ಹೀಗೊಂದು ದಿನವುಂಟೆ? ಎನಿಸಿದರೆ ಹೌದು ಎನ್ನಬಹುದು. ತಾಯಂದಿರ ದಿನ, ಅಪ್ಪಂದಿರ ದಿನ, ಅಜ್ಜ-ಅಜ್ಜಿಯರ ದಿನ ಹೀಗೆ ಇರುವ ದಿನಾಚರಣೆಗಳಲ್ಲಿ ಸಹೋದರರ ದಿನ, ಸಹೋದರಿಯರ ದಿನ ಎಂದೂ ಇದೆ. ಇವೆಲ್ಲ ಪಾಶ್ಚಿಮಾತ್ಯರಿಂದ ಬಂದ ಬಳುವಳಿಗಳೂ ಎಂದು ತಿಳಿಯಬಹುದು ಹಾಗೂ ವ್ಯಾಪಾರ ದೃಷ್ಟಿಯಿಂದಲೂ ಇವುಗಳನ್ನು ಜಾರಿಗೆ ತಂದಿರಬಹುದು. ಆದರೆ ಇಂತಹ ದಿನಾಚರಣೆಗಳಿಂದ ವ್ಯಾಪಾರಸ್ಥರಿಗೆ ಲಾಭವಿದ್ದರೂ ಅದರಿಂದಾಗಿಯೇ ಇಂದಿನ ಆಧುನಿಕ, ಶರವೇಗದ ಜೀವನ ಹಾದಿಯಲ್ಲಿ ಒಡಹುಟ್ಟಿದವರೊಡನೆ ಬಾಂಧವ್ಯವನ್ನು ಮತ್ತಷ್ಟು ಬೆಸೆಯುವಂತಹ ಕಾರ್ಯವಾಗುತ್ತಿದೆ. ಇಂದಿನ ಜನರಲ್ಲಿ ಹಾಗೂ ಉದ್ಯೋಗನಿಮಿತ್ತ ಅಥವಾ ವಿದ್ಯಾರ್ಜನೆಗಾಗಿ ದೂರದೂರವಾಗಿರುವ ಮತ್ತು ತಾವಾಯಿತು, ತಮ್ಮ ಪಾಡಾಯಿತು, ತಾಯಿ-ತಂದೆ, ಪೋಷಕರು, ಅಕ್ಕ-ತಂಗಿ, ಅಣ್ಣ-ತಮ್ಮ ಇವರನ್ನೆಲ್ಲ ಆಗಾಗ ಒಂದುಗೂಡಿಸಬಲ್ಲ, ಸಂತಸವೀಯಬಲ್ಲ ಶಕ್ತಿ ಈ ದಿನಾಚರಣೆಗಳಿಗೆ ಇರಬಹುದು, ಇದು ನನ್ನ ಅನಿಸಿಕೆ.
ಮೊನ್ನೆ ಹೀಗೆಯೇ ಗೂಗಲ್ಲಿನಲ್ಲಿ ಹುಡುಕಾಟನಡೆಸಿದ್ದಾಗ ಕಣ್ಣಿಗೆ ಬಿದ್ದದ್ದು ಸಿಸ್ಟರ್‍ಸ್‌ಡೇ`' ಎಂಬುದು. ಸೋದರಿಗಾಗಿಯೇ ಒಂದು ದಿನವನ್ನು ಮೀಸಲಿಟ್ಟಿದ್ದಾರೆ. ಈ ದಿನಾಚರಣೆಗೆ ಸರಿಯಾದ ದಿನಾಂಕ ಎಂಬುದಿಲ್ಲ. ಏಕೆಂದರೆ, ಕೆಲವರು ಆಗಸ್ಟ್ ೨, ೫ ಅಥವಾ ೭ ರಂದು ಆಚರಿಸುತ್ತಾರಂತೆ. ಬೃಹತ್ ಕಂಪನಿಗಳಾದ ಕ್ರಯೋಲಾ ಮತ್ತು ಹಾಲ್‌ಮಾರ್ಕ್ ಇವರುಗಳು ಈ ದಿನವನ್ನು ಕ್ರಮವಾಗಿ ಆಗಸ್ಟ್ ೫ ಮತ್ತು ೭ ಎಂದು ಘೋಷಿಸಿದರೂ ಇವೆಲ್ಲವೂ ತಪ್ಪು ಮಾಹಿತಿ ಎಂದು ಹಾಲಿಡೇ ಇನ್‌ಸೈಟ್ಸ್ ಕಂಪನಿಯವರು ಬರೆಯುತ್ತಾರೆ. ಈ ಕಂಪನಿಗಳು ತಿಳಿಸುವ ಪ್ರಕಾರ ಅದು ೭ ವರ್ಷಗಳಿಗೊಮ್ಮೆ ಸರಿಯಾಗಿರುತ್ತದೆ ಎಂದು ಹಾಲಿಡೇ ಇನ್‌ಸೈಟ್ಸ್ ಅವರ ಅಂಬೋಣ. ಆದ್ದರಿಂದ ಹಾಲಿಡೇ ಇನ್‌ಸೈಟ್ಸ್ ಕಂಪನಿಯವರ ಪ್ರಕಾರ ಆಗಸ್ಟ್ ತಿಂಗಳಿನ ಮೊದಲ ಭಾನುವಾರದಂದೇ ಈ ದಿನವನ್ನು ಆಚರಿಸುವುದು ಸರಿ ಎಂದು ತಿಳಿಸುತ್ತಾರೆ. ಈ ದಿನಾಚರಣೆಯನ್ನು ಯಾರು ಮೊದಲಿಗೆ ಶುರುವಿಟ್ಟರು ಎಂಬುದು ಇದುವರೆವಿಗೂ ತಿಳಿದು ಬಂದಿರುವುದಿಲ್ಲ.
ಈ ದಿನವನ್ನು ವಿಶೇಷ ದಿನವನ್ನಾಗಿ ಆಚರಿಸಲಾಗುತ್ತದೆ. ಸೋದರಿ ಎಂಬುದು ಕೇವಲ ಒಡಹುಟ್ಟಿದವರು ಅಥವಾ ಅಕ್ಕ-ತಂಗಿಯರು ಮಾತ್ರವಲ್ಲದೇ ಯಾರನ್ನು ಸೋದರಿಯ ಭಾವದಿಂದ ಕಾಣುವರೋ ಅವರೆಲ್ಲರನ್ನೂ ಒಳಗೊಂಡಿರುತ್ತದೆ. ಶುಭಾಶಯಪತ್ರ, ನವೀನ ವಸ್ತ್ರ, ಅಲಂಕಾರಿಕ ವಸ್ತುಗಳ ಉಡುಗೊರೆಯೊಂದಿಗೆ ಸಿಹಿ ವಿತರಿಸಿ ಸಂತಸಪಡುವುದು. ಹೀಗೆ ಈ ದಿನವನ್ನು ಆಚರಿಸುತ್ತಾರೆ. ಅಣ್ಣ-ತಂಗಿ, ಅಕ್ಕ-ತಮ್ಮ, ಸೋದರಿಯರು ಇವರೆಲ್ಲ ಚಿಕ್ಕವರಿಂದಲೇ ಒಬ್ಬರಿಗೊಬ್ಬರು ಪ್ರೀತಿ, ಕೀಟಲೆ, ತುಂಟತನದೊಂದಿಗೆ ಬೆಳೆದುಬಂದಿದ್ದರೂ, ಇವನ್ನೆಲ್ಲ ನೆನಪಿಸಿಕೊಳ್ಳುವ ಜೊತೆಗೆ ರಕ್ಷಣೆಯಭಾರವೂ ಇರುತ್ತದೆ. ಇಲ್ಲೊಬ್ಬ ಅನಾಮಿಕ ಹೀಗೆ ಹೇಳುತ್ತಾನೆ. I'm smiling because you are my sister and laughing because there is nothing you can do about it. -Unknown. ಇಲ್ಲಿ ಒಂದು ವಿಧದ ಮಮಕಾರದ ಬಂಧನವಿರುವುದನ್ನು ಯಾರೇ ಆಗಲೀ ಮರೆಯುವುದು ಅಪರೂಪ. ಒಂದಲ್ಲಾ ಒಂದು ವಿಧದಲ್ಲಿ ಅಕ್ಕ-ತಂಗಿಯರೊಂದಿಗೆ ನೋವುನಲಿವುಗಳನ್ನು ಹಂಚಿಕೊಳ್ಳದವರು ಅಪರೂಪ. ಎಂತಹ ಕಷ್ಟಕಾಲದಲ್ಲಿಯೂ ಸಹ ತಮ್ಮ ಒಡಹುಟ್ಟಿದವರಿಗೆ ಧೈರ್ಯ, ತಾಳ್ಮೆ ತುಂಬುವ, ಸಹಾಯಹಸ್ತ ನೀಡುವ ಇವರುಗಳು ಸದಾ ಕಾಲ ಎಲ್ಲರ ಶ್ರೇಯಸ್ಸನ್ನೇ ಬಯಸುವವರು. ಈ ಮಾತಿಗೆ ಪುಷ್ಟಿಕೊಡುವಂತೆ ಸಾರಾ ಕೋರ್ಪೆನಿಂಗ್‌ರ ಮಾತು: How do people make it through life without a sister? -Sara Corpening
ಇದನ್ನೇ ಕ್ರಿಸ್ಟಿಯಾನ ರೋಸೆಟ್ಟಿ ಕವನಿಸುತ್ತಾಳೆ:
For there is no friend like a sister
In calm or stormy weather;
To cheer one on the tedious way,
To fetch one if one goes astray,
To lift one if one totters down,
To strengthen whilst one stands.
- Christina Rossetti
ಇವೆಲ್ಲ ಪಾಶ್ಚಿಮಾತ್ಯ ಸಂಸ್ಕೃತಿಯನ್ನು ಬಿಂಬಿಸುತ್ತದೆ ಎಂದು ಭಾಸವಾದರೆ... ಅವೆಲ್ಲ ಆ ಕಡೆಗಿರಲಿ.
+++++++++++++++++++
ಇದನ್ನು ನಮ್ಮ ಭಾರತೀಯತೆಯೊಂದಿಗೆ ನೋಡಿದಾಗ, ದಕ್ಷಿಣಭಾಗದಲ್ಲಿ ಜುಲೈ-ಆಗಸ್ಟ್ ತಿಂಗಳ ಆಚೀಚೆ (ಅಂದರೆ ಆಷಾಢ ಕಳೆದು ಶ್ರಾವಣ ಮಾಸ...) ಭೀಮನ ಅಮಾವಾಸ್ಯೆಯು ಹೆಣ್ಣುಮಕ್ಕಳಿಂದ ಆಚರಿಸಲ್ಪಡುವ ಹಾಗೂ ಆದಿನ ಭಂಡಾರ ಹೊಡೆಸುವ ಹಬ್ಬವಾಗಿರುತ್ತದೆ. ನಂತರ ಬರುವ ನಾಗರಪಂಚಮಿಯು ಸೋದರ-ಸೋದರಿಯರ ಹಬ್ಬವಾಗಿ ಆಚರಿಸಲ್ಪಡುತ್ತದೆ. ಶ್ರಾವಣ ಹುಣ್ಣಿಮೆಯಂದು ಉತ್ತರಭಾರತದ ಉದ್ದಗಲಕ್ಕೂ ರಕ್ಷಾ ಬಂಧನ ಅಥವಾ ರಾಖೀಹಬ್ಬವೆಂದು ಆಚರಿಸುತ್ತಾರೆ. ಇವೆಲ್ಲವೂ ಸಹ ಸೋದರ-ಸೋದರಿಯರ ಬಾಂಧವ್ಯಕ್ಕೆ ಒತ್ತುನೀಡಿದ ಹಬ್ಬಗಳಾಗಿವೆ. ಇವೆಲ್ಲ ಅನಾದಿಕಾಲದಿಂದ ಆಚರಿಸ್ಪಡುತ್ತಾ ಬಂದಿರುವಂತಹವುಗಳು. ಇಲ್ಲಿಯೂ ಸಹ ಒಡಹುಟ್ಟಿದವರೇ ರಕ್ಷಾ ಬಂಧನ ಮಾಡಬೇಕೆಂದೇನೂ ಇಲ್ಲ. ತಮಗೆ ಇಷ್ಟಬಂದವರಿಗೆ ಅದು ಹಿರಿಯ/ಕಿರಿಯ ಯಾರೇ ಆಗಿರಲಿ ಭ್ರಾತೃತ್ವಭಾವದಿಂದ ಮಾಡುತ್ತಾರೆ. ನಮ್ಮಲ್ಲಿಯೂ ಸಹ ಅನೇಕ ಜನಪದಗೀತೆಗಳು ಸೋದರ-ಸೋದರಿಯರ ಬಗ್ಗೆ ಹೇರಳವಾಗಿವೆ. (ನನಗೆ ಈ ಜನಪದ ಗೀತೆಗಳು ಸರಿಯಾಗಿ ತಿಳಿದಿಲ್ಲವಾಗಿ ಅವನ್ನು ಇಲ್ಲಿ ಬರೆಯುವ ಪ್ರಯತ್ನಮಾಡಿಲ್ಲ, ನಿಮ್ಮ ಕ್ಷಮೆಯಿರುತ್ತದೆ ಎಂದು ತಿಳಿಯುತ್ತೇನೆ).
ಈ ರಾಖೀದಾರವನ್ನು ನಾನೂ ಸಹ ಕುಚ್ಚುಕಟ್ಟಿ ತಯಾರಿಸುತ್ತಿದ್ದದ್ದು ನೆನಪಿದೆ. ಶಾಲಾ-ಕಾಲೇಜು ದಿನಗಳಲ್ಲಿ ನಾನು ಮತ್ತು ನನ್ನ ಕೆಲವು ಮಿತ್ರರು ಪ್ರತಿವರ್ಷದ ರಕ್ಷಾಬಂಧನ ದಿನದಂದು ಭೇಟಿಯಾಗುತ್ತಿದ್ದೆವು. ಜೊತೆಗೆ ಅವರ ಮನೆಯಲ್ಲಿಯೇ ಈ ರಾಖೀದಾರ ತಯಾರಿಸುತ್ತಿದ್ದೆವು. ನನ್ನ ಸ್ನೇಹಿತನ ನಾಲ್ವರು ಸೋದರಿಯರಿಂದ ಮೊದಲು ರಕ್ಷಾಬಂಧನ ಶುರುವಾಗುತ್ತಿತ್ತು. ಕೆಲವರು ದೂರದ ಊರುಗಳಲ್ಲಿದ್ದಾರೆ. ಅವರಿಂದಲೂ ಸಹ ಪತ್ರಮುಖೇನ ರಾಖೀ ರವಾನೆಯಾಗುತ್ತಿತ್ತು. ಇವೆಲ್ಲ ನೆನಪುಗಳು ಬರುತ್ತಿರುತ್ತವೆ.
ಈ ಎಲ್ಲ ನೆನಪುಗಳನ್ನು ಏಕೆ ಪ್ರಸ್ತಾಪಿಸಿದೆನೆಂದರೆ, ಇತ್ತೀಚೆಗೆ ರಾಖೀ/ರಕ್ಷಾ ಬಂಧನವು ಕೇವಲ ತೋರಿಕೆಯ ಅಥವಾ ವ್ಯಾಪಾರೀ ಮನೋಭಾವದ ಹಬ್ಬಗಳಾಗಿ ಆಚರಣೆಯಾಗುತ್ತಿರುವುದು ಕೆಲವೊಮ್ಮೆ ಖೇದವೆನಿಸುತ್ತದೆ.
