ಹಿಂದಿನ ಬ್ಲಾಗಂಚೆಯಿಂದ
ಮುಂದೆ, ಇನ್ನರ್ಧ ಘಂಟೆಯ ಹಾದಿ. ಜೀಪಿನ ಹಾದಿಯಲ್ಲಿಯೇ ನಮ್ಮ ನಡಿಗೆ ಸಾಗಿದೆ. ಆದರೆ, ಸ೨ ಮತ್ತು ನಾನು ಹತ್ತಿರದ ಹಾದಿಗಾಗಿ ಹುಡುಕಿ ಸ್ವಲ್ಪ ಹುಲ್ಲಿನ ಹಾದಿ ತುಳಿದಿದ್ದೆವು. ಆಳೆತ್ತರದ ಹುಲ್ಲಿನ ರಾಶಿಯಿಂದಾಗಿ ಮುಂದೆ ಸಾಗದೆ ವಾಪಸಾದೆವು. ಕಾರಣ: ಅಲ್ಲೇನಿರುವುದೋ ಬಲ್ಲವರಾರು?
ಮುಂದುವರೆದಿದೆ.. ಚಾರಣದ ಬಗೆಗಿನ ಬರಹ
ಹರದಾರಿ ದೂರದಲ್ಲಿ ಕಾಣುತ್ತಿತ್ತು ಅತಿಥಿ ಗೃಹ. ನಡಿಗೆ ಹಾಗೆಯೇ ಸಾಗಿತ್ತು. ಬಿಸಿಲಿನ ಝಳವೂ ಸೇರಿ, ನೀರು ಖಾಲಿಯಾಗಿದೆ. ಬಾಯಾರಿಕೆಯ ತಣಿಸುವುದಕ್ಕೆ ಅಲ್ಲಿ ಯಾವುದೇ ನೀರಿನ ಸೆಲೆಯಿಲ್ಲ. ಆ ಮಣ್ಣಿನ ಹಾದಿಯಲ್ಲಿ ಜೀಪೊಂದು ಸಾಗಿದರೆ ಸಾಕು ಮೈ-ಕೈ-ಮುಖವೆಲ್ಲ ಕೆಂಬಣ್ಣ.
ಸಮುದ್ರ ಮಟ್ಟದಿಂದ ಸುಮಾರು ೧೩೪೩ ಮೀಟರುಗಳಷ್ಟು ಎತ್ತರದಲ್ಲಿದೆ ಈ ಕೊಡಚಾದ್ರಿಯ ಪರ್ವತ ಪ್ರದೇಶ, ಕರ್ನಾಟಕದ ಪಶ್ಚಿಮಘಟ್ಟಗಳ ಸಾಲಿನಲ್ಲಿ ಬರುತ್ತದೆ. ಎರಡನೇ ಅತಿ ಎತ್ತರದ ಪ್ರದೇಶ ಎಂಬುದಾಗಿ ಹೆಸರಾಗಿದೆ. ಕೊಲ್ಲೂರಿನ ಮೂಕಾಂಬಿಕಾ ದೇವಳದ ಹಿನ್ನೆಲೆಯಲ್ಲಿರುವ ಇದು ಚಾರಣಿಗರಿಗೆ ಅತ್ಯಂತ ಪ್ರೀತಿಯ ಸ್ಥಳ. ಕೊಡಚಾದ್ರಿಯು ಮೂಕಾಂಬಿಕ ವನ್ಯಜೀವಿಗಳ ಅಭಯಾರಣ್ಯದಲ್ಲಿದೆ. ಇದರ ಮೂಲ ಹೆಸರು ಸಂಸ್ಕೃತದಲ್ಲಿ : ಕುಟಕಾಚಲಮ್ ಎಂದು. ಇಲ್ಲಿ ಮೂಲಮೂಕಾಂಬಿಕೆಯು ನೆಲೆಸಿದ್ದು, ಹಾಗೂ ಆದಿ ಶಂಕರಾಚಾರ್ಯರು ತಪಸ್ಸು ಮಾಡಿದ್ದರೆಂಬ ಪ್ರತೀತಿಯಿದೆ.
