ಬುಧವಾರ, ಆಗಸ್ಟ್ 12, 2009

ನಾ ಎಡಚನಾದರೇನು? ನಾನು ನಾನೇ, ನನ್ನ ಶೈಲಿಯೇ ಬೇರೆ...

ನಾ ಎಡಚನಾದರೇನು? ನಾನು ನಾನೇ, ನನ್ನ ಶೈಲಿಯೇ ಬೇರೆ...

ಒಬ್ಬ ಪುಟ್ಟ ಹುಡುಗ/ಗಿ ಚಿಲ್ಲರೆಯನ್ನೋ, ಪುಸ್ತಕವನ್ನೋ ಕೊಡುವಾಗ ಅಥವಾ ತೆಗೆದುಕೊಳ್ಳುವಾಗ ಎಡಹಸ್ತವನ್ನು ಚಾಚಿದರೆ ನಿಮಗೇನನ್ನಿಸಬಹುದು. ಬೈಯಬೇಕೆಂದು ಕೊಂಡು ಹಾಗೂ ಬೈದೂ ಬಿಡುತ್ತೀರಿ, ಅಲ್ಲವೇ? ಹೌದು. ಕೆಲವರಿಗೆ ಎಡಹಸ್ತವೇ ಪ್ರಮುಖವಾಗಿ ಪ್ರತಿಯೊಂದು ವಿಚಾರದಲ್ಲಿಯೂ ಮುಂಚೂಣಿಯಲ್ಲಿ ಬರುತ್ತದೆ. ಆಗೆಲ್ಲಾ, ನಾವೇನಾದರೂ... ಲೋ... ಎಡಚ ಎಂದು ಯಾರಿಗಾದರೂ ಎಲ್ಲದಕ್ಕೂ ಎಡಹಸ್ತ ಉಪಯೋಗಿಸುವವರಿಗೆ ಬೈಯ್ದರೆ ಬೇಸರಿಸಿಕೊಂಡು ಜಗಳಕ್ಕೆ ನಿಲ್ಲದವರಾರು? ಅಥವಾ ಮನದಲ್ಲಿಯೇ ಅವರೂ ನಿಮಗೆ ಬೈಗುಳಿಸಿದವರಾರು? ಆದರೆ, ಎಡಹಸ್ತವನ್ನು ಉಪಯೋಗಿಸುವ ಪರಿಯು ಅವರ ಅರಿವಿಗೇ ಬರದಂತೆ ಇರುವ ಒಂದು ಸ್ವಭಾವ ಅಥವಾ ಅಭ್ಯಾಸವಾಗಿರಲೂ ಬಹುದು ಅಥವಾ ಅನುವಂಶೀಯವಾಗಿರಲೂ ಬಹುದು.

