ಮಂಗಳವಾರ, ಅಕ್ಟೋಬರ್ 5, 2010

ಮಳೆಗಾಲದಲ್ಲೆರಡು ದಿನಗಳ ಪ್ರವಾಸ - ೧


ಮಳೆಗಾಲದಲ್ಲೆರಡು ದಿನಗಳ ಪ್ರವಾಸ - ೧

ಸುಮಾರು ತಿಂಗಳುಗಳಿಂದ ಪ್ರವಾಸ ಹೋಗದೇ ಎಲ್ಲರ ಮನಸ್ಸೂ ಜಿಡ್ಡುಗಟ್ಟಿತ್ತು. ಈ ನೆಪದಿಂದಾಗಿ ದಿನಾಂಕ ೧೭.೯.೨೦೧೦ ರ ಸಂಜೆ ೧೩ ಜನರ ನಮ್ಮ ತಂಡ ದಾಂಡೇಲಿ ಕಡೆಗೆ ಪಯಣಿಸಿತು. ಈ ತಂಡದಲ್ಲಿ ಸವಿತಾ, ಮಮತಾ, ಶ್ವೇತ, ಸಾಹಿತಿ, ಗುರು, ಭಾಸ್ಕರ್‍, ಉಮೇಶಬಾಬು, ರಾಘವೇಂದ್ರ, ಅಶ್ಫಾಕ್, ರಫೀಕ್, ಕೇದಾರ್‍, ಖಲೀಲ್ ಮತ್ತು ನಾನು.
ಇಡೀ ರಾತ್ರಿಯಲ್ಲಿ ಪಯಣ ಸಾಗುತ್ತಿದೆ. ಈ ಟೋಲ್‌ಗೇಟಿನವರ ಹಾವಳಿ ಜಾಸ್ತಿ ಅನ್ನಿಸಿಬಿಟ್ಟಿತು. ಇನ್ನೇನು ನಿದ್ದೆಯ ಜೊಂಪು ಹತ್ತಿದೆ ಎನ್ನುವಾಗ ಟೋಲ್‌ಗೇಟ್ ದರ್ಶನ. ಚಾಲಕನಿಂದ ಸರ್‍, ೨೦ ರೂಪಾಯಿ... ಈ ನಮ್ಮ ಭಾಸ್ಕರನಿಗೆ ನಿದ್ದೆಯೋ ನಿದ್ದೆ. ಹೂಂ, ತೊಗೊಳ್ಳಿ, ಆಯ್ತಾ...? ಲೈಟ್‌ ಆರಿಸಿ, ಮತ್ತೆ ನಿದ್ದೆಗೆ ಜಾರುವುದು.

