ಮಂಗಳವಾರ, ಅಕ್ಟೋಬರ್ 20, 2009

ಅಬ್ಬಬ್ಬಾ...!! ಪಟಾಕಿ ಸದ್ದು.

ಢಂ, ಢಮಾರ್‍, ಜ಼ುರ್‍, ಬ್ಲಬ್,
ಅಬ್ಬಬ್ಬಾ...!! ಪಟಾಕಿ ಸದ್ದು. ತಲೆ ಸಿಡಿಸುವಂತಹ ಸಿಡಿಮದ್ದಿನ ಶಬ್ದ!!!

ಕಳೆದ ಮೂರು ದಿನಗಳಿಂದ ಇದುವೇ ನಗರದೆಲ್ಲೆಡೆ ಆಗಿದ್ದ ದೀಪಾವಳಿ ಹಬ್ಬದ ಸಂಭ್ರಮ.

ಸಂಭ್ರಮ ಒಂದು ಕಡೆಯಾದರೆ, ಆ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ಬಂದವರ ಕಣ್ಣು, ದೇಹಕ್ಕೆಲ್ಲ ಪಟಾಕಿಯ ಕಿಡಿಗಳು ಮಾಡಿದ ಗಾಯಗಳನ್ನು ಮರುದಿನ ಪತ್ರಿಕೆಯಲ್ಲಿ ನೋಡಿದಾಗ ತುಂಬಾ ಬೇಸರವಾಯಿತು. ಯಾರೋ ಹಚ್ಚಿದ ಸಿಡಿಮದ್ದಿನ ಪಟಾಕಿ ಪಟ್ಟೆಂದು ನಡೆವವರ ಮೇಲೆಯೇ ಹಾದು ಸದ್ದಿಲ್ಲದೇ ಕಣ್ದೀಪವನ್ನು ಅಳಿಸಿಹಾಕಿತಲ್ಲಾ ಎಂದು ಮನ ನೋಯುತ್ತದೆ. ಉದ್ದೇಶ ಪೂರ್ವಕವಾಗಿ ಇವೆಲ್ಲ ನಡೆಯದಿದ್ದರೂ, ಕೊಂಚ ಅಜಾಗರೂಕತೆ ಎಂತಹ ಅನಾಹುತಗಳಿಗೆ ಎಡೆ ಮಾಡಿಕೊಡುತ್ತದೆಯಲ್ಲವೆ?