ಈ ವ್ಯಕ್ತಿಗಳು ಕೆಲವೊಮ್ಮೆ ಕೆಲವು ಕೆಲಸಗಳನ್ನು ನಿಧಾನಗತಿಯಲ್ಲಿ ಮಾಡುತ್ತಾರೆಂದ ಮಾತ್ರಕ್ಕೆ ಅವರುಗಳನ್ನು ನಿರ್ಲಕ್ಷಿಸುವುದು ಅಥವಾ ಅವರುಗಳಿಗೆ ಬೈಯ್ಯುವುದು, ಅವಮಾನಿಸುವುದು ಸರಿಯಲ್ಲ. ಉದಾಹರಣೆಗೆ, ನಾವು (ಬಲಗೈಯವರು) ಉಪಯೋಗಿಸುವ ಕತ್ತರಿಯನ್ನು ಅವರುಗಳು ಬಳಸುವಾಗ ಸರಿಹೊಂದುವುದಿಲ್ಲ. ಹಾಗೆಯೇ, ನಾವು ಬಳಸುವ ಶಾಯಿಯ ಲೇಖನಿ (ಇಂಕ್‌ ಪೆನ್‌) ಮತ್ತು ಅದರ ನಿಬ್ ಅವರು ಬಳಸುವಾಗ ಪೇಪರನ್ನೆ ತೂರಿ ಹರಿಯಬಹುದು. ಇವೆಲ್ಲ ಅವರಿಗೆ ಸ್ವಲ್ಪ ಹೊಂದಿಕೊಂಡು ಬಳಸುವಾಗ ನಿಧಾನವಾಗುವುದು. ನಾವೇ ಒಂದು ಕತ್ತರಿಯನ್ನು ಎಡಗೈಯಲ್ಲಿ ಹಿಡಿದು ಬಟ್ಟೆ ಅಥವಾ ಕಾಗದ ಕತ್ತರಿಸಲು ಪ್ರಯೋಗಿಸಿದರೆ ತಡವರಿಸಿ, ಸರಿಯಾದ ರೀತಿಯಲ್ಲಿ ಕತ್ತರಿಸಲು ಬಹಳ ಕಷ್ಟವಾಗುತ್ತದೆ. ಅದನ್ನೇ ಬಲಗೈಯಲ್ಲಿ ಸಲೀಸಾಗಿ ಬಟ್ಟೆಯನ್ನು ನಮಗೆ ಬೇಕಾದ ಆಕಾರ-ಅಳತೆಗೆ ಕತ್ತರಿಸಬಲ್ಲೆವು. ಏಕೆಂದರೆ, ಈ ವಸ್ತುಗಳಂತೆ ಇನ್ನೂ ಅನೇಕ ವಸ್ತುಗಳನ್ನು ಬಲಗೈಯವರಿಗೆಂದು ಮಾಡಿರುವುದು ಸ್ಪಷ್ಟವಾಗುತ್ತದೆ.

ವಾಮಹಸ್ತ ಪ್ರಯೋಗಿಗಳನ್ನು ಇಷ್ಟೊಂದು ಪರವಾಗಿಸಿಕೊಂಡು ಬರೆದಿರುವರಲ್ಲಾ ಎಂದು ನಿಮಗನಿಸಿದರೆ, ಅದಕ್ಕೊಂದು ವಿಶೇಷವಿದೆ ಎನ್ನಬಹುದು. ಆದ್ದರಿಂದ ಅವರುಗಳಿಗೆ ಎಡಚ, ಲೊಡ್ಡೆ ಎಂದು ಮೂದಲಿಸುವುದು, ಇತರೆ ಬೈಗುಳ, ಅವಮಾನ ಮಾಡದೇ ಅವರಲ್ಲಿರುವ ವಿಶೇಷತೆಯನ್ನು ಗುರುತಿಸುವ ಗುಣ ಬೆಳೆಸಿಕೊಂಡರೆ ಹೇಗೆ? ಅಲ್ಲದೇ ಅವರುಗಳಿಗೇ ಒಂದು ವಿಶೇಷ ದಿನವೂ ಅಸ್ತಿತ್ವದಲ್ಲಿದೆ. ಇವೆಲ್ಲವುಗಳ ಬಗ್ಗೆ ಒಂದು ಸ್ಥೂಲ ಮಾಹಿತಿಯನ್ನು ಇಲ್ಲಿ ನಮ್ಮ-ನಿಮ್ಮೆಲ್ಲರಿಗಾಗಿ ಕಲೆಹಾಕಿದ್ದೇನೆ.

ಈ ವಾಮಹಸ್ತರದೇ ಕ್ಲಬ್ಬುಗಳು, ಸಂಘ ಸಂಸ್ಥೆಗಳೂ ಇವೆ. ಅವರುಗಳು ವಾಮಹಸ್ತರ ದಿನವನ್ನೂ ಆಚರಿಸುತ್ತಾರೆ. ಆದರೆ, ಈ ದಿನಾಚರಣೆಯು ಅಷ್ಟಾಗಿ ಪತ್ರಿಕೆಯಲ್ಲಿ, ಟಿವಿಯಲ್ಲಿ, ರೇಡಿಯೋಗಳಲ್ಲಿ ಪ್ರಚಾರವಾಗುವುದು ಅತೀ ಕಡಿಮೆಯೆನ್ನಬಹುದು. ಇವರುಗಳೂ ಸಹ ವಾಮಹಸ್ತದವರಿಗೆಂದೇ ಅನೇಕ ವಿಧದ ಆಟೋಟ, ಪ್ರಶ್ನಾವಳಿ ಇತ್ಯಾದಿಗಳನ್ನು ನಡೆಸುತ್ತಾರೆ. ಅವರುಗಳಿಗೆ ಸುಲಭವಾಗಿ ಉಪಯೋಗಿಸಲು ಅನುಕೂಲವಾಗುವಂತಹ ದಿನನಿತ್ಯದ ಪರಿಕರಗಳನ್ನೂ ಸಹ ತಯಾರಿಸಿ, ಮಾರಾಟ ಮಾಡುತ್ತಾರೆ.

