ಮಂಗಳವಾರ, ಏಪ್ರಿಲ್ 28, 2009

ಫಲಕ + ಬರಹ = ನಗು

ಅಲ್ಲೊಂದು ಹುಲ್ಲು ಹಾಸು. ಅದಕ್ಕೆ ಕಾರಂಜಿಯಲ್ಲಿ ಚಿಮ್ಮುವಂತೆ ನೀರಿನ ಸಿಂಚನ. ಕಾರು, ದ್ವಿಚಕ್ರ, ತ್ರಿಚಕ್ರದಲ್ಲಿ ಬಂದವರೆಲ್ಲ ಮುಂದೆ ಸಾಗುತ್ತಾರೆ. ಕಾರಣ; ಡು ನಾಟ್‌ ಪಾರ್ಕ್ ಆನ್ ದ ರೋಡ್ - ಬೋರ್ಡು ಹೀಗೆ ಬರೆದಿತ್ತು. ಬೋರ್ಡಿನ ಪಕ್ಕದಲ್ಲಿಯೇ ಹುಲ್ಲುಹಾಸು. ರೋಡಿನಲ್ಲಿ ವಾಹನ ನಿಲ್ಲಿಸಬೇಡಿ ಎಂದು ತಕ್ಷಣಕ್ಕೆ ಅನಿಸಿ, ಪಕ್ಕದಲ್ಲಿರುವ ಹುಲ್ಲುಹಾಸಿನ ಮೇಲೆ ನಿಲ್ಲಿಸಬೇಕೆ? ಎಂಬ ಪ್ರಶ್ನೆ ಸಹಜವಾಗಿ ಎದುರಾಗುತ್ತದೆ. ಕೆಲವೊಮ್ಮೆ ಈ ಪಾರ್ಕಿಂಗ್‌ಗಳಲ್ಲಿ ವಾಹನ ನಿಲ್ಲಿಸುವಾಗ ಎದುರಾಗುವ ಸಮಸ್ಯೆಗಳೂ ಸಹ ಜನರನ್ನು ರಂಜಿಸುತ್ತವೆ. ಇನ್ನು ಮನೆಯ ಗೇಟುಗಳಿಗೆ ಕೆಲವು ಕಂಪನಿಗಳ, ಶಿಕ್ಷಣ ಸಂಸ್ಥೆಗಳ ಜಾಹಿರಾತುಗಳ ಮೂಲಕ ನೊ ಪಾರ್ಕಿಂಗ್‌ ಇನ್‌ ಫ್ರಂಟ್‌ ಆಫ್ ದ ಗೇಟ್ ಇತ್ಯಾದಿ ಬೋರ್ಡುಗಳನ್ನು ತಗಲಿಸಿರುತ್ತಾರೆ .


ಹೀಗೆಯೇ ಹಲವು ಕಡೆಗಳಲ್ಲಿ ಅವರವರ ಭಾವಕ್ಕೆ, ಸುರಕ್ಷತೆಗಾಗಿ ಹೀಗೆಲ್ಲ ಬರೆದಿರುತ್ತಾರೆ. ಉದಾ: ಹೋಟೆಲುಗಳಲ್ಲಿ ಪ್ಲೇಟಿನಲ್ಲಿ ಕೈ ತೊಳೆಯಬಾರದು, ಎರಡನೇ ಬಾರಿ ಚಟ್ನಿ ದೊರಕುವುದಿಲ್ಲ, ಪುಟ್‌ಬೋರ್ಡಿನ ಮೇಲೆ ನಿಂತು ಪ್ರಯಾಣಿಸಬೇಡಿ (ಈಗೀಗ ಬಾಗಿಲುಗಳಿರುವುದರಿಂದ ಈ ವಾಕ್ಯವು ವಿರಳ). ಹಾಗೆಯೇ `ಚಾಲಕರು ವಾಹನ ಚಾಲನೆ ಮಾಡುತ್ತಿರುವಾಗ ಪ್ರಯಾಣಿಕರು ದಯಮಾಡಿ ಮಾತನಾಡಿಸಬಾರದು' ಇದು ಬಸ್ಸಿನಲ್ಲಿ ಚಾಲಕನ ಸೀಟಿನ ಹಿಂಭಾಗದಲ್ಲಿನ ಸ್ಲೋಗನ್ನು. ಆದರೆ ನಿರ್ವಾಹಕ (ಕಂಡಕ್ಟ್ರು) ಮಾತನಾಡಿಸುತ್ತಾ ಮುಂದಿನ ಫುಟ್‌ಬೋರ್ಡಿನಲ್ಲಿ ನಿಲ್ಲಬಹುದೆ? ಇನ್ನು ಗೋಡೆಗಳ ಮೇಲೆ `ಸ್ಟಿಕ್‌ ನೋ ಬಿಲ್ಸ್' ಎಂಬ ಮುದ್ರಿತ ಬರಹಗಳು ಕಂಡುಬರುತ್ತವೆ. ಈ ಸ್ಟಿಕ್ ನೋ ಬಿಲ್ಸ್ ಎಂಬುದನ್ನು ನಾವು ಶಾಲೆಗೆ ಹೋಗುವಾಗ ಅರ್ಥೈಸುತ್ತಿದ್ದದ್ದು ಬೇರೆಯೇ ವಿಧದಲ್ಲಿ ಚೀಟಿಗಳನ್ನು ಅಂಟಿಸಬಾರದು ಎಂದಿದ್ದರೂ (ಇಲ್ಲಿ ಬಿಲ್ಲುಗಳನ್ನು ಅಂಟಿಸಬಾರದು ಎಂದು. ಯಾವ ಬಿಲ್ಲು-ಬಾಣ???)