೧೮.೯.೨೦೧೦ ರ ಬೆಳಗ್ಗೆ ದಾಂಡೇಲಿಯಲ್ಲಿ ಸ್ಟೇಟ್‌ ಲಾಡ್ಜದಲ್ಲಿ ರೆಫ್ರೆಶ್‌ ಆಗಿ, ಸಂತೋಷ ಹೋಟೆಲಿನಲ್ಲಿ ಬೆಳಗಿನ ಉಪಹಾರ ಮುಗಿಸಿ ಸಿಂಥೇರಿ ರಾಕ್‌ ಎಂಬ ಸ್ಥಳಕ್ಕೆ ಹೊರಟೆವು. ಉಳವಿ ಕ್ಷೇತ್ರಕ್ಕೆ ಹೋಗುವ ಜಂಕ್ಷನ್‌ನಲ್ಲಿ ಗುರುವಿನ ಸ್ನೇಹಿತ ಶ್ರೀಪಾದರನ್ನು ಕೂಡಿಕೊಂಡು ಗುಂದ ಊರಿನ ಹಾದಿಯಲ್ಲಿ ಸಿಂಥೇರಿ ರಾಕ್‌ ಕಡೆಗೆ ಪಯಣಿಸಿದೆವು. ಸುತ್ತಲೂ ಹಸಿರಹೊದ್ದ ವನಸಿರಿ. ಹೆಚ್ಚಾಗಿ ಬಿದಿರ ಬೆಳೆಯೇ ಕಣ್ಣಿಗೆ ಕಾಣುತ್ತಿದ್ದದ್ದು. ೧೦.೨೫ ರ ಹೊತ್ತಿಗೆ ಸಿಂಥೇರಿ ರಾಕಿನ ಮುಖ್ಯದ್ವಾರಕ್ಕೆ ಬಂದೆವು.
ವಾಹ್‌! ಸಿಂಥೇರಿ ರಾಕ್ವಾಹ್‌! ಸಿಂಥೇರಿ ರಾಕ್‌ ನೋಡುತ್ತಿದ್ದಂತೆ ರೋಮಾಂಚನವಾಗುತ್ತದೆ. ೩೦೦ ಅಡಿ ಎತ್ತರದ ಬೃಹತ್‌ ಬಂಡೆ. ಕಾನೇರಿ ದಡದಲ್ಲಿರುವ ಇದು ಶಿಥಲೀಕರಣದಿಂದಾಗಿ ಮನೋಹರ ಭೂರಚನೆಯಾಗಿದೆ. ಅಲ್ಲಲ್ಲಿ ಪೊಳ್ಳು ಜಾಗಗಳಿವೆ ಬಂಡೆಗಳಲ್ಲಿ ಹಾಗೂ ಪಾರಿವಾಳಗಳ ಅವಾಸಸ್ಥಾನವೆಂದು ಬೋರ್ಡು ಇದೆ. ಜೇನುಗೂಡುಗಳ (ಜೇನೆಲ್ಲ ಖಾಲಿಯಾಗಿದ್ದ) ತುಂಬಾ ಕಾಣಬಹುದು. ಹಿಂದಿನ ದಿನದ ಆಯಾಸವೆಲ್ಲ ಈ ಕಾನೇರಿಕೊಳ್ಳದ ಸಿಂಚನದಿಂದ ಪರಿಹಾರವಾಯಿತು. ತಂಪಾದ ಪ್ರದೇಶವಿದ್ದರೂ ನೀರಿನ ಸಿಂಚನದ ಖುಷಿಯನ್ನು ಹೊಂದಿ ವಾಪಸ್ಸು ಬರುವಾಗ ಸೆಖೆಯನ್ನು ತಡೆಯಲಾಗದು. ರಭಸದಿಂದ ಹರಿಯುತ್ತಾ ಧುಮ್ಮಿಕ್ಕುವ ಕಾನೇರಿ ನದಿಯ ಆರ್ಭಟ ಖುಷಿಕೊಡುತ್ತದೆ. ಬಂಡೆಗಳ ಬಳಿ ಹರಿಯುವ ನೀರಿನ ಬಳಿ ಜಿಗಣೆಕಾಣದಿದ್ದರೂ, ತೇವಾಂಶವುಳ್ಳ ಮೆಟ್ಟಿಲುಗಳ ಮೇಲೆ ಇವೆ. ಒಂದೆರಡು ಜಿಗಣೆಗಳು ನಮ್ಮ ಸ್ನೇಹಿತರಿಗೆ ಅಂಟಿಕೊಂಡಿದ್ದ ಕಣ್ಣಾರೆ ನೋಡಿದೆವು. ಸುಮಾರು ಒಂದು ಘಂಟೆ ಕಳೆದದ್ದು ತಿಳಿಯಲೇ ಇಲ್ಲ.

ಅಲ್ಲಲ್ಲಿಯೇ ವಿವಿಧ ಕಲ್ಲುಗಳಿಗೆ ಸಂಬಂಧಪಟ್ಟ ವಿವರಗಳು ಮತ್ತು ಕಲ್ಲುಗಳನ್ನು ಇಟ್ಟಿದ್ದಾರೆ. ಇಲ್ಲಿಗೆ ಬರುವವರಿಗೆ ನಿರ್ವಹಣಾ ವೆಚ್ಚ ಎಂದು ರೂ.೫.೦೦. ಹಾಗೂ ಶಾಲಾ ಮಕ್ಕಳಿಗೆ ರೂ.೨.೦೦ ಶುಲ್ಕ ವಿಧಿಸುತ್ತಾರೆ.


ಪ್ಲಾಸ್ಟಿಕ್‌ ನಿಷೇಧ:
ಎಲ್ಲೆಡೆಯೂ ಪ್ಲಾಸ್ಟಿಕ್‌ ನಿಷೇಧ ಎಂಬ ಫಲಕ ಸಾಮಾನ್ಯವಾಗಿ ನೋಡುತ್ತಿರುತ್ತೇವೆ. ಹಾಗೆಯೇ ಅದನ್ನು ಉಪಯೋಗಿಸುವುದನ್ನು ಬಿಡಬೇಕೆಂದರೂ ಬಿಡದ ಪೆಡಂಭೂತವಾಗಿ ಬೆಳೆದಿದೆ. ಇಂತಹ ಒಂದು ದೃಶ್ಯವನ್ನು ಇಲ್ಲಿ ನೋಡಿದೆವು. ಅದರ ಚಿತ್ರವನ್ನು ಎಲ್ಲರೂ ತೊಗೊಂಡಿದ್ದಾಯಿತು. ಚಿತ್ರ ನೋಡಿದರೇ ಸಾಕು ಏನೇನೆಲ್ಲಾ ಅನಿಸುತ್ತದೆ...

