ಗುರುವಾರ, ಸೆಪ್ಟೆಂಬರ್ 16, 2010

ಮೊನ್ನೆ ದಿನ ಏನಾಯ್ತೂಂದ್ರೇ....

ಮೊನ್ನೆ ದಿನ ಏನಾಯ್ತೂಂದ್ರೇ....

ಮೊನ್ನೆ ಭಾನುವಾರ ಗಣೇಶನ ಹಬ್ಬದ ಮಾರನೇ ದಿನ ನನಗೆ ಸ್ವಲ್ಪ ಸಿಟಿಯಲ್ಲಿ ಕೆಲಸವಿತ್ತು. ಹಾಗೆಯೇ ಕೆಲವು ಮಿತ್ರರನ್ನು ಭೇಟಿ ಮಾಡಲು ಹೋಗಿದ್ದೆ. ನಾನು ನನ್ನ ಸ್ನೇಹಿತ ಇಬ್ಬರೂ ಹಾಗೇ ದಾರಿಯಲ್ಲಿ (ಸೀತಾ ಸರ್ಕಲ್‌ ಹತ್ತಿರ)ನ ಒಂದು ಉಪಹಾರ ಮಂದಿರಕ್ಕೆ ಹೋದೆವು. ಕುಳಿತುಕೊಳ್ಳುವ ಜಾಗಕ್ಕೆ ಹೋದೆವು. ಏಕೆಂದರೆ, ಕನಿಷ್ಠ ಒಂದು ಹತ್ತು ನಿಮಿಷವಾದರೂ ಕುಳಿತು ಮಾತನಾಡುತ್ತಾ ತಿಂಡಿ ತಿನ್ನಬಹುದೆಂಬ ಆಸೆ. .. ತಿಂಡಿ ಕಾಫಿಗೆ ಆರ್ಡರ್‍ ಮಾಡಿ ಮಾತನಾಡುತ್ತಾ ಕುಳಿತೆವು... ಸರಿ ತಿಂಡಿಯೂ ಬಂದಿತು. ತಿಂಡಿ ಸೇವಿಸುತ್ತಾ ನಮ್ಮ ಮಾತು ಮುಂದುವರೆದಿತ್ತು...


ಹೀಗಿರುವಾಗ...

ಎಲ್ಲಿಂದಲೋ ಒಂದು ನೊಣ ಕಾಫಿ ಕಪ್ಪಿಗೆ ಬಿದ್ದಿತ್ತು. ಅವನು ಕಾಫಿ ತಂದಿಟ್ಟಾಗ ಬಿದ್ದಿರಲಿಲ್ಲ. ನಮ್ಮ ಗಮನಕ್ಕೂ ಬಂದಿರಲಿಲ್ಲ.

ಆಗ ನನಗೆ ನೆನಪಾಗಿದ್ದು ಮೇಯರ್‌ ಮುತ್ತಣ್ಣ ಚಲನಚಿತ್ರದಲ್ಲಿನ ಒಂದು ಪಾತ್ರ... ದ್ವಾರಕೀಶ್‌ ಹೋಟೆಲಿನಲ್ಲಿ ನಡೆಸುವ ಕರಾಮತ್ತು. ನಂತರ ಮುತ್ತಣ್ಣನ ಭೇಟಿ... ಇತ್ಯಾದಿ. ಇತ್ಯಾದಿ...

ಆದರೆ, ಇಲ್ಲಿ ಆಗಿದ್ದು ಬೇರೆಯೇ ಕರಾಮತ್ತು!!! ಇನ್ನೇನು ಕಾಫಿ ಕಪ್ಪಿಗೆ ಕೈ ಹಾಕಬೇಕು.....

ನೋಡಿ ನೊಣ ಬಿದ್ದಿದೆ. ಬೇರೆ ಬೇರೊಂದು ಕಪ್ ಕಾಫಿ ಕೊಡಿ ಎಂದಾಗ...

ಆತನ ವಿಚಾರಣೆ ಶುರುವಾಗಬೇಕೆ?

