ಮಳೆಗಾಲದಲ್ಲೆರಡು ದಿನ - ಭಾಗ ೧ ರಿಂದ ಭಾಗ ೨ನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ತಯಾರಿಯಲ್ಲಿದ್ದೇನೆ. ಅದರ ನಡುವೆ ವಿಶ್ವದ ಟಿ.ವಿ. ಚಾನಲ್‌ಗಳಲ್ಲಿ ಪ್ರತಿ ೨೦ ನಿಮಿಷಕ್ಕೆ ಒಮ್ಮೆ ಬರುವ ಬ್ರೇಕ್‌ನಂತೆ ನಮ್ಮ ಪ್ರಯಾಣಾನುಭವಕ್ಕೆ ಸದ್ಯ ಒಂದು ಪುಟ್ಟ ವಿರಾಮ ಕೊಟ್ಟಿದ್ದೇನೆ. ಈ ಪುಟ್ಟ ಬ್ರೇಕ್‌ನಲ್ಲಿ ಮತ್ತೊಂದು ನೆನಪಿನ ಕ್ಷಣಗಳ ಕಥನವಿದೆ...
+++++++++++++++
ನಿನ್ನೆ (೧೦.೧೦.೧೦) ಬೆಳಗಿನ ಹತ್ತು ಘಂಟೆಗೆ ಪರಾಂಜಪೆ ಸರ್ ದೂರವಾಣಿ ಕರೆಮಾಡಿದ್ದರು. ನಂತರ ಗಾಂಧಿಬಜಾರಿನಲ್ಲಿ ಭೇಟಿಯಾಗುವ ಎಂದು ನಾನು ಹೊರಟೆ. ಸರಿ ಸುಮಾರು ೧೨.೦೦ ಘಂಟೆಗೆ ಭೇಟಿಯಾದೆವು. ಆಗ ತಿಳಿಯಿತು ಮತ್ತೊಬ್ಬ ಬ್ಲಾಗ್ ಮಿತ್ರರ ಮನೆಗೆ ಹೋಗುವ ವಿಚಾರ.
ಇದು ಒಂದು ಆಕಸ್ಮಿಕ ಭೇಟಿ ಆಗಿತ್ತು ನನಗೆ!
ಸರಿ ಸುಮಾರು ೧೨.೨೦ ರ ವೇಳೆಗೆ ದೂರವಾಣಿಯಲ್ಲಿ `ನೀವೂ ಖಂಡಿತಾ ಬನ್ನಿ' ಎಂದು (ಪರಾಂಜಪೆ ಸರ್, ಅದಾಗಲೇ ಫೋನಿನಲ್ಲಿ ನಾನೂ ಜೊತೆಗಿರುವ ವಿಷಯ ತಿಳಿಸಿದ್ದರು, ಅವರಿಗೆ) ಆಮಂತ್ರಣವಿತ್ತರು. ಒಂದರ್ಧ ಘಂಟೆಯಲ್ಲಿ ರೆಡಿಯಾಗಿರುತ್ತೇನೆ ಎಂದೂ ಅವರು ತಿಳಿಸಿದರು. ಸರಿ... ನಾವು ಪದ್ಮನಾಭನಗರ ಬಸ್ ಹತ್ತಿ ಅಲ್ಲಿ ಇಳಿದು ಆಟೋದಲ್ಲಿ ಪ್ರಯಾಣಿಸಿದೆವು. ಅದು ಖೋಡೇಸ್ ಬ್ರೂವರೀಸ್ ಹತ್ತಿರದ ಸಿಗ್ನಲ್ಲಿನಲ್ಲಿ ಇಳಿದೆವು. ನಂತರ ಸುಮಾರು ಒಂದೂವರೆ ಕಿ.ಮೀ. ನಡೆದೆವು. ಅಲ್ಲಿಂದ ಅವರ ಮನೆಗೆ ದಾರಿಯನ್ನು ಅವರ ಮಗ ತಿಳಿಸಿದ. ಹೀಗೆ ನಾವಿಬ್ಬರ ಮನೆ ತಲುಪಿದ್ದಾಯಿತು.