ನಿನ್ನೆ ಸಂಜೆ ಸುಮಾರು ಏಳರ ಸಮಯಕ್ಕೆ ಸುಮ್ಮನೇ ಮನೆಯಿಂದ ಹತ್ತಿರವಿದ್ದ ಅಂಗಡಿಗೆಂದು ಹೊರಟೆ. ಅಂಗಡಿಯವನು ಬಾಗಿಲು ಹಾಕಿದ್ದ. ಅಲ್ಲೆ ಒಂದಿಬ್ಬರು ಪಟಾಕಿ ಸಿಡಿಸುತ್ತಾ ಸಂಭ್ರಮಿಸುತ್ತಿದ್ದರು. ಕೆಲವರು ದ್ವಿಚಕ್ರವಾಹನದಲ್ಲಿ ಬರುತ್ತಿದ್ದರು. ಕೆಲವರು ಆಟೋ, ಕಾರು ಹೀಗೆ. ಇನ್ನು ನಡೆಯುವವರೂ ಇದ್ದರೆನ್ನಿ.
ಅದೇ ಸಮಯಕ್ಕೆ ಒಬ್ಬ ಹಚ್ಚಿದ ಸಣ್ಣ ಪಟಾಕಿ ಸಿಡಿದು ದಾರಿಯಲ್ಲಿ ಹೋಗುತ್ತಿದ್ದವರ ಬಟ್ಟೆಗೆ ಕಿಡಿತಗಲಿತು. ಸದ್ಯಕ್ಕೆ ಅವರಿಗೆ ತೊಂದರೆಯಾಗಿಲಿಲ್ಲ. ಆದರೆ, ಇಲ್ಲಿ ಪಟಾಕಿ ಹಚ್ಚುವ ಜನರು ಯಾರೇ ಆಗಿರಲಿ ರಸ್ತೆಯಲ್ಲಿ ಬರುವ ಜನರಿಗೆ ಒಂದು ಸಣ್ಣ ಎಚ್ಚರಿಕೆಯಾಗಿ ಅಲ್ಲೆ ನಿಂತು ಹೊರಡುವಂತೆ ಮಾಡಿದ್ದರೆ ಹೀಗಾಗುತ್ತಿರಲಿಲ್ಲ. ಇನ್ನು ಕೆಲವು ಜನರದ್ದು ಭಂಡ ಧೈರ್ಯ ಎನ್ನಿ. ಪಟಾಕಿ ಸರಮಾಲೆ ಅಲ್ಲಿಯೇ ಸಿಡಿಯುತ್ತಿದ್ದರೂ ಅದರ ಮಗ್ಗುಲಿನಲ್ಲಿಯೇ ವಾಹನ ಚಲಾಯಿಸುವ ಸಾಹಸ ಮಾಡುವವರೂ ಇದ್ದಾರೆ. ಅಕಸ್ಮಾತ್, ಪಟಾಕಿಯ ಕಿಡಿಗಳು (ಸರಹಚ್ಚಿದ್ದಾಗ ಪಟಾಕಿಗಳು ೨೦-೩೦ ಅಡಿ ಸಿಡಿಯುತ್ತವೆ) ಸವಾರನಿಗೋ ಅಥವಾ ಹಿಂಬದಿ ಕುಳಿತವರಿಗೋ ಅಥವಾ ವಾಹನದ ತೈಲ ಪೈಪಿಗೋ ತಗಲಿದರೆ ಆಗುವ ಅನಾಹುತ ಮತ್ತೆ ಸರಿಪಡಿಸಲು ಆಗುವುದೇ?

ಪಟಾಕಿ ಹಚ್ಚುವ ಮಂದಿಗಿಂತ, ರಸ್ತೆಯಲ್ಲಿ ನಡೆಯುವವರು, ನೋಡುವವರು ಎಚ್ಚರಿಕೆ ವಹಿಸಬೇಕಾದ್ದು ಅತ್ಯವಶ್ಯಕ ಅಲ್ಲವೇ? ಅಲ್ಪ ಸಮಯ ಉಳಿಸಲು ಬಾಳ ಸಮಯವನ್ನು ಹಾಳು ಮಾಡಿಕೊಳ್ಳುವುದು ತರವೇ?
ಕಳೆ ಮೂರು ದಿನಗಳಲ್ಲಿ ಪಟಾಕಿಯ ಸಿಡಿತದಿಂದ ಕಣ್ಣು, ಕೈ, ದೇಹದ ಅಂಗಗಳಿಗೆ ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ, ಅವರ ದೃಷ್ಟಿಗಳು ಮರಳಿ ಬರಲಿ, ಎಂದು ಆಶಿಸುತ್ತೇನೆ.

