ಸೋಮವಾರ, ಆಗಸ್ಟ್ 24, 2009

ಹೀಗೊಬ್ಬ ಸ್ಫೂರ್ತಿಯ ಚಿಲುಮೆ... ನಿಕ್‌!!

ಹೀಗೊಬ್ಬ ಸ್ಫೂರ್ತಿಯ ಚಿಲುಮೆ... ನಿಕ್‌!!

ಶಿವಪ್ಪ ಕಾಯೋ ತಂದೆ...
ಅಥವಾ
ಅಣ್ಣಯ್ಯ, ಅಮ್ಮಯ್ಯ, ಧರ್ಮಾನೇ ತಾಯಿ ತಂದೆ...
ಅಥವಾ
ಈ ಲೋಕದಿಂದ ದೂರನಾದೆ ಏಕೆ ಆತ್ಮನೇ...

ಇಂತಹ ಹಾಡುಗಳನ್ನು ರೈಲಿನಲ್ಲಿ ಪರವೂರುಗಳಿಗೆ ಪ್ರಯಾಣಿಸುವಾಗ ಹಾಡುತ್ತಾ ಬೇಡುತ್ತಾ ಬರುವವರಿಂದ ಕೇಳಿರುತ್ತೀರಿ. ಆಗೆಲ್ಲ ಏನನಿಸಿರಬಹುದು. ಪಾಪ, ಕಣ್ಣುಗಳಿಲ್ಲವೆಂದೋ, ಕೈ ಊನವೆಂದೋ, ಕಾಲುಗಳಲ್ಲಿ ಶಕ್ತಿಯಿಲ್ಲವೆಂದೋ ಏನೋ ಒಂದು ಅನುಕಂಪದ ಅಲೆ ನಿಮ್ಮಲ್ಲಿ ಬಂದಿರುತ್ತದೆ ಅದರ ಜೊತೆಗೆ ನಿಮ್ಮಿಂದ ೧-೨ ರೂಪಾಯಿ ದಾನವಾಗಿರುತ್ತದೆ. ಇಲ್ಲಿ ದಾನ ಮಾಡಬೇಡಿ ಇಂತಹವರಿಗೆ ಎಂದು ನಾನು ಆಕ್ಷೇಪಿಸುವುದಿಲ್ಲ. ಶರೀರದಲ್ಲಿನ ಒಂದೋ ಎರಡೋ ಅಂಗ ಊನವಾಗಿರಬಹುದು ಎಂದ ಮಾತ್ರಕ್ಕೆ ಬದುಕನ್ನು ಈ ರೀತಿ ನಡೆಸಬೇಕೆ? ನಿಜಕ್ಕೂ ವಿಷಾದನೀಯ.

ಮೈಸೂರಿನಿಂದ ಬೆಂಗಳೂರಿಗೆ ರೈಲಿನಲ್ಲಿ ಬರುತ್ತಿರುವಾಗ, ಚನ್ನಪಟ್ಟಣ ಸ್ಟೇಷನ್‌ಲ್ಲಿ ಒಬ್ಬ ಬಾಲಕ ಬೋಗಿಯಲ್ಲಿದ್ದ ಕಸವನ್ನು ಬಟ್ಟೆಯಿಂದ ಗುಡಿಸುತ್ತಾ ಕೈ-ಕಾಲುಗಳನ್ನು ತಿರುಚಿರುವುದನ್ನು ತೋರಿಸುತ್ತಾ ಇದ್ದ. ಕೆಲವರು ಅವನಿಗೆ ಹಣ ನೀಡುತ್ತಿದ್ದರು. ಅದೇ ಸಮಯದಲ್ಲಿ ಒಬ್ಬ ಪುಟ್ಟ ಹುಡುಗ ಈತನಿಗೆ ರೇಗಿಸಿದಾಗ, ಏನೋ ಅದು ರೋಪು, ಲೈಫ್ ಬಾಯಿ ಸೋಪು... ಎಂದು ಈ ಕ್ಲೀನ್‌ಮಾಡುತ್ತಿದ್ದ ಹುಡುಗ ಕಿರುಚಿದ. ಒಂದು ತಂಪುಕನ್ನಡಕ ಹಾಕಿ, ಅದ್ಯಾವುದೋ ಕನ್ನಡ ಹಾಡು (ಅರ್ಥವಿಲ್ಲದ ಸಾಹಿತ್ಯ) ಹಾಡುತ್ತಾ... ಕುಳಿತಲ್ಲಿಂದಲ್ಲೇ ವಿವಿಧ ಭಂಗಿಯಿಂದ ಅಲ್ಲಿದ್ದವರಿಗೆ ಅನುಕಂಪ ಮೂಡುವಂತೆ, ಮನರಂಜನೆ ನೀಡುತ್ತಿರುವಂತೆ ಬಿಂಬಿಸುತ್ತಾ ಹಣ ಕೇಳುತ್ತಿದ್ದ.... ತುಂಬಾ ಬೇಸರವಾಯಿತು. ಅಲ್ಲಿಗೆ ಆ ವಿಚಾರವನ್ನು ಬಿಟ್ಟುಬಿಟ್ಟಿದ್ದೆ.
ಆದರೆ...
ಮಾರನೆಯ ದಿನ ನನಗೊಂದು ಈ ಮೇಲ್ ಸಂದೇಶ ಬಂದಿತ್ತು. ಅದರಲ್ಲಿ ಒಂದು ಲಿಂಕು. ಅದರಲ್ಲಿನ ಲಿಂಕು ಹೀಗಿತ್ತು... Are You Going to Finish Strong? ಇದರಲ್ಲಿ ಏನಿರಬಹುದು ಎಂದು ಇಣುಕಿದರೆ ಅಲ್ಲಿ ಅಚ್ಚರಿಯಾಗುವಂತಿರುವ ವ್ಯಕ್ತಿಯ ವಿಡಿಯೋ ಚಿತ್ರದ ತುಣುಕುಗಳು.

