ಗುರುವಾರ, ಏಪ್ರಿಲ್ 15, 2010

ಮಾರಿಕಣಿವೆಯಲ್ಲೊಂದು ಸುತ್ತು...

ನನ್ನ ಸಂಬಂಧಿಕರೊಬ್ಬರ ಜೊತೆಗೆ ಹೊಸದುರ್ಗದಿಂದ ೩೨ ಕಿ.ಮೀ. ದೂರದಲ್ಲಿರುವ `ಮಾರಿ ಕಣಿವೆ' ಅಥವಾ `ವಾಣಿವಿಲಾಸ ಸಾಗರ' ಕ್ಕೆ ಸುಮಾರು ೧.೩೦ ರ ಮಧ್ಯಾಹ್ನಕ್ಕೆ ತಲುಪಿದೆವು.



ಚಿತ್ರದುರ್ಗದ ಹಿರಿಯೂರು ತಾಲ್ಲೂಕಿನಿಂದ ಸುಮಾರು ೨೦ ಕಿ.ಮೀ. ಹೊಸದುರ್ಗದ ರಸ್ತೆಯಲ್ಲಿದೆ. ಸುತ್ತಲೂ ಹಸಿರಿನಿಂದ ಕೂಡಿರುವ ಬೆಟ್ಟಗುಡ್ಡಗಳ ನಡುವಿನಲ್ಲಿದೆ. ವೇದಾವತಿ ನದಿಗೆ ಅಣೆಕಟ್ಟನ್ನು ಕಟ್ಟಲಾಗಿದೆ.


ಶತಮಾನಗಳಷ್ಟು ಹಳೆಯದಾಗಿರುವ ಈ ಅಣೆಕಟ್ಟನ್ನು ಅಂದಿನ ಮೈಸೂರು (ಸ್ವತಂತ್ರ ಭಾರತಕ್ಕೆ ಮೊದಲು) ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‍ ಅವರ ಕಾಲದಲ್ಲಿ, ತಾರಾಚಂದ್ ದಲಾಲ್ ಎಂಬ ಎಂಜಿನಿಯರ್‍ ತಂಡದ ನೇತೃತ್ವದಲ್ಲಿ ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಅಣೆಕಟ್ಟಿನ ಬುಡದಲ್ಲಿ ಶ್ರೀಮಾರಿಕಾಂಬದೇವಿಯ ಗುಡಿಯಿದೆ ಮತ್ತು ಸುಂದರವಾಗಿದೆ. ಸುತ್ತಲೂ ಗುಡ್ಡಪ್ರದೇಶವಿದೆ. ಅಣೆಕಟ್ಟನ ಈ ತುದಿಯಿಂದ ಆ ತುದಿಯವರೆಗೂ ನಡೆದಾಡುವುದೇ ಸೊಗಸು. ಒಂದು ಕೋನದಿಂದ ಭಾರತದ ಭೂಪಟದಂತೆ ಕಾಣುತ್ತದೆ (ಚಿತ್ರದುರ್ಗ ಜಿಲ್ಲೆಗೆ ಸಂಬಂಧ ಪಟ್ಟ ಒಂದು ಕ್ಯಾಲೆಂಡರಿನಲ್ಲಿ ಇದರ ಚಿತ್ರವಿದೆ). ಎಂಜಿನಿಯರಿಂಗ್ ತಂತ್ರಜ್ಞಾನದ ಅದ್ಭುತ ತಾಣ. ೧೬೨ ಅಡಿ / ೧೩೦೦ ಅಡಿ ಇರುವ ಈ ಜಲಾಶಯದ ಎರಡೂ ತುದಿಯಲ್ಲಿ ಮಂಟಪಗಳಿವೆ.


