ಮಂಗಳವಾರ, ಸೆಪ್ಟೆಂಬರ್ 1, 2009

ಮನಸು ಸಾವಿರ ಕನ್ನಡಿಯ ಮನೆಯಂತೆ...

ಇದೊಂದು ಜಪಾನೀ ಜಾನಪದ ಕಥೆ.

ಬಹಳ ವರ್ಷಗಳ ಹಿಂದೆ ಒಂದು ಸಣ್ಣಹಳ್ಳಿ. ಆ ಹಳ್ಳಿಗೆ ಸ್ವಲ್ಪ ದೂರದಲ್ಲಿ ಹೆಸರಾಂತ ಸಾವಿರಕನ್ನಡಿಯ ಮನೆಯೊಂದಿತ್ತು. ಒಂದು ಪುಟ್ಟ ನಾಯಿಯು ಸದಾ ಸಂತೋಷದಿಂದ ಇರುತ್ತಿತ್ತು. ಅದಕ್ಕೆ ಈ ಮನೆಯ ವಿಚಾರ ತಿಳಿಯಿತು. ಅದನ್ನು ನೋಡಿಬರುವ ಆಸೆಯಿಂದಾಗಿ ಹಳ್ಳಿಗೆ ಹೊರಟಿತು. ಹಳ್ಳಿಯಲ್ಲಿನ ಆ ಮನೆಯ ಬಳಿಗೆ ಬಂದಿತು. ಆ ಮನೆಯನ್ನು ನೋಡಿದ ಕೂಡಲೇ ಕುಣಿದಾಡುತ್ತಾ, ತನ್ನೆರಡು ಪುಟ್ಟ ಕಿವಿಗಳನ್ನು ನೆಟ್ಟಗಿರಿಸುತ್ತಾ, ಬಾಲವನ್ನಾಡಿಸುತಾ ಮೆಟ್ಟಿಲನ್ನು ಹತ್ತಿತು. ಆಗ ಅಲ್ಲಿರುವ ಕನ್ನಡಿಗಳಲ್ಲಿ ತನ್ನಂತೆಯೇ ಇರುವ, ಕಿವಿಗಳನ್ನು ನೆಟ್ಟಗಿರಿಸಿ, ಬಾಲವಾಡಿಸುತ್ತಿರುವ ಸಾವಿರ ಪುಟ್ಟ ನಾಯಿಗಳು ಕಂಡುಬಂದವು. ಇದು ಮತ್ತಷ್ಟು ಸಂತಸದಿಂದ ಕುಣಿದಾಡಿತು. ಕನ್ನಡಿಯಲ್ಲಿನ ನಾಯಿಗಳೂ ಅದಕುತ್ತರ ಕೊಡುವಂತೆ ಕುಣಿದವು. ಈ ನಾಯಿಗೆ ಬಹಳ ಸಂತಸವಾಗಿ, `ಇದು ಅದ್ಭುತವಾದ ಮನೆ. ಮತ್ತೆ ಇಲ್ಲಿಗೆ ಬರುತ್ತೇನೆ', ಎಂದು ಖುಷಿಯಿಂದ ಹೊರಟುಹೋಯಿತು.'

