ಶುಕ್ರವಾರ, ಅಕ್ಟೋಬರ್ 15, 2010

ಮಳೆಗಾಲದಲ್ಲೆರಡು ದಿನಗಳ ಪ್ರವಾಸ - ಭಾಗ ೨

ಮಳೆಗಾಲದಲ್ಲೆರಡು ದಿನಗಳ ಪ್ರವಾಸ - ಭಾಗ ೨

ಜೇನುಕಲ್ಲುಗುಡ್ಡದಿಂದ ಸಂಜೆ ೮.೦೦ ರ ವೇಳೆಗೆ ಶಿರಸಿ ತಲುಪಿದೆವು. ಹಾದಿಯಲ್ಲಿ ಪಂಚವಟಿ ಹೋಟೆಲಿನಲ್ಲಿ ಸ್ಥಳಾವಕಾಶ ಸಿಗಬಹುದೇ? ಊಟ ಸಿಗಬಹುದೇ ಎಂದು ವಿಚಾರಿಸಿದ್ದಾಯಿತು. ಅಲ್ಲಿ ಅವರಿಂದ ಬಂದ ಉತ್ತರ, ಇಲ್ಲೇ ಹತ್ತಿರದಲ್ಲಿಯೇ ಒಬ್ಬರ ಮನೆಯಿದೆ. ಅಲ್ಲಿ ಸ್ಥಳಾವಕಾಶ ಸಿಗುತ್ತದೆ ಎಂದು. ಅಲ್ಲಿಂದಲೇ ಮನೆಯ ಯಜಮಾನರಿಗೆ ಫೋನ್‌ ಮಾಡಿ ವಿಷಯ ನಾವು ಉಳಿಯುವ ಸ್ಥಳಕ್ಕೆ ಬಂದೆವು. ಅದು ದೇವಜ್ಯೋತಿ ಸಭಾ ಭವನ.

ಊಟಕ್ಕೆ ಏನು ಮಾಡುವುದು? ಸರಿ ನಮ್ಮ ಲಗ್ಗೇಜು ಸರಂಜಾಮುಗಳನ್ನು ಈ ಸಭಾ ಭವನದ ಕೊಠಡಿಗಳಲ್ಲಿ ಇಟ್ಟು ಊಟಕ್ಕೆಂದು `ನಮ್ಮೂರ ಊಟ' ಹೋಟೆಲಿಗೆ ಹೋದೆವು. ಅದು ಇನ್ನೇನು ಬಾಗಿಲು ಹಾಕುವ ಸಮಯವಾಗಿತ್ತು. ಒಳಗೆ ಬಿಸಿಬಿಸಿ, ರುಚಿಯಾದ ಊಟವಂತೂ ನಮಗೆ ಸಿಕ್ಕಿತು. ಅಪ್ಪೆಹುಳಿ, ಕೋಸಿನ ಪಲ್ಯ, ಅನ್ನ ಸಾಂಬಾರು, ತೊವ್ವೆ, ಮೊಸರು, ಬಾಳೆಹಣ್ಣು ಜೊತೆಗೆ ಅಡಿಕೆಪುಡಿ. ಎಲ್ಲವೂ ರುಚಿಯಾದ ಅಡಿಗೆ ಸವಿದಿದ್ದಾಯಿತು.

ಸಭಾ ಭವನದ ಕೊಠಡಿಗಳು ಚೆನ್ನಾಗಿವೆ. ಪ್ರತಿಯೊಬ್ಬರಿಗೆ ೧೦೦ ರೂ ನಂತೆ ಛಾರ್ಜು ಮಾಡುತ್ತಾರೆ. ಬಿಸಿನೀರೂ, ಕಾಫಿ ಎಲ್ಲ ಒದಗಿಸಿಕೊಡುತ್ತಾರೆ. ಪ್ರತ್ಯೇಕ ಶುಲ್ಕ ವಿಧಿಸುತ್ತಾರೆ. ಸುತ್ತಲೂ ಹಸಿರಿನಿಂದ ಕೂಡಿದ ಪರಿಸರ. ಮಹಡಿಯಲ್ಲಿ ಒಂದು ಸಭಾಭವನ ಇದೆ. ಇಲ್ಲಿ ಮದುವೆ, ಮುಂಜಿ ಮುಂತಾದವ ಸಮಾರಂಭಗಳಿಗೂ ಅವಕಾಶ ಮಾಡಿಕೊಡತ್ತಾರೆ.

ವಾಹನದಲ್ಲಿ ಕುಳಿತೂ ಕುಳಿತೂ ಸುಸ್ತಾಗಿದ್ದ ಮೈಮನಗಳಿಗೆ ಸ್ಥಳಾವಕಾಶ ಮತ್ತು ರುಚಿಯಾದ ಊಟ ಸಿಕ್ಕಿದ ಮೇಲೆ ಸ್ವರ್ಗಕ್ಕೇರಿದಂತೆ ನಿದ್ದೆಯ ಜೊಂಪು ಹತ್ತಿತ್ತು. ಬೆಳಗ್ಗೆ ನಮ್ಮೆಲ್ಲರ ಪ್ರಯಾಣ ಮುಂದುವರೆಯಬೇಕಿತ್ತು.

ಬೆಳಗಿನ ಝಾವ ೪.೩೦ಕ್ಕೆ ಎದ್ದೆವು. ಬಿಸಿನೀರು ಅದಾಗಲೇ ಕಾಯುತ್ತಿತ್ತು. ಸರಿ, ಬಿಸಿನೀರಿನ ಝಳಕ ಪುಳಕಗೊಳಿಸಿತ್ತು. ಏಕೆಂದರೆ, ಹಿತವಾದ ಛಳಿಯೂ ಇತ್ತೆನ್ನಿ. ಇದೇ ಸಮಯದಲ್ಲಿ ನಾವು ಬಂದಿದ್ದ ವಾಹನವೂ ಒಂದು ಚಕ್ರಕ್ಕೆ ಪಕ್ಕಾಗಿ ಪಂಕ್ಚರ್‌ ಮಾಡಿಕೊಂಡಿತ್ತು. ಅದನ್ನೂ ಸರಿಮಾಡಿಕೊಳ್ಳುವಲ್ಲಿ ಚಾಲಕ ನಿರತನಾಗಿದ್ದಾಗಲೇ ನಮಗೆಲ್ಲಾ ಬಿಸಿಬಿಸಿ ಕಾಫಿ/ಟೀ ಪೂರೈಸಿಕೊಟ್ಟರು.

ಇಲ್ಲಿ ಮತ್ತೊಂದು ತಮಾಷೆಯಾಗಿದ್ದೆಂದರೆ, ಬಿಸಿನೀರನ್ನು ಒಂದು ಬಕೀಟು ಮಾತ್ರ ತೆಗೆದುಕೊಳ್ಳುತ್ತಾ ಮತ್ತೆ ಹಂಡೆಗೆ ತಣ್ಣೀರು ಹಾಕಬೇಕಿತ್ತು. ಏಕೆಂದರೆ, ಉಳಿದವರಿಗೂ ಬೇಕಲ್ಲವೇ? ಭಾಸ್ಕರನುದಯವಾದರೂ ಈತನಿಗೆ ನಿಧಾನವಾಗಿ ಎದ್ದ ಪರಿಣಾಮ ಬಿಸಿನೀರಿನ ಹಂಡೆ ತಳಮುಟ್ಟಿತ್ತು. ಮನೆ ಯಜಮಾನರಿಗೆ ಬೇಸರವಾಗಿತ್ತು. ಏಕೆಂದರೆ, ಹಂಡೆ ಕಾದು ಕಾದೂ ಒಡೆದು ಹೋಗುವ ಪ್ರಮೇಯ ಬರುತ್ತದೆ ಎಂದು. ಮತ್ತೆ ತಣ್ಣೀರನ್ನು ತುಂಬಿಸಿ, ಸ್ನಾನ ಮುಗಿಸಿ ತಯಾರಿಯಾಗಿದ್ದಾಯಿತು. ಸಭಾಭವನದ ಯಜಮಾನರಿಗೆ ಧನ್ಯವಾದಗಳನ್ನು ತಿಳಿಸಿ ಮುಂದಿನ ಪಯಣಕ್ಕೆ ಶುರುವಿಟ್ಟೆವು..