ನಾಳೆ ಭಾನುವಾರ ವಿದೇಶೀಯರ ಪ್ರೀತಿಯ `ಸಿಸ್ಟರ್‍ಸ್ ಡೇ' ಹಾಗೂ ಮುಂದಿನ ವಾರ ಭಾರತೀಯರ `ರಕ್ಷಾಬಂಧನ' ಇವೆಲ್ಲ ಇದೆ. ಎಲ್ಲರಿಗೂ ಶುಭಾಶಯಗಳು (ಮುಂಚಿತವಾಗಿ).
ಭ್ರಾತೃತ್ವದೊಂದಿಗೆ,
ಚಂದ್ರಶೇಖರ ಬಿಎಚ್.
10 ಕಾಮೆಂಟ್‌ಗಳು:
ರಕ್ಷಾ ಬಂಧನದ ಶುಭಾಶಯಗಳು . . . ನಿಮ್ಮ ಅನಿಸಿಕೆಗಳು ಚೆನ್ನಾಗಿವೆ. ಅಪ್ಪನಿಗೆ ಒಂದು ದಿನ, ಅಮ್ಮನಿಗೆ ಒಂದು ದಿನ, ಅಣ್ಣನಿಗೆ, ತಮ್ಮನಿಗೆ, ತಂಗಿಗೆ, ಅತ್ತೆಗೆ ಮಾವನಿಗೆ ಹೀಗೆ ಎಲ್ಲರಿಗೂ ಒಂದೊಂದು ದಿನ ಮೀಸಲಿಟ್ಟು ವರ್ಷಕ್ಕೆ ಒಂದು ದಿನ ಅವರನ್ನು ನೆನೆಯುವುದು ಈಗಿನ ಪೀಳಿಗೆಗೆ ಸಹಜ. ಆದರೆ ಈ ಯಾಂತ್ರಿಕ ಜೀವನದಲ್ಲಿ ಮುಂದೊಂದು ದಿನ ಸ್ವತಃ ನಮ್ಮನ್ನೇ ನಾವು ಮರೆತು. . . . ಅದನ್ನು ತೀರಾ ತಡವಾಗಿ ಅರಿತು. . . "ನನ್ನ ದಿನ" ಎಂಬಂತಹ ದಿನವನ್ನು ಆಚರಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದರೂ ಆಶ್ಚರ್ಯ ಪಡಬೇಕಿಲ್ಲ. ಪ್ರತಿಯೊಂದು ದಿನವೂ ಯಾರಿಗೋ ದುಡಿದು, ಯಾರಿಗೋ ಮಡಿದು ಬಾಳುತ್ತಿರುವ ನಾವು ನಮಗಾಗಿಯೇ ಬದುಕುವುದನ್ನು ಮರೆಯುತ್ತಿದ್ದೇವೆ. ವರ್ಷಕ್ಕೆ ಒಂದು ದಿನವಾದರೂ ನಮಗಾಗಿ ಬಾಳುವ ಅನಿವಾರ್ಯತೆ ಬರಲು ಬಹಳ ಸಮಯ ಕಾಯಬೇಕಿಲ್ಲ. ಹಾಗಾಗಿ ನಮ್ಮ ಮಕ್ಕಳ ಕಾಲಕೇ "ನನ್ನ ದಿನ " ಬರಬಹುದು . . . ಏನಂತೀರಿ?
ಸರ್,
ಆನೇಕ ಆಚರಣೆಗಳಂತೆ ಸಹೋದರಿಯರ ದಿನವೂ ಇದೆಯಾ ಅಂತ ಮೊದಲು ಆಚ್ಚರಿ ಉಂಟಾಯಿತು. ಆಮೇಲೆ ಈಗ ಪ್ರತಿಯೊಂದು ಅನಿವಾರ್ಯವೆನಿಸಿದೆ. ಹೀಗೆ ಇಂಥ ದಿನಗಳನ್ನು ನೆನಪಿಸಿ ಖುಷಿ ಹಂಚಿಕೊಳ್ಳವ ಕಾಲವಿದು.
ಇದರ ಬಗ್ಗೆ ಉತ್ತಮ ಮಾಹಿತಿಯನ್ನು ಕಲೆಹಾಕಿ ನಮಗೆ ನೀಡಿದ್ದೀರಿ...ಧನ್ಯವಾದಗಳು.