ನೊಣ ಈಗ ಬಿತ್ತಾ?? ಮೊದಲೇ ಬಿದ್ದಿತ್ತಾ??? ಹೀಗೆ....

ನನ್ನ ಸ್ನೇಹಿತ ತಕ್ಷಣಕ್ಕೆ `ನಮಗೇನು ಕನಸು ಬಿದ್ದಿತ್ತೇ? ನೊಣ ಯಾವಾಗ ಬಿತ್ತು? ಹ್ಯಾಗೆ ಬಿತ್ತು? ಅನ್ನೋ ವಿಚಾರಣೆ ಬೇಕಾ? ಎನಕ್ಟಯರಿ ಮಾಡಕ್ಕಾ??? ಎಂಥ ಜನ ಮಾರಾಯ್ರೆ... ಎಂದು ಹಿರಿಯ ಕೆಲಸಗಾರನಿಗೆ ಕೇಳಿದರು.

ಅದೇ ವ್ಯಕ್ತಿ ನಿಧಾನವಾಗಿ ಅಥವಾ ಬೇರೆ ಕೊಡುತ್ತೇನೆ ಎಂದು ಹೇಳಿದ್ದರೆ ಸಾಕಿತ್ತು... ಆತನ ಪ್ರಶ್ನೆ `ನಾವೇ ಕಾಫಿ ಕಪ್ಪಿಗೆ ನೊಣ ಹಾಕಿದ್ದೇವೆ' ಎಂಬ ಧಾಟಿಯಲ್ಲಿತ್ತು...

ಹೊಸ ಕಪ್ಪಿನಲ್ಲಿ ಬಿಸಿಬಿಸಿ ಕಾಫಿ ತಂದಿಟ್ಟು ಆತ ಹೊರಟು ಹೋದ....

ಇಷ್ಟೆಲ್ಲಾ ಏಕೆ ಹೇಳಬೇಕಾಯಿತೆಂದರೆ...

ಕೆಲವು ವ್ಯಕ್ತಿಗಳಿಗೆ ಜೀನವದ ಬೇಸರವೋ ಅಥವಾ ಸರಿಯಾದ ಕೆಲಸವಿಲ್ಲದೇ (ವಿದ್ಯಾವಂತನಾಗಿದ್ದರೂ) ಯಾರ್‍ಯಾರಿಗೋ ಕಾಫೀ, ಟೀ, ತಿಂಡಿ ಎಲ್ಲ ಸಪ್ಲೈ ಮಾಡಬೇಕು ಅಂತಲೋ, ಸಂಬಳ ಕಡಿಮೆಯೋ ಇತ್ಯಾದಿಯನ್ನು ಬಂದ ಗ್ರಾಹಕರ ಬಗ್ಗೆ ಈ ರೀತಿ ಕೇಳುವುದು ಸಭ್ಯವಲ್ಲ ಎಂದು ತಿಳಿದಿದ್ದರೂ ಹೀಗೆ ಮಾಡುತ್ತಾರೆ...

ಇದರಿಂದ ಗ್ರಾಹಕನಿಗೆ ತೊಂದರೆಯೇನಾಗದಿದ್ದರೂ... ಕೆಲಸ ಕೊಟ್ಟವನಿಗೆ ತೊಂದರೆ ಆಗುವುದು ಸಹಜ. ಏಕೆಂದರೆ, ಅಲ್ಲಿ ಶುಚಿತ್ವಕ್ಕೆ ಬೆಲೆಯಿಲ್ಲ, ತರಲೆ ಸಪ್ಲೈಯರ್‌ಗಳು ಹೀಗೆ ಗ್ರಾಹಕರು ತನ್ನಂತಾನೇ ದೂರಾಗುತ್ತಾರೆ... ಎಂಬುದು... ಹಾಗೆಯೇ ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೂ ತೊಂದರೆಯಾಗುವುದಲ್ಲವೇ?


8 ಕಾಮೆಂಟ್‌ಗಳು:

ದಿನಕರ ಮೊಗೇರ.. ಹೇಳಿದರು...