ಶಿರಸಿ:
ಶಿರಸಿ ಎಂದ ಕೂಡಲೇ ನೆನಪಾಗುವುದು ಶ್ರೀಮಾತಾ ಮಾರಿಕಾಂಬೆ. ಇಲ್ಲಿನ ಜಾತ್ರೆ ಪ್ರಸಿದ್ಧ ಎಂಬುದು ಎಲ್ಲರಿಗೂ ತಿಳಿದ ವಿಷಯ. ಇನ್ನು ದೇವಾಲಯಕ್ಕೆ ಹೋದೆವು. ಹೋಗುವ ಮುಂಚೆ ಬರಿಗೈಯಲ್ಲಿ ಹೋಗಬಾರದೆಂಬುದಾಗಿ ಅಲ್ಲೇ ಹೂವನ್ನು ಕೊಂಡಿದ್ದಾಯಿತು. ಆತ `ಬಂದ ಮೇಲೆ' ಹಣ ಕೊಡಿ ಎಂದು ಎರಡು ಮಾರು ಹೂ ಕೊಟ್ಟು ಕಳಿಸಿದ.

ಸರಿ. ಅಲ್ಲಿಯೇ ಚಪ್ಪಲಿ, ಶೂ ಕಳಚಿ ದೇವಾಲಯದೊಳಗೆ ನಮ್ಮ ಪ್ರವೇಶಿಸಿದೆವು. ಒಳಗೆ ಹೋದ ಕೆಲವೇ ಸಮಯದಲ್ಲಿ ಕೆಲವರಿಗೆ ಸಮಾಯಾಭವ ಕಾಡಿದ್ದರಿಂದ (ಮುಂದಿನ ಪಯಣಕ್ಕೆ) ಬೇಗ ಬೇಗ ಹೊರಡುವ ಆತುರ. ನಮಗೋ ದೂರದಿಂದ ಬಂದಿದ್ದೇವೆ. ಇನ್ನೇನು ಬೆಳಗಿನ ಪೂಜೆ (೮.೦೦ ಘಂಟೆಗೆ) ಶುರುವಾಗಿದೆ. ಬಿಟ್ಟು ಬರುವ ಮನಸ್ಸಿಲ್ಲ. ಆದದ್ದಾಗಲಿ ಎಂದು ಪೂರ್ಣಪೂಜೆ ನೋಡಿಕೊಂಡು, ಮಂಗಳಾರತಿ, ತೀರ್ಥ ಪ್ರಸಾದ ಸ್ವೀಕರಿಸಿ ಹೊರಬಂದೆವು.

ಶ್ರೀಮಾರಿಕಾಂಬ ದೇವಾಲಯದ ಎದುರಿನಲ್ಲಿ ಶ್ರೀ ತ್ರಯಂಬಕೇಶ್ವರ ದೇವಾಲಯ. ಆಗಿನ್ನೂ ತೆರೆದಿದ್ದರು. ಒಂದೆರಡು ನಮಸ್ಕಾರ ಹಾಕಿ ಬರುವಷ್ಟರಲ್ಲಿ `ಬನ್ನಿ, ಬನ್ನಿ, ಹೊತ್ತಾಗುತ್ತಿದೆ' ಎಂಬ ಆತುರ-ಕಾತುರದ ಹುಡುಕಾಟದಿಂದ ಮಿತ್ರರ ಆಗಮನ. ಸರಿ, ಬೇಗನೇ ನಮ್ಮ ವಾಹನಕ್ಕೆ ಹತ್ತಿ ಕುಳಿತಿದ್ದಾಯಿತು. ಗಾಡಿಯೂ `ಬನವಾಸಿ'ಯೆಡೆಗೆ ಹೊರಟಿದ್ದಾಯಿತು.

ಈ ಗಡಿಬಿಡಿಯಲ್ಲಿ ಒಂದು ತಪ್ಪು ನಡೆದಿತ್ತು. ಅದು ಮರೆವಿನಿಂದ ಅಥವಾ ಆತುರದಿಂದಾಗಿದ್ದ ಪ್ರಮಾದ. ಏನು ಮಾಡುವುದು.. ಇದೇ ಮನಸ್ಸಿನಲ್ಲಿ ಕೊರೆಯುತ್ತಿದ್ದ ಚಿಂತೆ.

ಶಿರಸಿ ಇಂದ ೨೪ ಕಿ.ಮೀ. ದೂರದಲ್ಲಿದೆ ಬನವಾಸಿ. ಬನವಾಸಿ ಎಂದ ಕೂಡಲೇ ಕದಂಬರು ಅದರಲ್ಲಿಯೂ ಮಯೂರವರ್ಮನ ನೆನಪಾಗುವುದು ಸಹಜ. ಮಯೂರ ವರ್ಮ ಎಂದ ಕೂಡಲೇ ಡಾ. ರಾಜ್‌ ಅಭಿನಯದ ಮಯೂರ (ದೇವುಡು ನರಸಿಂಹಶಾಸ್ತ್ರಿಯವರ ಮಯೂರ) ಚಲನಚಿತ್ರವೂ ನೆನಾಗುತ್ತದೆ. ಬನವಾಸಿಯು ಕದಂಬರ ರಾಜಧಾನಿಯಾಗಿತ್ತು. ಈ ದೇವಾಲಯವು ೨ನೇ ಶತಮಾನದ್ದು ಎಂದು ಇತಿಹಾಸಕಾರರು ಹೇಳುತ್ತಾರೆ. ಮೂಲ ದೇವಾಲಯ ೨ನೇ ಶತಮಾನ, ಮಧ್ಯಭಾಗದ್ದು ೬ನೇ ಮತ್ತು ಅದರ ಮುಂದಿನದು ೧೨ನೇ ಶತಮಾನದ್ದು ಎಂದು ತಿಳಿಸಿದರು.