ಚಂದ್ರಶೇಖರ್...
ನಿಮ್ಮ ಬ್ಲಾಗಿನ ವೈಶಿಷ್ಟತೆಯೇ ಇದು....
ಈ ದಿನದ ಮಹತ್ವ, ಮತ್ತು ಅದರ ವಿವರಣೆ...
ಸಕಾಲಿಕವಾಗಿದೆ....
ಮಾಹಿತಿಯ ಸಂಗಡ ನೀವು ಬಳಸಿದ..
"ವಾಕ್ಯಗಳು " ಮನಸೆಳೆಯುತ್ತದೆ....
ಅಭಿನಂದನೆಗಳು...
ರಾಮ್ಗೋಪಾಲ್ ಅವರೆ, ನಿಮಗೂ ರಕ್ಷಾಬಂಧನದ ಶುಭಾಶಯಗಳು. ಈ ಲೇಖನ ಬರೆಯುವ ಆತುರದಲ್ಲಿ ಮುಂದೊಂದು ದಿನ `ನನ್ನ ದಿನ' ಎಂಬುದೂ ಬರಬಹುದೆ? ಎಂಬ ವಿಚಾರವೇ ಹೊಳೆಯಲಿಲ್ಲ. ಲೇಖನಕ್ಕೆ ಸ್ಪಂದಿಸಿದ್ದಕ್ಕೆ ಧನ್ಯವಾದಗಳು.
ಸ್ನೇಹದೊಂದಿಗೆ,
ಚಂದ್ರಶೇಖರ ಬಿ.ಎಚ್.
ಶಿವು ಸರ್, ಈ ಲೇಖನ ಬರೆಯಲು ಮಾಹಿತಿ ಸಂಗ್ರಹಿಸಿದ್ದು ಕಳೆದ ವರ್ಷ. ಆದರೆ, ಅದಕ್ಕೆ ಮತ್ತಷ್ಟು ಪೂರಕ ಬರವಣಿಗೆ ಸೇರಿಸಿದ್ದು ಈ ದಿನದ ಒಂದೆರಡು ದಿನ ಮೊದಲು. ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು ಮತ್ತು ರಕ್ಷಾಬಂಧನದ ಶುಭಾಶಯಗಳು. ಹೀಗೆಯೇ ಬರುತ್ತಿರಿ ಹಾಗೂ ಬರೆಯುತ್ತಿರಿ.
ಸ್ನೇಹದೊಂದಿಗೆ,
ಚಂದ್ರಶೇಖರ ಬಿ.ಎಚ್.
ಪ್ರಕಾಶ್ ಸರ್, ರಕ್ಷಾಬಂಧನದ ಶುಭಾಶಯಗಳು. ಲೇಖನದ ಮಾಹಿತಿಯನ್ನೆಲ್ಲ ಅಂತರ್ಜಾಲದಿಂದ ಹೆಕ್ಕಿದ್ದೆ. ಇನ್ನಷ್ಟು ವಿಚಾರಗಳಿದ್ದವು. ಅವನ್ನೆಲ್ಲ ನನಗೆ ಅನ್ನಿಸಿದಂತೆ ಬರೆಯತೊಡಗಿದ್ದರೆ, ಅದು `ಅನುವಾದ' ಮಾಡುತ್ತಿದ್ದೇನೆ ಎಂಬ ಭಾವನೆ ಕಾಡತೊಡಗಿತು. ಅದಕ್ಕೆ ಕೆಲವೇ ಸಾಲುಗಳಲ್ಲಿ ಹೇಳಬೇಕಾದುದದನ್ನು ಬರೆದೆ. ಲೇಖನ ಮತ್ತು ವಾಕ್ಯಬಳಕೆಯನ್ನು ಮೆಚ್ಚಿದ್ದೀರಿ. ಧನ್ಯವಾದಗಳು.
ಸ್ನೇಹದೊಂದಿಗೆ,
ಚಂದ್ರಶೇಖರ ಬಿ.ಎಚ್.
