ಯಾರಿಗೆ ತಾನೆ ಮಹತ್ವಾಕಾಂಕ್ಷೆಯಿರುವುದಿಲ್ಲ? ಆಕಾಂಕ್ಷೆಗಳು ಒಬ್ಬರ ಲಕ್ಷ್ಯದಿಂದ ಮತ್ತೊಬ್ಬರ ಲಕ್ಷ್ಯದಿಂದ ಎಂದಿಗೂ ಬೇರೆಯಾಗಿಯೇ ಇರುತ್ತದೆ. ನೋಡುವ ನೋಟಗಳು ಬೇರೆಯವೇ ಆಗಿರುತ್ತವೆ. ಉದ್ಯೋಗ ಒಂದೇ ಹೆಸರಿನಲ್ಲಿದ್ದರೂ ಆತ ಅಥವಾ ಆಕೆಯ ಕೆಲಸ ಮಾಡುವ ರೀತಿ ವಿಭಿನ್ನವಾಗಿರುತ್ತದೆ. ಹೀಗೆಯೇ ಸಣ್ಣಪುಟ್ಟ ಆಶಾಗೋಪುರಗಳೂ ಒಂದೊಂದೂ ಎತ್ತರಗಾತ್ರಗಳಲ್ಲಿ ವಿಭಿನ್ನವಾಗಿರುತ್ತವೆ.
ಆಕಾಂಕ್ಷೆಗಳು ಮನಸ್ಸಿನಲ್ಲಿದ್ದ ಮಾತ್ರಕ್ಕೆ ನಾವು ಗುರಿಯನ್ನು ಮುಟ್ಟುವುದಿಲ್ಲ. ಅದಕ್ಕಾಗಿ ತವಕಿಸಬೇಕು, ಹಪಹಪಿಸಬೇಕು. ಆ ಗುರಿಯನ್ನು ತಲುಪುವ ನಿಟ್ಟಿನಲ್ಲಿ ಒಂದೊಂದೇ ಹೆಜ್ಜೆಯಿಡುತ್ತಾ ಸಾಗಿದರೆ ಅನತಿದೂರದಲ್ಲಿಯೇ ಗುರಿಯ ಗಮ್ಯಸ್ಥಾನ ತಲುಪುತ್ತೇವೆ.
ಆದರೆ ಇಂದಿನ ಜನರಲ್ಲಿ ಇವೆಲ್ಲ ಬೇಡವಾಗಿದೆ. ತಕ್ಷಣಕ್ಕೆ ಸಿರಿವಂತರಾಗಬೇಕು, ಹೆಸರು ಗಳಿಸಬೇಕು, ರಾಜಕೀಯ ನಾಯಕನಾಗಬೇಕು, ಸಿನಿಮಾ ಹೀರೋ ಆಗಬೇಕು, ಹಣ ಝಣಝಣ ಎಂದು ಸದಾ ಕಿಸೆಯಲ್ಲಿರಬೇಕು, ಇಂತಹ ಬೇಕುಗಳ ಮಹಾಪೂರವೇ ಇರುತ್ತದೆ. ಆದರೆ ಅದಕ್ಕೆ ಬೇಕಾಗುವ ಪರಿಕರಗಳು, ಸಲಕರಣೆಗಳು - ಆಸಕ್ತಿ, ಮನೋಧೈರ್ಯ, ಮಾನಸಿಕ ಸಿದ್ಧತೆ ಇವೆಲ್ಲ ಖಾಲಿ ಖಾಲಿ.
ಇವೆಲ್ಲ ಆಗದಿದ್ದರೆ ಬೇಡ. ಇಂದಿಗೆ ಮಿತ್ರರಾಗಿರುತ್ತಾರೆ, ಇನ್ನೊಂದು ಕ್ಷಣಕ್ಕೆ ಶತ್ರುಗಳಾಗಿ ಬಡಿದಾಡುತ್ತಾರೆ. ಅಥವಾ ಇಬ್ಬರು ಸ್ನೇಹಿತರಲ್ಲಿ ಒಬ್ಬ ಉನ್ನತಿ ಸಾಧಿಸಲು ಮಿತ್ರನನ್ನು ಅವಲಂಬಿಸಿದರೆ, ಮತ್ತೊಬ್ಬ ಅವನನ್ನೇ ಅಲುಗಿಸಲು ಸಿದ್ಧನಾಗಿರುತ್ತಾನೆ. ಅದಕ್ಕೇ ಹೀಗೊಂದು ಮಾತು: `To be successful have a Friend. To be very successful keep an Enemy'.