ಇಲ್ಲಿ ಮಧುಕೇಶ್ವರ ದೇವಾಲಯ ಬಹಳ ಪ್ರಸಿದ್ಧ. ಇಲ್ಲಿರುವ ಶಿವನಲಿಂಗದ ಬಣ್ಣ ಜೇನಿನ ಬಣ್ಣ. ಅದಕ್ಕೆಂದೇ ಮಧುಕೇಶ್ವರ ಎಂದು ಕರೆಯುತ್ತಾರೆ. ಇಲ್ಲಿರುವ ಬಸವಣ್ಣನ ಕೆತ್ತನೆ ವಿಶಿಷ್ಟ. ಅದರಲ್ಲಿಯೂ ಕಣ್ಣುಗಳು. ಒಂದು ಕಣ್ಣು ಶಿವನನ್ನು ನೋಡುತ್ತಿದ್ದರೆ ಮತ್ತೊಂದು ಪಾರ್ವತೀದೇವಿಯನ್ನು ನೋಡುತ್ತಿರುವಂತೆ ಕೆತ್ತಿರುವುದು ಅದ್ಭುತ. ಕಲ್ಲಿನ ಪಲ್ಲಂಗ ಇಲ್ಲೊಂದು ಇದೆ. ಸಂಪೂರ್ಣ ಕಲ್ಲಿನಲ್ಲಿಯೇ ಕಡೆದಿರುವ ಇದನ್ನು ನೋಡಲೆರಡು ಕಣ್ಣು ಸಾಲದು. ಹಾಗೆಯೇ `ಯಮರಾಜನು ಕೋಣದ ಮೇಲೆ ಪತ್ನಿಯೊಂದಿಗೆ' ಇರುವ ವಿಗ್ರಹವೂ ಇದೆ. ಅಪರೂಪದ್ದು ಇದು. ಮಧುಕೇಶ್ವರನಿರುವ ಮೂಲಗುಡಿಗೆ ಹೋಗುವಲ್ಲಿ ಎಡಗಡೆಗೆ ಶಿವಪಾರ್ವತಿಯರು ಮಂಟಪದಲ್ಲಿರುವ ವಿಗ್ರಹವಿದೆ. ಇದರ ಪಕ್ಕದ ಕಲ್ಲಿನ ಗೋಡೆಯಲ್ಲಿ ಹನುಮಂತನು ಕಡಲೆಕಾಯಿ ಮತ್ತು ಕಬ್ಬು ಸವಿಯುತ್ತಿರುವುದನ್ನೂ ಕಾಣಬಹುದು. ಇದರ ವಿಶೇಷತೆ: ಬಸವಣ್ಣನ ಕಣ್ಣಿನ ಗಾತ್ರದಲ್ಲಿ ಈ ಹನುಮನನ್ನು ಕೆತ್ತಿದ್ದಾರೆ. ಆ ಶಿಲ್ಪಕಲಾಚಾರ್ಯನಿಗೆ ನಮೋನಮ:. ಹಾಗೆಯೇ ಡುಂಡಿರಾಜ ಗಣಪತಿ, ಅಯೋಧ್ಯಾ ರಾಮ, ಸೀತೆ, ಲಕ್ಷಣ, ನಾಗದೇವತೆ, ನಂದಗೋಪಾಲ, ಎಲ್ಲ ಇವೆ. ಇಲ್ಲಿ ಶಾಂತನರಸಿಂಹಸ್ವಾಮಿಯೂ ಇದ್ದಾನೆ (ಬಹುತೇಕ ಪ್ರಸಿದ್ಧ ಸ್ಥಳಗಳಲ್ಲಿ ಯೋಗಾ ನರಸಿಂಹ ಅಥವಾ ರೌದ್ರರೂಪಿ ನರಸಿಂಹನನ್ನು ಕಾಣುತ್ತೇವೆ). ಹಾಗೆಯೇ ಷಣ್ಮುಖ, ವೆಂಕಟೇಶ್ವರ, ಎಲ್ಲ ದೇವತಾ ವಿಗ್ರಹಗಳೂ ದೇವಾಲಯದ ಆವರಣದೊಳಗೆ ಪ್ರತಿಸ್ಥಾಪಿಸಲ್ಪಟ್ಟಿವೆ.

ಇಲ್ಲಿನ ಮುಖಮಂಟಪದಲ್ಲಿ (ಬಸವಣ್ಣನ ಎದುರಿನ ಸ್ಥಳದಲ್ಲಿ) ಪ್ರತಿಫಲನ ಕಂಬಗಳಿವೆ. ಇಲ್ಲಿ ಅಲ್ಲಮಪ್ರಭುವಿದ್ದ ಸಮಯದಲ್ಲಿ ನಾಟ್ಯವಾಡಿದ ಸ್ಥಳ. ಇಲ್ಲಿ ಪ್ರತಿಫಲನ / ಪ್ರತಿಬಿಂಬ ಗಳು (ಕನ್ನಡಿಯಲ್ಲಿ ಕಂಡಂತೆ ಆದರೆ ತಲೆಕೆಳಗಾಗಿ) ಕಾಣುತ್ತವೆ. ಅದ್ಭುತ ಕಲಾತ್ಮಕತೆಯ ಎಂಜಿನಿಯರಿಂಗ್‌. ಇಂತಹ ವಿಶಿಷ್ಟ ದೇವಾಲಯದಲ್ಲಿ ಒಂದು ಸುತ್ತ ಪ್ರದಕ್ಷಿಣೆ ಮಾಡಿ ಬಂದೆವು. ದೇವಾಲಯ ಮುಂಭಾಗದ ಗರುಡಸ್ತಂಭದಲ್ಲಿ ಶಾಸನಗಳಿವೆ. ಹಾಗೆಯೇ ದೇವಾಲಯದ ಹೊರಗಿನಿಂದ ನಿಂತು ನೋಡಿದರೆ ಗಣೇಶನಿರುವುದನ್ನೂ ಕಾಣಬಹುದು (ಮೇಲಿನ ಸ್ತಂಭದಲ್ಲಿ).

ಇಲ್ಲಿ ಇನ್ನೊಂದು ವಿಶೇಷವಿದೆ. ಅರ್ಧಗಣಪತಿಯ ವಿಗ್ರಹ. ಭಿನ್ನವಾದ ದೇವತಾ ವಿಗ್ರಹಗಳಿಗೆ ಸಾಮಾನ್ಯವಾಗಿ ಪೂಜೆ ಸಲ್ಲಿಸುವುದಿಲ್ಲ. ಆದರೆ ಇಲ್ಲಿ ಗಣಪನಿಗೆ ನಿತ್ಯ ಪೂಜೆ ಸಲ್ಲುತ್ತದೆ. ಇನ್ನರ್ಧ ಭಾಗವು ವಾರಾಣಸಿಯಲ್ಲಿದೆ ಎಂದು ಹೇಳುತ್ತಾರೆ...

ದೇವಾಲಯದ ಸುತ್ತಲೂ ದೊಡ್ಡದಾದ ಗೋಡೆಯಿದೆ. ಅಲ್ಲಲ್ಲಿ ಬೀಳುವಂತಿದ್ದರೂ, ಸತತ ಮಳೆಗಾಳಿಗೆ ಮುಕ್ಕಾಗದೇ ಇದೆ. ಅಲ್ಲದೆ ಸತತ ನೀರಿನಿಂದಾಗಿ ಪಾಚಿಕಟ್ಟಿದೆ. ದೇವಾಲಯದ ಹೊರಭಾಗದ ಜಗಲಿಯಲ್ಲಿ ಎರಡು ಹಸಿರು ಬಣ್ಣದ ಆನೆಗಳಿವೆ. ತುಂಬಾ ಸುಂದರವಾಗಿವೆ.

ದೇವಾಲಯದಿಂದ ಹೊರಗೆ ಬಂದರೆ, ಬಲಕ್ಕೆ ತಿರುಮಲನ ದೇವಾಲಯ (ಪುಟ್ಟದ್ದು) ಇದೆಯಾದರೂ ಪ್ರವೇಶದ್ವಾರ ಬಂದ್ ಮತ್ತು ಅದರ ಗೋಡೆಗೆ ಕ್ಷೇತ್ರಪಾಲ ದೇವನೂ ಇದ್ದಾನೆ.