ಶ್ರೀ ಸಿದ್ಧಪೀಠ, ಹಲವರಿ ಮಠ: ಇಲ್ಲಿ ಮೂಲ ಮೂಕಾಂಬಿಕೆ ದೇವಾಲಯವಿದೆ. ಇಲ್ಲಿಯೇ ಶ್ರೀ ಸೀತಾರಾಮ ಜೋಗಿ ಎಂಬುವರ ಒಂದು ಅಂಗಡಿ ಕಮ್ ಮೆಸ್. ಉಳಿಯುವವರಿಗೂ ಸ್ಥಳಾವಕಾಶ ಮಾಡಿಕೊಡುತ್ತಾರೆ. ಇಲ್ಲಿ ನಮ್ಮ ಜೊತೆಗಾರರು ಕೆಲವರು ಉಳಿದರು.
ಇಲ್ಲಿಂದ ಮುಂದಕ್ಕೆ ಒಂದು ಕೊಳವಿದೆ. ನಿರಂತರ ನೀರಿನ ಧಾರೆ ಈ ಕೊಳದಲ್ಲಿ ಬಂದು ಸೇರುತ್ತದೆ. ಈ ಕೊಳದಲ್ಲಿ ಮೀನುಗಳೂ ಸಹ ಇವೆ. ಕೊಳದ ಎಡಗಡೆಗೆ ಬಂದರೆ, ಭದ್ರಕಾಳಿ ಮತ್ತು ಪರ್ವತೇಶ್ವರ ದೇವಾಲಯ. ಇನ್ನೂ ಸ್ವಲ್ಪ ಮೇಲಕ್ಕೆ ಸೂರ್ಯೋದಯವನ್ನು ನೋಡಬಹುದಾದ ತಾಣವಂತೆ. ನಮಗೆ ಆ ಸೂರ್ಯೋದಯ ನೋಡುವ ಭಾಗ್ಯ ಇರಲಿಲ್ಲವಾಗಿ ಆ ದಾರಿಗೆ ಹೋಗಲಿಲ್ಲ.
ಇಲ್ಲಿಂದ ಒಂದು-ಒಂದೂ ವರೆ ಕಿ.ಮೀ. ದೂರದಲ್ಲಿ ಅಗಸ್ತ್ಯ ತೀರ್ಥ, ಗಣೇಶನ ಗುಹೆ, ಸರ್ವಜ್ಞ ಪೀಠ ಹಾಗೂ ಚಿತ್ರಾಮೂಲ ನೋಡುವ ಎಂದು ಎರಡು ಗುಂಪಾಗಿ ಹೊರಟೆವು.
ಕೇರಳ, ಉಡುಪಿ, ಮಂಗಳೂರು ಹೀಗೆಲ್ಲ ಬೇರೆ ಬೇರೆ ಊರುಗಳಿಂದ ಸಂಸಾರ ಸಮೇತರಾಗಿ ಜನರು ಬರುತ್ತಿದ್ದರು. ಒಂದು ಎನ್.ಸಿ.ಸಿ. ಮಕ್ಕಳ ತಂಡವೂ ಉಡುಪಿಯಿಂದ ಬಂದಿತ್ತು. ಇದರಲ್ಲಿ ಬಹಳಷ್ಟು ಮಂದಿ ಮಧ್ಯವಯಸ್ಸು ದಾಟಿದವರೂ, ಪುಟ್ಟ ಮಕ್ಕಳೂ ಇದ್ದದ್ದು ನೋಡಿದೆವು.
ಇಲ್ಲಿ ಬಹಳ ಆಯಾಸವಾಯಿತು. ಹತ್ತಿರದಲ್ಲೆ ಮಜ್ಜಿಗೆ, ಗ್ಲೂಕೋಸು, ನಿಂಬೆ ರಸ ಮಾರುತ್ತಿದ್ದರು. ಸೌತೆಕಾಯಿ ರೂ.೧೦. ಅದಕ್ಕಿಂತ ಮಜ್ಜಿಗೆ, ನಿಂಬೆ ಪಾನಕವೇ ಸರಿಯೆಂದು ನಿಂಬೆರಸ ಕುಡಿದೆವು. ಇಲ್ಲಿ ನಿಂಬೆ ರಸಕ್ಕೆ ಸಕ್ಕರೆಯಿಲ್ಲ, ಉಪ್ಪಾಗಿತ್ತು. ಕಾರಣ ಸಕ್ಕರೆ ಇಲ್ಲ!!!. ಸರಿ ಮುಂದಕ್ಕೆ ಹೊರಟೆವು. ಕಾಲುಹಾದಿ ಬಹಳ ಕಠಿಣವಾಗಿತ್ತು. ಸುತ್ತಲಿನ ದೃಶ್ಯ ರಮಣೀಯ, ರುದ್ರಮನೋಹರ. ಎಚ್ಚರ ತಪ್ಪಿ ಜಾರಿದರೆ.... ಯೋಚಿಸುವುದಕ್ಕೂ ಸಮಯವಿಲ್ಲ! ಕಡಿದಾದ ಹಾದಿಯಲ್ಲಿ ಗಾಳಿಯ ಸುಂಯ್ ಎನ್ನುವ ಭೋರ್ಗರೆತ (??) ಒಮ್ಮೆ ಬೆಚ್ಚಿ ಬೀಳಿಸಿದ್ದಂತೂ ನಿಜ!