೧೯೭೬ ರಲ್ಲಿ ಇಂಟರ್‌ನ್ಯಾಷನಲ್ ಲೆಫ್ಟ್ ಹ್ಯಾಂಡರ್‍ಸ್ ಎಂಬ ಸಂಸ್ಥೆಯು ಮೊದಲಬಾರಿಗೆ ಆಗಸ್ಟ್ ೧೩ ರಂದು ಈ ದಿನಾಚರಣೆಯನ್ನು ಆಚರಿಸಲು ರಜಾದಿನವನ್ನಾಗಿ ಮಾಡಿ ಘೋಷಿಸಿತು. ಈ ಸಂಸ್ಥೆಯು ವಾಮಹಸ್ತದವರಿಗೆಂದೇ ಅನೇಕ ಉಪಯೋಗಕಾರಿ ವಸ್ತುಗಳನ್ನು ಮೊದಲಿನಿಂದಲೂ ಪರಿಚಯಿಸುತ್ತ ನಂತರ ಮಾರುಕಟ್ಟೆ ಪ್ರವೇಶಿಸಿತಂತೆ. ಇದೀಗ ಪ್ರಪಂಚದಾದ್ಯಂತ ಸಂಘ, ಸಂಸ್ಥೆಗಳ ಮೂಲಕ ಹಾಗೂ ಪ್ರತ್ಯೇಕವಾಗಿ (ಇಂಡ್ಯುವಿಡ್ಯುಲ್‌) ಈ ದಿನಾಚರಣೆಯನ್ನು ಆಚರಿಸುವಲ್ಲಿಗೆ ಬಂದು ನಿಂತಿದೆ. ಅವರಿಗೆಂದೇ ಹಲವು ಕ್ರೀಡೆಗಳನ್ನೂ ನಡೆಸುತ್ತಾರಂತೆ.

Thurston's left hand test ಎಂಬುದು ಒಂದು ವಿಶೇಷ ಪರೀಕ್ಷಾವಿಧಾನವೆನ್ನಬಹುದು. ಅದರ ವಿವರಣೆ ಹೀಗಿದೆ: The left-handed brain's mastery of the visual has an important benefit - it can "see" three dimensionally. In Thurston's hand test, you are asked to identify which pictures are of left hands and which are of right hands. Your right-handed brain is at a loss to handle this problem, but your left-handed brain can actually rotate these drawings in imaginary space to solve the test - have a go!