ದೇವಾಲಯದಿಂದ ಸ್ವಲ್ಪದೂರ ಮುಂದಕ್ಕೆ ಹೋದರೆ ವರದಾ ನದಿಯನ್ನು ಕಾಣಬಹುದು. ಅಲ್ಲಿಯೂ ಶಿವಲಿಂಗಗಳನ್ನು ಕಾಣಬಹುದು.

ಕೆಲವು ಬನವಾಸಿ ಪ್ರವಾಸದ ಬರವಣಿಗೆಯ ಮಾಹಿತಿಗಳು ಅಪೂರ್ಣವೆಂದು ತಿಳಿಯಿತು. ಹೆಚ್ಚಿನ ಮಾಹಿತಿಗಳನ್ನು ಶ್ರೀಮತಿ ಪ್ರಗತಿ ಹೆಗ್ಡೆಯವರು ನೀಡಿರುತ್ತಾರೆ. ಅವರು ನೀಡಿರುವ ಮಾಹಿತಿಗಳನ್ನು ಅವರ ಸಹಮತವಿದೆ ಎಂಬ ಅಭಿಪ್ರಾಯದಿಂದಾಗಿ ಇಲ್ಲಿ ನೀಡಿರುತ್ತೇನೆ. ಅವರಿಗೆ ನನ್ನ ಧನ್ಯವಾದಗಳು.

ಬನವಾಸಿ ಇರುವುದು ಸಿರಸಿಯಿಂದ ೨೪ ಕಿ.ಮೀ ದೂರದಲ್ಲಿ..

ಲಿಂಗವು ಜೇನುತುಪ್ಪದ ಬಣ್ಣದಲ್ಲಿದೆ.. ಮತ್ತು ಶಿವನು 'ಮಧು' ಮತ್ತು 'ಕೈಟಭ' ಎಂಬ ರಾಕ್ಷಸರ ಸಂಹಾರ ಮಾಡಿದ್ದರಿಂದ 'ಮಧುಕೇಶ್ವರ' ಎಂಬ ಹೆಸರು ಬಂತು ಎನ್ನುವ ಪ್ರತೀತಿ ಇದೆ...

ಬಸವನ ಮೇಲೆ ಪಾರ್ವತಿ ಬರೆ ಹಾಕಿರುವ ಗುರುತೂ ಇದೆ.. ಇದರಿಂದ ಬಸವ ಪಾರ್ವತಿಯನ್ನು ದುರುಗುಟ್ಟಿ ನೋಡುತ್ತಿರುವಂತಿದೆ...

ಇಲ್ಲಿರುವ ಕಲ್ಲಿನ ಪಲ್ಲಂಗವನ್ನು ಕೇವಲ ೧೦ ಪೀಸ್ ಕಲ್ಲಿಂದ ಮಾಡಲಾಗಿದೆಯಂತೆ..
ಹೊರ ಜಗುಲಿಯಲ್ಲಿರುವ ಕಲ್ಲಿನ ಆನೆಗಳು ಪ್ರಕೃತಿಯ ಪ್ರಭಾವಕ್ಕೆ ಸಿಲುಕಿ ಬಣ್ಣ ಕಳೆದುಕೊಂಡಿವೆ(ಹಸಿರಾಗಿವೆ)...

ಶಾಂತ ನರಸಿಂಹನ ಕೆತ್ತನೆ ಎಷ್ಟು ಸುಂದರವಾಗಿದೆ ಎಂದರೆ ಆರತಿ ಮಾಡುವಾಗ ಮನುಷ್ಯನ ಕಣ್ಣಿನ ಚಲನೆಯಂತೆ ಭಾಸವಾಗುತ್ತದೆ..

ದೇವಾಲಯದ ಇನ್ನಿತರ ವಿಶೇಷಗಳೆಂದರೆ ಆದಿಶೇಷ, ಚಂಡಿಕೇಶ(ದ್ಯಾನ ಮಾಡುತ್ತಿರುವ ಶಿವನ ಲಿಂಗಕ್ಕೆ ಚಪ್ಪಾಳೆ ಹೊಡೆದು ನಮಿಸುತ್ತಾರೆ), ಸಾಕ್ಷಿ ಗಣಪತಿ, ನಾಗಮಂಡಲ.. ಮತ್ತು ಕಲ್ಲಿನಲ್ಲಿ ರೀಪು ಪಕಾಸಿಯ ಕೆತ್ತನೆ, ಕುಬೇರನ ಕಲ್ಪವೃಕ್ಷ(ಈ ತೆಂಗಿನ ಮರದಲ್ಲಿ ಕಾಯಿಗಳು ಯಾವಾಗಲೂ ತುಂಬಿ ತುಳುಕುತ್ತಿರುತ್ತವೆ), ತ್ರಿಲೋಕ ಮಂಟಪ.. ಇತ್ಯಾದಿ...

ಹೀಗೆ ನಮ್ಮ ಬನವಾಸಿ ದೇಶದಲ್ಲಿನ ಸುತ್ತುವಿಕೆ ಮುಗಿಯುತ್ತಾ ಬಂದಿತ್ತು. ಇನ್ನು ಮುಂದಿನ ಹಾದಿ....???

ಶ್ರೀ ಬಂಗಾರೇಶ್ವರ (ಕೆರೆಯಲ್ಲಿ)
ಅದೋ ದಾರಿಯಲ್ಲಿ ಬರುವಾಗ ದೊಡ್ಡದಾದ ಕೆರೆಯನ್ನು ನೋಡಿದ್ದೆವು. ಇದೀಗ ವಾಹನದಲ್ಲಿ ಅಲ್ಲಿಗೆ ತೆರಳಿದೆವು. ಅಲ್ಲಿಯೂ ಕೆರೆಯಲ್ಲಿಯೇ ದೊಡ್ಡದಾಗಿ ಉದ್ದವಾಗಿ, ಅಗಲವಾಗಿ (ಮುಂಭಾಗದಲ್ಲಿಯೇ) ಮಂಟಪವಿದೆ. ಮಧ್ಯದಲ್ಲಿ ಶಿವ ಮತ್ತು ಬಸವನ ವಿಗ್ರಹವಿದೆ. ಇಲ್ಲಿಯೂ ಪೂಜೆ ಮಾಡುತ್ತಾರೆಂಬ ಕುರುಹು ಇದ್ದಿತು. ಕೆಲವರು ನೀರಿನಲ್ಲಿ ಇಳಿದು ಶಿವಲಿಂಗದವರೆಗೂ ಮತ್ತೂ ಆಚೆಯವರೆಗೂ ಹೋಗಿಬಂದರು. ಈ ಕೆರೆಯಲ್ಲಿ ಸುಳಿಗಳಿವೆ. ಅಂದಹಾಗೆ ಇದು `ಬಂಗಾರೇಶ್ವರ' ಎಂದು ಸುತ್ತಮುತ್ತಲೂ ಪರಿಚಿತವಾಗಿದೆ. ಈ ಕೆರೆಯ ಹೆಸರು ಗುಡ್ನಾಪುರ ಕೆರೆ.

