ಶುಕ್ರವಾರ, ಡಿಸೆಂಬರ್ 4, 2009

ಸ್ನೇಹ: ಉಳಿಸಿಕೊಳುವುದೋ, ಬಿಡುವುದೋ??

ಸ್ನೇಹಕ್ಕೆ ಸ್ನೇಹ, ಪ್ರೀತಿಗೆ ಪ್ರೀತಿ
ನಾನೂ ಸ್ನೇಹ ಜೀವಿ, ನೀನೂ ಸ್ನೇಹ ಜೀವಿ....
***
ಸ್ನೇಹದ ಕಡಲಲ್ಲಿ, ನೆನಪಿನ ದೋಣೀಯಲಿ...
***
ನಾನೇನು, ಅವನೇನು, ...
ಒಂದೆ ಎಲ್ಲರೂ, ಬಡ ಜನರೂ, ಬಲ್ಲಿದರೂ...
***
ಇಂತಹ ಹಾಡುಗಳನ್ನು ಕೇಳಿಯೇ ಇರುತ್ತೇವೆ. ಹಾಗಿದ್ದರೆ ಸ್ನೇಹ ಎಂದರೆ...ಏನು? ಇಬ್ಬರು ವ್ಯಕ್ತಿಗಳ ನಡುವಿನ ಆತ್ಮೀಯ ಸಂಬಂಧ ಎನ್ನಬಹುದೆ? ಅದನ್ನು ಉಳಿಸಿಕೊಳ್ಳುವುದಾದರು ಹೇಗೆ? ಬಾಲ್ಯದ ಸ್ನೇಹವನ್ನು ಉಳಿಸಿಕೊಳ್ಳುವವರು ಅಥವಾ ಉಳಿಸಿಕೊಂಡು ಹೋಗುವುದು/ಹೋಗುವವರು ತುಂಬಾ ಅಪರೂಪ. ಅದಕ್ಕೆ ಕಾರಣಗಳು ಹಲವಾರು: ಆಸ್ತಿ, ಓದು, ಕೆಲಸ, ಇತ್ಯಾದಿ. ಆದರೆ, ನಿಜವಾದ ಸ್ನೇಹದಲ್ಲಿ ಯಾವುದೇ ಭಾಷೆ, ಜಾತಿ, ಅಂತಸ್ತು, ವಿದ್ಯೆ, ಹೆಣ್ಣು/ಗಂಡು ಎಂದು ಯಾವುದೂ ಗಣನೆಗೆ ಬರುವುದಿಲ್ಲ. ಇಲ್ಲಿ ಅವೆಲ್ಲ ನಗಣ್ಯ. ಸ್ನೇಹವೊಂದೇ ಗಣ್ಯ.

ಪುರಾಣ ಪುರುಷರಾದ ಇವರೆಲ್ಲ ಎಂತಹ ಅಪ್ರತಿಮ ಸ್ನೇಹಿತರಾಗಿದ್ದರು. ಶ್ರೀರಾಮ-ವಿಭೀಷಣ, ಸುಗ್ರೀವ, ಹನುಮಂತ, ಶ್ರೀಕೃಷ್ಣ-ಸುಧಾಮ, ದುರ್ಯೋಧನ-ಕರ್ಣ, ಮುಂತಾದವರು. ಭೋಜರಾಜ-ಕಾಳಿದಾಸ, ಶಾಕುಂತಲೆ-ಅನಸೂಯ, ಹೀಗೆ ಇವರೆಲ್ಲ ಸ್ನೇಹಕ್ಕಾಗಿ ಪ್ರಾಣಾರ್ಪಣೆ ಮಾಡುವಷ್ಟು ಗಾಢಸ್ನೇಹ.

ಇತ್ತೀಚಿನ ದಿನಗಳಲ್ಲಿ ದಿನಪತ್ರಿಕೆಯ ಪುಟಗಳನ್ನು ತಿರುವಿದರೆ ಸಾಕು, ಎಲ್ಲೋ ಒಂದು ಕಾಲಂನಲ್ಲಿ ಸ್ನೇಹಿತರಿಂದಲೇ ದರೋಡೆ, ಕೊಲೆ, ಅಪಹರಣ ಎಂದೆಲ್ಲಾ ಇರುತ್ತದೆ. ಇದಕ್ಕೆ ಕಾರಣಗಳು ಹಣ, ಒಡವೆ, ಮತ್ಯಾವುದೋ ಅತಿರೇಕದ ಆಮಿಷ ಹಾಗೂ ಇನ್ನೂ ಏನೇನೋ ಇರುತ್ತದೆ. ಕೆಲವೊಮ್ಮೆ ಇವು ಬೆಳಕಿಗೆ ಬರದೇ ಇರಬಹುದು. ಅದರ ವಿಚಾರ ಸದ್ಯ ನಮಗೆ ಬೇಡ.

