ಗುರುವಾರ, ಜೂನ್ 9, 2011

ಆರು ಬಲ್ಲರು........

ಅಂತರ್ಜಾಲವು ಬಂದ ಹೊಸದರಲ್ಲಿ, ನಾವು ನಾಲ್ವರು ಸ್ನೇಹಿತರು ಸೇರಿ ಕೃತಿ ಚೇತನ ಎಂಬ ವಿದ್ಯುನ್ಮಾನ ಪತ್ರಿಕೆಯನ್ನು ಮಾಡುತ್ತಿದ್ದೆವು. ಆ ಸಮಯದಲ್ಲಿ ಹಿರಿಯ ಬರಹಗಾರರಾದ ಶ್ರೀಮತಿ ವಾಣಿ ರಾಮ್‍ದಾಸ್‍ ಅವರು ಒಂದು ಕವನವನ್ನು ಕೊಟ್ಟಿದ್ದರು. ಅದನ್ನು ಮತ್ತೊಮ್ಮೆ ಇಲ್ಲಿ ಪ್ರಸ್ತುತಪಡಿಸುತ್ತಿರುವೆನು.


ಆರು ಬಲ್ಲರು........


ಅಪರಿಚಿತ ನಗೆಯಲಿ ಪರಿಚಿತ ಭಾವ
ನೀನ್ಯಾರೋ, ನಾನ್ಯಾರೋ ಜನ್ಮಾಂತರ ಸ್ನೇಹ
ಭರವಸೆಯ ಆಶಾಕಿರಣ ಅರಸಿತು ನೇಹ
ಪ್ರತಿ ಆತ್ಮದಲೂ ಪ್ರೀತಿಯ ಮೋಹ
ಯಾವ ಮೋಡದಲಿ ಯಾವ ಹನಿಯೋ ಬಲ್ಲವರಾರು?||

ಪ್ರವಾಹದ ಮೊರೆತದಲಿ ಹೃದಯದ ಹಾಡು
ತುಡಿತ ಮಿಡಿತಗಳಲಿ ತವಕಿಸುತಿದೆ ನೋಡು
ಸೆಳೆತಗಳ ಸುಳಿಯಲಿ ಸಿಲುಕಿದೆ ಮನಸು
ಕೆರೆ ನದಿಯತ್ತ, ನದಿ ಸಾಗರದತ್ತ
ಸಾಗರವೆಲ್ಲಿಗೋ ಬಲ್ಲವರಾರು?||

ಕಾಯುತಿದೆ ಭೂಮಿ ಮಳೆಯ ಆಗಮನಕೆ
ತಪಿಸಿ, ತವಕಿಸಿದೆ ನೈದಿಲೆ ಚಂದ್ರಮನ ನೋಟಕೆ
ಹೃದಯದ ಚಿಪ್ಪಿನೊಳಗೆ ಪರಿತಪಿಸುತಿದೆ ಜೀವ
ಎಲ್ಲ ಮನಸ್ಸುಗಳಲಿ ನಿರಂತರ ದಾಹ
ಯಾವ ಮೇಘ ಯಾವ ಗಿರಿಯ ಚುಂಬಿಸುವುದೋ ಆರು ಬಲ್ಲರು?||

ಅರ್ಥವೇ ಆಗದು ಈ ಜೀವನ ಪರಿ
ಅರ್ಥೈಸಿಕೊಳ್ಳುವ ಗೋಜಿಗೆ ಹೋಗದಿರುವುದೇ ಸರಿ
ಅನುಭವವೇ ಜೀವನದ ಅರ್ಥವೇ,
ಅರ್ಥಗಿರ್ಥಗಳ ಹುಡುಕಿ ಅಳಲಿ, ಬಳಲಿರುವೆ
ಇದೇ ಜೀವನದ ಅರ್ಥ, ಎಂದು ತಿಳಿಸುವರಾರು?||


- ವಾಣಿ ರಾಮದಾಸ್

2 ಕಾಮೆಂಟ್‌ಗಳು:

Raghu ಹೇಳಿದರು...

Nice Poem
-Raghu

ಕ್ಷಣ... ಚಿಂತನೆ... ಹೇಳಿದರು...

ರಘುರವರುಗಳಿಗೆ
ಧನ್ಯವಾದಗಳು