ಇಲ್ಲಿಂದ ಮತ್ತೆ ಶಿರಸಿಗೆ ಬಂದೆವು. ಹೊಟ್ಟೆ ಹಸಿದಿತ್ತು. ಆದರೆ, ಮನಸ್ಸಿನಲ್ಲಿ ಕೊರೆಯುತ್ತಿದ್ದ ತಪ್ಪಿಗೆ ಸಾಂತ್ವನ ಸಿಕ್ಕಿತ್ತು. ಅದು ಆಗಿದ್ದು ಇಷ್ಟು. ಗಡಿಬಿಡಿಯಿಂದಾಗಿ ಹೂವಿನ ದುಡ್ಡನ್ನು ಕೊಡುವುದನ್ನು ಮರೆತಿದ್ದೆವು. ಇದೇ ಮನದಲ್ಲಿ ಕೊರೆಯುತ್ತಿದ್ದದ್ದು. ಮತ್ತೆ ದೇವಾಲಯದ ಮುಂದಿನಿಂದಾಗಿಯೇ ಬಂದಾಗ ತಕ್ಷಣ ವಾಹನ ನಿಲ್ಲಿಸಿ, ಅವನ ಹಣವನ್ನು ಕೊಟ್ಟು ಬಂದದ್ದಾಯಿತು. ಇದು ಒಂದು ಮರೆಯಬಾರದಂತಹ ಪಾಠ ಕಲಿಸಿತ್ತು...

ಬೆಳಗಿನ ೧೧.೦೦ ಘಂಟೆಯ ಸಮಯ. ಅಲ್ಲಿಯೇ ಒಂದು ಸಸ್ಯಹಾರಿ ಹೋಟೆಲಿಗೆ ಹೋದೆವು. ಪಲಾವ್, ಬನ್ಸ್, ಕೇಸರೀಭಾತ್, ಕಾಫೀ, ಟೀ, ಕಷಾಯ ಹೀಗೆ ಅವರವರ ಅಭಿರುಚಿಗೆ ರುಚಿಯಾದ ತಿಂಡಿ ಸೇವನೆ ಆಯಿತು.

ಕಾಸಿದ್ರೆ ಗೋಕರ್ಣ, ಕಸುವಿದ್ರೆ ಯಾಣ ಎಂದು ಆ ಕಡೆ ಗಾದೆಯಂತೆ. ಯಾಣಕ್ಕೆ ಹೊರಟೆವು. ದಾರಿಯ ಮಧ್ಯದಲ್ಲಿ ಹಸಿರು ಹಾವನ್ನು ನೋಡಿದೆವು. ರಸ್ತೆಯ ಮಧ್ಯದಲ್ಲಿ ತೆವಳುತ್ತಾ ಸಾಗುತ್ತಿತ್ತು. ಮಿತ್ರರು ಒಂದೆರಡು ಫೋಟೋ ಕ್ಲಿಕ್ಕಿಸಿದರು. ಯಾಣ ತಲುಪಿಯೇ ಬಿಟ್ಟೆವು. ೪-೫ ಕಿ.ಮೀ. ದೂರದ ನಡಿಗೆ ಎಂದು ಕೊಂಡಿದ್ದೆವಾದರೂ ಸಮಯಾಭಾವದಿಂದಾಗಿ, ಜೋರು ಬಿಸಿಲಿನಿಂದಾಗಿ ತೀರ ಹತ್ತಿರವೇ ವಾಹನ ನಿಲುಗಡೆಗೆ ಬಂದಿದ್ದೆವು. ಸುಮಾರು ಒಂದೂವರೆ ಕಿ.ಮೀ. ದೂರದಿಂದ ನಮ್ಮ ನಡಿಗೆ ಹೊರಟಿತು.

ಇದು ಕೋಡಂಬಳೆ ಎಂಬ ಹೆಸರಿನಿಂದಿದ್ದು ಕುಮಟಾ ತಾಲ್ಲೂಕಿಗೆ ಒಳಪಟ್ಟಿದೆ. ಯಾಣದ ಮೂಲ ಹೆಸರು `ಸಹ್ಯಾದ್ರಿಪುರದ ಭೈರವ ಕ್ಷೇತ್ರ'. ಇಲ್ಲಿ ಒಟ್ಟು ೬೧ ಪ್ರಕೃತಿ ನಿರ್ಮಿತ ಶಿಲಾ ಶಿಖರಗಳಿವೆಯಂತೆ. ಶ್ರೀ ಭೈರವೇಶ್ವರ ಮತ್ತು ಚಂಡಿಕಾ ಶಿಖರವು ಅತ್ಯಂತ ಎತ್ತರವಿದ್ದು ಉಳಿದ ೫೯ ಶಿಖರಗಳು ಚಿಕ್ಕವಾಗಿವೆ. ಯಾಣದ ಆ ಪರ್ವತ ಶಿಖರಗಳನ್ನು ಮನದಣಿಯೆ ನೋಡಿದೆವು. ಬೆಟ್ಟವನ್ನು/ಗವಿಯನ್ನು ಬರಿಗಾಲಿನಲ್ಲಿ ಚಪ್ಪಲಿಯಿಲ್ಲದೇ ಹತ್ತಬೇಕಿತ್ತು. ಈಗ ಹತ್ತಲು ಗಾರೆಯಿಂದ ಮೆಟ್ಟಿಲುಗಳಿದ್ದು ಅನುಕೂಲಕರವಾಗಿದೆ. ನಿಜಕ್ಕೂ ಬೆಟ್ಟಗಳ ಕೊರಕಲಿನಲ್ಲಿ ಹೋಗುವಾಗ ದಟ್ಟ ಕತ್ತಲು, ಬೆಟ್ಟದ ಮೇಲಿಂದ ತುಂತುರು ಹನಿಯ ಸಿಂಚನ, ಹಾಗೆಯೇ ಹೆಚ್ಚು ಹೊತ್ತು ನಿಂತಲ್ಲಿಯೇ ನಿಂತರೆ ಜಿಗಿಜಿಗಿ `ಜಿಗಣೆ'ಯ ಚುಂಬನ (ಅದು ತಿಳಿಯುವುದೇ ಇಲ್ಲ!). ತುಂಬಾ ಸುಂದರ ಪರಿಸರದಲ್ಲಿ ಓಡಾಡಿ ಖುಷಿಯಾದೆವು.

ಇಲ್ಲಿ ದೇವಾಲಯದೊಳಗೆ ಫೋಟೋ ಕ್ಲಿಕ್ಕಿಸುವ ಹಾಗಿಲ್ಲ. ಏಕೆಂದರೆ, ಬೆಟ್ಟದಲ್ಲಿ ಜೇನುಗೂಡುಗಳಿದ್ದು ಅವುಗಳಿಗೆ ತೊಂದರೆಯಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಅದಕ್ಕೆಂದೇ ಅಲ್ಲಿನ ಭದ್ರತಾ ಸಿಬ್ಬಂದಿ ಫೋಟೋ ಅಥವಾ ವಿಡಿಯೋಗಳಿಗೆ ಅವಕಾಶ ಕೊಡುವುದಿಲ್ಲ. ದೇವಾಲಯದ ಹೊರಗೆ ಬಂದು ಬೇಕಾದಷ್ಟು ಫೋಟೋ ತೆಗೆದುಕೊಳ್ಳಬಹುದು.