`ಉಳವಿ'ಯ ಸುಳಿವು.
ಸಿಂಥೇರಿಯಿಂದ ಉಳವಿ ಕಡೆಗೆ ಹೊರಟೆವು. ಸುಮಾರು ೧/೨ ಘಂಟೆ ಪ್ರಯಾಣ. ಅಲ್ಲಿಗೆ ತಲುಪಿದಾಗ ಮಧ್ಯಾಹ್ನ ೧೨.೦೦ ಆಗುತ್ತಾ ಬಂದಿತ್ತು. ಇಲ್ಲಿ ಚೆನ್ನಬಸವಣ್ಣನ ಸಮಾಧಿಯಿದೆ. ಸುಂದರ ದೇವಾಲಯ ಮ ದೇವಾಲಯದ ಮುಂಭಾಗದಲ್ಲಿ ಒಂದು ದೊಡ್ಡ ಕಲ್ಯಾಣಿ ಇದೆ. ಇಲ್ಲಿ ಇದರಂಚಿಗೆ ಆ ಕಡೆಯಿಂದ ನೀರಿನ ಹರಿವಿನ ಸದ್ದು ಕೇಳುತ್ತಿತ್ತು. ಬಲಗಡೆಗೆ ಕಣ್ಣಳತೆಯಷ್ಟು ಹಸಿರೋ ಹಸಿರು. ಇದರ ಸುತ್ತ ಮುತ್ತ ಅನೇಕ ವೀಕ್ಷಣೀಯ ಸ್ಥಳಗಳಿವೆ: ಶ್ರೀ ವೀರಭದ್ರೇಶ್ವರ ದೇವಾಲಯ, ಆಕಳಗವಿ, ಮಹಾಮನೆ ಗವಿ, ವಿಭೂತಿ ಕಣಜ ಹೀಗೆ...
ಇಲ್ಲಿ ನಿತ್ಯ ದಾಸೋಹವಿದೆ. ನಾವೂ ಊಟ ಮುಗಿಸಿದೆವು. ಅನ್ನ, ಸಾಂಬಾರು, ಪಾಯಸ, ಪಲ್ಯ, ಮೊಸರು ಎಲ್ಲವನ್ನೂ ಬಡಿಸಿದರು. ರುಚಿಯಾದ ಊಟ ಹಸಿದಿದ್ದ ನಮಗೆ ಖುಷಿಕೊಟ್ಟಿತು. ಎರಡು ಘಂಟೆಯವರಿವಿಗೂ ಅಲ್ಲಿದ್ದು ಯಲ್ಲಾಪುರದ ಕಡೆಗೆ ಹೊರಟೆವು.





ದಾರಿಯಲ್ಲಿ ಮಿತ್ರ ಶ್ರೀಪಾದರನ್ನು ದಾಂಡೇಲಿ ಕ್ರಾಸಿನಲ್ಲಿ ಇಳಿಸಿ ಮುಂದುವರೆದೆವು. ಹಾದಿಯಲ್ಲಿ ಸುಮಾರು ೩.೧೫ ರ ವೇಳೆಗೆ ನಾವು ನಾಗಝರಿ ಕಣಿವೆಯ ದರ್ಶನಕ್ಕೆಂದು ಸ್ವಲ್ಪ ಹೊತ್ತು ನಿಂತೆವು. ಮನಮೋಹಕ, ರೋಮಾಂಚಕ ದೃಶ್ಯ ಮನಸ್ಸು ಮತ್ತು ಕಣ್ಣುತುಂಬಿಕೊಂಡೆವು.