ಚಂದ್ರಶೇಖರ ಬಿ.ಎಚ್.೨೦.೧೦.೨೦೦೯

6 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ಹೌದು, ಈ ಸಲ ಪಟಾಕಿ ಅಬ್ಬರ ಜಾಸ್ತಿ ಇತ್ತು. ನಮ್ಮ ನೆರೆ ಜಿಲ್ಲೆಗಳ ಜನ ಪ್ರವಾಹದಿ೦ದ ತತ್ತರಿಸಿರುವಾಗ ಅವರಿಗೆ ನೆರವು ನೀಡೋಣ, ಪಟಾಕಿ ಬೇಡ ಎ೦ದು ಮು.ಮ೦ತ್ರಿಗಳು ಅ೦ದಿದ್ರಲ್ಲ, ಹಾಗಾಗಿ ಪಟಾಕಿ ಸೌ೦ಡು ಅಷ್ಟಾಗಿ ಇರುವುದಿಲ್ಲವೇನೋ ಅ೦ದುಕೊ೦ಡಿದ್ದೆ. ಆದರೆ ನಡುರಾತ್ರೆ ತನಕವೂ ಸಿದಿಸುದುಮದ್ದುಗಳ ಅಬ್ಬರ ಇತ್ತು. ಜನರಿಗೆ ದುಡ್ಡುಸುಡುವಲ್ಲಿ ಯಾವ ಬೇಸರವು ಇದ್ದ೦ತೆ ತೋರಲಿಲ್ಲ. ಬೆಲೆ ಏರಿಕೆಯ ಈ ದಿನಗಳಲ್ಲು ಜನರಿಗಿರುವ Craze ನೋಡಿ ಪಟಾಕಿ ಶಬ್ದದೊ೦ದಿಗೆ ನಾನು ಬೆಚ್ಚಿ ಬಿದ್ದೆ.

ಕ್ಷಣ... ಚಿಂತನೆ... ಹೇಳಿದರು...

ಪರಾಂಜಪೆ ಸರ್‍, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ನೀವಂದು ಕೊಂಡಿದ್ದಂತೆಯೇ ನಾನೂ ಯೋಚಿಸಿದ್ದೆ. ಆದರೆ, ಜನ ಹಾಗಿದ್ದರೂ ಜನರ ಮನಸ್ಸು ವಿಚಿತ್ರ ಅಲ್ಲವೇ?

AntharangadaMaathugalu ಹೇಳಿದರು...

ಹೌದು ಚಂದ್ರು ಅವರೆ...
ನಾ ಕೂಡ ಈ ಸಲ ನಿಶ್ಯಬ್ದ ದೀಪಾವಳಿಯಾಗತ್ತೆಂದು ಕೊಂಡಿದ್ದೆ... ಆದರೆ ಎಲ್ಲಿ ನೆರೆ ಬಂದರೆ ನಮಗೇನು... ಯಾರದೋ ಮನೆ ಮಠ ಹಾಳದರೆ ನಾವೇನು ಮಾಡೋಕ್ಕಾಗತ್ತೆ ಅನ್ನೋ ತರಹ, ಸಿಕ್ಕಾಪಟ್ಟೆ ಪಟಾಕಿ ಸಿಡೀತು... ಏನೋ ಒಂಥರಾ ಮನಸ್ಸು ಮುದುರಿಕೊಂಡು ಬಿಡ್ತು... ಸಂತ್ರಸ್ತರಿಗೆ ಸಹಾಯ ಧನ ಕೊಡದಿದ್ದರೂ ಪರವಾಗಿರಲಿಲ್ಲ... ಆದರೆ ಈ ಅಬ್ಬರ ಬೇಡವಾಗಿತ್ತಲ್ವಾ?

ಶ್ಯಾಮಲ

ಕ್ಷಣ... ಚಿಂತನೆ... ಹೇಳಿದರು...

ಶ್ಯಾಮಲಾ ಅವರೆ, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

ತೇಜಸ್ವಿನಿ ಹೆಗಡೆ ಹೇಳಿದರು...