ಹಾಗೆಯೇ ಮತ್ತೊಂದು ಬದಿಯಲ್ಲಿದ್ದ ಶಿಖರದಂಚಿಗೆ ಬಂದೆವು. ಅಲ್ಲಿ ಒಂದು ಗವಿಯಿದೆ. ಅಪಾಯ ಎಂದು ಬರೆದು ಅಲ್ಲಿಗೆ ಹೋಗದಂತೆ ಅಡ್ಡ ಮಾಡಿದ್ದಾರೆ. ಒಟ್ಟಿನಲ್ಲಿ ಯಾಣಕ್ಕೆ ಹೋಗಬೇಕೆಂದಿದ್ದ ನಮ್ಮ ಆಸೆ ಆಕಾಂಕ್ಷೆಗಳನ್ನು ಪೂರೈಸಿಕೊಂಡೆವು. ಆದರೆ ಒಂದೇ ಕೊರತೆಯಾಗಿದ್ದೆಂದರೆ ಸರಿಯಾದ ಚಾರಣ ಮಾಡಲು ಆಗಲಿಲ್ಲ. ಕನಿಷ್ಠ ೪-೫ ಕಿ.ಮೀ. ದೂರ ಚಾರಣ ಮಾಡಬೇಕಿತ್ತು ಎಂಬುದಾಗಿತ್ತು ಎಲ್ಲರ ಮನಸಿನ ಮಾತುಗಳು.

ಇಲ್ಲಿ ಒಂದೇ ಒಂದು ಅಂಗಡಿಯಿದೆ. ಇಲ್ಲಿ ತಿನಿಸುಗಳು ಸಿಗುತ್ತವೆ. ಕೋಕಂ ಮತ್ತು ನೆಲ್ಲಿ ಕ್ಯಾಂಡಿ ಸಿಗುತ್ತದೆ. ಕೋಕಂ ಪಾನೀಯ ವಾಹ್‌! ಎನ್ನುವಂತೆ ಸವಿದೆವು.

ಇಲ್ಲಿಯೇ ಸ್ನೇಹಿತ ಭಾಸ್ಕರನ ಹುಟ್ಟುಹಬ್ಬವನ್ನೂ ಆಚರಿಸಿದೆವು. ಒಟ್ಟಿನಲ್ಲಿ ನಮ್ಮ ಪ್ರಯಾಣದ ಪ್ರಯಾಸವೆಲ್ಲ ಯಾಣದಲ್ಲಿ ಸಲೀಸಾಗಿ ಮಾಯವಾಗಿತ್ತು.

ನಮ್ಮ ಮುಂದಿನ ಪಯಣ ಕುಮಟಾ ಮೂಲಕ ಮುರ್ಡೇಶ್ವರಕ್ಕೆ ಸಾಗಿತ್ತು. ಇದರ ನಡುವೆ ನೀರಾ ಕುಡಿಯಬೇಕೆಂಬ ಕೆಲವರ ಅನಿಸಿಕೆಗಳಿಗೆ ಬೇಸಗೆಯಲ್ಲಾದರೆ ನೀರಾ ಸಿಗುತ್ತದೆ ಎಂಬ ಉತ್ತರದಿಂದಾಗಿ ಕೊಂಚ ಬೇಸರಿಸಿಕೊಂಡರೂ, ಎಳನೀರ ಸವಿಯಬಹುದಿತ್ತು. ಆದರೆ, ಸ್ವಲ್ಪ ಮಳೆ, ಬಿಸಿಲು, ತಣ್ಣನೆ ತಂಗಾಳಿಗೆ ಬಿಸಿಬಿಸಿ ಕಾಫಿಯೇ ಉತ್ತಮವೆನಿಸಿ ಕುಮಟಾದಲ್ಲಿ ಕಾಮತ ಹೋಟೆಲಿನಲ್ಲಿ ಕಾಫಿ ಕುಡಿದೆವು. ಆದರೆ ಆ ಕಾಫಿಯ ರುಚಿ ರುಚಿಸದೇ ಬೇಸರವಾಗಿದ್ದಂತೂ ನಿಜ. ಸಂಜೆಯ ಸೂರ್ಯಾಸ್ತದ ರಂಗಿನಲ್ಲಿ ಮುರ್ಡೇಶ್ವರನ ದರ್ಶನ ಮಾಡಿ, ಗುಹೆಯೊಳಗೆ ಒಂದು ಸುತ್ತು ಹಾಕಿ ಆತ್ಮಲಿಂಗದ ಕಥೆಯನಾಲಿಸಿ, ಗುಂಪುಫೋಟೋ ತೆಗೆಸಿಕೊಂಡು ಅಲ್ಲಿಯೇ ಪ್ರಿಂಟ್‌ ಮಾಡಿಸಿ, ಅರಬ್ಬೀ ಸಮುದ್ರದ ದಡದಲ್ಲಿ ೧೦- ೧೫ ನಿಮಿಷವಿದ್ದು, ಊಟ ಮಾಡಿ ಬೆಂಗಳೂರಿನ ಕಡೆಗೆ ರಾತ್ರಿ ಹತ್ತರ ವೇಳೆಗೆ ಹೊರಟೆವು.

ಹೀಗೆ ನಮ್ಮ ಮಳೆಗಾಲದಲ್ಲೆರಡು ದಿನಗಳ ಪ್ರವಾಸ ಮುಗಿದಿತ್ತು. ಬೆಳಗಿನ ಆಫೀಸಿಗೆ ಹೋಗುವ ತವಕ ಕಾಡಿತ್ತು....

ತಪ್ಪುಗಳಿದ್ದಲ್ಲಿ ತಿಳಿಸಬೇಕೆಂದು ಕೋರಿಕೆ.

++++

ಮತ್ತೊಮ್ಮೆ, ಎಲ್ಲರಿಗೂ ಶರನ್ನವರಾತ್ರಿಯ ಹಬ್ಬದ ಶುಭಾಶಯಗಳು !


ಶಿರಸಿಯಲ್ಲಿ ನಾವು ಉಳಿದಿದುಕೊಂಡಿದ್ದ ಸ್ಥಳ

ದಾಂಡೇಲಿಯ ಹಕ್ಕಿ‌ - ಹಾರ್ನ್‌ಬಿಲ್‌ ಹಕ್ಕಿ ದೇವಜ್ಯೋತಿ ಸಭಾಭವನದಲ್ಲಿ

ಶ್ರೀ ಮಾರಿಕಾಂಬ ದೇವಾಲಯದ ಮುಖ್ಯದ್ವಾರ - ಶಿರಸಿ

ಶ್ರೀ ತ್ರಯಂಬಕೇಶ್ವರ (ಮಾರಿಕಾಂಬ ದೇವಾಲಯದ ಎದ

ಶಿಲಾಪಲ್ಲಂಗ - ಬನವಾಸಿ

ಮಧುಕೇಶ್ವರ ದೇವಾಲಯದ ನೋಟ (ಶಿವಲಿಂಗ ಬೆಳಕಿನ ಪ್ರತಿಫಲನ) - ಬನವಾಸಿ

ಪ್ರತಿಫಲನ ಕಂಬಗಳು - ಬನವಾಸಿ

ಡುಂಡಿರಾಜ ಗಣಪತಿ - ಬನವಾಸಿ

ನಂದಗೋಪಾಲ - ಬನವಾಸಿ

ಶ್ರೀ ಅರ್ಧ ಗಣಪತಿ - ಬನವಾಸಿ

(ಉಳಿದರ್ಧ ಭಾಗ ವಾರಾಣಸಿಯಲ್ಲಿದೆಯಂತೆ)