ಬಾಲ್ಯದ ಗೆಳತನವನ್ನು, ಉದ್ಯೋಗ ಸ್ಥಳದಲ್ಲಿನ ಸ್ನೇಹಿತರು, ಹೊಸ ಹೊಸ ಮಿತ್ರರು ಇವರೆಲ್ಲರ ಆತ್ಮೀಯ ಗೆಳೆತನ ಉಳಿಸಿಕೊಂಡು ಹೋಗುವುದು ಕೆಲವೊಮ್ಮೆ ಸಾಧ್ಯವಾಗದೇ ಇರಬಹುದು. ಅಥವಾ ಸಾಧ್ಯವಿದ್ದರೂ ಸ್ನೇಹವು ಮುಂದುವರೆಯದೆ ಹಾಗೆಯೇ ಮರೆಯಾಗಲೂ ಬಹುದು! ಇಂತಹದನ್ನು ಆದಷ್ಟು ದೂರವಿಡಲು ಯಾವುದಾದದರೂ ಉಪಾಯಗಳಿವೆಯೆ? ಬಾಲ್ಯದ ಗೆಳೆತನ ಅಥವಾ ಆಮೇಲಿನ ಗೆಳೆತನ ಇವೆಲ್ಲ ಕಾಲಕ್ರಮೇಣ ಮಂಕಾಗುತ್ತಾ ಮರೆಯಾಗಲು ಏನು ಕಾರಣ? ಯಾರು ಕಾರಣ? ಎಂದೆಲ್ಲ ಸ್ವಲ್ಪ ಸಂಶೋಧನೆ ಮಾಡಿ ಶೋಧಿಸಿದರೆ ಹೇಗೆ?

ಗೆಳೆತನಗಳು ಬಿದ್ದುಹೋಗಲು, ಮರೆತುಹೋಗಲು ಕಾರಣಗಳು ಹೀಗೂ ಇರಬಹುದು.

ಇಬ್ಬರು ಸ್ನೇಹಿತ(ತೆಯ)ರ ಆಲೋಚನೆ: ಒಬ್ಬರಿಗೊಬ್ಬರು ಅವನಿಗೆ/ಇವನಿಗೆ/ಅವಳಿಗೆ/ಇವಳಿಗೆ ಬಿಡುವಿಲ್ಲದಿರಬಹುದು. ಒಂದು ವೇಳೆ ಭೇಟಿ ಮಾಡಿದರೆ ಆ ಸ್ನೇಹಿತ/ತೆಗೆ ತೊಂದರೆಯಾಗಬಹುದು.

ಕಾಲ ಕಳೆದಂತೆ: ಇವನು/ಇವಳು ಯೋಚನೆ ಅವನು/ಅವಳು ಸಂಪರ್ಕಿಸಲಿ ಎಂದು ಕಾಯುವುದು.

ಮತ್ತಷ್ಟು ಕಾಲ ಸವೆದಂತೆ: ಇವನು/ಇವಳು ಹೀಗೆ ಯೋಚಿಸಬಹುದು: ನಾನೇ ಏಕೆ ಮೊದಲು ಸಂಪರ್ಕಿಸಬೇಕು. ಅವನು/ಅವಳು ಸಂಪರ್ಕಿಸಲಿ ಎಂದು.

ಹೀಗಿದ್ದ ಸ್ನೇಹ ನಿಧಾನವಾಗಿ ಮರೆಯಾಗಿ ಹಗೆ ಸಾಧಿಸುವ ಮಟ್ಟಕ್ಕೆ ಹೋಗುವುದು.

ಕೆಲವು ವರ್ಷಗಳ ನಂತರ ಸ್ಮರಣ ಶಕ್ತಿ ಕುಂದುತ್ತಾ ಗೆಳೆಯ/ಗೆಳತಿಯ ರ ನೆನಪು ಮಸುಕಾಗುವುದು. ಹೀಗೆಯೇ ಸಂಪೂರ್ಣವಾಗಿ ಸ್ನೇಹವೇ ಮರೆಯುತ್ತಾ, ಮರೆಯುತ್ತಾ ಸ್ನೇಹವು ಕೊನೆಗೊಳ್ಳುವುದು.

