ಗುರುವಾರ, ಅಕ್ಟೋಬರ್ 22, 2009

ಕಾವಲು ಸಿಪಾಯಿ... ಯ ಕಥೆ

ಐರ್‍ಲೆಂಡಿನ ಒಂದು ಕಥೆಯನ್ನು ಓದಿದೆ. ಅದರ ಸಾರಾಂಶವನ್ನು ಹಂಚಿಕೊಳ್ಳಬೇಕೆನಿಸಿತು. ಕಥೆಗಾರ: ಲಿಯಾಮ್ ಒ' ಫ್ಲಹರ್ಟಿ. ಅವನ ಒಂದು ಕಥೆಯ ಹೆಸರು: ಹೊಂಚು ಸಿಪಾಯಿ. ಇದು ನವಕರ್ನಾಟಕ ಪ್ರಕಾಶನದ ವಿಶ್ವಕಥಾ ಕೋಶದಲ್ಲಿದೆ. ಓದುತ್ತಿರುವಂತೆಯೇ ಆ ಯುದ್ಧರಂಗದ ಚಿತ್ರಣ ಕಣ್ತುಂಬಿ ಬರುತ್ತದೆ. ಓದುತ್ತಾ ಹೋದಂತೆ ಕೊನೆಯಲ್ಲಿ....
***
ಮುಂದೆ ಓದಿ.
***
ಆಗ ರಿಪಬ್ಲಿಕನ್ಸ್ ಮತ್ತು ಫ್ರೀಸ್ಟೇಟರ್‍ಸಗಳ ಮಧ್ಯೆ ಅಂತರರ್ಯುದ್ಧ ನಡೆಯುತ್ತಿತ್ತು. ಅದೊಂದು ಜೂನ್ ತಿಂಗಳ ಒಂದು ರಾತ್ರಿ. ಡಬ್ಲಿನ್ ನಗರ ಕತ್ತಲಲ್ಲಿ ಮುಳುಗಿತ್ತು. ಫೋರ್‍ಕೋರ್ಟ್ಸ್ ಮುತ್ತಿಗೆಗೆ ಒಳಗಾಗಿತ್ತು. ಮೆಷಿನ್‌ಗನ್‌ಗಳು ಸದ್ದುಮಾಡುತ್ತಿದ್ದವು.