ಅದೇ ಹಳ್ಳಿಯಲ್ಲಿ ಮತ್ತೊಂದು ಪುಟ್ಟ ನಾಯಿಯಿತ್ತು. ಈ ನಾಯಿಯು ಆ ನಾಯಿಯಂತಿರಲಿಲ್ಲ. ಇದು ಸದಾ ದು:ಖದಲ್ಲಿರುವಂತಿತ್ತು. ಇದೂ ಸಹ ಸಾವಿರ ಕನ್ನಡಿಯ ಮನೆಗೆ ಹೊರಟಿತು. ಮೆಟ್ಟಿಲನ್ನು ಹತ್ತುತ್ತಾ ತಲೆಯನ್ನು ತಗ್ಗಿಸಿ, ಕಿವಿಗಳನ್ನು ಕೆಳಗೆ ಜೋತುಬೀಳಿಸುತ್ತಾ, ಬಾಲವನ್ನೂ ಜೋತಾಡಿಸಿಕೊಂಡು ಕನ್ನಡಿಯ ಮನೆಯಲ್ಲಿ ಇಣುಕಿತು. ಅಲ್ಲಿ ಇದರಂತೇ ಇರುವ ಸಾವಿರ ನಾಯಿಗಳು ಕಾಣುತ್ತಿವೆ. ಇದಕ್ಕೆ ಆ ನಾಯಿಗಳಲ್ಲಿ ಅಸೂಯಾಭಾವನೆಯೊಂದು ಇಣುಕಿದಂತೆ ಭಾಸವಾಯಿತು. ಏಕೆಂದರೆ, ಈ ನಾಯಿ ಮೊದಲೇ ಅಸಂತೋಷಿಯಾಗಿತ್ತು. ಕನ್ನಡಿಯಲ್ಲಿ ಕಂಡುಬಂದ ಸಾವಿರ ನಾಯಿಗಳಿಗೆ ಉತ್ತರವಾಗಿ ಇದು ಜೋರಾಗಿ ಬೊಗಳಲಿಕ್ಕೆ ಶುರುಮಾಡಿದಾಗ, ಕನ್ನಡಿಯಲ್ಲಿ ಕಾಣುತ್ತಿರುವ ನಾಯಿಗಳೂ ಇದಕ್ಕೆ ಬೊಗಳಿದಂತಾಯಿತು. ಇದು ತನ್ನದೇ ಪ್ರತಿಬಿಂಬ ಎಂಬ ಅರಿವಿಲ್ಲದೇ, ಈ ನಾಯಿಯು `ಈ ಮನೆಯು ಭಯಂಕರವಾಗಿದೆ, ಚೆನ್ನಾಗಿಲ್ಲ, ಇನ್ನೆಂದೂ ಇಲ್ಲಿಗೆ ಬರುವುದಿಲ್ಲ', ಎಂದು ಬೈದುಕೊಳ್ಳುತ್ತ ಹೊರಟು ಹೋಯಿತು.

`ಮನಸು ಸಾವಿರ ಕನ್ನಡಿಯ ಮನೆಯಂತೆ'. ಹೀಗಿರುವಾಗ ಜಗದಲ್ಲಿನ ಜನರ ಮುಖಗಳೂ ಯಾ ಮನಸೂ ಸಹ ದರ್ಪಣವಿದ್ದಂತೆ. ಅವರವರ ಭಾವಕ್ಕೆ ತಕ್ಕಂತೆ ಜಗದಲ್ಲಿನ ಜನರು ಕಾಣುತ್ತಿರುತ್ತಾರೆ. ಪ್ರತಿಯೊಬ್ಬರೂ ಒಬ್ಬರನ್ನೊಬ್ಬರು ಭೇಟಿಮಾಡಿದಾಗ ನಮ್ಮಲ್ಲಿ ಅಥವಾ ಭೇಟಿಯಾದವರಲ್ಲಿ ಯಾವ ಭಾವನೆಗಳು ಮೂಡಬಹುದು... ನಿಮಗೇನನ್ನಿಸಬಹುದು?

ಲೇಖನ: ಚಂದ್ರಶೇಖರ ಬಿ.ಎಚ್. ೦೧ ಸೆಪ್ಟೆಂಬರ್‍ ೨೦೦೯

7 ಕಾಮೆಂಟ್‌ಗಳು:

shivu ಹೇಳಿದರು...

