ಸೋಮವಾರ, ಏಪ್ರಿಲ್ 26, 2010

ಬೇಸಿಗೆ ಶಿಬಿರಗಳು ಬೇಕೆ?


ಬೇಸಿಗೆ ಎಂದ ಕೂಡಲೇ ರಜೆ ನೆನಪಾಗುತ್ತದೆ. ಶಾಲೆ-ಕಾಲೇಜುಗಳಿಗೆ ಬೇಸಿಗೆ ರಜೆ ಬಂದಾಗ ಮಕ್ಕಳಿಗೆ ಖುಷಿಯೋ ಖುಷಿ. ಆದರೆ, ಶಿಕ್ಷಕರಿಗೆ ಬೇಸಿಗೆ ರಜೆಯಲ್ಲಿಯೂ ಕೆಲಸ ಶಾಲೆಗೆ ಸಂಬಂಧಪಟ್ಟ ಅಥವಾ ಸರ್ಕಾರದಿಂದ ಆದೇಶಿಸಲ್ಪಟ್ಟ ಕೆಲಸಗಳು ಇರುತ್ತವೆ.

ಬೇಸಿಗೆಯಲ್ಲಿ ಮಕ್ಕಳಿಗೆ ಶಾಲೆಗೆ ರಜೆ ಕೊಡುವ ಉದ್ದೇಶ ತಮ್ಮ ವರ್ಷಪೂರ್ತಿಯ ಏಕತಾನತೆಯುಳ್ಳ ಕಲಿಕೆಯಿಂದ ಹೊರಬರಲಿ, ಮಕ್ಕಳ ಮನಸ್ಸು ಹಗುರವಾಗಲಿ, ಎಂಬುದಷ್ಟೇ ಅಲ್ಲದೇ ನಿಜಜೀವನದ ಜಗತ್ತನ್ನು ನೋಡಲು, ಹೊಸ ಹೊಸ ತಿಳುವಳಿಕೆಯನ್ನು ಅರಿಯಲು ಸಹಾಯವಾಗಲಿ ಎಂಬುದಾಗಿರುತ್ತದೆ.
ನಾವೆಲ್ಲ ಶಾಲೆ ಕಲಿಯುವಾಗ ಶಾಲೆಗೆ ಬೇಸಿಗೆ ರಜೆ ಬಂತೆದಂರೆ ಅಜ್ಜಿ ಮನೆ, ಅಜ್ಜನ ಊರು, ಟೂರು ಹೀಗೆಲ್ಲಾ ಒಂದರಿಂದ ಒಂದೂವರೆ ತಿಂಗಳವರೆಗೆ ಸುತ್ತಾಟ, ನೆಂಟರ ಮನೆಗಳಿಗೆ ಅಲೆದಾಟ, ತೋಟವೋ, ಸಿನಿಮಾನೋ ನೋಡುವ ಹಟ ಇವೆಲ್ಲ ಸರ್ವೇ ಸಾಮಾನ್ಯವಾಗಿದ್ದವು. ತೋಟಕ್ಕೆ ಹೋದರೆ ಮಾವಿನ ಮಿಡಿ ಕೀಳುವುದು, ಚಿಟ್ಟೆ-ಓತಿಕ್ಯಾತ ಹಿಡಿಯುವುದು, ಈಜಾಟ, ದನಕರುಗಳಿದ್ದರೆ ಅವುಗಳೊಡನೆ ಒಡನಾಟ, ಎತ್ತಿನ ಗಾಡಿಯಿದ್ದರೆ ಗಾಡಿಗೆ ಎತ್ತು ಹೂಡುವ, ಗಾಡಿಯಲ್ಲಿ ಪಕ್ಕದೂರು, ಸಂತೆಗೆ ಹೊಗುವುದು ಇವೆಲ್ಲವೂ ಇದ್ದವು. ಇವುಗಳಲ್ಲದೆ, ಚಿನ್ನಿ-ದಾಂಡು, ಮರಕೋತಿಯಾಟ, ಗಾಳಿಪಟ ಹಾರಿಸುವುದು, ಕುಂಟೆಬಿಲ್ಲೆ, ಕವಡೆ, ಚೌಕಾಭಾರ, ಲಗೋರಿ, ಹೀಗೆ ಅನೇಕ ವಿಧದ ಮನರಂಜನೆಗಳಿದ್ದವು. ಆಗೆಲ್ಲ ಸಿನಿಮಾ ಎಂದರೆ ದೇವರದ್ದೋ ಅಥವಾ ಮಕ್ಕಳ ಚಿತ್ರ ಯಾವುದಾದರೂ ಇದ್ದರೆ ಹೋಗುವುದಿತ್ತು. ಕೆಲವು ಆಟಗಳನ್ನು ನಗರ ಪ್ರದೇಶಗಲ್ಲಿಯೂ ಆಡುವುದು ಸರ್ವೇ ಸಾಮಾನ್ಯವಾಗಿತ್ತು. ಈಗಿನಂತೆ ಕ್ರಿಕೆಟ್‌ ಆಡುತ್ತಿದ್ದರೂ, ಗೋಲಿ, ಬುಗುರಿ, ಗಾಳಿಪಟ, ಚಿಟ್ಟೆ ಹಿಡಿಯುವುದು, ಇವೆಲ್ಲವೂ ಸೋಜಿಗವಾಗಿದ್ದವು.