ಸ್ನೇಹ ಎಂಬುದಕ್ಕೆ ನಾನಾ ಅರ್ಥಗಳೂ ಇದೆ. ಅಮರಕೋಶದಲ್ಲಿ ಈ ಪದಕ್ಕೆ - ಎಣ್ಣೆ, ಜಿಡ್ಡು, ಬಂಗಾರ ಎಂಬರ್ಥವೂ ಇದೆ (ಅಮರಸಿಂಹನ ಅಮರಕೋಶದಲ್ಲಿ ಸ್ವರ್ಣ ಎಂಬುದನ್ನು ಓದಿದ್ದ ನೆನಪು) ಹಾಗಿದ್ದಮೇಲೆ ಇಂತಹ `ಸ್ನೇಹ'ವನ್ನು ಯಾಕೆ ಮರೆಯಬೇಕು?

ಗೆಳೆತನ ಎಂದೆಂದಿಗೂ ಇರಬೇಕೆಂದರೆ ಇದು ಪ್ರತಿಯೊಬ್ಬ ಸ್ನೇಹಿತ/ತೆಗೂ ನೆನಪಿನಲ್ಲಿದ್ದರೆ ಸಾಕಲ್ಲವೇ?

"Don't walk behind me, I may not lead. Don't walk in front of me, I may not follow. Just walk beside me and be my friend." - Albert Camus

-ಚಂದ್ರಶೇಖರ ಬಿ.ಎಚ್.
೦೪.೧೨.೨೦೦೯

13 ಕಾಮೆಂಟ್‌ಗಳು:

ಚುಕ್ಕಿಚಿತ್ತಾರ ಹೇಳಿದರು...

ಸರ್ . ನಿರೀಕ್ಷೆ ಇರದ ಸ್ನೇಹ ನಿಜವಾದ ಸ್ನೇಹ ಅ೦ತ ನನ್ನ ಅಭಿಪ್ರಾಯ. ಇದಕ್ಕೆ ದೇಶ, ಕಾಲ , ವಯಸ್ಸಿನ ಮಿತಿ , ಲಿ೦ಗ ಯಾವುದೂ ಭಾದಿಸದು ಅಲ್ಲವೇ...? ಸ್ನೇಹದ ಬಗೆಗೆ ಯೋಚನೆಗೆ ಹಚ್ಚಿದ್ದೀರ... ವ೦ದನೆಗಳು.

shivu.k ಹೇಳಿದರು...

ಸರ್,
ಸ್ನೇಹಕ್ಕಾಗಿ ಬರೆದ ಬರಹ ಚೆನ್ನಾಗಿದೆ...ನೀವು ಹೇಳಿರುವ ಕಾರಣಗಳು ಖಂಡಿತ ಗೆಳೆಯ ಗೆಳತಿಯರನ್ನು ಬೇರ್ಪಡಿಸಿಬಿಡುತ್ತವೆ....ಇದಕ್ಕೆ ego ಕೂಡ ಕಾರಣವಿರಬಹುದಲ್ಲವೇ?

Ittigecement ಹೇಳಿದರು...

ಚಂದ್ರು

ನನ್ನ ಕೆಲವು ಗೆಳೆಯರಿದ್ದಾರೆ..
ಅವರನ್ನೆಲ್ಲ ಭೇಟಿಯಾಗದೆ
ಮಾತನಾಡದೆ ಬಹಳದಿನಗಳಾದರೂ
ಕೆಲವೊಮ್ಮೆ ವರ್ಷಗಳಾದರೂ ನಮ್ಮ ಸ್ನೇಹಕ್ಕೇನೂ ಧಕ್ಕೆಯಾಗಿಲ್ಲ...
ಅದು ಹಾಗೆಯೇ ಇದೆ.

ಸಿಕ್ಕಾಗ ಬಹಳ ಖುಷಿಯಾಗುತ್ತದೆ...

ಒಮ್ಮೆ ಮೂಡಿದ ಸ್ನೇಹ...
ಹಳತಾಗದು... ಅದು ಯಾವಾಗಲೂ
ಹೊಸತಾಗಿಯೇ ಇರುತ್ತದೆ...

ಚಂದದ, ಚಿಂತನೆಯ ಲೇಖನ..
ಅಭಿನಂದನೆಗಳು...