ಕ್ಷಣಚಿಂತನೆ ಸರ್,

ಜಪಾನಿ ಕತೆ ತುಂಬಾ ಚೆನ್ನಾಗಿದೆ. ಮನಸ್ಸು ಹೇಗಿರುತ್ತದೋ ಹಾಗೆ ಹೊರಪ್ರಪಂಚ ಕಾಣುವುದು ಅನ್ನುವ ವಿಚಾರ ಸತ್ಯ.

PARAANJAPE K.N. ಹೇಳಿದರು...

ಕಥೆ ಚೆನ್ನಾಗಿದೆ.

ಕ್ಷಣ... ಚಿಂತನೆ... Think a while ಹೇಳಿದರು...

ಪರಾಂಜಪೆ ಮತ್ತು ಶಿವು ಅವರೆ, ಕಥೆ ಇಷ್ಟವಾಗಿದ್ದಕ್ಕೆ ಥ್ಯಾಂಕ್ಸ್. ಇಲ್ಲಿ ಕಥೆಯಷ್ಟೇ ನಿಜ ಜೀವನದಲ್ಲಿಯೂ ಪ್ರತಿಯೊಬ್ಬರ ಆಲೋಚನೆಯೂ ಮನಸ್ಸಿನ ಕನ್ನಡಿಯಂತೆ. ಹೀಗೇ ಒಮ್ಮೆ ಜಪಾನೀ ಕಥೆಗಳನ್ನು ಓದುತ್ತಿರುವಾಗ ಇದನ್ನೇ ಬ್ಲಾಗಿನಲ್ಲಿ ಬರೆಯು ಆಲೋಚನೆ ಬಂದು ಬರೆದೆ. ಧನ್ಯವಾದಗಳು.

ಸಿಮೆಂಟು ಮರಳಿನ ಮಧ್ಯೆ ಹೇಳಿದರು...

ಚಂದ್ರ ಶೇಖರ್...

ಮನಸ್ಸಿನಂತೆ ಭಾವ...

ತುಂಬಾ ಸೊಗಸಾದ ಕಥೆ...
ಅರ್ಥ ಪೂರ್ಣವಾಗಿದೆ...

ಕ್ಷಣ... ಚಿಂತನೆ... Think a while ಹೇಳಿದರು...

ಪ್ರಕಾಶ್ ಸರ್‍, ಜಪಾನೀ ಕಥೆಯನ್ನು ಆಂಗ್ಲಕ್ಕೆ ತರ್ಜುಮೆ ಮಾಡಿದವರಿಗೆ ಥ್ಯಾಂಕ್ಸ್. ಏಕೆಂದರೆ, ಅದನ್ನು ನಾವು ಓದಲು, ಕನ್ನಡದಲ್ಲಿ ಬರೆಯಲು ಸಾಧ್ಯವಾಗಿದ್ದಕ್ಕೆ. ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ಹೀಗೆಯೆ ಬರುತ್ತಿರಿ.

Deepasmitha ಹೇಳಿದರು...

ಚಂದ್ರಖೇಖರ್ ಅವರೆ, ಕಥೆ ಚೆನ್ನಾಗಿದೆ. ಸುಖ ದುಃಖ ಎಲ್ಲವೂ ನಮ್ಮ ಮನಸ್ಸಿನಲ್ಲೇ ಇದೆ. ನಾವು ಹೇಗಿರುವೆವೋ, ಜಗತ್ತೂ ಅದನ್ನೇ ಪ್ರತಿಬಿಂಬಿಸುತ್ತದೆ.

ಕ್ಷಣ... ಚಿಂತನೆ... Think a while ಹೇಳಿದರು...

ದೀಪಸ್ಮಿತ ಅವರೆ, ನನ್ನ ಬ್ಲಾಗಿಗೆ ಸ್ವಾಗತ. ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ಹೀಗೆಯೇ ಬರುತ್ತಿರಿ, ನಿಮ್ಮ ಪ್ರೋತ್ಸಾಹಗಳು ಸಿಗುತ್ತಿರಲಿ.

ಸ್ನೇಹದಿಂದ,