ಚಂದ್ರಶೇಖರ್ ಅವರೆ,

ನೀವು ಹೇಳಿದ್ದು ನಿಜ. ಈ ಪಟಾಕಿಯ ಹುಚ್ಚು ಅದೆಷ್ಟೋ ಅಮಾಯಕರ ಬಲಿಗೆ, ನೋವಿಗೆ ಕಾರಣವಾಗಿತ್ತಿದೆ. ನಮ್ಮ ಪರಿಚಿತರೊಬ್ಬರ ಮನೆ ಮೊನ್ನೆ ತಾನೇ ಈ ಪಟಾಕಿಗಳ ಹಾವಳಿಗೆ ತುತ್ತಾಗಿ ಸಂಪೂರ್ಣ ಸುಟ್ಟುಹೋಯಿತು!! :( ಕಿವಿಕೆಪ್ಪಾಗಿಸುವ ಶಬ್ದವನ್ನು ಮಾಡುವುದರ ಮೂಲಕ, ಮೂಗು ಕಟ್ಟುವ ಕಶ್ಮಲ ಹೊಗೆಯನ್ನುಗುಳಿಸುವ ಮೂಲಕ ಅದೇನು ಸಂಬ್ರಮವೋ ನಾ ಕಾಣೆ?!!! ಶಬ್ದಮಾಲಿನ್ಯ, ವಾಯುಮಾಲಿನ್ಯದಿಂದ ಆರೋಗ್ಯವೂ ಹಾಳು.. ಸುಡುವ ಪಟಾಕಿಯಿಂದ ದುಡ್ಡೇ ಸುಟ್ಟಂತೆನಿಸುವುದು ನನಗೆ. ಅದರ ಬದಲು ಸಣ್ಣ ಸುರ್ ಸುರ್ ಕಡ್ಡಿಯಿಂದಲೋ ಇಲ್ಲಾ ನೆಲ ಚಕ್ರವೋ, ಮಳೆಯೋ ಇದನ್ನು ಮಾತ್ರ ಉರಿಸಿ (ಅಷ್ಟು ಬೇಕೆಂದೆನಿಸಿದರೆ) ಸಂತೋಷ ಪಡಬಹುದಲ್ಲಾ?!! ದೀಪಾವಳಿ ಎಂದರೆ ದೀಪ ಹಚ್ಚುವುದು. ಸುತ್ತಮುತ್ತಲಿರುವ ವೃದ್ಧರಿಗೆ, ಸಣ್ಣ ಶಿಶುಗಳಿಗೆ, ಹೃದಯ ರೋಗದಿಂಡ ಬಳಲುತ್ತಿರುವವರಿಗೆ ಯಾತನೆಕೊಟ್ಟು ಏಕೆ ಸಂತೋಷ ಆಚರಿಸುತ್ತಾರೋ? ನಿಜಕ್ಕೂ ಅರ್ಥವಿಲ್ಲದಂತಾಗಿದೆ ಇತ್ತೀಚಿಗೆ ದೀಪಾವಳಿ.

ಕ್ಷಣ... ಚಿಂತನೆ... ಹೇಳಿದರು...

ತೇಜಸ್ವಿನಿ ಅವರೆ,

ನಿಮ್ಮ ಅನಿಸಿಕೆಗಳನ್ನು ಓದಿದಾಗ ನನಗೂ ಹಾಗನ್ನಿಸಿದ್ದು ನಿಜ. ಪುಟ್ಟ ಮಕ್ಕಳು, ವೃದ್ಧರು, ರೋಗಿಗಳು ಇವರಿಗೆಲ್ಲ ತೊಂದರೆಯಾಗುವುದು ಸಹಜ. ಆದರೆ, ಅದರ ಅರಿವು ಪಟಾಕಿ ಹಚ್ಚುವ ಜನರಿಗಿರುವುದಿಲ್ಲ. ಅಥವಾ ಇದ್ದರೂ ಅಸಹಜವಾಗಿ ವರ್ತಿಸುವುದು ಮೊದಲಾಗಿದೆ.

ನಿಮ್ಮ ಪರಿಚಿತರೊಬ್ಬರ ಮನೆಯ ಕಥೆ ಕೇಳಿ ತುಂಬಾ ಬೇಸರವಾಯಿತು. ಅವರಿಗೆ ನನ್ನ ಸಾಂತ್ವನಗಳನ್ನು ತಿಳಿಸಿ.

ಧನ್ಯವಾದಗಳು.
ಚಂದ್ರಶೇಖರ ಬಿ.ಎಚ್.