ಮಾಗೋಡಿಗೆ ದೌಡು


ನಂತರ ಮಾಗೋಡು ಅಥವಾ ಸಾತೋಡಿ ಜಲಪಾತಕ್ಕೆ ಎಂದು ಹೊರಟೆವಾದರೂ ಸಮಯಾಭಾವದಿಂದ ಮಾಗೋಡು ಜಲಪಾತಕ್ಕೆ ಪಯಣಿಸಿದೆವು. ಸಂಜೆ ೫.೦೦ ರ ವೇಳೆಗೆ ಮಾಗೋಡು ಜಲಪಾತ ತಲುಪಿದೆವು. ಇಲ್ಲಿಯೂ ಪ್ರವೇಶ ಶುಲ್ಕ ರೂ.೫.೦೦ ಇದೆ. ಭೇಡ್ತಿ ನದಿಯು ಮಾಗೋಡು ಜಲಪಾತವೆಂದು ಪ್ರಸಿದ್ಧಿ ಪಡೆದಿದೆ. ಈ ನದಿಯು ಹುಬ್ಬಳ್ಳಿಯ ಉಣಕಲ್‌ ಕಡೆಯಿಂದ ಹುಟ್ಟಿ, ಪಶ್ಚಿಮಾಭಿಮುಖವಾಗಿ ಹರಿದು ಯಲ್ಲಾಪುರ, ಮುಂಡಗೋಡ ದ ಗಡಿಗಳಲ್ಲಿ ಹರಿಯುತ್ತಾ ಮಾಗೋಡು ಎಂಬುದಾಗಿ ಕರೆಸಿಕೊಳ್ಳುತ್ತಾ ಅರಬ್ಬೀ ಸಮುದ್ರವನ್ನು ಸೇರುತ್ತದೆ. ಅಷ್ಟು ದೂರದಿಂದಲೇ ಜಲಪಾತದ ಅಬ್ಬರದ ಮೊರೆತ ಕೇಳುತ್ತಾ ಬರುತ್ತದೆ. ಇದು ಸುಮಾರು ೬೫೦ ಅಡಿ ಎತ್ತರದಿಂದ ಧುಮ್ಮಿಕ್ಕುವ ಜಲಪಾತ. ನಯನಮನೋಹರವಾಗುತ್ತಾ ತುಂತುರು ಹನಿಗಳು ಅಲ್ಲೆಲ್ಲಾ ಮೋಡದಂತೆ ಹಬ್ಬತ್ತಾ ಮತ್ತೊಮ್ಮೆ ಜಲಪಾತವನ್ನೇ ಆವರಿಸಿ ಕೇವಲ ಶಬ್ದ ಮಾತ್ರ ಕೇಳುವಂತೆ ಮಾಡುತ್ತದೆ. ಈ ದೃಶ್ಯವನ್ನು ನಾವು ಮತ್ತಷ್ಟು ಮೇಲಕ್ಕೆ ಹತ್ತಿ (ವ್ಯೂಪಾಯಿಂಟ್‌) ಹೋಗುತ್ತ ಇದ್ದಂತೆ ಸುತ್ತಲೂ ಮಿಸ್ಟ್‌ ಆವರಿಸಿರುತ್ತದೆ. ಬಿಸಿಲಝಳ ಬಿದ್ದಂತೆ ಸುಂದರ ದೃಶ್ಯ ಸಂಯೋಜನೆ ಆಗುತ್ತದೆ. ವಾಹ್‌! ಎಂಬ ಉದ್ಗಾರ ತಂತಾನೆ ಹೊಮ್ಮುತ್ತದೆ. ನಿಜಕ್ಕೂ ಮೈಮನಗಳಿಗೆ ಆಗಿದ್ದ ಆಯಾಸವೆಲ್ಲ ಕ್ಷಣಮಾತ್ರದಲ್ಲಿ ಮರೆಯಿಸುವಂತಿದೆ ಮಾಗೋಡು ಜಲಪಾತ. ಒಮ್ಮೆಯಾದರೂ ನೋಡಿ ಬರಬೇಕಾದ ಸ್ಥಳ.

