ ಫೈನ್ ಕಟ್ಟೋಕ್ಕೆ ಆಗುತ್ತೆ. ಆದರೆ, ೫-೬ ರೂಪಾಯಿಗಳ ಟಿಕೆಟ್ ತೊಗೊಳ್ಳಕೆ ಆಗಲ್ಲ. ಜನ ಯಾಕೆ ಹೀಗೆ?
ಮೊನ್ನೆ ನಾನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯಲ್ಲಿ ಕೆ.ಬಿ.ಕ್ರಾಸಿಗೆ ಹೊರಟಿದ್ದಾಗ ಕಂಡುಬಂದ ಶಬ್ದ-ದೃಶ್ಯ. ಆಕೆ ಓದಿದ್ದಾರೆ. ವಿದ್ಯಾವಂತೆ. ಆದರೆ. ಜಾಲಹಳ್ಳಿ ಸರ್ಕಲ್ವರೆವಿಗೂ ಟಿಕೆಟ್ ಕೊಳ್ಳಲು ಅಷ್ಟೆಲ್ಲಾ ಮಾತಾಡಿ, ರಂಪ ಮಾಡಬೇಕಿತ್ತೆ? ಎನಿಸಿತು.
ಅಷ್ಟು ಹೊತ್ತಿಗಾಗಲೇ ಆಕೆ ಇಳಿಯುವ ಅರ್ಧದಾರಿ ಸವೆದಿತ್ತು. ಒಟ್ಟಿನಲ್ಲಿ ಇಂಥವರು ಏನೆಲ್ಲಾ ನಾಟಕವಾಡುತ್ತಾರೆ ಎನಿಸಿದ್ದಂತೂ ನಿಜ.
*************
ಪ್ರಸಂಗ ೨:
ಊರಿನಿಂದ ಒಂದು ಕಿ.ಮೀ. ದೂರಕ್ಕೆ ರಾಜ್ಯ ರಸ್ತೆ ಸಾರಿಗೆ ಬಸ್ಸು ಹತ್ತುವುದರಲ್ಲಿದ್ದೆವು. ಅಲ್ಲಿಬ್ಬರು ಕುಡಿದ ಮತ್ತಿನಲ್ಲಿದ್ದ ವಯಸ್ಕರು. ಮುಂದಿನ ಸ್ಟಾಪು ಇಳಿಸು ಮೂರು ರೂಪಾಯಿ ಕೊಡ್ತೀವಿ ಎಂದರು. ನಾವೂ ೩ ಜನಕ್ಕೆ ೩ ರೂಪಾಯಿ ಕೊಟ್ಟೆವು. ಆದರೆ, ಅವರಿಬ್ಬರೂ ಸೇರಿ ಮೂರು ರೂಪಾಯಿ ಕೊಟ್ಟು ಜಗಳಕ್ಕೆ ನಿಂತರು. ಅಂದರೆ, ತಲಾ ಒಂದೂವರೆ ರೂಪಾಯಿಯಂತೆ ಮೂರು ರೂಪಾಯಿಗಳನ್ನು ಕೊಡುವುದು ಅವರ ವಿಚಾರವಾಗಿತ್ತು. ಇಲ್ಲವಾದರೆ ಟಿಕೆಟ್ ಕೊಡು ಎಂದು ತಪರಾಕಿ ಶುರು ಮಾಡಿದರು. ಅಲ್ಲಿ ಟಿಕೆಟ್ ಕೊಡಲು ಬರೋದಿಲ್ಲವಾಗಿತ್ತು. ಕೊನೆಗೆ ೫ ರೂಪಾಯಿ ಕೊಟ್ಟು ಅದರಲ್ಲಿಯೂ ೨ ರೂಪಾಯಿ ವಾಪಸ್ಸು ಪಡೆದು ಇಳಿದರು. ಈ ಗಲಾಟೆಯಲ್ಲಿ ನಾವಿಳಿಯ ಬೇಕಿದ್ದ ಸ್ಥಳದಿಂದ ದೂರಕ್ಕೆ ಹೋಗಿತ್ತು ಬಸ್ಸು. ಕೂಗಾಡಿ ಇಳಿದದ್ದಾಯಿತು. ಇಲ್ಲವಾಗಿದ್ದರೆ, ೩ ಕಿ.ಮೀ. ವಾಪಸ್ಸು ಬೇರೆ ಬಸ್ಸು ಹಿಡಿಯಬೇಕಿತ್ತು. ಇದು ಹಳ್ಳಿಯವರ ನಿತ್ಯದ ಕಥೆಯಂತೆ.