ಚಂದ್ರು ಸರ್,
ಹೌದು ಸರ್, ಅಲ್ಲಿದ್ದವರು ಯಾರ ಮೇಲಿನ ಸಿಟ್ಟನ್ನು ಯಾರ ಮೇಲೋ ತೊರಿಸುತ್ತಿರುತ್ತಾರೆ......
ಕಾಫಿ ಕಪ್ಪಲ್ಲಿ ನೊಣ ಬಿದ್ದಿದ್ದನ್ನು ನೋಡಿ " ಏನಯ್ಯಾ.. ಇದರಲ್ಲಿ ನೊಣ ಬಿದ್ದಿದೆಯಲ್ಲಾ..." ಎಂದಿದ್ದರಂತೆ ಒಬ್ಬರು..... ಅದಕ್ಕೆ ಸಪ್ಲ್ಯಯರ್ " ನೀವು ಕೊಡುವ ಎರಡು ರುಪಾಯಿಗೆ ನೊಣವಲ್ಲದೇ ಆನೆ ಹಾಕಿಕೊಡಲು ಆಗತ್ತಾ ಸ್ವಾಮಿ" ಎಂದನತೆ
ಈ ಕಥೆ ನೆನಪಾಯಿತು ನಿಮ್ಮ ಲೇಖನ ಓದಿ....

PARAANJAPE K.N. ಹೇಳಿದರು...

ಬಹುತೇಕ ಹೋಟೆಲ್ ನವರಿಗೆ ಶುಚಿತ್ವ ಅ೦ದರೆ ಏನು ಅ೦ತಾನೆ ಗೊತ್ತಿಲ್ಲ, ಹೋಟೆಲ್ ಒಳಗಡೆ ಒಮ್ಮೆ ಸುತ್ತು ಹಾಕಿ ಬ೦ದರೆ ನೀವು ಮತ್ತೆ ಹೋಟೆಲ್ ನಲ್ಲಿ ತಿನ್ನಲು ಖ೦ಡಿತಾ ಬಯಸುವುದಿಲ್ಲ. "ಹೊರಗಡೆ ಥಳಕು ಒಳಗಡೆ ಹುಳುಕು" ಅನ್ನುವ ಗಾದೆಗೆ ಏನಾದರು ಅನ್ವರ್ಥಕ ಪದ ಹೇಳುವು ದಿದ್ದಲ್ಲಿ "ಹೋಟೆಲು" ಎ೦ದು ಮರುಮಾತಿಲ್ಲದೆ ಹೇಳಬಹುದು.

shivu.k ಹೇಳಿದರು...

ಚಂದ್ರು ಸರ್,

ಸರಿಯಾಗಿ ಹೇಳಿದ್ದೀರಿ. ಇಷ್ಟವಿಲ್ಲದಿದ್ದರೂ ಕೆಲಸ ಮಾಡಬೇಕಾದಾಗ ಹೀಗೆಲ್ಲಾ ಆಗುತ್ತೆ. ಪರಂಜಪೆಯವರ ಗಾಧೆ ಮಾತು ನನ್ನದೂ ಕೂಡ.

Shweta ಹೇಳಿದರು...

ಚಂದ್ರು ಸರ್,
ನಿಜವಾದ ಮಾತು..ಕೆಲಸ ಯಾವದೆ ಇದ್ರು ಇಷ್ಟ ಪಟ್ಟು ಮಾಡ್‌ಬೇಕಲ್ವಾ....

AntharangadaMaathugalu ಹೇಳಿದರು...