ಅವರುಗಳು ಪ್ರತಿನಿತ್ಯವೂ ತಮಗೆ ಉಪಯೋಗಿಸಲಾಗದ ಅನೇಕ ಪರಿಕರಗಳನ್ನು ತಮಗೆ ಅನುಕೂಲವಾಗುವಂತಹ ರೀತಿಯಲ್ಲಿ ಬದಲಾಯಿಸಿ / ತಯಾರಿಸಿ ಬಳಸಲು ಅನುಕೂಲಗಳನ್ನು ಹಾಗೂ ಜಾಗೃತಿ ಮೂಡಿಸಲು ಸಹಕಾರಿಯಾಗುವಂತಹ ಸಲಹೆ, ಮಾರ್ಗದರ್ಶನ ಮಾಡುತ್ತಾರಂತೆ. ಇದರಲ್ಲಿ, ಕತ್ತರಿ, ಇಂಕ್‌ ಪೆನ್‌, ಸಿಪ್ಪೆ ಹೆರೆಯುವ ಸಾಧನ, ವಾಕಿಂಗ್ ಸ್ಟಿಕ್‌, ಪರ್ಸ್‌ಗಳು, ಸಂಗೀತೋಪಕರಣಗಳು: ಗಿಟಾರ್‌, ಪಿಟೀಲು, ಇತ್ಯಾದಿಗಳೂ ಸೇರಿವೆ. ಅಲ್ಲದೆ, ವಾಮಹಸ್ತ ಉಪಯೋಗಿಸುವ ಮಕ್ಕಳಿಗೆಂದೇ ಸೀಸದಕಡ್ಡಿ, ಬಣ್ಣದ ಪೆನ್ನುಗಳು, ಶಾರ್ಪನರ್‍ (ಸೀಸದಕಡ್ಡಿ ಹೆರೆಯುವ ಸಾಧನ) ಇವುಗಳಷ್ಟೇ ಅಲ್ಲದೆ, ಶೂದಾರ ಕಟ್ಟುವುದಕ್ಕೆ ಬೇಕಾಗುವ ಪರಿಕರಗಳು, ಹೀಗೆ ಅನೇಕ ವಸ್ತುಗಳು ಎನಿಥಿಂಗ್‌ಲೆಫ್ಟ್‌ಹ್ಯಾಂಡೆಡ್‌.ಕೊ.ಯುಕೆ ಎಂಬ ಅಂಗಡಿಯಲ್ಲಿ ಸಿಗುತ್ತವೆ. ಅನೇಕ ಪೋಸ್ಟರುಗಳು ಸಹಾ ವಾಮಹಸ್ತದವರ ಕೀಳರಿಮೆಯನ್ನು ತೊಡೆದುಹಾಕಲು ಸಿಗುತ್ತವೆ. ಅಡಿಗೆ ಮನೆಯ ಪರಿಕರಗಳೊಂದಿಗೆ, ಗಣಕಯಂತ್ರಕ್ಕೆ ಸಂಬಂಧ ಪಟ್ಟವೂ, ಕೈಗಡಿಯಾರಗಳೂ, ವಿಡಿಯೋ ಕ್ಯಾಮೆರಾಗಳು, ಗಾಲ್ಫ್ ಕೋಲುಗಳು ಸಹ ಸಿಗುತ್ತವೆ. (ಇವೆಲ್ಲ ವಿದೇಶಗಳಲ್ಲಿ ವಿಶೇಷವಾಗಿ ಕಂಡುಬರುತ್ತವೆ.) ಈ ವಸ್ತುಗಳ ಮೇಲೆ `ಲೆಫ್ಟಿ' ಎಂದು ಮುದ್ರಿಸಲಾಗಿರುತ್ತದೆ. ಇವುಗಳಲ್ಲದೆ, ಪ್ರತಿ ವರ್ಷವೂ ಆಗಸ್ಟ್ ೧೩ ರಂದು ವಾಮಹಸ್ತದವರ ದಿನಾಚರಣೆಯನ್ನು ಆಚರಿಸಲು ಮಾರ್ಗದರ್ಶನವನ್ನೂ ಸಹ ನೀಡುತ್ತಾರೆ.

ವಾಮಹಸ್ತ ಪ್ರಯೋಗಿಗಳು ಚಿತ್ರಕಲೆಯಲ್ಲಿ ಪರಿಣಿತರೂ ಆಗಿರುತ್ತಾರಂತೆ. ಅವರು ಬರೆಯುವ ಚಿತ್ರಗಳನ್ನು ಬಲಮುಖವಾಗಿ ಚಿತ್ರಿಸುತ್ತಾರಂತೆ (ಫೇಸಿಂಗ್ ಟು ದಿ ರೈಟು). ಅವರುಗುಳು ಇವರುಗಳು ಆಟೋಟಗಳಲ್ಲಿ ಪ್ರವೀಣರಾಗಿರುತ್ತಾರಂತೆ. ಉದಾ: ಟೆನಿಸ್‌, ಈಜು, ಬೇಸ್ಬಾಲ್‌, ಕತ್ತಿವರಸೆ (ಫೆನ್ಸಿಂಗ್) ಇತ್ಯಾದಿ.