ಆದರೆ, ಇಂದಿನ ಮಕ್ಕಳಿಗೆ?? ಶಾಲೆ ಬಿಟ್ಟರೆ, ಮನೆಗಿಂತ ಹೆಚ್ಚಾಗಿ ಅಮರಿಕೊಳ್ಳುವುದು ಟ್ಯೂಷನ್, ಕಂಪ್ಯೂಟರ್‍ ಕ್ಲಾಸ್, ಕ್ವಿಝ್, ಹೀಗೆ ಥರಾವರಿ ಕೋರ್ಸುಗಳು.

ಪಟ್ಟಣ-ನಗರ ಪ್ರದೇಶಗಳಲ್ಲಿ ಮಕ್ಕಳಿಗೆ ಬೇಸಿಗೆ ರಜೆ ಬರುವುದಕ್ಕೂ ಒಂದು ತಿಂಗಳ ಮುಂಚೆಯೇ `ಸಮ್ಮರ್‍ ಕೋರ್ಸ್' ಅಥವಾ `ಬೇಸಿಗೆ ಶಿಬಿರ'ಗಳ ಬಿಸಿ ಪ್ರತಿ ಬೀದಿಯಲ್ಲಿ, ದಿನನಿತ್ಯದ ಪೇಪರಿನಲ್ಲಿ, ರೇಡಿಯೋ ಹೀಗೆ ಬಹುಮಾಧ್ಯಮಗಳಲ್ಲಿ ಜಾಹಿರಾತುಗಳೊಂದಿಗೆ, ಶಾಲಾ ಮಕ್ಕಳಿಗಿಂತ ಅವರ ತಾಯಿತಂದೆಯರು/ಪೋಷಕರಿಗೆ ಒಂದು ವಿಧದ ಯೋಚನೆ/ಯೋಜನೆಗಳನ್ನು ತಲುಪಿಸುತ್ತವೆ. ಇದರಿಂದಾಗಿ, ಮಕ್ಕಳಿಸ್ಕೂಲ್‌ ಮನೇಲಲ್ವೇ? ಎಂಬುದನ್ನು `ಬೇಸಿಗೆ ಶಿಬಿರ'ಗಳಲ್ಲಿ ಕಾಣುವಂತಾಗಿದೆ. ಮಕ್ಕಳನ್ನು ಯಾವಾಗಲೂ ಕ್ರಿಯಾಶೀಲರಾಗಿರುವಂತೆ ಮಾಡಲು ಇಂತಹ ಶಿಬಿರಗಳು ಬೇಕು ಎಂಬಂತಾಗಿಯೋ ಅಥವಾ ಮಕ್ಕಳ `ಕಾಟ/ತುಂಟಾಟ' ಗಳಿಂದ ರಕ್ಷಿಸಿಕೊಳ್ಳಲೋ ಇವುಗಳು ನೆನಪಾಗುತ್ತವೆ, ಜೊತೆಗೆ ನೆಪಗಳಾಗುತ್ತಿವೆ. ನಿಜಕ್ಕೂ `ಬೇಸಿಗೆ ಶಿಬಿರ' ಗಳು ಬೇಕೆ? ಎಂದು ಯಾಕೆ ಯೋಚಿಸುವುದಿಲ್ಲ.
ಮೊದಲೇ ಮಕ್ಕಳ ಮನಸ್ಸು ಹೂವಿನಂತಹದು. ಮಕ್ಕಳಿಗೆ ಬೇಸಿಗೆಯ ರಜೆಯ ಮಜವನ್ನು ಅನುಭವಿಸಲು ಬಿಡದೇ ಇರುವುದು ಸರಿಯೇ? ತಮ್ಮ ಮಕ್ಕಳು ತಮ್ಮ ಭವಿಷ್ಯತ್ತಿನಲ್ಲಿ ಏನೇನೋ ಆಗಬೇಕೆಂಬ ಮಹತ್ವಾಕಾಂಕ್ಷೆಯ ಹಪಾಹಪಿತನಗಳು ಪೋಷಕರಲ್ಲಿ ಬೆಳೆಯುತ್ತಾ ಮಕ್ಕಳು `ಯಾಂತ್ರೀಕೃತ'ವಾಗುತ್ತಿದ್ದಾರೆ. ಇಂದಿನ ಮಕ್ಕಳಿಗೆ ಮನೆಯಲ್ಲಿನ ಸಂಬಂಧಗಳ ಬಗ್ಗೆ ಅಸಡ್ಡೆ, ಅಲ್ಲದೇ, ಅಜ್ಜಿ, ತಾತ ಇವರುಗಳ ಬಗ್ಗೆಯೂ ತಿಳಿಯದೇ, ಸಂಬಂಧಗಳೂ ಬಿಟ್ಟುಹೋಗುತ್ತಿರುವುದು, ಯಾರಿಗೆ ಯಾರೂ ಬೇಡ ಎಂಬ ಒಂಟಿತನದ ಪ್ರವೃತ್ತಿಯು ಬೆಳೆಯುತ್ತಿವೆ. ಇದಾಗಲೇ ಅನೇಕ ಕುಟುಂಬಗಳು `ವಿಭಕ್ತ'ವಾಗಿರುವುದೂ ಇಂತಹ ಮನೋಭಾವಗಳಿಂದಲೇ ಇರಬಹುದು.

