ಶನಿವಾರ, ಮೇ 2, 2009

ದೃಷ್ಟಿ

ನಿನ್ನೆ (೧.೫.೨೦೦೯) ಮಧ್ಯಾಹ್ನ ಸುಮಾರು ೩.೩೦ ರ ವೇಳೆ. ಹಲಸೂರು ರಸ್ತೆಯ ಸಿಗ್ನಲ್‌. ನಾನಿದ್ದ ಬಸ್ಸೂ ಸಹ ಸಿಗ್ನಲ್ಲಿನಲ್ಲಿ ನಿಂತಿತ್ತು. ಸಣ್ಣಗೆ ಮಳೆಹನಿ. ವಿಂಡೋ ಸೀಟಿನಲ್ಲಿ ಕುಳಿತಿದ್ದೆ. ಕಿಟಕಿಯ ಗಾಜನ್ನು ಮುಂದಕ್ಕೆ ಸರಿಸುವ ಎಂದು ತಿರುಗಿದೆ. ಆ ದೃಶ್ಯ ಕಣ್ಣಿಗೆ ಬಿತ್ತು. ಗಾಜನ್ನು ಮರೆತೆ. ಕಿಟಕಿಯಾಚೆ ಇಣುಕಿದೆ.
***
ಆಗಿದ್ದಿಷ್ಟೆ. ಮಾನವೀಯತೆಯ ದೃಶ್ಯ. ಅಲ್ಲೊಬ್ಬ ಅಂಧಬಾಲಕ ರಸ್ತೆ ದಾಟಿಸುವಂತೆ ರಸ್ತೆಯಲ್ಲಿನ ಜನರಲ್ಲಿ ಸಹಾಯಕ್ಕಾಗಿ ಕೇಳುತ್ತಿದ್ದ. ಅದೇ ಸಮಯಕ್ಕೆ ಸ್ಕೂಟಿಯಲ್ಲಿ ಬಂದ ಒಬ್ಬ ಯುವತಿ ಅವನನ್ನು ಕಂಡು ಅವನಿಗೆ ಅಲ್ಲಿಯೇ ಇರಲು ಹೇಳಿ, ಸಿಗ್ನಲ್‌ ದಾಟಿ ತನ್ನ ಸ್ಕೂಟಿಯನ್ನು ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದಳು. ನಂತರ ಆ ಹುಡುಗನ ಬಳಿಗೆ ಬಂದು, ಕೈ ಹಿಡಿದು ನಿಧಾನವಾಗಿ ಅತ್ತಿತ್ತ ಬರುತ್ತಿದ್ದ ವಾಹನಗಳಿಗೆ ಕೈ ತೋರಿಸುತ್ತಾ ರಸ್ತೆ ದಾಟಿಸಿದಳು. ನನಗನ್ನಿಸಿದ್ದು, ಅಷ್ಟೊಂದು ಜನರು ರಸ್ತೆಯಲ್ಲಿ ಓಡಾಡುತ್ತಿದ್ದರೂ ಒಬ್ಬರೂ ಸಹ ಬರಲಿಲ್ಲ. ಅವರುಗಳೂ ಸಹ ಹುಡುಗನ ಕೋರಿಕೆಯನ್ನು ಗಮನಿಸದೇ ಆ ಹುಡುಗನ ಯಾವ ರಸ್ತೆಯ ಆ ಭಾಗಕ್ಕೆ ಹೋಗಬೇಕಿತ್ತೋ ಅತ್ತ ಕಡೆಗೇ ಹೋಗುತ್ತಿದ್ದರು. ಆದರೆ, ಗಾಡಿಯಲ್ಲಿ ಬಂದ ಆ ಯುವತಿ ಆ ಕ್ಷಣದಲ್ಲಿ ಸ್ಪಂದಿಸಿದ್ದು ನಿಜಕ್ಕೂ ಅಚ್ಚರಿಯಾಗಿತ್ತು. ಮಾನವೀಯತೆಯನ್ನು ಬರಿಯ ಮಾತಿನಲ್ಲಿ ಹೇಳದೇ ಕೃತಿಯಲ್ಲಿ ತೋರಿದ್ದಕ್ಕೆ ಆಕೆಗೆ ಹ್ಯಾಟ್ಸ್‌ ಆಫ್.
* * *