ಚಂದ್ರೂ...
ಚೆನ್ನಾಗಿ ಹೇಳಿದ್ದೀರಿ... ಇಷ್ಟವಿಲ್ಲದೇ ಯಾಂತ್ರಿಕವಾಗಿ ಕೆಲಸ ಮಾಡುವಾಗ, ಹೀಗೇ ಆಗುವುದು. South end ಹತ್ತಿರ ಒಂದ ಬೇಕರಿಯಲ್ಲಿ, ನಾನು ಬ್ರೆಡ್, ಬಿಸ್ಕತ್ತು ಕೊಳ್ಳುತ್ತಿದ್ದೆ ಮೊದಲು. ೨-೩ ಸಲ ಕೊಂಡಾಗ, ಬಿಸ್ಕತ್ತುಗಳಲ್ಲೂ, ಪ್ಲಮ್ ಕೇಕ್ ನಲ್ಲೂ... stapler pins ಸಿಕ್ತು. ತೋರಿಸಿದ್ದಕ್ಕೆ, ಮಾಲೀಕ lotನಲ್ಲಿ ಮಾಡುವಾಗ, ಇವೆಲ್ಲಾ ಮಾಮೂಲಿ... ಏನೂ ಮಾಡೋಕ್ಕಾಗಲ್ಲ. packet ಹರಿದು ದ್ರಾಕ್ಷಿ, ಗೋಡಂಬಿ ಸುರಿಯುವಾಗ ಬಂದಿರಬಹುದು. ಅದನ್ನೇ ಹೇಳ್ತೀರಲ್ಲಾ ಅಂತ ನಂಗೇ ಜೋರು ಮಾಡಿದ್ದರು... ಅದ್ಯಾಕೋ ನಂಗೆ ನಿಮ್ಮ ಬರಹ ಓದಿ ಆ ಅನುಭವ ನೆನಪಾಯ್ತು...

ಶ್ಯಾಮಲ

PaLa ಹೇಳಿದರು...

ಸೀತಾ ಸರ್ಕಲ್ ಹತ್ರದ ಹೋಟ್ಲಾ.. ನಾವೂ ತಿನ್ನೋಕೆ ಒಮ್ಮೊಮ್ಮೆ ಅಲ್ಗೇ ಹೋಗೋದು.. ಅಲ್ಲಿ ಮೇಲಿಂದ ಕೆಳಗಿನವರೂ ಕೂಡ ಸಿಕ್ಕಾಪಟ್ಟೆ ರಫ್ಫು

ಕ್ಷಣ... ಚಿಂತನೆ... bhchandru ಹೇಳಿದರು...

ನಿಮ್ಮೆಲ್ಲರ ಅನಿಸಿಕೆಗಳು, ಅನುಭವಗಳನ್ನು ಹಂಚಿಕೊಂಡಿದ್ದೀರಿ. ಇದು ನನಗೆ ಮತ್ತು ನನ್ನ ಮಿತ್ರರಿಗೆ ಆದದ್ದು ಎಂದುಕೊಂಡಿದ್ದೆ. ಅನೇಕರಿಗೆ ಇಂತಹ ಅಥವಾ ಇದರಂತೆಯೇ ವಿವಿಧ ಅನುಭವ ಆಗಿದೆ.

ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು.

ಹೀಗೆಯೆ ಬರುತ್ತಿರಿ.

ಸ್ನೇಹದಿಂದ,

ಸೀತಾರಾಮ. ಕೆ. / SITARAM.K ಹೇಳಿದರು...

"ಗ್ರಾಹಕರು ನಮ್ಮ ದೇವರು"
ಒಬ್ಬ ಹೋಟೆಲ್ ಉದ್ಯಮಿಯ ಮಗನಾಗಿ ನಾನು ಹೇಳುವದು ಇಷ್ಟೇ!
ಆದರೆ ಕೆಲವು ತರಲೆ ಗಿರಾಕಿಗಳು ಇರುತ್ತವೆ ಅಂತಹವರನ್ನು ಗುರುತಿಸಿ ಜಾಡಿಸಬೇಕೆ (ಗಲಾಟೆಯಾಗದಂತೆ) ಹೊರತು ಎಲ್ಲರನ್ನು ಸಂಶಯದಿ೦ದ ನೋಡುವದು ಸಲ್ಲ.
ತಮ್ಮ ಅಭಿಪ್ರಾಯ ಸುಕ್ತವಾದದ್ದೇ. ಮಾಲೀಕನಿಗೆ ತೊಂದರೆ!