ಕೆಲವು ಮಕ್ಕಳಿಗೆ ಹಳ್ಳಿಗಳಿಗೆ, ಪ್ರಕೃತಿ ವೀಕ್ಷಣೆಗೆ ಹೋಗಬೇಕೆಂಬ ಹಂಬಲಗಳೆಲ್ಲಾ ಇದ್ದರೂ ಅವಕಾಶ ವಂಚಿತರಾಗುತ್ತಿದ್ದಾರೆ. ಇವೆಲ್ಲ ನಿಜಕ್ಕೂ ಬೇಕೆ? ಕೆಲವು ಮಕ್ಕಳಿಗೆ ಶಿಬಿರಗಳು ಇಷ್ಟವಾಗಿದ್ದರೂ ಎಲ್ಲ ಮಕ್ಕಳಿಗೂ ಇಂತಹವು ಇಷ್ಟವಿರುವುದಿಲ್ಲ. ಇದರಿಂದ ಪೋಷಕರಿಗೂ ತೊಂದರೆ, ಮಕ್ಕಳಿಗೂ ತೊಂದರೆ.
ಅಲ್ಲದೇ, ಈ ಶಿಬಿರಗಳಲ್ಲಿ ಸೇರುವುದಕ್ಕೆ ಇಂತಿಷ್ಟು ಹಣ ಎಂಬುದಾಗಿರುತ್ತದೆ. ಅದು ಕೇವಲ ನೂರು ಸಾವಿರಲ್ಲ, ಎರಡು ಸಾವಿರದಿಂದ ಐದು ಸಾವಿರದವರೆಗೂ ಇದ್ದು, ೧೦ ದಿನವೋ ಅಥವಾ ೧೫ ದಿನವೋ ಶಿಬಿರಗಳು ನಡೆಸುತ್ತಾರೆ. ಇದು ಪೋಷಕರಿಗೂ ಹೊರೆಯಾಗುತ್ತದೆ ಎಂಬುದನ್ನೂ ಪೋಷಕರೇ ಯೋಚಿಸಬೇಕು. ಎಲ್ಲರೂ ಒಂದೇ ಬಗೆಯಲ್ಲಿ ಶಿಬಿರಗಳಿಗೆ ಸೇರಿಸುವ ಇರಾದೆಯಿಂದಾಗಿ ಮಕ್ಕಳಿಗೆ ಅನಾನುಕೂಲವೇ ಆಗುವುದು (ಏಕೆಂದರೆ, ಒಂದು ಶಿಬಿರಕ್ಕೆ ಕೆಲವೊಮ್ಮೆ ೧೦-೨೦ ಮಕ್ಕಳ ಬದಲು ೫೦-೬೦ ಮಕ್ಕಳ ಪ್ರವೇಶವಿದ್ದರೆ, ಸಂಸ್ಥೆಗೆ ಲಾಭವೇ ಹೊರತು ಮಕ್ಕಳು ಅಥವಾ ಪೋಷಕರಿಗೆ ಅಲ್ಲ) ಎಂಬುದನ್ನೂ ಅರಿಯಬೇಕಿದೆ. ಅಲ್ಲದೇ, ಏಕತಾನತೆಯಿಂದ ಮಕ್ಕಳಲ್ಲಿ ಭವಿಷ್ಯದಲ್ಲಿ ಪೋಷಕರನ್ನು ದೂರುವಂತಾಗಬಾರದು, ಖಿನ್ನತೆಯಿಂದು ಬಳಲುವಂತಾಹಬಾರದು ಅಥವಾ ವಿದ್ಯಾಭ್ಯಾಸದಲ್ಲಿ ಸೊರಗುವಂತಾಗಬಾರದು. ನೀವೇನಂತೀರಿ?

ಬೇಸಿಗೆ ಶಿಬಿರ ಬೇಕೆ? ಬೇಡವೇ? ನಿಮ್ಮ ಮಕ್ಕಳು ನೀವು ಬಾಲ್ಯದಲ್ಲಿ ಬೆಳೆದಂತೆ ಆಟೋಟಗಳೊಂದಿಗೆ, ಅಜ್ಜ ಅಜ್ಜಿ, ನೆಂಟರಿಷ್ಟರು ಇವರುಗಳೊಂದಿಗೆ ಬೆರೆತು ಬೆಳೆಯಬಾರದೆ? ನೀವೇ ಯೋಚಿಸಿ.