ಸುತ್ತಲೂ ಒಣಭೂಮಿಯ ಬಯಲು ಪ್ರದೇಶವಾಗಿದ್ದರೂ ಈ ನೀರಿನ ಹರಿವಿನಿಂದಾಗಿ ಸುತ್ತಮುತ್ತಲೂ ಹಸಿರು ಛಾವಣಿಯಂತಿದೆ. ಊರಿನ ಸುತ್ತಮುತ್ತಲೂ ತೆಂಗಿನ ತೋಟಗಳನ್ನು ಹೆಚ್ಚಾಗಿ ಕಾಣಬಹುದು.

ಇಲ್ಲಿನ ಒಂದು ಎಚ್ಚರಿಕೆಯ ಪ್ರಕಟಣೆಗಳೆಂದರೆ, ಅಣೆಕಟ್ಟಿನಲ್ಲಿ ಜೇನುಗೂಡುಗಳಿವೆ. ಕಲ್ಲೆಸೆಯಬಾರದು ಎಂಬುದು ಹಾಗೂ ತೆಪ್ಪವನ್ನು ನಿಷೇಧಿಸಲಾಗಿದೆ. ಆದರೆ, ವಿಪರ್ಯಾಸವೆಂದರೆ, ತೆಪ್ಪದಲ್ಲಿ ಪ್ರವಾಸಿಗರು (!?) ಒಂದು ಗುಡ್ಡದಿಂದ ಮತ್ತೊಂದು ಗುಡ್ಡದ ಬುಡಕ್ಕೆ ತೆಪ್ಪ ತೆರಳುತ್ತಿದ್ದದನ್ನು ನೋಡಿದೆವು. ಆಗ ತಾನೆ, ಅಲ್ಲಿಗೆ ಬಂದ ಗೈಡ್‌/ಗಾರ್ಡ್ (???) ಗೆ ಕೇಳಿದೆ ಮತ್ತು ಅಲ್ಲಿದ್ದ `ತೆಪ್ಪವನ್ನು ನಿಷೇಧಿಸಲಾಗಿದೆ' ಎಂಬುದನ್ನು
ಬಲೆ ಹಾಕುತ್ತಿದ್ದಾರೆ ಎನ್ನುವುದನ್ನು ನಂಬಲಿಕ್ಕೆ ಕಾರಣ ಇತ್ತು. ಏಕೆಂದರೆ, ಇಲ್ಲಿ ಮೀನುಗಳ ಸಂಖ್ಯೆ ಕಡಿಮೆಯಿರಬಹುದು ಅಥವಾ ಇಲ್ಲದಿರಬಹುದು. ಏಕೆಂದರೆ, ಬಕ, ಕೊಕ್ಕರೆ, ಕಿಂಗ್‌ಫಿಷರ್‌ ಇವುಗಳಾದ್ರೂ ಹೆಚ್ಚಿನ ಸಂಖ್ಯೆಯಲ್ಲಿ ಕಾಣಬೇಕಿತ್ತು. ಆದರೆ ಕಂಡುಬರುತ್ತಿದ್ದದ್ದು ಸ್ವಿಫ್ಟ್ ಹಕ್ಕಿಗಳು.
ಇಲ್ಲಿರುವ ಮಂಟಪದಲ್ಲಿ (ಅತಿಥಿ ಗೃಹಕ್ಕೆ ಹೋಗುವ ಭಾಗದಲ್ಲಿದೆ) ಒಂದು ಫಲಕವಿದೆ. ಈ ಫಲಕದಲ್ಲಿ ಸಂಸ್ಕೃತದ ಶ್ಲೋಕಗಳೊಂದಿಗೆ ಅಣೆಕಟ್ಟಿನ ವಿವರಣೆಯಿದೆ. [ಅದರ ಸುತ್ತಲೂ ತಂತಿಯ ಜಾಲರಿಯಿಂದಾಗಿ ಸರಿಯಾಗಿ ಫೋಟೋ ತೆಗೆಯಲು ಆಗಲಿಲ್ಲ. ಫೋಟೋ ಗಮನಿಸಬಹುದು]