ಇಲ್ಲಿ ಕುಡುಕರ ಬುದ್ಧಿವಂತಿಕೆಯನ್ನು ಮೆಚ್ಚಬೇಕೋ, ಅಥವಾ ಆ ವಿದ್ಯಾವಂತೆಯ ಬುದ್ಧಿವಂತಿಕೆಯನ್ನು ಮೆಚ್ಚಬೇಕೋ ತಿಳಿಯದಾಯಿತು. ಒಂದು ಕಡೆ ಉಳ್ಳವರು ಪ್ರಸಂಗ ಒಂದರಂತೆ ಆಡಿದರೆ, ಇನ್ನು ಕೆಲವರು ಪ್ರಸಂಗ ಎರಡರಂತೆ ಆಡುವರು.
ಆಡಿಸುವಾತನೇ ಬಲ್ಲನು, ಏನಂತೀರಿ?
**************
ಪ್ರಸಂಗ ಮೂರು:
ಎಲ್ಲೆಲ್ಲೂ ಬಿಸಿಳ ಝಳದಿಂದಾಗಿ ಮಳೆಯ ಝರಿ ಕಾಣದಾಗುತ್ತಿದೆ. ಅದರಿಂದಾಗಿ ನೀರಿಗೆ ಬರ. ಇದರಿಂದಾಗಿ ವಿದ್ಯುತ್ಗೆ ಬರ. ಈ ಬಿರುಬೇಸಗೆಯಲ್ಲಿ ದೂರದರ್ಶನ ಯಂತ್ರ ಕೆಟ್ಟಿದೆ. ಅದರಲ್ಲಿನ ಒಂದು ತಂತಿಯನ್ನು 'ಬೆಸುಗೆ' ಹಾಕಬೇಕಿದೆ. ವಿದ್ಯುತ್ತು ಇದೆ. ಆದರೆ ಸಿಂಗಲ್ ಫೇಸು ಅದಕ್ಕೆ. ಸಾಲ್ಡರ್ ಗನ್ ಬಿಸಿಯಾಗುತ್ತಿಲ್ಲ. ಸೀಸ ಕರಗುತ್ತಿಲ್ಲ.
Electricity + Pump Stove +Soldergun.. idea in a village. Photo by: Chandrashekara b.h. 542010 |
ನಾವಾಗಿದ್ದರೆ (ಪಟ್ಟಣದಲ್ಲಿ) ಸುಮ್ಮನಿರುತ್ತಿದ್ದೆವು. ಕರೆಂಟ್ ಬಂದಮೇಲೆ ದುರಸ್ತಿ ಮಾಡಿದರಾಯಿತು ಎಂದು. ಆದರೆ, ಹಳ್ಳಿಮಂದಿಯ ಯೋಚನೆ ಬೇರೆಯೇ ಇತ್ತು. ಏನಿರಬಹುದು?
ಸಾಲ್ಡರ್ ಗನ್ ಬಿಸಿಯಾಗಬೇಕು. ಸೀಸ ಕರಗಿ ಬೆಸುಗೆ ಆಗಬೇಕು. ಪಂಪು ಸ್ಟವ್ ಹತ್ತಿಸಿದರೆ ಹೇಗೆ? ಅದರಂತೆ ಒಲೆ ಹತ್ತಿಸಿ, ಗನ್ (ಅದನ್ನು ಅದಾಗಲೇ ಕರೆಂಟ್ ಪ್ಲಗ್ಗಿಗೆ ಸಿಕ್ಕಿಸಿದೆ) ಒಲೆಯ ಮೇಲಿಟ್ಟು, ಬಿಸಿಯಾದ ನಂತರ ದುರಸ್ತಿ ಕಾರ್ಯ ಮುಗಿಸಿದರು. ನನಗೆ ಒಂದು ವಿಧದಲ್ಲಿ ಭಯ ಆವರಿಸಿತ್ತು. ಕಾರಣ ಸಿಂಗಲ್ ಫೇಸ್ ವಿದ್ಯುತ್ ಇದೆ. ಸ್ವಲ್ಪ ಹೆಚ್ಚು ಕಡಿಮೆಯಾದರೆ.... ಊಹಿಸಲಾಗುವುದಿಲ್ಲ..