* * *

[ಈ ಮೇಲಿನ ಬರಹಕ್ಕೆ ಸ್ಫೂರ್ತಿ, ಸಲಹೆಗಳನ್ನು ಕೊಟ್ಟಂತಹ ಜೀವನ್ಮುಖಿಯ ಶ್ರೀ ಪರಾಂಜಪೆಯವರಿಗೆ ಹಾಗೂ ಕಾಗುಣಿತ ದೋಷಗಳನ್ನು ಸರಿಪಡಿಸಿದ ಅಂತರಂಗದ ಮಾತಿನ ಒಡತಿಗೆ ಕೃತಜ್ಞತೆಗಳು]

* * *

ಚಂದ್ರಶೇಖರ ಬಿ.ಎಚ್.
೨೬.೦೪.೨೦೧೦

11 ಕಾಮೆಂಟ್‌ಗಳು:

PARAANJAPE K.N. ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
PARAANJAPE K.N. ಹೇಳಿದರು...

ಮಕ್ಕಳಿಗೆ ಬೇಸಿಗೆ ರಜೆ ಸಜೆ ಆಗಬಾರದು, ಅವರ ಮನೋವಿಕಾಸಕ್ಕೆ ಮತ್ತು ಬೌದ್ಧಿಕ ಪ್ರಗತಿಗೆ ಇ೦ದಿನ ಕಮರ್ಷಿಯಲ್ ಸಮ್ಮರ್ ಕ್ಯಾ೦ಪು ಗಳು ಖ೦ಡಿತ ಸಹಕಾರಿ ಅಲ್ಲ. ಪ್ರಕೃತಿಯ ನಡುವಿನಲ್ಲಿ, ಸಾ೦ಬ೦ಧಿಕ ವರ್ತುಲದ ಪ್ರೀತಿಯ ನಡುವೆ ಕೆಲ ದಿನ ಕಳೆದರೆ ಸಿಗುವ ಅನುಭವ ಮತ್ತು ಅನುಭೂತಿ ಇವೆಲ್ಲಕ್ಕಿ೦ತ ಮಿಗಿಲು ಅಂತ ನನ್ನ ಅನಿಸಿಕೆ. ಅದಕ್ಕೆ ನನ್ನ ಮಕ್ಕಳನ್ನು ಇ೦ತಹ ಯಾವ ಸಮ್ಮರ್ ಕ್ಯಾ೦ಪಿಗೂ ಕಳಿಸದೆ ನೇರ ಅಜ್ಜಿ ಮನೆಗೆ ಬಿಟ್ಟಿದ್ದೇನೆ.

PARAANJAPE K.N. ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಸುಮ ಹೇಳಿದರು...

ಮಕ್ಕಳು ಪ್ರಕೃತಿಯಿಂದ ಹೊರಪ್ರಪಂಚದಿಂದ ಕಲಿಯುವುದು ತುಂಬಾ ಇರುತ್ತದೆ . ಅವರು ಹಾಯಾಗಿ ಆಟಾವಾಡಿಕೊಂಡಿದ್ದರೆ ಬೇಸಿಗೆ ರಜೆ ಅರ್ಥಪೂರ್ಣ . ಆದರೆ ಈಗಿನ ಹೆಚ್ಚಿನ ಮಕ್ಕಳು ಆಟ ಆಡುವುದು ಬಿಟ್ಟು ಟಿ ವಿ , ಕಂಪ್ಯೂಟರ್ ದಾಸರಾಗುತ್ತಾರೆ . ಅದಕ್ಕಿಂತ ಬೇಸಿಗೆ ಶಿಬಿರಗಳೇ ವಾಸಿ . ಮತ್ತು ಕೆಲವು ಪೋಷಕರಿಗೆ ಅನಿವಾರ್ಯವು ಕೂಡ.
ಆದರೆ ಸಾಧ್ಯವಾದಷ್ಟು ಅವರನ್ನು ಆಡುವಂತೆ ಪ್ರೇರೇಪಿಸುವುದೊಳ್ಳೆಯದು.

Unknown ಹೇಳಿದರು...