ಈ ಮೇಲಿನ ವಿಚಾರಗಳಿಂದಾಗಿ, ಈ ವ್ಯಕ್ರಿಯ ಬಗ್ಗೆ ಮಾಹಿತಿಗಳನ್ನು ಹುಡುಕಿ, ರೈಲಿನಲ್ಲಿನ ಘಟನೆಗೂ, ಇಲ್ಲಿರುವ ಸಾಧಕನಿಗೂ ಇರುವ ಜೀವನದ ಒಳನೋಟವನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ವಿಚಾರವಾಗಿ ಇಲ್ಲಿ ಬರೆಯಲು ಯತ್ನಿಸಿದ್ದೇನೆ.

ಆತನ ಹೆಸರು ನಿಕೊಲಾಸ್ ವಾಯಚಿಚ್ (ಉಚ್ಚಾರ Nicholas Vujicich (Voy-a-chich)). ಹುಟ್ಟಿನಿಂದಲೇ ಆತನಿಗೆ ಎರಡೂ ಕೈಗಳು ಹಾಗೂ ಕಾಲುಗಳಿಲ್ಲ. ಇವರ ಮನೆತನದಲ್ಲಿ ಯಾರಿಗೂ ಇಂತಹ ನ್ಯೂನತೆ ಇದ್ದಿಲ್ಲ. ಆದರೂ ಇದೊಂದು ವೈದ್ಯಲೋಕದ ಅಚ್ಚರಿ. ಇಂದು ಆತ ತನ್ನ ಇಂತಹ ಒಂದು ನ್ಯೂನತೆಗಳನ್ನು ಮೆಟ್ಟಿ ತನ್ನ ಬದುಕಿನಲ್ಲಿ ಸಾಧನೆ ಮಾಡಿರುವುದನ್ನು ಕೇಳಿದರೆ/ನೋಡಿದರೆ... ಅಚ್ಚರಿಯೊಂದಿಗೆ, ಹೆಮ್ಮೆಯಾಗುತ್ತದೆ. ಅಲ್ಲದೆ, ಇಂದು ಅವನು ವಿಕಲಾಂಗರೇ ಇರಲಿ ಅಥವಾ ಸರ್ವಾಂಗ ಸುಂದರರೇ ಇರಲಿ ಅವರಿಗೆಲ್ಲ ಸ್ಫೂರ್ತಿ ತುಂಬುವ ಕಾರ್ಯದಲ್ಲಿ ತೊಡಗಿದ್ದಾನೆಂದರೆ ಆತನ ಅಂತಶಕ್ತಿ ಇನ್ನೆಂತಹದಿರಬಹುದು? ನಿಕೊಲಸ್ ಬಗೆಗಿನ ಹೆಚ್ಚಿನ ಪರಿಚಯಕ್ಕಾಗಿ ಈ ತಾಣವನ್ನು ನೋಡಿ. http://www.lifewithoutlimbs.org/index.ಫ್ಪ್
http://www.attitudeisaltitude.com/store-nicksstory.php

ಸುಮಾರು ೧೯ ದೇಶಗಳಲ್ಲಿ ಪ್ರವಾಸ ಮಾಡಿರುವ ಈತ ಕೆಲವೇ ವರ್ಷಗಳ ಹಿಂದೆ ಭಾರತದ ಮುಂಬೈನಗರಕ್ಕೆ ಆಗಮಿಸಿದ್ದ. ಆತ ರಿಕ್ಷಾದಲ್ಲಿ ಪ್ರವಾಸಿಸುತ್ತಿರುವ ವಿಡಿಯೋ ಚಿತ್ರಣವೂ ಇಲ್ಲಿದೆ. http://www.lifewithoutlimbs.org/media-video-results.php?mediaID=77

