ಗುರುವಾರ, ಏಪ್ರಿಲ್ 16, 2009

೫೦ ನೇ ಬ್ಲಾಗಂಚೆ

ಸಂತಸದ ಕ್ಷಣಗಳನ್ನು ಯಾವುದೇ ವ್ಯಕ್ತಿಯಾದರೂ ಸಹ ಮರೆಯಲು ಸಾಧ್ಯವಿರುವುದಿಲ್ಲ. ಅವೆಲ್ಲವೂ ಸ್ಮೃತಿಪಟಲದಲ್ಲಿ ಉಳಿದಿರುತ್ತವೆ. ಆದರೆ ದಿನಗಳನ್ನು ಖಂಡಿತಾ ಮರೆತಿರುತ್ತೇವೆ. ಆ ದಿನ ಎಂದೋ, ಅದ್ಯಾವುದೋ ಒಂದು ದಿನವೆಂದೋ ಹೇಳುತ್ತಿರುತ್ತೇವೆ. ಅದನ್ನೇ ಈ ತತ್ವಜ್ಞ ಹೀಗೆ ಹೇಳುತ್ತಾನೆ. "We do not remember days, we remember moments". - Cesare Pavese

ಬಾಲ್ಯದ ನೆನಪುಗಳು ಸದಾ ಹಸಿರಾಗಿರುತ್ತವೆ. ಕೆಲವು ಸ್ನೇಹಿತರನ್ನು ಮರೆತಿದ್ದರೂ ಅವರೊಂದಿಗೆ ಓದುವಾಗ, ಆಡುವಾಗ ಇದ್ದ ಸಂತಸ-ನೋವು ಇವುಗಳನ್ನು ಮರೆಯಲು ಆಗುವುದಿಲ್ಲ. ವಿಶೇಷವಾದ ಸಂದರ್ಭಗಳೇನೂ ಆಗಿರದಿದ್ದರೂ ಸಹ ಅಂತಹ ನೆನಪುಗಳು ಮಾಸದ ನೆನಪುಗಳಾಗಿರುತ್ತವೆ. ಶಾಲೆಯ ಸಹಪಾಠಿಯಿರಬಹುದು, ಹೊಸ ಬಟ್ಟೆ ಕೊಂಡದ್ದಿರಬಹುದು, ಕೆಲಸಕ್ಕೆ ಸೇರಿ ಪಡೆದ ಮೊದಲ ತಿಂಗಳ ಸಂಬಳವಿರಬಹುದು ಹೀಗೆ ನಾನಾ ವಿಧದ ವಿಶೇಷತೆಗಳು ಸದಾ ನೆನಪಿನಲ್ಲಿರುತ್ತವೆ. ಆದರೆ ಯಾವ ದಿನಗಳು (ಅಂದರೆ ಇಂತಹದೇ ವಾರ, ದಿನಾಂಕ ಇತ್ಯಾದಿ ನೆನಪಿನಲ್ಲಿರುವುದು ಕ್ಷಣಿಕ ಅನಿಸುತ್ತದೆ) ನೆನಪಿನಲ್ಲಿರುವುದಿಲ್ಲವೋ ಅವುಗಳ ಕ್ಷಣಗಳೆಲ್ಲ ತಕ್ಷಣಕ್ಕೆ ನೆನಪಾಗುತ್ತವೆ.