ಚಂದ್ರಶೇಖರ್ ಅವರೆ,ನಿಮ್ಮ ಬರಹಕ್ಕೆ ನನ್ನ ಒಂದು ಚಿಕ್ಕ ಅನಿಸಿಕೆ :

ಬೇಸಿಗೆ ರಜೆಯನ್ನು ಕಳೆಯಲು ಸೇರಿದರು
ಬೇಸಿಗೆ ಶಿಬಿರವನ್ನು.
ಈಗ ನಿಜವಾಗಿಯೂ ಕಳೆದುಕೊಂಡರು. . .
ಬೇಸಿಗೆ ರಜೆಯನ್ನು !!!

ಸೀತಾರಾಮ. ಕೆ. / SITARAM.K ಹೇಳಿದರು...

ಶಾಲೆಯಲ್ಲಿ ಕೋಶ ಓದು. ರಜೆಯಲ್ಲಿ ಊರು ಸುತ್ತು. ಇದರಿ೦ದ ಬೌದ್ಧಿಕ ಮತ್ತು ಸಾಮಾನ್ಯ ಜ್ಞಾನ ವೃದ್ಧಿಯಾಗುತ್ತಿದೆ. ಕೊಲೊವೊ೦ದು ಬೇಸಿಗೆ ರಜಾ ಕ್ಯಾ೦ಪ್-ಗಳು ಪ್ರವಾಸ ಕ್ರಿಯಾಶೀಲತೆಯನ್ನು ಹೊರತೆಗೆವ ಅ೦ಶಗಳನ್ನು ಇಟ್ಟುಕೊ೦ಡಿರುವದರಿ೦ದ ಟಿವಿ-ಕ೦ಪ್ಯೂಟರ್ ಮು೦ದೆ ಸಮಯ ಹಾಳು ಮಾಡುವ ಮಕಳಿಗೆ ಯೋಗ್ಯ ಅನಿಸುತ್ತೆ. ಜೊತೆಗೆ ಇತ್ತೀಚಿಗೆನ ನನ್ನ ಅನಿಸಿಕೆ ಏನೆ೦ದರೆ ಇ೦ದಿನ ದಿನಗಳಲ್ಲಿ ಅಣು ಕುಟು೦ಬಗಳು ಹೆಚ್ಚಾಗಿದ್ದು, ಮನಸೋಇಚ್ಚೇ ಬೆಳೆದು ಹೊ೦ಡಾಣಿಕೆ ಬದುಕು ಗೊತ್ತಿರದ ಮಕ್ಕಳನ್ನು ಸ೦ಭಾಳಿಸುವದು ಕಷ್ಠ. ಇ೦ತಹುದರಲ್ಲಿ ಇನ್ನೊ೦ದು ಅತಿಥೇಯ ಮನಸೋಇಚ್ಚೆಯ೦ತೆ ಇರುವ ಅಣುಕುಟು೦ಬ ಬಹಳ ದಿನಗಳ (೧-೨ಕ್ಕಿ೦ತಾ) ಅತಿಥಿಗಳನ್ನು ಕಿರಿಕಿರಿ ಎ೦ದು ಪರಿಗಣಿಸುವ ಪರಿಪಾಠ ಹೆಚ್ಚು.
ಹಳ್ಳಿ ಕಡೆ ಬೇರು ಹೊ೦ದಿರುವ ಕುಟು೦ಬಕ್ಕೆ ಈ ಮಾತು ಅನ್ವಯವಾಗುವದಿಲ್ಲ. ಹಾಗಾಗಿ ಆ ಬೇರಿಲ್ಲದ ಜನ ಬೇಸಿಗೆ ಶಿಬಿರಕ್ಕೆ ಮೊರೆಹೋಗುವದು ಸಾಮಾನ್ಯ.
ಇ೦ತಹುದರಲ್ಲಿ ಒಳ್ಳೇ ಶಿಬಿರ ಆಯ್ಕೆ ಮಾಡುವದೊ೦ದೇ ಪಾಲಕರಿಗಿರುವ ದಾರಿ.