ಇಲ್ಲಿ ಭಾನುವಾರ ಅಥವಾ ರಜಾದಿನಗಳಂದು ಜನಸಮೂಹ ಜಾಸ್ತಿ. ಹತ್ತಿರದ ಹೋಟೆಲು ಎಂದರೆ ಯಲ್ಲಾಪುರಕ್ಕೆ ಹೋಗಬೇಕು. ಊಟತಿಂಡಿ ಜೊತೆಯಲ್ಲಿ ಒಯ್ದರೆ ಉತ್ತಮ. ಪ್ರವೇಶ ದ್ವಾರಕ್ಕೂ ಮುಂಚೆ (ವಾಹನ ನಿಲುಗಡೆ ಸ್ಥಳದಲ್ಲಿ) ಶೌಚಾಲಯವಿದೆ. ಆದರೆ ಸದಾ ಬೀಗ ಜಡಿದಿರುತ್ತದಂತೆ. ಪ್ರವೇಶದ್ವಾರದಲ್ಲಿ ಕುಡಿಯುವ ನೀರು ಇದೆ. ಒಂದೊಂದು ಶೌಚಾಯಗಳಿದ್ದರೂ ಶುಚಿಯಾಗಿಲ್ಲ. ಇಲ್ಲಿಗೆ ಎನ್‌ಹೆಚ್-೧೭ ರಸ್ತೆ ಚೆನ್ನಾಗಿದೆ. ಇದಿಷ್ಟು ಮಾಗೋಡಿನ ಪರಿಸರ ನಾವಿದ್ದ ಕೆಲವೇ ಸಮಯದಲ್ಲಿ ಕಂಡುಬಂದದ್ದು.


ಮಾಗೋಡಿನಿಂದ ಜೇನುಕಲ್ಲು ಗುಡ್ಡದೆಡೆಗೆ ಮುತ್ತಿಗೆ:

ಸಂಜೆ ೬.೧೫ ರ ವೇಳೆಗೆ ಜೇನುಕಲ್ಲು ಗುಡ್ಡ ತಲುಪಿದೆವು. ಮಾಗೋಡಿನಿಂದ ೭ ಕಿ.ಮೀ. ಇದ್ದು ಯಲ್ಲಾಪುರದಿಂದ ಸುಮಾರು ೧೭ ಕಿ.ಮೀ. ದೂರದಲ್ಲಿದೆ. ಸುತ್ತಲೂ ಕಾಡಿನ ಹಾದಿ. ಮಣ್ಣಿನ ರಸ್ತೆ. ಮಳೆ ಬಂದಿದ್ದರಂತೂ ವಾಹನ ನಡೆಸಲು ಬಹಳ ಕಷ್ಟವಾಗುತ್ತದೆ. ಕಿರಿದಾದ ಹಾದಿ. ಬೇಡ್ತಿ ನದಿಯು ಕವಲಾಗಿ ಹರಿದು ಈ ಗುಡ್ಡದ ಹಿಂದೆ ನುಸುಳುತ್ತಾ ಅರೇಬಿಯನ್‌ ಸಮುದ್ರವನ್ನು ಸೇರುತ್ತದೆ. ನದಿಯ

ಇದು ಸುಮಾರು ೪೫೦ ಮೀಟರ್‌ ಎತ್ತರವಿದೆ. ಸುತ್ತಲೂ ಹಸಿರ ಕಾನನ. ಇಲ್ಲಿಗೆ ಚಾರಣಿಗರ ಭೇಟಿ ಇದ್ದೇ ಇರುತ್ತದೆ. ಸಂಜೆಯ ಸೂರ್ಯಾಸ್ತ ನೋಡಲು ಪ್ರಶಸ್ತವಾದ ಸ್ಥಳ. ದೂರದ ಕಣಿವೆಯಲ್ಲಿ ನದಿಯ ಹರಿಯುವಿಕೆ ಕಾಣುತ್ತದೆ. ಮನಮೋಹಕ ದೃಶ್ಯಗಳನ್ನು ಕಾಣಬಹುದು. ಇಲ್ಲಿ ಒಂದೆರಡು ಮಂಟಪಗಳಿವೆ. ಕಬ್ಬಿಣದ ತಡೆಗೋಡೆಯಿದೆ. ಆದರೆ, ಮಳೆ ಮತ್ತು ತುಕ್ಕಿನಿಂದಾಗಿ ಅಷ್ಟು ಗಟ್ಟಿಯಾಗಿಲ್ಲ ಈ ಕಬ್ಬಿಣದ ಸರಳುಗಳು. ಅಲ್ಲದೇ ಗುಡ್ಡದ ಮಣ್ಣಿನ ಕುಸಿತದ ಕುರುಹುಗಳೂ ಇರುವುದರಿಂದ ಕಬ್ಬಿಣದ ಸರಳ ಒರಗುವುದು, ಹತ್ತುವುದು ಅಪಾಯಕಾರಿ. ಇಲ್ಲಿ ಸುಮಾರು ಅರ್ಧ ಘಂಟೆ ಇದ್ದೆವು. ಮಳೆಯ ಹನಿಗಳಿಂದಾಗಿ ಮತ್ತೆ ದಾರಿಯಲ್ಲಿ ತೊಂದರೆಯಾಗದಿರಲಿ ಎಂದು ಇದ್ದ ಸಮಯದಲ್ಲೇ ಒಂದಷ್ಟು ಛಾಯಾಚಿತ್ರ ತೆಗೆದುಕೊಂಡು ಸೂರ್ಯಾಸ್ತದ ಚೂರುಪಾರು ನೋಡಿಕೊಂಡು ಶಿರಸಿಯ ಕಡೆಗೆ ಹೊರಟೆವು.