ನಂತರದ ಸರದಿ, ಇನ್ನೊಬ್ಬ ಹಿರಿಯ ಮಿತ್ರರು ಮತ್ತು ಅವರ ತಮ್ಮ ಬರುತ್ತಿರುವ ವಿಚಾರವೂ ತಿಳಿಯಿತು.
ಇದೇನಪ್ಪಾ?? ಬರೀ ಕುತೂಹಲವೇ ಇದೆ! ಎಂದು ನಿಮಗನ್ನಿಸಿರಬಹುದು. ಹೌದು. ಇದು ಒಂದು ರೀತಿಯ ಸೆಂಟಿಮೆಂಟಿನಲ್ಲಿ ಕಟ್ಟಿದ ಸ್ನೇಹದ ನಂಟಿನ ಬರಹ ಎನ್ನಬಹುದು.
ಈವರೆಗಿನ ಪೀಠಿಕೆಯಲ್ಲಿಯೇ ಕೆಲವು ಬ್ಲಾಗ್ ಮಿತ್ರರಿಗೆ, ನಾವುಗಳು ಯಾರ ಮನೆಗೆ ನಮ್ಮ ಭೇಟಿಕೊಡುತ್ತಿದ್ದೇವೆ ಎಂದು ಗಟ್ಟಿಯಾಗಿ ಊಹಿಸಿರುತ್ತಾರೆ.
ಅದು ಇಟ್ಟಿಗೆ ಸಿಮೆಂಟು - ಕೋಣನಕುಂಟೆಯಲ್ಲಿ ವಾಸವಿರುವ ಬ್ಲಾಗಿಗ ಶ್ರೀ ಪ್ರಕಾಶ್ ಹೆಗ್ಡೆ ಮನೆಗೆ ನಮ್ಮ ಭೇಟಿಯಾಗಿತ್ತು.
ಪರಾಂಜಪೆ ಸರ್, ನಿಮ್ಮೊಳಗೊಬ್ಬ ಬಾಲು, ಮತ್ತೊಬ್ಬ ಬಾಲು ಮತ್ತು ನಾನು - ಹೀಗೆ ನಾಲ್ವರ ಭೇಟಿ ಪ್ರಕಾಶಣ್ಣನ ಮನೆಯಲ್ಲಿ ಭೇಟಿಯಾದೆವು. ನಾವಿಬ್ಬರೂ ತುಂಬಾ ಮುಂಚೆಯೇ ಅವರ ಮನೆಗೆ ಹೋದೆವೆನೋ ಅನಿಸಿತು. ಅಲ್ಲಿ ರಾಜಕೀಯ, ಕಾಮನ್‌ವೆಲ್ತ್ ಇವುಗಳ ಬಗ್ಗೆ ಚರ್ಚಿಸುತ್ತಿರುವಾಗ ಬಾಲು ಸರ್ ದ್ವಯರ ಆಗಮನವಾಯಿತು. ಅದೂ ಇದೂ ಮಾತಾಡುತ್ತಾ... ಅವರ ಮನೆಯವರೆಲ್ಲರ ಪರಿಚಯ ಮಾಡಿಕೊಳ್ಳುತ್ತಾ... ಊಟಕ್ಕೆ ಕುಳಿತಿದ್ದಾಯಿತು.
ಪ್ರಕಾಶಣ್ಣರ ಮನೆ (ನಮ್ಮನೆ) ಯಲ್ಲಿ ಊಟದ ರುಚಿಯ ಸವಿದೆವು. ಪಾಯಸ, ಅಮಟೆಕಾಯಿ ಗೊಜ್ಜು, ಕೆಸುವಿನೆಲೆಯ ಚಟ್ಟಿ, ಬದನೆಕಾಯಿ ಪಲ್ಯ, ಹುಣಸೆ ತೊಕ್ಕು, ತಂಬುಳಿ, ತೊವ್ವೆ ಮತ್ತು ಹಪ್ಪಳ ಎಲ್ಲ ವ್ಯಂಜನಗಳನ್ನೂ ಸವಿದದ್ದಾಯಿತು. ಅಪ್ಪೆ ಹುಳಿಯನ್ನೂ ನೆನಪಿಸಿಕೊಂಡೆವು.