ಈ ವಾಮಹಸ್ತವನ್ನು ಉಪಯೋಗಿಸುವವರನ್ನು ತಿದ್ದಲು ಪ್ರಯತ್ನಿಸಬಹುದು. ಆದರೆ ಕೆಲವೊಮ್ಮೆ ಸಾಧ್ಯವಾಗದಿದ್ದಾಗ ಬಲಪ್ರಯೋಗದಿಂದ ಪ್ರಯತ್ನಿಸಿದರೆ, ನಾಲ್ಕನೆಯ ಜಾರ್ಜ್ ದೊರೆಯಂತೆ ಆಗಬಹುದು. ಅಂದರೆ, ಅವರಲ್ಲಿ ಮಾತನಾಡುವಾಗ ಉಗ್ಗುವಿಕೆ, ಗೊಂದಲ, ಇತ್ಯಾದಿಯ ಬೆಳವಣಿಗೆ ಕಾಣಿಸಿಕೊಂಡು ಮುಂದೆ ಹಾನಿಕಾರಕ ಬೆಳವಣಿಗೆಗೆ ಕಾರಣವಾಗಬಹುದು. ಇತ್ತೀಚೆಗೆ ಒಂದು ಪ್ರಸಂಗವನ್ನು ದಿನಪತ್ರಿಕೆಯಲ್ಲಿ ಓದಿದ್ದೆ. ಆ ಹುಡುಗಿ ಬಲಗೈನಲ್ಲಿ ಚಿತ್ರ ಬಿಡಿಸುವುದೋ ಇದ್ದರೆ, ಅವಳ ಎಡಹಸ್ತದಿಂದ ಲೆಕ್ಕಗಳನ್ನು ಮಾಡುವ ಸಾಮರ್ಥ್ಯವಿದೆಯಂತೆ. (ಇದರ ಪೂರ್ಣಪಾಠ ಯಾವ ಪತ್ರಿಕೆಯಲ್ಲಿ ಓದಿದ್ದೆ ಮರೆತುಹೋಗಿದೆ). ಚಿಕ್ಕ ವಯಸ್ಸಿನಿಂದ ಎಡಹಸ್ತ ಪ್ರಯೋಗವನ್ನು ಬಿಡಿಸಲು ಹೋಗಿ ಇದೀಗ ಆಕೆ ಎರಡೂ ಹಸ್ತಗಳಿಂದ ಒಂದೊಂದು ವಿಶೇಷಗಳನ್ನು ಮಾಡಬಲ್ಲಳಂತೆ. ಹೀಗೆಯೇ ಪ್ರಖ್ಯಾಸ ಕಲಾವಿದ ಲಿಯೊನಾರ್ಡೊ ಡ ವಿಂಚಿಯೂ ಎರಡೂ ಹಸ್ತಗಳಿಂದ ಬೇರೆ ಬೇರೆ ವಿಚಾರಗಳನ್ನು ಬರೆಯಬಲ್ಲವನಾಗಿದ್ದನಂತೆ.