ಸಾರ್‍, ಕೈ ಇಲ್ಲ, ಕಾಲಿಲ್ಲ ಎಂದು ತಮ್ಮ ತನವನ್ನೇ ಮರೆತು ಮಂದಿಯೊಳಗೆ ಬೇಡುವವರ ಕಂಡಾಗ ಇವನ ಈ ಸಾಧನೆಗಳು ಎಂತಹವರಿಗಾದರೂ ಸ್ಫೂರ್ತಿಯ ಚಿಲುಮೆಯೇ ಆಗುತ್ತವೆ. ನೀವೇನಂತೀರಿ?
ಲೇಖನ: ಚಂದ್ರಶೇಖರ ಬಿ.ಎಚ್.

8 ಕಾಮೆಂಟ್‌ಗಳು:

shivu.k ಹೇಳಿದರು...

ಕ್ಷಣ ಚಿಂತನೆ ಸರ್,

ನಿಕೊಲಾಯ್ ವಾಯ್‍ಚಿಚ್ ನಿಜಕ್ಕೂ ಒಬ್ಬ ಮಹಾನ್ ಸಾಧಕ. ಅವನ ವಿಡಿಯೋವನ್ನು ನೋಡಿದ್ದೇನೆ. ಮತ್ತು ನೀವು ಕೊಟ್ಟ ಲಿಂಕ್‍ ಕೂಡ ನೋಡಿದೆ. ಆತ ರಸ್ತೆ, ರೈಲಿನಲ್ಲಿ ಬಿಕ್ಷೆಬೇಡುವವರಿಗೆ ಮಾತ್ರವಲ್ಲ...ನಮಗೆಲ್ಲರಿಗೂ ಈ ಬದುಕಿನ ಬಗ್ಗೆ ಸ್ಫೂರ್ತಿಯ ಚಿಲುಮೆಯೇ ಸರಿ...
ಧನ್ಯವಾದಗಳು.

ಮಲ್ಲಿಕಾರ್ಜುನ.ಡಿ.ಜಿ. ಹೇಳಿದರು...

ಸರ್,
ನಮ್ಮೆಲ್ಲರಿಗೂ ಸ್ಪೂರ್ತಿಯಂತಿರುವ ನಿಕ್‌ನನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಶಿವು ಸರ್‍, ಆತ ನಿಜಕ್ಕೂ ಎಲ್ಲರಿಗೂ ಸ್ಫೂರ್ತಿತುಂಬುವ ಪರಿಯೇ ಹಾಗಿದೆ. ಧನ್ಯವಾದಗಳು

ಕ್ಷಣ... ಚಿಂತನೆ... ಹೇಳಿದರು...

ಮಲ್ಲಿಕಾರ್ಜುನ ಸರ್‍, ನನಗೆ ಬಂದ ಈ-ಮೇಲ್‌ನಿಂದಾಗಿ ಇದನ್ನು ಬರೆಯಲು ಪ್ರೇರಣೆಯಾಯಿತು. ಧನ್ಯವಾದಗಳು.

PARAANJAPE K.N. ಹೇಳಿದರು...

ಬಹಳ ಚೆನ್ನಾಗಿದೆ ವಿಚಾರ, ನಿಮ್ಮ ಬ್ಲಾಗ್ ಹಿ೦ದೆಯೇ ನೋಡಿದ್ದೇ, ಇವತ್ತು ನೋಡಿ ಕಾಮೆ೦ಟಿಸುವ ಕಾಲ ಕೂಡಿ ಬಂತು, ಇನ್ನು ಬರುತ್ತಿರುವೆ.

ಸಾಗರದಾಚೆಯ ಇಂಚರ ಹೇಳಿದರು...

ಕ್ಷಣ ಚಿಂತನೆ ಸರ್,
ನಿಕ್ ನನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು, ಸಾಧನೆ ಯಾವತ್ತೂ ಸಾಧಕನ ಸೊತ್ತು ಅಲ್ಲವೇ?

ಕ್ಷಣ... ಚಿಂತನೆ... ಹೇಳಿದರು...

ಪರಾಂಜಪೆ ಸರ್‍, ಸ್ವಾಗತ. ಹೀಗೆಯೆ ಬರುತ್ತಿರಿ, ನಿಮ್ಮ ಪ್ರೋತ್ಸಾಹವೇ ಬರೆಯಲು ಪ್ರೇರಣೆ. ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಗುರುಮೂರ್ತಿಯವರೆ, ನಿಮ್ಮ ಮಾತು ನಿಜ. ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹೀಗೆಯೇ ಬರುತ್ತಿರಿ.