ತೇಜಸ್ವಿನಿ ಹೆಗಡೆ ಹೇಳಿದರು...

ಉತ್ತಮ ಚಿಂತನೆ. ಮುಕ್ತವಾತಾವರಣದಲ್ಲಿ, ಪ್ರಕೃತಿಯ ಮಡಿಲಲ್ಲಿ, ಮನುಜ ಕಲಿಯುವುದೇ ನಿಜವಾದ ವಿದ್ಯೆ. ಇಂದಿನ ಮಕ್ಕಳು ನಾವು ಕಂಡಿದ್ದ ಬಾಲ್ಯದ ಸವಿಯಿಂದ ವಂಚಿತರಾಗುತ್ತಿದ್ದಾರೆ. ಅದಕ್ಕೆ ನಾವೆಲ್ಲರೂ ಹೊಣೆಗಾರರಾಗುತ್ತಿದ್ದೇವೆ! :(

Ittigecement ಹೇಳಿದರು...

ಚಂದ್ರು..

ತುಂಬಾ ಸಕಾಲಿಕವಾದ ವಿಚಾರ ಇದು...

ನನ್ನ ಮಗ ವ್ಯಕ್ತಿತ್ವ ವಿಕಸನ ಶಿಬಿರಕ್ಕೆ ಹೋಗುತ್ತಿದ್ದಾನೆ..
ಇದು ಅಗತ್ಯ ಅನ್ನುವದು ನನ್ನ ಭಾವನೆ..

ಅವರ ಅಭ್ಯಾಸಕ್ಕೆ ನೆರವಾಗುವಂಥಹ..
ಜೀವನಕ್ಕೆ ಅಗತ್ಯವಿರುವಂಥಹ..
ಪಾಠಗಳನ್ನು ಕಲಿಸುವಂಥಹ "ಶಿಬಿರ" ಗಳಿಗೆ ಹೋದರೆ ತಪ್ಪೇನಿಲ್ಲ..

ಆದರೆ...
ಮನೆಯಲ್ಲಿ ಅವರ ತುಂಟತನ ಸಹಿಸಲು ಕಷ್ಟ ಅಂತ..
ಮಕ್ಕಳಿಗೆ ಇಷ್ಟವಾಗದ..
ಶಿಬಿರಗಳಿಗೆ ಕಳಿಸಬಾರದು...

ಚಂದದ ಲೇಖನ...

Roopa ಹೇಳಿದರು...