ಊಟದ ನಡುವೆ ಮಾತು ಶಿರಸಿ, ಯಲ್ಲಾಪುರ, ಬನವಾಸಿ, ಎಲ್ಲ ಕಡೆ ಹರಿದಾಡಿತು. ಊಟದ ನಂತರ ರಾಜಕೀಯದ ವಿಷಯ, ನಂತರ ಕವನ, ಕವಿತೆ, ಬ್ಲಾಗಿಗ ಮಿತ್ರರ ಒಂದೆರಡು ಫೋನ್‌ಕರೆಗಳಿಗೆ ಪ್ರಕಾಶಣ್ಣರ ರಿಪ್ಲೈಗಳು, ನಡುನಡುವೆ....ಸ್ವಾರಸ್ಯಕರ ಕಥೆಗಳು... ಗಾದೆಗಳು... ಹೀಗೆ ಸಾಗುತ್ತಾ ಹಿರಿಯ ಸಾಹಿತಿಗಳು, ಯಕ್ಷಗಾನ, ಸಿನೆಮಾ ಎಲ್ಲವೂ ಅಲ್ಲಿತ್ತು. ಅದಾಗಲೇ ಹಸಿದಿದ್ದವರಿಗೆ ಪ್ರೀತಿಯಿಂದ ಉಣಬಡಿಸಿದ ಅವರೆಲ್ಲರಿಗೂ ನಮ್ಮ ಧನ್ಯವಾದಗಳು. ಅನ್ನದಾತೋ ಸುಖೀಭವ:
+++++++++
ಒಂದಷ್ಟು ನೆನಪಿನಿಂದ:
ರಾಜಕಾರಣಿಗಳ ಸರಳತೆಯ ಬಗ್ಗೆ ಒಂದು ವಿಚಾರ ಬಂದಿತು. ಲಾಲಬಹದ್ದೂರ್ ಶಾಸ್ತ್ರಿಯವರು ಮತ್ತು ಜಾರ್ಜ್ ಫರ್ನಾಂಡಿಸ್ ಅವರ ಸರಳ ಜೀವನವನ್ನು ಇಂದಿನ ರಾಜಕೀಯ ನೇತಾರರು (??) ಬಗೆಗೆ ಹೋಲಿಸಲೇ ಬಾರದು ಎಂಬುದಾಗಿ...
ತ್ರಿವೇಣಿ, ಎಂ.ಕೆ. ಇಂದಿರಾ, ಡಾ.ಎಸ್.ಎಲ್.ಭೈರಪ್ಪ, ಪೂಚಂತೇ... ಹೀಗೆ ಅವರ ಬರಹಗಳನ್ನು ಅದರಲ್ಲಿಯೂ ತ್ರಿವೇಣಿ, ಎಂ.ಕೆ. ಇಂದಿರಾ ಅವರುಗಳಿದ್ದ ಆಗಿನ ಪರಿಸರದಿಂದ ಮೂಡಿಬಂದ ಕೃತಿಗಳನ್ನೂ ಕುರಿತು ಮಾತಾಡಿದ್ದಾಯಿತು.
ಇನ್ನು ಪ್ರಕಾಶಣ್ಣರು ತಮ್ಮ ಕಾಲೇಜಿಗಿನ ದಿನಗಳಲ್ಲಿ (ಚುನಾವಣೆಗೆ ನಿಂತಾಗ ಭರವಸೆಯಿತ್ತಿದ್ದ ಮಾತಿಗೆ ಹೇಳಿದ್ದ ಅಕ್ಷರಶ: ನಡೆಸಿಕೊಡಬೇಕಾಗಿ ಬಂದ ಸಂದರ್ಭ) ಡಾ. ಕೆ.ಶಿವರಾಮ ಕಾರಂತರನ್ನು ಭೇಟಿಯಾಗಿದ್ದು, ಅವರೊಡನೆ ಮಾತಾಡಿದ್ದು, ಊಟಮಾಡಿದ್ದು ಎಲ್ಲ ನೆನಪಿಸಿಕೊಂಡರು.