ಹೂಗಳನ್ನು ಕೀಳಬಾರದು ಎಂದಿದ್ದರೆ - ಗಿಡಗಳನ್ನು ಕೀಳಬಹುದೆ? ಎನಿಸುತ್ತದೆ. ಲಾನಿನ ಮೇಲೆ ನಡೆಯಬಾರದು ಎಂದಿದ್ದರೆ - ಓಡಬಹುದೆ, ನೆಗೆಯಬಹುದೆ? ಎಂದು ಹಲವಾರು ಪ್ರಶ್ನೆಗಳು (ತಮಾಷೆಗಾದರೂ) ಇಣುಕುತ್ತವೆ.


ಪ್ರತಿದಿನದ ಜಂಜಾಟದಲ್ಲಿನ ಬೇಸರ ಮರೆಯಲು, ನಗಲು, ಹಾಸ್ಯದಿಂದೊಡಗೂಡಿರಲು ಇಂತಹ ಕೆಲವು ವಾಕ್ಯಗಳು, ಪದಪುಂಜಗಳು ರಂಜಿಸಲು ಇದ್ದೇ ಇರುತ್ತವೆ ಪ್ರತಿಯೊಬ್ಬನ ಹುಡುಕಾ(ಗಾ)ಟದಲ್ಲಿ ಅಲ್ಲವೇ? ಸದ್ಯಕ್ಕೆ ಇಷ್ಟು ಸಾಕು. ನಿಮ್ಮ ಅನಿಸಿಕೆಗಳಿಗೆ ಕ್ಷಣವೊಂದನ್ನು ಎದಿರು ನೋಡುತ್ತಾ :-) ....

2 ಕಾಮೆಂಟ್‌ಗಳು:

shivu ಹೇಳಿದರು...

ಸರ್,

ನಿಮ್ಮ ಸೂಕ್ಷ್ಮವಾದ ದೃಷ್ಟಿಕೋನದ ನೋಟಕ್ಕೆ ನನಗೆ ಖುಷಿಯಾಗುತ್ತದೆ...

ಧನ್ಯವಾದಗಳು...

ಕ್ಷಣ... ಚಿಂತನೆ... Thinking a While.. ಹೇಳಿದರು...

ಶಿವು ಸರ್‍, ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.

ನಾನು ಚಿತ್ರ-ವಿಚಿತ್ರ ಬ್ಲಾಗ್ ನೋಡುತ್ತಿದ್ದಾಗ ನನಗೂ ಅನಿಸಿದ್ದನ್ನು ಈ ಲೇಖನದ ಮೂಲಕ ಬರೆದೆ. ಇನ್ನೂ ಬರೆಯ ಬಹುದಾದಂತಹ ಸರಕು ಇದೆ. ಅದಕ್ಕೆ ತಕ್ಕ ಫೋಟೋಗಳನ್ನು ತೆಗೆಯಲು ಆಗಿಲ್ಲ. ಮೊನ್ನೆ ಒಂದೆರಡು ಬರಹಗಳನ್ನು ನೋಡಿದ್ದೇನೆ. ಅದರ ಬಗ್ಗೆಯೂ ಬರೆವ ಮನಸ್ಸಿದೆ. ಅದರ ಜೊತೆಗೆ ಫೋಟೋ ಇದ್ದರೆ ಚೆಂದ ಅನಿಸಿದರೂ ಕೆಲವು ಸಾರ್ವಜನಿಕ ಕಾರಣಗಳಿಂದಾಗ ಫೋಟೋ ತೆಗೆಯಲು ಆಗುತ್ತಿಲ್ಲ. ಪ್ರಯತ್ನಿಸುತ್ತೇನೆ.

ಧನ್ಯವಾದಗಳು ಮತ್ತೊಮ್ಮೆ.