ಇವರ ಬುದ್ಧಿವಂತಿಕೆಯಿಂದಾಗಿ ಟಿ.ವಿ. ಸೆಟ್ ಸರಿಯಾಯಿತು. ಇದು ಒಂದು ಹೊಸ ಅನುಭವವಾಗಿತ್ತು. ಇದಕ್ಕೆ ಏನೆನ್ನುವುದು?
**************
8 ಕಾಮೆಂಟ್ಗಳು:
"ಈ ಜಗ - ಸೋಜಿಗ" - ಒಬ್ಬೊಬ್ಬರದು ಒ೦ದೊ೦ದು ಬಗೆಯ ಬುದ್ಧಿವ೦ತಿಕೆ. ಈಗ ದಡ್ಡರು ಯಾರೂ ಇಲ್ಲ, ಬುದ್ಧಿವ೦ತಿಕೆಯ ಪರಾಕಾಷ್ಟೆ ಎಲ್ಲೆಲ್ಲೂ ಕಾಣಿಸುತ್ತಿದೆ. ಯಾರು, ಯಾರಿಗೂ ಏನನ್ನೂ ಹೇಳುವ ಸ್ಥಿತಿಯಲ್ಲಿ ಇಲ್ಲ, ಹೇಳಿದರೆ ಕೇಳುವವರೂ ಇಲ್ಲ.
ಸರಳವಾದ ಸಾಲಿನಲ್ಲಿ ಪರಾ೦ಜಪೆಯವರೂ ಸರಳವಾಗಿ ನಮ್ಮೆಲ್ಲರ ಮಾತನ್ನೂ ಹೇಳಿದ್ದಾರೆ. ಅನುಭವಗಳನ್ನು ಹ೦ಚಿಕೊ೦ಡಿದ್ದಕ್ಕೆ ಧನ್ಯವಾದಗಳು.
ಪರಾಂಜಪೆ ಯವರು ಹೇಳಿದ್ದು ಎಷ್ಟು ಸತ್ಯ ಅಲ್ಲವೇ ? .. ಇದು ದಿನ ನಿತ್ಯ ಕಾಣುವ ವ್ಯತೆಯೇ ಸರಿ ..
ಪರಾಂಜಪೆ ಸರ್, ಸೀತಾರಾಮ ಸರ್ ಮತ್ತು ರಂಜಿತಾ ಮೇಡಂ,
ನಿಮ್ಮೆಲ್ಲರ ಅನಿಸಿಕೆಗಳಿಗೆ ಧನ್ಯವಾದಗಳು.
ಸ್ನೇಹದಿಂದ,
ಜನರ ಬುದ್ದಿ ಹೇಗೆ ಒದತ್ತೆ ಅಂತ ಹೇಳೋದು ಕಷ್ಟ
ಸುಂದರ ವಾಗಿ ಹೇಳಿದಿರಾ
ಸರ್,
ಮೊದಲೆರಡು ಪ್ರಸಂಗಗಳು ಓದಿ ನಗುಬಂತು. ನಮ್ಮ ಜನರ ಬುದ್ದಿವಂತಿಕೆಯನ್ನು ಎಲ್ಲೆಲ್ಲಿ ಪ್ರದರ್ಶಿಸುತ್ತಾರೆನ್ನುವುದಕ್ಕೆ ತಾಜ ಉದಾಹರಣೆ ಕೊಟ್ಟಿದ್ದೀರಿ...ಕೊನೆಯದಂತೂ ಸ್ವಲ್ಪ ವಿಭಿನ್ನವೆನಿಸಿತು.
ಚಂದ್ರು ಸರ್, ಇವೆಲ್ಲ ಬುದ್ದಿವಂತರ ಸೈಡ್ ಎಫೆಕ್ಟ್ಸ್
ಈ ಒಂದು ಪುಟ್ಟ ಬರಹಕ್ಕೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದೀರಿ. ನಿಮ್ಮೆಲ್ಲರಿಗೂ ಧನ್ಯವಾದಗಳು.
ಕಾಮೆಂಟ್ ಪೋಸ್ಟ್ ಮಾಡಿ