ಆ ರಾತ್ರಿಯಲ್ಲಿ ಒ'ಕಾನಲ್‌ ಸೇತುವೆಯ ಬಳಿಯಿದ್ದ ಒಂದು ಮನೆಯ ಮಾಡಿನ ಮೇಲೊಬ್ಬ ರಿಪಬ್ಲಿಕನ್‌ ಪಡೆಗೆ ಸೇರಿದ ಸಿಪಾಯಿಯು ಕಾಯುತ್ತಾ ಕುಳಿತಿದ್ದ. ಹೆಗಲಲ್ಲಿ ದುರ್ಬಿನು, ಬಂದೂಕು ಹಿಡಿದಿದ್ದ ಅವನೊಬ್ಬ ವಿದ್ಯಾರ್ಥಿಯಂತೆ ಕಾಣುತ್ತಿದ್ದ. ಅವನ ಕಣ್ಣುಗಳು ಹೊಳೆಯುತ್ತಿದ್ದವು. ಸಾವನ್ನು ಕಂಡರೂ ಅವನಿಗೇನೂ ಅನ್ನಿಸುವಂತಿಲ್ಲ. ಸಿಗರೇಟು ಸೇದಬೇಕೆನಿಸಿತು. ವಿಸ್ಕಿ ಕುಡಿದ. ಸರಿ, ಸಿಗರೇಟನ್ನು ಹೊತ್ತಿಸಿದರೆ, ಆ ಬೆಳಕಿನಲ್ಲಿ ಶತ್ರುವಿನ ಗುಂಡಿನ ದಾಳಿ ನಡೆಯುವುದಿತು. ಆದರೂ, ಸಿಗರೇಟು ಹತ್ತಿಸಿ ಒಂದು ಧಂ ಎಳೆಯುವಷ್ಟರಲ್ಲಿ ಬದಿಯ ಗೋಡೆಗೆ ಶತ್ರುವಿನ ಗುಂಡು ಹಾರಿ ಬಂದು ತಾಕಿತ್ತು. ಸಿಗರೇಟು ಬಿಸಾಕಿ ತೆವಳುತ್ತ ಗೋಡೆಯ ಮೇಲಿಂದ ಇಣುಕಿದ. ತಕ್ಷಣ ಬೆಳಕೊಂದು ಮಿಂಚಿ, ಮತ್ತೊಂದು ಗುಂಡು ತಲೆಯ ಮೇಲೆ ಹಾದುಹೋಯಿತು. ಬೆಳಕು ರಸ್ತೆಯ ಅ ಕಡೆಯಲ್ಲಿ ಕಂಡಿತ್ತು. ಶಸ್ತ್ರ ಸಜ್ಜಿತ ವಾಹನ ಸೇತುವೆಯ ಮೇಲೆ ಸಾಗುತ್ತಿದೆ. ಅದು ಶತ್ರುವಿನದ್ದು. ಈತ ನಡುಗಿದ. ಒಬ್ಬ ಮುದುಕಿ ಗಾಡಿಯವನೊಂದಿಗೆ ಏನೋ ಹೇಳಿದಳು. ಸಿಪಾಯಿ ಅಡಗಿದ್ದ ಬುರುಜಿನ ಬಾಗಿಲು ತೆಗೆಯಿತು. ತಕ್ಷಣ ಈತ ಗುಂಡುಹಾರಿಸಿ ಅವನನ್ನು ಕೆಡವಿದ. ಮುದುಕಿ ಕಿರುಚುತ್ತಾ ಓಡಿ ಚರಂಡಿಯೊಳಗೆ ಬಿದ್ದಳು. ಇವನ ಕೈಲಿದ್ದ ಬಂದೂಕು ಕೆಳಗೆ ಬಿದ್ದಿತು. ಅದನ್ನು ತೆಗೆಯಬೇಕೆಂದಿರುವಾಗ, ಮುದುಕಿಯ ಚೀರುವಿಕೆಯಿಂದಾಗಿ ಶತ್ರು ನೆಲೆಯಿಂದ ಮತ್ತೊಂದು ಗುಂಡು ಇವನ ಬಲಗೈಗೆ ಬಡಿದಿತ್ತು. ಶಪಿಸುತ್ತಾ ಕುಳಿತ. ಕಷ್ಟಪಟ್ಟು ತೆವಳುತ್ತಾ ಗೋಡೆಯ ಬದಿಯಿಂದ ಕೆಳಗೆ ಬಂದ. ಗುಂಡು ಬಿದ್ದ ಜಾಗಕ್ಕೆ ಅಯೋಡಿನ್‌ ಸೀಸೆಯನ್ನು ಒಡೆದು ಗಾಯದ ಮೇಲೆ ಹನಿಸಿದ. ಅಸಾಧ್ಯ ನೋವು. ಹತ್ತಿಯಿಟ್ಟು ಬಟ್ಟೆ ಕಟ್ಟಿದ.

ಕೆಳಗಿನ ರಸ್ತೆ ಪ್ರಶಾಂತವಾಗಿತ್ತು. ಇವನು ತಪ್ಪಿಸಿಕೊಂಡು ಹೋಗದಂತೆ ಎದುರು ಛಾವಣಿಯ ಮೇಲಿದ್ದ ಸಿಪಾಯಿ ಕಾಯುತ್ತಿದ್ದ. ಈತನಿಗೊಂದು ಉಪಾಯ ಹೊಳೆದು, ತನ್ನ ಟೋಪಿಯನ್ನು ಬಂದೂಕಿಗೆ ಸಿಕ್ಕಿಸಿದ. ನಿಧಾನವಾಗಿ ಬಂದೂಕನ್ನು ಸುತ್ತಲಿನ ಗೋಡೆಯ ಮೇಲಿಂದ ಸ್ವಲ್ಪವೇ ಕಾಣುವಂತೆ ಎತ್ತಿ ಹಿಡಿದ. ಇದನ್ನು ಕಂಡು ಆ ಕಡೆಯ ಸಿಪಾಯಿ ಗುಂಡು ಹಾರಿಸಿದ್ದ. ಬಂದೂಕನ್ನು ಈ ಸಿಪಾಯಿ ಕೆಳಕ್ಕೆ ಒಬ್ಬ ಮನುಷ್ಯ ಬೀಳುವಂತೆ ಮುಂದೆಮಾಡಿದಾಗ ಟೋಪಿ ಬಿದ್ದಿತು. ಇವನ ಉಪಾಯ ಫಲಿಸಿತ್ತು. ಆ ಕಡೆಯ ಶತ್ರು ಸಿಪಾಯಿ ಇವನನ್ನು ಕೊಂದೆನೆಂದು ತಿಳಿದ.