ಕ್ಷಣ... ಚಿಂತನೆ... ಹೇಳಿದರು...

ಚುಕ್ಕಿಚಿತ್ತಾರ, ನಿರೀಕ್ಷೆ ಇರದ ಸ್ನೇಹ ನಿಜವಾದ ಸ್ನೇಹ - ಇದು ನಿಮ್ಮ ಅಭಿಪ್ರಾಯವಷ್ಟೇ ಅಲ್ಲ, ಎಲ್ಲ ನಿಜವಾದ ಸ್ನೇಹದಲ್ಲಿ ಇದು ಇರುವಂತಹುದೇ ಎಂಬುದು ನನ್ನ ಅನಿಸಿಕೆ.

ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ಹೀಗೆಯೆ ಬರುತ್ತಿರಿ.

ಕ್ಷಣ... ಚಿಂತನೆ... ಹೇಳಿದರು...

ಶಿವು ಅವರೆ, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.
ego ಸಹಾ ಕಾರಣವಾಗಬಲ್ಲದು. ಈ ಬರಹ ಬರೆಯಲು ಪ್ರೇರಣೆ ಈ-ಮೇಲ್‌ ನಲ್ಲಿ ನನಗೆ ಬಂದ ಒಂದು ಸಂದೇಶ.

ಹೀಗೆಯೆ ಬರುತ್ತಿರಿ.

ಕ್ಷಣ... ಚಿಂತನೆ... ಹೇಳಿದರು...

ಪ್ರಕಾಶಣ್ಣ,

ನಿಮ್ಮ ಗೆಳೆತನದ ವಿಷಯ ತಿಳಿಸಿದ್ದೀರಿ. ನಿಜವಾದ ಸ್ನೇಹ, ಹಳೆಯ ಗೆಳೆಯರು, ಹಳೆಯ ನೆನಪುಗಳು ಹಾಗೆಯೇ ಎಂದೆಂದಿಗೂ ಖುಷಿ ಕೊಡುತ್ತವೆ.

ಧನ್ಯವಾದಗಳು.

ತೇಜಸ್ವಿನಿ ಹೆಗಡೆ ಹೇಳಿದರು...

ಚಂದ್ರಶೇಖರ್ ಅವರೆ,

ಸ್ನೇಹ ಉಳಿಯಬೇಕಾದರೆ ಕನಿಷ್ಠ ಒಬ್ಬರಿಗಾದರೂ ಅದರ ಬೆಲೆ, ಮಹತ್ವದ ಅರಿವಿರಬೇಕು. ಒಬ್ಬರಲ್ಲಾದರೂ ಅದು ನಿಸ್ವಾರ್ಥ, ನಿಶ್ಕಲ್ಮಶವಾಗಿರಬೇಕು. ಆಗ ಇಬ್ಬರಲ್ಲೂ ಉಳಿದಿರುತ್ತದೆ. ಹಗೆಯಲ್ಲಂತೂ ಕೊನೆಗಾಣದು. ಕ್ರಮೇಣ ಇನ್ನೊಬ್ಬ ವ್ಯಕ್ತಿಯೂ ತನ್ನ ಭಾವನೆಗಳನ್ನು ಬದಲಾಯಿಸಿ ಮತ್ತೊಬ್ಬನಂತೇ ಆಗುತ್ತಾನೆ.

ಸ್ನೇಹದಲ್ಲಿ ಇರಬೇಕಾದದ್ದು ಒಂದೇ ವಿಶ್ವಾಸ. ಆದರೆ ಪ್ರೀತಿಯಲ್ಲಿ ಮಾತ್ರ ಸ್ನೇಹ ಹಾಗೂ ವಿಶ್ವಾಸ ಎರಡೂ ಇರಬೇಕಾಗುತ್ತದೆ.

PARAANJAPE K.N. ಹೇಳಿದರು...

ಸ್ನೇಹ, ಸ್ನೇಹತ್ವ ದ ಮಹತ್ವವನ್ನು ಬಹಳ ಚೆನ್ನಾಗಿ ಪುರಾಣ ಪುರುಷರ ಉದಾಹರಣೆಯೊ೦ದಿಗೆ ಕೊಟ್ಟಿದ್ದೀರಿ, ಜೊತೆಜೊತೆಗೆ ಇಂದಿನ ದಿನಮಾನದಲ್ಲಿ ಸ್ನೇಹಿತರೆ ಹೇಗೆ ಬೆನ್ನಿಗೆ ಚೂರಿ ಇಕ್ಕುತ್ತಾರೆ ಎ೦ಬುದನ್ನೂ ಸೂಚ್ಯವಾಗಿ ಹೇಳಿದ್ದೀರಿ. ಉತ್ತಮ ಲೇಖನ,ಮನಸ್ಸನ್ನು ಯೋಚನೆಗೆ ಹಚ್ಚುವ ಬರಹ. ಚೆನ್ನಾಗಿದೆ.