ಗಣೇಶನ ಗುಹೆ: ಇಲ್ಲಿ ಹೋದಾಗ ನಿಜಕ್ಕೂ ಆ ಬಿಸಿಲಿನಿಂದ, ಸೊರಗಿದ ಮನಸ್ಸು ತಂಪಾಗುವ ವಾತಾವರಣ. ತುಂಬಾ ಹಿತಕರವಾದ ಪ್ರದೇಶ ಇದು. ಮನಸಿನ ದುಗುಡ-ದು:ಖಗಳನ್ನೆಲ್ಲ ಮರೆಸುವಂತಹ ತಂಪಾದ, ಸುತ್ತಲಿನ ಗಿಡಬಳ್ಳಿಗಳಲ್ಲಿ ಕುಳಿತು ಕೂಗುವ ಹಕ್ಕಿಗಳಿಂಚರದ ಪರಿಸರ. ಅಲ್ಲಿನ ಪೂಜಾರಿಯವರು ಗಣೇಶನ ಗುಹೆಗಿಂತ ಮುಂಚೆ (ಇದರ ಮುಂದಕ್ಕೆ ಒಂದು ಇಳಿಜಾರು ದಾರಿ ಇದೆ) ಫಾಲ್ಸ್ ಇತ್ತು. ಈ ಕಡೆಯಿಂದ ಬಂದಿದ್ದರೆ ಚೆನ್ನಾಗಿತ್ತು ಎಂದರು. ನಾವು ದಾರಿ ತಪ್ಪಿದ್ದು ಆಗ ತಿಳಿಯಿತು.
ಮುಂದೆ ಮತ್ತೆ ಸ್ವಲ್ಪ ಕಡಿದಾದ ಹಾದಿ. ಇಲ್ಲಿ ಎಡಭಾಗಕ್ಕೆ ಸ್ವಲ್ಪ ವಾರೆಯಾಗಿ ನೋಡಿದರೂ ತಲೆ ಧಿಮ್ಮೆನಿಸುತ್ತದೆ. ಕೋಲಿದ್ದರೆ ಅದೇ ಆಧಾರ. ಸ್ವಲ್ಪ ಕಲ್ಲು ಮಣ್ಣಿನ ಹಾದಿ. ಮಳೆಗಾಲದಲ್ಲಾದರೆ ಮತ್ತೂ ಜಾರುತ್ತದೆ. ಸರ್ವಜ್ಞ ಪೀಠ ಕಾಣಿಸಿತು. ಇಲ್ಲಿ ಆದಿ ಶಂಕರರ ವಿಗ್ರಹವಿದೆ. ತುಂಬಾ ಚೆನ್ನಾಗಿದೆ. ಸುತ್ತಲೂ ಎತ್ತರೆತ್ತರದ ಬೆಟ್ಟಗಳು. ಅಲ್ಲಿಯೆ ಪಕ್ಕದಲ್ಲಿ ಒಂದು ನಿಂಬೆ ರಸ, ಮಜ್ಜಿಗೆ, ಸೌತೆಕಾಯಿ, ಹೀಗೆ ತಿನಿಸು-ಪಾನೀಯಗಳ ಒಂದು ಪುಟ್ಟ ಅಂಗಡಿಯೂ ಇದೆ. ಇಲ್ಲಿನ ಜಾಗ ಅತಿ ಎತ್ತರದಲ್ಲಿರುವುದರಿಂದ ಗಾಳಿಯೂ ಸಹ ಹಿತವಾಗಿತ್ತು. ಆದರೂ ನೀರಿಗಾಗಿ ಮನಸ್ಸು ಬೇಡುತ್ತಿತ್ತು. ಸೌತೆಕಾಯಿ ಸಮಾರಾಧನೆ ನಡೆಸಿದೆವು. ಅಲ್ಲಿಂದ ಚಿತ್ರಾಮೂಲಕ್ಕೆ ಹೋಗೋಣವೆಂದುಕೊಂಡರೂ ಅದಾಗಲೇ ಮಧ್ಯಾಹ್ನದ ಬಿಸಿಲಾಗಿತ್ತು. ಮತ್ತು ಆ ಕಡೆಯಿಂದ ಬರುತ್ತಿದ್ದ ತಂಡವು ತುಂಬ ಕಷ್ಟ ಅಲ್ಲಿಗೆ ಹೋಗುವುದು, ಬೇಡ ಎಂದರು. ನಮ್ಮ ಜೊತೆಯವರೂ ಸಹ ಸುಸ್ತಾಗಿದ್ದರಿಂದ ಅಲ್ಲಿಂದಲೇ ಚಿತ್ರಾಮೂಲಕ್ಕೆ ಶರಣೆಂದೆವು.