ಇವನಿಗೆ ಆ ಕಡೆಯ ಶತ್ರು ಸಿಪಾಯಿಯ ಛಾಯೆ ಆ ಮಂದ ಬೆಳಕಿನಲ್ಲಿ ಕಾಣುತ್ತಿತ್ತು. ಬಲಗೈ ನಡುಗುತ್ತಿದ್ದರೂ ಕಷ್ಟಪಟ್ಟು ಬಂದೂಕನ್ನು ಗುರಿ ಮಾಡಿದ. ತುಪಾಕಿ ಸಿಡಿಯಿತು. ಆ ಕಡೆಯ ಶತ್ರು ಸಿಪಾಯಿಗೆ ಗುಂಡು ತಗುಲಿತ್ತು. ಕೈಲಿದ್ದ ಬಂದೂಕು ಕೆಳಗಿದ್ದ ಸಲೂನಿನ ಅಂಗಡಿಯ ಕಂಬಕ್ಕೆ ತಾಕಿ ಸದ್ದು ಮಾಡುತ್ತಾ ಬಿದ್ದಿತು. ಆತ ಕೆಳಗೆ ಬಿದ್ದು ಸತ್ತ.

ಶತ್ರು ಸಿಪಾಯಿ ಕೆಳಗೆ ಬಿದ್ದುದನ್ನು ನೋಡಿ ಇವನು ನಡುಗಿದ. ಇವನಲ್ಲಿದ್ದ ಹೋರಾಟದ ತೀವ್ರತೆ ಬತ್ತಿತು. ಪಶ್ಚಾತ್ತಾಪದಿಂದ ಕುಂದಿದ. ಬೆವರ ತೊಡಗಿದ. ಶತ್ರುವಿನ ಛಿದ್ರವಾದ ದೇಹದ ಮಾಂಸದಿಂದ ಇವನಿಗೆ ವಾಕರಿಕೆಯಂತಾಯಿತು. ಇವನು ತನಗೆ ತಾನೇ ಬಯ್ಯತೊಡಗಿದ್ದ. ಎಲ್ಲರನ್ನೂ ಬಯ್ಯುತ್ತಿದ್ದ.

ಕೈಲಿದ್ದ ಬಂದೂಕನ್ನು ಒಮ್ಮೆ ನೋಡಿದ. ಬೇಸರದಿಂದ ಬಿಸಾಕಿದ ರಭಸಕ್ಕೆ ಕೆಳಗೆ ಬಿದ್ದು ಆಕಸ್ಮಿಕವಾಗಿ ಗುಂಡು ಇವನ ತಲೆಯ ಮೇಲೆಯೇ ಹಾರಿತ್ತು. ವಿಸ್ಕಿ ತೆಗೆದು ಹೀರಿದ. ಶತ್ರುವನ್ನು ಕೊಂದ ವಿಷಯ ತನ್ನ ನಾಯಕನಿಗೆ ತಿಳಿಸಬೇಕೆಂದು ತನ್ನಲಿದ್ದ ಪಿಸ್ತೂಲನ್ನು ಜೇಬಿಗಿಡುತ್ತಾ, ತೆವಳುತ್ತಾ ಛಾವಣಿಯಿಂದ ಇಳಿಯ ತೊಡಗಿದ. ಹಾಗೂ ಹೀಗೂ ರಸ್ತೆಗಿಳಿದು ಬಂದ.

ರಸ್ತೆಯ ಗಲ್ಲಿಯಲ್ಲಿ ಬರುವಾಗ ತಕ್ಷಣ ಅವನಿಗೊಂದು ಯೋಚನೆ ಬಂತು. ಶತ್ರು ಸಿಪಾಯಿಯ ಗುರಿಗಾರಿಕೆಯ ಕುತೂಹಲ ಇವನಲ್ಲಿ ಇಣುಕಿತು. ಸತ್ತ ಆ ಶತ್ರು ಸಿಪಾಯಿಗೆ ಮೆಚ್ಚುಗೆ ತೋರಿದ. ತನಗೆ ಗೊತ್ತಿದ್ದವನಿರಬಹುದೇ ಎಂದು ಯೋಚಿಸುತ್ತಾ ಹೋದ. ಸೈನ್ಯ ಇಬ್ಭಾಗವಾಗುವಾಗ ತನ್ನ ಜೊತೆಯಲ್ಲಿದ್ದವನಿರಬಹುದೇ ಎಂದು ಯೋಚಿಸಿದ. ಹೇಗಾದರೂ ಸರಿ, ಅವನನ್ನು ನೋಡುವ ಎಂದು ಮುಂದೆ ಹೊರಟ. ರಸ್ತೆಯ ಆ ತುದಿಯಲ್ಲಿ ಭೀಕರ ಕಾಳಗ ನಡೆಯುತ್ತಿತ್ತು. ಈ ಪ್ರದೇಶ ಪ್ರಶಾಂತವಾಗಿತ್ತು.
***
ರಸ್ತೆ ದಾಟುತ್ತಿರುವಂತೆಯೇ ಮೆಷಿನ್‌ ಗನ್ನಿನಿಂದ ಗುಂಡಿನ ಸುರಿಮಳೆ. ಹಾಗೂ ಹೀಗೂ ಇವನು ತಪ್ಪಿಸಿಕೊಂಡು ಶತ್ರು ಸಿಪಾಯಿಯ ಹೆಣದ ಪಕ್ಕಕ್ಕೆ ಮುಖಡಿಯಾಗಿ ಬಿದ್ದ. ಗುಂಡಿನ ಸದ್ದು ನಿಂತಿತು.

ಶತ್ರು ಸಿಪಾಯಿಯ ಹೆಣವನ್ನು ಕೊಂಚ ಹೊರಳಿಸಿ ನೋಡಿದ.
ಆಗ ಅಲ್ಲಿ ಕಂಡಿದ್ದು......
ತನ್ನ ಒಡಹುಟ್ಟಿದವನ ಮುಖ. ಅದು ನಿರ್ಜೀವವಾಗಿತ್ತು.
***

ಇದನ್ನು ಓದಿದ ಮೇಲೆ ನಿಮಗೂ ಹೀಗನ್ನಿಸಿರಬಹುದು? ಅನಾದಿ ಕಾಲದಿಂದ ಯುದ್ಧ - ಏತಕ್ಕಾಗಿ ಯುದ್ಧ? ಜನಾಂಗಗಳಿಗಾಗಿ, ಭೂಮಿಗಾಗಿ, ಸಂಪತ್ತಿಗಾಗಿ, ಹೆಣ್ಣಿಗಾಗಿ... ಒಬ್ಬರ ಹಕ್ಕನ್ನು ಸ್ಥಾಪಿಸಿಕೊಳ್ಳುವುದಕ್ಕಾಗಿ... ಭಯಂಕರ ಯುದ್ಧಗಳು ನಡೆದಿವೆ. ನಡೆಯುತ್ತಿವೆ.
****
ಚಂದ್ರಶೇಖರ ಬಿ.ಎಚ್.
೨೨.೧೦.೨೦೦೯

11 ಕಾಮೆಂಟ್‌ಗಳು:

Ittigecement ಹೇಳಿದರು...

ಚಂದ್ರು...

ತುಂಬಾ ಸುಂದರವಾದ ಕಥೆ ಪರಿಚಯಿಸಿದ್ದಕ್ಕೆ ಧನ್ಯವಾದಗಳು...

ಈ ಯುದ್ಧ, ಬಡಿದಾಟಗಳು ನಡೆಯುವದು... ಬದುಕಲಿಕ್ಕಾಗಿ...
ಯುದ್ಧದಲ್ಲಿ ಸಂಭವಿಸುವ ಸಾವೂ ಕೂಡ ... ಬದುಕಿಗಾಗಿ...

ಯಾವತ್ತಾದರೂ ಸಾಯಲೇ ಬೇಕಿರುವ ಈ ಬದುಕಿಗಾಗಿ
ಸಾಯಿಸುವದು ಎಷ್ಟು ಸಮಂಜಸ...? ಯಾವ ನ್ಯಾಯ...?

ಚಂದದ ಕಥೆಗಾಗಿ ಧನ್ಯವಾದಗಳು...

ಕ್ಷಣ... ಚಿಂತನೆ... ಹೇಳಿದರು...

ನಿಮ್ಮ ಅನಿಸಿಕೆಯಲ್ಲಿರುವ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲು ಕಷ್ಟವೇ ಹೌದು. ಕಥೆ ಮೆಚ್ಚಿದ್ದಕ್ಕೆ ಹಾಗೂ ಪ್ರತಿಕ್ರಿಯೆಗೆ ಧನ್ಯವಾದಗಳು.

ಚಂದ್ರು

shivu.k ಹೇಳಿದರು...