ಅಣೆಕಟ್ಟಿನ ಆಚೆ ಬದಿಗೆ ಹೋಗುವಷ್ಟರಲ್ಲಿಯೇ ಬಹಳ ದಣಿದಿದ್ದೆವು. ಬಿಸಿಲಿನ ಝಳ ನಮ್ಮಲ್ಲಿದ್ದ ಬಾಟಲಿಯ `ಜಲ'ವನ್ನೆಲ್ಲ ಬಸಿದಿತ್ತು. ಅತಿಧಿಗೃಹದ ಬಳಿಯಿದ್ದ ನಳದಿಂದ ಮತ್ತೆ ಜಲವನ್ನು (ಅಣೆಕಟ್ಟಿನಿಂದ ಪಂಪು ಮಾಡುವರು) ತುಂಬಿಸಿಕೊಂಡು ಹೆಚ್ಚು ಹೊತ್ತು ಅಲ್ಲಿರಲಾಗದೇ ಬೇಗನೇ ಅಣೆಕಟ್ಟಿನ ಆ ಬದಿಯಿಂದ (ನೆರಳಿತ್ತು) ಹೊರಟೆವು.


ಇಲ್ಲಿ `ಪಂಚವಟಿ' ಎಂಬ ಹೆಸರಿನಲ್ಲಿ ಅರಣ್ಯ ಇಲಾಖೆಯವರು ಔಷಧೀಯ ಉದ್ಯಾನವನ್ನು ನಿರ್ಮಿಸಿದ್ದಾರೆ. ಇದೊಂದು ಪ್ರವಾಸಿಗರ ಆಕರ್ಷಣ ಕೇಂದ್ರ. ವಾರದ ಬಿಡುವಿನ ದಿನಗಳಲ್ಲಿ ಪ್ರವಾಸಿಗರ ಸಂಖ್ಯೆ ಅಧಿಕವಾಗಿರುತ್ತದೆ. ಬೆಟ್ಟದ ಮೇಲೆ ಅತಿಥಿಗೃಹದ ಸೌಲಭ್ಯವೂ ಇದೆ. [ಸಮಯಾಭಾವದಿಂದಾಗಿ ಇಲ್ಲಿಗೆ ನಾವು ಭೇಟಿಕೊಡಲಾಗಲಿಲ್ಲ].


[ಸೂ: ಪ್ರವಾಸಕ್ಕೆ ಉತ್ತಮ ಸಮಯ: ಅಕ್ಟೋಬರ್‍ನಿಂದ ಜನವರಿ. ಅಣಿಕಟ್ಟಿಗೆ ಹೋಗುವಾಗ ನೀವು ನೀರಿನ ಬಾಟಲಿಯನ್ನು ಮಾತ್ರ ತಪ್ಪದೇ ತೆಗೆದುಕೊಂಡು ಹೋಗುವುದು ಉತ್ತಮ.]


ಫೋಟೋ: ಚಂದ್ರಶೇಖರ ಬಿ.ಎಚ್. ೩.೪.೨೦೧೦

ಚಂದ್ರಶೇಖರ ಬಿ.ಎಚ್. ೩.೪.೨೦೧೦

ಚಂದ್ರಶೇಖರ ಬಿ.ಎಚ್. ೩.೪.೨೦೧೦

ಚಂದ್ರಶೇಖರ ಬಿ.ಎಚ್. ೩.೪.೨೦೧೦

ಚಂದ್ರಶೇಖರ ಬಿ.ಎಚ್. ೩.೪.೨೦೧೦

ಚಂದ್ರಶೇಖರ ಬಿ.ಎಚ್. ೩.೪.೨೦೧೦

ಚಂದ್ರಶೇಖರ ಬಿ.ಎಚ್. ೩.೪.೨೦೧೦ - ದೂರದಲ್ಲಿ ತೆಪ್ಪ ಚಲಿಸುತ್ತಿದೆ
ಛಾಯಾಚಿತ್ರಗಳು-ಚಂದ್ರಶೇಖರ ಬಿ.ಎಚ್. {ಆಧಾರಿತ ಬರಹ}

15 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ಚಿತ್ರ-ಬರಹ ಚೆನ್ನಾಗಿದೆ. ಚಿತ್ರ್ರದುರ್ಗದ ಪರಿಸರದಲ್ಲಿ ಇಂಥದ್ದೊಂದು ಅಣೆಕಟ್ಟೆ ಇದ್ದ ವಿಚಾರ ನನಗೆ ತಿಳಿದಿರಲಿಲ್ಲ.