ನಾನು ಆಗಿನ್ನೂ ಹೈಸ್ಕೂಲ್‌ ಓದುತ್ತಿದ್ದೆ. ಎನ್.ಆರ್‍.ಕಾಲೋನಿ ರಾಯರಮಠದಲ್ಲಿ ಅಭಿಷೇಕದ ತೀರ್ಥ, ಪ್ರಸಾದ ತೊಗೊಂಡು ಮನೆಗೆ ಸೈಕಲ್ಲಿನಲ್ಲಿ ಹೊರಡುತ್ತಿದ್ದೆ. ಸರ್‌, ನನ್ನನ್ನು ತ್ಯಾಗರಾಜನಗರ ಪೋಸ್ಟ್‌ಆಫೀಸ್‌ ಹತ್ತಿರ ಬಿಡಿ ಎಂದು ಕೇಳಿದ ಆ ವ್ಯಕ್ತಿ. ನಾನೂ ಸಹ ಅದೇ ದಾರಿಯಲ್ಲಿ ಹೋಗಬೇಕಿತ್ತು. ಆದರೆ, ಸೈಕಲ್ ಇದೆ. ಹೇಗೆ? ಯೋಚಿಸಿದೆ. ಬನ್ನಿ ಸರ್‌ ಎಂದು ಅವರಿಗೆ ಹೇಳಿ, ಅವರ ಕೈಲಿದ್ದ ಬುಟ್ಟಿಯನ್ನು ತೊಗೊಂಡೆ. ಸೈಕಲ್ಲಿ ರಾಯರಮಠದ ಹತ್ತಿರವೇ ಬಿಟ್ಟಿದ್ದೆ. ಅವರ ಜೊತೆ ಹೆಜ್ಜೆ ಹಾಕುತ್ತಾ ಸಾಗಿದೆ. ರಸ್ತೆ ದಾಟುವಾಗ ಇಲ್ಲಿ ಬೇಡ, ಮುಂದೆ ಹೋಗೋಣ ಎಂದರು. ನನಗೆ ಅಚ್ಚರಿ. ದಾರಿಯಲ್ಲಿ ಒಂದು ಸೀಮೆಎಣ್ಣೆ ಗಾಡಿ ಇದೆಯಾ? ಕೇಳಿದರು. ಇಲ್ಲ ಎಂದೆ. ಇಲ್ಲಿ ದಿನ ಬೆಳಗ್ಗೆ ನಿಂತಿರುತ್ತೆ ಎಂದರು. ಮುಂದೆ ಸಾಗಿದೆವು. ಒಂದೆರಡು ರಸ್ತೆ ದಾಟುತ್ತಿದ್ದಂತೆಯೇ ಬಲಕ್ಕೆ ತಿರುಗಿದರೆ ಒಂದು ಕಾರು ನಿಂತಿರುತ್ತೆ, ಅದರ ಮುಂದಿನ ಮನೆ ಎಂದು ಹೇಳುತ್ತಾ ನಡೆದರು. ನಾನು ಅವರನ್ನು ಮನೆಯವರೆಗೂ ಬಿಡುವು ಉದ್ದೇಶವಿಲ್ಲದಿದ್ದರೂ ಅದೇನೋ ಅಚ್ಚರಿಯಿಂದ ಜೊತೆಯಲ್ಲಿಯೇ ಮನೆಯವರೆಗೆ ಹೋಗಿ ಬಿಟ್ಟು ವಾಪಸ್ಸು ಬಂದು ಸೈಕಲ್ಲಿನಲ್ಲಿ ಮನೆಗೆ ಹೋಗಿದ್ದು ಈ ಒಂದು ಮೇಲಿನ ಘಟನೆಯಿಂದ ನೆನೆಪಾಯಿತು. ಇನ್ನೊಮ್ಮೆ ಶ್ರೀ ರಾಮಕೃಷ್ಣ ಮಠದ ಹತ್ತಿರವೂ ಇದೇ ರೀತಿಯಲ್ಲಿ ರಸ್ತೆ ದಾಟಿಸಿದ್ದ ನೆನಪೂ ಕಾಡಿತ್ತು.
***
ಇಂತಹ ಅನುಭವಗಳು ಅವಿಸ್ಮರಣೀಯವಾಗಿ ಉಳಿದಿರುತ್ತದೆ ಎಂದು ನನ್ನ ಅನಿಸಿಕೆ. ನಿಮ್ಮ ದೃಷ್ಟಿಯಲ್ಲಿ? ಕ್ಷಣ ಯೋಚಿಸಿ ಅಂಚಿಸಿ.

2 ಕಾಮೆಂಟ್‌ಗಳು:

shivu.k ಹೇಳಿದರು...

ಸರ್,

ಇಂಥ ನೆನಪುಗಳು ಸದಾ ನಮಗೆ ಬೇಕು...ಇವೇ ಅಲ್ಲವೇ ನಮಗೆ ಜೀವನ್ಮುಖಿ ಚಿತ್ರಗಳಾಗುವುದು....

ಧನ್ಯವಾದಗಳು..

ಕ್ಷಣ... ಚಿಂತನೆ... ಹೇಳಿದರು...

ಶಿವು ಸರ್‍, ಧನ್ಯವಾದಗಳು.