ಸರಿ ವಾಪಾಸು ಬರುವಾಗ ಮತ್ತೆ ನಿಂಬೆ ಶರಬತ್ತು, ಆಹ್, ಅಂತಹ ಬಿಸಿಲಿನಲ್ಲಿಯೂ ತಣ್ಣಗೆ ಕೊರೆಯುವ, ಒಮ್ಮೆ ಗಂಟಲಲ್ಲಿ ಪಾನಕ ಇಳಿದರೆ ಝುಮ್ಮೆನ್ನುವಂತಹ ಆಹ್ಲಾದತೆ. ಮರೆಯಲುಂಟೆ? ಇನ್ನು, ಈ ದಾರಿಯನ್ನು ಹತ್ತುವಾಗ ತೆಗೆದುಕೊಂಡಿದ್ದ ಸಮಯ ಒಂದುಘಂಟೆಯಾಗಿದ್ದರೆ, ಇಳಿಯುವಾಗ ಅರ್ಧಗಂಟೆಯೂ ಆಗದಷ್ಟು ಬೇಗನೇ ಇಳಿದೆವು ಅನಿಸಿತು.
ಮೊದಲೇ ಭಟ್ಟರ ಮನೆಯಲ್ಲಿ ಊಟಕ್ಕೆ ಹೇಳಿದ್ದರಿಂದ ಎಲ್ಲರೂ ಊಟಮಾಡಿದ್ದಾಯಿತು. ಕೊಡಚಾದ್ರಿಯ ಮೂಲಕ್ಕೆ ನಡೆದೇ ಬರುವ ಯೋಜನೆ/ಯೋಚನೆಯಿದ್ದರೂ ಸಮಯಾಭಾವದಿಂದ ಜೀಪಿನಲ್ಲಿ ವಾಪಸು ಹೊರಟೆವು.
ಜೀಪಿನ ಅನುಭವ: ನಿಜಕ್ಕೂ ಇದು ಜೀವ ಕೈಯಲ್ಲಿ ಹಿಡಿದು ಕೂರುವಂತಹ ಅನುಭವ. ಅಡಿಗಡಿಗೆ ಕಲ್ಲು, ಹಳ್ಳಗಳು. ಎದುರಿನಿಂದ ಬರುವ ಜೀಪುಗಳಿಗೆ ಇರುವ ಜಾಗದಲ್ಲಿಯೇ ದಾರಿಬಿಡುವುದು, ಇಲ್ಲವೇ ಹಿಂದಕ್ಕೆ ಚಲಿಸಿ ಮುಂದಕ್ಕೆ ಚಲಿಸುವುದು. ಬಲಗಡೆಗೆ ಪಾತಾಳ ಪ್ರಪಂಚ. ಜೀಪಿನಲ್ಲಿನ ಅನುಭವವೂ ರೋಮಾಂಚನ ಎನ್ನಬಹುದು. ಆದರೂ ಇದು ತುಂಬಾ ಪ್ರಯಾಸಕರವೆನಿಸುತ್ತದೆ.
ಹೀಗೆ, ನಮ್ಮ ಕೊಡಚಾದ್ರಿಯ ಪಯಣ ಮುಗಿಸಿದೆವು. ಅಂತೂ ಒಂದು ಸಾಹಸ ಯಾತ್ರೆ ಮಾಡಿದಂತಹ ಅನುಭವ ನಮ್ಮೊಡನೆ ಬಂದಿದ್ದ ಹಾಗೂ ಮೊದಲಬಾರಿಗೆ ಇಂತಹ ಚಾರಣ ಮಾಡಿದವರಿಗಾಯಿತು, ಆಗಿದೆ ಎಂದರೆ ... ಬೇರೆ ಮಾತಿಲ್ಲ.