ವಾಮಹಸ್ತದವನಾಗಿದ್ದರೇನು, ಅವನ ಬಲಮಿದುಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸಮಾಡುತ್ತದೆ ಎಂದು ಸಂಶೋಧನೆಗಳು ತಿಳಿಸುತ್ತವೆ. ಮತ್ತೂ ಇವರುಗಳ ಗುಣವಿಶೇಷಗಳ ಬಗ್ಗೆ ವೈದ್ಯಕೀಯ ಸಂಶೋಧನೆಗಳು ನಡೆಯುತ್ತಿವೆ. ಜೊತೆಗೆ ಅವರು ವಿಶೇಷ ವ್ಯಕ್ತಿಗಳಾಗಿಯೂ ಜನರ ನಡುವೆ ಬಿಂಬಿತವಾಗಿರುತ್ತಾರೆ. ಅನೇಕ ಕಲಾವಿದರು, ಪ್ರಸಿದ್ಧ ವ್ಯಕ್ತಿಗಳು ಎಡಗೈ ಪ್ರತಿಭಾವಂತರೇ ಆಗಿದ್ದಾರೆ. ಇತ್ತೀಚಿನ ಉದಾಹರಣೆಗಳನ್ನು ಕೊಡುವುದಾದರೆ, ನಮ್ಮ ಕನ್ನಡ ಚಲನಚಿತ್ರರಂಗದ ಸಾಹಸ ಸಿಂಹ ಡಾ ವಿಷ್ಣುವರ್ಧನ್ ಅವರು. ಹಾಗೆಯೇ ಹಿಂದಿ ಚಿತ್ರರಂಗದಲ್ಲಿನ ದಿ. ಸಂಜೀವ್‌ ಕುಮಾರ್‌, ಬಿಗ್‌ಬಿ ಅಮಿತಾಭ್ ಮತ್ತು ಅವರ ಪುತ್ರ ಅಭಿಷೇಕ್‌ ಬಚ್ಚನ್, ಮಹಾಭಾರತದ ದುರ್ಯೋಧನ ಪಾತ್ರಧಾರಿ ಪುನೀತ್‌ ಇಸ್ಸಾರ್‌ ಮುಂತಾದವರು. ನಮ್ಮ ಕ್ರಿಕೆಟ್ ರಂಗದಲ್ಲಿಯೂ ಸಹ ಸೌರವ್‌ ಗಂಗೂಲಿ, ಯುವರಾಜ್ ಸಿಂಗ್, ದಿನೇಶ್ ಮೊಂಗಿಯಾ, ಜಹೀರ್‌ಖಾನ್‌, ಇತ್ಯಾದಿ...ವಾಮಹಸ್ತದ ಆಟಗಾರರಿದ್ದಾರೆ. ಚಿತ್ರಕಲಾವಿದ ಲಿಯನಾರ್ಡೋ ಡ ವಿಂಚಿ, ಟೆನಿಸ್‌ ಆಟಗಾರ್ತಿ ಮಾರ್ಟಿನಾ ನವ್ರಟಿಲೋವಾ, ಅಮೇರಿಕದ ಈಗಿನ ಅಧ್ಯಕ್ಷ ಬರಾಕ್‌ ಒಬಾಮ, ಟೆನಿಸ್ ಆಟಗಾರ ರ್‍ಯಾಫೆಲ್‌ ನಡಾಲ್ಫ್, ... ಹೀಗೆ ಹೆಸರಿಸುತ್ತಾ ಹೋದರೆ ಅವರ ಸಂಖ್ಯೆ ಅಗಾಧವೆನಿಸುತ್ತದೆ.

ವಾಮಹಸ್ತದವರ ಹಾಗೂ ಅವರ ದಿನಾಚರಣೆಯ ಬಗ್ಗೆ ಸದ್ಯಕ್ಕೆ ಇಷ್ಟು ಸಾಕಲ್ಲವೇ?

ಇಂತಿಷ್ಟು: ನಮ್ಮ ಭಾರತದಲ್ಲಿಯೂ ಸಹ ಇವರುಗಳಿಗಾಗಿ ಒಂದು ಸಂಸ್ಥೆ ಕೆಲಸ ಮಾಡುತ್ತಿದೆ. ಅದರ ಹೆಸರು `ಅಸೋಸಿಯೇಷನ್‌ ಆಫ್ ಲೆಫ್ಟ್‌ಹ್ಯಾಂಡರ್‍ಸ್'. ಇದು ಪುಣೆಯಲ್ಲಿ ತನ್ನ ಕಚೇರಿಯನ್ನು ಹೊಂದಿದೆ. (ಇದರ ಅಂತರ್ಜಾಲ ತಾಣದ ವಿಳಾಸವೇನೋ ಸಿಗುತ್ತದೆ. ಆದರೆ ಮಾಹಿತಿಯ ಪುಟಗಳು ಕಾರ್ಯನಿರ್ವಹಿಸುತ್ತಿಲ್ಲ).

ಲೇಖನ: ಚಂದ್ರಶೇಖರ ಬಿ.ಎಚ್.
೧೨ನೇ ಆಗಸ್ಟ್ ೨೦೦೯
ಮಾಹಿತಿ: ಅಂತರ್ಜಾಲದಿಂದ ಆಧರಿಸಿದ್ದು.

7 ಕಾಮೆಂಟ್‌ಗಳು:

PaLa ಹೇಳಿದರು...

ಸಕ್ಕತ್ ಲೇಖನ,, ಎಡಗೈ ಕೀಳರಿಮೆ ಹೋಗಲಾಡಿಸುವ ಉತ್ತಮ ಬರಹ.

