ಕನ್ನಡ ಬರೊಲ್ಲ! ಅದಕ್ಕೆ!!
ನಿನ್ನೆ ದಿನ ಬಸ್ಸಿನಲ್ಲಿ ನಡೆದ ಒಂದು ಪುಟ್ಟ ಪ್ರಸಂಗ. ಸಂಜೆ ಆರು ಗಂಟೆಗೆ ಜಯನಗರಕ್ಕೆ ಹೊರಡುವ ಪುಷ್ಪಕ್ ಬಸ್ಸಿಗೆ ಒಬ್ಬ ವೃದ್ಧೆ (ಸುಮಾರು ೬೦-೬೫ ವರ್ಷವಿರಬಹುದು) ಮತ್ತೊಬ್ಬ ಮಹಿಳೆಯ ಜೊತೆ ಬಂದರು. ಜಯನಗರ ನಾಲ್ಕನೇ ಬ್ಲಾಕಿಗೆ ಆ ವೃದ್ಧೆ ಹೋಗುವವರಿದ್ದರು. ಅವರ ಜೊತೆ ಬಂದಿದ್ದ ಮಹಿಳೆ ನಿರ್ವಾಹಕರಿಗೆ (ಕಂಡಕ್ಟರಿಗೆ) ಈ ವೃದ್ಧೆಯನ್ನು ನಾಲ್ಕನೇ ಬ್ಲಾಕಿನಲ್ಲಿ ಇಳಿಸಿರೆಂದು ಹೇಳಿದರು. ನಂತರ, ನಿರ್ವಾಹಕರು ಚೀಟಿ ಕೊಡುತ್ತಾ ಎಂಟು ರೂಪಾಯಿಕೊಡಲು ಆ ವೃದ್ಧೆಗೆ ಕೇಳಿದಾಗ, ಆ ಅಜ್ಜಿಯು ನನಗೆ ಕನ್ನಡ ಬರುವುದಿಲ್ಲ ಎಂದು ಹಿಂದಿಯಲ್ಲಿ ಹೇಳಿ, ಆದ್ದರಿಂದ ತಮಿಳಿನಲ್ಲಿ ಮಾತಾಡಿ ಎಂದರು (ನಿರ್ವಾಹಕರಿಗೆ). ಅಲ್ಲಿಯೇ ಇದ್ದ ಮತ್ತೊಬ್ಬ ಪ್ರಯಾಣಿಕರು, ನೀವು ಇರೋದು ಕನ್ನಡನಾಡಿನಲ್ಲಿ ಕನ್ನಡ ಬರೊಲ್ಲ ಅಂದರೆ ನಂಬೊಲ್ಲ ಎಂದರು (ಕಾರಣ, ಆಕೆ ಮಾರ್ವಾಡಿ). ಅದಕ್ಕೆ, ಆಕೆ ನಾವು ಮದ್ರಾಸಿನಲ್ಲಿ ಇದ್ದೆವು. ಇದೀಗ ಕರ್ನಾಟಕಕ್ಕೆ ಮಗಳ ಮನೆಗೆ ಬಂದಿದೇನೆ. ಅದಕ್ಕೆ ಕನ್ನಡ ಬರೊಲ್ಲ ಎಂದಿದ್ದು ಎನ್ನಬೇಕೆ! ಅಲ್ಲದೆ, ಚಿಲ್ಲರೆ ಸರಿಯಾಗಿ ಕೊಡಿ ಎಂದು ನಿರ್ವಾಹಕರಿಗೆ ತಾಕೀತು (ತಮಾಷೆ ಮಾತಿನಿಂದ) ಮಾಡುತ್ತಿದ್ದರು.
ಒಂದೆರಡು ಸ್ಟಾಪುಗಳು ಸುಮ್ಮನಿದ್ದ ಆಕೆ ಪಕ್ಕದಲ್ಲಿ ಕುಳಿತವರ ಜೊತೆ ಇದು ಯಾವ ಸ್ಟಾಪು, ನೀವು ಎಲ್ಲಿ ಇಳಿಯೋದು ಹೀಗೆ ಅನೇಕ ಪ್ರಷ್ನೆಗಳನ್ನು ಕನ್ನಡದಲ್ಲಿ ಕೇಳುತ್ತ ಮಾತಿಗೆ ಶುರು ಮಾಡಿದರು.
ನಮ್ಮ ಕನ್ನಡನಾಡಿನಲ್ಲಿ ಜನರ ಪ್ರತಿಯೊಂದು ನಡೆನುಡಿಯೂ ಸಹ ಇದೇ ರೀತಿ ಇದೆ ಎನಿಸಿತು. ಹೀಗಿದೆ ನಮ್ಮ ಕರ್ನಾಟಕದಲ್ಲಿನ ಕನ್ನಡ ಜನರ ಪರಿಸ್ಥಿತಿ.
೦೨.೦೬.೨೦೦೧
ಅವರ್ ಕರ್ನಾಟಕ.ಕಾಂ ನಲ್ಲಿ ಪ್ರಕಟವಾಗಿದೆ.
ಚಂದ್ರಶೇಖರ ಬಿ.ಎಚ್. ೧೨.೧೧.೨೦೦೯
3 ಕಾಮೆಂಟ್ಗಳು:
ಬೆ೦ಗಳೂರಿನಲ್ಲಿ ಇರಬೇಕಾದರೆ ಕನ್ನಡ ಕಲಿಯುವ ಅಗತ್ಯವೇ ಇಲ್ಲ ಅನ್ನುವ ಸತ್ಯ ಅವರಿಗೆ ಗೊತ್ತಿದೆ. ನಮ್ಮ ಔದಾರ್ಯ ಮತ್ತು ಭಾಷೆಯ ಬಗ್ಗೆ ನಿರಭಿಮಾನ ಇದಕ್ಕೆ ಕಾರಣ
ಸ್ವೀಡನ್ನಿನಲ್ಲಿ ಇಂಗ್ಲಿಷ್ ಬಂದರೂ ಮಾತನಾಡುವುದಿಲ್ಲ. ನೀವೇ ಬೇಕಾದರೆ ಭಾಷೆ ಕಲಿಯಿರಿ ಎನ್ನುತ್ತಾರೆ.
ನಾವು ನಮ್ಮ ಭಾಷೆ ಬಿಟ್ಟು ಎಲ್ಲವನ್ನು ಕಲಿಯುತ್ತೇವೆ,
ಭಾಷಾಭಿಮಾನ ಇರದಿದ್ದರೆ ಸಾಧನೆ ನಗಣ್ಯ ಎನಿಸುತ್ತದೆ ಅಲ್ಲವೇ?
ಪರಾಂಜಪೆ ಸರ್, ನಿಮ್ಮ ಮಾತು ಸತ್ಯಕ್ಕೆ ಸನಿಹ. ನಮ್ಮ ಉದಾರತೆಯೇ ನಮಗೆ ಮುಳುವಾಗುವ ಅಂಶಗಳಊ ಸಾಕಷ್ಟಿವೆ. ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.
ಗುರುಮೂರ್ತಿ ಅವರೆ, ನೀವೆನ್ನುವುದು ಸರಿಯೆನಿಸುತ್ತದೆ. ಭಾಷಾಭಿಮಾನ ಅದು ಬೇರೆಯದೇ (ದುರ)ಅಭಿಮಾನವಾಗಿ ಸೇರಬಾರದು ಅಷ್ಟೆ. ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.
ಕಾಮೆಂಟ್ ಪೋಸ್ಟ್ ಮಾಡಿ