Subrahmanya ಹೇಳಿದರು...

ತುಂಬ ಚೆನ್ನಾಗಿದೆ ಚಿತ್ರ ಮತ್ತು ಬರಹ. ಈ ಮಾರಿಕಣಿವೆಗೆ ಹೆಚ್ಚು ನೀರು ಹರಿದುಬರುವುದು ಹಳೇಬೀಡಿನ ದ್ವಾರಸಮುದ್ರ, ಬೆಳವಾಡಿ, ಅಯ್ಯನಕೆರೆಗಳ ಮೂಲಕ. ಈ ಮೂರು ಕೆರೆಗಳೂ ಐತಿಹಾಸಿಕವಾದವು ಮತ್ತು ವಿಶಾಲ ವಿಸ್ತೀರ್ಣದ ಕೆರೆಗಳು. ಈ ಪ್ರದೇಶದಲ್ಲಿ ಬರುವ ಮಳೆಯ ಹೆಚ್ಚಿನ ನೀರು ಮಾರಿಕಣಿವೆಯನ್ನು ಸೇರುತ್ತದೆ. ಮುಂದೆ ತುಂಗಭದ್ರೆಯ ಒಡಲಿಗೆ ಹರಿದುಹೋಗುತ್ತದೆ. ಧನ್ಯವಾದ

ತೇಜಸ್ವಿನಿ ಹೆಗಡೆ ಹೇಳಿದರು...

ಚಿತ್ರಗಳನ್ನು ನೋಡುವಾಗ ಬಲು ಸುಂದರ ಪ್ರದೇಶ ಎಂದೆನಿಸುತ್ತದೆ. ಸಚಿತ್ರಗಳಿಂದ ಕೂಡಿದ ಪುಟ್ಟ ಲೇಖನದಮೂಲಕ ಹೊಸ ಪ್ರವಾಸೀ ತಾಣವನ್ನು ಪರಿಚಯಿಸಿದ್ದೀರಿ. ಧನ್ಯವಾದಗಳು.

ಸಾಗರದಾಚೆಯ ಇಂಚರ ಹೇಳಿದರು...

ಸರ್, ತುಂಬಾ ಸುಂದರ ಫೋಟೋಗಳು
ವಿವರಣೆ ಅದ್ಭುತ
ತಿಳಿಸಿದ್ದಕ್ಕೆ ಧನ್ಯವಾದಗಳು

shivu.k ಹೇಳಿದರು...

ಸರ್,

ಚಿತ್ರದುರ್ಗಕ್ಕೆ ಹೋಗಿದ್ದರೂ ಇಲ್ಲಿ ಸಮಯದ ಅಭಾವದಿಂದ ಹೋಗಲಾಗಿರಲಿಲ್ಲ. ಚಿತ್ರಗಳ ಜೊತೆಗೆ ಅವುಗಳ ವಿವರವನ್ನು ನೀಡಿದ್ದೀರಿ..ಬಿಡುವು ಮಾಡಿಕೊಂಡು ಎಂದಾದರೂ ಹೋಗಬೇಕು...

ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಪರಾಂಜಪೆ ಸರ್‍, ಈ ಒಂದು ಸ್ಥಳಕ್ಕೆ ಬಹಳ ದಿನಗಳಿಂದ ಹೋಗುವ ವಿಚಾರವಿತ್ತು. ಆದರೆ, ಮೊನ್ನೆ ಬಿರುಬೇಸಿಗೆಯಲ್ಲಿ ಹೋಗಿಬಂದೆ.
ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಸುಬ್ರಮಣ್ಯರವರೆ, ಕಣಿವೆಗೆ ಹರಿದು ಬರುವ ನೀರಿನ ಬಗ್ಗೆ ಇನ್ನಷ್ಟು ಮಾಹಿತಿ ನೀಡಿದ್ದೀರಿ. ನನಗೆ ಇವುಗಳ ವಿಚಾರ ತಿಳಿದಿರಲಿಲ್ಲ. ಹೀಗೆಯೆ ಬರುತ್ತಿರಿ.

ಧನ್ಯವಾದಗಳು.

ಸ್ನೇಹದಿಂದ,

ಕ್ಷಣ... ಚಿಂತನೆ... ಹೇಳಿದರು...

ತೇಜಸ್ವಿನಿಯವರೆ,
ನಿಮ್ಮ ಅನಿಸಿಕೆ ಒಂದು ವಿಧದಲ್ಲಿ ನಿಜವೂ ಹೌದು. ಏಕೆಂದರೆ, ಇದರ ಬಗ್ಗೆ ಹೆಚ್ಚಾಗಿ ಪ್ರಚಾರ ಇಲ್ಲವಾಗಿತ್ತು. ಅದರೆ, ಗೋಲ್ಡನ್ ಸ್ಟಾರ್‍ ಗಣೇಶ್ ಅಭಿನಯದ 'ಕೃಷ್ಣ' ಚಲನಚಿತ್ರದಲ್ಲಿ ಇಲ್ಲಿನ ಕೆಲವು ದೃಶ್ಯಗಳಿವೆ. ಇತ್ತೀಚೆಗೆ ಇಲ್ಲಿ ವಾರಾಂತ್ಯದಲ್ಲಿ ಪ್ರವಾಸದಿಂದಾಗಿ ಜನಸಂದಣಿ ಹೆಚ್ಚುತ್ತಿದೆ.
ನೈರ್ಮಲ್ಯತೆಗೆ ಧಕ್ಕೆಯಾಗದೆ ಉಳಿಸಿಕೊಂಡರೆ ಅದೇ ಹೆಚ್ಚು.
ಹೀಗೆಯೆ ಬರುತ್ತಿರಿ.

ಸ್ನೇಹದಿಂದ,

ಕ್ಷಣ... ಚಿಂತನೆ... ಹೇಳಿದರು...

ಗುರು ಅವರೆ ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ಇನ್ನೂ ಮುಂಜಾನೆ ಇಲ್ಲಿಗೆ ಹೋಗಿದ್ದರೆ ಇನ್ನೂ ಉತ್ತಮ ಚಿತ್ರಗಳನ್ನು ಸೆರೆಹಿಡಿಯಬಹುದಿತ್ತು. ಆಗಿಲಿಲ್ಲ. ಮುಂದಿನಬಾರಿ ಪ್ರಯತ್ನಿಸುವೆ.

ಸ್ನೇಹದಿಂದ,

ಕ್ಷಣ... ಚಿಂತನೆ... ಹೇಳಿದರು...

ಶಿವು ಅವರೆ,
ನಿಮಗೆ ಇಲ್ಲಿ ಉತ್ತಮ ಕಾಂಸೆಪ್ಟುಗಳು ಸಿಗುತ್ತವೆ. ಬಿಡುವಿದ್ದಾಗ ಹೋಗಿಬನ್ನಿ. ಅಕ್ಟೋಬರ್‍ - ಜನವರಿ ನಡುವೆ ಹೋಗಿಬರುವುದು ಉತ್ತಮ.
ಸುತ್ತಲಿನ ಪರಿಸರ ನಿಮ್ಮ ಕ್ಯಾಮೆರಾ ಕಣ್ಣಿಗೆ ವಿವಿಧ ಚಿತ್ರಗಳನ್ನು ಒದಗಿಸುತ್ತದೆ.

ಸ್ನೇಹದಿಂದ,

PaLa ಹೇಳಿದರು...