ಇದೆಲ್ಲ ಬರೆಯಲು ನೆನಪಾಗಿದದ್ದು ಮೊನ್ನೆ ದಿನ ನನ್ನ ಶಾಲಾ ಸಹಪಾಠಿಯ ಮನೆಯಲ್ಲಿ (ಒಂದು ವರ್ಷದ ನಂತರದ ಭೇಟಿ) ಭೇಟಿಯಾದಾಗ. ನಮ್ಮ ಶಾಲೆ, ಅಲ್ಲಿನ ಗುರುಗಳು, ಸಹಪಾಠಿಗಳು ಇವರೆಲ್ಲರ ವಿಚಾರಗಳೂ ಹಾದು ಹೋದವು. ಕೆಲವರ ಹೆಸರುಗಳು ನೆನಪಿಗೆ ಬಂದರೂ ಮುಖಲಕ್ಷಣಗಳು ಮರೆತುಹೋಗಿರುವಂತಹವು. ಸದ್ಯಕ್ಕೆ ಒಂದೆರಡು ನೆನಪಿನಂಗಳದಲ್ಲಿ ಮೂಡಿದ ನೆನಪುಗಳನ್ನು ನೆನಪಿಸಿಕೊಳ್ಳುತ್ತಾ ಇಲ್ಲಿ ಬರೆಯುತ್ತಿದ್ದೇನೆ.
೧) ಅದೊಂದು ದಿನ ಶಾಲೆ ಬಿಟ್ಟು ಸುಮಾರು ೧೦ ವರ್ಷಗಳಾಗಿದ್ದವು. ಶ್ರೀ ರಾಮಕೃಷ್ಣಮಠ (ಆಗಿನ ಶ್ರೀ ರಾಮಕೃಷ್ಣ ಆಶ್ರಮ) ದ ಬಳಿ ರಸ್ತೆ ದಾಟುತ್ತಿದ್ದೆ. ಯಾರೋ ನನ್ನ ಹೆಸರ ಬಿಟ್ಟು ಇನಿಷಿಯಲ್ಸ್ ಮಾತ್ರ ಕರೆದಂತಾಯಿತು. ಹಿಂದಿರುಗಿ ನೋಡಿದರೆ ನನ್ನ ಸಹಪಾಠಿ. ಆ ನಂತರ ಮತ್ತೆ ಸಿಕ್ಕಿಲ್ಲ.

೨) ಹೀಗೆಯೇ ಮತ್ತೊಂದು ದಿನ ನಾನು ಆಫೀಸ್‌ ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದೆ. ಬಸ್ಸಿಳಿದು ಸ್ವಲ್ಪ ದೂರ ಸಾಗಿದ್ದೆ. ಒಬ್ಬ ವ್ಯಕ್ತಿ ನನ್ನನ್ನೇ ತಿರುತಿರುಗಿ ನೋಡುತ್ತಾ ಮುಂದೆ ಸಾಗಿದ. ನಾನೂ ಸಹ ಹಿಂದಿರುಗಿ ನೋಡಿದೆ. ಯಾರೆಂದು ನೆನಪಾಗುತ್ತಿಲ್ಲ. ಕೊಂಚ ದೂರ ಸಾಗಿದ ನಂತರ ನೆನಪಾಯಿತು. ಅವನೇನೂ ದೂರ ಹೋಗಿರುವುದಿಲ್ಲ ಎಂದು ವಾಪಸ್ಸು ಹೊರಟೆ. ಅವನೂ ಸಹ ಆ ಕಡೆಯಿಂದ ಬರುತ್ತಿದ್ದ. ಒಬ್ಬರಿಗೊಬ್ಬರು ಎದುರಾದೆವು. ಅದೂ ಬಹಳ ವರ್ಷಗಳ ನಂತರ ಈ ಭೇಟಿಯಾಗಿತ್ತು. ಅವನು-ನಾನು ಒಂದರಿಂದ ಹತ್ತರವರೆಗೆ ಒಂದೇ ಶಾಲೆಯಲ್ಲಿ ಓದಿದ್ದೆವು. ಇದೊಂದು ವಿಚಿತ್ರ ಭೇಟಿಯಾಗಿತ್ತು. ಏಕೆಂದರೆ ಒಬ್ಬರಿಗೊಬ್ಬರು ಹಿಂದಿರುಗಿ ನೋಡುತ್ತಾ ಸ್ವಲ್ಪದೂರ ಕ್ರಮಿಸಿ ಹಿಂದಿರುಗಿ ಒಬ್ಬರಿಗೊಬ್ಬರು ಹೆಸರು ಕರೆದಿದ್ದೆವು. ಆ ನಂತರ ಅವನು ಮತ್ತೆ ಸಿಕ್ಕಿಲ್ಲ. ಅವನಿಗೆ ಅಪಘಾತವಾಗಿದ್ದು ತಿಳಿಯಿತಾದರೂ ಮತ್ತೆ ಮನೆ ಬದಲಾಯಿಸಿದರೆಂದು ತಿಳಿಯಿತು. ಆದರೆ ಯಾವ ಸ್ಥಳವೆಂದು ತಿಳಿಯದೇ ಮತ್ತೆ ಅವನ ಸಂಪರ್ಕ ಸಾಧ್ಯವಾಗಿಲ್ಲ.