ಈ ಮಾತನ್ನು ಇಂದು ಅಕ್ಷರಶ: ಅನುಕರಿಸುವಲ್ಲಿ ಜನರು ಮುಂದಾಗಿದ್ದಾರೆ. ಬಹುಶ:, ಅದಕ್ಕೆ ಇರಬಹುದು ಬಹುತೇಕ ಕ್ರಿಮಿನಲ್ ಪ್ರಕರಣಗಳು ಪ್ರತಿದಿನ ಕಾಣುತ್ತಿರುವುದು. `ಉನ್ನತಿ , ಸಾಧಿಸೆ ಮಿತ್ರರ್ ಶತ್ರುಗಳಾಗಿ ಮಾರ್ಪಡುತಿಹರ್', ಎಂದು ಅನಿಸುತ್ತದೆ!! ಇಂದಿನ ದಿನಗಳಲ್ಲಿ ತಾಯಿ, ತಂದೆ, ಮಕ್ಕಳು ಸಹೋದರರ ನಡುವೆಯೇ ಆಸ್ತಿಪಾಸ್ತಿಗಾಗಿ ಕೊಲೆ ದರೋಡೆಗಳು ನಡೆಯುತ್ತಿವೆ. ಅಲ್ಲಿರಬೇಕಾಗಿದ್ದ ಪ್ರೀತಿ, ಪ್ರೇಮ, ಸಹನೆ ಇವೆಲ್ಲ ಮಾಯವಾಗಿದೆ. ಸಹೋದರರು ಅಕ್ಷರಶ: ದಾಯಾದಿಗಳಾಗಿ ಕಲಹಗಳಲ್ಲಿ ತೊಡಗಿರುವುದನ್ನು ದಿನದಿನವೂ ಕಾಣುತ್ತಿದ್ದೇವೆ. ಇಂತಹ ಕೃತ್ರಿಮತನವನ್ನು ಬಿಟ್ಟು, ನಮ್ಮ ಬದುಕನ್ನು ಒಳ್ಳೆಯ ರೀತಿಯಲ್ಲಿ ಅಂದರೆ ಸಮಾಜಕ್ಕೆ ಹೊರೆಯಾಗದಂತೆ, ತೊಂದರೆಯಾಗದಂತೆ, ಬಂಧು-ಮಿತ್ರರೊಳಗೊಂದಾಗಿ ಬದುಕನ್ನು ಹಾಗೂ ಬದುಕಿನ ಉನ್ನತ ಗುರಿಯನ್ನು ತಲುಪಲು ಬೇಕಾದುದನ್ನು ಮಾಡೋಣ.
ಈ ಲೇಖನ ಬರೆಯಲು ಎಂದೋ ಓದಿದ್ದ ಈ ಮೇಲಿನ ವಾಕ್ಯವೇ ಕಾರಣ. ಇದರ ಜೊತೆಗೆ ಜಪಾನೀ ಗಾದೆಯೊಂದು: `ಬದುಕು ಒಂದು ತಲೆಮಾರಿಗೆ. ಆದರೆ ಒಳ್ಳೆಯ ಹೆಸರು ಎಂದೆಂದಿಗೂ', ಎಂದು ಹೇಳುತ್ತದೆ. ಈ ಮಾತನ್ನು ಎಂದೆಂದಿಗೂ ನೆನಪಿನಲ್ಲಿಟ್ಟುಕೊಂಡರೆ... ,,, ನಮಗೇ ಒಳಿತಲ್ಲವೇ?
4 ಕಾಮೆಂಟ್‌ಗಳು:
ಚಂದ್ರ ಶೇಖರ್...
ನೀವು ಬರೆದ ಉತ್ತಮ ಲೇಖನಗಳಲ್ಲಿ ಇದೂ ಒಂದು.