ಆದರೆ, ನಮಗರಿವಿಲ್ಲದಂತೆಯೇ ಡಾ. ಕಾರಂತರ ನಡೆ, ನುಡಿ, ಅವರ ಬರವಣಿಗೆಯಲ್ಲಿನ ಓಘ, ವಿದೇಶಗಳಿಗೆ ಯಕ್ಷಗಾನದ ಪ್ರಚುರಪಡಿಸಿದ್ದು, ವಿಜ್ಞಾನದ ವಿಷಯಗಳು, ಅವರ ವಾಕ್ಪಟುತ್ವ, ಇವೆಲ್ಲ ಇಲ್ಲದೇ ಅವರನ್ನು ಕಡಲತೀರದ ಭಾರ್ಗವ ಎಂಬ ಬಿರುದು ಕೊಡಲು ಸಾಧ್ಯವಿತ್ತೇ, ತಮಗೆ ಪ್ರದಾನ ಮಾಡಿದ್ದ ಪ್ರಶಸ್ತಿಯನ್ನು ಹಿಂದಿರುಗಿಸಿದ ವಿಷಯ, ಅವರು ಚುನಾವಣೆಗೆ ನಿಂತು ಸೋತಿದ್ದು... ಇವೆಲ್ಲ ಮಾತಾಡಿದೆವು. ಏಕೆಂದರೆ, ನಿನ್ನೆ ದಿನ `ಕಡಲತೀರದ ಭಾರ್ಗವ ರ ಜನ್ಮದಿನವಾಗಿತ್ತು ಎಂದು ನನಗೆ ತಿಳಿದದ್ದು ಇಂದಿನ (೧೧.೧೦.೨೦೧೦) ರ ದಿನಪತ್ರಿಕೆಯನ್ನು ಓದಿದಾಗ ಎಂದರೆ ತಪ್ಪೇನಿಲ್ಲ.
+++++++++
ಇಲ್ಲೊಂದೆರಡು ಅಪರೂಪದ ಅಂತರ್ಜಾಲ ತಾಣಗಳು ಹುಡುಕಾಟದಲ್ಲಿ ಸಿಕ್ಕಿವೆ. ಬಿಡುವಿದ್ದಾಗ ನೋಡಿ: http://shivaramkarantha.in/ ಪರಾಂಜಪೆ ಸರ್ ಕಳಿಸಿಕೊಟ್ಟ ಲಿಂಕಿದು (ನಿನ್ನೆ ದಿನ ಬಿಡುಗಡೆಯಾಗಿದ್ದಂತೆ) ಗೂಗಲ್ಲಿನಲ್ಲಿ ಹುಡುಕಿದಾಗ ಸಿಕ್ಕಿದ್ದು: http://karanth.kannadavedike.net/
++++++++++
ಮನೆಗೆ ಹೊರಡುವ ವೇಳೆಗೆ ಕಷಾಯ ಸೇವನೆಯೂ ಆಯಿತು. (ಮಲೆನಾಡಿನ ಮನೆಗಳಲ್ಲಿ ಹಾಗೂ ಅಲ್ಲಿನ ಹೋಟೆಲುಗಳಲ್ಲಿ ಕಾಫೀ, ಟೀ ಜೊತೆಗೆ ಕಷಾಯವೂ ಸಿಗುತ್ತದೆ) ಪ್ರಕಾಶಣ್ಣರಿಂದ ಪ್ರತಿಯೊಬ್ಬರಿಗೂ ಒಂದೊಂದು ಪುಸ್ತಕ ಉಡುಗೊರೆಯನ್ನು ಕೊಟ್ಟರು. ಹಾಗೆಯೇ ನಮ್ಮಿಂದ ನೆನಪಿನ ಪುಸ್ತಕದಲ್ಲಿ ಒಂದೆರಡು ಅನಿಸಿಕೆಗಳನ್ನೂ ಪಡೆದುಕೊಂಡರು. ಈ ಪುಸ್ತಕವನ್ನಿಡಲು ಹಿನ್ನೆಲೆಯನ್ನೂ ತಿಳಿಸಿದರು (ದಿವಂಗತ ಕೃಷ್ಣಾನಂದ ಕಾಮತರು ಹೀಗೆ ಒಂದು ಪುಸ್ತಕವನ್ನು ಇಟ್ಟಿದ್ದರಂತೆ, ಆ ವಿಷಯವನ್ನು ಮಿತ್ರ ಡಿ.ಜಿ.ಮಲ್ಲಿಕಾರ್ಜುನ ತಿಳಿಸಿ... ಅದನ್ನು ಇವರೂ ತಮ್ಮಲ್ಲಿ ಅಳವಡಿಸಿಕೊಂಡಿದ್ದಾರೆ...)
++++++++++
ಇಷ್ಟೆಲ್ಲ ವಿಚಾರವನ್ನು ಬರೆಯಲು ಮನಸ್ಸೇಕಾಯಿತೆಂದರೆ, ಡಾ. ಕೆ. ಶಿವರಾಮ ಕಾರಂತರ ಜನ್ಮದಿನವನ್ನು ನಿನ್ನೆ ಅಚಾನಕ್ಕಾಗಿ ಅವರ ನೆನಪಿನಲ್ಲಿ ಕಳೆದೆವಲ್ಲಾ ಎಂಬುದರಿಂದಾಗಿ.... ಇವಿಷ್ಟು ನಿನ್ನೆ ನಮ್ಮ ಆಕಸ್ಮಿಕವಾದ ಭೇಟಿಯ ವಿಚಾರವನ್ನು ಹಂಚಿಕೊಳ್ಳಬೇಕೆನಿಸಿತು... ++++++++++++
9 ಕಾಮೆಂಟ್‌ಗಳು:
ಚೆನ್ನಾಗಿದೆ ಚ೦ದ್ರು,ಕಾರ೦ತರ ಜನ್ಮದಿನ ಎ೦ಬ ಅರಿವಿಲ್ಲದೆ ಕಾಕತಾಳೀಯವೆ೦ಬ೦ತೆ ಅವರ ವಿಚಾರ ಎಷ್ಟೊ೦ದು ಮಾತನಾಡಿದೆವಲ್ಲ. ನಿಮ್ಮೆಲ್ಲರ ಜೊತೆ ಸೇರಿ ಮಾತನಾಡಿದ್ದು, ಪ್ರಕಾಶರ ಮನೆಮ೦ದಿಯ ಆತಿಥ್ಯ ಸವಿದದ್ದು ನನಗೂ ಖುಷಿ ಯಾಗಿದೆ.
ಚಂದು ಸರ್ ಏನ್ ಸ್ವಾಮೀ ಒಂಚೂರು ಬಿಡದಂತೆ ಪ್ರತೀ ಕ್ಷಣಗಳನ್ನು ತಿಳಿಸಿದ್ದೀರ. ನೀವು , ಪರಾಂಜಪೆ, ಪ್ರಕಾಶಣ್ಣ ಹಾಗೂ ಅವರ ಕುಟುಂಬ ವಾವ್ ಆತಿಥ್ಯ ದ ನಡುವೆ ಸಾಹಿತ್ಯ , ಎಲ್ಲಾ ಅಮೂಲ್ಯವಾದ ಕ್ಷಣಗಳೇ. ಅದನ್ನು ಇಲ್ಲಿ ದಾಖಲಿಸಿದ್ದಕ್ಕೆ ನಿಮಗೆ ಧನ್ಯವಾದಗಳು.
ಚಂದ್ರು ಅವರೆ; ಸಹೃದಯಿ ಪ್ರಕಾಶಣ್ಣನವರ ಮನೆಯಲ್ಲಿ ನೀವೆಲ್ಲಾ ಸೇರಿದ ಬಗ್ಗೆ ಓದಿ ಸಂತೋಷವಾಯಿತು.ಅವರ ಮನೆಯವರ ಆತಿಥ್ಯ ವಿಶಿಷ್ಟ.ನಮ್ಮೊಡನೆ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.ನಮಸ್ಕಾರ.