ನಾನು ಕಳೆದ ವರ್ಷ ಮಾರಿಕಣಿವೆಗೆ ಹೋಗಿದ್ದೆನಾದರೂ ಇಷ್ಟೊಂದು ಮಾಹಿತಿ ತಿಳಿದಿರಲಿಲ್ಲ.. ಉಪಯುಕ್ತ ಮಾಹಿತಿ ಹಂಚಿಕೊಂಡಿದ್ದಕ್ಕೆ ವಂದನೆಗಳು. ಇನ್ನಷ್ಟು ವಿಷಯ ತಿಳಿಸಿದ ಸುಬ್ರಮಣ್ಯ ಅವರಿಗೂ ಧನ್ಯವಾದ..

ನಾನು ಭೇಟಿ ಕೊಟ್ಟಿದ್ದು ಮಳೆಗಾಲದಲ್ಲಿ.. ಮಳೆಗಾಲದ ಕೆಲವು ಚಿತ್ರ ಇಲ್ಲಿದೆ: http://www.flickr.com/photos/palachandra/sets/72157620255532971/

ಸೀತಾರಾಮ. ಕೆ. / SITARAM.K ಹೇಳಿದರು...

ಅದ್ಭುತವಾದ ಪರಿಸರದ ಪರಿಚಯ. ವಾಣಿವಿಲಾಸ ಸಾಗರ ಆಣೆಕಟ್ಟಿನ ಸುತ್ತ ಮುತ್ತ ಗುಡ್ಡಗಳಲ್ಲಿ ಖನಿಜ ನಿಕ್ಷೇಪಕ್ಕೆ ತಿರುಗಿದ್ದು ನೆನಪಾಯಿತು.

ಸೀತಾರಾಮ. ಕೆ. / SITARAM.K ಹೇಳಿದರು...

ವಾಣಿವಿಲಾಸ ಸಾಗರದ ಗುಗಲ್ ಚಿತ್ರಕ್ಕಾಗಿ ಕ್ಲಿಕ್ಕಿಸಿ ಕೊ೦ಡಿ:
http://picasaweb.google.com/sitara123/HoovinaHadagaliFieldWork?locked=true#5461068514711089058
(ಇದರಲ್ಲಿ ಜಲಾಶಯ ಭಾರತದೇಶದ ಭೂಪಟದ೦ತೆ ಕಾಣುವದು)

ಕ್ಷಣ... ಚಿಂತನೆ... ಹೇಳಿದರು...

ಫಾಲಚಂದ್ರ ಅವರೆ, ನಿಮ್ಮ ಅನಿಸಿಕೆಗಳಿಗೆ ಹಾಗೂ ನೀವು ಕೊಟ್ಟಿರುವ ಮಳೆಗಾಲದಲ್ಲಿನ ಮಾರಿಕಣಿವೆ ಚಿತ್ರಗಳು ಸೊಗಸಾಗಿವೆ.
ಧನ್ಯವಾದಗಳು.
ಸ್ನೇಹದಿಂದ,

ಕ್ಷಣ... ಚಿಂತನೆ... ಹೇಳಿದರು...

ಸೀತಾರಾಮ ಅವರೆ,
ಖನಿಜ ನಿಕ್ಷೇಪಕ್ಕಾಗಿ ತಿರುಗಾಟದ ನೆನಪನ್ನು ನಮ್ಮೊಂದಿಗೆ ಹಂಚಿಕೊಂಡಿದ್ದೀರಿ. ಸಂತಸವಾಯಿತು.

ಮಾರಿಕಣಿವೆಯು 'ಭಾರತ ಭೂಪಟ' ದ ಚಿತ್ರವನ್ನು ನೀವು ಕೊಟ್ಟಿರುವ ಕೊಂಡಿಯಲ್ಲಿ ಕಾಣಸಿಗುತ್ತಿಲ್ಲ. ನಿಮ್ಮಲ್ಲಿ ಆ ಚಿತ್ರವಿದ್ದರ ಕಳುಹಿಸಿ ಅದನ್ನು ಬ್ಲಾಗಿನಲ್ಲಿ ಹಾಕುವ ಇರಾದೆ ಇದೆ.

ಧನ್ಯವಾದಗಳು.
ಸ್ನೇಹದಿಂದ,