[ಈ ಚಾರಣ ಲೇಖನ ಓದಿದ ಮೇಲೆ ನಿಮಗೂ ಕೊಡಚಾದ್ರಿಗೆ ಚಾರಣ ಹೋಗಿ ಬರಬೇಕೆಂದು ಅನಿಸಿದರೆ ಖಂಡಿತಾ ಹೋಗಿ ಬನ್ನಿ. ನಗರದ ಜಂಜಾಟದ, ಒತ್ತಡದ ಬದುಕನ್ನು ಪ್ರಕೃತಿಯ ಸೊಬಗಿನಲ್ಲಿ ದೂರಮಾಡಿ ಬನ್ನಿ. ಶುಭವಾಗಲಿ]
ಲೇಖನ: ಚಂದ್ರಶೇಖರ ಬಿ.ಎಚ್.
ಛಾಯಾಚಿತ್ರಗಳು: ಚಂದ್ರಶೇಖರ ಬಿ.ಎಚ್. ಮತ್ತು ಉಮೇಶ್
ಛಾಯಾಚಿತ್ರಗಳು: ಚಂದ್ರಶೇಖರ ಬಿ.ಎಚ್. ಮತ್ತು ಉಮೇಶ್
10 ಕಾಮೆಂಟ್ಗಳು:
ನಿಮ್ಮ ಚಾರಣದ ಅನುಭವ, ಫೋಟೋ ನೋಡಿ ನನಗು ಹೋಗಬೇಕೆನಿಸುತ್ತಿದೆ, ಈ ಬೇಸಿಗೆ ಕಳೆಯುವುದರೊಳಗೆ ಒಮ್ಮೆ ಹೋಗಿ ಬರಲೇಬೇಕು. ಚೆನ್ನಾಗಿದೆ ಬರಹ-ಲೇಖನ, ಇಲ್ಲಿಗೆ ಮುಗಿಯಿತೇ, ಇನ್ನು ಇದೆಯೇ ??
ಸರ್,
ಬೆಟ್ಟದ ಹಿಂಬಾಗ ಒಂದು ಸಣ್ಣ ಜರಿ ಹರಿಯುತ್ತದೆ. ಅದನ್ನು ನೋಡದೆ ಬಿಟ್ಟಿರಾ....ನಾವು ಪೂರ ಕಾಲುನಡೆಯಲ್ಲೇ ಟ್ರಕ್ಕಿಂಗ್ ಮಾಡಿದ್ದರಿಂದ ಬಟ್ಟರ ಮನೆಯಲ್ಲಿ ಊಟಮಾಡಿ ಆ ಜರಿಯಲ್ಲಿ ಸ್ನಾನ ಮಾಡಿದೆವು. ಅದರ ಅನುಭವವೇ ಬೇರೆ..
ಇದು ನಮ್ಮ ಅನುಭವ. ನಿಮ್ಮ ಅನುಭವವೂ ಒಂಥರ ವಿಭಿನ್ನವೆನ್ನಿಸುತ್ತೆ. ನಮಗೂ ಮತ್ತೊಮ್ಮೆ ಬಿಡುವಾದರೆ ಹೋಗಬೇಕೆನ್ನಿಸುತ್ತದೆ.
೩ ವರ್ಷಗಳ ಹಿಂದೆ ಕೊಡಚಾದ್ರಿಗೆ ನಾವೆಲ್ಲಾ ಗೆಳೆಯರು ಹೋಗಿದ್ವಿ. ಮಜಾ ಏನು ಅಂದ್ರೆ ನಾವು ಚಾರಣ ಮಾಡೋದ್ ಬಿಟ್ಟು ಸ್ಯಾಂಟ್ರೊ ಕಾರ್ ಹತ್ತಿಸಿದ್ವಿ...ಪರದಾಡ್ಕೊಂಡು ವಾಪಸ್ ಬಂದು ನೆಡ್ಕೊಂಡ್ ಹೋದ್ವಿ. ನಿಮ್ಮ ನಿರೂಪಣೆ ಇನ್ನೊಮ್ಮೆ ಅಲ್ಲಿಗೆ ಹೋಗಿ ಬಂದಂತಾಯ್ತು. ಒಳ್ಳೆ ಅನುಭವ. ಚಿತ್ರಗಳೂ ಸಖತ್ತಾಗಿವೆ.