೩) ಇದೊಂದು ವಿಚಿತ್ರ ಸ್ನೇಹ ಎಂದರೆ ತಪ್ಪಾಗಲಾರದು. ಕೆಲವು ವರ್ಷಗಳು ಭೇಟಿಯಾದರೆ ಮತ್ತೆ ಒಬ್ಬರಿಗೊಬ್ಬರು ಭೇಟಿಯಾಗದೇ ಇರುವಂತಹ ವಿಚಿತ್ರ ಸ್ನೇಹ. ಯಾವುದೋ ನೆಪದಿಂದ, ಕೆಲವೊಮ್ಮೆ ಪರಹಿತಕ್ಕಾಗಿ ಕೆಲವು ದಿನಗಳು ಅಥವಾ ವರ್ಷಗಳೇ ಸಂಪರ್ಕಿಸದೇ ಇರುವುದು ಇವರ ಗುಣವಾಗಿದೆ. ನಿನಗ್ಯಾಕೆ ತೊಂದರೆ ಕೊಡಬೇಕು ಎಂಬ ಒಕ್ಕಣಿಕೆಯಿಂದಲೇ ಪ್ರಾರಂಭಿಸಿ ಮತ್ತೆ ಸಿಗೋಣ ಎಂದು ಹೇಳಿ ಹೋದವರು ಈ ಲೋಕದಲ್ಲಿಯೇ ಇಲ್ಲವೇನೋ ಎಂಬಂತೆ ನಿಗೂಢವಾಗಿ ಮರೆಯಾಗಿದ್ದರು. ಮತ್ತೆ ಭೇಟಿಯಾಗಿದ್ದು ಸುಮಾರು ಮೂರು ವರ್ಷಗಳ ನಂತರ. ಹೀಗೇ ನಮ್ಮ ಮೈತ್ರಿ ಸಾಗುತ್ತಿದೆ ಎಂದರೆ ... ನಂಬಲಸಾಧ್ಯವಾದ ಕ್ಷಣಗಳಲ್ಲವೇ?


ಹಾಗೆಯೇ ದು:ಖದ, ದುರಂತದ ಘಟನೆಗಳನ್ನೂ ಸಹ ಮರೆಯಲಾಗುವುದಿಲ್ಲ. ನಮ್ಮ ಪ್ರೀತಿಪಾತ್ರರಾದವರ ಬಗೆಗಿನ ಒಡನಾಟದ ಕ್ಷಣಗಳನ್ನು ಹೇಗೆ ಮರೆಯಲು ಸಾಧ್ಯ. ಸದ್ಯಕ್ಕೆ ಇಲ್ಲಿ ದು:ಖದ ವಿಚಾರಗಳನ್ನು ಬರೆಯುವುದು ಬೇಡ ಎನ್ನಿಸಿ ಸಂತಸ ತಂದ ಕ್ಷಣಗಳನ್ನು `ಕ್ಷಣ ಚಿಂತನೆ'ಯ ೫೦ ನೇ ಬ್ಲಾಗಂಚೆಯಲ್ಲಿ ಹಂಚಿಕೊಳ್ಳುತ್ತಿದ್ದೇನೆ. ನಿಮ್ಮೆಲ್ಲರ ಪ್ರೋತ್ಸಾಹದಿಂದ ಇಲ್ಲಿಯವರೆಗೆ ಬರೆಯಲು ಸಾಧ್ಯವಾಗಿದೆ. ಹಾಗಾಗಿ ಈ ಕ್ಷಣವನ್ನು ನಿಮ್ಮೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತಾ ಮುಂದಿನ ಬರವಣಿಗೆಗೆ ಕ್ಷಣ ಯೋಚನೆಯತ್ತ ವಾಲುತ್ತಾ...
ಸಸ್ನೇಹದೊಂದಿಗೆ,

(ಫೋಟೋ: ಚಂದ್ರಶೇಖರ ಬಿ.ಎಚ್., ೨೪.೧೧.೨೦೦3)

6 ಕಾಮೆಂಟ್‌ಗಳು:

ಧರಿತ್ರಿ ಹೇಳಿದರು...