Savitha.B.C ಹೇಳಿದರು...

ಹಲೋ ಚಂದ್ರು ಸರ್, ಎಡಗೈ ಬಗ್ಗೆ ಅತ್ಯಂತ ಒಳ್ಳೆಯ ಬರಹ..........

ಕ್ಷಣ... ಚಿಂತನೆ... ಹೇಳಿದರು...

ಪಾಲ ಹಾಗೂ ಸವಿತಾ ಅವರೆ, ಲೇಖನ ನಿಮಗೆ ಇಷ್ಟವಾಗಿದ್ದಕ್ಕೆ ಧನ್ಯವಾದಗಳು.

ಚಂದ್ರು

Shweta ಹೇಳಿದರು...

ಓಹ್ ತುಂಬಾ ನವೀನವಾದ ಕಾನ್ಸೆಪ್ಟ್ .ತುಂಬಾ ಮಾಹಿತಿ ಕಲೆಹಾಕಿದ್ದೀರಾ ...ನಾನೊಮ್ಮೆ ಎಡಗೈಯಲ್ಲಿ ಬರೆಯಲು ಟ್ರೈ ಮಾಡಿದ್ದೆ ,ಒಂದಿಷ್ಟು ಹೋಂವರ್ಕ್ ಮಾಡಿದ್ದೆ ಅದರ ಬಗ್ಗೆ...ಒಳ್ಳೆಯ ಬರಹ ಸರ್.
ಧನ್ಯವಾದಗಳು

shivu.k ಹೇಳಿದರು...

ಕ್ಷಣ ಚಿಂತನೆ ಸರ್,

ವಾಮಹಸ್ತದವರ ಬಗ್ಗೆ ಎಷ್ಟೊಂದು ಮಾಹಿತಿಯನ್ನು ಕಲೆಹಾಕಿದ್ದೀರಿ...ಜೊತೆಗೆ ಉತ್ತಮವಾಗಿ ವಿವರಿಸಿದ್ದೀರಿ...

ಅವರಿಗೂ ಸಂಘ ಸಂಸ್ಥೆಗಳಿವೆ ಅಂತ ತಿಳಿದು ಅಶ್ಚರ್ಯವಾಯಿತು...ಮತ್ತು ನಾಳೆ [ಆಗಷ್ಟ್ ೧೩]ಅವರ ದಿನವೇ..ಹಾಗಾದರೆ ಅವರಿಗೊಂದು ವಿಷ್ ಮಾಡೋಣ...
ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಶ್ವೇತಾ ಅವರೆ, ಲೇಖನ ಇಷ್ಟಪಟ್ಟಿದ್ದೀರಿ. ಧನ್ಯವಾದಗಳು. ನಿಮ್ಮ ಪ್ರಯತ್ನವೂ ಶ್ಲಾಘನೀಯ. ನಾನೂ ಕೆಲವೊಮ್ಮೆ ಎಡಗೈಯಲ್ಲಿ ಬರೆಯಲು ಯತ್ನಿಸಿದ್ದೆ. ಕೆಲವಾರು ಅಕ್ಷರಗಳನ್ನು ಸುಲಭವಾಗಿ ಬರೆಯಲು ಆದರೂ ಮತ್ತೆ ಕೆಲವನ್ನು ಬರೆಯುವಾಗ ಹಾಳೆಯಲ್ಲಿ ರಂಧ್ರವಾಗುತ್ತಿತ್ತು ಇಲ್ಲವೇ ಹರಿದು ಹೋಗುತ್ತಿತ್ತು.

ಕ್ಷಣ... ಚಿಂತನೆ... ಹೇಳಿದರು...

ಶಿವು ಸರ್‍, ಹೌದು ಅವರಿಗೂ ಒಂದು ದಿನವಿದೆಯೆಂದು ನನಗೆ ತಿಳಿದದ್ದು ಕೆಲವು ವಾರಗಳ ಹಿಂದೆ. ನಿಮ್ಮ ಶುಭಾಶಯಗಳೊಂದಿಗೆ, ನಮ್ಮದೂ ಇರಲಿ.

ಧನ್ಯವಾದಗಳು.