AntharangadaMaathugalu ಹೇಳಿದರು...

ಚಂದ್ರು ಅವರೇ....
ಸ್ನೇಹದ ಬಗ್ಗೆ ಚೆನ್ನಾಗಿ ಬರೆದಿದ್ದೀರಿ. ಎಲ್ಲಿ ನಿರ್ಮಲ ಸ್ನೇಹವಿರುತ್ತದೋ ಅಲ್ಲಿ ತಪ್ಪು ತಿಳುವಳಿಗೆ, ವಯಸ್ಸು, ಕಾಲ, ಲಿಂಗ ಯಾವುದೂ ಮುಖ್ಯವಾಗೊಲ್ಲ. ಏನನ್ನೂ ಎದುರು ನೋಡದಿರುವುದೇ ನಿರ್ಮಲ ಸ್ನೇಹ ಎಂದು ನನ್ನ ಅನಿಸಿಕೆ. ಬೆನ್ನಲ್ಲಿ ಚೂರಿ ಹಾಕುವವರು, ಮೋಸ ಮಾಡುವವರು ಸ್ನೇಹಿತರಲ್ಲ....

ಕ್ಷಣ... ಚಿಂತನೆ... ಹೇಳಿದರು...

ತೇಜಸ್ವಿನಿ, ಪರಾಂಜಪೆ ಮತ್ತು ಶ್ಯಾಮಲಾ: ಸ್ನೇಹಕ್ಕೆ, ವಿಶ್ವಾಸ, ನಂಬಿಕೆ ಇವೆಲ್ಲವೂ ಮುಖ್ಯವಾದವು.ನಿಮ್ಮೆಲರ ಅನಿಸಿಕೆಗೆಳಿಗೆ ಧನ್ಯವಾದಗಳು.

ಹೀಗೆಯೆ ಬರುತ್ತಿರಿ.

ಸ್ನೇಹದಿಂದ,

ಸಾಗರದಾಚೆಯ ಇಂಚರ ಹೇಳಿದರು...

ಸರ್,
ಸ್ನೇಹದಲ್ಲಿ ನೀರೀಕ್ಷೆ ಇರಬಾರದು
ಆ ನೀರೀಕ್ಷೆ ಇದ್ದಾಗಲೇ ಸ್ನೇಹೆ ಹಾಳಾಗುತ್ತದೆ ಎಂಬುದು ನನ್ನ ಅನುಭವ
ತುಂಬಾ ಚೆನ್ನಾಗಿ ಹೇಳಿದ್ದಿರ ಸ್ನೇಹದ ಬಗೆಗೆ

ಮನಸಿನ ಮಾತುಗಳು ಹೇಳಿದರು...

ಸ್ನೇಹದ ಕಡಲಲ್ಲಿ, ನೆನಪಿನ ದೋಣಿಯಲಿ...ಎನ್ನುವಂತೆ...
ನೀವು ಹೇಳಿದ್ದು ಸರಿ... ನಮ್ಮ ಸ್ನೇಹಿತರು ಅಂದ ಮಾತ್ರಕ್ಕೆ ದಿನವೂ ಭೇಟಿಯಾಗಬೇಕು, ಮಾತನಾಡಬೇಕು ಎಂದರೆ ಕಷ್ಟವಾಗಬಹುದು...
ಒಮ್ಮೆ ಸ್ನೇಹಿತರಾದ ಮೇಲೆ ಸ್ನೇಹದ ಬಗ್ಗೆ ಒಂದು ಪ್ರೀತಿ, ನೆನಪು ಇದ್ದರೆ ಸಾಕು ಎನಿಸುತ್ತದೆ...
ಚೆಂದದ ಬರಹ...:)

ಕ್ಷಣ... ಚಿಂತನೆ... ಹೇಳಿದರು...

ದಿವ್ಯಾ ಅವರೆ, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ಹೀಗೆಯೆ ಬರುತ್ತಿರಿ.