& & & &

ಅಂದಹಾಗೆ... ಹಾಡು ಕೇಳುತ್ತಾ... ಹಾಗೆಯೇ ಮುಂಗಾರು ಮಳೆ ಸಿನಿಮಾ ನೋಡುತ್ತಿದ್ದೆವು. ಆ ಸಿನೆಮಾ ಪೂರ್ಣವಾಗಿ ನೋಡಲಾಗಲಿಲ್ಲ ಎಂದು ಸಾಹಿತಿಯವರ ಅಂಬೋಣ. ಜೊತೆಗೆ ಜಾಕಿ ಚಿತ್ರದ ಹಾಡು ಮತ್ತೆ ಮತ್ತೆ ಕೇಳಿಸುತ್ತಿದ್ದ ರಾಘು ಅವರು... ಪದೇ ಪದೇ ಹಾಡು ಬದಲಾಯಿಸಲು ಚಾಲಕನಿಗೆ ತಾಕೀತು. ೨೦ ಸಾಂಗು ಮುಂದಕ್ಕೆ ಎಂದಾಗ ಮತ್ತೆ ಮೊದಲೇ ಕೇಳಿದ್ದ ಹಾಡೇ ಬರುವುದು ಹೀಗೆ ಒಂದು ರೀತಿಯಲ್ಲಿ ಟೀಕೆ-ತಮಾಷೆ ಅಂತ್ಯಾಕ್ಷರಿ ಎಲ್ಲ ಚೆನ್ನಾಗಿದ್ದು, ಸಂತಸಪಟ್ಟರು.

ಇವಿಷ್ಟು ನಮ್ಮೆಲ್ಲರ ಮೊದಲ ದಿನದ ಪ್ರವಾಸ ಕಥನ. ಆ ಕ್ಷಣದಲ್ಲಿ ನನ್ನ ಗಮನಕ್ಕೆ ಬಂದಂತಹ ಮಾಹಿತಿಯನ್ನು ಆಧರಿಸಿ ಇಲ್ಲಿ ಪ್ರವಾಸ ಕಥನ ಬರೆದಿರುತ್ತೇನೆ. ಮಾಹಿತಿಗಳು ತಪ್ಪಿದ್ದರೆ/ಸರಿಯಿದ್ದರೆ ನಿಮ್ಮ ಅಭಿಪ್ರಾಯಗಳ ಮೂಲಕ ತಿಳಿಸಿ.

ಮುಂದಿನ ಪ್ರಯಾಣ ಮುಂದುವರೆಯುವುದು.... ಅಲ್ಲಿಯವರೆಗೆ ಖುಷಿಯ `ಕ್ಷಣಗಳು' ನಿಮ್ಮೊಂದಿಗಿರಲಿ!

18 ಕಾಮೆಂಟ್‌ಗಳು:

PARAANJAPE K.N. ಹೇಳಿದರು...

ಚೆನ್ನಾಗಿದೆ, ಮೊದಲ ದಿನದ ಪ್ರವಾಸಾನುಭವ. ಫೋಟೋ ಗಳು ಕೂಡ ಆ ಪರಿಸರದ ಸೌಂದರ್ಯದ ದ್ಯೋತಕವಾಗಿವೆ. ನಾನು ಆ ಸ್ಥಳಗಳಿಗೆ ಇನ್ನು ಹೋಗಿಲ್ಲ, ಮುಂದೊಮ್ಮೆ ಹೋಗಬೇಕು. ಮುಂದಿನಕ೦ತು ಬೇಗ ಬರಲಿ.

ಪ್ರಗತಿ ಹೆಗಡೆ ಹೇಳಿದರು...

