ಕಳೆದ ತಿಂಗಳು ನೊಣವಿನಕೆರೆ ಶ್ರೀ ಬೇಟೆರಾಯಸ್ವಾಮಿ ರಥೋತ್ಸವ ಇದ್ದಿತು. ಬಹಳ ವರ್ಷಗಳ ಹಿಂದೆ ರಥೋತ್ಸವಕ್ಕೆ ಹೋಗಿದ್ದು, ಇತ್ತೀಚೆಗೆ ಭೇಟಿಕೊಡಲು ಆಗಿರಲಿಲ್ಲ.
ಮುಂಜಾನೆ ಬೆಂಗಳೂರಿನಿಂದ ತುರುವೆಕೆರೆಗೆ ಬಸ್ ಹತ್ತಿದೆ. ಅಲ್ಲಿ ತಲುಪಿದಾಗ ೧೧.೦೦ ಘಂಟೆಯಾಗಿತ್ತು. ತುರುವೆಕೆರೆಯಲ್ಲಿ ದೇವಸ್ಥಾನಕ್ಕೆಂದು ಹೂವು, ಹಣ್ಣು ಕೊಂಡು, ತಿಪಟೂರು ಮಾರ್ಗವಾಗಿ ಹೋಗುವ ಬಸ್ ಹತ್ತಿದರೆ. ಆದರೆ, ಕಂಡಕ್ಟರ್ ಹೇಳಿದ್ದು ಹೀಗೆ: "ನಾವು, ನೀವು ಕೇಳಿದ ಊರಿಗೆ ಹೋಗಲು ಎರಡು ತಾಸು ಆಗುತ್ತೆ, ಜೊತೆಗೆ ದರವೂ ಜಾಸ್ತಿ". ಅದರ ಬದಲು, "ಹಳೇ ಬಸ್ ಸ್ಟಾಂಡಿನಲ್ಲಿ ಇಳೀರಿ, ಇಪ್ಪತ್ತು ನಿಮಿಷಕ್ಕೆ ಊರಿಗೆ ತಲುಪುತ್ತೀರಿ" ಎಂದು ಚಾಲಕನೂ ತಿಳಿಸಿದ. ನಾನೂ ಹಾಗೆಯೇ ಮಾಡಿದೆ.
ದೇವಾಲಯಕ್ಕೆ ತಲುಪಿದಾಗ ಅದಾಗಲೇ ಮಹಾಮಂಗಾಳರತಿಯಾಗಿ ಪ್ರಸಾದ ವಿತರಣೆಯಾಗುತ್ತಿತ್ತು. ನಾನೂ ದೇವಾಲಯದೊಳಗೆ ಹೋದೆ. ಪೂಜೆ ಮಾಡಿಸಿ ಹೊರಬಂದೆ.
ನಂತರ ದೇವರ ಉತ್ಸವಮೂರ್ತಿ ಪೂಜೆ ಶುರುವಾಯಿತು. ಜನವೋ ಜನ. ದೇವಳದ ಸುತ್ತ ಪ್ರಾಕಾರೋತ್ಸವವಿದ್ದುದರಿಂದ ಯಾರು ಬೇಕಾದರೂ ದೇವರ ಪಲ್ಲಕ್ಕಿಯನ್ನು ಹೊರುವ (ಅಂದರೆ ಹೆಗಲು ಕೊಡುವ) ಅವಕಾಶವಿತ್ತು. ಈ ಸದವಕಾಶ ಬಿಡಬಾರದೆಂದು ನಾನೂ ಗುಂಪಿನಲ್ಲಿ ಸೇರಿದೆ.