ಸರ್...ನಮಸ್ತೆ. 50ನೇ ಬರಹ ಓದಿದೆ. "ಸವಿ ಸವಿ ನೆನಪು ಸಾವಿರ ನೆನಪು..ಸಾವಿರ ವರುಷಕ್ಕೂ ಸವೆಯದ ನೆನಪು"! ಅಭಿನಂದನೆಗಳು.
-ಧರಿತ್ರಿ

shivu.k ಹೇಳಿದರು...

ಸರ್,

ನಿಮ್ಮ ಐವತ್ತನೇ ಬರಹ ಓದಿದೆ...ಗೆಳೆಯರ ನೆನಪಿನ ಚಿತ್ರಗಳು ಚೆನ್ನಾಗಿವೆ...
ಅಭಿನಂದನೆಗಳು...

ಹೀಗೆ ನೂರು...ಸಾವಿರ...ಮುಂದುವರಿಯಲಿ ಅಭಿಯಾನ...
ಧನ್ಯವಾದಗಳು..

ಕ್ಷಣ... ಚಿಂತನೆ... ಹೇಳಿದರು...

ನಮಸ್ಕಾರ ಧರಿತ್ರಿ ಅವರೆ, ನೀವು ನನ್ನ ಬ್ಲಾಗಿಗೆ ಕ್ಷಣ ಭೇಟಿ ಕೊಟ್ಟದ್ದಕ್ಕೆ ನಿಮಗೆ ಸುಸ್ವಾಗತ. ಹಾಗೂ ಸವಿನುಡಿಯನ್ನು ಹಂಚಿಕೊಂಡದ್ದು ಸಂತಸ ತಂದಿತು. ಹೀಗೆಯೇ ಬರುತ್ತಿರಿ ಹಾಗೂ ನಿಮ್ಮ ಅನಿಸಿಕೆಗಳನ್ನು ಬರೆಯುತ್ತಿರಿ.

ನಿಮ್ಮ ಬ್ಲಾಗಿನಲ್ಲಿನ ಲೇಖನಗಳನ್ನು ಓದಿ ನನ್ನ ಅನಿಸಿಕೆಗಳನ್ನು ತಿಳಿಸುತ್ತೇನೆ.

ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಶಿವು ಅವರೆ, ನಿಮ್ಮ ಹಾರೈಕೆಗಳಿಗೆ ಧನ್ಯವಾದಗಳು.

ಸಾರಿ ಸರ್‌, ನಿಮ್ಮಗಳ ಸಂದರ್ಶನ ನೋಡಲು ಆಗಲಿಲ್ಲ. ಕಾರಣ: ಕೇಬಲ್ ನಾನು ಹಾಕಿಸಿಲ್ಲ.

ಒಮ್ಮೆ ನಿಮ್ಮನ್ನು ಭೇಟಿಯಾಗುವಾಸೆ.. ಸಿಗೋಣ (ನಿಮ್ಮ ನಂಬರ್‌ ಕೊಟ್ಟಿದ್ದೀರಿ)

ಧನ್ಯವಾದಗಳು ಮತ್ತೊಮ್ಮೆ,

Ittigecement ಹೇಳಿದರು...

ಕ್ಷಣ ಚಿಂತನೆ....

ಸಹಪಾಠಿಗಳ..
ವಿಧ್ಯಾರ್ಥಿ ಮಿತ್ರರ ನೆನಪಿನ ನಿಮ್ಮ ಲೇಖನ ಚೆನ್ನಾಗಿದೆ...

ನಿಮ್ಮ ಅರ್ಧ ಶತಕ ನೂರಾಗಲಿ...
ಸಾವಿರವಾಗಲಿ...

ಅಭಿನಂದನೆಗಳು...

ಸಾಗರದಾಚೆಯ ಇಂಚರ ಹೇಳಿದರು...

ಕ್ಷಣ ಚಿಂತನೆ....
೫೦ ನೆ ಬ್ಲಾಗ್ಗೆ ಅಭಿನಂದನೆಗಳು, ಹಳೆಯ ನೆನಪುಗಳು ಯಾವಾಗಲೂ ಕಾಡಿಸುತ್ತಿರುತ್ತವೆ,