Very Nice to learn about this, Karantara premilalalli naanoo obba, avaromme namaskaara, nimmellara koota nodi khushiyaaytu, Thanks
ಚಂದ್ರು ಸರ್,
ಪ್ರತಿಯೊಂದನ್ನು ಪೂರ್ಣವಾಗಿ ವಿವರಿಸಿದ್ದೀರಿ..ನನಗೆ ಮದ್ಯಾಹ್ನದ ನಂತರ ಫೆಡರೇಷನ್ ಅಪ್ ಇಂಡಿಯನ್ ಫೋಟೊಗ್ರಫಿಯ ಅದ್ಯಕ್ಷರನ್ನು ಬೇಟಿಮಾಡಬೇಕಿತ್ತು. ಪಾಟ್ನದಲ್ಲಿರುವ ಅವರು ಫೋಟೊಗ್ರಫಿ ಪ್ರದರ್ಶನವನ್ನು ನೋಡಲು ಬೆಂಗಳೂರಿಗೆ ಬಂದಿದ್ದರು. ಅವರ ಜೊತೆ ಫೋನಿನಲ್ಲಿ ಮಾತಾಡಿದಾಗ ಖುಷಿಯಾಗಿ ಮದ್ಯಾಹ್ನ ಸಿಗುತ್ತೇನೆ ಎಂದರು. ಅಂತಹ ಅವಕಾಶವನ್ನು ನಾನು ಬಿಡುವುದುಂಟೆ. ಅವರನ್ನು ಬೇಟಿಮಾಡಿಲಿಕ್ಕಾಗಿಯೆ ನಾನು ನಿಮ್ಮ ಕಾರ್ಯಕ್ರಮವನ್ನು ತಪ್ಪಿಸಿಕೊಂಡೆ. ನಿಜಕ್ಕೂ ಅವರ ಬೇಟಿ ನನಗೆ ಮರೆಯಲಾಗದ ಅನುಭವ..ನೀವು enjoy ಮಾಡಿದ್ದು ಖುಷಿಯಾಯ್ತು..
ನೀವೇ ಅಧ್ರಷ್ಟವಂತರು
ರಜೆಯ ಮಜಾ ಚೆನ್ನಾಗಿ ಕಳೆದಿದ್ದಿರಿ
ಬೆಂಗಳೂರಿನಲ್ಲಿದ್ದರೆ ಇದೆಲ್ಲಾ ಅವಕಾಶವಿರುತ್ತೆ. ನಮ್ಮಂತವರಿಗೆ ಬ್ಲಾಗ್ ನಲ್ಲೇ ಊಟ ತಿಂಡಿ ಎಲ್ಲಾ. ಅಂತೂ ಬ್ಲಾಗ್ ಪ್ರಪಂಚದಲ್ಲಿ ಸ್ನೇಹಿತರು ಜಾಸ್ತಿ ಆಗ್ತಾ ಇದ್ದಾರೆ. ಬೆಂಗಳೂರಿಗೆ ಬಂದರೆ ಊಟ-ತಿಂಡಿ,ಪ್ರೀತಿ ವಾತ್ಸಲ್ಯಕ್ಕೆ ಕೊರತೆ ಇಲ್ಲ....ಅಲ್ವಾ ಸರ್?
-ಹರಿಹರಪುರಶ್ರೀಧರ್
ಚಂದ್ರೂ...
ಒಳ್ಳೆಯ ಸಹವಾಸದಲ್ಲಿ ಸುಸಮಯ ಕಳೆದ ನೀವು ಅದನ್ನು ನಮ್ಮೊಡನೆಯೂ ಹಂಚಿಕೊಂಡಿದ್ದು ತುಂಬಾ ಸಂತೋಷವಾಯಿತು. :-)
ಶ್ಯಾಮಲ
ಈ ನಮ್ಮ ಭೇಟಿಯನ್ನು ಸಂತೋಷದಿಂದ ಆನಂದಿಸಿದ ತಮಗೆಲ್ಲರಿಗೂ ಧನ್ಯವಾದಗಳು.
ಹೀಗೆಯೆ ಬರುತ್ತಿರಿ. ಮತ್ತೆ ಸಿಗೋಣ.
ಕಾಮೆಂಟ್ ಪೋಸ್ಟ್ ಮಾಡಿ