ತುಂಬಾ ಧನ್ಯವಾದಗಳು ಚಂದ್ರು ಸರ್... ನಾನು ಸಿರಸಿಯ ಸುತ್ತಮುತ್ತಲೇ ಇದ್ದಿದ್ರೂ ಇನ್ನೂ ಮಾಗೋಡಿ ಫಾಲ್ಸ್ ನೋಡಿಲ್ಲ.... ನಿಮ್ಮ ಪ್ರವಾಸ ಕಥನ ನೋಡಿದ್ಮೇಲೆ ಅಲ್ಲಿಗೆ ಒಮ್ಮೆ ಹೋಗ್ಬೇಕು ಅನ್ನಿಸ್ತಿದೆ... ಚೆಂದದ ಬರಹ...

ಸಾಗರದಾಚೆಯ ಇಂಚರ ಹೇಳಿದರು...

ಸರ್
ಪ್ರವಾಸ ಕಥನ ಮಲೆನಾಡಿಗೆ ನನ್ನನ್ನು ಕರೆದೊಯ್ದಿತು

ಮಲೆನಾಡಿನ ಕಾಡುಗಳ ಸೌಂದರ್ಯವೇ ಹಾಗೆ ಆಲ್ವಾ

ದಿನಕರ ಮೊಗೇರ ಹೇಳಿದರು...

ಚಂದ್ರು ಸರ್,
ತುಂಬಾ ಚೆನ್ನಾಗಿವೆ ಚಿತ್ರ ವಿವರಣೆ...... ಸಕ್ಕತ್ ಆಗಿ ಎಂಜಾಯ್ ಮಾಡಿದಿರಾ ಅನ್ಸತ್ತೆ...... ನನ್ನ ಬ್ಲಾಗ್ ಗೆ ಬನ್ನಿ ಸರ್......

Unknown ಹೇಳಿದರು...

ಚಂದ್ರು ಸರ್ ತುಂಬಾ ಚೆನ್ನಾಗಿದೆ ನಿಮ್ಮ ಲೇಖನ....ಇದನ್ನು ಓದುತ್ತ ನನಗೆ ಮತ್ತೊಮ್ಮೆ ನಮ್ಮ ಪ್ರವಾಸದ ನೆನಪು ತಂದಿತು...ನಾವು ನೋಡಿದ ಸ್ಥಳಗಳು, ಆಡಿದ (ಯಾರು ಸೋಲದ ಗೆಲ್ಲದ) ಅಂತ್ಯಾಕ್ಷರಿ, ನೀವು ತಂದಿದ್ದ ಅವಲಕ್ಕಿ ಒಗ್ಗರಣೆ ಆಹಾ!..... ಮತ್ತೊಮ್ಮೆ ಹೋಗಿ ಬರೋಣವೇ ಸರ್ ???

ಸೀತಾರಾಮ. ಕೆ. / SITARAM.K ಹೇಳಿದರು...

ಈ ಪರಿಸದರಲ್ಲಿ ನಾನು ತಿರುಗಾಡಿದ್ದೇನೆ. ಯೆಲ್ಲಾಪುರ-ನಗ್ಜರಿ -ಬೀಸಗೋಡು-ಮಾಗೋಡು. ಸಿ೦ಥೆರಿ ರಾಕ್ ನೋಡಿಲ್ಲ. ಮುಂದಿನ ಸಲ ನೋಡುವೆ. ಮಾಗೋಡು ಬಗ್ಗೆ ನಾನೊಂದು ಪ್ರವಾಸ ಕಥನ ನನ್ನ ಬ್ಲಾಗ್-ನಲ್ಲಿ ಹಾಕಿರುವೆ.
ತಮ್ಮ ಎರಡನೇ ದಿನದ ಅನುಭವಕ್ಕೆ ಕಾಯುತ್ತಿರುವೆ.

balasubramanya ಹೇಳಿದರು...

ಬಹಳ ಚೆಂದದ ವಿವರಣೆ. ನಾನು ಸಹ ಮಾಗೋಡು ಜಲಪಾತ ನೋಡಿದ್ದೇನೆ. ಅದ್ಭತ ಅನುಭವ,ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂಥಹ ಹಲವಾರು ಜಲಪಾತ ಗಳು ಇವೆ. ನಿಮ್ಮ ಅನುಭವ ನನಗೆ ಅಲ್ಲಿನ ಹಲವು ವಿಚಾರಗಳನ್ನು ಜ್ಞಾಪಕಕ್ಕೆ ತಂದಿತು. ಇನ್ನೂ ಮಜಾ ಅಂದ್ರೆ ಎಲ್ಲಾಪುರ ತಾಲೂಕಿನಲ್ಲಿ ಉಪ್ಪರಿಗಿ ಮನೆ ಎಂಬ ಆಮೆಗಳ ಗುಂಪು ಇದೆ [ಸಣ್ಣ ಹಳ್ಳಿ ??] ಅದನ್ನು ತಲುಪಲು ಹಲವು ಗುಡ್ಡಗಳನ್ನು ಇಳಿದಿದ್ದೆವು. ಇದನ್ನು ಪಾತಾಳದ ಮನೆ ಅಂಥಾ ಕರೀಬೇಕಿತ್ತು ಅಂಥಾ ಅನ್ನಿಸಿತ್ತು.ಅಂದರೆ ಆ ಪ್ರದೇಶ ಬಹಳ ಆಳವಾದ ಜಾಗದಲ್ಲಿತ್ತು.ಇಂತಹ ಮಜಾ ಬಹಳಷ್ಟು ನೆನಪಾಯಿತು.ನಿಮಗೆ ಧನ್ಯವಾದಗಳು.