ಕಡಲೆಕಾಯಿ ತಿನ್ನುತ್ತಿರುವ ಹನುಮ - ಬನವಾಸಿ

ಕಬ್ಬು ತಿನ್ನುತ್ತಿರುವ ಹನುಮ - ಬನವಾಸಿ

ಶ್ರೀ ಮಧುಕೇಶ್ವರ ದೇವಾಲಯದ ಮುಂಭಾಗದಲ್ಲಿರುವ ಆನೆ - ಬನವಾಸಿ

ಶ್ರೀ ಮಧುಕೇಶ್ವರ ದೇವಾಲಯದ ಮುಖ್ಯದ್ವಾರ - ಬನವಾಸಿ

ಪ್ರಾಚ್ಯವಸ್ತು ಇಲಾಖೆಯ ಫಲಕ -ಬನವಾಸಿ

ಶ್ರೀ ಬಂಗಾರೇಶ್ವರ - ಗುಡ್ನಾಪುರ ಕೆರೆ

ಯಾಣ

ಯಾಣದ ಶಿಲಾ ಶಿಖರ

ಶಿಲಾಪದರದ ಮೇಲೆ ಪಾಚಿ - ಯಾಣ

ಶಿಲಾಗುಹೆಯಲ್ಲಿನ ಒಂದು ದೃಶ್ಯ

ಹಾವಿನ ಹೆಡೆಯಂತೆ ಕಾಣುತ್ತಿರುವ ಶಿಲಾಕಲೆ- ಯಾಣ

ಯಾಣದ ಮತ್ತೊಂದು ಶಿಖರದ ಬಳಿಗೆ ಪಯಣ

ಅರಬ್ಬೀಸಮುದ್ರ, ಸಂಜೆಯಲ್ಲಿ

ಶ್ರೀ ಮುರುಡೇಶ್ವರ

ಚಿತ್ರ ಲೇಖನ: ಚಂದ್ರಶೇಖರ ಬಿ.ಎಚ್. ೨೦೧೦

18 ಕಾಮೆಂಟ್‌ಗಳು:

balasubramanya ಹೇಳಿದರು...

ವಾವ್ ಸಾರ್ ಚಂದ್ರು ಒಳ್ಳೆ ಪ್ರವಾಸದ ರಸ ಅನುಭವಗಳ ಸರಮಾಲೆ . ಹೊಸದಾಗಿ ಹೋಗುವವರಿಗೆ ತುಂಬಾ ಮಾಹಿತಿ ಇದೆ. ಚಿತ್ರ ಲೇಖನ ಚೆನ್ನಾಗಿದೆ. ಮುಂದಿನ ಸಾರಿ ನಿಮ್ಮ ಜೊತೆ ಬರಲು ಪ್ರಯತ್ನಿಸುತ್ತೇನೆ.ನಿಮಗೆ ಅಭಿನಂದನೆಗಳು.

ಪ್ರಗತಿ ಹೆಗಡೆ ಹೇಳಿದರು...

ಸರ್, ಬನವಾಸಿ ಇರುವುದು ಸಿರಸಿಯಿಂದ ೨೪ ಕಿ.ಮೀ ದೂರದಲ್ಲಿ..
ಲಿಂಗವು ಜೇನುತುಪ್ಪದ ಬಣ್ಣದಲ್ಲಿದೆ.. ಮತ್ತು ಶಿವನು 'ಮಧು' ಮತ್ತು 'ಕೈಟಭ' ಎಂಬ ರಾಕ್ಷಸರ ಸಂಹಾರ ಮಾಡಿದ್ದರಿಂದ 'ಮಧುಕೇಶ್ವರ' ಎಂಬ ಹೆಸರು ಬಂತು ಎನ್ನುವ ಪ್ರತೀತಿ ಇದೆ...
ಬಸವನ ಮೇಲೆ ಪಾರ್ವತಿ ಬರೆ ಹಾಕಿರುವ ಗುರುತೂ ಇದೆ.. ಇದರಿಂದ ಬಸವ ಪಾರ್ವತಿಯನ್ನು ದುರುಗುಟ್ಟಿ ನೋಡುತ್ತಿರುವಂತಿದೆ...
ಇಲ್ಲಿರುವ ಕಲ್ಲಿನ ಪಲ್ಲಂಗವನ್ನು ಕೇವಲ ೧೦ ಪೀಸ್ ಕಲ್ಲಿಂದ ಮಾಡಲಾಗಿದೆಯಂತೆ..
ಹೊರ ಜಗುಲಿಯಲ್ಲಿರುವ ಕಲ್ಲಿನ ಆನೆಗಳು ಪ್ರಕೃತಿಯ ಪ್ರಭಾವಕ್ಕೆ ಸಿಲುಕಿ ಬಣ್ಣ ಕಳೆದುಕೊಂಡಿವೆ(ಹಸಿರಾಗಿವೆ)...
ಶಾಂತ ನರಸಿಂಹನ ಕೆತ್ತನೆ ಎಷ್ಟು ಸುಂದರವಾಗಿದೆ ಎಂದರೆ ಆರತಿ ಮಾಡುವಾಗ ಮನುಷ್ಯನ ಕಣ್ಣಿನ ಚಲನೆಯಂತೆ ಭಾಸವಾಗುತ್ತದೆ..
ದೇವಾಲಯದ ಇನ್ನಿತರ ವಿಶೇಷಗಳೆಂದರೆ ಆದಿಶೇಷ, ಚಂಡಿಕೇಶ(ದ್ಯಾನ ಮಾಡುತ್ತಿರುವ ಶಿವನ ಲಿಂಗಕ್ಕೆ ಚಪ್ಪಾಳೆ ಹೊಡೆದು ನಮಿಸುತ್ತಾರೆ), ಸಾಕ್ಷಿ ಗಣಪತಿ, ನಾಗಮಂಡಲ.. ಮತ್ತು ಕಲ್ಲಿನಲ್ಲಿ ರೀಪು ಪಕಾಸಿಯ ಕೆತ್ತನೆ, ಕುಬೇರನ ಕಲ್ಪವೃಕ್ಷ(ಈ ತೆಂಗಿನ ಮರದಲ್ಲಿ ಕಾಯಿಗಳು ಯಾವಾಗಲೂ ತುಂಬಿ ತುಳುಕುತ್ತಿರುತ್ತವೆ), ತ್ರಿಲೋಕ ಮಂಟಪ.. ಇತ್ಯಾದಿ...

ಚೆಂದದ ಲೇಖನಕ್ಕೆ ಧನ್ಯವಾದಗಳು ಸರ್... ವಿವರಣೆಯ ಕೆಳಗೇ ಚಿತ್ರಗಳಿದ್ದರೆ ಇನ್ನೂ ಚೆನ್ನಾಗಿತ್ತು...

ನನ್ನ ಮನದ ಭಾವಕೆ ಕನ್ನಡಿ ಹಿಡಿದಾಗ ಹೇಳಿದರು...

ಚನ್ನಾಗಿದೆ ಸರ್ ... ಕಡೆಯ ಬಾರಿ ನಾವು ಜೇನು ಕಲ್ಲು ಗುಡ್ಡಕ್ಕೆ ಹೋದಾಗ ಕಾರಿನ ಪೆಟ್ರೋಲ್ ಟ್ಯಾಂಕ್ ಹೊಡೆದು ಅನುಭವಿಸಿದ ಕಷ್ಟ ನೆನಪಿಗೆ ಬಂತು:)

G.S.SRINATHA ಹೇಳಿದರು...