ಇದು ಬಹಳ ವಾಸ್ತವ..
ಶತ್ರು ಇಟ್ಟುಕೊಂಡವ ಬಹಳಷ್ಟು ಸಾಧಿಸುತ್ತಾನೆ...
ಸಾಧಿಸಿದ ಮೇಲೆ..
ಅವರೆ ನನ್ನ ಬಂಧುಗಳಾಗಿದ್ದಾರೆ..
ಬಹಳ ಸೊಗಸಾದ...
ಮನತಟ್ಟುವ ಲೇಖನ...
ಇಂಥಹ ಲೇಖನಗಳು ನಿಮ್ಮಿಂದ ಇನ್ನಷ್ಟು ಬರಲಿ...
ಶುಭ ಹಾರೈಕೆಗಳು..
"ಬದುಕು ಒಂದು ತಲೆಮಾರಿಗೆ. ಆದರೆ ಒಳ್ಳೆ ಹೆಸರು ಎಂದೆಂದಿಗೂ" ಎಂಥ ಮಾತು ಸರ್.
ತುಂಬಾ ಅರ್ಥಪುರ್ಣವಾದ ಬರಹ. ಚಿಂತಿಸುವಂತೆ ಮಾಡಿತು.
ಶತ್ರುವನ್ನು ನೋಡಿ ಸಾಧಿಸುತ್ತಾ ಕೊನೆಗೆ ಆ ಶತ್ರುವಂತೆಯೇ ಆಗಿಹೋದರೆ?! ಅದೇ ದುರಂತ. ಕಳೆದ ಬದುಕು ಮತ್ತೆ ಬರುವುದೂ ಇಲ್ಲ.
ಪ್ರಕಾಶ್ ಸರ್,
ಮನಮುಟ್ಟುವ ಲೇಖನ ಎಂದು ನನ್ನ ಬರಹವನ್ನು ಮೆಚ್ಚಿದ್ದಕ್ಕೆ ಧನ್ಯವಾದಗಳು. ಬಂಧುಗಳಾಗಿದ್ದು ಸಂತಸದ ವಿಷಯ. ನಿಮ್ಮ ಪ್ರೋತ್ಸಾಹವೇ ಉತ್ತಮ ಲೇಖನಗಳನ್ನು ಬರೆಯುವ ಆಕಾಂಕ್ಷೆಗಳನ್ನು ಉಂಟುಮಾಡುತ್ತದೆ.
ಧನ್ಯವಾದಗಳು.
ಚಂದ್ರಶೇಖರ ಬಿ.ಎಚ್.
ಮಲ್ಲಿಕಾರ್ಜುನ ಸರ್, ಈ ಲೇಖನದ ಒಂದು ಮಾತು ನಿಮ್ಮನ್ನು ಚಿಂತನೆಗೆ ಈಡುಮಾಡಿತು ಎಂಬ ವಿಚಾರವು ಸಂತಸವಾಯಿತು. ನೋಡಿ ಸ್ವಾಮಿ ನಾವಿರೋದೆ ಹೀಗೆ ಚಲನ ಚಿತ್ರದ ಹಾಡಿನಲ್ಲಿ ಬರುವ ಸಾಲು: ಯಾರೂ ಶತ್ರುವಲ್ಲ, ಯಾರೂ ಮಿತ್ರರಲ್ಲ ಹೀಗೆ ಜೀವನದ ಜಂಜಾಟಗಳಲ್ಲಿ ಬೆರೆತರೆ ಬಹುಶ: ದುರಂತ / ದು:ಖದ ಸಂಗತಿ ಬರಲಾರದು ಎಂದು ತಿಳಿಯುತ್ತೇನೆ. ಶತ್ರುವಿಗಿಂತ ಶತ್ರುತ್ವವು ಮಾಯವಾದರೆ ಸಾಕಲ್ಲವೆ? ಲೇಖನ ಮೆಚ್ಚಿದ್ದೀರಿ.
ಧನ್ಯವಾದಗಳು.
ಚಂದ್ರಶೇಖರ ಬಿ.ಎಚ್.
ಕಾಮೆಂಟ್ ಪೋಸ್ಟ್ ಮಾಡಿ