ಪರಾಂಜಪೆ ಸರ್, ಪ್ರವಾಸ ಲೇಖನ ಓದಿ ನಿಮಗೂ ಹೋಗಬೇಕೆನಿದ್ದು ಕೇಳಿ ಸಂತೋಷವಾಯಿತು.ಖಂಡಿತ ಹೋಗಿ ಬನ್ನಿ. ಶುಭವಾಗಲಿ.
ಇಲ್ಲಿಗೆ ಕೊಡಚಾದ್ರಿ ಕುರಿತ ನಮ್ಮನುಭವಗಳ ಲೇಖನ ಕೊನೆಯಾಗಿದೆ.
ಸ್ನೇಹದಿಂದ,
ಶಿವು ಸರ್,
ನಾವು ನಿಜಕ್ಕೂ ಇದನ್ನು ತಪ್ಪಿಸಿಕೊಂಡೆವು. ಬೇಸರವಾಯಿತು. ತುಂಬಾ ಸುಸ್ತಾಗಿದ್ದರಿಂದ, ಮತ್ತು ಜೊತೆಯವರೂ ಸಹ ಬಹಳ ಬಳಲಿದ್ದರಿಂದ ಪ್ರಯಾಸ ಪಡುವುದು ಬೇಡ ಎಂದು ತೀರ್ಮಾನಿಸಿದೆವು.
ನಿಮ್ಮ ಚಾರಣದ ಅನುಭವ ಹಂಚಿಕೊಳ್ಳಿ.
ಸ್ನೇಹದಿಂದ,
ಸುಬ್ರಮಣ್ಯ ಭಟ್ ಅವರಿಗೆ ಸ್ವಾಗತ. ನಿಮ್ಮ ಅನುಭವವನ್ನೂ ಪುಟ್ಟದಾಗಿ ಹಂಚಿಕೊಂಡಿದ್ದೀರಿ.
ನಮ್ಮ ಸಹೋದ್ಯೋಗಿಗಳೂ ಕೆಲವರು ಹೀಗೆಯೆ ಕ್ವಾಲಿಸ್ ತೆಗೆದುಕೊಂಡು ಪೂರ್ತಿ ಬೆಟ್ಟ ತಲುಪಿದ್ದರು. ಬರುವಾಗ ಬಹಳ ಕಷ್ಟಪಟ್ಟರು.
ಹೀಗೆಯೆ ಬರುತ್ತಿರಿ.
ಸ್ನೇಹದಿಂದ,
ಚಾರಣದ ವಿವರಣೆ ತುಂಬಾ ಚೆನ್ನಾಗಿದೆ
ಒಮ್ಮೆ ನಾವೂ ಹೋಗಬೇಕು
ಗುರು ಅವರೆ, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ಹೋಗಿಬನ್ನಿ. ಖುಷಿಕೊಡುವ ತಾಣ.
ಸ್ನೇಹದಿಂದ,
ಚಂದ್ರು ಅವರೆ..
ಚಿತ್ರಗಳು ಚೆನ್ನಾಗಿವೆ.... ನನಗೆ ಚಾರಣ ಹೋಗಲಾಗುವುದೋ ಇಲ್ಲವೋ ಗೊತ್ತಿಲ್ಲ, ಆದರೆ ನಿಮ್ಮ ಬರಹ ನಾನು ಹೋಗಿ ಬಂದಷ್ಟು ಖುಷಿ ಕೊಟ್ಟಿದೆ. ಧನ್ಯವಾದಗಳು.......
ಶ್ಯಾಮಲ
ಶ್ಯಾಮಲಾ,
ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು. ನೀವೂ ಸಹ ಹೋಗಿಬರಬಹುದು. ಏಕೆಂದರೆ, ನಮ್ಮೊಡನೆ ಇದ್ದವರೊಬ್ಬರು ೫೭ರ ವಯೋಮಾನದವರು. ಹೋಗಬೇಕೆಂಬ ಉತ್ಸಾಹವಿದ್ದರೆ.. ಖಂಡಿತ ಸಾಧ್ಯ.
ಭೂರಮೆ ಬ್ಲಾಗಿನಲ್ಲಿಯೂ ಸಹ ಕೊಡಚಾದ್ರಿಯ ಬಗ್ಗೆ ಇದೆ. ಓದಿ. ನಿಮಗೂ ಹೋಗಬೇಕೆನಿಸಬಹುದು.
ಸ್ನೇಹದಿಂದ,
ಕಾಮೆಂಟ್ ಪೋಸ್ಟ್ ಮಾಡಿ