Chandru dhanyavadagalu photogalige adi baraha kottare innu tumba anukoolavagutte

PARAANJAPE K.N. ಹೇಳಿದರು...

ಚಿತ್ರ-ಲೇಖನ ಚೆನ್ನಾಗಿದೆ. ಮಾಹಿತಿಯುಕ್ತವಾಗಿದೆ.

ಕ್ಷಣ... ಚಿಂತನೆ... ಹೇಳಿದರು...

ಬಾಲು ಸರ್‍, ನಿಮ್ಮ ಅನಿಸಿಕೆಗಳಿಗೆ ಹಾಗೂ ಪ್ರೋತ್ಸಾಹಕ್ಕೆ ವಂದನೆಗಳು. ಖಂಡಿತಾ ಬನ್ನಿ.

ಸ್ನೇಹದಿಂದ,

ಕ್ಷಣ... ಚಿಂತನೆ... ಹೇಳಿದರು...

ಪ್ರಗತಿ ಮೇಡಂ,

ಹೆಚ್ಚಿನ ಮಾಹಿತಿಯನ್ನು ಬನವಾಸಿಯ ಬಗ್ಗೆ ನೀಡಿದ್ದೀರಿ. ಕೆಲವು ಮಾಹಿತಿಗಳು ನನಗೆ ತಿಳಿದಿರಲಿಲ್ಲ. ನಿಮ್ಮ ಮಾಹಿತಿಯನ್ನು ನನ್ನ ಬ್ಲಾಗಿನಲ್ಲಿ (ಲೇಖನದ ಜೊತೆಯಲ್ಲಿ) ಸೇರಿಸುತ್ತೇನೆ.

ಧನ್ಯವಾದಗಳು.

ಸ್ನೇಹದಿಂದ,

ಕ್ಷಣ... ಚಿಂತನೆ... ಹೇಳಿದರು...

ನನ್ನ ಮನದ ಭಾವಕೆ....
ನಿಮ್ಮ ಅನುಭವಕಥನ ನೆನಪಿಗೆ ಬಂದಿತೆಂದು ತಿಳಿಸಿದ್ದೀರಿ. ನಮಗೂ ಹೀಗೆಯೇ ಕೊಡಚಾದ್ರಿಗೆ ಹೋಗುವಾಗ ಬರುವಾಗ ಹಲವು ಬಾರಿ ವಾಹನ ತೊಂದರೆಕೊಟ್ಟಿತ್ತು. ಅದೂ ಒಂದು ನೆನಪಿನ ಅನುಭವ..

ಹೀಗೆಯೆ ಬರುತ್ತಿರಿ.
ಸ್ನೇಹದಿಂದ,

ಕ್ಷಣ... ಚಿಂತನೆ... ಹೇಳಿದರು...

ಶ್ರೀನಾಥ್ ನಿಮಗೆ ಸ್ವಾಗತ. ಅಡಿಬರಹ ಕೊಡುವ ಯೋಚನೆ ಇತ್ತು. ಆದರೆ, ಸ್ವಲ್ಪ ತಾಂತ್ರಿಕ ಕಾರಣದಿಂದ ಕೊಡಲಾಗಿರಲಿಲ್ಲ. ಪ್ರಯತ್ನಿಸುವೆ. ಹೀಗೆಯೆ ಬರುತ್ತಿರಿ.

ಸ್ನೇಹದಿಂದ,

ಕ್ಷಣ... ಚಿಂತನೆ... ಹೇಳಿದರು...

ಪರಾಂಜಪೆ ಸರ್‍, ನಿಮ್ಮ ಅನಿಸಿಕೆಗಳಿಗೆ ಮತ್ತು ಪ್ರೋತ್ಸಾಹದ ನುಡಿಗಳಿಗೆ ಆಭಾರಿ.
ಸ್ನೇಹದಿಂದ,

ವೆಂಕಟಕೃಷ್ಣ ಕೆ ಕೆ ಪುತ್ತೂರು ಹೇಳಿದರು...

ಸುಂದರ ಚಿತ್ರಗಳು,ಉತ್ತಮ ಬರೆಹ.ಚೆನ್ನಾಗಿದೆ.

AntharangadaMaathugalu ಹೇಳಿದರು...

ಚಂದ್ರೂ..
ನಿಮ್ಮ ಪ್ರವಾಸ ಕಥನ ಚೆನ್ನಾಗಿದೆ. ಚಿತ್ರಗಳೂ ತುಂಬಾ ಚೆನ್ನಾಗಿವೆ..

ಶ್ಯಾಮಲ

prabhamani nagaraja ಹೇಳಿದರು...

ಬರಹ ಉತ್ತಮ ಮಾಹಿತಿಯನ್ನು ಒಳಗೊ೦ಡಿದೆ. ಚಿತ್ರಗಳೂ ಪೂರಕವಾಗಿವೆ. ಈ ಮೊದಲೇ ಸ್ಥಳಗಳನ್ನು ನೋಡಿದ್ದ ನನಗೆ ಮತ್ತೆ ನೊಡಿದ೦ತಾಯಿತು. ಧನ್ಯವಾದಗಳು.

ಜಲನಯನ ಹೇಳಿದರು...

ಪ್ರವಾಸ ಹೋಗುವವರಿಗೆ ಉತ್ತಮ ದಿಶಾ ನಿರ್ದೇಶನಕೊಡುವ ಮಾಹಿತಿಭರಿತ ಲೇಖನ...

ದೀಪಸ್ಮಿತಾ ಹೇಳಿದರು...

ಪ್ರವಾಸ ಕಥನ ಚೆನ್ನಾಗಿ ಬರೆದಿದ್ದೀರಿ. ಶಿರಸಿ ನನ್ನ ಹುಟ್ಟೂರು. ನನ್ನ ಅಜ್ಜನ ಮನೆ, ಶಾಲೆ, ಮಾರಿಕಾಂಬೆ ಜಾತ್ರೆ, ಬನವಾಸಿ, ಶಾಲ್ಮಲ ನದಿಯ ಮಧ್ಯೆ ಇರುವ ಸಹಸ್ರಲಿಂಗ, ಸುತ್ತಮುತ್ತಲ ಜಲಪಾತಗಳು.....ಎಲ್ಲಾ ನೆನಪಾಗುತ್ತಿವೆ

ಕ್ಷಣ... ಚಿಂತನೆ... ಹೇಳಿದರು...

ಪ್ರವಾಸ ಕಥನ ಓದಿ ಪ್ರತಿಕ್ರಿಯಿಸಿದ ಎಲ್ಲರಿಗೂ ಧನ್ಯವಾದಗಳು. ಹೀಗೆಯೆ ಬರುತ್ತಿರಿ ಮತ್ತು ಪ್ರೋತ್ಸಾಹಿಸುತ್ತಿರಿ. ತಪ್ಪಿದ್ದರೆ ತಿಳಿಸುತ್ತಿರಿ.

ಧನ್ಯವಾದಗಳು, ಮತ್ತೊಮ್ಮೆ.

ಸೀತಾರಾಮ. ಕೆ. / SITARAM.K ಹೇಳಿದರು...

ಪ್ರವಾಸ ಕಥನ ಮತ್ತು ಚಿತ್ರಗಳು ಚೆನ್ನಾಗಿವೆ.

V.R.BHAT ಹೇಳಿದರು...

ಬಹಳ ಆಪ್ತವಾಗುವ ರೀತಿ ಬರೆದಿದ್ದೀರಿ, ಇಷ್ಟವಾಯಿತು.