ಸರ್,

ಕುತೂಹಲದಿಂದ ಓದಿಸಿಕೊಂಡ ಈ ಕತೆಯ ಅಂತ್ಯವನ್ನು ಓದಿ ಕಣ್ಣು ತೇವಗೊಂಡಿತು. ಯಾರ ಸ್ವಾರ್ಥಕ್ಕಾಗಿ ಯುದ್ಧ, ಹೊಡೆದಾಟ ಬಡಿದಾಟಗಳೆಲ್ಲಾ ಬರುತ್ತವೋ? ಕೊನೆಗೆ ಉಳಿಯುವವರು ಯಾರು ಸಾಯುವವರು ಯಾರು? ಇಂಥಹ ಕತೆಗಳು ಮನಸ್ಸನ್ನು ಕಲಕುತ್ತವೆ.
ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಶಿವು ಸರ್‍, ಕಥೆ ನಿಮ್ಮ ಮನವನ್ನು ಕಲಕಿದೆ.
ಇಂತಹ ಕಥೆಗಳು ಕಥೆಗಳಾಗಿರದೆ ನಿಜ ಜೀವನದ ಘಟನೆಗಳೂ ಆಗಿರುತ್ತವೆ.

ಧನ್ಯವಾದಗಳು.

ಗೌತಮ್ ಹೆಗಡೆ ಹೇಳಿದರು...

olleya kathe sir.tumbaa saralavaagi helutta hogiddeeri kathe manamuttuvante.

AntharangadaMaathugalu ಹೇಳಿದರು...

ಚಂದ್ರು ಅವರೆ..
ಕಥೆ ನಿಜಕ್ಕೂ ಕಣ್ಣು ತೇವಗೊಳಿಸಿತು.... ಯಾರಿಗೆ ಬೇಕು ಈ ಯುದ್ಧ - ಸಾವು - ನೋವು ಎಲ್ಲಾ?

ಶ್ಯಾಮಲ

ಕ್ಷಣ... ಚಿಂತನೆ... ಹೇಳಿದರು...

ಗೌತಮ್‌ ಹೆಗಡೆ, ಮೊದಲ ಬಾರಿಗೆ ಬ್ಲಾಗಿಗೆ ಬಂದಿದ್ದೀರಿ. ನಿಮಗೆ ಸ್ವಾಗತ. ಕಥೆ ನಿಮಗಿಷ್ಟವಾಗಿದ್ದಕ್ಕೆ ವಂದನೆಗಳು. ಹೀಗೆ ಬರುತ್ತಿರಿ.

ಕ್ಷಣ... ಚಿಂತನೆ... ಹೇಳಿದರು...

ಶ್ಯಾಮಲಾ ಅವರೆ ನಿಮ್ಮ ಅನಿಸಿಕೆಗಳು ನಿಜ. ಇದು ಜಗದ-ಜನರ ನಿಯಮವಾಗಿದೆ.
ಧನ್ಯವಾದಗಳು.

ತೇಜಸ್ವಿನಿ ಹೆಗಡೆ ಹೇಳಿದರು...

ಯಾದ್ ವಶೇಮ್‌ನ ಝಲಕ್ ಈ ಕಥೆಯಲ್ಲೂ ಕಂಡಂತಾಯಿತು. ನಿಜಕ್ಕೂ ಯುದ್ಧ ಬೇಕಾಗಿರುವುದು ಕೆಲವು ಕೊಳಕು ರಾಜಕಾರಣಿಗಳಿಗೆ, ಸ್ವಯಂ ಲಾಭಕ್ಕಾಗಿ ಹೊಂಚುಹಾಕುತ್ತಿರುವವರಿಗೆ. ಸಾಮಾನ್ಯ ಜನತೆಗೆ ಯುದ್ಧ ಬೇಕಾಗಿಯೇ ಇರುವುದಿಲ್ಲ. ಕಥೆಯು ತುಂಬಾ ಚೆನ್ನಾಗಿದೆ. ಕುತೂಹಲಭರಿತವಾಗಿದೆ.

ಕ್ಷಣ... ಚಿಂತನೆ... ಹೇಳಿದರು...

ತೇಜಸ್ವಿನಿಯವರೆ, ನಿಮ್ಮ ಅಭಿಪ್ರಾಯದಂತೆ ಸಾಮಾನ್ಯ ಜನರಿಗೆ ಯುದ್ಧ ಬೇಕಿಲ್ಲದಿದ್ದರೂ ಯುದ್ಧಕ್ಕಾಗಿ ಹಪಹಪಿಸುವವರು ಬೇರೆಯೇ ಎಂಬುದು ಸರ್ವವಿದಿತ. ಅನಿಸಿಕೆಗಳಿಗೆ ಧನ್ಯವಾದಗಳು.

PaLa ಹೇಳಿದರು...

ಚೆನ್ನಾಗಿದೆ ಸಾರ್ ನಿಮ್ಮ ಅನುವಾದ..ಐರ್ಲೆಂಡ್ ಕಥೆ ಪರಿಚಯಿಸಿದ್ದಕ್ಕೆ ವಂದನೆ..