ನಾನೂ ಸಹ ಬೇಸಿಗೆ ಶಿಬಿರ ಆಯೋಜಿಸಿರುವುದಕ್ಕಾಗಿ ನಿಮ್ಮ ಲೇಖನ ನನ್ನ ಗಮನ ಸೆಳೆಯಿತು
ನಾವೆಲ್ಲಾ ಓದುವಾಗ ಬೇಸಿಗೆ ರಜೆ ಎಂದರೆ ಕೆಲಸಕ್ಕೆ ಹೊರಡುತ್ತಿದ್ದೆವು(ಮುಂದಿನವರ್ಷದ ಶುಲ್ಕದ ಹಣದ ಗಳಿಕೆಗಾಗಿ)ಆದರೆ ಆ ಕಾಲ ಬೇರೆ ಈ ಕಾಲ ಬೇರೆ
ಈಗಿನ ಕಾಲದಲ್ಲಿ ಮಕ್ಕಳಿಗೆ ದೈಹಿಕ ಕಸರತ್ತು ಕೊಡುವ ಆಟಗಳಿಗಿಂತ ಸೋಮಾರಿಗಳನ್ನಾಗಿ ಮಾಡುವ ಕಂಪ್ಯೂಟರ್ ಹಾಗು ಟಿವಿಯಂತಹ ಆಟಾ ನೋಟಗಳೇ ಇಷ್ಟವಾಗಿವೆ. ಈ ಮಕ್ಕಳಿಗೆ ಅಜ್ಜಿ ಮನೆಯೂ ಬೆಂಗಳೂರಿನಂತಹುದೇ ಒಂದು ಸಿಟಿ ಹಳ್ಳಿ ಗಿಳ್ಳಿ ಏನೂ ಇಲ್ಲ
ಇಂಥ ಮಕ್ಕಳಿಗಾಗಿ ನಾವು ಆಯೋಜಿಸಿದ್ದು ಬೇಸಿಗೆ ಶಿಬಿರ .ಮಕ್ಕಳಿಗೆ ಈಜು, ಮರ ಹತ್ತುವುದು, ಕರಾಟೆ, ಡ್ಯಾನ್ಸ್ ಜೊತೆಗೆ ಕರ ಕುಶಲ ಕಲೆಗಳನ್ನೂ ಏರ್ಪಡಿಸಿದ್ದೆವು. ಯಾರ ಮೇಲೂ ಒತ್ತಾಯದ ಹೇರಿಕೆ ಇಲ್ಲ ಅವರಿಗೆ ಹಿಡಿಸಿದ ಚಟುವಟಿಕೆಯಲ್ಲಿ ಅವರು ಪಾಲುಗೊಳ್ಳಬಹುದು. ತರಬೇತಿಯಲ್ಲಿದ್ದೇವೆ ಎಂದು ಅವರಿಗೆ ಒಂದಿನಿತೂ ಅನ್ನಿಸದಂತೆ ನೋಡಿಕೊಂಡೆವು
ಈ ಬೇಸಿಗೆ ಶಿಬಿರದಿಂದ ಮಕ್ಕಳ ಮನಸು ನಿಜಕ್ಕೂ ಚೇತೋಹಾರಿಗಳಾಗಿವೆ ಎಂದು ಅವರ ಪೋಷಕರೇ ಹೇಳಿದ್ದಾರೆ.
ಇಂತಹ ಶಿಬಿರಗಳಿಗೆ ಮಕ್ಕಳನ್ನು ಸೇರಿಸುವುದರಲ್ಲಿ ಯಾವ ತಪ್ಪೂ ಇಲ್ಲ ಎಂಬುದು ನನ್ನ ಭಾವನೆ

ಸಾಗರದಾಚೆಯ ಇಂಚರ ಹೇಳಿದರು...

olleya baraha
besige shibiragala avashyakateyide

ಕ್ಷಣ... ಚಿಂತನೆ... ಹೇಳಿದರು...

ಈ ನನ್ನ ಬರಹಕ್ಕೆ ಬಂದ ಅಭಿಪ್ರಾಯಗಳಿಗೆ ಧನ್ಯವಾದಗಳು.
ಇಂದಿನ ಈ ಜನಜೀವನ ಶೈಲಿಯಲ್ಲಿ 'ಶಿಬಿರ'ಗಳ ಪಾತ್ರವೂ ಮುಖ್ಯ ಎಂಬುದನ್ನು ಒಪ್ಪಲೇ ಬೇಕಾದ ಅಂಶವೆನಿಸಿದರೂ, ಎಲ್ಲೋ ಒಂದು ಕಡೆ ಇಂದಿನ ಮಕ್ಕಳಿಗೆ ಸಂಬಂಧಗಳು, ಬಂಧುಮಿತ್ರರು ಜೊತೆಗೆ ಸಹಜ ಆಟವಾಡುವ ಕ್ಷಣಗಳು ದೂರಾಗುತ್ತಿದೆಯೆಂದೆನಿಸಿದರೂ, ಮತ್ತೊಂದು ರೂಪದಲ್ಲಿ ಅವೆಲ್ಲ ದೊರಕುತ್ತಿವೆ ಎಂದು ಸಮಾಧಾನಿಸಿಕೊಳ್ಳಬಹುದು.
ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.
ಸ್ನೇಹದಿಂದ,