ಚಂದ್ರಶೇಖರ್ ಸರ್,
ನಿಮಗೆ ರಕ್ಷಾ ಭಂಧನದ ಶುಭಾಶಯಗಳು
ಹೊಸ ದಿನದ ಬಗ್ಗೆ ತಿಳಿಸಿದ್ದಿರಿ, ಉತ್ತಮ ಬರವಣಿಗೆ ಸಹ.
ಒಳ್ಳೆಯ ಮಾಹಿತಿ ನೀಡುವ ಲೇಖನ
ಹೀಗೆ ಹತ್ತು ಹಲವು ದಿನಗಳು ಹೆಚ್ಚಾಗಿ ಕೊನೆಗೊಂದು ದಿನ ಏನು ಇಲ್ಲದ ದಿನವೇ ಇಲ್ಲದಂತಾಗುವುದೇನೋ ಎಂಬ ಭಯ ನನಗೆ.
ಗುರುಮೂರ್ತಿ ಸರ್, ನಿಮಗೂ ರಕ್ಷಾ ಭಂಧನದ ಶುಭಾಶಯಗಳು.
ಹೇಗಿದ್ದೀರಿ? ನಿಮ್ಮ ಕವನಸಂಕಲನ ಪುಸ್ತಕ ಬಿಡುಗಡೆ ಸಮಾರಂಭ ಹೇಗೆ ಇತ್ತು? ಎಲ್ಲ ಸುಸೂತ್ರವಾಗಿತ್ತು ಎಂದು ನನ್ನ ಅನಿಸಿಕೆ.
ಲೇಖನದ ಬಗ್ಗೆ ನಿಮ್ಮ ಮೆಚ್ಚಿಗೆಯ ನುಡಿಗಳಿಗೆ ಧನ್ಯವಾದಗಳು. ವರ್ಷದಲ್ಲಿ ಪ್ರತಿಯೊಂದು ದಿನವನ್ನೂ ಸಹ ಜನ ಒಂದಲ್ಲಾ ಒಂದು ದಿನವನ್ನಾಗಿ ಆಚರಿಸುತ್ತಾರೆ. ಕೊನೆಗೊಂದು ದಿನ ಇವೆಲ್ಲ ಶೂನ್ಯ ಸಂಪಾದನೆಯ ಕಡೆಗೆ ಕರೆದೊಯ್ಯುವ ಸಾಧನಗಳಾಗಬಹುದು. ಕೊನೆಯೇಮ್ಬುದಿಲ್ಲ. ಭಯಪದದಿರಿ.
ಧನ್ಯವಾದಗಳು,
ಚಂದ್ರಶೇಖರ ಬಿ.ಎಚ್.
ಭಾಳ ಲೇಟ್ ಆಗಿ ಬರುತ್ತಿದ್ದೇನೆ ಸರ್ ನಿಮ್ಮ ಬ್ಲೋಗ್ ಗೆ..........ತುಂಬಾ ವಿವರವಾಗಿ ಬರೆದಿದ್ದೀರಿ..ಅರ್ಥಪೂರ್ಣವಾಗಿದೆ. ತಮಗೂ ರಕ್ಷಾ ಬಂಧನದ ಶುಭಾಶಯಗಳು........ಧನ್ಯವಾದಗಳು..............
ಶ್ವೇತಾ ಅವರೆ, ನಿಮಗೂ ರಕ್ಷಾಬಂಧನದ ಶುಭಾಶಯಗಳು ಹಾಗೂ ನನ್ನ ಬ್ಲಾಗಿಗೆ ಸ್ವಾಗತ. ಲೇಖನ ನಿಮಗೆ ಇಷ್ಟವಾಗಿದ್ದಕ್ಕೆ ಮತ್ತು ಪ್ರತಿಕ್ರಿಯಗಳಿಗೆ ಧನ್ಯವಾದಗಳು.
ಚಂದ್ರಶೇಖರ ಬಿ.ಎಚ್.
ಕಾಮೆಂಟ್ ಪೋಸ್ಟ್ ಮಾಡಿ