V.R.BHAT ಹೇಳಿದರು...

bahala chennaagide sar,maamu modale nisarga priya, tumbaa hidisitu, dhnayavaadagalu

shivu.k ಹೇಳಿದರು...

ಚಂದ್ರು ಸರ್,

ನಿಮ್ಮ ಪ್ರಯಾಣ ತುಂಬಾ ಚೆನ್ನಾಗಿದೆ. ನಾವು ನಿಮ್ಮ ಜೊತೆಗಿದ್ದೇವೆ. ಜೊತೆಗೆ ಸೊಗಸಾದ ಫೋಟೊಗಳನ್ನು ಕೊಡುತ್ತಿದ್ದೀರಿ. ನಾನು ಅತ್ತಕಡೆ ಹೋಗೇ ಇಲ್ಲ ಹೋಗುವ ಆಸೆಯಾಗುತ್ತಿದೆ...ಮುಂದುವರಿಸಿ..

ಕ್ಷಣ... ಚಿಂತನೆ... ಹೇಳಿದರು...

ಪರಾಂಜಪೆ ಸರ್‍, ಧನ್ಯವಾದಗಳು. ಮುಂದೊಮ್ಮೆ ಆ ಸ್ಥಳಗಳಿಗೆ ಹೋಗಿಬನ್ನಿ. ತುಂಬಾ ಪ್ರಶಾಂತವಾದ ಪರಿಸರ...
ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಪ್ರಗತಿಯವರೆ, ಒಮ್ಮೆ ಹೋಗಿಬನ್ನಿ.. ನಿಮ್ಮೂರಿನ ಸುತ್ತಮುತ್ತಲೂ ಸುಂದರ ಸ್ಥಳಗಳಿವೆ. ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಗುರುಮೂರ್ತಿ ಸರ್, ಮಲೆನಾಡಿನ ಸೌಂದರ್ಯವೇ ಹಾಗೆ... ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ದಿನಕರ್‌ ಅವರೆ, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಸವಿತಾ, ಮುಂದಿನ ಬಾರಿ ಚಿಕ್ಕಮಗಳೂರು ಕಡೆಗೆ ಹೋಗೋಣ ಅಂತಿದೆ ಅಲ್ವಾ?? ಹೋಗೋಣಂತೆ... ಆದರೆ ಅವಲಕ್ಕಿ ಬದಲು ಬೇರೆ ತಿಂಡಿ ಮಾಡಿಸೋಣ, ಏನಂತೀ??

ಕ್ಷಣ... ಚಿಂತನೆ... ಹೇಳಿದರು...

ಸೀತಾರಾಮು ಸರ್‍, ನಿಮ್ಮ ಪ್ರೋತ್ಸಾಹ ಹೀಗೆ ಸಿಗುತ್ತಿರಲಿ.
ಹೀಗೆಯೆ ಬರುತ್ತಿರಿ.

ಕ್ಷಣ... ಚಿಂತನೆ... ಹೇಳಿದರು...

ಬಾಲು ಸರ್‍, ನಿಮ್ಮ ನೆನಪುಗಳನ್ನು ಹಂಚಿಕೊಂಡಿದ್ದೀರಿ. ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಶಿವು ಸರ್‍, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

ಕ್ಷಣ... ಚಿಂತನೆ... ಹೇಳಿದರು...

ಭಟ್ ಸರ್‍, ನಿಮ್ಮ ಅನಿಸಿಕೆಗಳಿಗೆ ಮತ್ತು ಲೇಖನ ಇಷ್ಟವಾಗಿದ್ದಕ್ಕೆ ಧನ್ಯವಾದಗಳು.