ಶ್ರೀ ಬೇಟೆರಾಯಸ್ವಾಮಿಯ ಮೂರ್ತಿಯನ್ನು ಪ್ರಾಕಾರದ ಸುತ್ತ ಒಂದು ಪ್ರದಕ್ಷಿಣೆ ಹಾಕಿ ನಂತರ ದೇವಾಲಯದ ಹೊರಗಿನ ಒಂದು ಕೊಠಡಿಯಲ್ಲಿ ಇಳಿಸಲಾಯಿತು. ಆನಂತರ, ಊರಿನ ಮುಖಂಡರಿಂದ ಪೂಜೆ, ಸರ್ಕಾರಿ ಅಧಿಕಾರಿಗಳಿಂದ, ಆರಕ್ಷಕರಿಂದ ಹೀಗೆ ಪೂಜೆ ನೆರವೇರಿಸಿ, ನಂತರ ರಥಕ್ಕೆ ದೇವರ ಮೂರ್ತಿಯನ್ನು ಕೂರಿಸಲಾಯಿತು. ಇದು ಬಹಳ ಕಷ್ಟದ ಕೆಲಸ. ಏಕೆಂದರೆ, ಅಷ್ಟೆತ್ತರದ ಅಟ್ಟಣಿಗೆಯನೇರಿ ರಥದಲ್ಲಿ ಕೂರಿಸುವುದೆ ಸಾಹಸ. ಅದೂ ನೆರವೇರಿತು. ಇಲ್ಲೆಲ್ಲ ನಾನೂ ಓಡಾಡಿದೆ. ಜೊತೆಗೆ ಒಂದಷ್ಟು ಫೋಟೋಗಳನ್ನೂ ಕ್ಯಾಮೆರಾದಲ್ಲಿ ಸೆರೆಹಿಡಿದೆ.
ಬಿಸಿಲ ಧಗೆ ವಿಪರೀತವಿತ್ತು. ರಥವನ್ನು ಎಳೆಯಲು ಒಂದು ತೊಡಕಿತ್ತು. ಅದೇನೆಂದರೆ, ರಥದ ಗಾಲಿಗಳು ಹಳೆಯದಾಗಿದ್ದರಿಂದ ಹಾಗೂ ಏನಾದರೂ ಅನಾಹುತವಾಗುವ ಆತಂಕವಿದ್ದುದರಿಂದ, ಸರ್ಕಾರೀ ಅಧಿಕಾರಿಗಳಿಂದ ಅನುಮತಿಯಿರಲಿಲ್ಲ. ಗ್ರಾಮಸ್ಥರು ತೇರು ಎಳೆಯಬೇಕೆಂದು, ಆದರೆ ಅಧಿಕಾರಿಗಳು ಬೇಡವೆಂದು. ಸುಮಾರು ಹೊತ್ತು ಇದರ ಬಗ್ಗೆ ಚರ್ಚೆಯಾಗಿ, ಆನಂತರ ಒಂದು ಒಪ್ಪಂದವಾಗಿ ತೇರನ್ನು ನಿಧಾನವಾಗಿ ಎಳೆಯಲು ಅನುಮತಿ ಸಿಕ್ಕಿತು. ನಿಧಾನವಾಗಿ ತೇರನ್ನು ದೇವಾಲಯದ ಮುಂಭಾಗಕ್ಕೆ ಎಳೆಯಲು ಜನರ ಹರ್ಷೋದ್ಗಾರದೊಂದಿಗೆ ತೇರು ದೇವಾಲಯದ ಮುಖ್ಯದ್ವಾರಕ್ಕೆ ಬಂದಿತು. ಆ ಕ್ಷಣವೇ ಮುಖ್ಯದ್ವಾರದಲ್ಲಿ ಪಾನಕ, ಕೋಸಂಬರಿ ಹಂಚಲು ಶುರುವಿಟ್ಟುಕೊಂಡರು. ನಾನು ಮತ್ತೊಂದು ಊರಿಗೆ ಹೋಗಬೇಕಿದ್ದರಿಂದ, ನಮ್ಮ ನೆಂಟರೂ ಅಲ್ಲಿ ಬಂದಿದ್ದರಿಂದ ಅವರೊಂದಿಗೆ ಊಟಕ್ಕೆ ಹೊರಟೆ. ವಾಹ್! ಅದ್ಬುತ ಪ್ರಸಾದ ಸಿಕ್ಕಿತು. ಪಾಯಸ, ಲಾಡುಕಾಳು, ಜಿಲೇಬಿ, ಪುಳಿಯೋಗರೆ, ಬಿಸಿಬೇಳೆಭಾತ್, ಮೊಸರನ್ನ, ಹೀಗೆ ಭರ್ಜರಿ ಊಟವಾಯಿತು. ಬಿಸಿಲ ಝಳಕ್ಕೆ ಬೆವರಿನಿಂದ ತೊಯ್ದದ್ದೇ ಆಯಿತು. ನಂತರ ಸ್ವಲ್ಪಹೊತ್ತು ಅಲ್ಲಿಯೇ ಇದ್ದು ಅರ್ಚಕರಿಗೂ, ಮನೆಯವರಿಗೂ ಧನ್ಯವಾದ ಹೇಳಿ ತಿಪಟೂರಿನ ಕಡೆಗೆ ಹೊರಟೆ.
ಇನ್ನೂ ಇದೆ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